ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ನೆಲೆಯಿದು ‘ಅನರ್ಘ್ಯ’

ತಾರಾ ನಿವಾಸ
Last Updated 1 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾವು ಮೊದಲು ಇದ್ದಿದ್ದು ತಂದೆಯವರಿಗೆ ನೀಡಿದ್ದ ಕ್ವಾಟ್ರಸ್‌ನಲ್ಲಿ. ನಂತರ ನಮ್ಮದೇ ಒಂದು ಮನೆ ಕಟ್ಟಿಸಬೇಕು ಎನ್ನಿಸಿತು. ಮನೆ ಕಟ್ಟಿಸಬೇಕು ಎನ್ನುವುದು ಬಹುಮಂದಿಯಲ್ಲಿ ಇರುವ ಒಂದು ಸಹಜ ಆಸೆ. ಆದರೆ ಆ ಆಸೆ ಪೂರೈಸಿಕೊಳ್ಳುವ ಹಾದಿ ಮಾತ್ರ ಕಷ್ಟವೇ.

ನಮ್ಮ ಮನೆ ಇರುವುದು ಕೆಂಗೇರಿಯಲ್ಲಿ. ಪುಟ್ಟ ಜಾಗದಲ್ಲೇ, ಅಂದರೆ 30X40 ಅಳತೆಯ ನಿವೇಶನದಲ್ಲಿ ಮನೆ ಕಟ್ಟಿಸಿದ್ದು. ಆದರೆ ಮೂಲೆ ಜಾಗವಾದ್ದರಿಂದ ನೋಡಲು ಸ್ವಲ್ಪ ದೊಡ್ಡದು ಎನ್ನಿಸುತ್ತದೆ.

ಮೊದಲು ನನಗೆ ಹಸಿರಿನಿಂದ ಕೂಡಿರುವಂತೆ ಮನೆ ನಿರ್ಮಿಸಬೇಕು ಎಂಬ ಆಸೆಯಿತ್ತು. ಆದರೆ ಈ ಜಾಗದಲ್ಲಿ ಅದು ಸಾಧ್ಯವಿರಲಿಲ್ಲ. ಆದ್ದರಿಂದ ನಮ್ಮೆಲ್ಲರ ಮೂಲ ಅವಶ್ಯಕತೆಗಳನ್ನು ಮನೆ ಪೂರೈಸಬೇಕು ಎಂಬ ಆಲೋಚನೆಯೊಂದಿಗೆ ಸರಳವಾಗೇ ಮನೆ ಕಟ್ಟಿಸಲು ನಿರ್ಧರಿಸಿದೆವು. ಹಾಗೆಂದು ಮನೆಯ ಅಂದ ಚೆಂದದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.

ನಾಲ್ಕು ಗೋಡೆಗಳ ಮೇಲೆ ತಾರಸಿ ಹಾಕಿಬಿಟ್ಟರೆ ಮನೆ ಎನ್ನಿಸಿಕೊಳ್ಳುವುದಿಲ್ಲ. ಆದ್ದರಿಂದ ಇದ್ದುದರಲ್ಲೇ ಒಪ್ಪ ಓರಣವಾಗಿ ಕಟ್ಟಿಸಲು ಯೋಚಿಸಿದೆವು. ಯೋಚನೆ ಮಾಡಿದಷ್ಟೇ ಸರಾಗವಾಗಿ ಕೆಲಸಗಳು ಆಗುವುದಿಲ್ಲವಲ್ಲ. ಕಲಾವಿದರಿಗೆ ಸಾಲ ಸಿಗುವುದು ತುಂಬಾ ಕಷ್ಟ. ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಪರದಾಡಿದ್ದೇ ಬಂತು. ಕೊನೆಗೂ ಎಷ್ಟೋ ಪ್ರಕ್ರಿಯೆಗಳ ನಂತರ ಬ್ಯಾಂಕ್ ಒಂದರಲ್ಲಿ ಸಾಲ ಪಡೆದುಕೊಂಡು ಮನೆ ಕಟ್ಟಲು ಕೈ ಹಾಕಿದ್ದೇ ಆಶ್ಚರ್ಯ ಎನ್ನಿಸಿತ್ತು. ಹಾಗೋ ಹೀಗೋ ಕೆಲಸ ಆರಂಭಿಸಿ 2011ರಲ್ಲಿ ನಮ್ಮ ಮನೆ ತಲೆ ಎತ್ತಿತು.

ಮೊದಲೇ ಚಿಕ್ಕ ಜಾಗವಾದ್ದರಿಂದ ಎಲ್ಲೂ ಜಾಗವನ್ನು ಅನವಶ್ಯಕ ಬಿಟ್ಟಿಲ್ಲ. ನೆಲ ಮಹಡಿಯಲ್ಲಿ ಒಂದು ಹಾಲ್, ಅಡುಗೆ ಕೋಣೆ, ದೇವರ ಮನೆ, ಒಂದು ಕೋಣೆಯನ್ನು ಕಟ್ಟಲಾಗಿದೆ. ಅದು ನನ್ನ ಮಗನ ಕೋಣೆ. ಅವನಿಗೆಂದೇ ಚಿಕ್ಕ ಪುಟ್ಟ ಕಾರ್ಟೂನ್‌ಗಳನ್ನು ಆ ಕೋಣೆಯಲ್ಲಿ ಬಳಸಿಕೊಂಡಿದ್ದೇವೆ. ಜಾಗ ಚಿಕ್ಕದಿರುವುದರಿಂದ ಡ್ಯೂಪ್ಲೆಕ್ಸ್ ವಿಧಾನದಲ್ಲಿ ಮನೆ ಕಟ್ಟಿಸಿದೆವು.

ಮೊದಲ ಮಹಡಿಯಲ್ಲಿ ಮೂರು ಕೋಣೆಗಳನ್ನು ನಿರ್ಮಿಸಲಾಗಿದೆ. ಒಂದು ಮಾಸ್ಟರ್ ಬೆಡ್‌ರೂಂ, ಮತ್ತೊಂದು ನಾನು ಓದುವುದಕ್ಕೆಂದೇ ಮೀಸಲಿಟ್ಟಿರುವ ಕೋಣೆ ಇದೆ. ಇದು ನನ್ನ ನೆಚ್ಚಿನ ಜಾಗವೂ ಹೌದು. ಅಲ್ಲೇ ಹೆಚ್ಚು ಸಮಯ ಕಳೆಯುತ್ತೇನೆ. ಇನ್ನೊಂದು ಕೋಣೆಯಲ್ಲಿ ಹೋಮ್ ಥಿಯೇಟರ್ ಅಳವಡಿಸಲೆಂದು ಬಿಟ್ಟಿದ್ದೇವೆ.

ಆ ಮಹಡಿಯಿಂದ ಇನ್ನೂ ಮೇಲೆ ಹೋದರೆ ಮತ್ತೆರಡು ಕೋಣೆಗಳಿವೆ. ಅದು ಅಪ್ಪ ಅಮ್ಮನಿಗೆ. ಅದರ ಮೇಲಿನದ್ದೇ ಟೆರೇಸ್. ಟೆರೇಸ್‌ನಲ್ಲೂ ಸಣ್ಣ ಕೋಣೆಯಿದ್ದು, ಅದನ್ನು ನನ್ನ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವ ಆಲೋಚನೆಯಿದೆ. ಆ ಕೋಣೆಯನ್ನು ಎಡಿಟಿಂಗ್ ಸೆಟ್‌ಅಪ್ ಮಾಡಿಕೊಳ್ಳಲಿದ್ದೇನೆ.

ಮನೆ ಕಟ್ಟಿಬಿಟ್ಟರೆ ಸಾಲದು, ಅದಕ್ಕೆ ತಕ್ಕಂತೆ ಬಣ್ಣ, ಇನ್ನಿತರ ಆಲಂಕಾರಿಕ ವಸ್ತುಗಳೂ ಮುಖ್ಯವಾಗುತ್ತವಲ್ಲ. ಅದಕ್ಕೆಂದೇ ಮನೆಗೆ ವಿಶೇಷ ಲುಕ್ ಬರಲು ರಾಯಲ್ ಪ್ಲೇ ಬಣ್ಣಗಳನ್ನು ಬಳಸಲಾಗಿದೆ. ನನಗೆ ಲೈಟಿಂಗ್‌ಗಳೆಂದರೆ ಇಷ್ಟ. ಆದ್ದರಿಂದ ಮನೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಅಳವಡಿಸಿದ್ದೇನೆ. ಮನೆಯ ಹೊರಗೆ ರೆಡ್ ಬ್ಲಾಕ್‌ಗಳ ಜೋಡಣೆಯಿದೆ. ಅದರೊಂದಿಗೆ ಪುಟ್ಟ ಭಿತ್ತಿಚಿತ್ರವೂ ಇದೆ.

ನನ್ನ ಪ್ರಕಾರ ಮನೆ ಎಂಬುದು ನಮ್ಮ ಗುರುತು. ‘ಹೊಟ್ಟೆ ಬಟ್ಟೆ ಸೂರಿದ್ದರೆ ಆಯಿತು’ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೀವಲ್ಲ, ಮನೆ ಅಷ್ಟು ಮುಖ್ಯ. ಆದರೆ ಮುಖ್ಯ ಎಂದ ಮಾತ್ರಕ್ಕೆ ಬಹಳ ದುಬಾರಿಯಾಗಿರಬೇಕಂತಲೇ ಇಲ್ಲ. ಎಷ್ಟೇ ದೊಡ್ಡ ಮನೆ ಕಟ್ಟಿದರೂ ಅದು ಅನುಕೂಲವಾಗಿಲ್ಲದಿದ್ದರೆ ಏನು ಪ್ರಯೋಜನ, ಡೈನಿಂಗ್ ಟೇಬಲ್ ಎಷ್ಟೇ ದೊಡ್ಡದಿದ್ದರೂ ಹೊಟ್ಟೆಗೆ ಸೇರುವಷ್ಟೇ ಅನ್ನ ಸೇರುವುದಲ್ಲವೇ? ಹಾಗೇ ಮನೆಯೂ.

ಜೊತೆಗೆ, ನಾವು ಮನೆ ಕಟ್ಟಿಸುವಾಗ ನಮ್ಮ ಅಭಿರುಚಿಗಳಿಗಿಂತ ಹೆಚ್ಚಾಗಿ ಮತ್ತೊಬ್ಬರು ನಮ್ಮ ಮನೆಯನ್ನು ನೋಡಿದರೆ ಹೇಗೆ ಕಾಣಬೇಕು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮನೆ ಕಟ್ಟುತ್ತೇವೆ. ಅದು ಸಹಜ ಹಾಗೂ ವಾಸ್ತವ. ನಮಗೆಂದೇ ನಮ್ಮ ಮನೆಯನ್ನು ಸಂಪೂರ್ಣ ಕಟ್ಟಿಸುವುದೇ ಇಲ್ಲ. ಟೈಲ್ಸ್, ನಲ್ಲಿಯಿಂದಿಡಿದು ಎಲ್ಲಾ ವಿಷಯಗಳಲ್ಲೂ ನೋಡಿದವರಿಗೆ ಇದು ಇಷ್ಟವಾಗುತ್ತದಾ ಎಂಬ ಲೆಕ್ಕಾಚಾರದಲ್ಲೇ ಇರುತ್ತೇವೆ.

ಈ ಒಂದು ಅನುಭವ ಮನೆ ಕಟ್ಟುವಾಗ ನನಗೆ ಹಾಗೂ ನನ್ನ ಹೆಂಡತಿ ಯಶಸ್ವಿನಿಗೂ ಯೋಚನೆಗೆ ಹತ್ತಿದ್ದು. ಮನಸ್ಸನ್ನು ಮೆಚ್ಚಿಸಬೇಕಾ, ನೋಡುವವರನ್ನು ಮೆಚ್ಚಿಸಬೇಕಾ ಎಂಬುದೇ ಗೊತ್ತಾಗುತ್ತಿರಲಿಲ್ಲ. ಆದರೂ ನನ್ನ ಆದ್ಯತೆಯನ್ನೇ ಮುಖ್ಯವಾಗಿಸಿಕೊಂಡೆ.

ನನ್ನ ಪ್ರಕಾರ ಚಿಕ್ಕ ಮನೆಗಳು ಸುಂದರವಾಗಿರುತ್ತವೆ. ಮನೆ ದೊಡ್ಡದಾದಷ್ಟೂ ಒಬ್ಬರನ್ನೊಬ್ಬರು ನೋಡುವುದು ಕಡಿಮೆ, ಮಾತು ಕಡಿಮೆ, ಸಂಬಂಧಗಳ ಬಂಧವೂ ತೆಳು. ಮನೆ ಚಿಕ್ಕದಿದ್ದರೆ ಹಾಗಲ್ಲ. ಮನದ ನಡುವಣ ಗೋಡೆಗಳು ಏಳಲು ಅವಕಾಶಗಳು ಕಡಿಮೆ. ಮನೆ ನಂಬಿಕೆಯ ಮೇಲೇ ನಿಲ್ಲುವುದಲ್ಲವೇ?

ಸುಮಾರು ಮಂದಿ, ನೀನು ಎಷ್ಟು ಚಿಕ್ಕ ವಯಸ್ಸಿಗೇ ಮನೆ ಕಟ್ಟಿಸಿದ್ದೀಯಾ ಎಂದು ಆಶ್ಚರ್ಯ ಪಡುತ್ತಾರೆ. ಆದರೆ ನಾನು ಈ ಕ್ಷೇತ್ರಕ್ಕೆ ಬಂದ ಅವಧಿಯನ್ನು ಪರಿಗಣಿಸಿದರೆ ಮನೆ ಕಟ್ಟಿಸಲು ಆರಂಭಿಸಿದ್ದು ತುಂಬಾ ತಡವೇ ಆಯಿತು ಎಂದು ನನಗೆ ಅನ್ನಿಸುತ್ತಿರುತ್ತದೆ.

ನಮ್ಮದು ಇದು ಮೊದಲ ಮನೆಯಾಗಿದ್ದರಿಂದ ಸ್ವಲ್ಪ ಭಯವೂ ಇತ್ತು. ಆದರೆ ಅಮ್ಮ ಮನೆಯ ಪ್ರತಿ ಹಂತದಲ್ಲೂ ಅವರೇ ನಿಂತು ನೋಡಿಕೊಂಡರು. ನಮ್ಮೆಲ್ಲರಿಗಿಂತ ಹೆಚ್ಚಾಗಿ ಕೆಲಸಗಳನ್ನು ನಿರ್ವಹಿಸಿದವರು ಅವರೇ ಆಗಿದ್ದರು.

ಹಾಗೋ ಹೀಗೋ ಮನೆ ಕಟ್ಟುವಷ್ಟರಲ್ಲಿ ಬಜೆಟ್ ಕೈ ಮೀರಿತ್ತು. ಆದರೂ ನಮ್ಮದೇ ಮನೆಯೊಂದು ರೂಪು ಪಡೆದುಕೊಂಡ ಖುಷಿ ಇದೆ. ನಮ್ಮ ಈ ಚೊಚ್ಚಲ ಮನೆ ನಮಗೆ ತುಂಬಾ ಅಮೂಲ್ಯ. ಅದಕ್ಕೇ ನಮ್ಮ ಮನೆಗೆ ‘ಅನರ್ಘ್ಯ’ ಎಂದು ಹೆಸರಿಟ್ಟೆವು. ಬೆಲೆ ಕಟ್ಟಲಾಗದ ಶ್ರಮ, ಕನಸುಗಳು ನನ್ನ ಮನೆಯಲ್ಲಿ ತುಂಬಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT