ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಸೀರೆಗೆ ಮರುಜೀವ

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ
ವಂಗತ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಮದುವೆಯ ಸಂದರ್ಭದಲ್ಲಿ ಉಟ್ಟಿದ್ದ ಜರಿಯಂಚಿನ ಕೆಂಪು ರೇಷ್ಮೆ ಸೀರೆಯನ್ನು ಮೊಮ್ಮಗಳು ಪ್ರಿಯಾಂಕ ಗಾಂಧಿ ತಮ್ಮ ಮದುವೆಯ ಸಂದರ್ಭದಲ್ಲಿ ಉಟ್ಟಿದ್ದು ನೆನಪಿದೆಯೇ?
 
ಬಾಲಿವುಡ್‌ ನಟಿ ಕರೀನಾ ಕಪೂರ್‌ ತನ್ನ ಮದುವೆಯ ಮುಹೂರ್ತಕ್ಕೆ ಭಾವೀ ಅತ್ತೆ ಶರ್ಮಿಳಾ ಠಾಗೂರ್‌ ಅವರ ಹಳೆಯ   ರೇಷ್ಮೆ ಸೀರೆ ಧರಿಸಿ ಮಿಂಚಿದ್ದರು.
 
ಅಜ್ಜಿ, ಅತ್ತೆ, ಅಮ್ಮನಿಂದ ಬಳುವಳಿಯಾಗಿ ಬರುವ ಸೀರೆಯನ್ನು ಮಗಳು, ಮೊಮ್ಮಗಳ ಮದುವೆ ಮುಹೂರ್ತದ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಕೆಲವು ಮನೆತನಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ.
 
ಭಾರತೀಯ ನಾರಿಗೆ ಸೀರೆಯ ಮೇಲಿರುವ ಮೋಹ ಸುಲಭಕ್ಕೆ ಹೋಗುವಂಥದ್ದಲ್ಲ. ಪ್ರತಿ ಸೀರೆ ಉಟ್ಟಾಗಲೂ   ಮೊದಲ ಬಾರಿ ಸೀರೆಯುಟ್ಟಾಗಿನ  ಸಂಭ್ರಮವೇ  ಆಕೆಯಲ್ಲಿರುತ್ತದೆ.
 
ಇನ್ನು ಭಾವನಾತ್ಮಕವಾಗಿ ಯೋಚಿಸಿದರೆ ಮೊದಲು ಅಮ್ಮ ಕೊಡಿಸಿದ ಸೀರೆ, ಮೊದಲ ಸಂಬಳದಲ್ಲಿ ತಾನೇ ಕೊಂಡ ಸೀರೆ, ಪ್ರಿಯಕರ  ಕೊಡಿಸಿದ ಮೊದಲ ಸೀರೆ, ಮದುವೆ ಸೀರೆ, ಸೀಮಂತದ ಸೀರೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೊಸ ಸೀರೆಗಳು ಕಬೋರ್ಡ್‌ ಪ್ರವೇಶಿಸುತ್ತಿದ್ದಂತೆ  ಹಳೆಯ ಸೀರೆಗಳು ಮೂಲೆ ಸೇರುತ್ತವೆ.
 
ಹೀಗೆ ನಾನಾ ಕಾರಣಗಳಿಂದ ಕಪಾಟಿನ ಮೂಲೆಯಲ್ಲಿ  ಸೇರಿಕೊಂಡಿರುವ ಸೀರೆಗಳನ್ನು ಕೊಡವಿ ತೆಗೆದು ನವೀನ ಸ್ಪರ್ಶ  ನೀಡಿ  ಮೆರೆಯುವ ಕಾಲ ಬಂದಿದೆ.
 
ಹೊಸ ಸೀರೆಗೆ ಹಳೇ ಬಾರ್ಡರ್‌
ಹಳೆಯ ರೇಷ್ಮೆ ಸೀರೆಗಳು ತೀರಾ ಬಣ್ಣ ಕಳೆದುಕೊಂಡು, ಕಲೆಗಳಾಗಿದ್ದರೆ ಅದರ ಜರಿಯಂಚು ಮತ್ತು ಸೆರಗನ್ನು  ಕತ್ತರಿಸಿ ನಮಗೆ ಬೇಕಿರುವ, ಅಂಚಿನ ಬಣ್ಣಕ್ಕೆ ಹೊಂದುವ ಐದು ಮೀಟರ್‌ ಬಟ್ಟೆ ಕೊಂಡು ಅದಕ್ಕೆ ಜೋಡಿಸಿದರೆ ಹೊಸ ಸೀರೆ ಉಡಲು ಸಿದ್ಧ.
 
ಈಗಿನ ಟ್ರೆಂಡ್‌ಗೆ ಹೊಂದುವಂತೆ ಸೀರೆಯ ಮೈಮೇಲೆ ಅಲ್ಲಲ್ಲಿ, ಅಂಚಿನ ಸುತ್ತ ಕಸೂತಿ, ಎಂಬ್ರಾಯಿಡರಿಯಿಂದ ವಿನ್ಯಾಸ ಮಾಡಿದರೆ ಹೊಸ ಸೀರೆಯ ಜೊತೆ ಸ್ಪರ್ಧೆಗೆ ನಿಲ್ಲುವುದು ಖಂಡಿತ. ಹಳೆಯ ಸೀರೆಗೆ ಏನೂ ಮಾಡದೇ ಹೊಸ ವಿನ್ಯಾಸದ  ರವಿಕೆ ತೊಟ್ಟರೂ ಸೈ. ಸೀರೆಯ ಬಣ್ಣಕ್ಕೆ ವಿರುದ್ಧ ಬಣ್ಣದ ಡಿಸೈನರ್‌ ರವಿಕೆ ಹಳೆಯ ಸೀರೆಗೂ ಮೆರುಗು ನೀಡುತ್ತದೆಎಂದು ವಸ್ತ್ರ ವಿನ್ಯಾಸಕರು ಹೇಳುತ್ತಾರೆ.  
 
‘ಸೀರೆ ಚೆನ್ನಾಗಿದ್ದು ಅಂಚಿನ ವಿನ್ಯಾಸ ಇಷ್ಟವಾಗದಿದ್ದರೆ ಅದಕ್ಕೂ ಉಪಾಯವಿದೆ. ಈಗ ಮಾರುಕಟ್ಟೆಯಲ್ಲಿ ನೂರಾರು ಬಗೆಯ ಅಂಚುಗಳು ಸಿಗುತ್ತಿವೆ. ಹಳೆಯ ಅಂಚು  ತೆಗೆದು ಹೊಸ ಅಂಚು ಸೇರಿಸಿದರಾಯಿತು’ ಎಂದು ಸಲಹೆ ನೀಡುತ್ತಾರೆ ವಸ್ತ್ರವಿನ್ಯಾಸಕಿ ದಿವ್ಯಾ.
 
**
ಮಿಕ್ಸ್‌ ಅಂಡ್‌ ಮ್ಯಾಚ್‌ ಶೈಲಿ
ರಾಜಕಾರಣಿ ರಾಣಿ ಸತೀಶ್‌ ತಮ್ಮ ಸೀರೆಗಳ ವಿನ್ಯಾಸಕಿಯೂ ಹೌದು. ಮಿಕ್ಸ್‌ ಅಂಡ್‌ ಮ್ಯಾಚ್‌ ಮಾಡುವುದು ಅವರ ಶೈಲಿ. ವಿನ್ಯಾಸದ ಬಗ್ಗೆ ಕಲ್ಪನೆ ಇದ್ದರೆ ಹಳೆಯ ಸೀರೆಗಳಿಗೆ ನಾವೇ ಮರುಜನ್ಮ ನೀಡಬಹುದು ಎನ್ನುತ್ತಾರೆ ಅವರು.
 
‘ಹಳೆಯ ಸೀರೆಯ ರವಿಕೆ ಹಾಳಾಗಿದ್ದರೆ, ಕಾಂಟ್ರಾಸ್ಟ್‌ ಬಣ್ಣದ ಬಟ್ಟೆಯಲ್ಲಿ ರವಿಕೆ ಹೊಲಿದು, ಸೀರೆಯ ಒಳಭಾಗದ  ಬಾರ್ಡರ್‌ ಕತ್ತರಿಸಿ ತೋಳಿಗೆ ಜೋಡಿಸಿದರೆ ಹೊಸ ರವಿಕೆಯ ಜೊತೆಗೆ ಸೀರೆಯ ಚಂದ ಹೆಚ್ಚುತ್ತದೆ’ ಎನ್ನುತ್ತಾರೆ ಅವರು.
 
**
ಹೀಗೂ ಮಾಡಬಹುದು...
* ಹಳೆ ಸೀರೆಯಿಂದ ರವಿಕೆ, ಲಂಗ, ಲೆಹೆಂಗಾ, ಪಲೋಝಾ ಹೊಲಿಯಬಹುದು.
* ಚೂಡೀದಾರ್‌, ಕುರ್ತಾ, ಮಕ್ಕಳ ಫ್ರಾಕು  ಹೊಲಿಯಬಹುದು.
* ಬೇರೆ ಬೇರೆ ಬಟ್ಟೆಯ ಚೂರುಗಳಿಂದ ಪ್ಯಾಚ್‌ ವರ್ಕ್‌ ಇರುವ ಸೋಫಾ ಕವರ್‌, ಪಿಲ್ಲೋ ಕವರ್‌ ಹೊಲಿಯಬಹುದು.
* ಚಂದದ ದುಪಟ್ಟಾ ಆಗಿಯೂ ಬಳಸಬಹುದು. 
* ಪಲೋಝಾ, ಲಂಗಗಳ ಜೊತೆ ತೊಡುವ ಕ್ರಾಪ್‌ಟಾಪ್‌ ಕೂಡಾ ಹೊಲಿಯಬಹುದು.
 
**
‘ನಾನು ಬಟ್ಟೆ ಅಂಗಡಿಗೆ ಹೋದಾಗಲೆಲ್ಲ ಚಂದ ಕಾಣುವ ಬಟ್ಟೆಗಳ ಪೀಸ್‌ಗಳನ್ನು ಕೊಳ್ಳುತ್ತೇನೆ. ನಂತರ ಹಳೆಯ ಸೀರೆಗಳಿಗೆ ಮ್ಯಾಚ್‌ ಮಾಡಿಕೊಳ್ಳುತ್ತೇನೆ’
–ರಾಣಿ ಸತೀಶ್‌,ರಾಜಕಾರಣಿ
 
**
ಅಮ್ಮನ ಸೀರೆಯೇ ಪ್ರಯೋಗಶಾಲೆ
ಹಳೆಯ ಸೀರೆಗೆ ಹೊಸ ರೂಪ ನೀಡುವ ಕಲ್ಪನೆ ಬಂದಿದ್ದೇ ತಡ ಅಮ್ಮನ ಕಬೋರ್ಡ್‌ ತೆರೆದೆ. ಹತ್ತಾರು ವರ್ಷಗಳಿಂದ ಉಡದೇ ಅನಾಥವಾಗಿ ಬಿದ್ದಿರುವ ಮೈಸೂರು ರೇಷ್ಮೆ ಸೀರೆಗಳನ್ನು   ಆಯ್ದುಕೊಂಡೆ. ಸೀರೆಯ ಅಂಚನ್ನು ಎಂಬ್ರಾಯಿಡರಿ, ಹರಳು ಬಳಸಿ ಹೈಲೈಟ್‌ ಆಗುವಂತೆ ವಿನ್ಯಾಸ ಮಾಡಿಕೊಂಡೆ.
–ದಿವ್ಯಾ, ವಸ್ತ್ರವಿನ್ಯಾಸಕಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT