ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆ ಇಲ್ಲದೆ ‘ಕಾನು’ ಕಣ್ಮರೆ

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಮಲೆನಾಡ ಅಂಚಿನ ಪುಟ್ಟ ಹಳ್ಳಿಗಳು. ಸುತ್ತಲೂ ಭತ್ತದ ಗದ್ದೆ, ಅಡಿಕೆ ತೋಟಗಳು. ಒಂದಿಷ್ಟು ಬೋಳುಗುಡ್ಡ ಒಳಗೊಂಡ ಬಯಲು. ಅವುಗಳ ನಡುವೆ ಸೊಂಪಾಗಿ ಬೆಳೆದ ಹೆಮ್ಮರಗಳಿಂದ ಕೂಡಿದ ನಿತ್ಯ ಹರಿದ್ವರ್ಣದ ದ್ವೀಪದಂತೆ ಭಾಸವಾಗುವ ಅರಣ್ಯ.
 
ಅಲ್ಲಿ ಹಲಸು, ಭರಣಿಗೆ, ಶ್ರೀಗಂಧ, ಶತಾವರಿ, ಕುಂಕುಮ ಮರ, ಬೈನೆ, ಬೀಟೆ, ಮಾವು, ಹೆಬ್ಬಲಸು, ನಂದಿ, ನೆಲ್ಲಿ, ಕಿಲಾರ್‌ ಬೋಗಿ, ಮತ್ತಿ, ವಾಯು ವಿಳಂಗ, ದಾಲ್ಚಿನ್ನಿ, ತಾರಿ, ಗುಳಮಾವು, ನೇರಲೆ ಮತ್ತಿತರ ಬೃಹತ್ ಮರಗಳು, ಹಳ್ಳಿಗರ ಜೀವನೋಪಾಯಕ್ಕೆ ಬೇಕಾಗುವ ಕಿರು ಅರಣ್ಯ ಉತ್ಪನ್ನಗಳಾದ ಬಿದಿರು, ಕಾಳು ಮೆಣಸು, ಉಪ್ಪಾಗೆ, ಅರಿಶಿಣ ಅಂಡಿ, ರಾಮಪತ್ರೆ, ಧೂಪ ಮಾವು, ಸೊಪ್ಪಿನ ಗಿಡಗಳು, ಜೇನು ಎಲ್ಲವೂ ಇವೆ. ಔಷಧೀಯ ಸಸ್ಯಗಳೂ ಹೇರಳವಾಗಿವೆ.
 
ಆ ಕಾಡಿನ ಸಂಪೂರ್ಣ ರಕ್ಷಣೆಗೆ ಹಳ್ಳಿಯ ಜನ ಟೊಂಕಕಟ್ಟಿ ನಿಂತಿದ್ದಾರೆ. ಅದಕ್ಕಾಗಿ ಒಂದು ಸಮಿತಿ ರಚಿಸಿಕೊಂಡಿದ್ದಾರೆ. ಆ ಸಮಿತಿಯ ಅನುಮತಿ ಇಲ್ಲದೇ ಯಾರೂ ಒಂದು ಮರವನ್ನೂ ಕಡಿಯುವಂತಿಲ್ಲ. ಉತ್ಪನ್ನಗಳನ್ನು ಬೇಕಾಬಿಟ್ಟಿ ಬಳಸಿಕೊಳ್ಳುವಂತಿಲ್ಲ. ಹೊರಗಿನವರು ಮರ ಕಡಿಯುವುದು, ಅತಿಕ್ರಮಣ ಮಾಡುವುದು ಸಂಪೂರ್ಣ ನಿಷಿದ್ಧ. ಅದಕ್ಕಾಗಿ ಹಳ್ಳಿಯ ಜನರು ಸರದಿಯ ಮೇಲೆ ಪಹರೆ ಕಾಯುತ್ತಾರೆ. ರಾತ್ರಿ ಪಹರೆಯೂ ಕಡ್ಡಾಯ. 

(ಆನಂದಪುರ ಸಮೀಪದ ಕಾನು ಪರಿಶೀಲಿಸುತ್ತಿರುವ ಅರಣ್ಯ ಅಧ್ಯಯನಕಾರರು)
 
ಕತ್ತಿ, ಗುರಾಣಿ ಹಿಡಿದು ದೇಶ ಕಾಯುವ ಯೋಧರಂತೆ ಶತಮಾನಗಳಿಂದ ಹೀಗೆ ಆ ಪುಟ್ಟ ಕಾಡು ಸಂರಕ್ಷಿಸುತ್ತಿದ್ದಾರೆ. ಈ ಕಾವಲು ಪದ್ಧತಿ ‘ಕುಯಿಲುಗತ್ತಿ’ ಎಂದೇ ಖ್ಯಾತಿ–ಇಂತಹ ಪುಟ್ಟ ಕಾಡಿಗೆ ಅವರು ‘ಕಾನು ಅರಣ್ಯ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂತಹ ಸಾವಿರಾರು ಕಾನುಗಳಿವೆ. ಈ ಕಾನುಗಳ ಒಟ್ಟು ವಿಸ್ತಾರ ಅಂದಾಜು 1.5 ಲಕ್ಷ ಎಕರೆ.
ಕಾನುಗಳ ವಿಶಿಷ್ಟ ಹೆಸರು: ಕಾನುಗಳಿಗೆ ಮಲೆನಾಡಿನಲ್ಲಿ ವಿಶಿಷ್ಟ ಹೆಸರುಗಳಿವೆ. ರಾಚಮ್ಮ ಕಾನು, ಚೌಡಿ ಕಾನು, ಹುಲಿ ದೇವರ ಕಾನು, ಕರಡಿ ಕಾನು, ಬೀರದೇವರ ಕಾನು. ಹೀಗೆ ವಿಭಿನ್ನ ಹೆಸರುಗಳಿಂದ ಗಮನ ಸೆಳೆಯುವ ಈ ಕಾನುಗಳು ಅಲ್ಲಿನ ಜನರ ಪಾಲಿನ ‘ದೇವರ ಬನಗಳು’. ಕಾನುಗಳು ಜೀವ ರಾಶಿಗಳ ಆಗರ. ನೈಸರ್ಗಿಕ ತಳಿಯ ಕಣಜ. ಈ ಕಾನುಗಳು 10 ಎಕರೆಯಿಂದ 505 ಎಕರೆವರೆಗೆ ವಿಸ್ತಾರವಾಗಿವೆ. ಕೆಲವು ಹಳ್ಳಿ ವ್ಯಾಪ್ತಿಯಲ್ಲಿ 2, 3 ಕಾನುಗಳಿವೆ. ಹೊಸಗುಂದ ಕಾನು 400 ಎಕರೆ ವಿಸ್ತೀರ್ಣ ಹೊಂದಿದೆ. ಈ ಕಾನು ಮಲೆನಾಡಿನ ಅಪ್ಪೆಮಿಡಿಗೆ ಖ್ಯಾತಿ ಪಡೆದಿದೆ. ಜತೆಗೆ, ಇಲ್ಲಿ ಪಶ್ಚಿಮಘಟ್ಟದ ಅತಿ ಎತ್ತರದ ಮರ ‘ಅಜ್ಜನ ಪಟ್ಟಿ’ ಕಾಣಸಿಗುತ್ತದೆ. ಸಾಗರದ ಕುಗ್ವೆ, ಯಲಗಳಲೆ ಕಾನುಗಳು ಹೆಬ್ಬಲಸಿಗೆ ಖ್ಯಾತಿ ಪಡೆದಿವೆ.
 
ಸಸ್ಯ ವಿಜ್ಞಾನಿಗಳ ತಂಡ ಈಚೆಗೆ ಜೋಗದ ಬಳಿಯ ಕತ್ತಲೆ ಕಾನು ಪ್ರದೇಶದಲ್ಲಿ ‘ಕಾನು ಗೇರು’ ಎಂಬ ಹೊಸ ಸಸ್ಯ ಪ್ರಭೇದ ಪತ್ತೆ ಹಚ್ಚಿದೆ.
 
ಎಲ್ಲ ಕಾನುಗಳೂ ಕಂದಾಯ ಭೂಮಿ: ಅಸಲಿಗೆ ಈ ಕಾನು ಅರಣ್ಯಗಳು ಕಂದಾಯ ಭೂಮಿಯೇ. 18 ಶತಮಾನಕ್ಕೂ ಮೊದಲೇ ಅಲ್ಲೆಲ್ಲ ನೆಲೆ ನಿಂತ ಪೂರ್ವಜನರು ಊರುಕಟ್ಟುವ ಜತೆಗೆ ಕಾಡೂ ಹಾಳಾಗದಂತೆ ಮುಂಜಾಗ್ರತೆ ವಹಿಸಿದ್ದರು. ಅಗತ್ಯ ಇರುವಷ್ಟು ಕಾಡು ಕಡಿದು ಊರು ನಿರ್ಮಿಸಿದ ನಂತರ ಉಳಿದ ಅರಣ್ಯ ಪ್ರದೇಶವನ್ನು ಗ್ರಾಮದ ಬಳಕೆಗೆ ಇಟ್ಟುಕೊಂಡು ಸಂರಕ್ಷಿಸಿದರು. ಸ್ವಾತಂತ್ರ್ಯಾ ನಂತರ ಇಂತಹ ಎಲ್ಲ ಗ್ರಾಮಗಳ ಭೂಮಿಯನ್ನು ಸರ್ಕಾರ ಕಂದಾಯ ಭೂಮಿಯಾಗಿ ಪರಿವರ್ತಿಸಿತು. ಗ್ರಾಮದ ಜತೆಗೇ ಇದ್ದ ‘ಕಾನು’ ಕಂದಾಯ ಭೂಮಿಯಾದರೂ ಒಡೆತನ ಹಾಗೂ ಸಂರಕ್ಷಣೆ ಇಡೀ ಗ್ರಾಮಕ್ಕೆ ಸೇರಿತ್ತು.
 
ಬದಲಾದ ಹಳ್ಳಿಗರ ಮನೋಭಾವ: ಹಿಂದಿನಿಂದಲೂ ಈ ಕಾನು ಸಂರಕ್ಷಣೆ ಮಾಡಿಕೊಂಡು ಬಂದಿದ್ದ ಆಯಾ ಗ್ರಾಮಗಳ ಜನರು ಕಾಲಾಂತರದಲ್ಲಿ ಕಾನಿನ ಮೇಲಿನ ಹಿಡಿತ ಸಡಿಲಗೊಳಿಸಿದರು. ಅದರ ಲಾಭ ಪಡೆದ ಹಲವು ಪಟ್ಟಭದ್ರರು ಒತ್ತುವರಿ ಮಾಡಿಕೊಂಡು ತಮ್ಮ ಸ್ವಂತ ನೆಲೆಯಾಗಿಸಿಕೊಂಡಿದ್ದಾರೆ. ಸುಮಾರು 50 ಸಾವಿರ ಎಕರೆ ಹೀಗೆ ಖಾಸಗಿ ಪಾಲಾಗಿದೆ. ಕಾನು ಸಂರಕ್ಷಣೆಗಾಗಿಯೇ ರಚಿಸಿಕೊಂಡು ಬಂದಿದ್ದ ಬಹುತೇಕ ಗ್ರಾಮ ಅರಣ್ಯ ಸಮಿತಿಗಳು ನಿಷ್ಕ್ರಿಯವಾಗಿವೆ. 
 
ದಶಕಗಳ ಹೋರಾಟ: ಉತ್ತರ ಕನ್ನಡ ಜಿಲ್ಲೆ ಶಿರಸಿಯ ಅನಂತ ಹೆಗಡೆ ಆಶೀಸರ ಅವರು ಕಾನುಗಳ ಉಳಿವಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅವರ ಜತೆಗೆ ಕೈಜೋಡಿಸಿದ ಹಲವು ಪರಿಸರ ಸಂಘಟನೆಗಳು ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿವೆ. ಆಶೀಸರ ಅವರು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 150ಕ್ಕೂ ಹೆಚ್ಚು ಹಳ್ಳಿಗಳ ಅಂಚಿನಲ್ಲಿ ಅರಣ್ಯ ಪ್ರದೇಶದ ಸುತ್ತ ಅಗಳ (ಟ್ರಂಚ್‌ ) ತೆಗೆದು ರಕ್ಷಣೆ ಮಾಡಲು ಕ್ರಮ ಕೈಗೊಂಡಿದ್ದರು. ಅವರ ಅವಧಿ ಮುಗಿದ ನಂತರ ಅರಣ್ಯ ಇಲಾಖೆ ಕಾಮಗಾರಿ ಕೈಬಿಟ್ಟಿದೆ.
 
ಪಶ್ಚಿಮಘಟ್ಟ ಕಾರ್ಯಪಡೆ 2012–13ನೇ ಸಾಲಿನಲ್ಲಿ ತೀರ್ಥಹಳ್ಳಿ, ಆಗುಂಬೆ, ಮಂಡಗದ್ದೆ, ರಿಪ್ಪನ್‌ಪೇಟೆ ಭಾಗದಲ್ಲಿ 900 ಕಿ.ಮೀ ಜಾನುವಾರು ನಿರೋಧಕ ಕಂದಕ ನಿರ್ಮಿಸಿ, ದಂಡೆಯ ಮೇಲೆ 19.80 ಲಕ್ಷ ಸಸಿ ನೆಡಲು ಯೋಜನೆ ರೂಪಿಸಿತ್ತು. ಅದಕ್ಕಾಗಿ 8.82 ಕೋಟಿ ಕ್ರಿಯಾಯೋಜನೆ ರೂಪಿಸಿತ್ತು. 2014ರಲ್ಲಿ ಯೋಜನೇತರ ಲೆಕ್ಕದಲ್ಲಿ ₹ 3.27 ಕೋಟಿ ಬಿಡುಗಡೆಯಾಗಿತ್ತು. ಕೆಲವು ಭಾಗಗಳಲ್ಲಿ ಕಾಮಗಾರಿಯಾದರೆ, ಹಲವು ಭಾಗಗಳಲ್ಲಿ ಕಾಮಗಾರಿ ಸ್ಥಿಗಿತವಾಗಿವೆ.
 
ಬನವಾಸಿ ಸುತ್ತಲ 48 ಹಳ್ಳಿಗಳ 1,730 ಎಕರೆ ಸಂರಕ್ಷಣೆ ಮಾಡಲಾಗಿದೆ. ಅಲ್ಲಿ ಈಗ ಹಸಿರು ಚಿಗುರಿದೆ. ಜೀವಜಲ ಮರು ಸೃಷ್ಟಿಯಾಗಿದೆ. ಕಾನು ತೊರೆದಿದ್ದ ಹಕ್ಕಿ ಪಕ್ಷಿಗಳು ಬಂದು ನೆಲೆಸಿವೆ. ಉಳಿದ 18 ಹಳ್ಳಿಗಳ 3 ಸಾವಿರ ಎಕರೆ ಪ್ರದೇಶಕ್ಕೆ ರಕ್ಷಣೆ ಇಲ್ಲದೇ ವಿನಾಶದ ಅಂಚು ತಲುಪಿವೆ.
 
ಉಳಿಸಲೇಬೇಕಾದ ಕಾನುಗಳು
ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆ ಕಾನು ಅರಣ್ಯ ಮತ್ತು ದೇವರ ಕಾನು ಉಳಿವಿಗೆ 30 ವರ್ಷಗಳಿಂದ ವೃಕ್ಷ ಲಕ್ಷ ಆಂದೋಲನ ಜನ ಚಳವಳಿ ರೂಪಿಸಿದೆ. ಬನವಾಸಿ ಕಾನು. ಕದಂಬರ ಬನಗಳು. ಜೀವ ವೈವಿಧ್ಯಕ್ಕೆ ಹೆಸರಾಗಿದ್ದವು. ಈ ಕಾನುಗಳಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೊಸನಗರ ತಾಲ್ಲೂಕು ತೋಟದಕೊಪ್ಪ, ಮತ್ತೂರು, ಬಸವಾಪುರ, ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ, ಹಾಲು ಮಹಿಷಿ, ಕುಳ್ಳುಂಡೆ, ಸೊರಬ ತಾಲ್ಲೂಕಿನ ತಂಡಿಗೆ, ಯಲಸಿ, ಕುಪ್ಪಗಡ್ಡೆ, ಸಾರೆಕೊಪ್ಪ, ಅಂದವಳ್ಳಿ, ಅಬಸಿ, ಕಕ್ಕರಸಿ, ತಲಕಾಲುಕೊಪ್ಪ, ಹೆಗ್ಗೋಡು, ನಿಸರಾಣಿ, ಕೈಸೋಡಿ, ಚರಂತಿ, ಹೊಸಕೊಪ್ಪ, ಬಿ.ದೊಡ್ಡೇರಿ, ಬನದಕೊಪ್ಪ, ಮಾಗಡಿ, ಕೆರೆಕೊಪ್ಪ, ಕುಳವಳ್ಳಿ, ಬಸವಾಸಿ ಭಾಗದ ಬನವಾಸಿ, ಭಾಶಿ, ಗುಡ್ನಾಪುರ, ಸುಗಾವಿ, ಅಂಗಡಿ, ದಾಸನಕೊಪ್ಪ, ಬಿಸಲಕೊಪ್ಪ, ಜಂಕನಾಳ ವ್ಯಾಪ್ತಿಯ ಶೇಡಗಾರ ಕಾನು, ಹಗಲತ್ತಿ ಕಾನು, ಕುಡುಗಲಮನೆ, ಜಂಬೆಕಾನು, ಆನುಗೋಡುಕೊಪ್ಪ, ಬೆಂಗಳೆ, ಬೀಳೂರು, ಗಡಿಗೇರಿ, ಗೋಣಿಕಟ್ಟಾ, ವೆಂಕಟಾಪುರ, ಹೆಬ್ಬಳ್ಳಿ, ಹುಡೇಲಕೊಪ್ಪ, ಕಲ್ಲಿ, ಕಂದ್ರಾಜಿ, ಕಾನುಕೊಪ್ಪ, ಮಳಲಗಾಂವ, ಮಾವಿನಕೊಪ್ಪ, ಉಳ್ಳಾಲ, ಎಕ್ಕಂಬಿ, ವಡ್ಡಿನಕೊಪ್ಪ, ವಧುರವಳ್ಳಿ ಕಾನುಗಳು ಅಳಿವಿನ ಅಂಚಿನಲ್ಲಿವೆ. ಮರಗಳು ಬರಿದಾಗಿದೆ. ಸಮೃದ್ಧ ಕೆರೆಗಳು ಬತ್ತಿಹೋಗಿವೆ.
 
ವಿನಾಶಕ್ಕೆ ಕಾರಣ: ಖಾಸಗಿ ವ್ಯಕ್ತಿಗಳ ಹಿಡಿತ, ನಿರಂತರ ಅತಿಕ್ರಮಣ, ಮಲೆನಾಡಿನ ಜನ ಸಂಖ್ಯೆ ಹೆಚ್ಚಳ, ದಾಖಲೆ ಪತ್ರ ಗೊಂದಲ, ಇನಾಂಭೂಮಿ ಅರಣ್ಯ, ಖಾತೆ ಕಾನು, ಕಾಫಿ ಕಾನು, ಇತ್ಯಾದಿ ಕಾರಣಗಳಿಂದ ಕಾನು ಪ್ರದೇಶ ನಾಶವಾಗುತ್ತಿವೆ.
 
ಕಾನು ಸಂರಕ್ಷಣಾ ಯೋಜನೆಗಳು: 2009ರಿಂದ 2013ರ ಅವಧಿಯಲ್ಲಿ ಕಾನು ಅರಣ್ಯ ಅಭಿವೃದ್ಧಿ ಯೋಜನೆ, ದೇವರ ಕಾಡು ಅಭಿವೃದ್ಧಿ ಯೋಜನೆ, ಪಶ್ಚಿಮಘಟ್ಟ ಕಾರ್ಯಪಡೆ ಯೋಜನೆ ಮೂಲಕ ಕಾನುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 1,730 ಎಕರೆ ಪುನಶ್ಚೇತನಗೊಂಡಿದೆ. ಬಯಲು ಹಸಿರಾಗುತ್ತಿದೆ. ಜಲ ಸಂವರ್ಧನೆ ಆಗಿದೆ. ಸಸ್ಯ ಸಮೂಹ ಬೆಳೆದಿದೆ.
 
**
ಕಾನು ಸಮೀಕ್ಷೆ ನಡೆಸಿದ ವಿಜ್ಞಾನಿಗಳ ತಂಡ 
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾನು ಅರಣ್ಯಗಳಿಗೆ 2011, 2013, 2015ರಲ್ಲಿ ಮೂರು ಬಾರಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಸ್ಥಳ ಸಮೀಕ್ಷೆ ಮಾಡಿದೆ. ಪರಿಸರ ವಿಜ್ಞಾನಿಗಳಾದ ಡಾ.ಎಂ.ಡಿ. ಸುಭಾಶ್ಚಂದ್ರ, ಡಾ.ಕೇಶವ, ಡಾ.ಟಿ.ವಿ.ರಾಮಚಂದ್ರ, ಸಸ್ಯ ಶಾಸ್ತ್ರಜ್ಞರಾದ ಡಾ.ಕೇಶವ ಎಚ್‌.ಕೊರ್ಸೆ, ಅರಣ್ಯ ವಿಜ್ಞಾನಿ ಡಾ.ವಾಸುದೇವ್, ವನ್ಯಜೀವಿ ತಜ್ಞರಾದ ಡಾ.ಶ್ರೀಧರ್ ಭಟ್‌, ಅರಣ್ಯ ಕಾಲೇಜಿನ ಶ್ರೀಕಾಂತ್ ಗುನಗಾ, ಜೀವ ವೈವಿಧ್ಯ ಅಧ್ಯಯನಕಾರ ನರಸಿಂಹ ವಾನಳ್ಳಿ, ರಮೇಶ ಕಾನಗೋಡ, ರಘುನಂದನ ನರೂರು, ಗಣಪತಿ ಕೆ. ಬಿಸ್ಲಕೊಪ್ಪ, ಪರಿಸರ ತಜ್ಞರಾದ ಬಿ.ಎಂ.ಕುಮಾರಸ್ವಾಮಿ, ಗಜೇಂದ್ರ ಗೊರಸು ಕುಡಿಗೆ ಅವರ ತಂಡ ಕಾನು ಸಮೀಕ್ಷೆ ಮಾಡಿ, ಅಲ್ಲಿನ ಸ್ಥಿತಿಗತಿ, ಸಂರಕ್ಷಣೆ ಕುರಿತು ವರದಿ ನೀಡಿವೆ. ಈ ವರದಿಗಳು ಬೆಂಗಳೂರಿನ ಅರಣ್ಯ ಭವನದಲ್ಲಿ ದೂಳು ಹಿಡಿಯುತ್ತಿವೆ.
 
**
 ಕಾನು ಸಂರಕ್ಷಣೆಗೆ ಸಲಹೆಗಳು
* ಕಾನು ಸಂರಕ್ಷಣೆಗೆ ಆಯಾ ಗ್ರಾಮಗಳ ಜನರ ಸಹಭಾಗಿತ್ವ ಅಗತ್ಯ. ಬಲಿಷ್ಠ ಗ್ರಾಮ ಅರಣ್ಯ ಸಮಿತಿ ರಚಿಸಬೇಕು. ರಕ್ಷಣೆಯ ಹೊಣೆ ಜನರ ನಿರ್ವಹಣೆಗೆ ಬಿಡಬೇಕು. 
 
* ಉತ್ತರ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯವರೆಗೆ ಉಪಗ್ರಹ ಆಧಾರಿತ ನಕಾಶೆ ತಯಾರಿಸಬೇಕು. ಸರ್ಕಾರ ಎಲ್ಲ ಕಾನುಗಳನ್ನೂ ಸೂಕ್ಷ್ಮ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ಕಾನು ಸುತ್ತಲೂ ಕಂದಕ ನಿರ್ಮಾಣ, ನಾಮಫಲಕ ಹಾಕುವುದು, ಸಸ್ಯ ವೈವಿಧ್ಯ ದಾಖಲಾತಿ, ಹಾಳಾದ ಕಾನುಗಳಲ್ಲಿ ಸ್ಥಾನಿಯ ಜಾತಿ ಗಿಡಗಳನ್ನು ನೆಡುವುದು.
 
* ಸಂರಕ್ಷಿತ ಕಾನುಗಳಲ್ಲಿ ಜೋಳ, ಹತ್ತಿ, ಶುಂಠಿ ಬೆಳೆ ನಿಷೇಧ ಮಾಡಬೇಕು. ಹೊಸ ಅತಿಕ್ರಮಣ ತಡೆಯಬೇಕು. 
 
* ಕಾನು ಸಂರಕ್ಷಣೆ ಮಾಡಿದ ಸಂಘ, ಸಮಿತಿ, ಗ್ರಾಮಗಳ ಜನರನ್ನು ಸನ್ಮಾನಿಸಬೇಕು. 
 
* ಸಂಪ್ರದಾಯದಂತೆ ಕಾನುಹಬ್ಬ ಏರ್ಪಡಿಸಬೇಕು. 
 
* ಕಾನುಗಳ ಉಪ ಉತ್ಪನ್ನ ಬೇಕಾಬಿಟ್ಟಿ ಸಂಗ್ರಹ ಆಗಲು ಅವಕಾಶ ನೀಡಬಾರದು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT