ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕೊಳವೆಬಾವಿಗಳು ಮುಂದಿನ 10 ವರ್ಷಗಳಲ್ಲಿ ಬತ್ತಿ ಹೋಗಲಿವೆ. ಕುಡಿಯುವ ನೀರಿಗೆ ಸಮಗ್ರ ಯೋಜನೆ ರೂಪಿಸದಿದ್ದರೆ ಈ ಅವಧಿಯಲ್ಲಿ ನಗರದ ಶೇ 50ರಷ್ಟು ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಬೆಂಗಳೂರು ಸಾಯುತ್ತಿರುವ ಮಹಾನಗರ’ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ವಿಶ್ಲೇಷಿಸಿದರು.

‘ವಾಯ್ಸಸ್ ಫ್ರಮ್ ದಿ ವಾಟರ್ಸ್’ ಸಂಘಟನೆಯ ಆಶ್ರಯದಲ್ಲಿ ಜಲದನಿಗಳು ಚಿತ್ರೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬತ್ತಿಹೋಗುತ್ತಿರುವ ನದಿಗಳು ಹಾಗೂ ಕೆರೆಗಳು’ ಸಂವಾದದಲ್ಲಿ ಅವರು ಮಾತನಾಡಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ 1.10 ಕೋಟಿ ಜನರು ಇದ್ದಾರೆ. ಶೇ 60ರಷ್ಟು ಮಂದಿ ಈಗಲೂ ಕೊಳವೆಬಾವಿಗಳ ನೀರನ್ನು ಅವಲಂಬಿಸಿದ್ದಾರೆ. ಜನಸಂಖ್ಯೆ ವರ್ಷಕ್ಕೆ ಶೇ 4ರಷ್ಟು ಹೆಚ್ಚಾಗುತ್ತಿದೆ. 29 ಟಿಎಂಸಿ ಅಡಿ ಪೂರೈಕೆಯಾದರೂ ನಗರದ ನೀರಿನ ಬೇಡಿಕೆಯನ್ನು ಈಡೇರಿಸುವುದು ಕಷ್ಟ’ ಎಂದು ಹೇಳಿದರು.

ಹಳ್ಳಿಗಳೂ ನಗರದ ತೆಕ್ಕೆಯೊಳಗೆ: ‘ಸುತ್ತಮುತ್ತಲಿನ ಹಳ್ಳಿಗಳೆಲ್ಲ ಈಗ ರಾಜಧಾನಿಯ ಹೊಟ್ಟೆಯೊಳಗೆ ಸೇರಿಕೊಂಡಿವೆ. ಬಿಡಿಎ ವ್ಯಾಪ್ತಿ 1,300 ಚ.ಕಿ.ಮೀ. ಇದೆ. ಈಗ ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿ ಬಿಡಿಎ ಗಡಿಯನ್ನು ದಾಟಿ ಇಡೀ ನಗರ ಜಿಲ್ಲೆಯನ್ನು ವ್ಯಾಪಿಸಿದೆ. ಅಂದರೆ ಈಗಿನ ವಿಸ್ತಾರ 2,100 ಚ.ಕಿ.ಮೀ. ಈ ನಡುವೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ತನ್ನೊಳಗೆ ಸೆಳೆದುಕೊಳ್ಳಲು ಆರಂಭಿಸಿದೆ. ಈ ಎಲ್ಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸವಾಲು ಇದೆ’ ಎಂದು ಹೇಳಿದರು.

ಮಳೆ ನೀರು ಸಂಗ್ರಹ– ದೊಡ್ಡ ಜೋಕ್: ‘ನಗರದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯ ವಿಷಯ ದೊಡ್ಡ ಜೋಕ್ ಆಗಿದೆ. ನಗರದಲ್ಲಿ 90 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಚೆನ್ನೈಯಲ್ಲಿ 5 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆ ಇದೆ. ಜಲಮಂಡಳಿ ಕಡ್ಡಾಯದ ಗಡುವು ವಿಸ್ತರಿಸುತ್ತಲೇ ಇದೆ. ದಂಡ ವಿಧಿಸುವ ಶಾಸ್ತ್ರ ಮಾಡುತ್ತಲೇ ಇದೆ’ ಎಂದು ವ್ಯಂಗ್ಯವಾಡಿದರು.

ಕಾವೇರಿ ನೀರೂ ಶುದ್ಧವಲ್ಲ: ‘ನಗರದಲ್ಲಿ ಪೂರೈಕೆಯಾಗುವ ಶೇ 49ರಷ್ಟು ನೀರು ಕುಡಿಯಲು ಯೋಗ್ಯವಲ್ಲ. ಕಾವೇರಿ ನೀರಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಹಂತಗಳಲ್ಲಿ ಶುದ್ಧೀಕರಿಸಿ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಪೈಪ್ಲೈನ್ಗಳು ಅಕ್ಕಪಕ್ಕದಲ್ಲೇ ಇವೆ. ಈ ಪೈಪ್ಲೈನ್ಗಳು 50–60 ವರ್ಷಗಳಷ್ಟು ಹಳೆಯವು. ಕಾವೇರಿ ನೀರಿಗೆ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಈ ನೀರು ಕಲುಷಿತಗೊಳ್ಳುತ್ತಿದೆ’ ಎಂದು ಅವರು ತಿಳಿಸಿದರು.

ಕೆರೆಗಳ ವ್ಯವಸ್ಥಿತ ನಾಶ: ‘ನಗರದ ಕೆರೆಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗುತ್ತಿದೆ. ಆರಂಭದಲ್ಲಿ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ಕೆರೆಯ ದಡದಲ್ಲಿ ಸುರಿಯಲಾಗುತ್ತದೆ. ಬಳಿಕ ಪಕ್ಕದಲ್ಲಿ ಗುಡಿಯೊಂದನ್ನು ನಿರ್ಮಾಣ ಮಾಡಲಾಗುತ್ತದೆ. ಸ್ವಲ್ಪ ಸಮಯವಾದ ಬಳಿಕ ಗುಡಿಸಲು ತಲೆ ಎತ್ತುತ್ತದೆ. ವರ್ಷ ಕಳೆಯುವಷ್ಟರಲ್ಲಿ ಬಹುಮಹಡಿ ಕಟ್ಟಡವೊಂದು ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಕೋಲಾರದಲ್ಲಿ ದ್ರಾಕ್ಷಿ ಬೆಳೆ ಏಕೆ?
‘ಕೋಲಾರದಲ್ಲಿ ಈ ಹಿಂದೆ ರಾಗಿ ಬೆಳೆಯಲಾಗುತ್ತಿತ್ತು. ಈಗ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಅಂತರ್ಜಲ ಪಾತಾಳಕ್ಕೆ ಇಳಿಯಲು ಇದೂ ಕಾರಣ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ. ಶ್ರೀನಿವಾಸಯ್ಯ ಹೇಳಿದರು. ‘1 ಕೆ.ಜಿ. ದ್ರಾಕ್ಷಿ ಬೆಳೆಯಲು 800 ಲೀ. ನೀರು ಬೇಕು. 3 ಕೆ.ಜಿ.ಗೆ 2,400 ಲೀ. ನೀರು ಬೇಕು. ಒಂದು ಬಾಟಲಿ ವೈನ್ ತಯಾರಿಸಲು 3 ಕೆ.ಜಿ. ದ್ರಾಕ್ಷಿ ಅಗತ್ಯ. ವೈನ್ಗಾಗಿ ಇಷ್ಟೊಂದು ನೀರು ಹಾಳು ಮಾಡುವ ಅಗತ್ಯ ಇದೆಯಾ’ ಎಂದು ಪ್ರಶ್ನಿಸಿದರು.

ಚಳಿಗಾಲದಲ್ಲೇ ಜಲಪಾತಗಳಲ್ಲಿ ನೀರಿಲ್ಲ: ಲಿಯೋ ಸಲ್ಡಾನಾ
ಮಳೆ ಕೊರತೆಯಿಂದಾಗಿ ಕರ್ನಾಟಕ ಹಾಗೂ ಕೇರಳದ ಪಶ್ಚಿಮ ಘಟ್ಟಗಳ ಜಲಪಾತಗಳಲ್ಲಿ ನವೆಂಬರ್ ತಿಂಗಳಲ್ಲೇ ನೀರಿಲ್ಲ’ ಎಂದು ಪರಿಸರ ತಜ್ಞ ಲಿಯೋ ಸಲ್ಡಾನಾ ಹೇಳಿದರು.

‘ನಾನು ಕಳೆದ ವಾರ ಕೊಡಗು ಹಾಗೂ ವಯನಾಡು ಭಾಗದಲ್ಲಿ 800 ಕಿ.ಮೀ. ಸಂಚಾರ ಮಾಡಿದೆ. ಬಹುತೇಕ ಜಲಪಾತಗಳು ಬತ್ತಿ ಹೋಗಿದ್ದವು’ ಎಂದು ಅವರು ತಿಳಿಸಿದರು.

‘ರಾಜ್ಯದ ಅರಣ್ಯಗಳು ಸಾಯುತ್ತಿವೆ. ಬಹುತೇಕ ಅರಣ್ಯಗಳಲ್ಲಿ ಹಣ್ಣಿನ ಗಿಡಗಳೇ ಇಲ್ಲ. ಹೀಗಾಗಿ ಪ್ರಾಣಿಗಳು ಕಾಡಿನಿಂದ ಹೊರಬರುತ್ತಿವೆ. ಬಂಡೀಪುರ ಅಭಯಾರಣ್ಯದಲ್ಲಿ ನವೆಂಬರ್ ತಿಂಗಳಿನಲ್ಲೇ ಕಾಳ್ಗಿಚ್ಚು ಕಾಣಿಸಿಕೊಂಡಿದೆ’ ಎಂದು ಅವರು ಹೇಳಿದರು.

ಬಾಲಸುಬ್ರಮಣಿಯನ್ ನೀರಿನ ಸೂತ್ರ
* ನೀರಿನ ಸೋರಿಕೆಯನ್ನು ಆದಷ್ಟು ಬೇಗ ಕಡಿಮೆ ಮಾಡಬೇಕು. ಈ ಪ್ರಮಾಣ ಶೇ 15–20ಕ್ಕೆ ಇಳಿಯಬೇಕು.

* ನಗರದ 25 ಕೊಳಚೆ ನೀರು ಸಂಸ್ಕರಣಾ ಘಟಕಗಳು ಶೇ 100 ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಬೇಕು. ಸಂಸ್ಕರಿಸಿದ ಶೇ 75ರಷ್ಟು ನೀರನ್ನು ಪುನರ್ ಬಳಕೆ ಮಾಡಲು ತೃತೀಯ ಹಂತದ ಘಟಕಗಳನ್ನು ನಿರ್ಮಾಣ ಮಾಡಬೇಕು.

* ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವಿಗೆ ಕಡಿವಾಣ ಹಾಕಬೇಕು. ಮಳೆ ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ರೂಪಿಸಬೇಕು.

* 2030ರ ವೇಳೆ 30 ಲಕ್ಷ ಮನೆಗಳಿಗೆ ಹಾಗೂ 2040ರ ವೇಳೆಗೆ 40 ಮನೆಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು.

* ಕುಡಿಯುವ ನೀರಿನ ಉಳಿತಾಯಕ್ಕಾಗಿ ಮನೆಗಳಲ್ಲಿ ಎರಡು ಹಂತದ ಪೈಪ್ ವ್ಯವಸ್ಥೆ ಅಳವಡಿಸಬೇಕು.

* ನೀರಿನ ಮಿತ ಬಳಕೆ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.

* ನಗರದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.