ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ–ಸಂಬಂಧಗಳ ಯುಗಳ

Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಿಜಜೀವನದಲ್ಲಿ ದೆವ್ವವೆಂದರೆ ಬೆಚ್ಚಿಬೀಳುವ ಎಚ್. ಲೋಹಿತ್, ಕನ್ನಡ ಮತ್ತು ತೆಲುಗಿನಲ್ಲಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಸಿನಿಮಾ ಮಾಡಿದ್ದಾರೆ. ಇಂದು (ಡಿ. 2) ತೆರೆಕಾಣುತ್ತಿರುವ ತಮ್ಮ ಚೊಚ್ಚಿಲ ನಿರ್ದೇಶನದ ‘ಮಮ್ಮಿ’ ಚಿತ್ರದ ಬಗ್ಗೆ ಅವರು ಓದೇಶ ಸಕಲೇಶಪುರ ಅವರೊಂದಿಗೆ ಮಾತನಾಡಿದ್ದಾರೆ.

* ಕಿರಿಯ ವಯಸ್ಸಿನಲ್ಲೇ ಸಿನಿಮಾದತ್ತ ವಾಲಿದ್ದು ಹೇಗೆ?
ಚಿಕ್ಕಂದಿನಿಂದಲೇ ನನಗೆ ಸಿನಿಮಾ ಹುಚ್ಚು ಇತ್ತು. ಶಾಲೆ–ಕಾಲೇಜಿನಲ್ಲಿ ತರಗತಿಗಳಿಗಳನ್ನು ತಪ್ಪಿಸಿ ನೋಡಿರುವ ಸಿನಿಮಾಗಳಿಗೆ ಲೆಕ್ಕವಿಲ್ಲ. ನನಗೀಗ 23 ವರ್ಷ. ಪಿಯುಸಿ ಪರೀಕ್ಷೆ ಮುಗಿಸಿದಾಗ, ‘ನನ್ನ ದಾರಿ ಬೇರೆ’ ಎಂದುಕೊಂಡು ಸಿನಿಮಾದತ್ತ ಗಮನಹರಿಸಿದೆ.

ಮನೆಯವರಿಗೆ ನಾನು ಎಂಜಿನಿಯರ್ ಆಗಬೇಕೆಂಬ ಬಯಕೆ ಇತ್ತು. ಅದಕ್ಕಾಗಿ ಎಂಜಿನಿಯರಿಂಗ್‌ಗೆ ಸೇರಿಸಿದರು. ಆದರೆ, ನಾನಲ್ಲಿ ಸಲ್ಲಲೇ ಇಲ್ಲ. ಕಡೆಗೆ ಪ್ರದೀಪ್ ರಾಜ್ ಅವರ ‘ಕಿರಾತಕ’ ಸೇರಿದಂತೆ ಮೂರು ಚಿತ್ರಗಳಿಗೆ ಕೆಲಸ ಮಾಡಿದೆ. ಚಿತ್ರಕಥೆ ಹಾಗೂ ನಿರ್ದೇಶನದ ಕಲೆಗಳನ್ನು ಕಲಿತುಕೊಂಡೆ. ‘ಜಯಮ್ಮನ ಮಗ’ ಹಾಗೂ ‘ಗೋವಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾದೆ. ಆಗಲೇ ನನಗೆ ‘ಮಮ್ಮಿ’ ಚಿತ್ರದ ಕಥೆ ಹೊಳೆದಿದ್ದು.

* ‘ಮಮ್ಮಿ’ಯ ಕಥಾಹಂದರ ಏನು?
ಐದು ತಿಂಗಳ ಗರ್ಭಿಣಿ ಹಾಗೂ ಆರು ವರ್ಷದ ಮಗುವಿನ ಸುತ್ತ ನಡೆಯುವ ಕಥೆ ಚಿತ್ರದ್ದು. ಹಾರರ್ ಅಂಶದ ಜತೆಗೆ ಸಂಬಂಧಗಳನ್ನು ತೂಗುವ ಶಕ್ತಿ ಕಥೆಗಿದೆ. ಕೆಲವು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದ ನೈಜ ಘಟನೆಯೊಂದನ್ನು ಓದಿದ್ದೆ. ಆ ಘಟನೆಯ ಎಳೆ ಇಟ್ಟುಕೊಂಡು ನಾಯಕಿ ಪ್ರಧಾನವಾದ ಈ ಹಾರರ್ ಚಿತ್ರಕಥೆಯನ್ನು ಬರೆದೆ.

ದೆವ್ವದ ಸಿನಿಮಾಗಳಲ್ಲಿ, ಸತ್ತವರು ದೆವ್ವಗಳಾಗಿ ಕಾಡುವುದು ಸಹಜ. ಆದರೆ, ಈ ಚಿತ್ರದಲ್ಲಿರುವ ದೆವ್ವಕ್ಕೆ ಒಂದು ಲಾಜಿಕ್ ಇದೆ. ಅದು ಯಾರ ಮೈ ಮೇಲೂ ಬರುವುದಿಲ್ಲ.ಬೊಂಬೆಯ ರೂಪದಲ್ಲೂ ಇಲ್ಲ. ಕನ್‌ಪ್ಯೂಸ್ ಮಾಡುವುದಕ್ಕಾಗಿ ಟ್ರೇಲರ್‌ನಲ್ಲಿ ಬೊಂಬೆಯನ್ನು ದೆವ್ವದ ರೀತಿ ತೋರಿಸಿದ್ದೇವೆ ಅಷ್ಟೇ.

ಸುಮಾರು ₹ 40 ಲಕ್ಷ ಖರ್ಚು ಮಾಡಿ ಸಿಜಿಐ (ಕಂಪ್ಯೂಟರ್ ಜನರೇಟೆಡ್ ಇಮೇಜಸ್) ಮೂಲಕ ದೆವ್ವವನ್ನು ಸೃಷ್ಟಿಸಿದ್ದೇವೆ. ನಿಜ ಬದುಕಿನಲ್ಲಿ ತಮಗಾಗದ ಹಾರರ್ ಅನುಭವನ್ನು ಚಿತ್ರದಲ್ಲಿ ನೋಡಲು ಪ್ರೇಕ್ಷಕರು ಬರುತ್ತಾರೆ ಎಂಬುದು ನನ್ನ ಅನಿಸಿಕೆ. ಆರಂಭದಿಂದ ಕಡೆವರೆಗೆ ಪ್ರೇಕ್ಷಕರಿಗೆ ಹಾರರ್ ಅನುಭವ ಸಿಗುವಂತೆ ಕಥೆಯನ್ನು ಹೇಳಿದ್ದೇನೆ. ತೆಲುಗಿನಲ್ಲಿ ‘ಚಿನ್ನಾರಿ’ ಹೆಸರಿನಲ್ಲಿ ಈ ಚಿತ್ರ ತಯಾರಾಗಿದ್ದು, ಎರಡು ವಾರ ತಡವಾಗಿ ಅಲ್ಲಿ ಬಿಡುಗಡೆಯಾಗಲಿದೆ.

* ಮೊದಲ ಸಿನಿಮಾಕ್ಕೆ ಹಾರರ್ ಕಥೆಯನ್ನೇ ಆರಿಸಿಕೊಂಡಿದ್ದು ಏಕೆ?
ಸಿನಿಮಾ ಮಾಡಬೇಕೆಂದುಕೊಂಡಾಗ ಹಲವು ವಿಷಯಗಳು ತಲೆಗೆ ಬಂದರೂ, ಗಟ್ಟಿಯಾಗಿ ನಿಂತದ್ದು ಮಾತ್ರ ಈ ಹಾರರ್ ಕಥೆ. ಅದಕ್ಕೆ ಈಗಿನ ಟ್ರೆಂಡ್ ಕೂಡ ಕಾರಣ. ಕನ್ನಡದಲ್ಲಿ ಇದೀಗ ಎದ್ದಿರುವ ಹೊಸ ಅಲೆಯ ಚಿತ್ರಗಳಲ್ಲಿ ಹಾರರ್ ಸಿನಿಮಾಗಳು ಇವೆ. ಹಾಗಾಗಿ, ನಾನೂ ಕೂಡ ಅದರಲ್ಲೇ ವಿಭಿನ್ನ ಕಥೆಯ ಚಿತ್ರ ಮಾಡಬೇಕು ಎಂದುಕೊಂಡು, ಹಾರರ್ ವಿಷಯವನ್ನು ಆರಿಸಿಕೊಂಡೆ. ದೆವ್ವ ಎಂದರೆ ಚಿಕ್ಕಂದಿನಿಂದಲೂ ನನಗೆ ವಿಪರೀತ ಭಯ. ರಾತ್ರಿ ಒಬ್ಬನೇ ಮನೆಯಿಂದ ಹೊರಬರಲು ಕೂಡ ಭಯಪಡುತ್ತೇನೆ, ಅಷ್ಟೊಂದು ಪುಕ್ಕಲ.

* ಪ್ರಿಯಾಂಕಾ ಅವರನ್ನು ಪಾತ್ರಕ್ಕಾಗಿ ಒಪ್ಪಿಸಿದ ಬಗೆ ಹೇಳಿ?
ಕಥೆ ಬರೆದು ಮುಗಿಸಿದಾಗಲೇ ಈ ಪಾತ್ರಕ್ಕೆ ಪ್ರಿಯಾಂಕಾ ಮೇಡಂ ಅವರೇ ಸೂಕ್ತ ಎಂದು ನಿರ್ಧರಿಸಿದ್ದೆ. ಗರ್ಭಿಣಿ ಈ ಚಿತ್ರದ ಪ್ರಮುಖ ಪಾತ್ರ. ತಾಯ್ತನದ ಅನುಭವ ಇದ್ದವರಿಗೆ ಮಾತ್ರ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಹಾಗಾಗಿ ಅವರನ್ನು ಭೇಟಿ ಮಾಡಿ ಕಥೆ ಹೇಳಿದೆ. ಕಥೆ ಹಾಗೂ ಪಾತ್ರವನ್ನು ಮೆಚ್ಚಿಕೊಂಡ ಅವರು, ನಟಿಸಲು ಒಪ್ಪಿಕೊಂಡರು. ಉಪೇಂದ್ರ ಅವರಿಗೂ ಒಮ್ಮೆ ಕಥೆ ಓದಿ ಹೇಳುವಂತೆ ಸೂಚಿಸಿದರು. ಕಥೆ ಕೇಳಿದ ಅವರು ಕೂಡ, ಯಾವುದೇ ಬದಲಾವಣೆ ಮಾಡದೆ ಸಿನಿಮಾ ಮಾಡು ಎಂದು ಬೆನ್ನು ತಟ್ಟಿದರು.

* ಚಿತ್ರಕ್ಕಾಗಿ ದುಬಾರಿ ವೆಚ್ಚದ ಮನೆಯ ಸೆಟ್ ಹಾಕಿದ್ದೀರಂತೆ?
ದ್ವೀಪ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಕಥೆ ನಡೆಯುತ್ತದೆ. ನೈಜ ಘಟನೆಯ ನೇಟಿವಿಟಿ ಇರಲಿ ಎಂದುಕೊಂಡು ಗೋವಾದಲ್ಲಿ ಚಿತ್ರೀಕರಿಸಲು ನಿರ್ಧರಿಸಿ, ಫ್ರೆಂಚ್ ಶೈಲಿಯ ಮನೆಯನ್ನು ಹುಡುಕಲಾರಂಭಿಸಿದೆವು. ಆದರೆ, ಸಿಗಲಿಲ್ಲ. ಕಡೆಗೆ ₹ 40 ಲಕ್ಷದ ವೆಚ್ಚದಲ್ಲಿ ಫ್ರೆಂಚ್ ಶೈಲಿಯ ಮನೆಯ ಸೆಟ್ ಹಾಕಿ ಶೂಟಿಂಗ್ ನಡೆಸಲು ನಿರ್ಧರಿಸಲಾಯಿತು.‘ಭಜರಂಗಿ’ ಚಿತ್ರದ ಕಲಾ ನಿರ್ದೇಶಕ ರವಿ ಅವರು ಸೆಟ್ ಹಾಕಿದ್ದಾರೆ.
 
* ಹಾಲಿವುಡ್ ಮಾದರಿಯ ಸೌಂಡ್ ಎಫೆಕ್ಟ್ ಚಿತ್ರಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ?
ಟ್ರೇಲರ್ ನೋಡಿದವರು ಚಿತ್ರ ಹಾಲಿವುಡ್ ಮಾದರಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಹಾಲಿವುಡ್‌ನ ನನ್ನ ಮೆಚ್ಚಿನ ಮೂರು ಹಾರರ್ ಚಿತ್ರಗಳ ಪೈಕಿ ಒಂದಕ್ಕೆ ಹೋಲಿಸಿ ಮಾತನಾಡುತ್ತಿದ್ದಾರೆ.

ಇದು ನನ್ನೊಳಗಿನ ಸಂತಸವನ್ನು ಹೆಚ್ಚಿಸಿದೆ. ಹಾರರ್ ಚಿತ್ರಗಳಲ್ಲಿ ಕಥೆಯಷ್ಟೇ ಸೌಂಡ್‌ಗೂ ಮಹತ್ವವಿದೆ. ಹಾಲಿವುಡ್ ಸಿನಿಮಾಗಳಲ್ಲಿ ಕಾಣಬಹುದಾದ ‘ಡಾಲ್ಬಿ ಅಟ್ಮಾಸ್’ ಎನ್ನುವ ತಂತ್ರಜ್ಞಾನ ಬಳಸಿದ್ದೇವೆ. ಇದನ್ನು ಕನ್ನಡದಲ್ಲಿ ಇದುವರೆಗೆ ಯಾರೂ ಬಳಸಿಲ್ಲ. ‘ಚಾರ್ಲಿ’ ಚಿತ್ರದ ಖ್ಯಾತಿಯ ಎಂ.ಆರ್. ರಾಜಕೃಷ್ಣನ್ ಸೌಂಡ್ ಮಿಕ್ಸ್ ಕೆಲಸ ಮಾಡಿದ್ದಾರೆ. ಪ್ರತಿ ದೃಶ್ಯವೂ ಹಾರರ್‌ಮಯ ಎನಿಸಲು ಇದೆಲ್ಲ ಅನಿವಾರ್ಯವಾಗಿತ್ತು.

* ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ?
ಈ ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿರುವ ಖ್ಯಾತ ತಮಿಳು ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ಅವರಿಗೆ ಚಿತ್ರವನ್ನು ತೋರಿಸಲಾಯಿತು. ತಮಿಳಿನಲ್ಲೂ ಈ ಸಿನಿಮಾ ಮಾಡುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ.

ಒಂದು ವೇಳೆ ಅವರು ಚಿತ್ರ ನಿರ್ಮಿಸಲು ಮುಂದಾದರೆ, ತಮಿಳಿನಲ್ಲೂ ನಾನೇ ನಿರ್ದೇಶಿಸಬೇಕಾಗುತ್ತದೆ. ಸದ್ಯ ನನ್ನ ಬಳಿ ಮತ್ತೊಂದು ಕಥೆ ರೆಡಿ ಇದೆ. ಸ್ವಲ್ಪ ಹೆಚ್ಚಿನ ಬಜೆಟ್ ಬಯಸುವ ಈ ಕಥೆಯಲ್ಲಿ ಹಳೆಯ ಬೆಂಗಳೂರು ಮರುಸೃಷ್ಟಿಯಾಗಲಿದೆ. ‘ಮಮ್ಮಿ’ಯಿಂದ ನನ್ನ ಮುಂದಿನ ಸಿನಿಮಾದ ಭವಿಷ್ಯ ನಿರ್ಧಾರವಾಗಲಿದೆ. ಅಂದುಕೊಂಡಂತೆ ಎಲ್ಲವೂ ಆದರೆ, ಅತ್ಯುತ್ತಮ ಕಥೆಯ ಅದ್ದೂರಿ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT