ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹ: ದಾಖಲೆ ಸೃಷ್ಟಿಸುವುದೇ ತೈವಾನ್‌?

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ
-ಕ್ರಿಸ್‌ ಹಾರ್ಟನ್‌
 
*
ತೈವಾನ್‌ನ ರಾಜಧಾನಿ ತೈಪೆಯ ಚರ್ಚೊಂದರಲ್ಲಿ  ಕುಳಿತಿದ್ದ ಲಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದಳು. ಆಕೆಯ ಸಹೋದರಿಯ ಮದುವೆ ಸಮಾರಂಭ ಅದಾಗಿತ್ತು. ಮದುಮಗಳು ಹುಡುಗನ ಕೈಹಿಡಿದು ನಿಂತಿದ್ದನ್ನು ನೋಡಿದಾಗ ತನಗರಿವಿಲ್ಲದೆಯೇ ಲಿಯುವಿಗೆ ಕಣ್ಣೀರು ಒಸರಿತ್ತು.
 
ಸಮಾಜದಲ್ಲಿ ಎಲ್ಲರಂತೆ ಮದುವೆಯಾಗುವ ಹಕ್ಕು ತನಗಿಲ್ಲ ಎಂಬ ಕೊರಗು ಲಿಯುವನ್ನು ಕಾಡುತ್ತಿತ್ತು. ಇದೇ ಅಂದಿನ ಆಕೆಯ ದುಃಖದ ಮೂಲ ಸಹ ಆಗಿತ್ತು. ಏಕೆಂದರೆ ಲಿಯು ಸಲಿಂಗಿ. ಗೆಳತಿಯ ಜತೆ ಮದುವೆಯಾಗಬೇಕೆಂಬುದು ಆಕೆಯ ಹೆಬ್ಬಯಕೆ. ಆದರೆ ಗೆಳತಿಯ ಕೈಹಿಡಿದು ‘ಸಲಿಂಗಿ ಜೋಡಿ’ ಎಂದು ಬಹಿರಂಗವಾಗಿ ಕರೆಸಿಕೊಳ್ಳುವ ಧೈರ್ಯ ಮಾತ್ರ ಆಕೆಗಿಲ್ಲ.  ಸಮಾಜದ ವಕ್ರದೃಷ್ಟಿ ಬೀಳಬಹುದು ಎಂಬ ಭಯ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.
 
‘ತೈವಾನ್‌ನಲ್ಲಿ ಸಲಿಂಗಿಗಳಿಗೆ ಮದುವೆ ಹಕ್ಕು ದೊರೆತರೆ ನನ್ನಂತೆ ಇಕ್ಕಟ್ಟಿನಲ್ಲಿ ಸಿಲುಕಿರುವ ಹಲವರಿಗೆ ಸುಖ ಜೀವನ ಸಾಗಿಸಲು ಅವಕಾಶ ಲಭಿಸಬಹುದು’ ಎಂದು ಲಿಯು ಹೇಳುತ್ತಾಳೆ. 
 
ಆಕೆ ಬಯಸಿರುವ ಅಂತಹ ದಿನ ತೈವಾನ್‌ನಲ್ಲಿ ಬರುವ ಎಲ್ಲ ಸಾಧ್ಯತೆಗಳು ಇದೀಗ ಗೋಚರಿಸುತ್ತಿವೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ  ಮಸೂದೆ ತೈವಾನ್‌ ಸಂಸತ್ತಿನಲ್ಲಿ ಒಂದೊಂದೇ ಹಂತವನ್ನು ದಾಟಿ ಮುಂದಡಿಯಿಟ್ಟಿದೆ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಳ್ಳುವ ಹೊಸ್ತಿಲಲ್ಲಿ ಅದು ನಿಂತಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಸಂಬಂಧ ಹೊಸ ಕಾನೂನು ಜಾರಿಗೆ ಬರಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. 
 
ತೈವಾನ್‌ನಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿ ಈ ವಿಷಯದಲ್ಲಿ ಹಿಂದೆಂದಿಗಿಂತಲೂ ಅನುಕೂಲಕರವಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ತ್ಸಾಯ್‌ ಇಂಗ್‌ ವೆನ್‌ ಅವರು ಸಲಿಂಗ ವಿವಾಹವನ್ನು ಬೆಂಬಲಿಸಿದ್ದಾರೆ. ಅವರ ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ (ಡಿಪಿಪಿ) ಕೂಡ ಸಲಿಂಗಿಗಳ ಹಕ್ಕುಗಳ ಬಗ್ಗೆ ಸಹಾನುಭೂತಿ ಹೊಂದಿದೆ. ತೈವಾನ್‌ ಸಂಸತ್ತಿನಲ್ಲಿ (ಯುವಾನ್‌) ಡಿಪಿಪಿಗೆ  ಬಹುಮತ ಇದೆ.
 
ಈ ದ್ವೀಪರಾಷ್ಟ್ರದ ಕೆಲವು ನಗರಗಳು ಸಲಿಂಗ ಸಂಬಂಧಕ್ಕೆ ಸಾಂಕೇತಿಕವಾಗಿ ಒಪ್ಪಿಗೆ ನೀಡಿವೆ. ಸಲಿಂಗ ದಂಪತಿಯ ಹೆಸರನ್ನು ಅಧಿಕೃತವಾಗಿ ನೋಂದಾಯಿಸಿಕೊಂಡ ತೈವಾನ್‌ನ ಮೊದಲ ನಗರ ಕಾವೊಸಿಯುಂಗ್‌. ಇಲ್ಲಿ ಇದೇ ವರ್ಷದ ಮೇ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆದಿತ್ತು. ಆನಂತರ ತೈಪೆ ಕೂಡ ಇದೇ ಹಾದಿ ತುಳಿದಿತ್ತು. 
 
ಕಾವೊಸಿಯುಂಗ್‌ ನಗರ ಈ ತಿಂಗಳಲ್ಲಿ ಸಲಿಂಗ ಜೋಡಿಗೆ ಮೊದಲ ಬಾರಿ ‘ಪಾರ್ಟ್‌ನರ್‌ಷಿಪ್‌ ಕಾರ್ಡ್‌’ ವಿತರಿಸಿದೆ. ‘ಇದೇ ಕ್ರಮವನ್ನು ನಾವೂ ಅನುಸರಿಸುತ್ತೇವೆ’ ಎಂದು ತೈಪೆ ನಗರಾಡಳಿತ ಪ್ರಕಟಿಸಿದೆ. ‘ತುರ್ತು ಸಂದರ್ಭಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೇಳೆ ಜತೆಗಾರ ಅಥವಾ ಜತೆಗಾರ್ತಿಯ ಸಹಾಯ ಪಡೆಯಲು ಈ ಕಾರ್ಡ್‌ಗಳು ನೆರವಾಗಲಿವೆ’ ಎಂದು ಕಾವೊಸಿಯುಂಗ್‌ ನಾಗರಿಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಚೆನ್‌ ಶು ಫಾಂಗ್‌ ಹೇಳಿದ್ದಾರೆ.
 
ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ತೈವಾನ್‌ನಲ್ಲಿ ಸಲಿಂಗ ಪುರುಷ ಅಥವಾ ಸಲಿಂಗ ಮಹಿಳಾ ಜೋಡಿ ಮತ್ತು ಇತರ ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎನ್ನಬಹುದು. ಬ್ರೂನಿ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಸಲಿಂಗಕಾಮ ಕಾನೂನುಬಾಹಿರ. 
 
ಆಡಳಿತಾರೂಢ ಡಿಪಿಪಿ, ವಿರೋಧ ಪಕ್ಷಗಳಾದ ನ್ಯಾಷನಲ್‌ ಪಾರ್ಟಿ, ಕುವೊಮಿನ್‌ತಾಂಗ್‌ ಪಕ್ಷ ಮತ್ತು ನ್ಯೂ ಪವರ್‌ ಪಾರ್ಟಿಗಳು ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಪ್ರತ್ಯೇಕವಾಗಿ ಮಂಡಿಸಿವೆ.
 
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವ ವಿವಾದಿತ ವಿಷಯವನ್ನು ತೈವಾನ್‌ ಕೆಲ ವರ್ಷಗಳ ಹಿಂದೆ ಕೂಡ ಪರಿಗಣಿಸಿತ್ತು. ಡಿಪಿಪಿ ಸಂಸದೆ ಸಿಯಾವೊ ಬಿ–ಕಿಮ್‌ 2005ರಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿದ್ದರು. ಆದರೆ ಆ ಮಸೂದೆಯನ್ನು ಬಹುಮತದಿಂದ ತಳ್ಳಿಹಾಕಲಾಗಿತ್ತು. 
 
2013ರಲ್ಲಿ ಮಂಡಿಸಿದ್ದ ಮಸೂದೆಯು ಸಂಸತ್‌ ಸಮಿತಿಯ ಪರಿಶೀಲನೆಯ ಹಂತದವರೆಗೆ ತಲುಪಿತ್ತು. ಸಮಿತಿಯು ಮಸೂದೆಗೆ ಒಪ್ಪಿಗೆ ನೀಡದ ಕಾರಣಕ್ಕೆ ಅದು ಬಿದ್ದುಹೋಗಿತ್ತು. 
 
‘ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಸೂದೆಗೆ ಅಂಗೀಕಾರ ದೊರಕುವಂತೆ ಮಾಡಲು ನಮಗೆ ಅತ್ಯುತ್ತಮ ಅವಕಾಶ ಲಭಿಸಿದೆ.  ಶಾಸನಸಭೆಯಲ್ಲಿ ಒಟ್ಟು 113 ಸದಸ್ಯರಿದ್ದು, ಮಸೂದೆಗೆ ಅಂಗೀಕಾರ ದೊರೆಯಲು 57 ಮತಗಳ ಅಗತ್ಯವಿದೆ. ಈಗಾಗಲೇ 56 ಸಂಸದರು ಮಸೂದೆಯನ್ನು ಬೆಂಬಲಿಸಿದ್ದಾರೆ’ ಎಂದು ಸಿಯಾವೊ ಹೇಳಿದ್ದಾರೆ.
 
‘ಮಸೂದೆ ಅಂಗೀಕಾರಗೊಂಡರೆ ತೈವಾನ್‌ನಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗಲಿದೆ’ ಎಂದು ಡಿಪಿಪಿ ಸಂಸದೆ ಯು ಮೆಯಿ ನು ಹೇಳಿದ್ದಾರೆ. ಮೆಯಿ ಅವರು ಡಿಪಿಪಿ ಪರವಾಗಿ   ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಮತ್ತೊಬ್ಬ ಸಂಸದರಾದ ಸು ಯು ಜೆನ್‌ ಇದಕ್ಕೆ ಸಹಿ ಹಾಕಿದ್ದರು. ಮಸೂದೆಗೆ ತೈವಾನ್‌ನ ಎಲ್ಲ ಪ್ರಮುಖ ಪಕ್ಷಗಳ ಬೆಂಬಲ ಲಭಿಸಿದೆ. ಆದರೆ ಈ ಪಕ್ಷಗಳಲ್ಲಿ ಮಸೂದೆಯನ್ನು ವಿರೋಧಿಸುವವರೂ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ.
 
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಗೆ ಸಾರ್ವಜನಿಕರಿಂದ ಕೂಡ ಬೆಂಬಲ ವ್ಯಕ್ತವಾಗಿದೆ ಎಂಬುದು ಯು–ಜೆನ್‌ ಅವರ ಹೇಳಿಕೆ. ಕಳೆದ ತಿಂಗಳು ತೈಪೆಯಲ್ಲಿ ನಡೆದ ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿ) 14ನೇ ‘ಪ್ರೈಡ್‌ ಪೆರೇಡ್‌’ ನಲ್ಲಿ ತೈವಾನ್‌ ಸೇರಿದಂತೆ ಏಷ್ಯಾದ ವಿವಿಧ ಭಾಗಗಳ 80 ಸಾವಿರ ಮಂದಿ ಪಾಲ್ಗೊಂಡಿದ್ದುದು ಇದಕ್ಕೆ ಸಾಕ್ಷಿ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.
 
ತೈವಾನ್‌ ಸಂಸತ್ತಿನ ಮುಂದಿನ ಅಧಿವೇಶನ 2017ರ ಫೆಬ್ರುವರಿಯಿಂದ ಮೇವರೆಗೆ ನಡೆಯಲಿದ್ದು, ಮಸೂದೆಗೆ ಈ ಅವಧಿಯಲ್ಲಿ ಅಂಗೀಕಾರ ದೊರೆಯುವ ಎಲ್ಲ ಸಾಧ್ಯತೆಗಳಿವೆ ಎಂಬ ವಿಶ್ವಾಸದಲ್ಲಿ ಯು–ಜೆನ್‌ ಇದ್ದಾರೆ.
 
ಈ ಬಾರಿ ಮಸೂದೆಗೆ ಅಂಗೀಕಾರ ಲಭಿಸದೇ ಇದ್ದರೆ ಮುಂದಿನ ಸಾರ್ವತ್ರಿಕ ಚುನಾವಣೆವರೆಗೆ (2018ರ ನವೆಂಬರ್‌)  ಅಂಗೀಕಾರ ದೊರೆಯುವ ಸಾಧ್ಯತೆಯಿಲ್ಲ ಎಂದಿದ್ದಾರೆ. ‘ಇದು ಸುವರ್ಣ ಅವಕಾಶ. ಆದರೆ ವಿವಾದಾತ್ಮಕ ವಿಷಯವಾಗಿರುವುದರಿಂದ ಮಸೂದೆಗೆ ಸಾಕಷ್ಟು ವಿರೋಧವೂ ಇದೆ’ ಎನ್ನುವ ಆತಂಕವನ್ನೂ ಅವರು ವ್ಯಕ್ತಪಡಿಸುತ್ತಾರೆ.
 
2013ರಲ್ಲಿ ಮಸೂದೆಯ ಪರವಾಗಿ ಸಹಿ ಹಾಕಿದ್ದ ಹಲವು ಸಂಸದರು, ಸಲಿಂಗ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುವ ಸಂಘಟನೆಗಳ ಒತ್ತಡಕ್ಕೆ ಮಣಿದು ತಮ್ಮ ನಿರ್ಧಾರ ಬದಲಿಸಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ.
 
ಮಸೂದೆ ವಿರೋಧಿಸಿ ಪ್ರತಿಭಟನೆ
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿಸಿಕೊಡಲು ನಡೆಯುತ್ತಿರುವ ಪ್ರಕ್ರಿಯೆಯನ್ನು ವಿರೋಧಿಸಿ ಇತ್ತೀಚೆಗೆ ತೈಪೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
 
ಶ್ವೇತವಸ್ತ್ರ ಧರಿಸಿದ್ದ ಪ್ರತಿಭಟನಾಕಾರರು ಸಂಸತ್‌ ಕಟ್ಟಡದ ಮುಂಭಾಗದಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿವಾದಿತ ವಿಷಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.  ಮತ್ತೆ ಕೆಲವರು ಜನಮತಗಣನೆ ನಡೆಸಬೇಕೆಂದು  ಒತ್ತಾಯಿಸಿದರು.
 
ಜನರ ಪ್ರತಿಭಟನೆಗೆ ಮಣಿದ ಡಿಪಿಪಿ ಮತ್ತು ಕುವೊಮಿನ್‌ತಾಂಗ್‌ ಪಕ್ಷಗಳು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರಿಸುವ ಮುನ್ನ ಜನರ ಅಭಿಪ್ರಾಯ ಪಡೆಯುವುದನ್ನು ಪರಿಗಣಿಸುವುದಾಗಿ ಹೇಳಿವೆ. 
 
ವಿವಿಧ ಧಾರ್ಮಿಕ ಗುಂಪುಗಳ ಒಕ್ಕೂಟ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು. 2013ರಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಈ ಒಕ್ಕೂಟ ಅಸ್ತಿತ್ವಕ್ಕೆ ಬಂದಿತ್ತು. ಮಸೂದೆಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯಗಳನ್ನು ಸಂಸದರ ಮುಂದೆ ಇಡುವುದಾಗಿ ಒಕ್ಕೂಟದ ನಾಯಕರು ಹೇಳಿದ್ದಾರೆ.  
 
ಮಸೂದೆಯನ್ನು ತಡೆಯಲು ನಾವು ಯಾವುದೇ ‘ಲಾಬಿ’ ನಡೆಸುತ್ತಿಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆ್ಯಂಡ್ರ್ಯೂ ಚಾಂಗ್‌ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ‘ಈ ಮಸೂದೆಗೆ ಅಂಗೀಕಾರ ದೊರೆತರೆ ಅದರಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ತಿಳಿಸುವುದಷ್ಟೇ ನಮ್ಮ ಕೆಲಸ. ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸಂಸದರಿಗೆ ಬಿಟ್ಟ ವಿಚಾರ’ ಎಂದಿದ್ದಾರೆ.
 
‘ಈಗ ಕಾಲ ಬದಲಾಗಿದೆ. ಸಮಾಜವು ಸಲಿಂಗಿಗಳನ್ನು ಸ್ವೀಕರಿಸುವಂತಹ ವಾತಾವರಣ ನಿರ್ಮಾಣವಾಗುತ್ತಿದೆ’ ಎಂದು ಸಲಿಂಗಿಗಳ ಹಕ್ಕುಗಳ ಪರವಾಗಿರುವ ವಕೀಲ ಮಿಯಾವೊ ಪೊಯಾ ಹೇಳುತ್ತಾರೆ. 
 
‘ಒಂದು ದಶಕದ ಹಿಂದೆ ಸಲಿಂಗಿಗಳ ಕ್ಲಬ್‌ ಮಾಲೀಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದರು.  ಈಗ ಅಂತಹ ಪರಿಸ್ಥಿತಿ ಇಲ್ಲ. ಸಲಿಂಗಿಗಳಿಗೂ ವಿವಾಹದ ಹಕ್ಕು ದೊರೆಯಬೇಕು ಎಂಬುದಕ್ಕೆ ಯುವ ಸಮೂಹದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ’ ಎಂದಿದ್ದಾರೆ. 
 
ಸೆಲೆಬ್ರಿಟಿಗಳ ಬೆಂಬಲ: ತೈವಾನ್‌ನ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಲೈಂಗಿಕ ಶಿಕ್ಷಣದಲ್ಲಿ ಸಲಿಂಗಿಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನೂ ಸೇರಿಸಲಾಗಿದೆ.  ಅದೇ ರೀತಿ ಪ್ರಸಿದ್ಧ ವ್ಯಕ್ತಿಗಳು (ಸೆಲೆಬ್ರಿಟಿ) ಬಹಿರಂಗವಾಗಿ ಸಲಿಂಗ ವಿವಾಹಕ್ಕೆ ಬೆಂಬಲ ನೀಡುತ್ತಿರುವುದು ಸಮಾಜದಲ್ಲಿ ಬದಲಾವಣೆಗೆ ಹಾದಿಯೊದಗಿಸಿದೆ ಎಂಬುದು ಪೊಯಾ ಅವರ ಹೇಳಿಕೆ.
 
ಪಾಪ್‌ ಗಾಯಕ ಎ–ಮೆಯಿ ಅವರು ಸಲಿಂಗ ವಿವಾಹಕ್ಕೆ ಬೆಂಬಲ ಘೋಷಿಸಿರುವ ಸೆಲೆಬ್ರಿಟಿಗಳಲ್ಲಿ ಪ್ರಮುಖರು. ಮೆಯಿ, ತೈವಾನ್‌ನ ಮೂಲನಿವಾಸಿಗಳಾದ ‘ಪುಯುಮಾ’ ಬುಡಕಟ್ಟು ಜನಾಂಗಕ್ಕೆ ಸೇರಿದವರು. 
 
‘ನಮ್ಮ ಬುಡಕಟ್ಟು ಜನಾಂಗದಲ್ಲಿ ಪ್ರೀತಿ, ವಿವಾಹ ಎಂಬುದು ಜಟಿಲವಾಗಿಲ್ಲ’ ಎಂದು ಮೆಯಿ ಇತ್ತೀಚೆಗೆ ಹೇಳಿದ್ದರು. ‘ಪ್ರಾಣಿಗಳು ಉಸಿರಾಡುವುದು  ಸಹಜ ಪ್ರಕ್ರಿಯೆ. ನನ್ನ ಪ್ರಕಾರ ಸಲಿಂಗ ವಿವಾಹ ಕೂಡ ಉಸಿರಾಟದಷ್ಟೇ ಸಹಜವಾದುದು. ಇನ್ನೊಬ್ಬರ ಉಸಿರಾಟವನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ’ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 
 
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆಂಬಲ ನೀಡಿದ್ದನ್ನು ಪರಿಗಣಿಸಿ ಮೆಯಿ ಅವರಿಗೆ ‘ತೈವಾನ್‌ ಇಂಟರ್‌ನ್ಯಾಷನಲ್‌ ಕ್ವೀರ್‌ ಫಿಲ್ಮ್‌ ಫೆಸ್ಟಿವಲ್‌’ ನೀಡುವ ‘ಜನರೇಷನ್‌ ಪ್ರಶಸ್ತಿ’ ದೊರೆತಿತ್ತು. 
 
ಸಮಾಜದಲ್ಲಿ ಕಡೆಗಣನೆಗೆ ಒಳಗಾದವರ ಪರ ಧ್ವನಿ ಎತ್ತುವವರನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶ ಎಂದು ಕ್ವೀರ್‌ ಫಿಲ್ಮ್‌ ಫೆಸ್ಟಿವಲ್‌ನ ನಿರ್ದೇಶಕ ಜೇ ಲಿನ್‌ ಹೇಳಿದ್ದಾರೆ. ಸಲಿಂಗಿಗಳಿಗೆ ಸಮಾನ ಹಕ್ಕು ದೊರೆಯಲು ನಡೆಯುತ್ತಿರುವ ಹೋರಾಟದಲ್ಲಿ ಮಾಧ್ಯಮಗಳು ಹೆಚ್ಚಿನ ಪಾತ್ರ ನಿರ್ವಹಿಸಬೇಕಾಗಿದೆ ಎಂದೂ ಅವರು ಹೇಳುತ್ತಾರೆ. ಈ ಹೋರಾಟದಲ್ಲಿ  ಇನ್ನಷ್ಟು ಜನ ಮತ್ತು ಸಂಘಟನೆಗಳನ್ನು ಒಗ್ಗೂಡಿಸುವುದರತ್ತ ಲಿನ್‌ ಗಮನ ಕೇಂದ್ರೀಕರಿಸಿದ್ದಾರೆ.
 
‘ಈಗ ದೊರೆತಿರುವ ಸದವಕಾಶವನ್ನು ಬಳಸಿಕೊಳ್ಳಬೇಕು. ಇದರಲ್ಲಿ ವಿಫಲರಾದರೆ ಮುಂದೆ ಇಂತಹ ಅವಕಾಶ ಯಾವಾಗ ಬರುವುದೋ ತಿಳಿಯದು’ ಎಂದು ಲಿನ್‌ ಹೇಳುತ್ತಾರೆ. 
(ದಿ ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT