ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯೆಂಬ ಪೂರಕ ಪಠ್ಯ

Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಸಾರ್, ಈಗ ನನ್ನ ಮೇಲೆ ಮತ್ತೊಂದು ದೂರು ಬಂದಿದೆ. ತರಗತಿಯಲ್ಲಿ ಶಿಳ್ಳೆ ಹೊಡೆಯುತ್ತೇನಂತೆ...’ ಕತ್ತೆತ್ತಿ ನೋಡಿದೆ. ಅವಳೇ! ಪದೇ ಪದೇ ತರಗತಿಯಿಂದ ದೂರು ತರುವ ಹುಡುಗಿ. ಅವಳ ಹಿಂದೆಯೇ, ಉರಿಯುತ್ತಾ ಬಂದ ಅಧ್ಯಾಪಕರು,  ‘ನೋಡಿ ಸಾರ್, ನಾನು ಬೋರ್ಡಿನ ಕಡೆ ತಿರುಗಿದ ಕೂಡಲೆ ಹಿಂದಿನ ಬೆಂಚಿನಿಂದ ಸಿಳ್ಳು ಕೇಳಿ ಬರುತ್ತದೆ. ವಿಚಾರಿಸಿದಾಗ ಇವಳೇ ಎಂದು ಗೊತ್ತಾಯಿತು.’ ಶಿಸ್ತಿಗೆ ಹೆಸರಾದ ಮುಖ್ಯಸ್ಥರು ಈಗೇನು ಮಾಡಬಹುದು ಎಂಬ ಕುತೂಹಲ ಎಲ್ಲರಿಗೆ.

ನಾನು ಕೇಳಿದೆ, ‘ ಹೌದಾ ಸಾರ್, ಇದೇ ಹುಡುಗಿ ಶಿಳ್ಳೆ ಹೊಡೆಯುತ್ತಾಳೆ ಅಂತ ನಿಮಗೆ ಖಾತರಿ ಆದದ್ದಾದರೂ ಹೇಗೆ?’. ‘ಏಯ್, ಬನ್ರಯ್ಯಾ ಇಲ್ಲಿ...’ ಅವಳ ಇಬ್ಬರು ಸಹಪಾಠಿಗಳು ಕೊಠಡಿಯೊಳಕ್ಕೆ ಕಾಲಿರಿಸಿದರು. ‘ಸಾರ್, ನಾವು ನೋಡಿದೆವು. ಅವಳೇ ಶಿಳ್ಳೆ ಹೊಡೆದದ್ದು’. ಆ ಹುಡುಗಿಯ ಮುಖ ನೋಡಿದೆ. ‘ಸಾರ್, ನನಗೆ ಶಿಳ್ಳೆ ಹೊಡೆಯಲು ಬರುವುದಿಲ್ಲ, ಜೊತೆಗೆ ಬಾಯಿಹುಣ್ಣು...’ ಮುಂದೇನಾದೀತು? ಎಲ್ಲರ ಕಣ್ಣು ನನ್ನ ಮೇಲೆ.

‘ಸರಿ ಬನ್ನಿ. ತರಗತಿಗೆ ಹೋಗೋಣ.’ ನಮ್ಮೆಲ್ಲರ ಮೆರವಣಿಗೆ ತರಗತಿಯತ್ತ. ‘ನಿಮ್ಮ ನಿಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಿ’ ಎಂದೆ. ಬಳಿಕ ಇಡೀ ತರಗತಿಯನ್ನೊಮ್ಮೆ ಅವಲೋಕಿಸಿದೆ. ತರಗತಿಯ ಹೆಣ್ಣುಮಕ್ಕಳ ಸಾಲಿನಲ್ಲಿ ಮಧ್ಯದ ಬೆಂಚಿನ ಅಂಚಿನಲ್ಲಿ ಕುಳಿತಿದ್ದ ಅವಳನ್ನು ಉದ್ದೇಶಿಸಿ ಹೇಳಿದೆ, ‘ಪುಟ್ಟಕ್ಕ, ಎದ್ದು ಮೊದಲ ಬೆಂಚಿನ ವಿದ್ಯಾರ್ಥಿನಿಯರ ಜೊತೆ ಮಧ್ಯದಲ್ಲಿ ಕುಳಿತುಕೊ’.

ಬಳಿಕ ಅಧ್ಯಾಪಕರಿಗೆ ಹೇಳಿದೆ: ‘ಸಾರ್, ಇವಳು ಎಲ್ಲ ತರಗತಿಗಳಲ್ಲೂ ಇಲ್ಲೇ ಕುಳಿತುಕೊಳ್ಳಲಿ, ಸ್ಥಳ ಬದಲಾವಣೆ ಮಾಡುವುದು ಬೇಡ’. ಬಳಿಕ ಆ ವಿದ್ಯಾರ್ಥಿನಿಗೆ ಹೇಳಿದೆ: ‘ನೀನು ಆನಂತರ ಬಂದು ನನ್ನನ್ನು ಭೇಟಿಯಾಗು’. ಸಂಜೆ ತರಗತಿಗಳು ಮುಗಿದು ಮನೆಗೆ ಹೊರಡುವ ಮುನ್ನ ಅವಳು ಬಂದಳು, ಶಿಕ್ಷೆಗೆ ತಯಾರಾಗಿ ನಿಂತ ಅಪರಾಧಿಯಂತೆ. ಹಿಂದೆ ಅನೇಕ ಬಾರಿ ಅವಳ ಪೋಷಕರನ್ನು ಕರೆಸಿ ಮಾತನಾಡಿದ್ದೆ. ಹೀಗಾಗಿ ಅವಳ ಊಹೆ ಮತ್ತೊಂದು ಸುತ್ತು ಛೀಮಾರಿ ಎಂದು.

ಅವಳ ಮುಖ ನೋಡಿದೆ. ತುಂಟತನ ತುಂಬಿತುಳುಕುತ್ತಿರುವ ಕಣ್ಣು, ಆತ್ಮವಿಶ್ವಾಸದಿಂದ ಸೆಟೆದು ನಿಂತ ಬೆನ್ನು, ದುಗುಡದ ಬಗ್ಗಡ ಹೊತ್ತ ಮನಸ್ಸನ್ನು ಬಿಂಬಿಸುವ ಮುಖ.‘ಪುಟ್ಟೀ, ನಿನಗೀಗ ಒಂದು ಶಿಕ್ಷೆ ವಿಧಿಸುತ್ತೇನೆ. ತಪ್ಪಬಾರದು. ನೋಡು, ಇನ್ನು ಮುಂದೆ ಪ್ರತಿ ದಿನವೂ ನೀನೊಂದು ವಿಚಾರವನ್ನು ನನಗೆ ನಿವೇದಿಸಬೇಕು. ಅದೇನೆಂದರೆ, ಪ್ರತಿ ದಿನ ನಿನ್ನಲ್ಲಿರುವ ಒಂದು ವಿಶೇಷ ಗುಣವನ್ನೋ, ಒಳ್ಳೆಯ ಅಂಶವನ್ನೋ ನನಗೆ ಹೇಳಬೇಕು’. ಅವಳು ಅಚ್ಚರಿಯಿಂದ ‘ಆಗಲಿ’ ಎಂದು ಹೊರಟಳು.

‘ಸಾರ್, ನನಗೆ ಈಜು ಬರುತ್ತದೆ.’
‘ವೆರಿ ಗುಡ್’.
‘ಸಾರ್, ನಾನು ನನ್ನ ಮನಸ್ಸಿನ ಭಾವನೆಗಳನ್ನು ಮುಖದ ಮೇಲೆ ತೋರದಂತೆ ಇರಬಲ್ಲೆ’.
‘ಗುಡ್’.
‘ಸಾರ್, ನಾನು ಏಳು ಭಾಷೆಗಳನ್ನು ಬಳಸಬಲ್ಲೆ’.
‘ಫೆಂಟಾಸ್ಟಿಕ್, ಯಾವ ಯಾವ ಭಾಷೆ ಬಲ್ಲೆ, ಹೇಳು ನೋಡೋಣ’.
‘ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಫ್ರೆಂಚ್’.
‘ವಂಡರ್‌ಫುಲ್, ಫ್ರೆಂಚ್ ಹೇಗೆ ಕಲಿತೆ ಪುಟ್ಟೀ?’
‘ಸಾರ್, ನನ್ನ ಚಿಕ್ಕಮ್ಮ ಫ್ರಾನ್ಸ್‌ನಲ್ಲಿದ್ದಾರೆ, ಅವರೊಡನೆ ಚಾಟಿಂಗ್ ಮಾಡುತ್ತಾ ಕಲಿತೆ’.

ಹೀಗೇ ಮುಂದುವರೆಯಿತು ನನ್ನ ಮತ್ತು ಆ ವಿದ್ಯಾರ್ಥಿನಿಯ ಸಂವಾದ. ಜೊತೆಗೆ ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಅವಳೊಡನೆ ಆಪ್ತಸಮಾಲೋಚನೆ ನಡೆಸಲು ಸೂಚಿಸಿದೆ.

‘ನೀನು ಕೆಟ್ಟವಳು, ನೀನು ತುಂಟಿ’,‘ನೀನು ನಿಷ್ಪ್ರಯೋಜಕಿ, ನೀನು ಫೇಲಾಗುತ್ತೀ’, ‘ನೀನು ಹಾಳಾಗುತ್ತೀ, ನೀನು ಉದ್ಧಾರವಾಗಲ್ಲ’, ‘ನೀನು ಯಾಕಾದರೂ ಹುಟ್ಟಿದೆಯೊ?’, ‘ನೀನು ಅದು ಹೇಗೆ ಪಾಸಾದೆ? ನಿನ್ನನ್ನು ಈ ಕಾಲೇಜಿಗೆ ಏಕೆ ಸೇರಿಸಿಕೊಂಡೆವೊ...’ –  ಈ ಮಾತುಗಳನ್ನು ಕೇಳಿ ಕೇಳಿ ಎಂತಹ ವ್ಯಕ್ತಿತ್ವ ಮೈಗೂಡಬಹುದು? ಪದೇ ಪದೇ ನಮ್ಮ ಮನಸ್ಸಿಗೆ ಏನನ್ನು ತುಂಬುತ್ತೇವೋ ನಾವು ಅದೇ ಆಗುತ್ತೇವೆ. ಅದರಲ್ಲೂ ಅಧ್ಯಾಪಕರಾದವರು ಬಹಳ ಎಚ್ಚರದಿಂದ ಮಾತನಾಡಬೇಕು. ಶಿಸ್ತಿಲ್ಲದೆ ಶಿಕ್ಷಣವಿಲ್ಲ; ನಿಜ.

ಆದರೆ ಸಕಾರಾತ್ಮಕ ಭಾವನೆಗಳನ್ನು ರೂಢಿಸುವುದು ಅಷ್ಟೇ ಮುಖ್ಯ. ಮುಂದೊಂದು ದಿನ ಈ ಹುಡುಗಿ ಜೀವನದಲ್ಲಿ ಉನ್ನತಿಯನ್ನು ಪಡೆಯುತ್ತಾಳೆ ಎಂಬುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಅವಳೊಳಗಿನ ಒಳಿತಿನ, ಎತ್ತರದ ಅಂಶಗಳನ್ನು ಅವಳೇ ಮನದಟ್ಟು ಮಾಡಿಕೊಳ್ಳುತ್ತಿದ್ದಾಳೆ. ಶಿಕ್ಷಣದ ಉದ್ದೇಶ ಕೇವಲ ಮಾಹಿತಿಸಂಗ್ರಹವಲ್ಲ, ಸಕಾರಾತ್ಮಕ ವ್ಯಕ್ತಿತ್ವನಿರ್ಮಾಣ. ಅದು ಸಾಧ್ಯವಾಗಬೇಕಾದರೆ ಶಿಕ್ಷಕರು ನಿರ್ವಾಜ್ಯಪ್ರೀತಿಯೆಂಬ ಮಧುವನ್ನು ವಿದ್ಯಾರ್ಥಿಗಳ ಬೊಗಸೆಗೆ ಸುರಿಯಬೇಕು.

ಮಾಹಿತಿಯುಗದಲ್ಲಿ ವಿದ್ಯಾರ್ಥಿಗಳು ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಪಡೆದುಕೊಳ್ಳಬಲ್ಲರು. ಆದರೆ ಶುದ್ಧ ಮಾನುಷಪ್ರೀತಿ, ಕಾಳಜಿಗಳನ್ನು ಅವರು ತಮ್ಮ ಶಿಕ್ಷಕರಿಂದಲೇ ಪಡೆಯಬೇಕು, ಇದು ಅವರ ಹಕ್ಕು. ಎಷ್ಟೋ ಬಾರಿ ವಿದ್ಯಾರ್ಥಿಗಳನ್ನು ತಂದೆ ತಾಯಿ ಅರೆಜೀವ ಮಾಡಿದರೆ, ಉಳಿದರ್ಧ ಜೀವವನ್ನು ತೆಗೆದುಬಿಡುತ್ತಾರೆ ಶಿಕ್ಷಕರು.

ನಾನೊಮ್ಮೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಕಿಟಕಿಯಿಂದಾಚಿನ ದೃಶ್ಯಗಳನ್ನು ನೋಡುತ್ತಾ ಸಾಗಿದೆ. ಗ್ರಾಮೀಣ ಪ್ರದೇಶದ ಒಂದು ಪ್ರೌಢಶಾಲಾ ಆವರಣ ಬಳಸಿ ಹೊರಟಿತ್ತು ಬಸ್ಸು. ಆವರಣದಲ್ಲಿ ಕಂಡ ದೃಶ್ಯ ನೋಡಿ ದಂಗುಬಡಿದುಹೋದೆ. ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳ ಮುಂಜುಟ್ಟು ಹಿಡಿದು ಕೆನ್ನೆಗೆ ಬಾರಿಸುತ್ತಾ, ಬೆನ್ನಿನ ಮೇಲೆ ಗುದ್ದುತ್ತಾ ಇದ್ದಾನೆ ಒಬ್ಬ ಶಿಕ್ಷಕ! ರಕ್ತ ಕುದಿಯಿತು. ಬಸ್ಸು ನಿಲ್ಲಿಸಿ ಓಡಿಹೋಗಿ ಅವನಿಗೆ ಬಾರಿಸಬೇಕು ಅನ್ನಿಸಿತು. ವೇಗದಲ್ಲಿ ಚಲಿಸುತ್ತ ಬಸ್ಸು ಶಾಲೆಯನ್ನು ಬಳಸಿ ಹೊರಟೇಹೋಯಿತು.

ಆದರೆ ಆ ದೃಶ್ಯ ಮಾತ್ರ ಇಂದಿಗೂ ಕಾಡುತ್ತದೆ. ಬಡಿಸಿಕೊಳ್ಳುತ್ತಿರುವ ಆ ಹುಡುಗಿ ಮತ್ತು ಅದನ್ನು ಭಯವಿಹ್ವಲತೆಗಳಿಂದ ನೋಡುತ್ತಿರುವ ಅವಳ ಸಹಪಾಠಿಗಳು. ಆ ಶಾಲೆ ಹೆಚ್ಚು ದಿನ ಊರ್ಜಿತವಾಗದು. ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಕಟ್ಟಿಹಾಕುವುದು ಒಂದು ಅನೂಹ್ಯ ಪ್ರೀತಿಯ ಬಂಧ. ಕಟ್ಟಡ ಕಟ್ಟಿ, ಚಿನ್ನದ ಕಮಾನು ತೊಡಿಸಿದರೂ ಪ್ರೀತಿಯಿಲ್ಲದ ಶಿಕ್ಷಕರು ಅಲ್ಲಿರದಿದ್ದರೆ ಮಕ್ಕಳು ಅಲ್ಲಿ ಉಳಿಯುವುದಿಲ್ಲ.

‘ಶ್ರೀರಾಮಕೃಷ್ಣರ ಪ್ರೀತಿ ನಮ್ಮೆಲ್ಲರನ್ನು ಕಟ್ಟಿಹಾಕಿಬಿಟ್ಟಿದೆ. ಆ ಪ್ರೀತಿಗೆ ಗುಲಾಮನಾಗಿ ಬಿಟ್ಟಿದ್ದೇನೆ ನಾನು...’ ಇದು ಸ್ವಾಮಿ ವಿವೇಕಾನಂದರು ತಮ್ಮ ಗುರುಭಾಯಿಗಳಿಗೆ ಹೇಳಿದ ಮಾತು. ನಿಜ, ಗುರುವಿನ ಗುಲಾಮರಾಗಬೇಕಾದರೆ ಅವನು ಪ್ರೀತಿಯ ಸಾಕಾರಮೂರ್ತಿಯೇ ಆಗಿರಬೇಕು. ಅಲ್ಲಿ ಸ್ವಾರ್ಥದ ಕಲ್ಮಶ ಕೊಂಚವೂ ಇರಬಾರದು.

ಕೆಲವರು ಹುಟ್ಟಿನಿಂದ ಶಿಕ್ಷಕರು, ಕೆಲವರು ತರಬೇತಿಯಿಂದ ಶಿಕ್ಷಕರು, ಮತ್ತೆ ಹಲವರು ಹೊಟ್ಟೆಪಾಡಿಗೆ ಶಿಕ್ಷಕರು. ಇಂದು ಶಿಕ್ಷಣಕ್ಷೇತ್ರಕ್ಕೆ ಅಪಾಯಕಾರಿಯಾದ ಅಂಶವೆಂದರೆ ಅದು ಮೇಲೆ ಹೇಳಿದ ಮೂರನೇ ವರ್ಗದ ಶಿಕ್ಷಕರು. ಐಎಎಸ್ ಅಧಿಕಾರಿಗಳಿಗಿಂತ ಹೆಚ್ಚು ಸಂಬಳ ಪಡೆಯುವ ಉನ್ನತ ಶಿಕ್ಷಕರು ನಿಜವಾಗಿಯೂ ಉನ್ನತರೇ ಎಂಬ ಪ್ರಶ್ನೆಯನ್ನು ಆತ್ಮಸಾಕ್ಷಿಯುಳ್ಳ ಪ್ರತಿಯೊಬ್ಬ ಉನ್ನತ ಶಿಕ್ಷಕನೂ ಕೇಳಿಕೊಳ್ಳಬೇಕು.

ಇನ್ನು ಸೇವಾಖಾತರಿ ಪಡೆದ ಶಿಕ್ಷಕರು ಕೂಡ ಅಷ್ಟೆ. ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತಿದ್ದೇವೆಯೇ ಎಂಬುದಾಗಿ ತಾವೇ ಆಗಾಗ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು.ಅದಂತಿರಲಿ, ಶಿಕ್ಷಕರೆನಿಸಿಕೊಂಡ ಎಲ್ಲರೂ ತಮ್ಮನ್ನು ಎತ್ತರದಲ್ಲಿಟ್ಟು ಕಾಣುವ ವಿದ್ಯಾರ್ಥಿಗಳನ್ನು ನಿಜಪ್ರೀತಿಯಿಂದ ಕಾಣುವ ಔದಾರ್ಯವನ್ನು ತೋರಬೇಕು. ಇದು ಪಠ್ಯದಲ್ಲಿಲ್ಲದ ಸರಕು ಆದರೆ ಇದನ್ನು ಪೂರೈಸದಿದ್ದರೆ ವಿದ್ಯಾರ್ಥಿ ಮಂಕಾಗುತ್ತಾನೆ, ಶಿಕ್ಷಣ ಸೋಲುತ್ತದೆ.

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT