ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಾಹನಗಳಿಗೆ ಡಿಜಿಟಲ್‌ ಟ್ಯಾಗ್‌

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶವು ನಗದು ರಹಿತ ವಹಿವಾಟಿನತ್ತ ಹೊರಳುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ನಗದು ಬಳಕೆ ತಗ್ಗಿಸಲು ಅನುಸರಿಸಬಹುದಾದ ಹತ್ತಾರು ಕ್ರಮಗಳ ಬಗ್ಗೆ ಚಿಂತನೆ ಆರಂಭಿಸಿದೆ. ಅವುಗಳ ಪೈಕಿ, ಟೋಲ್‌ಗಳಲ್ಲಿ ಹೆದ್ದಾರಿ ಶುಲ್ಕವನ್ನು ‘ಡಿಜಿಟಲ್‌’ ರೂಪದಲ್ಲಿ ಪಾವತಿಸುವ ವ್ಯವಸ್ಥೆಯೂ ಒಂದಾಗಿದೆ.

ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿ ಇದೆ. ಆದರೆ, ವಾಹನ ಮಾಲೀಕರು ಡಿಜಿಟಲ್‌ ಕಲೆಕ್ಷನ್‌ ಟ್ಯಾಗ್‌ ಅನ್ನು ಖರೀದಿಸಿ ವಾಹನಕ್ಕೆ ಅಳವಡಿಸಿಕೊಳ್ಳಬೇಕು.  ವಾಹನವು ಕಾರ್ಖಾನೆಯಿಂದ ಹೊರ ಬರುವಾಗಲೇ ಸ್ವಯಂಚಾಲಿತವಾಗಿ ಟೋಲ್‌ ಪಾವತಿಸುವ ಸಾಧನವನ್ನು ಕಡ್ಡಾಯವಾಗಿ ಅಳವಡಿಸಿಕೊಂಡಿರಬೇಕು ಎನ್ನುವುದು ಈಗ ಕೇಂದ್ರ ಸರ್ಕಾರದ ಹೊಸ ಆಶಯವಾಗಿದೆ.

ಹೊಸ ವಾಹನಗಳಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಕಲೆಕ್ಷನ್‌ (ಇಟಿಸಿ) ಆಧಾರಿತ ಡಿಜಿಟಲ್‌ ಐಡೆಂಟಿಟಿ ಟ್ಯಾಗ್‌ ಅಳವಡಿಸುವಂತೆ ವಾಹನ ತಯಾರಕರಿಗೆ ಸೂಚನೆ ನೀಡಿದೆ. ಇದರಿಂದ ನಗದು ರಹಿತ ಪಾವತಿ ಮತ್ತು ಟೋಲ್‌ಗಳಲ್ಲಿ ಹಣ ಪಾವತಿಗಾಗಿ ಕಾಯುವುದು ಕಾಯಂ ಆಗಿ ತಪ್ಪಲಿದೆ.

₹500, ₹1000 ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ಟೋಲ್‌ಗಳಲ್ಲಿ ಶುಲ್ಕ ಪಾವತಿ ಕಷ್ಟವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್‌ ಐಡೆಂಟಿಟಿ ಟ್ಯಾಗ್‌ ಅಳವಡಿಸುವಂತೆ ಸರ್ಕಾರ ಸೂಚಿಸಿದೆ.

ಏನಿದು ಡಿಜಿಟಲ್‌ ಟ್ಯಾಗ್‌?
ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಆಧರಿಸಿದ ವ್ಯವಸ್ಥೆ  ಇದಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ರೀತಿಯಲ್ಲಿ ಸುಂಕದ ಮೊತ್ತ ಜಮಾ ಆಗುತ್ತದೆ. ವಾಹನದಲ್ಲಿ ಒಂದು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ ಚಿಪ್ ಅಳವಡಿಸಲಾಗಿರುತ್ತದೆ. ಅದನ್ನು ಟೋಲ್‌ ಗೇಟ್‌ನಲ್ಲಿ ಗುರುತಿಸಲು ವಾಹನಕ್ಕೆ ಸ್ಟಿಕ್ಕರ್‌ ಅಂಟಿಸಲಾಗುತ್ತದೆ. 

ಚಿಪ್‌ ಪಡೆಯುವುದು ಹೇಗೆ?
ಚಿಪ್ ಅಳವಡಿಸಿದ ಸ್ಟಿಕ್ಕರ್‌ ಪಡೆಯಲು ವಾಹನಗಳ ಮಾಲೀಕರು ಇದಕ್ಕಾಗಿಯೇ ನಿಗದಿಪಡಿಸಿದ ಏಜೆನ್ಸಿ ಬಳಿ ತಮ್ಮ ಹೆಸರು, ವಿಳಾಸ, ವಾಹನದ ಮಾದರಿ ಮತ್ತು ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ನಂತರದಲ್ಲಿ ಪ್ರತಿ ವಾಹನಕ್ಕೂ ನಿರ್ದಿಷ್ಟವಾದ ಸಂಕೇತ ಸಂಖ್ಯೆಗಳನ್ನು ಒಳಗೊಂಡ ಸ್ಟಿಕ್ಕರ್‌ ನೀಡಲಾಗುತ್ತದೆ.

ಈ ಸ್ಟಿಕ್ಕರ್‌ ಅನ್ನು ವಾಹನಕ್ಕೆ ಅಂಟಿಸುವಾಗ ಒಂದು ನಿರ್ದಿಷ್ಟ ಮೊತ್ತವನ್ನು ಮುಂಚಿತವಾಗಿಯೇ (ಪ್ರೀಪೇಯ್ಡ್‌ ರೀತಿ) ಸಂಗ್ರಹಿಸಲಾಗುತ್ತದೆ. ಜತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಆರ್‌ಎಫ್‌ಐಡಿ ಸಂಕೇತ ಸಂಗ್ರಾಹಕ ಯಂತ್ರಗಳನ್ನೂ ಟೋಲ್‌ ಗೇಟ್‌ಗಳಲ್ಲಿ  ಅಳವಡಿಸಲಾಗುತ್ತದೆ.

ಸ್ಟಿಕ್ಕರ್‌ ಇರುವ ವಾಹನಗಳು ಟೋಲ್‌ ಗೆಟ್‌ ಹಾದು ಹೋದಾಗ ಅಲ್ಲಿರುವ ಸಂಕೇತ ಸಂಗ್ರಾಹಕ ಯಂತ್ರ ವಾಹನದಲ್ಲಿನ ಆರ್‌ಎಫ್‌ಐಡಿಯ ನಿರ್ದಿಷ್ಟ ಸಂಖ್ಯೆಯನ್ನು ಗ್ರಹಿಸಿಕೊಳ್ಳುತ್ತದೆ. ಇಂಥ ಸಂಖ್ಯೆಯ ವಾಹನ ಈ ಮಾರ್ಗದಲ್ಲಿ ಹಾದು ಹೋಗಿದೆ ಎಂಬ ಸಂದೇಶವನ್ನು ಅದರ ನಿಯಂತ್ರಣ ಕೇಂದ್ರದಲ್ಲಿರುವ ಸರ್ವರ್‌ಗೆ ತಕ್ಷಣವೇ ರವಾನಿಸುತ್ತದೆ.

ಆಗ ಆ ವಾಹನದಿಂದ ಮೊದಲೇ ಸಂಗ್ರಹಿಸಲಾಗಿದ್ದ (ಪ್ರೀಪೇಯ್ಡ್‌) ಮೊತ್ತದಿಂದ ನಿಗದಿತ ಹೆದ್ದಾರಿ ಸುಂಕದ ಹಣ ಹೆದ್ದಾರಿಯಲ್ಲಿನ ಟೋಲ್‌ ಗೇಟ್‌ ನಿರ್ವಾಹಕರ ಖಾತೆಗೆ ಜಮಾ ಆಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT