ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಮೊದಲ ಸೀರೆ

Last Updated 23 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೊದಲ ಸೀರೆ ಖರೀದಿಸುವುದು ಧ್ಯಾನದಂತೆ. ‘ಮೊದಲ ಸೀರೆ’ಯ ಸಂಕಲ್ಪ ಸಿದ್ಧಿಸಲು ಅಪ್ಪನ ಮುಂದೆ ತಪಸ್ಸು ಮಾಡಬೇಕು, ಅಕ್ಕನ ಬೆನ್ನು ಬಿದ್ದು ಟಿಪ್ಪಣಿ ಪಡೆಯಬೇಕು, ಮುಖ್ಯವಾಗಿ ಅಮ್ಮ ‘ಸಣ್ಣ, ದಪ್ಪ ಕುಳ್ಳಿ, ನಿಂಗೆ ಸೊಂಟಾನೇ ನಿಲ್ಲಲಾ’ ಎಂದು ಎಷ್ಟೇ ಬೈದರೂ ಸಿಡುಕದೆ ಸೀರೆ ಉಡುವುದನ್ನು ಕಲಿಯಬೇಕು. ಈ ಎಲ್ಲಾ ಸಿದ್ಧತೆ ಮುಗಿದರೆ ಸೀರೆ ಉಡುವ ಯುದ್ಧಕ್ಕೆ ಸಿದ್ಧರಾದಂತೆ.

‘ನಾನು ಮೊದಲು ಸೀರೆ ಉಟ್ಟಿದ್ದು ಕಾಲೇಜು ಕಾರ್ಯಕ್ರಮವೊಂದಕ್ಕೆ. ಸೀರೆ ಉಡುವ ಬಗ್ಗೆ ಅಂಥ ಆಸಕ್ತಿ ಏನು ಇರಲಿಲ್ಲ, ಆದರೆ ಉಡಲೇಬೇಕು ಎಂಬ ಕಡ್ಡಾಯವಿತ್ತು. ಗೆಳೆತಿಯರೆಲ್ಲಾ ಸೇರಿ ಒಂದೇ ವಿನ್ಯಾಸದ ಕಾಟನ್ ಸೀರೆ ತೊಟ್ಟಿದ್ದೆವು. ಸಂಜೆಯೊಳಗೆ ಯಮ ಯಾತನೆ ಅನಿಸಿತ್ತು. ಅದೇ ಕೊನೆ’ ಎಂದು ಕಾಲೇಜು ದಿನಗಳನ್ನು ನೆನಪಿಸಿಕೊಂಡರು ರೇಷ್ಮಾ.

ಮೊಟ್ಟ ಮೊದಲ ಸೀರೆ ಖರೀದಿಸಲು ಹೊರಟರೆ, ಮನೆಯವರೆಲ್ಲಾ ಸಿದ್ಧರಾಗುತ್ತಾರೆ. ಹೀಗಾಗಿ ಗೊಂದಲ, ವಾದವಿವಾದ, ಅಲೆದಾಟ ಹೆಚ್ಚುತ್ತದೆ. ಮೊದಲ ಸೀರೆ ಖರೀದಿಸುವ ಮುನ್ನ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು.

ಸ್ಪಲ್ಪ ಗೂಗಲ್ ಮಾಡಿ
ಸಣ್ಣ ವಯಸ್ಸಿನಲ್ಲಿ ಹಳೆಯ ದುಪಟ್ಟಾವನ್ನೇ ಸುತ್ತಿಕೊಂಡು ನಲಿದಾಡಿದಂತೆ ಅಲ್ಲ ಮೊದಲ ಸೀರೆ ಖರೀದಿಸುವುದು. ಚಾಲ್ತಿಯಲ್ಲಿರುವ ಮೆಟೀರಿಯಲ್, ವಿನ್ಯಾಸ, ರನ್ನಿಂಗ್ ಕಲರ್ ಒಟ್ಟಾರೆ ಇಂದಿನ ಸೀರೆಯ ಫ್ಯಾಷನ್ ಬಗ್ಗೆ ಅರಿಯಲು ಗೂಗಲ್ ಮಾಡಿ.

ಸಿನಿ ತಾರೆಯರು ಉಡುತ್ತಿರುವ ಸೀರೆಗಳ ಬಗ್ಗೆ, ಅದಕ್ಕೆ ಹೊಂದುವ ಬ್ಲೌಸ್, ಡಿಸೈನರ್ ಸರ, ಬಳೆಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ಆನ್‌ಲೈನ್‌ ಖರೀದಿಗೂ ಅವಕಾಶ ಇರುವುದರಿಂದ ವಿವಿಧ ವೆಬ್‌ಸೈಟ್‌ನಲ್ಲಿ ಸೀರೆಗಳನ್ನು ನೋಡಿ ಖರೀದಿಸಬಹುದು.

ವಿನ್ಯಾಸದ ಆಯ್ಕೆ
ಮೊದಲು ಕಾರ್ಯಕ್ರಮ ಯಾವುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಿ. ರೇಷ್ಮೆ, ನೆಟ್, ಶಿಫಾನ್, ಕಾಟನ್, ಖಾದಿ ಹಲವು ಮಟಿರಿಯಲ್ ಬಟ್ಟೆಗೆ ಶಿಮ್ಮರ್ ಲುಕ್, ಕುಂದನ್, ಚಮಕಿ ವರ್ಕ್ ನೂರಾರು ವಿನ್ಯಾಸ ಲಭ್ಯ. ದಪ್ಪ ಇರುವವರು ಸಣ್ಣ ಅಂಚು, ಉದ್ದಗೆರೆ, ಸಣ್ಣಸಣ್ಣ ಪ್ರಿಂಟ್ ಇರುವುದನ್ನು ಖರೀದಿಸಬಹುದು. ಸಣ್ಣ ಇರುವವರು ದೊಡ್ಡ ಅಂಚು, ಅಡ್ಡಗೆರೆ, ದೊಡ್ಡ ಪ್ರಿಂಟ್‌ ಖರೀದಿಸಬಹುದು.

ಬಣ್ಣದ ಆಯ್ಕೆ
ಸೀರೆ ಬಣ್ಣ ನಮ್ಮ ಮನಸಿಗೆ ಮಾತ್ರವಲ್ಲ ಮೈಗೂ ಒಪ್ಪುವಂತಿರಬೇಕು. ಇಂಥ ಸಂದರ್ಭದಲ್ಲಿ ‘ಕ್ಲಾಸಿಕ್ ಕಲರ್ಸ್’, ಎಂದರೆ ಎಲ್ಲರಿಗೂ ಎಲ್ಲ ಕಾಲಕ್ಕೂ ಹೊಂದುವ ಬಣ್ಣಗಳಾದ ಹಾಫ್ ವೈಟ್, ಕಪ್ಪು, ವೈನ್ ರೆಡ್ ಬಣ್ಣಗಳ ಸೀರೆ ಆಯ್ಕೆ ಮಾಡಿಕೊಳ್ಳಬಹುದು.

ಕಪ್ಪು ಮೈಬಣ್ಣದ ‘ಕೃಷ್ಣೆ’ಯರು ಮತ್ತು ಎಣ್ಣೆಗಪ್ಪು ಬಣ್ಣದವರು ಬಾದಾಮಿ, ಈರುಳ್ಳಿ ಕೆಂಪು, ಬಾಟೆಲ್ ಹಸಿರು, ಗುಲಾಬಿ, ಕನಕಾಂಬರ, ಕಡುನೀಲಿ, ಆಯ್ದುಕೊಳ್ಳುವುದು ಉತ್ತಮ. ಬೆಳ್ಳಗಿರುವವರಿಗೆ ರೇಡಿಯಂ ಬಣ್ಣ, ಗಾಢ ಬಣ್ಣ, ಬಂಗಾರ– ಬೆಳ್ಳಿ ಶಿಮ್ಮರ್ ಬಣ್ಣಗಳು ಒಪ್ಪುತ್ತವೆ.

ಸೀರೆಯ ನಿರ್ವಹಣೆ
*ಒಗೆಯಲು ಕಷ್ಟವೆಂದು ಬಿಸಿನೀರಲ್ಲಿ ನೆನೆಹಾಕಬೇಡಿ ಇದರಿಂದ ಸೀರೆ ಬಣ್ಣಗೆಡುತ್ತದೆ
*ಕಳಪೆ ಸೋಪ್‌ ಬಳಸದಿರಿ
*ಮಧ್ಯಾಹ್ನ 12ರಿಂದ 4ಗಂಟೆವೆರೆಗಿನ ಬಿಸಿಲು ಸೂಕ್ತವಲ್ಲ.
*ಜರಿ ಸೀರೆ ಖರೀದಿಗಿಂತ ನಿರ್ವಹಣೆ ಬಹಳ ಮುಖ್ಯ.
*ಜರಿ ಸೀರೆಯನ್ನು ಆಗಾಗ ಗಾಳಿಗೆ ಹರವಬೇಕು. ಇಲ್ಲದಿದ್ದರೆ ಜರಿ ತುಂಡಾಗುತ್ತದೆ.
*ರೇಷ್ಮೆ ಸೀರೆಯನ್ನು ಬಿಳಿಯ ಮಲ್ಲಿ ಬಟ್ಟೆ ಅಥವಾ ಬಿಳಿ ಪಂಚೆಯಲ್ಲಿ ಸುತ್ತಿಡಿ.
*ನ್ಯಾಫ್ತಾಲಿನ್‌ ಗುಳಿಗೆಗಳ ಬಳಕೆಯಿಂದಲೂ ಸೀರೆ ಹಾಳಾಗಬಹುದು.
*ನಿರ್ವಹಣೆ ಇನ್ನೂ ಕಷ್ಟವೆನಿಸಿದರೆ ಅಮ್ಮನಿಗೆ ಪೂಸಿ ಹೊಡೆದು ಅವಳ ಬೀರುಗೆ ಸಾಗಾಕಿ.

ಸೀರೆ ಉಡುವುದು
ಎಂಥದ್ದೇ ಸೀರೆ ಖರೀದಿಸಿದರೂ  ಸರಿಯಾಗಿ ಉಡದೇ ಹೋದರೆ ನಿಮ್ಮ ಅಂದ ಕೆಡುತ್ತದೆ. ಸೀರೆಗೆ ಹೊಂದುವ ರವಿಕೆ ನಿಮ್ಮ ಅಂದವನ್ನು ಹೆಚ್ಚಿಸಬಲ್ಲದು.
ಸೀರೆ ಉಡುವ ಸಮಯದಲ್ಲಿ ಅದರ ನೆರಿಗೆ ಹೊಕ್ಕುಳ ಬಲಕ್ಕೆ ಇರಬೇಕು. ಇದರಿಂದ ದೇಹದ ಆಕಾರ ಚೆನ್ನಾಗಿ ಕಾಣುತ್ತದೆ. ನೆರಿಗೆ ಬಲ ಹೆಬ್ಬೆರಳಿನ ನೇರಕ್ಕೆ ನಿಲ್ಲಬೇಕು. ಮೊದಲ ಬಾರಿ ಸೀರೆ ಉಡುವಾಗ ಹೊಕ್ಕಳ ಕೆಳಗೆ ಉಡಬೇಡಿ ಮಧ್ಯಕ್ಕೆ ಉಡಿ, ನೆರಿಗೆ ಒಂದೇ ಸಮನಾಗಿ ಬರುವಂತೆ ಮಾಡಿ, ನೆರಿಗೆ ಮೇಲೆ ಕೆಳಗೆ ಇದ್ದರೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಂತೆ ಕಾಣುತ್ತೀರಿ ಎಚ್ಚರ.

ನಿಮ್ಮ ಲಂಗದ ಬಣ್ಣ ಸೀರೆಯ ಬಣ್ಣದೊಂದಿಗೆ ಹೊಂದುವಂತೆ  ನೋಡಿಕೊಳ್ಳಿ. ಪಾರದರ್ಶಕ ಸೀರೆಯಾದರೆ ಸ್ಯಾಟಿನ್ ಲಂಗ ಬಳಸಿ. ವಿರುದ್ಧ ಬಣ್ಣದ ಲಂಗವನ್ನು ಬಳಸಬಹುದು ಇದರಿಂದ ಹಾಫ್ ಸೀರೆ ಲುಕ್ ಸಿಗುತ್ತದೆ.

ಬ್ಲೌಸ್‌ ವಿಷಯ
‘ಅಮ್ಮ, ನಾನು ಹೆಚ್ಚು ಸೀರೆ ಉಡಲ್ಲ. ಸೀರೆ ಜೊತೆ ಬರುವ ಬ್ಲೌಸ್‌ ನೀನೇ ಹೊಲಿಸಿಕೊ, ನಾನು ರೆಡಿ ಮಿಕ್ಸ್‌ ಆ್ಯಂಡ್‌ ಮ್ಯಾಚ್‌ ಬ್ಲೌಸ್‌ ತಗೋತೀನಿ’ ಎಂದು ಮಾತ್ರ ಹೇಳಬೇಡಿ. ಏಕೆಂದರೆ ಮೊದಲ ಸೀರೆ ಮತ್ತು ಅದರ ನೆನಪುಗಳು ಎಂದೂ ಉಳಿಯುವಂಥದ್ದು. ಒಂದೇ ಬಾರಿ ಹಾಕಿದರೂ ಪರವಾಗಿಲ್ಲ ನಿಮ್ಮ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳಿ.

ಮೊದಮೊದಲು ಬ್ಲೌಸ್‌ ಹೊಲಿಸುವಾಗಲೂ ಅಷ್ಟೇ, ಜೀವನ ಪೂರ್ತಿ ಧರಿಸುವವರಂತೆ 40 ಸೆಂ.ಮೀ ಹೊಲಿಸಿ, ಎರಡು ಮೂರು ಇಂಚು ಚಿಕ್ಕ ಒಳ ಹೊಲಿಗೆ ಹಾಕಿಸಿಕೊಳ್ಳುತ್ತೇವೆ, ‘ದಪ್ಪ ಆದರೆ’ ಇರಲಿ ಎಂದು.

ಆದರೆ ಅದು  ತಪ್ಪು. ಒಳ ಬಟ್ಟೆ ಹೆಚ್ಚಾದಷ್ಟು ಬ್ಲೌಸ್‌ ಫಿಟ್ಟಿಂಗ್ ಸರಿಯಾಗಿ ಕೂರುವುದಿಲ್ಲ. ತಿಂಗಳಿಗೊಮ್ಮೆ ಟ್ರೆಂಡ್‌ ಬದಲಾಗುವ ಜಾಯಮಾನದಲ್ಲಿ ಹಳೆ ಬ್ಲೌಸ್‌ ಹೊಲಿಗೆ ಬಿಚ್ಚಿ ಧರಿಸುವ ಯುವತಿಯರೂ ಇದ್ದಾರೆಯೇ?

ಸಿನಿಮಾ ನಟಿಯರನ್ನು ನೋಡಿ ಹೆಚ್ಚು ಡೀಪ್ ಹೊಲಿಸಬೇಕು, ಡಿಸೈನರ್ ರವಿಕೆ ಹೊಲಿಸಬೇಕು ಎನಿಸುವುದು ವಯೋ ಸಹಜ ಆಸೆ. ಟೀ–ಶರ್ಟು ಧರಿಸಿ ರೂಢಿಯಾಗಿದ್ದವರಿಗೆ ಡೀಪ್‌ಬ್ಲೌಸ್ ತಕ್ಷಣಕ್ಕೆ ಇರಿಸುಮುರಿಸು ಉಂಟು ಮಾಡುತ್ತದೆ. ಅಮ್ಮನದ್ದೋ, ಅಕ್ಕನದ್ದೋ ಹಳೆಯ ಬ್ಲೌಸ್‌ ಧರಿಸಿ ಎಷ್ಟು ಡೀಪ್ ಇದ್ದರೆ ಆರಾಮ ಎಂದು ಲೆಕ್ಕಾಚಾರ ಮಾಡುವುದು ಜಾಣತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT