ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷದ ಹಾದಿ ಬೇಡ ಭಿನ್ನಾಭಿಪ್ರಾಯ ಬಗೆಹರಿಯಲಿ

ಸಂಪಾದಕೀಯ
Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಕೇಂದ್ರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ ಅಂತ್ಯವಾಗುವಂತೆ ಕಾಣುತ್ತಿಲ್ಲ. ಬಿಕ್ಕಟ್ಟು ತೀವ್ರವಾಗುತ್ತಿರುವ ಭಾವನೆ ಮೂಡುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕಾಗಿ  77 ಮಂದಿಯ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಅವರ ಹಿರಿಯ ಸಹೋದ್ಯೋಗಿಗಳನ್ನೊಳಗೊಂಡ ಕೊಲಿಜಿಯಂ  ಕಳಿಸಿತ್ತು. ಈ ಪೈಕಿ 34 ಹೆಸರುಗಳಿಗೆ ಮಾತ್ರ ಅನುಮೋದನೆ ನೀಡಿ 43 ಹೆಸರುಗಳನ್ನು ಕೊಲಿಜಿಯಂನ ಮರುಪರಿಶೀಲನೆಗೆ ಕೇಂದ್ರ ವಾಪಸ್ ಕಳಿಸಿತ್ತು.  ಆದರೆ ಈ 43 ಹೆಸರುಗಳನ್ನು ಕಳೆದ ವಾರ ಸರ್ಕಾರಕ್ಕೇ ಕೊಲಿಜಿಯಂ ಮತ್ತೆ ವಾಪಸ್ ಕಳಿಸಿದೆ.
 
ನಿಯಮಗಳ ಪ್ರಕಾರ, ಇದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕಾರ್ಯಾಂಗಕ್ಕೆ ಇದೆ ಎಂಬುದು ನಿಜ. ಆದರೆ  ಇಷ್ಟೊಂದು ದೊಡ್ಡ ಸಂಖ್ಯೆಯ ಹೆಸರುಗಳಿಗೆ ಸರ್ಕಾರದ ಅನುಮೋದನೆ ಸಿಕ್ಕದಿದ್ದುದೂ ವಿಚಿತ್ರ ಸನ್ನಿವೇಶ. ನ್ಯಾಯಾಂಗ ಹಾಗೂ ಕಾರ್ಯಾಂಗದ ಮಧ್ಯದ ದೊಡ್ಡ ಭಿನ್ನಾಭಿಪ್ರಾಯ  ಈ ರೀತಿಯಲ್ಲಿ ಬಹಿರಂಗವಾಗುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಹೀಗಾಗಿ ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಎಂಬುದು ಸ್ಪಷ್ಟ.
 
ಕೇಂದ್ರ ಸರ್ಕಾರದ ಮನೋಭಾವದ ಬಗ್ಗೆ ನ್ಯಾಯಾಂಗದ ಅಸಮಾಧಾನ ಅನೇಕ ಬಾರಿ ಬಹಿರಂಗವಾಗಿ ವ್ಯಕ್ತವಾಗುತ್ತಲೇ ಇದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸರ್ಕಾರದ ಕಡೆಯಿಂದ ಆಗುತ್ತಿರುವ ವಿಳಂಬವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಬಹಿರಂಗ ವೇದಿಕೆಗಳಲ್ಲಿ ಹಾಗೂ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇಡೀ ನ್ಯಾಯಾಂಗ ವ್ಯವಸ್ಥೆಗೇ ಬೀಗ ಹಾಕಲು ನೀವು ಬಯಸಿದ್ದೀರಾ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ನೇತೃತ್ವದ ಪೀಠ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿಯೂ ಇತ್ತು. ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಕಡತಗಳು ಮುಂದಕ್ಕೆ ಸಾಗದಿರುವ ಬಗ್ಗೆ ಟೀಕೆಗಳನ್ನೂ ಮಾಡಲಾಗಿತ್ತು.   ಹೀಗೆಯೇ ಮುಂದುವರಿದರೆ ಪ್ರಧಾನಿ ಕಾರ್ಯಾಲಯ ಮತ್ತು ಕಾನೂನು ಸಚಿವಾಲಯದ ಕಾರ್ಯದರ್ಶಿಗಳನ್ನು ಕೋರ್ಟ್‌ಗೆ ಕರೆಸಿಕೊಂಡು ವಾಸ್ತವ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂಬಂಥ ಎಚ್ಚರಿಕೆಯನ್ನೂ ಪೀಠ ನೀಡಿತ್ತು.  
 
ಆದರೆ ಈ ವಿಳಂಬಕ್ಕೆ ತಾನಷ್ಟೇ ಹೊಣೆಯಲ್ಲ ಎಂಬ ಭಾವನೆಯನ್ನು ಕಾರ್ಯಾಂಗವೂ ವ್ಯಕ್ತಪಡಿಸಿದ್ದು  ಈ ಸಂಘರ್ಷ ಸುಲಭದಲ್ಲಿ ಅಂತ್ಯವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಏಕೆಂದರೆ ಕೆಳ ನ್ಯಾಯಾಲಯಗಳ  ನ್ಯಾಯಾಧೀಶರ ನೇಮಕವನ್ನು ಹೈಕೋರ್ಟ್‌ಗಳೇ ಮಾಡುತ್ತವೆ. ಹೀಗಿದ್ದೂ ಕೆಳ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದೇಇವೆ.  ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ)  ಕಾಯ್ದೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಜಾರಿಗೆ ತಂದಿತ್ತು. ನ್ಯಾಯಮೂರ್ತಿಗಳ ನೇಮಕದಲ್ಲಿ ಕಾರ್ಯಾಂಗಕ್ಕೆ ಮಹತ್ವದ ಪಾತ್ರ ನೀಡಿದ್ದ ಈ ಕಾಯ್ದೆ ‘ಅಸಾಂವಿಧಾನಿಕ’, ಜೊತೆಗೆ  ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಹೇಳಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ  ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ರದ್ದುಪಡಿಸಿದ್ದನ್ನೂ ಸ್ಮರಿಸಬಹುದು. ‘ಸುಪ್ರೀಂ ಕೋರ್ಟ್‌ನ ಈ  ತೀರ್ಪಿನಿಂದ ಸಂಸದೀಯ ಸಾರ್ವಭೌಮತ್ವಕ್ಕೆ ಹಿನ್ನಡೆಯಾಗಿದೆ’ ಎಂದು ಕೇಂದ್ರ ಸರ್ಕಾರ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು. 
 
ಆನಂತರ ಹೈಕೋರ್ಟ್  ನ್ಯಾಯಮೂರ್ತಿಗಳ ಆಯ್ಕೆಗೆ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು (ಮೆಮೊರಾಂಡಮ್ ಆಫ್ ಪ್ರೊಸೀಜರ್- ಎಂಓಪಿ)  ಕೇಂದ್ರ ಸರ್ಕಾರ  ಕಳೆದ ಆಗಸ್ಟ್‌ನಲ್ಲೇ  ಸುಪ್ರೀಂ ಕೋರ್ಟ್‌ಗೆ ಕಳಿಸಿದೆ. ಆದರೆ ಇದರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಹ ವಿಳಂಬ ಮಾಡುತ್ತಿದೆ. ಈ ಬಗೆಯಲ್ಲಿ ವ್ಯಕ್ತವಾಗುತ್ತಿರುವ ಮುಸುಕಿನ ಗುದ್ದಾಟ, ಭಿನ್ನಾಭಿಪ್ರಾಯಗಳು ನ್ಯಾಯಾಂಗ ನೇಮಕಾತಿಗೆ ಹಿನ್ನಡೆಯುಂಟುಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಪೇಕ್ಷಣೀಯ. ಈಗಾಗಲೇ ರಾಷ್ಟ್ರದಲ್ಲಿರುವ  24 ಹೈಕೋರ್ಟ್‌ಗಳಲ್ಲಿ 400ಕ್ಕೂ ಹೆಚ್ಚು ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ ಎಂಬುದನ್ನು ಮರೆಯುವಂತಿಲ್ಲ.
 
ನ್ಯಾಯಮೂರ್ತಿಗಳ ಕೊರತೆಯಿಂದ ಸಹಜವಾಗಿಯೇ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥ ಮತ್ತಷ್ಟು ವಿಳಂಬವಾಗುವುದು ಮುಂದುವರಿಯುತ್ತಲೇ ಹೋಗುತ್ತದೆ. ಬಾಕಿ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ನ್ಯಾಯದಾನ ವಿಳಂಬದಿಂದ ಜನರಿಗೆ ಪೂರ್ಣ  ನ್ಯಾಯ ದಕ್ಕದೇ ಹೋಗಬಹುದು. ಈಗಾಗಲೇ ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 2.7 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ.  ನ್ಯಾಯದಾನ ವಿಳಂಬ, ನ್ಯಾಯಾಂಗದ ದಕ್ಷತೆಯನ್ನು ಕುಗ್ಗಿಸುತ್ತದೆ.  ಸಂಘರ್ಷದ ಹಾದಿಯನ್ನು ಬಿಟ್ಟು ನ್ಯಾಯಾಂಗ ಮತ್ತು ಕಾರ್ಯಾಂಗ ಹೊಣೆಗಾರಿಕೆಯ ಮನೋಭಾವ ಪ್ರದರ್ಶಿಸಬೇಕು. ಸಾಂಸ್ಥಿಕ ಸುಧಾರಣೆಗೆ ಒಮ್ಮತ ಇರಬೇಕಾದುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT