ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಬೇರು ಗಟ್ಟಿಯಾಗಲು ಕೈಜೋಡಿಸಿ

ಧಾರವಾಡ ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ತೆರೆ
Last Updated 1 ಡಿಸೆಂಬರ್ 2016, 8:47 IST
ಅಕ್ಷರ ಗಾತ್ರ

ಅಳ್ನಾವರ: ಕನ್ನಡ ಭಾಷೆಗೆ ಸುಮಾರು ಐದು ಸಾವಿರ ವರ್ಷಗಳ ಭವ್ಯ ಇತಿಹಾಸ ಇದೆ. ಕನ್ನಡದ ಬೇರುಗಳನ್ನು ಗಟ್ಟಿಗೊಳಿಸಲು ನಾಡಿನ ಜನತೆ ಕೈ ಜೋಡಿಸಬೇಕು ಎಂದು ಹಿರಿಯ ಪತ್ರಕರ್ತ ಡಾ. ರಂಜಾನ್‌ ದರ್ಗಾ ಕರೆ ನೀಡಿದರು.

ಧಾರವಾಡ ತಾಲ್ಲೂಕು ಮಟ್ಟದ 5ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಲು ಈ ಸಮ್ಮೇಳನ ಸಹಕಾರಿಯಾಗಲಿ. ಇತರೆ ಭಾಷಿಕರಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ ನಡೆಸಬೇಕು’ ಎಂದರು.

‘ದೇಶದ ಯಾವ ಭಾಷೆಯಲ್ಲೂ ಮಾನವೀಯ ಮೌಲ್ಯಗಳ ಆಳವಾದ ಚಿಂತನೆಗಳು ನಡೆದಿಲ್ಲ’ ಎಂದು ಪ್ರತಿಪಾದಿಸಿದ ದರ್ಗಾ, ‘ಕನ್ನಡ ಭಾಷೆ ಮಾತ್ರ ಇಂತಹ ಗಂಭೀರ ಆಲೋಚನೆ ಮಾಡಿದೆ. ಸಾಹಿತ್ಯದ ಆರಂಭದ ಕಾಲದಿಂದಲೂ ಕನ್ನಡ ಭಾಷೆ ಪ್ರಭುತ್ವವಿದೆ. ಇದು ಎಲ್ಲ ಕನ್ನಡಿಗರ ಹೆಮ್ಮೆಯ ವಿಷಯ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣವರ ಮಾತನಾಡಿ, ‘ಇಂತಹ ಸಮ್ಮೇಳನದ ಮೂಲಕ ಕನ್ನಡದ ತೇರನ್ನು ಎಳೆಯಬೇಕು. ಕನ್ನಡದ ಸಂಸ್ಕೃತಿಯನ್ನು ಮನೆ ಮನೆಗೂ ಮುಟ್ಟಿಸುವ ಕಾರ್ಯ ಆಗಬೇಕು’ ಎಂದರು.

ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ವೇದವ್ಯಾಸ ಕೌಲಗಿ ‘ನುಡಿ ಬೆಡಗು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿವಿಧ ಗಣ್ಯರಿಗೆ ನೆನೆಪಿನ ಕಾಣಿಕೆ ನೀಡಲಾಯಿತು.
ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಮ್ಮೇಳನಾಧ್ಯಕ್ಷ ಈಶ್ವರ ಕಮ್ಮಾರ, ಘಟಕಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್, ಎಚ್.ಎಸ್. ಬಡಿಗೇರ, ಎಸ್.ಬಿ. ಹೆರೂರ, ಪಿಎಸ್ಐ ಚಂದ್ರಶೇಖರ ಮಠಪತಿ, ಪರಶುರಾಮ ಬೇಕನೇಕರ, ಸತ್ತಾರ ಬಾತಖಂಡೆ, ಎಫ್.ಬಿ. ಕಣವಿ. ಹನಮಂತ ಶಿಂದೆ ಮತ್ತಿತರು ಇದ್ದರು.

ಪ್ರಾಥಮಿಕ ಹಂತದ ಶಿಕ್ಷಣ ಕನ್ನಡದಲ್ಲೇ ಇರಲಿ
‘ಪ್ರಾಥಮಿಕ ಹಂತದ ಶಿಕ್ಷಣ ರಾಜ್ಯದಲ್ಲಿ ಕನ್ನಡದಲ್ಲಿಯೇ ಇರಬೇಕು’ ಎಂದು ಮಕ್ಕಳ ಸಾಹಿತಿಯೂ ಆದ ಧಾರವಾಡ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಈಶ್ವರ ಕಮ್ಮಾರ ಹೇಳಿದರು.

ಸಮ್ಮೇಳನದಲ್ಲಿ ಅವರು ಮಾತನಾಡಿ, ‘ಮಕ್ಕಳ ಸಾಹಿತ್ಯವನ್ನು ಸ್ನಾತಕೋತ್ತರ ತರಗತಿಗಳಲ್ಲಿ ಬೋಧನೆಯ ಒಂದು ವಿಷಯವನ್ನಾಗಿ ಮಾಡಿದರೆ ಅದರ ರಚನಾತ್ಮಕ ಧ್ಯೇಯ ಹಾಗೂ ತತ್ವ, ಸಿದ್ದಾಂತಗಳಿಗೆ ಮಹತ್ವ ಬರಲು ಸಾಧ್ಯ. ಈ ಕುರಿತು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಮನವಿ ಮಾಡಲಾಗಿದೆ’ ಎಂದರು.

ಕನ್ನಡ ನಾಡು, ನುಡಿ, ಜಲ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಪ್ರತಿಪಾದಿಸಿದ ಈಶ್ವರ ಕಮ್ಮಾರ, ಪ್ರತಿಯೊಂದು ಹಳ್ಳಿ, ಪಟ್ಟಣ, ನಗರಗಳ ಶಾಲೆಗಳಲ್ಲಿ ಓರ್ವ ದೈಹಿಕ ಶಿಕ್ಷಕ, ಚಿತ್ರ ಕಲಾ ಶಿಕ್ಷಕ, ಸಂಗೀತ ಶಿಕ್ಷಕ ಇದ್ದರೆ ಕಲಿಕೆಯ ರಂಗು ಬದಲಾಗಲು ಸಾಧ್ಯ ಎಂದು ಹೇಳಿದರು.

ಕಳಸಾ ಬಂಡೂರಿ ಯೋಜನೆಗಾಗಿ ರಾಜ್ಯದ ಆರು ಕೋಟಿ ಜನರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಅಂಗಲಾಚಿದರೂ, ನೆರೆ ರಾಜ್ಯದವರು ಸಹಕಾರ ನೀಡದೆ ಪೀಡಿಸುತ್ತಿರುವುದು ದುರಂತ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ಗಂಗಾ ನದಿಯಿಂದ ಕಾವೇರಿ ನದಿಯವರೆಗಿನ ನದಿ ಜೋಡಣೆ ಪ್ರಸ್ತಾಪವಿದ್ದು, ಕಾರ್ಯರೂಪಕ್ಕೆ ಬರುತ್ತಿಲ್ಲ. ಇದಾದರೆ ರಾಜ್ಯಗಳ ನಡುವಿನ ಅಂತಃಕಲಹ ದೂರಾಗುತ್ತದೆ ಎಂದರು.

ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಬಿ. ಸುಕನ್ಯಾ , ಡಾ. ಲಿಂಗರಾಜ ಅಂಗಡಿ, ಶ್ರೀಕಾಂತ ಗಾಯಕವಾಡ, ಎಸ್.ಬಿ. ಪಾಟೀಲ, ಸುವರ್ಣಾ ಕಡಕೋಳ, ಎಫ್.ಬಿ. ಕಣವಿ, ವಾಸನದ್, ಸರಸ್ವತಿ ಮುಡಬಾಗಿಲ, ಛಗನ ಪಟೇಲ, ಗುರು ತಿಗಡಿ, ಮಧು ಬಡಸ್ಕರ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT