ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ‘ಜಾಗೃತಿ’ಗೆ ಸಿನಿಮಾದ ಹಣತೆ‘

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಮತದಾರರನ್ನು ಜಾಗೃತಗೊಳಿಸುವ ಚಿತ್ರ ನಮ್ಮದು’ ಎಂದು ತಮ್ಮ ನಿರ್ದೇಶನದ ‘ಜಾಗೃತಿ’ ಚಿತ್ರದ ಮಾತುಕತೆಗೆ ಪೀಠಿಕೆ ಹಾಕಿದರು ಅನಂತರಾಯಪ್ಪ. ವೃತ್ತಿಯಲ್ಲಿ ವಕೀಲರಾಗಿರುವ ಅವರು, ದಲಿತ ಮತ್ತು ಜನಪರ ಚಳವಳಿಗಳ ಜತೆಗೂ ನಂಟು ಇಟ್ಟುಕೊಂಡವರು. ಬದುಕಿನ ಅನುಭವಗಳನ್ನು ಆಧರಿಸಿ ಈಗಾಗಲೇ ‘ಜಾಗೃತಿ’ ಎಂಬ ಪುಸ್ತಕ ಹೊರತಂದಿದ್ದಾರೆ. ಇದೀಗ ಆ ಪುಸ್ತಕ ಅವರದೇ ನಿರ್ದೇಶನದಲ್ಲಿ ಸಿನಿಮಾ ರೂಪ ತಳೆದಿದೆ.

ಇದು ಏಕವ್ಯಕ್ತಿಯ ಚಿತ್ರ ಎಂದರೆ ತಪ್ಪಲ್ಲ. ಯಾಕೆಂದರೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಬಂಡವಾಳವನ್ನೂ ಹಾಕಿರುವ ಅನಂತರಾಯಪ್ಪ, ಮುಖ್ಯ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ! ವರ್ಷದ ಹಿಂದೆಯೇ ತಯಾರಾಗಿದ್ದ ಈ ಚಿತ್ರ, ಮೂರು ತಿಂಗಳ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಡಿ. 9ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂಬ ಸ್ಪಷ್ಟನೆ ಚಿತ್ರತಂಡದ್ದು.

‘ನಮ್ಮದು ಯಾವುದೇ ಸ್ಟಾರ್‌ಗಿರಿ ಇಲ್ಲದ ಚಿತ್ರ. ಹಾಗಾಗಿ ಒಮ್ಮೆಲೆ ರಾಜ್ಯದಾದ್ಯಂತ ಬಿಡುಗಡೆ ಮಾಡುವ ಬದಲು, ಮೆಜೆಸ್ಟಿಕ್‌ನ ಒಂದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ, ನಂತರ ರಾಜ್ಯದ ಇತರ ಭಾಗಗಳಲ್ಲೂ ಬಿಡುಗಡೆ ಮಾಡಲಾಗುವುದು’ ಎಂದು ತಮ್ಮ ಚಿತ್ರ ಬಿಡುಗಡೆಯ ಯೋಜನೆಯನ್ನು ನಿರ್ದೇಶಕರು ಹಂಚಿಕೊಂಡರು.

‘ಸಾಮಾಜಿಕ ಚಿತ್ರಗಳ ಸಾಲಿಗೆ ಸೇರುವ ಮತ್ತು ಸಿದ್ಧಮಾದರಿಯ ಸಿನಿಮಾಸೂತ್ರಗಳನ್ನು ಮೀರಿದ ಚಿತ್ರ ನಮ್ಮದು. ಚಿತ್ರ ನೋಡಿ ಹೊರಬಂದವರಲ್ಲಿ ವ್ಯವಸ್ಥೆಯನ್ನು ಬದಲಾಯಿಸುವ ತುಡಿತ ಖಂಡಿತ ಮೂಡುತ್ತದೆ. ಸಂವಿಧಾನದ ಬಗ್ಗೆ ಚಿತ್ರದಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ’ ಎನ್ನುತ್ತಾರೆ ನಿರ್ದೇಶಕರು. ಅಧಿಕಾರದಾಹ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಚಿತ್ರದ ಕಥಾವಸ್ತು.

ಚಿತ್ರದಲ್ಲಿ ಸುಮಾರು 50 ರಂಗಭೂಮಿ ಕಲಾವಿದರು ನಟಿಸಿದ್ದಾರೆ. ‘ಸಮಾಜವನ್ನು ತಿದ್ದುವ ಸಂದೇಶವಿರುವ ಚಿತ್ರವಿದು’ ಎಂದು ಸಿನಿಮಾ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಮಂಡ್ಯ ಜಯರಾಂ, ‘ಸರ್ಕಾರವೇ ಮುಂದೆ ಬಂದು ಇಂತಹ ಚಿತ್ರಗಳನ್ನು ಜನರಿಗೆ ಪ್ರದರ್ಶಿಸಬೇಕು’ ಎಂದು ಅಭಿಪ್ರಾಯಪಟ್ಟರು. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಮರಾವ್ ಹಾಗೂ ಅಶ್ವಿನ್ ಕುಮಾರ್, ನಿರ್ದೇಶಕರ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುರೇಶ್ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ಸಮೀರ್ ಕುಲಕರ್ಣಿ ಸಂಗೀತ ನಿರ್ದೇಶನವಿದೆ. ರಾಜಕಾರಣಿ ಮೋಟಮ್ಮ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಸೀತಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೂರು ಹಾಡುಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT