ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ಮಾರ್ಗ: ಸತ್ಪಥದ ದಿಕ್ಸೂಚಿ

Last Updated 30 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಆಳ್ವಾಸ್ ನುಡಿಸಿರಿ’ಯ ಸಂದರ್ಭದಲ್ಲಿ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ‘ಮಧ್ಯಮ ಮಾರ್ಗ’ದ ಅಗತ್ಯ ಕುರಿತು ಆಡಿದ ಮಾತು ಒಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಅದು ಮಾಮೂಲಿನಂತೆ ಅವರನ್ನು ಇವರು, ಇವರನ್ನು ಅವರು ಟೀಕೆ ಮಾಡಲು ಬಳಸಿಕೊಳ್ಳುವ ಬದಲು, ಒಂದು ಅರ್ಥಪೂರ್ಣ ದಾರಿಗೆ ಎಡೆಮಾಡಿಕೊಡುವುದಾದರೆ ಒಳ್ಳೆಯದು.

ಮೊನ್ನೆ ಟಿ.ವಿ. ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದಾಗ, ಮಹನೀಯರೊಬ್ಬರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರ ಗೆಲುವನ್ನು ಉದಾಹರಿಸುತ್ತಾ, ಜಗತ್ತಿನೆಲ್ಲೆಡೆ ಈಗ ಬಲಪಂಥೀಯ ನಾಯಕರು ವಿಜೃಂಭಿಸುತ್ತಿದ್ದಾರೆ ಎಂದು ಹೇಳಿದರು. ಬಲಪಂಥೀಯ ವಿಚಾರಧಾರೆ ಸಂಪೂರ್ಣವಾಗಿ ಜನವಿರೋಧಿಯಾಗಿದ್ದರೆ ಅಥವಾ ಬಹುಜನ ವಿರೋಧಿಯಾಗಿದ್ದರೆ ಅದು ಈ ತರಹ ವಿಜೃಂಭಿಸಲು ಹೇಗೆ ಸಾಧ್ಯ? ಜನ ಮೆಚ್ಚಿದ್ದಾರೆ ಎಂದಮಾತ್ರಕ್ಕೆ ಬಲಪಂಥೀಯರ ಚಟುವಟಿಕೆಗಳೆಲ್ಲ ಜನಪರವಾದವುಗಳೇ? ಈ ತರಹ ಪ್ರಶ್ನೆಗಳನ್ನು ಹಾಕಿಕೊಂಡಾಗ ನಮಗೆ ಮೇಲ್ನೋಟಕ್ಕೆ ಕಾಣುವ ಉತ್ತರಗಳು ಎರಡು. ಒಂದು, ಬಲಪಂಥೀಯರು ಜನರಲ್ಲಿ ಬಿತ್ತುತ್ತಿರುವ ವರ್ತಮಾನ ಮತ್ತು ಭವಿಷ್ಯ ಕುರಿತಾದ ಭಯ ಹಾಗೂ ಭಾವೋನ್ಮಾದ.

ಇನ್ನೊಂದು, ಎಡಪಂಥೀಯರು ಜನಮನವನ್ನು ತಲುಪಲು ಎಡವುತ್ತಿರುವ ಬಗೆ. ‘ಹೌದು, ಆಳದಲ್ಲಿ ನೋಡಿದರೆ ಈ ದೇಶ ಹಾಗೂ ಜಗತ್ತಿಗೆ ತಕ್ಷಣಕ್ಕೆ ಬೇಕಾಗಿರುವುದು ಬಲಿಷ್ಠ ನಾಯಕರು. ಉಳಿದ ಆದ್ಯತೆಗಳೆಲ್ಲ ನಂತರದವು. ಇಲ್ಲದಿದ್ದರೆ ನಾಡಿಗೆ ಗಂಡಾಂತರ ಕಾದಿದೆ’ ಎನ್ನುವ ಭಾವನಾತ್ಮಕ ಸಂದೇಶವನ್ನು ಜನರ ಮನಸ್ಸಿಗೆ ತಲುಪಿಸುವಲ್ಲಿ ಬಲಪಂಥೀಯರು ಯಶಸ್ವಿಯಾಗುತ್ತಿದ್ದಾರೆ. ಭಯ ಬಿತ್ತಿ ಜಯ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ.

ವ್ಯವಸ್ಥೆ ಎಂತಹ ಜಡ ಹಾಗೂ ಜನ ಎಂತಹ ಜಂಜಡದಲ್ಲಿ ಇದ್ದಾರೆ ಎಂದರೆ ಕನಸುಗಳನ್ನು ಮಾರುವವರಿಗೆ ಹೆಚ್ಚು ಬೆಲೆ ಕೊಡುತ್ತಿದ್ದಾರೆ. ಆದರೆ ವಾಸ್ತವವಾದಿಗಳಾದ ಎಡಪಂಥೀಯರಿಂದ ಇದು ಸಾಧ್ಯವಿಲ್ಲ. ಅವರ ಆದ್ಯತೆ ಏನಿದ್ದರೂ ಭೂಮಿಯ ಮೇಲಿರುವ ನರಕವನ್ನು ಹೋಗಲಾಡಿಸುವುದೇ ಹೊರತು ಹೊಸ ಸ್ವರ್ಗದ ಸೃಷ್ಟಿಯಲ್ಲ. ಜನ ಭ್ರಮೆಯೆಂಬ ಪೊರೆ ತುಂಬಿರುವ ಕಂಗಳಿನಿಂದ ಹೊಸ ಬೆಳಕಿನ ಹುಟ್ಟಿಗಾಗಿ ಕಾಯುತ್ತಿದ್ದಾರೆ. ಆ ಪೊರೆ ಕಳಚುವ ಶಸ್ತ್ರಚಿಕಿತ್ಸೆ ಮಾಡುವ ಸಾಮರ್ಥ್ಯ ಎಡಪಂಥೀಯರಿಗೆ ಇಲ್ಲದಿರುವುದೇ ಈಗ ಮಧ್ಯಮ ಮಾರ್ಗ ಅಥವಾ ನಡು ಪಂಥದ ಅಗತ್ಯ ಕುರಿತು ಚಿಂತನೆಯೇಳುವಂತೆ ಮಾಡಿರುವುದು. ಹಾಗಾದರೆ ಬಲಪಂಥೀಯರೆಲ್ಲ ಖಳನಾಯಕರು ಹಾಗೂ ಎಡಪಂಥೀಯರೆಲ್ಲ ದುರಂತ ನಾಯಕರು ಎಂದು ಅರ್ಥವೇ?

ತೀರಾ ಸರಳವಾಗಿ ಹೇಳಬೇಕೆಂದರೆ, ಎರಡೂ ಪಂಥಗಳು ಹೇಳುವುದು ಜನರ ಒಳಿತನ್ನೆ. ಬಲಪಂಥೀಯರು ‘ನಾನು, ನಮ್ಮವರು, ನಮ್ಮ ಧರ್ಮ, ನಮ್ಮ ದೇಶ’ ಎಂದು ಸೀಮಿತವಾಗಿ ಜನರ ಒಳಿತನ್ನು ಬಯಸುತ್ತಾರೆ.  ಎಡಪಂಥೀಯರು ‘ಇಡೀ ಜಗತ್ತಿಗೆಲ್ಲ ಒಳಿತಾಗಬೇಕು’ ಎನ್ನುವ ವಿಶಾಲ ಗುರಿಯುಳ್ಳವರು. ಇಡೀ ವಿಶ್ವವನ್ನೇ ತನ್ನದೆಂಬ ವಿಶ್ವಮಾನವ ತತ್ವವನ್ನು ಹೊಂದಿರುವವರಿಗೆ ದೇಶ, ಧರ್ಮ ಎನ್ನುವುದು ಒಂದು ಭಾಗವಾಗುತ್ತದೆಯೇ ಹೊರತು ಪೂರ್ಣವಾಗುವುದಿಲ್ಲ.

ಈ ಸಮಗ್ರ ದೃಷ್ಟಿಯ ಕಾರಣದಿಂದಾಗಿಯೇ ಕೆಲವೊಮ್ಮೆ ಎಡಪಂಥೀಯರು ದೇಶಾಭಿಮಾನ ಇಲ್ಲದವರು ಹಾಗೂ ಕಮ್ಮಿನಿಷ್ಠರು ಎಂದು ಕರೆಸಿಕೊಳ್ಳುತ್ತಾರೆ. ನಮ್ಮವರು ಎನ್ನುವ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಳ್ಳುವುದರಿಂದ ಬಲಪಂಥೀಯರು ಹೆಚ್ಚು ನಿಷ್ಠರಾಗಿ ಗೋಚರಿಸುತ್ತಾರೆ, ಧರ್ಮದ ಕಾರಣದಿಂದಾಗಿ ಬಂಡವಾಳಶಾಹಿಗಳು ಹಾಗೂ ಪುರೋಹಿತಶಾಹಿಗಳು ಅವರಿಗೆ ಹತ್ತಿರದವರಾಗುತ್ತಾರೆ.

ಹಾಗಾದರೆ ಎಡಪಂಥದತ್ತ ಜನರ ಚಿತ್ತ ಯಾಕೆ ವಾಲುತ್ತಿಲ್ಲ? ಯಾಕೆಂದರೆ ಅವರು ಜನರನ್ನು ತಲುಪಲು ಜಾಣ್ಮೆಯ ದಾರಿ ಹಿಡಿದಿಲ್ಲ. ‘ನಮ್ಮ ಸಿದ್ಧಾಂತವೇ ಸರಿ’ ಎನ್ನುವ ಹುಮ್ಮಸ್ಸಿನಲ್ಲಿ ಹಮ್ಮು ಬೆಳೆಸಿಕೊಂಡಿದ್ದಾರೆ. ಅವರ ಮಾತನ್ನು ಕೇಳದ ಜನರೆಡೆಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನೊಂದೆಡೆ, ರಚನಾತ್ಮಕ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಭಾಷಣ, ಘೋಷಣೆಯಂತಹ ಪ್ರಚಾರಗಳೆಡೆಗೆ ಗಮನ ಕೊಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಬಲಪಂಥೀಯರು ತಾವು ಜನರ ಪರವಾಗಿ ಇದ್ದೇವೆ ಎನ್ನುವುದನ್ನು ತೋರ್ಪಡಿಕೆಗಾದರೂ ಪ್ರದರ್ಶಿಸುತ್ತಿದ್ದಾರೆ. ಸಿದ್ಧಾಂತಕ್ಕಿಂತ ಮೊದಲು ಅವರು ತಮ್ಮನ್ನು ಜನ ಒಪ್ಪುವಂತೆ ನೋಡಿಕೊಳ್ಳುತ್ತಿದ್ದಾರೆ.

ಈಗ ಮಧ್ಯಮ ಮಾರ್ಗ ಬೇಕಾಗಿರುವುದು ಬಲಪಂಥೀಯರ ಬೆಂಬಲಕ್ಕಲ್ಲ. ಎಡಪಂಥೀಯ ಧೋರಣೆಗಳಲ್ಲಿ ಇರುವ ಒಳ್ಳೆಯ ಅಂಶಗಳನ್ನು ಸಾಮಾನ್ಯ ಜನ ಸ್ವೀಕರಿಸುವಂತೆ ಮಾಡಲು ಅದರ ಅವಶ್ಯಕತೆ ಇದೆ. ನಡುಪಂಥವೆಂದರೆ ಅದೊಂದು ಸಿದ್ಧಾಂತವೇ ಆಗಬೇಕಾಗಿಲ್ಲ. ಅದೊಂದು ಮಾರ್ಗವೂ ಆಗಿರಬಹುದು.

ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, ಬಲವಾಗಿ ಎಡಪಂಥವನ್ನು ನಂಬಿದ್ದ ರೈತ ನಾಯಕರೊಬ್ಬರು ಹಲವಾರು ಬಾರಿ ಚುನಾವಣೆಗಳಲ್ಲಿ ಸೋಲು ಅನುಭವಿಸಿ ಇನ್ನೇನು ಪ್ರಯತ್ನ ಕೈಬಿಡಬೇಕು ಎನ್ನುವ ಹಂತ ಬಂದಾಗ ಸ್ವಲ್ಪ ಮಾರ್ಗ ಬದಲಾವಣೆ ಮಾಡಿಕೊಂಡರು. ಈ ಬಾರಿ ಚುನಾವಣೆಯಲ್ಲಿ ಜಾತಿಗಳ ನಾಯಕರು ಎನಿಸಿಕೊಂಡವರನ್ನು ಭೇಟಿ ಮಾಡಿದರು. ಕಾರ್ಯಕರ್ತರು, ಮತದಾರರ ಹತ್ತಿರ ಆಣೆ ಪ್ರಮಾಣ ಮಾಡಿಸಿದರು.ಮೇಲುಕೋಟೆ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನೂ ಮಾಡಿಸಿದರು. ಜನಮನ್ನಣೆ ಪಡೆದರು.

ಚುನಾವಣೆಯಲ್ಲಿ ಗೆದ್ದರು. ಇದನ್ನು ಅವಕಾಶವಾದಿತನ ಎನ್ನಬಹುದು.  ಆದರೆ ಅವರು ಅಷ್ಟಕ್ಕೇ ನಂಬಿದ ಸಿದ್ಧಾಂತಗಳಿಂದೇನೂ ದೂರ ಸರಿದಿಲ್ಲವಲ್ಲ.  ಜನಪ್ರತಿನಿಧಿ ಎನಿಸಿಕೊಳ್ಳುವ ಮೊದಲು ಜನರಿಗೆ ಸ್ವೀಕಾರಾರ್ಹರಾಗಬೇಕು. ಈ ಮನಸ್ಥಿತಿ ನಮಗೆ ಕಟ್ಟಾ ಎಡಪಂಥೀಯರಲ್ಲಿ ಕಾಣಸಿಗದು. ಅಲ್ಪಸ್ವಲ್ಪ ಬದಲಾವಣೆಗಳನ್ನೂ ಅವರು ಅವಕಾಶವಾದಿತನ ಎಂದು ಜರೆಯುತ್ತಾರೆ.

ಇನ್ನು ಎಡಪಂಥೀಯರಿಗೆ ಜನರಲ್ಲಿ ಇರುವ ಮೌಢ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಬೇಕಿದೆ. ಆದರೆ ಅದನ್ನು ಜನರಿಗೆ ಮನವರಿಕೆಯಾಗುವ ರೀತಿ  ಹೇಳುವ ವ್ಯವಧಾನವಿಲ್ಲ. ಉದಾಹರಣೆಗೆ ಹೇಳುವುದಾದರೆ, ಈಗ ಜನರಲ್ಲಿ ಅತಿ ಹೆಚ್ಚು ಮೂಢನಂಬಿಕೆಗಳಿರುವುದು ದೈವ ನಂಬಿಕೆಯ ಆಧಾರದಲ್ಲಿ. ದೇವರೇ ಇಲ್ಲ, ಅದಕ್ಕೆ ಅದನ್ನೆಲ್ಲ ನಂಬಬೇಡಿ ಎಂದರೆ ವಿದ್ಯಾವಂತರು ಕೂಡ ಸ್ವೀಕರಿಸುವುದು ಕಷ್ಟ.

ಅದರ ಬದಲು, ದೇವರಿದ್ದಾನೆ ಆದರೆ ಅವನು ಮೌಢ್ಯಾಚರಣೆಗಳನ್ನು ಬಯಸುವುದಿಲ್ಲ, ಅಂಥ ಆಮಿಷಗಳಿಗೆ ಬೆಲೆ ಕೊಡುವುದಾದರೆ ಅವನು ದೇವರು ಎನಿಸಿಕೊಳ್ಳುವುದಿಲ್ಲ ಎಂದರೆ, ಜನ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನವನ್ನಾದರೂ ತೋರಬಹುದು. ಆ ರೀತಿ ಜನರನ್ನು ಚಿಂತನೆಗೆ ಹಚ್ಚಿದರೆ ಅವರಲ್ಲಿ ನಾವು ವೈಚಾರಿಕತೆಯ ಬೀಜವನ್ನು ಬಿತ್ತಬಹುದು. ಇದು ಮಧ್ಯಮ ಮಾರ್ಗವಲ್ಲವೇ?

ಬಲಪಂಥದಲ್ಲಿರುವ ಹುಳುಕು, ಎಡಪಂಥೀಯರಲ್ಲಿರುವ ದೌರ್ಬಲ್ಯಗಳನ್ನು  ಅರ್ಥವಾಗುವ ರೀತಿಯಲ್ಲಿ ಜನರ ಮುಂದಿಟ್ಟು, ಅವರದೇ ಹಾದಿಯಲ್ಲಿ ಒಂದೆರಡು ಹೆಜ್ಜೆ ನಡೆದು ಸರಿಯಾದ ಪಥ ತೋರುವ ಪ್ರಯತ್ನವೇ ಮಧ್ಯಮ ಮಾರ್ಗ. ಇದನ್ನು ಎಡಪಂಥೀಯರು ಬಳಸಿಕೊಳ್ಳದೆ ಮೈಲಿಗೆ ದೃಷ್ಟಿಯಲ್ಲಿ ದೂರ ನೂಕಿದರೆ ಅವರ ಮತ್ತು ಜನರ ನಡುವಿನ ಅಂತರ ಜಾಸ್ತಿ ಆಗುತ್ತದೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT