ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಹಾಕಿಗೆ ಹೊಸ ಭಾಷ್ಯ ಎಚ್‌ಐಎಲ್‌

Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದಲ್ಲಿ  ಛಾಪು ಕಳೆದುಕೊಳ್ಳುವ ಹಾದಿಯಲ್ಲಿದ್ದ ಹಾಕಿ ಕ್ರೀಡೆಗೆ ಹಾಕಿ ಇಂಡಿಯಾ ಲೀಗ್‌ ಹೊಸ ಜೀವ ಕಳೆ ನೀಡಿದೆ. 2013ರಲ್ಲಿ ಆರಂಭವಾದ ಈ ಲೀಗ್‌ ಹಾಕಿ ಲೋಕದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಹಿಂದಿನ ನಾಲ್ಕು ಆವೃತ್ತಿಯ ಲೀಗ್‌ ಅಪಾರ ಜನಮನ್ನಣೆ ಗಳಿಸಿದೆ. ಸದ್ಯದಲ್ಲೇ ಐದನೇ ಆವೃತ್ತಿಗೆ ರಂಗ ಸಜ್ಜುಗೊಳ್ಳಲಿದೆ. ಇದರ ಬಗ್ಗೆ ಜಿ. ಶಿವಕುಮಾರ ಬರೆದಿದ್ದಾರೆ.

ಇಂಬೆಂಗಳೂರು ತಂಡಕ್ಕೆ  ಅವಕಾಶಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ ಯಶಸ್ಸಿನ ಬಳಿಕ ಭಾರತದ ಕ್ರೀಡಾ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ಫುಟ್‌ಬಾಲ್‌, ಕಬಡ್ಡಿ, ಬ್ಯಾಡ್ಮಿಂಟನ್‌, ವಾಲಿಬಾಲ್‌, ಕುಸ್ತಿ.... ಹೀಗೆ ಲೀಗ್‌ಗಳ ಪರ್ವವೇ ಸೃಷ್ಟಿಯಾಗಿದೆ.

ಐಪಿಎಲ್‌ನಿಂದ ಸ್ಫೂರ್ತಿ ಪಡೆದು  ಹುಟ್ಟಿಕೊಂಡ ಹಾಕಿ ಇಂಡಿಯಾ ಲೀಗ್‌ ಕೂಡಾ ಹಾಕಿ ರಂಗದಲ್ಲಿ ಹೊಸ ಅಲೆ ಏಳುವಂತೆ ಮಾಡಿದೆ. ಹಾಕಿ ಕ್ರೀಡೆಯನ್ನು ಜನಪ್ರಿಯ ಗೊಳಿಸುವ ಗುರಿಯೊಂದಿಗೆ ಹಾಕಿ ಇಂಡಿಯಾ (ಎಚ್‌ಐ) ಆರಂಭಿಸಿದ ಈ ಲೀಗ್‌  ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುವುದು ಮಾತ್ರವಲ್ಲದೆ ಆಟಗಾರರ ಕ್ರೀಡಾ ಬದುಕಿಗೂ ಮಹತ್ವದ ತಿರುವು ನೀಡಿದೆ.

ಎಚ್‌ಐಎಲ್‌ನಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು ಈ ಲೀಗ್‌ನಿಂದ ಆಟಗಾರರ ಆರ್ಥಿಕ ಪರಿಸ್ಥಿತಿಯೂ ಸಾಕಷ್ಟು ಸುಧಾರಿಸಿದೆ. ಜೊತೆಗೆ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಹೊರಹಾಕಲೂ  ವೇದಿಕೆ ಕಲ್ಪಿಸಿಕೊಟ್ಟಿದೆ.

ಲೀಗ್‌ನಲ್ಲಿ ದೇಶ, ವಿದೇಶದ  ಆಟಗಾರರು  ಮತ್ತು ನುರಿತ ಕೋಚ್‌ಗಳು ಭಾಗವಹಿಸುತ್ತಿರುವುದರಿಂದ ಯುವ ಆಟಗಾರರಿಗೆ ಹೊಸ ತಂತ್ರಗಳು ಹಾಗೂ ಆಟದ ಕೌಶಲಗಳನ್ನು ಕಲಿಯಲೂ ಕೂಡಾ  ಹಾಕಿ ಲೀಗ್‌ ನೆರವಾಗಿದೆ.

ಎಚ್‌ಐಎಲ್‌ ಆರಂಭದ ಹಿನ್ನೆಲೆ
2012ರಲ್ಲಿ ಹಾಕಿ ಇಂಡಿಯಾ, ನಿಂಬಸ್‌ ಸಂಸ್ಥೆಯ ಸಹಯೋಗದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಸರಣಿ ಹಾಕಿ ಟೂರ್ನಿ ನಡೆಸಿತ್ತು. ಆ ಲೀಗ್‌ ಸಾಕಷ್ಟು ಜನ ಮನ್ನಣೆ  ಪಡೆದಿತ್ತು. ಆ ಅವಧಿಯಲ್ಲಿ ಐಪಿಎಲ್‌ ಕೂಡಾ ಅಪಾರ ಯಶಸ್ಸು ಗಳಿಸಿತ್ತು. ಇದರಿಂದ ಪ್ರೇರಿತವಾಗಿ ಹಾಕಿ ಇಂಡಿಯಾ 2012ರಲ್ಲಿ   ಲೀಗ್‌  ಆರಂಭಿಸಲು ನಿರ್ಧರಿಸಿತು. ಇದಕ್ಕೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಒಪ್ಪಿಗೆಯೂ ಸಿಕ್ಕಿತು.

ಚೊಚ್ಚಲ ಆವೃತ್ತಿಯಲ್ಲಿ ಆರು ತಂಡಗಳಿಗೆ ಆಡುವ ಅವಕಾಶ  ನೀಡಲು ಹಾಕಿ ಇಂಡಿಯಾ ನಿರ್ಧರಿಸಿತ್ತು. ಇದಕ್ಕಾಗಿ 12 ಫ್ರಾಂಚೈಸ್‌ಗಳು ಬಿಡ್‌ ಸಲ್ಲಿಸಿದ್ದವು. ಆದರೆ ಅಂತಿಮವಾಗಿ ಐದು ತಂಡಗಳು ಮಾತ್ರ ಪ್ರಶಸ್ತಿಗಾಗಿ ಸೆಣಸಿದ್ದವು.

ವಿದೇಶಿ ಆಟಗಾರರ ಮೆರುಗು
ಎಚ್‌ಐಎಲ್‌ನಲ್ಲಿ ವಿದೇಶಿ ಆಟಗಾರರ ದೊಡ್ಡ ದಂಡೇ ಇದೆ. ಲೀಗ್‌ನ ಕಂಪನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವ ಉದ್ದೇಶ ದಿಂದ ಹಾಕಿ ಇಂಡಿಯಾ  ವಿವಿಧ ದೇಶಗಳ ಘಟಾನುಘಟಿಗಳಿಗೆ ಮಣೆ ಹಾಕಿದೆ.

ಜರ್ಮನಿಯ ಮೊರಿಟ್ಜ್‌ ಫರ್ಸ್‌್ಟೆ, ತೋಬಿಯಸ್‌ ಕಾನ್‌ಸ್ಟೆಂಟ್‌ ಹೌಕ್‌,  ಸ್ಟಾಲ್ವರ್ಟ್‌ ಫರ್ಸ್‌್ಟೆ, ಫ್ಲೋರಿಯನ್‌ ಫಚಸ್‌,  ಇಂಗ್ಲೆಂಡ್‌ನ ಆ್ಯಷ್ಲೆ ಜಾಕ್ಸನ್‌, ಬಾರಿ ಮಿಡ್ಲ್‌ಟನ್‌, ಆಸ್ಟ್ರೇಲಿಯಾದ ಜೆಮಿ ಡ್ವೆಯರ್‌, ಎಡ್ಡಿ ಒಕೆಂಡೆನ್‌, ಸಿಮನ್‌ ಆರ್ಕರ್ಡ್‌, ಜೆರೆಮಿ ಹೇವರ್ಡ್‌, ಸ್ಯಾಂಡರ್‌ ಡಿ ವಿಜನ್‌ ಅವರಂತಹ ಬಲಿಷ್ಠ ಮತ್ತು ಪ್ರತಿಭಾನ್ವಿತ ಆಟಗಾರರು ಲೀಗ್‌ಗೆ ಇನ್ನಷ್ಟು ಮೆರುಗು ನೀಡಿದ್ದಾರೆ.

ಮಿಂಚಿನ ಆಟದ ಮೂಲಕ ಭಾರತದ ನೆಲದಲ್ಲಿ ಮೋಡಿ ಮಾಡುತ್ತಿರುವ ಇವರು ಹಾಕಿ ಪ್ರಿಯರನ್ನು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡುತ್ತಿದ್ದಾರೆ. ಎರಡು ಬಾರಿ ಯುರೊ ಹಾಕಿ ಲೀಗ್‌ನ ಮೌಲ್ಯಯುತ ಆಟಗಾರ ಮತ್ತು  2012ರಲ್ಲಿ ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿ ಗೆದ್ದಿರುವ ಸ್ಟಾಲ್ವರ್ಟ್‌ ಅವರನ್ನು ಹೋದ ಬಾರಿ ಕಳಿಂಗ  ಲ್ಯಾನ್ಸರ್‌ ಫ್ರಾಂಚೈಸ್‌ ದಾಖಲೆಯ ಮೊತ್ತ ನೀಡಿ ಖರೀದಿಸಿತ್ತು. ಇದು ಈ ಆಟಗಾರರ ಭಾಗವಹಿಸುವಿಕೆಯ ಮಹತ್ವವನ್ನು ಸಾರುತ್ತದೆ.

ಪ್ರತಿಭಾನ್ವೇಷಣೆಗೆ  ನಾಂದಿ
ಎಚ್‌ಐಎಲ್‌ ಅನೇಕ ಯುವ ಆಟಗಾರರ ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸಿದೆ. ರಾಷ್ಟ್ರೀಯ ಸೀನಿಯರ್‌ ಮತ್ತು ಜೂನಿಯರ್‌ ತಂಡಗಳಲ್ಲಿ ಮಿಂಚುತ್ತಿರುವ ಮಿಡ್‌ಫೀಲ್ಡರ್‌ ಡಿಪ್ಸನ್‌ ಟರ್ಕಿ, ಡ್ರ್ಯಾಗ್‌ ಫ್ಲಿಕ್‌ ಪರಿಣತ ಹರ್ಮನ್‌  ಪ್ರೀತ್‌ ಸಿಂಗ್‌, ಹಾಫ್‌ ಬ್ಯಾಕ್‌ ಅರ್ಮಾನ್‌ ಖುರೇಷಿ, ವರುಣ್‌ ಕುಮಾರ್‌, ಹರ್ಜೀತ್‌ ಸಿಂಗ್‌ ಮತ್ತು ಗೋಲ್‌ ಕೀಪರ್‌ ಆಕಾಶ್‌ ಚಿಕ್ಟೆ ಅವರಂ ತಹ ಪ್ರತಿಭಾನ್ವಿತರು ಈ ಲೀಗ್‌ನ ಮೂಲಕ ಪ್ರವರ್ಧಮಾನಕ್ಕೆ ಬಂದ ವರು ಎಂಬುದು  ಗಮನಿಸಬೇಕಾದ ಅಂಶ.

ಲೀಗ್‌ನಲ್ಲಿ ಡೆಲ್ಲಿ ವೇವ್‌ರೈಡರ್ಸ್‌ ತಂಡದಲ್ಲಿ ಆಡುವ 20 ವರ್ಷದ ಮಿಡ್‌ಫೀಲ್ಡರ್‌ ಹರ್ಜೀತ್‌, ಹಲವು ಟೂರ್ನಿಗಳಲ್ಲಿ ಕಿರಿಯರ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದಾರೆ.ಜೊತೆಗೆ ಸೀನಿಯರ್‌ ತಂಡದಲ್ಲೂ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಹರ್ಜೀತ್‌ ಜೂನಿಯರ್‌ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.

ಡಿಪ್ಸನ್‌, ಆಕಾಶ್‌ ಅವರೂ ಇದಕ್ಕೆ ಹೊರತಾಗಿಲ್ಲ. 18 ವರ್ಷದ ಡಿಪ್ಸನ್‌ ಕೂಡಾ ಹಿಂದಿನ ಕೆಲ ಟೂರ್ನಿಗಳಲ್ಲಿ ಕಿರಿಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಹಿರಿಯ ಆಟಗಾರ ಪಿ.ಆರ್‌. ಶ್ರೀಜೇಶ್‌ ಬದಲಿಗೆ ಸ್ಥಾನ ಗಳಿಸಿದ್ದ ಚಿಕ್ಟೆ ಮೋಡಿ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ.

ಐದನೇ ಆವೃತ್ತಿಗೆ ಕ್ಷಣಗಣನೆ
ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ಮನರಂಜನೆಯ ರಸದೌತಣ ಸವಿದಿದ್ದ ಹಾಕಿ ಪ್ರಿಯರು ಈಗ ಮತ್ತೊಮ್ಮೆ ಖುಷಿಯ ಕಡಲಲ್ಲಿ ತೇಲುವ ಕಾಲ ಸಮೀಪಿಸುತ್ತಿದೆ.
2017ರ ಜನವರಿ 21 ರಂದು ಮುಂಬೈಯಲ್ಲಿ ಲೀಗ್‌ಗೆ ಚಾಲನೆ ಸಿಗಲಿದ್ದು, ದಬಂಗ್‌ ಡೆಲ್ಲಿ ಮತ್ತು ರಾಂಚಿ ರೇಯ್ಸ್‌ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೆಬ್ರುವರಿ 25 ರಂದು ಸೆಮಿಫೈನಲ್‌ ನಡೆಯಲಿದ್ದು 26 ರಂದು ಫೈನಲ್‌ ನಿಗದಿಯಾಗಿದೆ.

ಬೆಂಗಳೂರು ತಂಡಕ್ಕೆ  ಅವಕಾಶ
ದಕ್ಷಿಣ ಭಾರತದ ಅಭಿಮಾನಿಗಳನ್ನು ಲೀಗ್‌ನತ್ತ ಆಕರ್ಷಿಸಲು ಮುಂದಾಗಿರುವ ಹಾಕಿ ಇಂಡಿಯಾ ಬೆಂಗಳೂರಿನ ತಂಡಕ್ಕೂ ಲೀಗ್‌ನಲ್ಲಿ ಭಾಗವಹಿಸುವ ಅವಕಾಶ ನೀಡಿದೆ.
ಜೆಎಸ್‌ಡಬ್ಲ್ಯು ಸಮೂಹ,  ಬೆಂಗಳೂರು ಫ್ರಾಂಚೈಸ್‌ನ ಒಡೆತನ ಹೊಂದಿದ್ದು 2018ರ ಆವೃತ್ತಿಯಲ್ಲಿ ತಂಡ ಲೀಗ್‌ಗೆ ಅಡಿ ಇಡಲಿದೆ.
ಬೆಂಗಳೂರಿನ ಸೇರ್ಪಡೆಯಿಂದಾಗಿ ಲೀಗ್‌ನಲ್ಲಿ ಭಾಗವಹಿಸುತ್ತಿರುವ ತಂಡಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಕನ್ನಡಿಗರ ಕಮಾಲ್‌...
ಹಾಕಿ ಇಂಡಿಯಾ ಲೀಗ್‌ನಲ್ಲಿ ಕರ್ನಾಟಕದ ಆಟಗಾರರೂ ಛಾಪು ಮೂಡಿಸಿದ್ದಾರೆ. ಅನುಭವಿ ವಿ.ಆರ್‌. ರಘುನಾಥ್‌, ಎಸ್‌.ವಿ. ಸುನಿಲ್, ನಿಕಿನ್‌ ತಿಮ್ಮಯ್ಯ, ನಿತಿನ್‌ ತಿಮ್ಮಯ್ಯ, ಎಸ್‌.ಕೆ. ಉತ್ತಪ್ಪ, ಪ್ರಧಾನ್‌ ಸೋಮಣ್ಣ, ಪಿ.ಆರ್‌. ಐಯ್ಯಪ್ಪ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮುಂಚೂಣಿ ಆಟಗಾರರಾದ ಸುನಿಲ್‌ ಮತ್ತು ನಿತಿನ್‌ ಪಂಜಾಬ್‌ ವಾರಿಯರ್ಸ್‌ ತಂಡ ಪ್ರತಿನಿಧಿಸುತ್ತಿದ್ದು, ನಿಕಿನ್‌ ಅವರು ದಬಂಗ್  ಮುಂಬೈ ತಂಡದಲ್ಲಿದ್ದಾರೆ. ಪ್ರಧಾನ್‌ ಸೋಮಣ್ಣ ಡೆಲ್ಲಿ ವೇವ್‌ರೈಡರ್ಸ್‌ ಪರ ಕಣಕ್ಕಿಳಿಯುತ್ತಿದ್ದಾರೆ. ಕಳಿಂಗ ಲ್ಯಾನ್ಸರ್‌  ಪರ  ಆಡುವ ಉತ್ತಪ್ಪ ಕೂಡಾ ಮೋಡಿ ಮಾಡಿದ್ದಾರೆ.

ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ರಘುನಾಥ್‌ ಮತ್ತು ಐಯ್ಯಪ್ಪ ಅವರು ಉತ್ತರ ಪ್ರದೇಶ ವಿಜರ್ಡ್ಸ್‌ ತಂಡದಲ್ಲಿ ಮಿಂಚು ಹರಿಸುತ್ತಿದ್ದಾರೆ. ಹೋದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರಘುನಾಥ್‌ ಲೀಗ್‌ನಲ್ಲಿ ಒಟ್ಟು 27 ಗೋಲು ಗಳಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.  ಸುನಿಲ್‌  ಒಟ್ಟಾರೆ 9 ಗೋಲು ದಾಖಲಿಸಿ ಸೈ ಎನಿಸಿಕೊಂಡಿದ್ದಾರೆ.

ಪಾಕ್‌ ಆಟಗಾರರಿಗೆ ಸಿಗದ ಮನ್ನಣೆ
ನೆರೆಯ ಪಾಕಿಸ್ತಾನದ ಆಟಗಾರರು  ಚೊಚ್ಚಲ ಆವೃತ್ತಿಯಲ್ಲಿ  ಭಾಗವಹಿಸಿ ಮಿಂಚು ಹರಿಸಿದ್ದರು. ಆದರೆ ನಂತರದ ಆವೃತ್ತಿಗಳಲ್ಲಿ  ಪಾಲ್ಗೊಳ್ಳುವ ಅವಕಾಶವನ್ನು  ಅವರು ಕಳೆದುಕೊಂಡಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ 4–3 ಗೋಲುಗಳಿಂದ ಆತಿಥೇಯ ಭಾರತವನ್ನು ಮಣಿಸಿತ್ತು.

ಪಂದ್ಯ ಮುಗಿದ ಬಳಿಕ ಪಾಕ್‌ ತಂಡದ ಮೊಹಮ್ಮದ್‌ ತೌಸಿಕ್‌,ಅಲಿ ಅಮ್ಜದ್‌ ಮತ್ತು ಶಫಾಕತ್‌ ರಸೂಲ್‌ ಅವರು ಆತಿಥೇಯ ಆಟಗಾರರ ಜೊತೆ ಅಸಭ್ಯವಾಗಿ ವರ್ತಿಸಿದ್ದರು.ಈ ಘಟನೆಯ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್‌ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಹಾಕಿ ಇಂಡಿಯಾದ ಆಗಿನ ಅಧ್ಯಕ್ಷ ನರಿಂದರ್‌ ಬಾತ್ರಾ ಆಗ್ರಹಿಸಿದ್ದರು.ಆದರೆ ಪಾಕ್‌ ಮಾತ್ರ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಹಾಕಿ ಇಂಡಿಯಾ ಪಾಕ್‌ ಆಟಗಾರರನ್ನು ಲೀಗ್‌ನಿಂದ ಹೊರಗಿಡುವ ಕಠಿಣ ತೀರ್ಮಾನ ಕೈಗೊಂಡಿತ್ತು.

ದೋನಿ ಹಾಕಿ ಪ್ರೀತಿ
ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಕ್ರಿಕೆಟ್‌ನಂತೆ ಹಾಕಿ ಬಗ್ಗೆಯೂ ಅಪಾರ ಒಲವು ಹೊಂದಿದ್ದಾರೆ. ದೋನಿ  ಅವರು  ತವರಿನ ತಂಡ ರಾಂಚಿ ರೇಯ್ಸ್‌ನ ಒಡೆತನ ಹೊಂದಿದ್ದಾರೆ.  ಈ ತಂಡ 2015ರ ಲೀಗ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

***
ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನದ ಆಟಗಾರರು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಈ ಘಟನೆಯ ಕುರಿತು ಅವರು ಬಹಿರಂಗ ಕ್ಷಮೆ ಯಾಚಿಸಲೇಬೇಕು. ಅವರು ಕ್ಷಮೆ ಕೇಳುವವರೆಗೂ ಆ ದೇಶದ ಆಟಗಾರರಿಗೆ ಲೀಗ್‌ನಲ್ಲಿ ಆಡಲು ಅವಕಾಶ ನೀಡಬಾರದು
-ಸರ್ದಾರ್‌ ಸಿಂಗ್‌, ಭಾರತ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT