ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ

Last Updated 2 ಡಿಸೆಂಬರ್ 2016, 12:25 IST
ಅಕ್ಷರ ಗಾತ್ರ

೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು
ದಿನಾಂಕ : ೨, ೩ ಮತ್ತು ೪ - ಡಿಸೆಂಬರ್ ೨೦೧೬
ಸಮ್ಮೇಳನಾಧ್ಯಕ್ಷರ ಭಾಷಣ
ನಾಡೋಜ ಡಾ. ಬರಗೂರು ರಾಮಚಂದ್ರಪ್ಪ

ಎಲ್ಲರಿಗೂ ನಮಸ್ಕಾರ,
ಈ ಸಮ್ಮೇಳನವನ್ನು ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರೆ, ಕಾರ್ಯಕಾರಿ ಸಮಿತಿ ಮತ್ತು ಸ್ವಾಗತ ಸಮಿತಿಯ ಸಮಸ್ತರೆ, ಇಲ್ಲಿ ನೆರೆದಿರುವ ಮನಸ್ಸಿನ ಮನುಷ್ಯಬಂಧುಗಳೆ-         

ರಾಯಚೂರಿನಲ್ಲಿ ನಡೆಯುತ್ತಿರುವ ಈ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರು, ಪದಾಧಿಕಾರಿಗಳು,  ಜಿಲ್ಲಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸಮಸ್ತರಿಗೆ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಮಾಹಿತಿ ಸಿಕ್ಕ ಕೂಡಲೇ ನನ್ನ ನೆನಪಿಗೆ ಬಂದವರು- ನನಗೆ ಅಕ್ಷರ ಕಲಿಸಿದ ಗುರುಗಳು ಮತ್ತು ಶಾಲೆಗೆ ಸೇರಿಸಿದ  ತಾಯಿ, ತಂದೆ ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ಸ್ನೇಹಿತರು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸ್ನೇಹಿತರೇ ನನ್ನ ಸಂಪತ್ತು. ಈ ಎಲ್ಲರಿಗೂ ನನ್ನ ಮೊದಲ ನಮನಗಳು.
ನನ್ನ ಅಧಿಕೃತ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ ‘ವೇದನೆಯಿದೆ. ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು. ಅಂದು

ಆಗಸ್ಟ್ ೩೦-೨೦೧೫ರ ಬೆಳಗ್ಗೆ. ಸಾಂಸ್ಕೃತಿಕ ಲೋಕ ದಿಗ್ಭ್ರಮೆಗೊಂಡು ಮೂಕವಾದ ಮುಂಜಾವು. ಅದಕ್ಕೆ ಕಾರಣ ಎಂ.ಎಂ. ಕಲಬುರ್ಗಿಯವರ ಸಾವು.  ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ನಿಧಾನದ್ರೋಹದ ಕಳಂಕದಿಂದ ಮುಕ್ತವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಭಿನ್ನಾಭಿಪ್ರಾಯಗಳನ್ನು  ಬಲಿಪೀಠವಾಗಿಸಿದ ಆ ದಾರುಣದ ದಿನದ ನೆನಪು ನುಗ್ಗಿ ಬರುತ್ತಿರುವಾಗ ಎಂ.ಎಂ. ಕಲಬುರ್ಗಿಯವರ ಚೇತನಕ್ಕೆ ನನ್ನ ನಮನ ಸಲ್ಲಿಸಿ ಮಾತು ಮುಂದುವರೆಸುತ್ತೇನೆ.
     
ನನ್ನ ಮುಂದೆ ಕುವೆಂಪು ಅವರ ಮಲೆನಾಡು ಇರಲಿಲ್ಲ. ಬೇಂದ್ರೆಯವರ ಸಾಧನಕೇರಿಯಿರಲಿಲ್ಲ. ಶಿವರಾಮಕಾರಂತರ ಕಡಲು ಇರಲಿಲ್ಲ. ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆಯಿರಲಿಲ್ಲ. ಪು.ತಿ.ನ. ಅವರ ಮೇಲುಕೋಟೆಯಿರಲಿಲ್ಲ. ಬದುಕಿನ ಬೇಟೆಯಲ್ಲಿ ಬೆಳೆಯುತ್ತ ಬಂದ ಅನೇಕರಲ್ಲಿ ನಾನೂ ಒಬ್ಬ. ಈ ‘ಬೇಟೆ ಬದುಕಿನಲ್ಲಿ ಶ್ರೀಗಂಧದ ಮರಗಳಿರಲಿಲ್ಲ. ಜಾಲಿಯ ಮರಗಳಿದ್ದವು; ಜೊತೆಗೆ ಹೊಂಗೆ ಹುಣಸೆಮರಗಳಿದ್ದವು. ಕೋಗಿಲೆಯಿರಲಿಲ್ಲ ಕಾಗೆಗಳಿದ್ದವು, ಗುಬ್ಬಚ್ಚಿಗಳಿದ್ದವು. ಮುಗಿಲು ಮುನಿದು ಬಿರುಕುನೆಲದ ಕೆರೆಗಳಿದ್ದವು. ನಳನಳಿಸುತ್ತಲೇ ಕೂಳೆ ಹೊಲಗಳಾದ ಜಮೀನುಗಳಿದ್ದವು. ಹೆಡೆ ಎತ್ತಿದ ಹಾದಿಗಳಿದ್ದವು. ಹತ್ತಿರದಲ್ಲೇ ಊದುವ ಪ್ರೀತಿ ಪುಂಗಿಗಳಿದ್ದವು.  ಚಿತ್ತದಲ್ಲಿ ಬಿತ್ತಿ ಬೆಳೆಯುವ  ಭಾವನೆಗಳಿದ್ದವು. ಬರವಿಲ್ಲದ ಭೂಮಿಭಾವನೆಗಳಿಂದ ಬೆಳೆಯುತ್ತಲೇ ಚಿಂತನೆಯ ಚೌಕಬಾರದಲ್ಲಿ  ಕೊನೆಯ ಮನೆ ಸೇರಿ ಗೆಲ್ಲುವ ಆತ್ಮವಿಶ್ವಾಸವನ್ನು ಪಡೆದ ಬದುಕು ನನ್ನದು. ಇರುವಲ್ಲಿ ಮತ್ತು ಇರುವುದರಲ್ಲಿ ನಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕೆಂದು ನಂಬಿದವನು ನಾನು.  ಸೃಜನಶೀಲತೆಗೆ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ: ಈ ಗೌರವ ನನ್ನಂತಹ ಅಸಂಖ್ಯಾತ ಆತ್ಮವಿಶ್ವಾಸಿಗಳಿಗೆ ಸಲ್ಲುವ  ಗೌರವ ; ಇಲ್ಲಿ ಅಧ್ಯಕ್ಷನಾದವನು ‘ನಾನು ‘ಅಲ್ಲ-‘ನಾವು. ಈ ನಾವುಗಳ ಸಂಕೇತವಾಗಿ ‘ನಾನು  ಇಲ್ಲಿದ್ದೇನೆ; ನಾನು ಅಧ್ಯಕ್ಷನಾಗಿ ಇಲ್ಲಿರುವುದನ್ನು ಕಂಡು, ಕೇಳಿ ಸಂಭ್ರಮಿಸುವ ಸಮಸ್ತರೂ ಅಧ್ಯಕ್ಷರೇ ಎಂದು ಭಾವಿಸುತ್ತೇನೆ.

ಹೈದರಾಬಾದ್ ಕರ್ನಾಟಕವೆಂದು ಕರೆಯಲ್ಪಡುತ್ತಿರುವ ಕರ್ನಾಟಕದ ಈ ವಲಯದ ರಾಯಚೂರಿಗೆ ವಿಶಿಷ್ಟ ಇತಿಹಾಸವಿದೆ. ಕ್ರಿ.ಪೂ. ೩೦೦ರಲ್ಲಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂದು ಉಲ್ಲೇಖವುಳ್ಳ ಮಸ್ಕಿಶಾಸನವು ಅಶೋಕನನ್ನು ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ ಎಂದು ಕರೆದ ಆರಂಭಿಕ ದಾಖಲೆಯೆಂದು ಹೇಳಲಾಗುತ್ತಿದೆ. ಶಾಂತಿಪ್ರಿಯ ಅಶೋಕನ ಶಾಸನವುಳ್ಳ ರಾಯಚೂರು ಸರ್ವದರ್ಮ ಸಮನ್ವಯದ ನೆಲೆಯೂ ಆಗಿದೆ. ಕಲ್ಯಾಣ ಕ್ರಾಂತಿಯ ಸಂದೇಶವನ್ನು ಪ್ರಸಾರಗೊಳಿಸುವ ಕಾರ್ಯದಲ್ಲಿ ರಾಯಚೂರು ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ಕಾಯಕವೇ ಕೈಲಾಸವೆಂಬ ಮಾತನ್ನು ಮೊದಲು ಬಳಸಿದ ಆಯ್ದಕ್ಕಿ ಮಾರಯ್ಯ ಈ ಜಿಲ್ಲೆಯ ವಚನಕಾರ. ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಅಪೂರ್ವ ಸಾಧಕರನ್ನು ಪಡೆದ ರಾಯಚೂರಿನ ಸಾಧಕರ ಪಟ್ಟಿ ದೊಡ್ಡದು ಪ್ರಸಿದ್ಧಿಯೂ ದೊಡ್ಡದು. (ಹೀಗಾಗಿ ನಾನು ಹೆಸರುಗಳನ್ನು ಪಟ್ಟಿಮಾಡಿಲ್ಲ)

ಹೈದರಾಬಾದ್ ಕರ್ನಾಟಕ ವಲಯವು ನಿಜಾಮರ ಆಳ್ವಿಕೆಯಲ್ಲಿದ್ದುದರಿಂದ ಇಲ್ಲಿ ಉರ್ದುವಿನ ಪ್ರಭಾವ ಸ್ವಾಭಾವಿಕವಾಗಿ ಹರಡಿಕೊಂಡಿದೆ. ಜೊತೆಗೆ ಗಡಿಭಾಗದ ಭಾಷೆಗಳ ಪ್ರಭಾವವೂ ಇದೆ. ಇದು ಹೋರಾಟಗಳ ಭೂವಲಯವೂ ಹೌದು. ನಿಜಾಮರ ವಿರುದ್ಧ ನಡೆದ ಕಾರ್ಯಾಚರಣೆಯಿಂದ ೧೯೪೮ರ ಸೆಪ್ಟಂಬರ್‌ನಲ್ಲಿ ಸ್ವತಂತ್ರವಾದ ಈ ಭೂಭಾಗದಲ್ಲಿ ರೈತ ಹೋರಾಟಗಳೂ ಇದ್ದವು. ನಿಜಾಮರ ದಮನದ ಜೊತೆಗೆ ರೈತ ಹೋರಾಟಗಳ ದಮನವೂ ನಡೆದ ವಿಪರ್ಯಾಸಕ್ಕೆ ತೆಲಂಗಾಣವನ್ನು ಒಳಗೊಂಡ ಈ ಭೂಭಾಗ ಸಾಕ್ಷಿಯಾದದ್ದು ಈಗ ಇತಿಹಾಸ. ಇಷ್ಟಾದರೂ ಇದು ಸೌಹಾರ್ದ ಸಂಸ್ಕೃತಿಯ ಬೀಡು. ಸೂಫಿ ಸಂತರು ಮತ್ತು ತತ್ವ ಪದಕಾರರ ಪರಂಪರೆಯುಳ್ಳ ಭೂಮಿ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಸೌಹಾರ್ದ ಸಂಸ್ಕೃತಿಯ ವಿಸ್ತರಣೆಗೆ ಕಾರಣವಾಗಲಿ, ಎಂದು ಹಾರೈಸುತ್ತೇನೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವೆಂದರೆ ನೆರೆದ ಜನಕ್ಕೆ ಮತ್ತು ನಾಡಿಗೆ  ಕೊಡುವ ಸಂದೇಶವೆಂದು ತಿಳಿಯುತ್ತ ಬರಲಾಗಿದೆ. ಜನರು, ಸಾಹಿತಿಗಳ ಚರ್ಚೆ, ಚಿಂತನೆಗಳ ಮೂಲಕ ಬೌದ್ಧಿಕ ಬೆಳಕು ಪಡೆಯಲು ಬರುತ್ತಾರೆಂದೂ ಸಮ್ಮೇಳನದ ಚಿಂತನೆಗಳಿಂದ ಒಂದಿಷ್ಟು ಕಲಿಯುತ್ತಾರೆಂದೂ ಕಲಿಯಬೇಕೆಂದೂ ಆಶಿಸಲಾಗಿದೆ. ಇದು ನಿಜವಾದ ಆಶಯವೇ ಇರುಬಹುದು. ಆದರೆ ನನಗನ್ನಿಸುತ್ತದೆ: ಇಲ್ಲಿ ನೆರೆದಿರುವ ನೀವು ನಮ್ಮಿಂದ ಕಲಿಯುವುದಲ್ಲ. ವೇದಿಕೆಯ ಮೇಲಿರುವ ನಾವು ನಿಮ್ಮಿಂದ  ಕಲಿಯಬೇಕು. ನೀವು  ನಮ್ಮನ್ನು ನೋಡುವುದು ಮುಖ್ಯವಲ್ಲ; ನಾವು ನಿಮ್ಮನ್ನು ನೋಡುವುದು ಮುಖ್ಯ. ನಾವು  ನಿಮ್ಮನ್ನು ನೋಡುತ್ತಲೇ ನೀವಾಗುವುದು, ನೀವು ನಮ್ಮನ್ನು ನೋಡುತ್ತಲೇ  ನಾವಾಗುವುದು, ಹೀಗೆ ಪರಸ್ಪರ ಪ್ರವೇಶ ಪ್ರಕ್ರಿಯೆಯಲ್ಲಿ ತೊಡಗುವುದು ಮುಖ್ಯವೆಂದು ನಾನು ತಿಳಿದಿದ್ದೇನೆ. ಕನ್ನಡದ ಹೆಸರಲ್ಲಿ, ಕರ್ನಾಟಕದ ಹೆಸರಲ್ಲಿ, ಸಾಹಿತ್ಯಾಸಕ್ತಿಯಲ್ಲಿ ಇಲ್ಲಿ ನೆರೆದಿರುವ ಈ ಬಹು ದೊಡ್ಡ ಸಮೂಹವು ವೇದಿಕೆಯಲ್ಲಿರುವವರಿಗೊಂದು ವಿವೇಕದ ಎಚ್ಚರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಮ್ಮಿಂದ ನೀವು ಕಲಿಯುವುದೆಷ್ಟೆಂದು ಲೆಕ್ಕ ಹಾಕುವುದರ ಬದಲು ನಿಮ್ಮಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ತಿಳಿಯಬೇಕಿದೆ. ಒಂದು ಸಮ್ಮೇಳನಕ್ಕೆ ಇಷ್ಟೊಂದು ಅಪಾರ  ಸಂಖ್ಯೆಯಲ್ಲಿ ಸೇರಿದ್ದಾರಲ್ಲ,  ಇವರ ವಿಶ್ವಾಸಾರ್ಹತೆಗೆ ಧಕ್ಕೆ ತರಬಾರದು ಎಂಬ  ಎಚ್ಚರ  ನಮಗಿರಬೇಕು; ಅಪಾರ ನಿರೀಕ್ಷೆಯಿಂದ ನೆರೆದವರಿಗೆ ನಿರಾಶೆಯಂಟು ಮಾಡದಿರಬೇಕೆಂಬ ಹೊಣೆಗಾರಿಕೆ ನಮ್ಮದಾಗಬೇಕು. ಈ ಸಂದರ್ಭದಲ್ಲಿ ರಷ್ಯಾದ ಚಿಂತಕ ಪ್ಲೆಖನೋವ್ ಹೇಳಿದ ಒಂದು ಅಭಿಪ್ರಾಯ ನೆನಪಿಗೆ ಬರುತ್ತಿದೆ: ಕಲಾಕಾರರು ಜನಗಳಿಂದ ಗೌರವ ಮತ್ತು ಮನ್ನಣೆಗಳನ್ನು ಬಯಸುತ್ತಾರೆ. ಜನರು  ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ.

ಹೌದು; ಜನರು ನಮ್ಮಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ಆದ್ದರಿಂದ ಸಾಂಸ್ಕೃತಿಕ ಪ್ರತಿನಿಧಿಗಳೆಂಬ ಹಣೆಪಟ್ಟಿಯ ನಾವು ಆತ್ಮವಂಚನೆ ಮಾಡಿಕೊಳ್ಳಬಾರದು; ಜನರು ನಮ್ಮ ಮೇಲಿಟ್ಟಿರುವ  ವಿಶ್ವಾಸಕ್ಕೆ ವಂಚನೆ ಮಾಡಬಾರದು. ನಾವು ಜನಗಳಿಗೆ ಜವಾಬ್ದಾರರಾಗಬೇಕು. ಇದು ಈ ಸಮ್ಮೇಳನದಿಂದ ನಾವು ಕಲಿಯಬೇಕಾದ ಪ್ರಥಮ ಪಾಠ.

ಏಕೀಕರಣ, ಪ್ರತ್ಯೇಕೀಕರಣ ಮತ್ತು ಪರಕೀಯತೆ
ಕರ್ನಾಟಕದ ಏಕೀಕರಣವಾಗಿ ೬೦ ವರ್ಷಗಳು ತುಂಬಿ ವಜ್ರ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಸಹಜವಾಗಿಯೇ ಏಕೀಕರಣದ ಫಲಿತಗಳನ್ನು  ಕುರಿತ ಪ್ರಶ್ನೆ ಎದುರಾಗುತ್ತದೆ. ಕನ್ನಡ ಮಾತು  ಪ್ರಧಾನವಾಗಿರುವ ಪ್ರದೇಶಗಳೆಲ್ಲ ಒಂದಾಗಬೇಕೆಂಬ ಏಕೀಕರಣದ ಪ್ರಧಾನ ಆಶಯ ಬಹುಮಟ್ಟಿಗೆ ಈಡೇರಿದ್ದರೂ ಇನ್ನೂ ಕೆಲವು ಕನ್ನಡ ಮಾತಿನ ಪ್ರದೇಶಗಳು ಬೇರೆ ರಾಜ್ಯದಲ್ಲಿ ಉಳಿದಿವೆ. ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಗಡಿವಿವಾದ ಬಗೆಹರಿಸಲು ರಚಿತವಾದ ಮಹಾಜನ್  ಆಯೋಗದ ವರದಿಯು ಇನ್ನೂ ಅನುಷ್ಠಾನಗೊಂಡಿಲ್ಲ. ಕೇರಳದ ಕಾಸರಗೋಡು ಕರ್ನಾಟಕವಾಗಲಿಲ್ಲ.  ಆಂಧ್ರದಲ್ಲಿರುವ ಕನ್ನಡ ಪ್ರಧಾನ ಮಡಕಶಿರಾ ಕರ್ನಾಟಕಕ್ಕೆ ಸೇರಲಿಲ್ಲ. ತಮಿಳುನಾಡಿನಲ್ಲಿರುವ  ತಾಳವಾಡಿಫಿರ್ಕಾ, ಕೇರಳದಲ್ಲಿರುವ  ಕಾಸರಗೋಡು, ಹೊಸದುರ್ಗ.  ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಮುಂತಾದ ಕನ್ನಡ ಪ್ರಧಾನ  ಪ್ರದೇಶಗಳು ನಮ್ಮ ನಾಡಿನ ಭಾಗವಾಗಿಲ್ಲ. ಅಷ್ಟೇಕೆ ಕರ್ನಾಟಕ ಸರ್ಕಾರವು ಹೊರ ರಾಜ್ಯದ ಕೆಲವು ಪ್ರದೇಶಗಳಿಗೆ  ನೀಡಿರುವ ಅಧಿಕೃತ ಗಡಿಗ್ರಾಮ ಮನ್ನಣೆಯು ರಾಯಚೂರು ಪಕ್ಕದ ಮೆಹಬೂಬುನಗರ ಜಿಲ್ಲೆಯ ಕೃಷ್ಣಾ, ಗುರ್ಜಾಲೆ, ತಂಗಡಗಿ, ಕುಸಮುರ್ತಿ,  ಹೈನಾಪುರ, ಜೆಗುಂಟಾ, ಶುಕ್ರಲಿಂಗದಹಳ್ಳಿ, ಖಾನಾಪುರ, ಕುನಸಿ, ಹಾಲಂಪಲ್ಲಿ, ಕೊತ್ತಪಲ್ಲಿ ಗುಡೆವೆಲ್ಲೂರ್, ಇಂದುಪುರ-ಎಂಬ  ಹದಿನೂರು ಗ್ರಾಮಗಳಿಗೆ ಲಭ್ಯವಾಗಿಲ್ಲ. ಗೋವಾದಲ್ಲಿರುವ ಕನ್ನಡಿಗರ ಬವಣೆ ಬತ್ತಿಲ್ಲ.

ಕರ್ನಾಟಕದ ಒಳನಾಡಿನವರಿಗೆ ಸಿಗುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳು ಕನ್ನಡಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಹೊರನಾಡಿನ ಕನ್ನಡಿಗರಿಗೆ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ, ಸಿಗಬೇಕು. ಕರ್ನಾಟಕವು ಇನ್ನೂ ಒಳನಾಡು, ಗಡಿನಾಡು ಮತ್ತು ಹೊರನಾಡು ಎಂಬ ವಿಂಗಡನೆಯ ವಿಷಾದವನ್ನು ಒಡಲುರಿಯಾಗಿ ಅನುಭವಿಸುತ್ತಿದೆ. ಇಂಥ ಒಡಲುರಿ ಇರಬಾರದೆಂದೇ  ಅಂದು  ಏಕೀಕರಣದ ಹೋರಾಟ ಹುಟ್ಟಿಕೊಂಡಿತ್ತು. ಧಾರವಾಡದಲ್ಲಿ  ೨೦.೦೭.೧೮೯೦ರಲ್ಲಿ ಸ್ಥಾಪಿತವಾದ  ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ ಪತ್ರಿಕೆಯಲ್ಲಿ ಆಲೂರು ವೆಂಕಟರಾಯರು. ಕರ್ನಾಟಕವು ಒಂದಾಗದಿದ್ದರೆ ಕರ್ನಾಟಕದ ಸ್ಥಿರ ಏಳಿಗೆಯು ಎಂದೆಂದಿಗೂ ಸಾಧ್ಯವಿಲ್ಲ ಎಂದು ಬರೆದರು. ೧೯೧೭ರ ಜನವರಿ ೭ರಂದು ವಿದ್ಯಾವರ್ಧಕ ಸಂಘದ  ವ್ಯವಸ್ಥಾಪಕ ಸಮಿತಿಯು ಒಂದು ಗೊತ್ತುವಳಿಯನ್ನು ಸ್ವೀಕರಿಸಿ ಏಕೀಕರಣದ ಆಶಯವನ್ನು ದಾಖಲಿಸಿತು. ಬ್ರಿಟಿಷ್ ಅಧಿಕಾರಕ್ಕೆ ಒಳಗಾದ. ಎಲ್ಲ ಕನ್ನಡ ಊರು, ತಾಲ್ಲೂಕು ಮತ್ತು ಜಿಲ್ಲೆಗಳನ್ನು  ಒಟ್ಟುಗೂಡಿಸಿ, ಒಂದು ರಾಜಕೀಯ ವಿಭಾಗವನ್ನಾಗಿ ಮಾಡಿ, ಅದನ್ನು ಕರ್ನಾಟಕವೆಂದು ಕರೆಯಬೇಕು ಎಂದು ಈ ಗೊತ್ತುವಳಿಯು ಕರೆ ನೀಡಿತು. ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣದ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿತು.

೧೯೧೬ರಲ್ಲಿ  ಏಕೀಕರಣದ ಉದ್ದೇಶಕ್ಕಾಗಿಯೇ ‘ಕರ್ನಾಟಕ ಏಕೀಕರಣ ಸಭೆ ಎಂಬ  ಸಂಸ್ಥೆ ಸ್ಥಾಪನೆಯಾಯಿತು. ಆನಂತರದ ದಿನಗಳಲ್ಲಿ ಇದಕ್ಕೆ ‘ಕರ್ನಾಟಕ ಏಕೀಕರಣ ಸಂಘ ಎಂದು ಮರುನಾಮಕರಣ ಮಾಡಲಾಯಿತು. ಈ ಸಂಸ್ಥೆಯು ಏಕೀಕರಣದ ಉದ್ದೇಶಕ್ಕಾಗಿಯೇ ೧೯೨೬ರಿಂದ ೧೯೪೭ರೊಳಗೆ ಒಟ್ಟು ೧೨ ಸಮ್ಮೇಳನಗಳನ್ನು ನಡೆಸಿತು. ನಮ್ಮ ದೇಶ ಸ್ವಾತಂತ್ರ್ಯಗಳಿಸಿದ ನಂತರವೂ ಏಕೀಕರಣದ ಹೋರಾಟ ಮತ್ತಷ್ಟು ಪ್ರಬಲಗೊಂಡಿತು. ವಿಶೇಷವೆಂದರೆ ೧೯೫೧ರಲ್ಲಿ ಕಮ್ಯುನಿಸ್ಟ್ ಪಕ್ಷವೂ ಏಕೀಕರಣಕ್ಕೆ ಬೆಂಬಲವಾಗಿ ನಿಂತಿತು. ಕಮ್ಯೂನಿಸ್ಟರು, ಸೋಷಲಿಸ್ಟರು ತಮ್ಮ ಸಮಾನತೆಯ ಆಶಯಗಳ ಮೂಲ ಆಶಯವನ್ನಿಟ್ಟುಕೊಂಡೇ ಏಕೀಕರಣದ ಅಗತ್ಯವನ್ನು ಪ್ರತಿಪಾದಿಸಿದರು. ಈ ನಡುವೆ ೧೯೫೨ರಲ್ಲಿ ಆಂದ್ರದ ಪೊಟ್ಟಿಶ್ರೀರಾಮುಲು ಅವರು ತೆಲುಗು ಮಾತಿನ ಪ್ರದೇಶಗಳ  ಏಕೀಕರಣಕ್ಕಾಗಿ  ಆಮರಣಾಂತ ಉಪವಾಸ ಆರಂಭಿಸಿದರು. ೫೮ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿಶ್ರೀರಾಮುಲು ನಿಧನ ಹೊಂದಿ ಹುತಾತ್ಮರಾದರು. ಕನ್ನಡನಾಡಿನಲ್ಲಿ ಬಳ್ಳಾರಿಯ ರಂಜಾನ್ ಸಾಬ್  ಅವರು ಏಕೀಕರಣ ಹೋರಾಟದಲ್ಲಿ ಜೀವ ತೆತ್ತರು. ಈ ಜೀವ ಕನ್ನಡನಾಡಿನ ಜಾತ್ಯತೀತ ಮೌಲ್ಯದ ಒಂದು ಮಾದರಿಯಾಗಿ ಇಂದಿಗೂ ಸ್ಮರಣೀಯವಾಗಿದೆ.

ಹೀಗೆ ಕನ್ನಡ ಮತ್ತು ತೆಲುಗು ಕೇಂದ್ರಿತ ಏಕೀಕರಣ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರವು  ೧೯೫೩ರಲ್ಲಿ ಫಜಲ್ ಆಲಿ ಅವರ  ನೇತೃತ್ವದಲ್ಲಿ ರಾಜ್ಯ ಪುನರ್‌ವಿಂಗಡನಾ ಆಯೋಗವನ್ನು ರಚಿಸಿತು. ಇದೇ ವರ್ಷ, ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಮತ್ತು ಮರಣದ ಫಲವೆಂಬಂತೆ ತೆಲುಗು ಪ್ರಧಾನ ಪ್ರಾಂತ್ಯವಾಗಿ ‘ಆಂಧ್ರಪ್ರದೇಶ ರಚನೆಯಾಯಿತು. ಮುಂದೆ ಫಜಲ್ ಆಲಿ ಆಯೋಗದ ಶಿಫಾರಿಸಿನಂತೆ  ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ೧.೧೧.೧೯೫೬ ರಂದು ‘ವಿಶಾಲ ಮೈಸೂರು ಅಸ್ತಿತ್ವಕ್ಕೆ ಬಂದಿತು.  ಕನ್ನಡ ಮಾತು ಪ್ರಧಾನವಾದ ಕೇರಳದ ಕಾಸರಗೋಡು, ಹೊಸದುರ್ಗವನ್ನೂ ಒಳಗೊಂಡಂತೆ  ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿರುವ ಕನ್ನಡಪ್ರಧಾನ  ಪ್ರದೇಶಗಳನ್ನು  ಒಳಗೊಳ್ಳದೆ ‘ವಿಶಾಲ ಮೈಸೂರು ಎಂಬ ಕನ್ನಡದ ಬಹುಪಾಲು ಪ್ರದೇಶದ ಏಕೀಕೃತ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಆದರೆ ‘ಕರ್ನಾಟಕ ಎಂದು ಹೆಸರಿಡಲು ೧೯೭೩ರವರೆಗೆ ಕಾಯಬೇಕಾಯಿತು. ಅದರಲ್ಲೂ ‘ಮೈಸೂರು ಹೆಸರಿನ ಪರವಾಗಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ‘ಕರ್ನಾಟಕ   ಎಂದು ಹೆಸರಿಡಬೇಕಾಯಿತು. ಜನಾಭಿಪ್ರಾಯಕ್ಕೆ  ಮನ್ನಣೆಕೊಟ್ಟ ದೇವರಾಜ ಅರಸು  ತಮ್ಮ ಹಿಂದಿನ ಅಭಿಪ್ರಾಯವನ್ನು ಬದಿಗೊತ್ತಿ ೧.೧೧.೧೯೭೩ ರಂದು ಈ ವಿಶಾಲ ಮೈಸೂರು ಬದಲು ‘ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದು ಸಾಂಕೇತಿಕವಾಗಿ ಜನಾಭಿಪ್ರಾಯದ ವಿಜಯ. ಅರಸು ಅವರ ಪ್ರಜಾಸತಾತ್ಮಕ ನಿಲುವಿನ ಫಲ. ಅಂದು ಅರಸು ಅವರು ಕರ್ನಾಟಕದ ಜನಮಾನಸದ ಅಭಿನಂದನೆಗೆ ಪಾತ್ರರಾದರು. ಹಾಗೆ ನೋಡಿದರೆ ಕರ್ನಾಟಕದೊಳಗಿನ ವಿವಿಧ ಸಾಮಾಜಿಕ ಮತ್ತು ಭೌಗೋಳಿಕ ವಲಯಗಳನ್ನು ಒಳಗೊಳ್ಳುವಂತೆ ಪ್ರತಿನಿಧೀಕರಣದ ಪ್ರಕ್ರಿಯೆಗೆ ಕಾರಣರಾದ ಅರಸು  ‘ಸಾಮಾಜಿಕ ಏಕೀಕರಣದ ರೂವಾರಿ ಎಂದರೂ ತಪ್ಪಾಗಲಾರದು. ಕರ್ನಾಟಕದ ವಿಧಾನ ಮಂಡಲದಲ್ಲಿ ವಿವಿಧ ಪ್ರದೇಶ, ವಿವಿಧ ಸಾಮಾಜಿಕ ಹಿನ್ನಲೆಯ ಸಂಕೇತಗಳು ಸಮಾವೇಶಗೊಳ್ಳುವಂತೆ ಮಾಡಿದ ಅರಸು ಅವರ ‘ಸಾಮಾಜಿಕ ಏಕೀಕರಣದ ರಾಜಕಾರಣ ಅಸಾಧಾರಣ.

ಆದರೆ ಆಮೇಲೆ ಏನಾಯಿತು? ಭಾಷೆ ಮತ್ತು ಭೂಗೋಳವನ್ನು ಬೆಸೆದ ಏಕೀಕರಣವು ಮಾನಸಿಕ ಏಕೀಕರಣಕ್ಕೆ ಕಾರಣವಾಯಿತೆ? ಏಕೀಕರಣದ ವಿಸ್ತರಣೆಗಾಗಿ ಭೂಗೋಳ ಪ್ರಜ್ಞೆಯೇ ಪ್ರಧಾನವಾಯಿತೆ? ಸ್ವಲ್ಪಮಟ್ಟಿಗೆ ಹೌದು. ಆದ್ದರಿಂದಲೇ ಕರ್ನಾಟಕದ ವಿಸ್ತಾರವನ್ನು ಕುರಿತು ಮತ್ತೆ ಮತ್ತೆ  ಮಾತನಾಡುವವರು ಭೂಗೋಳ ಪ್ರಜ್ಞೆಯ ಪರಿಧಿಯಲ್ಲೇ ಉಳಿದಿದ್ದಾರೆ. ನಿಜ; ಕಾವೇರಿಯಿಂದ ಗೋದಾವರಿವರೆಗೆ ನಮ್ಮ ಅಂದಿನ ನಾಡು ಇತ್ತು ಎಂದುಕೊಳ್ಳೋಣ. ಅಷ್ಟೇಕೆ ಅಚ್ಚಕನ್ನಡ ರಾಜವಂಶವೆಂಬ ಕೀರ್ತಿಗೆ ಭಾಜನರಾದ ಮತ್ತು ೨೧೫ ವರ್ಷಗಳವರೆಗೆ  ಆಳಿದ  ಕದಂಬರ ಸಾಮ್ರಾಜ್ಯವು ಮೃಗೇಶ ವರ್ಮನ ಕಾಲದಲ್ಲಿ ಉತ್ತರದ ನರ್ಮದಾ ನದಿಯವರೆಗೆ ವಿಸ್ತಾರಗೊಂಡಿತ್ತು.

ಬಾದಾಮಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಅಜಂತ, ಎಲ್ಲೋರ, ನಾಸಿಕ್, ಓರಂಗಲ್ ಮುಂತಾದ ಪ್ರದೇಶಗಳೂ ಇದ್ದವು. ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿಯೂ ಅಜಂತ, ಎಲ್ಲೋರ, ಇದ್ದವು. ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಓರಂಗಲ್ಲು, ಪಂಡರಪುರ, ದೇವಗಿರಿ, ನವಸಾರಿಕ ಮುಂತಾದ ಪ್ರದೇಶಗಳಿದ್ದವು. ಹೊಯ್ಸಳರ ಸಾಮ್ರಾಜ್ಯದಲ್ಲಿ ಕಂಚಿ, ಕಣ್ಣಾನೂರುಗಳಿದ್ದವು. ವಿಜಯನಗರ ಸಾಮ್ರಾಜ್ಯದಲ್ಲಿ ತೇಡಪತ್ರಿ, ಲೇಪಾಕ್ಷಿ, ತಿರುಪತಿ, ವೆಲ್ಲೂರು, ಮಧುರೆ, ಪಾಂಡಿಚೆರಿ ಮುಂತಾದ ಪ್ರದೇಶಗಳು ಇದ್ದವು. ಹೀಗೆ ವಿವಿಧ ಸಾಮ್ರಾಜ್ಯಗಳಲ್ಲಿದ್ದ ಪ್ರದೇಶಗಳಲ್ಲಿ ಕನ್ನಡವೂ ಇತ್ತು.  ಆದರೆ ಎಲ್ಲ ಪ್ರದೇಶಗಳಲ್ಲೂ  ಕನ್ನಡವಿರಲಿಲ್ಲ. ಇದರರ್ಥ ಏನು? ಈ ಪ್ರದೇಶಗಳೆಲ್ಲ ಕನ್ನಡ ಪ್ರದೇಶಗಳಲ್ಲ; ಕನ್ನಡ ಬಲ್ಲ ರಾಜರ ಪ್ರದೇಶಗಳು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು  ಶ್ರೀಕೃಷ್ಣದೇವರಾಯ. ಆಂಧ್ರಪ್ರದೇಶದವರು ಶ್ರೀಕೃಷ್ಣದೇವರಾಯನನ್ನು ತಮ್ಮವನೆಂದು ತಿಳಿದಿದ್ದಾರೆ. ನಾವು ಕನ್ನಡಿಗರು ನಮ್ಮವನೆಂದು ತಿಳಿದಿದ್ದೇವೆ. ಆಂಧ್ರದಲ್ಲಿ ನಮಗಿಂತ ಮೊದಲೇ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ. ಶ್ರೀಕೃಷ್ಣ ದೇವರಾಯ ತೆಲುಗು ಸಿನಿಮಾ ತಯಾರಾಗುತ್ತದೆ.  ಆನಂತರ ನಮ್ಮಲ್ಲಿ ಶ್ರೀಕೃಷ್ಣದೇವರಾಯ ಸಿನಿಮಾ ನಿರ್ಮಾಣ; ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆ. ಇದರರ್ಥ ಏನು? ಶ್ರೀಕೃಷ್ಣದೇವರಾಯನ ಸಾಮ್ರಾಜ್ಯ ಪೂರ್ಣ ಕನ್ನಡ ಸಾಮ್ರಾಜ್ಯವಲ್ಲ. ಅಷ್ಟೇಕೆ, ಯಾವುದೇ ರಾಜರ ಸಾಮ್ರಾಜ್ಯಗಳು ಒಂದೇ ಭಾಷೆಯ ರಾಜ್ಯಗಳಲ್ಲ. ಆದ್ದರಿಂದ ಕನ್ನಡ ರಾಜವಂಶಗಳ ಸಾಮ್ರಾಜ್ಯಗಳನ್ನು ಇಡಿಯಾಗಿ ಕನ್ನಡ ಪ್ರದೇಶಗಳೆಂದು ಕರೆಯುವುದು ಚಾರಿತ್ರಿಕವಾಗಿ ಸರಿಯಲ್ಲ.
ಸಮಸ್ಯೆ  ಇರುವುದೇ ಇಲ್ಲಿ. ಭೂಗೋಳಪ್ರಜ್ಞೆ ಮತ್ತು ಚರಿತ್ರೆಯ ಪ್ರಜ್ಞೆ ಒಂದಾಗಿ ಬೆಸೆದ  ಕನ್ನಡ ಪ್ರಜ್ಞೆಯ ಕೊರತೆಯಿಂದ ಸಾಮ್ರಾಜ್ಯಪ್ರಜ್ಞೆಯೇ ಪ್ರಧಾನವಾಗಿಬಿಡುತ್ತದೆ. ಚರಿತ್ರೆಯ ಪ್ರಜ್ಞೆಯೆಂಬುದು ಸಹ ಗತಕಾಲದ ಕನವರಿಕೆಯಲ್ಲ. ಇಲ್ಲಿ ಡಿ.ಡಿ. ಕೊಸಾಂಬಿಯವರ ವ್ಯಾಖ್ಯಾನವನ್ನು ಉಲ್ಲೇಖಿಸಬೇಕು: ಚರಿತ್ರೆಕಾರನ ಕೆಲಸ ಕೇವಲ ಭೂತಕಾಲವನ್ನು ಪ್ರೀತಿಸುವುದು ಅಥವಾ ಭೂತ ಕಾಲದಿಂದ ದೂರವಾಗುವುದಲ್ಲ. ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಭೂತಕಾಲವನ್ನು ಕೀಲಿಕೈ ಎಂದು ತಿಳಿಯಬೇಕು. ಭೂತಕಾಲದ ಬೆಳಕಿನಲ್ಲಿ ವರ್ತಮಾನವನ್ನು ಅರಿಯುವುದೆಂದರೆ, ವರ್ತಮಾನದ ಬೆಳಕಿನಲ್ಲಿ, ಭೂತಕಾಲವನ್ನು ಸಹ ಅರಿಯುವುದು ಎಂದರ್ಥ

ಭಾಷಾಭಿಮಾನಕ್ಕೆ ಭೂತಕಾಲ ಮತ್ತು ವರ್ತಮಾನಗಳ ಉಚಿತಾನುಸಂಧಾನ ಮುಖ್ಯ. ಭೂತದಲ್ಲೇ ಹೂತು ಹೋಗುವುದು ಕೇವಲ ಕನವರಿಕೆಯಾಗುತ್ತದೆ. ವರ್ತಮಾನವೇ ಸರ್ವಸ್ವ ಎಂದುಕೊಂಡರೆ ಪರಂಪರೆಯ ಪ್ರಜ್ಞೆ ಪತನಗೊಳ್ಳುತ್ತದೆ. ಒಂದರಿಂದ ಇನ್ನೊಂದನ್ನು ಅರಿಯುವ ಅರ್ಥಪೂರ್ಣತೆ ಮುಖ್ಯ.

ಆದ್ದರಿಂದ, ನಾವು ಅರ್ಥಮಾಡಿಕೊಳ್ಳಬೇಕು: ಭಾಷೆ ಮತ್ತು ಭೂಗೋಳದ ಸಂಬಂಧವಷ್ಟೇ ಕನ್ನಡಾಭಿಮಾನವಲ್ಲ. ಭೂಗೋಳ ಮಿತಿಯ ಚಿಂತನೆಯೊಂದೇ ಕರ್ನಾಟಕದ ಮನಸ್ಸನ್ನು ಒಂದುಗೂಡಿಸುವ ಅಂತಿಮ ಸಾಧನವಾಗುವುದಿಲ್ಲ. ಸಾಮಾಜಿಕ-ಆರ್ಥಿಕ  ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯ ಸಮತೋಲನವನ್ನು ಸಾಧಿಸದಿದ್ದರೆ ಕರ್ನಾಟಕದ ಒಳಗೆ ಒಡಕು ಹುಟ್ಟುತ್ತದೆ. ಹುಟ್ಟುತ್ತದೆ ಅನ್ನುವುದಾದರೂ ಏಕೆ? ಹುಟ್ಟುತ್ತಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನದ ಅಸಮಾಧಾನ ಪ್ರಕಟಗೊಳ್ಳುತ್ತಿದೆ. ನಿಜ; ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳೂ ಹಿಂದುಳಿದಿವೆ. ಆದರೆ ಮೈಸೂರು ರಾಜ್ಯಕ್ಕೆ ಸೇರಿದ  ಹೊಸ ಪ್ರದೇಶಗಳು ಹೆಚ್ಚು ಹಿಂದುಳಿದಿವೆ. ಕೇವಲ ಆರ್ಥಿಕ ಅಭಿವೃದ್ಧಿಯ  ಅಸಮತೋಲನವಷ್ಟೇ ಅಲ್ಲ, ಸಾಂಸ್ಕೃತಿಕ ಪ್ರಾತಿನಿಧ್ಯದ ಪರಕೀಯತೆಯೂ  ಇವರನ್ನು ಕಾಡಿಸುತ್ತಿದೆ.  ರಾಜಧಾನಿ ಕೇಂದ್ರಿತ ನೋಟದಿಂದ ಸಿಗುವ ಸಾಂಕೇತಿಕ ಪ್ರಾತಿನಿಧ್ಯವು ಸಾಂಸ್ಕೃತಿಕ ಪರಕೀಯತೆಯನ್ನು ಸಲೀಸಾಗಿ ಹೋಗಲಾಡಿಸಲಾರದು. ಕರ್ನಾಟಕದ ಸಮಸ್ತ ಭೂಗೋಳದೊಳಗೆ ಇರುವ ಜನರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳೆಸಬೇಕಾದ್ದು ಒಂದು ಹೊಣೆಗಾರಿಕೆಯಾದರೆ, ಏಕೀಕರಣದ ಫಲವಾಗಿ ಜೊತೆಗೂಡಿದ ಪ್ರದೇಶಗಳ ಪ್ರತಿಭಾವಂತರಿಗೆ ಪ್ರತೀಕಾತ್ಮಕ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿದೆ; ಸಾಂಸ್ಕೃತಿಕ ಸಂಘಸಂಸ್ಥೆಗಳ  ಜವಾಬ್ದಾರಿಯೂ ಆಗಿದೆ. ಅಷ್ಟೇಕೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪರಕೀಯತೆಯಿಂದ  ಪಾರು ಮಾಡಬೇಕಾಗಿದೆ. 

ಸಮಗ್ರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿ ಕೋನದ ದೂರಗಾಮಿಚಿಂತನೆ ಮತ್ತು ಬದ್ಧಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಬೇಕೊ ಬೇಡವೊ, ಪ್ರತ್ಯೇಕ ರಾಜ್ಯದ  ಬೇಡಿಕೆ ಇಡುತ್ತಿರುವವರ ದನಿ ಮುಂದೊಂದು ದಿನ ಸಮೂಹ ಸನ್ನಿಯಾದರೆ ಅಚ್ಚರಿಯಿಲ್ಲ.
ಏಕೀಕರಣದಿಂದ  ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ನಮ್ಮ ಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ ಎಂದು ನಾನು ಭಾವಿಸುತ್ತೇನೆ.   ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರು ಪ್ರತ್ಯೇಕತೆಯೊಂದೇ  ಪರಿಹಾರವೇ ಎಂದು ತಮ್ಮೊಳಗನ್ನು ಕೇಳಿಕೊಳ್ಳಬೇಕು. ಪ್ರತ್ಯೇಕ ರಾಜ್ಯವೆನ್ನುವುದು ಭೂಗೋಳ ವಿಭಜನೆ ಮತ್ತು ಅಧಿಕಾರ ಹಂಚಿಕೆಗೆ ನೆರವಾಗಬಹುದು. ಆದರೆ ಒಂದು ರಾಜ್ಯದ ಅಭಿವೃದ್ಧಿಗೆ ಅದಷ್ಟೇ ಸಾಕೆ? ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ. ಜಾತಿ, ವರ್ಣ, ಲಿಂಗತ್ವ ಅಸಮಾನತೆಗಳನ್ನು ಆಧಾರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು; ಪ್ರತ್ಯೇಕರಾಜ್ಯವಲ್ಲ. ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ನಾವು ತಿಳಿಯಬೇಕು:

ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ  ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು.  ಪ್ರತ್ಯೇಕ ರಾಜ್ಯಬೇಡಿಕೆಯವರಿಗೆ ಅಭಿವೃದ್ಧಿಯ ಅಸಮತೋಲನ ಮತ್ತು ಅಧಿಕಾರ ಮುಖ್ಯವಾದಂತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆ ಮುಖ್ಯವಾದಂತೆ ಕಾಣಿಸುತ್ತಿಲ್ಲ.  ಆದ್ದರಿಂದ ಪ್ರತ್ಯೇಕ ರಾಜ್ಯ ಬೇಡಿಕೆಯವರಲ್ಲಿ ನನ್ನದೊಂದು ಬೇಡಿಕೆ. ನಾವು ಒಂದಾಗಿ ಸಮಸ್ಯೆಗಳನ್ನು ಬಿಡಿಸೋಣ. ಸವಾಲುಗಳನ್ನು ಒಂದಾಗಿ  ಎದುರಿಸೋಣ. ಭಾವನಾತ್ಮಕವಾಗಿ ಮಾತ್ರವಲ್ಲ. ಕ್ರಿಯಾತ್ಮಕವಾಗಿ ಕೆಲಸ ಮಾಡೋಣ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ  ಪ್ರತಿಭಟಿಸೋಣ. ಒಡೆದು ಹೋಗುವುದಕ್ಕೆ ನಾವು ಒಂದಾಗಲಿಲ್ಲ ಎಂಬುದನ್ನು ತೋರಿಸಿಕೊಡೋಣ. ಇಂಥದೊಂದು ಕ್ರಿಯೆಗೆ ಕರ್ನಾಟಕದ ಎಲ್ಲ ಪ್ರದೇಶಗಳ ನೋಟವೇ ಬದಲಾಗಬೇಕು. ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳ ಜವಾಬ್ದಾರಿಯೂ ದೊಡ್ಡದಾಗಬೇಕು. ಎಲ್ಲ ಪ್ರದೇಶದ ಜನಪ್ರತಿನಿಧಿಗಳ ದನಿ ಗಟ್ಟಿಯಾಗಬೇಕು.

ತಕ್ಷಣಕ್ಕೆ ಸರ್ಕಾರ ಮಾಡಬೇಕಾದ ಕೆಲಸ ಒಂದಿದೆ. ಕರ್ನಾಟಕದ ಏಕೀಕರಣವಾದ ಈ ಅರವತ್ತು ವರ್ಷಗಳಲ್ಲಿ ವಿವಿಧ ಪ್ರದೇಶಗಳಿಗೆ  ಒದಗಿಸಿದ ಹಣ, ಕೈಗೊಂಡ ಯೋಜನೆಗಳು, ಅಭಿವೃದ್ಧಿಯ ಹಂತಗಳು, ಸಾಮಾಜಿಕ ಸಾಂಸ್ಕೃತಿಕ ಪ್ರತಿನಿಧೀಕರಣ, ಮಹಿಳಾ ಪ್ರಾತಿನಿಧ್ಯ ಮುಂತಾದ ಸಮಸ್ತ ಸಂಗತಿಗಳನ್ನು  ಒಳಗೊಂಡ ಹೊತ್ತಿಗೆಯೊಂದನ್ನು ಹೊತ್ತಿಗೆ ಸರಿಯಾಗಿ ಸಿದ್ಧಪಡಿಸಿ ಮುಂದಿನ ವಿಶ್ವಕನ್ನಡ ಸಮ್ಮೇಳನದ ವೇಳೆಗೆ ಬಿಡುಗಡೆಗೊಳಿಸಬೇಕು. ನಾನು ಬೇಕಾಗಿಯೇ ಶ್ವೇತಪತ್ರ ಎಂಬ ಪದವನ್ನು ಬಳಸಿಲ್ಲ. ಶ್ವೇತಪತ್ರವೆನ್ನುವುದು ಈಗ ರಾಜಕೀಯ ಪರಿಭಾಷೆಯಾಗಿಬಿಟ್ಟಿದೆ. ಆದ್ದರಿಂದ ನಮಗೆ ಬೇಕಾದ್ದು ಪತ್ರವಲ್ಲ; ಪುಸ್ತಕ;  ಈ ಮೂಲಕ ಪ್ರಗತಿ ಪ್ರಾತಿನಿಧ್ಯದ ಕುರಿತ ಚರ್ಚೆ, ಚಿಂತನೆ ನಡೆಯ ಬೇಕು; ಅಸಮತೋಲನ ಮತ್ತು ಅಸಮಾಧಾನಗಳ ಕಾರಣಗಳನ್ನು ಕಂಡುಕೊಂಡು ಕರ್ನಾಟಕದ ಏಕೀಕರಣಕ್ಕೆ ಆರ್ಥಿಕತೆಯನ್ನಷ್ಟೇ ಅಲ್ಲ ಸಾರ್ಥಕತೆಯನ್ನು ತಂದುಕೊಡಬೇಕು. ಸಾಮಾಜಿಕ ನ್ಯಾಯ ನೆಲೆಗೊಳ್ಳಬೇಕು; ಸಮತೆಯ ಸಂವೇದನೆ ನಮ್ಮ ಬಲವಾಗಬೇಕು.

ಇದೇ ಸಂದರ್ಭದಲ್ಲಿ ಸರ್ಕಾರಕ್ಕೊಂದು ಸಲಹೆಯನ್ನು ಕೊಡಬಯಸುತ್ತೇನೆ. ಅಭಿವೃದ್ಧಿಯ ಅಸಮತೋಲನವನ್ನು  ತಪ್ಪಿಸಲು, ಜನಮುಖಿ ನ್ಯಾಯದ ವೇಗವನ್ನು ವೃದ್ಧಿಸಲು, ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕರಣಗೊಳಿಸಬೇಕು. ಅಂದರೆ ಕರ್ನಾಟಕದ ಪ್ರತಿ ಕಂದಾಯ ವಿಭಾಗಕ್ಕೊಂದು ಸಚಿವಾಲಯವನ್ನು ಸ್ಥಾಪಿಸಬೇಕು. ಸರ್ಕಾರದ ನೀತಿನಿಯಮಗಳಿಗೆ ಸಂಬಂಧಿಸಿದ ಮುಖ್ಯವಿಷಯಗಳನ್ನು ಮಾತ್ರ ರಾಜಧಾನಿ ಕೇಂದ್ರಿತ ಮಾಡಿ, ಉಳಿದೆಲ್ಲ ಅನುಷ್ಠಾನದ ಅಧಿಕಾರವನ್ನು ವಿಭಾಗೀಯ ಸಚಿವಾಲಯಗಳಿಗೆ ಕೊಡಬೇಕು; ಕೇವಲ ಅಧಿಕಾರ ಕೊಟ್ಟರೆ ಸಾಲದು; ಬಜೆಟ್ ಹಂಚಿಕೆಯನ್ನು ಅಧಿಕೃತಗೊಳಿಸಬೇಕು. ರಾಜ್ಯ ಮಂತ್ರಿಮಂಡಲದ ನಿರ್ಣಯಗಳನ್ನು ಆಯಾ ವಿಭಾಗದ ಮಂತ್ರಿಗಳ ಉಪಸಮಿತಿಯು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊರಬೇಕು.  ನೀತಿ ನಿಯಮ ನಿರ್ಧಾರಗಳನ್ನು ಹೊರತು ಪಡಿಸಿ ವಿಭಾಗೀಯ  ಸಚಿವಾಲಯಗಳು ಸಾಯತ್ವ ಸ್ವರೂಪದಲ್ಲಿ  ಕೆಲಸ ಮಾಡುವಂತಾಗಬೇಕು. ಪ್ರತಿ ಮಂಜೂರಾತಿಗೂ  ಕೇಂದ್ರೀಯ ಸಚಿವಾಲಯಕ್ಕೆ ಮೊರೆಯಿಡುವುದು ತಪ್ಪಿ ಮಾಹಿತಿ ಮಾತ್ರ ಕಳಿಸುವಂತಾಗಬೇಕು. ರಾಜ್ಯದೊಳಗೆ ಇಂಥದೊಂದು ಸ್ವಾಯತ್ತತೆಯ ಸಂರಚನೆ ಆಗಿ ಅನುಷ್ಠಾನಗೊಳ್ಳದೆ ಹೋದರೆ ಇಂದಲ್ಲ ನಾಳೆ ಪ್ರತ್ಯೇಕತೆ ತಪ್ಪಿದ್ದಲ್ಲ. ಆದ್ದರಿಂದ ನನ್ನ ಈ ಸಲಹೆಯನ್ನು  ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿ, ಅಗತ್ಯ ರೂಪಾಂತರಗಳೊಂದಿಗೆ ಕಾರ್ಯರೂಪಕ್ಕೆ ತರುವುದು ಅಗತ್ಯ ಎಂದು ಭಾವಿಸುತ್ತೇನೆ. ಇನ್ನೊಮ್ಮೆ ಹೇಳುತ್ತೇನೆ: ವಿಭಾಗೀಯ ಸ್ವಾಯತ್ತ ಸಚಿವಾಲಯಗಳಿಂದ ವಿವಿಧ ಪ್ರದೇಶಗಳ ಆಡಳಿತಾತ್ಮಕ ಅನಾಥ ಪ್ರಜ್ಞೆಗೆ ಪರಿಹಾರ ಸಿಗುತ್ತದೆ. ಸರ್ಕಾರದ  ನೀತಿಗಳಿಂದ ಸಾಮಾಜಿಕ, ಸಾಂಸ್ಕೃತಿಕ ಪರಕೀಯತೆಯನ್ನು ಪರಿಹರಿಸಲು ಕ್ರಿಯಾತ್ಮಕ ಹಿಡಿತ ಸಿಕ್ಕುತ್ತದೆ. ಈಗಾಗಲೇ  ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್‌ಪೀಠ ಸ್ಥಾಪನೆಯಾಗಿ ನ್ಯಾಯಾಂಗ ವ್ಯವಸ್ಥೆಯ ವಿಕೇಂದ್ರೀಕರಣವಾಗಿದೆ. ಈ ಹೈಕೋರ್ಟ್‌ಗಳು ಸ್ವಾಯತ್ತವಾಗಿ ಕೆಲಸ ಮಾಡುತ್ತಿವೆ. ಅದೇ ರೀತಿ ವಿಭಾಗೀಯ ಸ್ವಾಯತ್ತ ಸಚಿವಾಲಯಗಳನ್ನು ಸ್ಥಾಪಿಸಬಹುದಾಗಿದೆ. ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ‘ಮೇಲ್ ಸೇತುವೆಗಳನ್ನು ನಿರ್ಮಿಸುವ ಸರ್ಕಾರ, ಕರ್ನಾಟಕದಾದ್ಯಂತ ‘ಮನೋ ಸೇತುವೆಗಳನ್ನು  ನಿರ್ಮಿಸಬೇಕಾಗಿದೆ.

ರಾಜ್ಯ ಸ್ವಾಯತ್ತತೆ ಮತ್ತು ರಾಜ್ಯದೊಳಗೆ ಸ್ವಾಯತ್ತತೆ
ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಯಸುತ್ತೇನೆ: ನಮಗೀಗ ರಾಜ್ಯದ ಸ್ವಾಯತ್ತತೆ ಮತ್ತು ರಾಜ್ಯದೊಳಗಿನ ಸ್ವಾಯತ್ತತೆ ಎರಡೂ ಮುಖ್ಯ. ರಾಜ್ಯದೊಳಗಿನ  ಸ್ವಾಯತ್ತತೆ  ಮುಖ್ಯವಾಗಿ ನಮಗೇ  ಸೇರಿದ್ದರಿಂದ ಸೂಕ್ಷ್ಮಗ್ರಾಹಿತ್ವದಿಂದ ಸ್ಥಾಪಿಸಿಕೊಳ್ಳಬೇಕು ಮತ್ತು ಸ್ಥಾಪಿತ ಹಿತಾಸಕ್ತಿಗಳಿಂದ ಸಂರಕ್ಷಿಸಬೇಕು. ರಾಜ್ಯದ ಸ್ವಾಯತ್ತತೆಗಾಗಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು. ರಾಜ್ಯದ ಸ್ವಾಯತ್ತತೆಯೆಂಬುದು ಕೇವಲ ನಮ್ಮ ರಾಜ್ಯದ ಪ್ರಶ್ನೆಯಲ್ಲ. ಭಾರತವೆಂಬ ಒಕ್ಕೂಟ ವ್ಯವಸ್ಥೆಯ ಎಲ್ಲ ರಾಜ್ಯಗಳ ಪ್ರಶ್ನೆ. ರಾಜ್ಯಗಳಿಗೆ ಸ್ವಾಯತ್ತತೆ ಕೊಡಬೇಕೆಂಬುದು ಇಂದು  ನೆನ್ನೆಯ ನೋಟವಲ್ಲ. ಸ್ವಾತಂತ್ರ್ಯಪೂರ್ವದಲ್ಲೇ ಕಾಂಗ್ರೆಸ್ ಈ ಬಗ್ಗೆ ಪ್ರಸ್ಥಾಪಿಸಿದೆ. ಚಲೇಜಾವ್ ಚಳವಳಿಗೆ ಕರೆಕೊಟ್ಟ ನಿರ್ಣಯದಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸಲಾಗಿದೆ:

ಕಾಂಗ್ರೆಸ್‌ನ ದೃಷ್ಟಿಯಲ್ಲಿ ಸಂವಿಧಾನವು ಒಕ್ಕೂಟ ಸ್ವರೂಪದ್ದಾಗಿದ್ದು ಈ ಒಕ್ಕೂಟದ ಘಟಕಗಳಿಗೆ ಅತಿ ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕು. ಒಕ್ಕೂಟ ಮತ್ತು ಘಟಕಗಳ ನಡುವೆ ಹಂಚಿಕೆಯಾಗದ ಉಳಿಕೆ ಅಧಿಕಾರವೂ ಈ ಘಟಕಗಳಿಗೇ ಸಲ್ಲಬೇಕು - ಇದು ಅಂದಿನ ಕಾಂಗ್ರೆಸ್ ನಿರ್ಣಯದ ಭಾಗ. ನಮ್ಮ ಕವಿ ಕುವೆಂಪು ಅವರಲ್ಲಿ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯು ಸ್ವಾತಂತ್ರ್ಯ ಪೂರ್ವದಲ್ಲೇ ಮೂಡಿಬಂದದ್ದಕ್ಕೆ ೭-೧೨-೧೯೨೮ರಂದು ಬರೆದ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಆರಂಭವಾಗುವ ಇಂದಿನ ನಾಡಗೀತೆಯೇ ಸಾಕ್ಷಿ. ನಮಗೆ ಭಾರತವೆಂಬ ದೇಶ ಕರ್ನಾಟವೆಂಬ ಸ್ವಾಯತ್ತ ರಾಜ್ಯ ಎರಡೂ ಮುಖ್ಯವೆಂಬ ಮುನ್ನೋಟ ಈ ಗೀತೆಯಲ್ಲೇ ಅಡಗಿದೆ. ಅದೀಗ ನಮ್ಮ ಸಂವಿಧಾನದ ಭಾಗವೇ ಆಗಿದೆ.

ಅಂದರೆ ಈಗ  ಸಂವಿಧಾನಾತ್ಮಕವಾಗಿ ರಚಿತಗೊಂಡ ಒಕ್ಕೂಟ ವ್ಯವಸ್ಥೆಯ ಬೀಜ, ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿತ್ತು. ಆದರೆ  ಸಂವಿಧಾನದಲ್ಲಿ ಅಡಕವಾದ ಈ ಪರಿಕಲ್ಪನೆಯನ್ನು ನಿರ್ಲಕ್ಷಿಸುವ ನಿಲುವುಗಳನ್ನು ಕೇಂದ್ರ ಸರ್ಕಾರಗಳು ಅನುಸರಿಸುತ್ತ ಬಂದ ಫಲವಾಗಿ ರಾಜ್ಯಗಳು ಅಧೀನ ಹಾಗೂ ವಿಧೇಯ  ವಲಯಗಳಾಗಿ ಮಾರ್ಪಟ್ಟಿವೆ. ರಾಜ್ಯಗಳಿಗೆ ಒದಗಿದ ಇಂಥ ಸ್ಥಿತಿಯನ್ನು ಕಂಡು ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯವರಾಗಿದ್ದ ಶ್ರೀ ರಾಜಾಜಿಯವರು ೧೯೫೨ರಲ್ಲಿ ವಿಧಾನ ಸಭೆಯಲ್ಲಿ ಭಾಷಣ ಮಾಡುತ್ತ ರಾಜ್ಯ ಸರ್ಕಾರಗಳೆಂದರೆ ವೈಭವೀಕೃತ ಮುನಿಸಿಪಾಲಿಟಿಗಳು ಎಂಬಂತಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಪೂರ್ಣ ಅಧಿಕಾರ ಮತ್ತು  ಹಣ ಎಲ್ಲಿದೆ? ಎಂದು ಪ್ರಶ್ನಿಸಿದರು. ಕೇರಳದಲ್ಲಿ ರಚನೆಯಾದ ದೇಶದ ಮೊದಲ ಎಡಪಕ್ಷಗಳ ಮುಖ್ಯಮಂತ್ರಿಯವರಾದ ಶ್ರೀನಂಬೂದರಿಪಾದ್ ಅವರು ಸಹ ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸಿದರು (೧೯೫೭). ಮುಂದೆ ೧೯೭೭ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ  ಶ್ರೀ ಜ್ಯೋತಿಬಸು   ಒಕ್ಕೂಟ ವ್ಯವಸ್ಥೆಯಲ್ಲಿ  ರಾಜ್ಯಗಳಿಗಿರಬೇಕಾದ  ಸ್ವಾತಂತ್ರ್ಯ, ಸ್ವಾಯತ್ತತೆಗಳ ಪರವಾಗಿ ದನಿ ಎತ್ತುತ್ತ ಬಂದರು. ಆ ನಂತರದ ವರ್ಷಗಳಲ್ಲಿ ಸರ್ಕಾರಿಯಾ ಆಯೋಗ ರಚನೆಯಾಗಿ ರಾಜ್ಯಗಳ ಸ್ವಾಯತ್ತತೆ ಕುರಿತು ಮಾಡಿದ ಶಿಫಾರಸ್ಸುಗಳು ಸಹ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.

ಈಗ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯ ಅಧಿಕಾರಿ ಹಂಚಿಕೆಯನ್ನೇ ನೋಡಿ. ಅಧಿಕಾರ ಹಂಚಿಕೆಯಾಗಿ ಕೇಂದ್ರಪಟ್ಟಿ, ರಾಜ್ಯಪಟ್ಟಿ ಮತ್ತು ಎರಡಕ್ಕೂ ಅಧಿಕಾರವಿರುವ ಪಟ್ಟಿ ಎಂದು ಮೂರು ವಿಭಾಗ ಮಾಡಲಾಗಿದೆ. ಕೇಂದ್ರ ಸರ್ಕಾರದ ಅರ್ಥಾತ್ ಸಂವಿಧಾನದಲ್ಲಿ  ಕರೆದಿರುವಂತೆ ಸಂಯುಕ್ತ ಸರ್ಕಾರದ, ಅಧಿಕಾರ ವ್ಯಾಪ್ತಿಯಲ್ಲಿ ವಿದೇಶಾಂಗ ವ್ಯವಹಾರ, ರಕ್ಷಣೆ,  ಹಣಕಾಸು, ರೈಲ್ವೆ, ವಿಮಾನ, ಅಂಚೆ, ಟೆಲಿಫೋನ್, ಒಟ್ಟಾರೆ ಸಂಪರ್ಕ, ಅಂತರರಾಜ್ಯ  ವ್ಯವಹಾರ ಮುಂತಾದವು ಇರುವುದು ಸರಿ. ಆದರೆ ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಬಹುಪಾಲು ಶಿಕ್ಷಣ - ಮುಂತಾದ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಅಂತಿಮ ಅಧಿಕಾರವಿರಬೇಕು. ಆದರೆ  ಹೀಗೆ ಆಗಿಲ್ಲ. ಇಲ್ಲಿಯೇ ಸಂಯುಕ್ತ ಸರ್ಕಾರವು ‘ಕೇಂದ್ರ ಸರ್ಕಾರವಾಗಿಬಿಟ್ಟಿದೆ. ಈಗಂತೂ ತೆರಿಗೆ, ಉನ್ನತ ಶಿಕ್ಷಣ ಮುಂತಾದ ವಿಷಯಗಳಲ್ಲಿ ಏಕರೂಪತೆ ತರುವ ಪ್ರಯತ್ನದಲ್ಲಿ ರಾಜ್ಯದ ಹಕ್ಕುಗಳು ಮೊಟಕಾಗುತ್ತಿವೆ. ತೆರಿಗೆಗಳ ಸರಳೀಕರಣದಂತಹ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುವುದು ಸರಿಯೆಂದೇ ತಿಳಿಯೋಣ. ದೇಶದ ಆರ್ಥಿಕ ಶಕ್ತಿ ಮತ್ತು ವಹಿವಾಟುದಾರರ ಶಕ್ತಿಯೆರಡೂ ವೃದ್ಧಿಯಾಗುತ್ತವೆಯೆಂದು ನಂಬೋಣ. ಆದರೆ ತೆರಿಗೆಯ ಏಕರೂಪತೆ ಮತ್ತು ಸರಳೀಕರಣಗಳು ಆರ್ಥಿಕ ಕೇಂದ್ರೀಕರಣಕ್ಕೆ ದಾರಿ ಮಾಡಿಕೊಟ್ಟರೆ ರಾಜ್ಯಗಳು ಕೇಂದ್ರದ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕು; ರಾಜ್ಯಗಳ ಸ್ವಾಯತ್ತತೆಯನ್ನು ಕಾಪಾಡುತ್ತಲೇ ತೆರಿಗೆಯ ಸರಳೀಕರಣ ಸಾಧ್ಯವಿಲ್ಲವೆ? ಈ ಬಗ್ಗೆ ಯೋಚಿಸಬೇಕಲ್ಲವೆ? ಜೊತೆಗೆ ನೊಡಿ; ಕೇಂದ್ರವು ರಾಜ್ಯದಲ್ಲಿ ಜಾರಿಮಾಡುವ  ರೈಲ್ವೆ , ಸಾರಿಗೆ  ಮುಂತಾದ ಯೋಜನೆಗಳಿಗೆ ರಾಜ್ಯಗಳ ಪಾಲು ಕೇಳುತ್ತದೆ. ರಾಜ್ಯಗಳು ಗರಿಷ್ಠ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಾಧ್ಯವಾಗದಿದ್ದರೆ ಕೇಂದ್ರದ ಯೋಜನೆಗಳು  ರಾಜ್ಯದಲ್ಲಿ ಜಾರಿಯಾಗುವುದೇ ಇಲ್ಲ. ಆದ್ದರಿಂದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಮರುಚಿಂತನೆ ನಡೆದು ರಾಜ್ಯಗಳ ಸ್ವಾಯತ್ತತೆಗೆ ಪೂರಕ ನೀತಿಯನ್ನು ರೂಪಿಸಬೇಕು.  ಮುಂದುವರೆದು ಹೇಳುವುದಾದರೆ, ರಾಜ್ಯಗಳ ಯೋಜನೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಸ್ಥಾಪನೆಯಾಗಿದ್ದ ಯೋಜನಾ ಆಯೋಗವನ್ನು ವಿಸರ್ಜಿಸಲಾಗಿದೆ. ಆ ಜಾಗದಲ್ಲಿ ‘ನೀತಿ ಆಯೋಗ ಬಂದಿದೆ. ರಾಜ್ಯಸರ್ಕಾರಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಇದ್ದ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು  ನಿರ್ಜೀವಗೊಳಿಸಲಾಗಿದೆ. ಸಂವಿಧಾನದ ೨೬೩ನೇ ಪರಿಚ್ಛೇದದ ಪ್ರಕಾರ ಇರುವ ಅಂತರ ರಾಜ್ಯ ಮಂಡಳಿಯ ಸಭೆಗಳು ಸಹ ಸರಿಯಾಗಿ ನಡೆಯುತ್ತಿಲ್ಲವೆಂಬ ಆಕ್ಷೇಪವಿದೆ. ಒಟ್ಟಾರೆ ಹೇಳುವುದಾದರೆ ರಾಜ್ಯಗಳು ಸಂಯುಕ್ತ ಭಾರತದ ಭಾಗವಾಗುವ ಬದಲು ‘ಕೇಂದ್ರ ಸರ್ಕಾರದ ತೋರು ಬೆರಳ ದಾರಿಯಲ್ಲಿ ಸಾಗುವ ಪಾದಚಾರಿಗಳಾಗುತ್ತಿವೆ.

ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ನೀತಿಗಳಿಂದ ಅಧಿಕಾರ ಮೊಟಕಾಗುವುದು ಮತ್ತು ಆರ್ಥಿಕ ಶಕ್ತಿ ಕುಗ್ಗುವುದಷ್ಟೇ ಸಮಸ್ಯೆಯಲ್ಲ. ಶೈಕ್ಷಣಿಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಸಮಸ್ಯೆಗಳು ಎದುರಾಗುತ್ತವೆ. ಕೇಂದ್ರ ಕೃಪಾಪೋಷಿತ ಶಿಕ್ಷಣವೇ ಶ್ರೇಷ್ಠವೆಂಬ ಭ್ರಮೆ ಬೆಳೆಯುತ್ತಲೇ ಇರುವುದನ್ನು ಈಗ ಗಮನಿಸಬಹುದು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೂ ರಾಷ್ಟ್ರಮಟ್ಟದಲ್ಲಿ ಕೇಂದ್ರೀಕರಿಸಿಕೊಂಡಿದ್ದು ರಾಜ್ಯಗಳ ಹಕ್ಕು ಮೊಟಕಾಗಿರುವುದನ್ನೂ ನೋಡಬಹುದು. ನಾನಿಲ್ಲಿ ಪ್ರತಿಪಾದಿಸುತ್ತಿರುವುದು ಕೇಂದ್ರ ಸರ್ಕಾರದ ಮಧ್ಯಪ್ರವೇಶ ಬೇಡವೇ ಬೇಡ ಎಂದಲ್ಲ. ಒಕ್ಕೂಟ ವ್ಯವಸ್ಥೆಯೆನ್ನುವುದು ಕೇಂದ್ರೀಕೃತ ಪದ್ಧತಿಗೆ ವಿರುದ್ಧವಾದುದು ಎಂಬ ವಿವೇಕದಿಂದ ನಡೆದುಕೊಳ್ಳಬೇಕು ಎಂದು ಹೇಳಬಯಸುತ್ತೇನೆ. ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗದ ಸಮತೋಲನದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದೇನೆ. ಒಟ್ಟಾರೆಯಾಗಿ ರಾಜ್ಯಗಳ ಸ್ವಾಯತ್ತತೆ ಮತ್ತು ರಾಜ್ಯಗಳೊಳಗಿನ ಸ್ವಾಯತ್ತತೆ - ಎರಡೂ ಮುಖ್ಯವಾಗಬೇಕು ಎಂಬುದು ನನ್ನ ಆಶಯ ಮತ್ತು ಆಗ್ರಹ.

ಮಾತೃಭಾಷೆ ಅಥವಾ ರಾಜ್ಯಭಾಷಾ ಶಿಕ್ಷಣ ಮಾಧ್ಯಮ

ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಘಟನಾವಳಿಗಳಲ್ಲಿ ಉದಾಹರಿಸಲೇಬೇಕಾದ  ಇತ್ತೀಚಿನ ಮುಖ್ಯ ಪ್ರಕರಣ- ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮದ ಅಳವಡಿಕೆ ಸಂಬಂಧಿಸಿದೆ. ಕರ್ನಾಟಕ ಶಿಕ್ಷಣ ಅಧಿನಿಯಮದ ಮೂರನೇ ಪರಿಚ್ಛೇದವು ಸಾಮಾನ್ಯ ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲ ಹಂತದ ಶಿಕ್ಷಣವನ್ನು ಕ್ರಮಬದ್ಧಗೊಳಿಸುವ ಅಧಿಕಾರವನ್ನು ರಾಜ್ಯಸರ್ಕಾರಕ್ಕೆ ನೀಡಿದೆ. ಇದೇ ಅಧಿನಿಯಮದ ಏಳನೇ ಪರಿಚ್ಛೇದವು  ಯಾವುದೇ ರೀತಿಯ ಪಠ್ಯಕ್ರಮವನ್ನು ನಿಗದಿಗೊಳಿಸುವ ಅಧಿಕಾರವನ್ನೂ ರಾಜ್ಯಸರ್ಕಾರಕ್ಕೆ ನೀಡಿದೆ. ಇದು ರಾಜ್ಯದ ವಿಧಾನಮಂಡಲವು ಅಂಗೀಕರಿಸಿದ ಕಾಯಿದೆ. ಆದರೂ ಇದರ ಅನುಷ್ಠಾನಕ್ಕೆ ಅನೇಕ ಅಡ್ಡಿಗಳು ಎದುರಾಗುತ್ತಿದೆ. ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮವನ್ನೂ ರಾಜ್ಯ ಸರ್ಕಾರವು ನಿರ್ಧರಿಸಲಾಗದಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿಬಿಟ್ಟಾಗಿದೆ. ಅದರ ಇತಿಹಾಸವನ್ನೊಮ್ಮೆ ನೋಡಿ:
ದಿನಾಂಕ ೬.೫.೨೦೧೪ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಪ್ರಾಥಮಿಕ ಶಿಕ್ಷಣದಲ್ಲಿ  ಮಾತೃಭಾಷಾ ಮಾಧ್ಯಮವನ್ನು ಸರ್ಕಾರವು ಕಡ್ಡಾಯಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಇದು ದೇಶದ ಎಲ್ಲ ಮಾತೃಭಾಷೆ ಹಾಗೂ ರಾಜ್ಯ ಭಾಷೆಗಳಿಗೆ ಆಘಾತಕಾರಿಯಾಗುವ ತೀರ್ಪು. ಕರ್ನಾಟಕ ಸರ್ಕಾರವು ರಾಜ್ಯದ ಉಚ್ಚನ್ಯಾಯಾಲಯದ ೩.೭.೨೦೦೮ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ಬಗ್ಗೆ  ನೀಡಿದ ಈ ತೀರ್ಪು ಇಡೀ ದೇಶದ ಪ್ರಾಥಮಿಕ ಶಿಕ್ಷಣ ಮತ್ತು ರಾಜ್ಯಗಳ ಹಕ್ಕಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ. ವಿಶೇಷ ಮತ್ತು ವಿಚಿತ್ರವೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆಯ ಮಾಧ್ಯಮ ಕಡ್ಡಾಯವಾಗಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಹೋರಾಡಿದ ಏಕೈಕ ರಾಜ್ಯವೆಂದರೆ ಕರ್ನಾಟಕ. ನಮ್ಮ ರಾಜ್ಯದ ಕೆಲವು ಕನ್ನಡಪರ ಚಿಂತಕರು ಮತ್ತು ಹೋರಾಟಗಾರರು ಭಾಷಾಭಿಮಾನಕ್ಕೆ ಏಕೈಕ ಉದಾಹರಣೆಯೆಂಬಂತೆ ಬಿಂಬಿಸುತ್ತ ಬಂದ ತಮಿಳುನಾಡಿನ ಅರ್ಜಿಯೂ ಸುಪ್ರೀಂಕೋರ್ಟಿನಲ್ಲಿ ಇತ್ತಾದರೂ ತಮಿಳುನಾಡಿನ  (ಜಯಲಲಿತ) ಸರ್ಕಾರ ಈ ಅರ್ಜಿಯನ್ನು ಹಿಂಪಡೆದು ಕಾನೂನು ಹೋರಾಟವನ್ನು ಕೈಬಿಟ್ಟಿತು! ಆಂಗ್ಲ ಮಾಧ್ಯಮದವರಿಗೆ ಮುಕ್ತ ಅವಕಾಶ  ನೀಡಲು ಸಿದ್ಧವಾಯಿತು. ಇನ್ನು ಆಂಧ್ರಪ್ರದೇಶದ ಒಂದು ಅರ್ಜಿಯು ಸುಪ್ರೀಂಕೋರ್ಟಿನಲ್ಲಿ  ಇತ್ತಾದರೂ ತೆಲಂಗಾಣ ರಾಜ್ಯ ರಚನೆಯ ಸಮಸ್ಯೆಯಲ್ಲಿ ಸೆಣಸುತ್ತಿದ್ದ ಆ ರಾಜ್ಯಕ್ಕೆ ಈ ಅರ್ಜಿ ಮುಖ್ಯವಾಗಲಿಲ್ಲ. ಕಡೆಗೆ ಉಳಿದದ್ದು ಕರ್ನಾಟಕದ ಮೇಲ್ಮನವಿಯ ಅರ್ಜಿ ಮಾತ್ರ.
ಕಿರಿಯ  ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಕಡ್ಡಾಯವಾಗಬೇಕೆಂಬ ಕರ್ನಾಟಕದ ಕಾನೂನು ಹೋರಾಟಕ್ಕೆ ಒಂದು ಇತಿಹಾಸವಿದೆ. ದಾಖಲೆಯಲ್ಲಿರಲೆಂದು ಮುಂದಿನ ವಿವರ ಕೊಡುತ್ತಿದ್ದೇನೆ.

ಅದು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಪ್ರೌಢಶಾಲೆಯಲ್ಲಿ ಪ್ರಥಮಭಾಷೆಯಾಗಿ ಕನ್ನಡವನ್ನೂ ಒಳಗೊಂಡಂತೆ ತಮಿಳು, ತೆಲುಗು ಮುಂತಾದ ಭಾಷೆಗಳ ಜೊತೆಗೆ ಸಂಸ್ಕೃತವೂ ಇತ್ತು. ಭಾಷಾ ಅಲ್ಪಸಂಖ್ಯಾತರಿಗೆ ಭಾಷಿಕ ರಕ್ಷಣೆ ಕೊಡಬೇಕೆಂಬುದು ಸಂವಿಧಾನದತ್ತ ನಿಯಮವಾದ್ದರಿಂದ ಆಯಾ ರಾಜ್ಯಗಳಲ್ಲಿರುವ ಅಲ್ಪಸಂಖ್ಯಾತರ ಭಾಷೆಗಳನ್ನು ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸೇರಿಸುವುದು ಒಂದು ಕಾನೂನಾತ್ಮಕ  ಪದ್ಧತಿ. ಆದರೆ ಅಲ್ಪಸಂಖ್ಯಾತರು ಅವರದೇ ಭಾಷೆಯನ್ನು  ಆಯ್ಕೆಮಾಡಿಕೊಳ್ಳಬೇಕೆಂಬ ಕಡ್ಡಾಯವೇನೂ ಇಲ್ಲ. ಇದೊಂದು ಸಂವಿಧಾನದತ್ತ ಅವಕಾಶ. ಈ ಭಾಷೆಗಳಿಂದ ಕನ್ನಡ ಭಾಷೆಗೆ ಧಕ್ಕೆಯಾಗಲಿಲ್ಲ. ಸಂಸ್ಕೃತದಿಂದ ಧಕ್ಕೆಯಾಗತೊಡಗಿತು. ಇದಕ್ಕೆ ಕಾರಣವಿತ್ತು. ಸಂಸ್ಕೃತವನ್ನು ತೆಗೆದುಕೊಂಡ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಸ್ಕೃತಭಾಷೆಯಲ್ಲೇ ಉತ್ತರಿಸಬೇಕೆಂಬ ನಿಯಮವಿರಲಿಲ್ಲ. ಕನ್ನಡ ಅಥವಾ ಇಂಗ್ಲಿಷ್‌ನಲ್ಲೂ ಉತ್ತರಿಸ ಬಹುದಿತ್ತು. ಪ್ರಥಮ ಭಾಷೆಯೆನ್ನುವುದು ಭಾಷಾಪ್ರಧಾನ ಕಲಿಕೆಯಾಗಿದ್ದರೂ ಈ ರಿಯಾಯಿತಿಯಿತ್ತು. ಜೊತೆಗೆ ಸಂಸ್ಕೃತದ ಪಠ್ಯ ತುಂಬಾ  ಸುಲಭವಾಗಿತ್ತು.  ಹೀಗೆ ಸಂಸ್ಕೃತವು ಎಸ್.ಎಸ್.ಎಲ್.ಸಿ.ಯಲ್ಲಿ ರ‍್ಯಾಂಕ್ ಪಡೆಯುವ ಒಂದು ಸುಲಭ ಸಾಧನವಾಗಿತ್ತು. ಇದರ ಫಲವಾಗಿ ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳುವವರ  ಸಂಖ್ಯೆ  ಕಡಿಮೆಯಾಗತೊಡಗಿತು. ಒಂದು ಉದಾಹರಣೆ ಕೊಡುವುದಾದರೆ ಪ್ರತಿಷ್ಠಿತವೆನ್ನಿಸಿಕೊಂಡ ಪ್ರೌಢಶಾಲೆಯೊಂದರಲ್ಲಿ ಕನ್ನಡ ಪ್ರಥಮಭಾಷೆಯ ಒಂದು ಸೆಕ್ಷನ್ ಇದ್ದರೆ, ಸಂಸ್ಕೃತ ಪ್ರಥಮ  ಭಾಷೆಯ ನಾಲ್ಕು ಸೆಕ್ಷನ್‌ಗಳಿದ್ದವು. ಪ್ರೌಢಶಾಲೆಯಲ್ಲಿ ಕನ್ನಡ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಆತಂಕಪಟ್ಟುಕೊಂಡ ಅನೇಕ ಸಾಹಿತಿ- ಕಲಾವಿದರು, ಶಿಕ್ಷಣತಜ್ಞರು ಈ ಬಗ್ಗೆ ಸಾರ್ವಜನಿಕವಾಗಿ ಮಾತಾಡತೊಡಗಿದರು. ಸರ್ಕಾರದ ಗಮನಕ್ಕೂ ತಂದರು. ಪಠ್ಯ ಕ್ರಮದಲ್ಲಿ ಪ್ರಥಮ ಭಾಷೆಯೆನ್ನುವುದು ಮಾತೃಭಾಷೆ ಯಾಗಿರಬೇಕು. ಆದರೆ ಯಾರ ಮಾತೃಭಾಷೆಯೂ ಅಲ್ಲದ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಲ್ಲಿ, ಸೇರಿಸಿರುವುದು ತಪ್ಪು ಎಂಬ ತಾತ್ವಿಕತೆಯನ್ನೂ ಮಂಡಿಸಲಾಯಿತು. ಆಗ ರಾಜ್ಯದ ಮುಖ್ಯಮಂತ್ರಿಯವರಾಗಿದ್ದ ದೇವರಾಜ ಅರಸು ಅವರು ಕೂಡಲೇ ಸ್ಪಂದಿಸಿದರು.

ಪ್ರೌಢಶಾಲೆ ಪಠ್ಯಕ್ರಮದ ಪ್ರಥಮಭಾಷೆ ಪಟ್ಟಿಯಲ್ಲಿದ್ದ ಸಂಸ್ಕೃತವನ್ನು  ಮೂರನೇ ಭಾಷೆಯ ಪಟ್ಟಿಗೆ ಸೇರಿಸುವ ತೀರ್ಮಾನ ಕೈಗೊಂಡರು. ಸರ್ಕಾರ ಆದೇಶ ಹೊರಡಿಸಿತು. ಯಾವ ಒತ್ತಡಕ್ಕೂ ಮಣಿಯಲಿಲ್ಲ. ಸಂಸ್ಕೃತವು ಪ್ರಥಮ ಭಾಷೆಯ ಪಟ್ಟಿಯಲ್ಲಿರುವುದನ್ನು ವಿರೋಧಿಸಿದವರು (ನನ್ನನ್ನೂ ಒಳಗೊಂಡಂತೆ) ಸಂಸ್ಕೃತ ಕಲಿಕೆಯ ವಿರೋಧಿಗಳಾಗಿರಲಿಲ್ಲ. ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಈಗ ಚಾಲ್ತಿಯಲ್ಲಿರುವ ಜನಭಾಷೆಗಳು ಮಾತ್ರ ಇರಬೇಕೆಂಬ ತತ್ವ ನಮ್ಮದಾಗಿತ್ತು.
ಮುಂದೆ, ದೇವರಾಜ ಅರಸು ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಯಿತು. ಗುಂಡೂರಾವ್ ಅವರು ಮುಖ್ಯಮಂತ್ರಿಯಾದರು. ಸಂಸ್ಕೃತ ಪರವಾದವರು ಕೂಡಲೇ ಕಾರ್ಯ ಪ್ರವೃತ್ತರಾದರು. ಗುಂಡೂರಾಯರು ಮೂರನೇ ಭಾಷೆಯಾಗಿದ್ದ ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆ ಮಾಡಿದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಬಂಡಾಯ ಸಾಹಿತ್ಯ ಸಂಘಟನೆಯು ಕನ್ನಡದ ಐವತ್ತಕ್ಕೂ ಹೆಚ್ಚು ಸಾಹಿತಿಗಳ ಸಹಿಸಂಗ್ರಹ ಮಾಡಿ ಇಪ್ಪತ್ತೈದು ಸಾವಿರ ಕರಪತ್ರ ಮುದ್ರಿಸಿ ರಾಜ್ಯಾದ್ಯಂತ ಹಂಚಿತು. ‘ಕನ್ನಡ ಹೋರಾಟ ವಾರ ಎಂಬ  ಒಂದು ವಾರದ ಕಾರ್ಯಕ್ರಮ ನಡೆಸಿತು. ಬೆಂಗಳೂರು, ಧಾರವಾಡ ಮುಂತಾದ ಕಡೆಯ ಕನ್ನಡಪರ ಸಂಘಟನೆಗಳು ಈ ಸರ್ಕಾರದ ಆದೇಶವನ್ನೂ ಸಮರ್ಥವಾಗಿ ಪ್ರತಿರೋಧಿಸಿದವು. ರಾಜ್ಯಾದ್ಯಂತ ಹಬ್ಬುತ್ತಿದ್ದ ಪ್ರತಿರೋಧಕ್ಕೆ ಉತ್ತರವಾಗಿ ಗುಂಡೂರಾವ್ ಸರ್ಕಾರವು ಪ್ರೌಢಶಾಲೆಯ ಭಾಷಾ ಪಠ್ಯಕ್ರಮದ ಬಗ್ಗೆ ಪರಿಶೀಲಿಸಿ ಶಿಫಾರಸ್ಸು ಮಾಡಲು ಡಾ. ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ರಚಿಸಿತು. ಗೋಕಾಕ್ ಸಮಿತಿಯು ಪ್ರಥಮಭಾಷೆ ಪಟ್ಟಿಯಿಂದ ಸಂಸ್ಕೃತವನ್ನು  ತೆಗೆದು ಹಾಕಿದ್ದಲ್ಲದೆ ಕನ್ನಡದ ಜೊತೆಗಿದ್ದ ಉಳಿದ ಭಾಷೆಗಳನ್ನು ತೆಗೆದುಹಾಕಿತು. ಕನ್ನಡವೊಂದೇ ಪ್ರಥಮ ಭಾಷೆಯಾಗಿರಬೇಕು ಎಂದು ಶಿಫಾರಸ್ಸು ಮಾಡಿತು. ಜೊತೆಗೆ ಮಾತೃಭಾಷಾಮಾಧ್ಯಮದ ಬಗ್ಗೆಯೂ ಪ್ರಸ್ತಾಪಿಸಿತು.

‘ಗೋಕಾಕ್ ವರದಿಯನ್ನು ಜಾರಿಗೆ ತರಬೇಕೆಂದು ಮೊದಲು ಒತ್ತಾಯ ತಂದವರು ಸಾಹಿತಿ-ಕಲಾವಿದರು. ಬೆಂಗಳೂರು, ಧಾರವಾಡಗಳಲ್ಲಿ ಸತ್ಯಾಗ್ರಹ ಶುರುವಾಯಿತು. ಈ ಘಟ್ಟದಲ್ಲಿ ಡಾ. ರಾಜಕುಮಾರ್ ಚಳವಳಿಗೆ ಧುಮುಕಿದರು. ರಾಜ್ಯಾದ್ಯಂತ ಸಂಚರಿಸಿ ಕನ್ನಡಪರ ಅಲೆಗೆ  ಕಾರಣರಾದರು. ಸರ್ಕಾರವು ಗೋಕಾಕ್ ವರದಿಗನುಗುಣವಾಗಿ  ೨೦.೭.೧೯೮೨ರಂದು ಆದೇಶ ಹೊರಡಿಸಿತು. ಇದರ ಪ್ರಕಾರ ಪ್ರೌಢಶಾಲೆಗಳಲ್ಲಿ ಕನ್ನಡವೊಂದೇ ಪ್ರಥಮ ಭಾಷೆ. ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷಾ ಮಾಧ್ಯಮ. ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡ ಐಚ್ಛಿಕ ಭಾಷೆ. ಆದರೆ ಈ ಆದೇಶವನ್ನು  ರಾಜ್ಯದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಕನ್ನಡಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಆರಂಭವಾಯಿತು.

ಸಾಕಷ್ಟು ಕಾಲ ವಿಚಾರಣೆ ನಡೆದು ರಾಜ್ಯದ ಉಚ್ಚ ನ್ಯಾಯಾಲಯವು ೨೦.೭.೧೯೮೨ರ ಸರ್ಕಾರಿ ಆದೇಶವನ್ನು ರದ್ದುಮಾಡಿತ್ತು ಈ ಆದೇಶವು  ಸಂವಿಧಾನದ ೧೪, ೨೯(೧) ಮತ್ತು ೩೯(೧) ನೇ ಪರಿಚ್ಛೇದಗಳನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿತು. ಸಂವಿಧಾನದ ೧೪ನೇ ಪರಿಚ್ಛೇದವು ಸಮಾನತೆಯ ತತ್ವವನ್ನೂ ೨೯(೧) ಮತ್ತು ೩೦(೧)ನೇ ಅಲ್ಪಸಂಖ್ಯಾತರ ಪರವಾದ ಆಶಯವನ್ನು ಪ್ರತಿಪಾದಿಸುತ್ತವೆ. ಕನ್ನಡವೊಂದೇ ಪ್ರಥಮ ಭಾಷೆಯಾದೆ, ಅಲ್ಪ ಸಂಖ್ಯಾತರು ಅವರವರ ಭಾಷೆಯನ್ನು ಕಲಿಯುವ ಹಕ್ಕಿನಿಂದ ವಂಚಿತರಾಗುತ್ತದೆಯೆಂಬ ಅಂಶ ಇಲ್ಲಿ ಮುಖ್ಯವಾಯಿತು. ಆಗ ಸರ್ಕಾರವು ೧೯.೬.೧೯೮೯ರ ರಂದು ಹೊಸ ಆದೇಶವನ್ನು ಹೊರಡಿಸಿ ಅಲ್ಪಸಂಖ್ಯಾತರ ಭಾಷೆಗಳಿಗೆ ಅವಕಾಶ ಕಲ್ಪಿಸಿತು. (ಈ ನಡುವೆ ಸಂಸ್ಕೃತವೂ ಮತ್ತೆ ಪ್ರಥಮ ಭಾಷೆಯ ಪಟ್ಟಿಗೆ ಸೇರಿಬಿಟ್ಟಿತು!) ಜೊತೆಗೆ ಮಾತೃಭಾಷಾ ಮಾಧ್ಯಮದ ನಿಯಮವನ್ನು ಮುಂದುವರೆಸಿತು.    

ಆದರೆ ಮಾತೃಭಾಷಾ ಮಾಧ್ಯಮದ ವಿಷಯವನ್ನು ಪ್ರಶ್ನಿಸಿ ಕೆಲವರು (ಖಾಸಗಿ ಶಿಕ್ಷಣ ಸಂಸ್ಥೆಯವರು) ಸುಪ್ರೀಂಕೋರ್ಟಿಗೆ ಹೋದರು. ೧೯೯೩ರಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟು ಕರ್ನಾಟಕ ಸರ್ಕಾರದ ೧೯-೬-೧೯೮೯ರ ಆದೇಶವನ್ನು ಎತ್ತಿ ಹಿಡಿಯಿತು. ಅಷ್ಟೇ ಅಲ್ಲ, ‘ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ. ಈ ವಿಚಾರದಲ್ಲಿ  ನ್ಯಾಯಾಲಯವು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದೂ ಹೇಳಿತು.

ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ೨೯.೪.೧೯೯೪ರಲ್ಲಿ ಕರ್ನಾಟಕ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿತು. ಈ ಆದೇಶದ ಪ್ರಕಾರ ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃ ಭಾಷೆ ಅಥವಾ ರಾಜ್ಯಭಾಷಾ  ಮಾಧ್ಯಮ, ಕನ್ನಡೇತರ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡ ಕಲಿಕೆ, ಐದನೇ ತರಗತಿಯಿಂದ ಯಾವುದೇ ಭಾಷಾ ಮಾಧ್ಯಮಕ್ಕೆ ಮುಕ್ತ ಅವಕಾಶ, ಸಿಬಿಎಸ್‌ಇ, ಐಸಿಎಸ್‌ಇ- ಶಾಲೆಗಳಿಗೆ ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ ಕಡ್ಡಾಯ- ಈ ಅಂಶಗಳು ಇದ್ದವು. ಸಹ್ಯಾದ್ರಿ ಸಂಸ್ಥೆಯು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೊರ್ಟಿಗೆ ಹೋದಾಗ ೧೯೯೯ರಲ್ಲಿ ಸುಪ್ರೀಂ ಕೋರ್ಟು ‘ಈ ಪ್ರಕರಣವೇ ನಿರರ್ಥಕ ಎಂದು ಅರ್ಜಿಯನ್ನು ತಳ್ಳಿಹಾಕಿತು.

ಅಂದರೆ ೧೯೯೩ ಮತ್ತು  ೧೯೯೯ರಲ್ಲಿ ಸುಪ್ರೀಂಕೋರ್ಟು ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವುದಕ್ಕೆ- ಒಪ್ಪಿಗೆ ನೀಡಿತ್ತು.
ಆದರೆ ಕಾನೂನು ಹೋರಾಟ ನಿಲ್ಲಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ‘ಕುಸ್ಮಾ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ೧೯೯೪ರ ಸರ್ಕಾರಿ ಆದೇಶವನ್ನು ಮತ್ತೆ ಪ್ರಶ್ನಿಸಿದ್ದು ವಿಚಾರಣೆ ಮುಂದುವರೆಯಿತು. ೩.೭.೨೦೦೮ರಂದು  ತೀರ್ಪು ನೀಡಿದ ರಾಜ್ಯದ ಉಚ್ಚ ನ್ಯಾಯಾಲಯವು ‘ಮಾತೃಭಾಷಾ ಮಾಧ್ಯಮವನ್ನು ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಿಗೆ ಮಾತ್ರ ಕಡ್ಡಾಯ ಮಾಡಬಹುದು. ಅನುದಾನ ರಹಿತ ಖಾಸಗಿ ಶಾಲೆಗಳಿಗೆ  ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿತು.

ಅಂದರೆ ಕೋರ್ಟಿನ ಈ ತೀರ್ಪು ಖಚಿತವಾಗಿ ಖಾಸಗಿಯವರ ಪರವಾಗಿದೆ. ಶೈಕ್ಷಣಿಕ ವಿವೇಕದ ನೀತಿಯನ್ನು ನಿರ್ಲಕ್ಷಿಸಿದೆ. ಉಚ್ಚನ್ಯಾಯಾಲಯದ ಈ ತೀರ್ಪು ೧೯೯೪ರ ಸರ್ಕಾರಿ ಆದೇಶವನ್ನು ರದ್ದುಗೊಳಿಸಲು ಸಂವಿಧಾನದ ೧೯(೧)ಜಿ ೨೬ ಮತ್ತು ೩೦(೧) ಪರಿದಚ್ಛೇದಗಳನ್ನು ಬಳಸಿಕೊಳ್ಳುತ್ತದೆ. ೧೯(೧)ಜಿ ಪರಿಚ್ಛೇದವು ‘ಭಾರತದ ನಾಗರಿಕರ ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ ವಹಿವಾಟುಗಳನ್ನು ನಡೆಸುವ ಹಕ್ಕನ್ನು ನೀಡುತ್ತದೆ, ಈ ಹಕ್ಕನ್ನು ಶಿಕ್ಷಣಕ್ಷೇತ್ರಕ್ಕೆ ಅನ್ವಯಿಸುವುದು ಸರಿಯೆ? ತನ್ಮೂಲಕ ಶಿಕ್ಷಣ ಕ್ಷೇತ್ರವೂ ಒಂದು  ವ್ಯಾಪಾರ ಎಂದು ಅಧಿಕೃತವಾಗಿ ಒಪ್ಪಿಕೊಂಡಂತಾಗಲಿಲ್ಲವೆ?
ಇನ್ನು, ೨೬ನೇ ಪರಿಚ್ಛೇದವು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ೩೦(೧) ನೇ ಪರಿಚ್ಛೇದವು - ಅಲ್ಪಸಂಖ್ಯಾತರು ತಮ್ಮ ಇಚ್ಛೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಆಡಳಿತ ನಡೆಸುವ ಹಕ್ಕನ್ನು ನೀಡುತ್ತದೆ. ಮಾತೃಭಾಷಾ ಮಾಧ್ಯಮವು ಅಲ್ಪಸಂಖ್ಯಾತರ ಭಾಷಾ ಮಾಧ್ಯಮಕ್ಕೂ ಮನ್ನಣೆ ಕೊಡುತ್ತದೆಯಾದ್ದರಿಂದ ಅವರ ಭಾಷೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೇಗೆ ಧಕ್ಕೆ ತರುತ್ತದೆಯೆಂದು ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಭಾಷಾಶಾಲೆಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ಸಂವಿಧಾನದ ೩೫೦ಎ ವಿಧಿಯನ್ನು ಎತ್ತಿಹಿಡಿದಿದೆ. (೩೫೦ಎ ವಿಧಿಯು ಭಾಷಾ ಅಲ್ಪಸಂಖ್ಯಾತರು  ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಅವಕಾಶವಿರಬೇಕೆಂದು ಹೇಳುತ್ತದೆ. ಕರ್ನಾಟಕದಲ್ಲಿ ಉರ್ದುವನ್ನೂ ಒಳಗೊಂಡಂತೆ ಸ್ಥಾಪಿತವಾಗಿರುವ ಅಲ್ಪಸಂಖ್ಯಾತ ಭಾಷಾಶಾಲೆಗಳ ಪಟ್ಟಿಯು ಸಂವಿಧಾನದ ಆಶಯವನ್ನು ಪೂರೈಸಿರುವುದಕ್ಕೆ ಸಾಕ್ಷಿಯಾಗಿದೆ.)

ಅದೇನೇ ಇರಲಿ, ೩.೭.೨೦೦೮ರ ತೀರ್ಪು ರಾಜ್ಯಸರ್ಕಾರದ ೧೯೯೪ರ ಆದೇಶಕ್ಕೆ ವಿರುದ್ಧವಾಗಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠವು ಈ ಅರ್ಜಿಯನ್ನು ಐವರು ನ್ಯಾಯಾಧೀಶರಿದ್ದ ಸಂವಿಧಾನ  ಪೀಠಕ್ಕೆ ವರ್ಗಾಹಿಸಿತು. ಈ ಸಂವಿಧಾನ ಪೀಠವು ರಾಜ್ಯ ಹೈಕೋರ್ಟ್ ನೀಡಿದ ೨೦೦೮ರ ತೀರ್ಪನ್ನೇ ಎತ್ತಿಹಿಡಿದಿದೆ. ೧೯೯೪ರ ಸರ್ಕಾರಿ ಆದೇಶವನ್ನು ರದ್ದು ಪಡಿಸಿದೆ ತನ್ನ  ತೀರ್ಪಿಗೆ ಅದು ಬಳಸಿಕೊಂಡಿರುವ ಸಂವಿಧಾನದ ಪರಿಚ್ಛೇದ ೧೯(೧), ಮುಖ್ಯವಾಗಿ  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಈ ದೇಶದ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ವಿವಿಧ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸುವ  ಸ್ವಾತಂತ್ರ್ಯವನ್ನು ನೀಡುವ ಈ ಪರಿಚ್ಛೇದವನ್ನು ಶಿಕ್ಷಣದ ಆಯ್ಕೆಯ ಹಕ್ಕಿಗೆ ಲಗತ್ತಿಸಿದ್ದು  ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುವುದು ಅಗತ್ಯ. ಪೋಷಕರು ತಮ್ಮ ಮಕ್ಕಳಿಗೆ ಯಾವ ಭಾಷಾಮಾಧ್ಯಮ ಬೇಕೆಂದು ಆಯ್ಕೆ  ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆಂಬ ತೀರ್ಪಿಗೂ ವಾಕ್ ಸ್ವಾತಂತ್ರ್ಯದ ಸಂಬಂಧ ಇದೆ ಎನ್ನುವುದು ತೀರಾ ತೆಳುವಾದ ತಿಳುವಳಿಕೆ. ೧೯(೧) ನೇ ಪರಿಚ್ಛೇದವು ಸಹ ಮುಖ್ಯವಾಗಿ ಅಭಿಪ್ರಾಯ- ಅಭಿವ್ಯಕ್ತಿಗೆ ಸಂಬಂಧಿಸಿರುವುದರಿಂದ ಭಾಷೆ ಮತ್ತು ಶಿಕ್ಷಣ ನೀತಿಯ ಆಯ್ಕೆಗೆ ಸಂಬಂಧಿಸಿದ್ದಲ್ಲ ಎಂದು ನನ್ನ ನಮ್ರ ತಿಳುವಳಿಕೆ. ಅಲ್ಪಸಂಖ್ಯಾತರ ಭಾಷೆಗೆ ಸಂಬಂಧಿಸಿದ ೩೫೦(ಎ) ಪರಿಚ್ಛೇದವನ್ನು ತನ್ನ ತೀರ್ಪಿಗಾಗಿ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಗಳು ಬಳಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ೧೯೯೪ರ ಆದೇಶವು ಅಲ್ಪಸಂಖ್ಯಾತರ ಹಕ್ಕು ಮತ್ತು ಆಯ್ಕೆಗಳಿಗೆ ಧಕ್ಕೆ ತರುವುದಿಲ್ಲ. ಈ ಆದೇಶಕ್ಕೆ ಸ್ವತಃ ಸುಪ್ರೀಂಕೋರ್ಟ್ ೧೯೯೩ ಮತ್ತು  ೧೯೯೯ರಲ್ಲಿ ಮನ್ನಣೆ ನೀಡಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು. ಸುಪ್ರೀಂಕೋರ್ಟಿನಿಂದಲೇ  ಎರಡು ಸಾರಿ ಮಾತೃಭಾಷಾ ಶಿಕ್ಷಣಕ್ಕೆ ಮನ್ನಣೆ ನೀಡಿದ ಆದೇಶವು ಹೊರ ಬಂದಿದ್ದು, ನ್ಯಾಯಾಧೀಶರು ಬದಲಾದ ಕೂಡಲೇ ರದ್ದಾಗುತ್ತದೆ ಅಂದರೆ ಏನರ್ಥ? ೧೯೯೩ ಮತ್ತು ೧೯೯೯ರಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ತಾರದೆ ಇದ್ದ ಆದೇಶ ಈಗ ತಂದುಬಿಟ್ಟಿತೆ? ಹಾಗಾದರೆ ನ್ಯಾಯಾಲಯದ ತೀರ್ಪುಗಳು ನ್ಯಾಯಾಧೀಶರ ವೈಯಕ್ತಿಕ ಅಭಿಪ್ರಾಯಕ್ಕನುಗುಣವಾಗಿ ಬರುತ್ತವೆಯೆ? ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಸಂಬಂಧಿಸಿವೆ.  ಈಗಂತೂ ವಾದ-ಪ್ರತಿವಾದ ಪೂರ್ಣವಾಗುವವರೆಗೂ ಕಾಯದೆ ನಡುನಡುವೆಯೇ ಅಡ್ಡಬಂದು ತಮ್ಮ ಅಭಿಪ್ರಾಯವನ್ನು ಹೇಳುವ ಪ್ರವೃತ್ತಿಯನ್ನು ಕೆಲ ನ್ಯಾಯಾಧೀಶರು ತೋರಿಸುತ್ತಿದ್ದಾರೆ-ಇದು ಸರಿಯಾದ ಕ್ರಮವೆ ಎಂಬ ಬಗ್ಗೆಯೂ ಚರ್ಚೆಯಾಗಬೇಕಾಗಿದೆ. ೧೯೯೩ ಮತ್ತು ೧೯೯೯ರಲ್ಲಿ ಮಾತೃಭಾಷಾ ಶಿಕ್ಷಣದ ಪರವಾಗಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ೨೦೧೪ರಲ್ಲಿ ಸುಪ್ರೀಂಕೋರ್ಟ್ ಉಲ್ಲಂಘಿಸಿದ್ದು ನ್ಯಾಯದ ನಿಂದನೆಯಲ್ಲವೆ ಎಂದು ಜನರು ಕೇಳುವಂತಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆ  ಮಾಧ್ಯಮದಲ್ಲಿ ಕಲಿತರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆಯೆಂದೂ ಉದ್ಯೋಗ ಸಿಗುವುದಿಲ್ಲವೆಂದೂ ಪೋಷಕರು ಭಾವಿಸುವುದು ಸಹ ಸರಿಯಲ್ಲ. ಯಾಕೆಂದರೆ, ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆಂಬ ಮಾನದಂಡದಿಂದ  ಯಾರೂ ಉದ್ಯೋಗ ಕೊಡುವುದಿಲ್ಲ. ಉದ್ಯೋಗವೊಂದಕ್ಕೆ ಬೇಕಾದ ವಿದ್ಯಾರ್ಹತೆ ಮತ್ತು ಪರಿಣತಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇಷ್ಟಕ್ಕೂ  ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವ ಅವಕಾಶ ಕರ್ನಾಟಕದಲ್ಲಿರುವುದರಿಂದ ಮುಂದೆ ಇಂಗ್ಲಿಷ್ ಮಾಧ್ಯಮಕ್ಕೆ  ಹೋಗಲು ಅನುಕೂಲವೂ ಆಗುತ್ತದೆ. ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ  ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಮತ್ತು ಒಂದನೇ ತರಗತಿಯಿಂದ ಒಂದು ಪಠ್ಯ ವಿಷಯವಾಗಿ ಇಂಗ್ಲಿಷ್ -ಎಂಬ ಪದ್ಧತಿ ಖಂಡಿತ ಯಾರ ಹಕ್ಕಿಗೂ ಉದ್ಯೋಗಕ್ಕೂ  ಧಕ್ಕೆ ತರುವುದಿಲ್ಲ.

ಈಗ ಮುಂದಿರುವ ದಾರಿ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಇಡಿ ರಾಷ್ಟ್ರದಲ್ಲಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮಕ್ಕೆ ಅವಕಾಶವಾಗುವಂತೆ ಸಂವಿಧಾನದ ತಿದ್ದುಪಡಿಗೆ ಪ್ರಯತ್ನಿಸುವುದು ಮುಖ್ಯ. ಈ ದಿಕ್ಕಿನಲ್ಲಿ ವಿವಿಧ ರಾಜ್ಯಗಳ ಸಮಾನ ಮನಸ್ಕರು ಸಂಘಟಿತರಾಗಬೇಕು. ಸಂಸದರ ಮತ್ತು ಕೇಂದ್ರ ಸರ್ಕಾರದ  ಮನವೊಲಿಸಬೇಕು. ಈ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು  ಕರ್ನಾಟಕ  ಸರ್ಕಾರವು ನಾಂದಿ  ಹಾಡಬೇಕು. ದೇಶದ ಶಿಕ್ಷಣ ತಜ್ಞರು, ಸಾಮಾಜಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರ ಸಹಕಾರವನ್ನು ಪಡೆದು ಅಭಿಪ್ರಾಯ ಮೂಡಿಸಬೇಕು. ವಿವಿಧ  ರಾಜ್ಯಗಳ ರಾಜಕೀಯ ಮುಖಂಡರಿಗೂ  ಮನವರಿಕೆ  ಮಾಡಿಕೊಡಬೇಕು. ಈ ದಿಕ್ಕಿನ ಮೊದಲ ಹೆಜ್ಜೆಯಾಗಿ ವಿವಿಧ ರಾಜ್ಯಗಳ ನೇತಾರರ, ಚಳವಳಿಗಾರರ ಮತ್ತು ಚಿಂತಕರ ಸಭೆಯನ್ನು ಕರೆದು ಚರ್ಚಿಸಿ ಚಾಲನೆ  ನೀಡಬೇಕು. ಜೊತೆಗೆ ಸಾರ್ವಜನಿಕರಿಗೆ ವಸ್ತುಸ್ಥಿತಿಯನ್ನು ತಿಳಿಸಿ  ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಕಡ್ಡಾಯವಾದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು.

ಇದೇ ಸಂದರ್ಭದಲ್ಲಿ ಕೆಲವರು ಮಾತೃಭಾಷೆ ಮತ್ತು ರಾಜ್ಯಭಾಷೆಯ ವಿಷಯದಲ್ಲಿ ಗೊಂದಲ ಎಬ್ಬಿಸುತ್ತಿರುವುದನ್ನು ಗಮನಿಸಿ, ಸ್ಪಷ್ಟನೆ ನೀಡಬಯಸುತ್ತೇನೆ. ಇಂಥವರ ಪ್ರಕಾರ ಮಾತೃಭಾಷಾ ಮಾಧ್ಯಮ ಎಂದು ಹೇಳಬಾರದು,  ರಾಜ್ಯಭಾಷಾ  ಮಾಧ್ಯಮ ಎಂದು ಮಾತ್ರ ಹೇಳಬೇಕು. ಆಗ ಎಲ್ಲವೂ ಸರಿಹೋಗುತ್ತದೆಯಂತೆ. ಹೀಗೆ ಹೇಳುವವರಿಗೆ ಸಂವಿಧಾನದ ಜ್ಞಾನವಾಗಲಿ,ವಾಸ್ತವದ ಅರಿವಾಗಲಿ ಇಲ್ಲ ಎಂಬ ಅನುಮಾನ ನನ್ನದು. ರಾಜ್ಯ ಭಾಷಾ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ಮಾಧ್ಯಮ- ಎಂದು ಸರ್ಕಾರವೊಂದು  ತೀರ್ಮಾನಿಸಿದರೆ ಸಂವಿಧಾನದ ೩೫೦ ಎ ವಿಧಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮಾತೃಭಾಷಾ ಸೌಲಭ್ಯಕ್ಕೆ ಅದು ವಿರುದ್ಧವಾಗುತ್ತದೆ. ವಾಸ್ತವದ ಇನ್ನೊಂದು ಅಂಶವೆಂದರೆ ಕೋಟ್ಯಾಂತರ ಜನರ ಮಾತೃಭಾಷೆಯಾದ ಉರ್ದುವಿಗೆ ಸಂಬಂಧಿಸಿದ ಯಾವುದೇ ರಾಜ್ಯವೂ ಇಲ್ಲ.  ಅದ್ದರಿಂದ ಉರ್ದುವಿಗೆ ರಾಜ್ಯಭಾಷೆಯ ಸ್ಥಾನಮಾನವಿಲ್ಲ. ರಾಜ್ಯಾಭಾಷಾ ಮಾಧ್ಯಮ ಮಾತ್ರ ಕಡ್ಡಾಯ ಎಂದರೆ ಉರ್ದುಭಾಷಿಕರು ಎಲ್ಲಿಗೆ ಹೋಗಬೇಕು? ಅಷ್ಟೇಕೆ, ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರು ತಮ್ಮ ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ  ಶಾಲೆ ತೆರೆಯುವುದರಿಂದ  ವಂಚಿತರಾಗುತ್ತಾರೆ. ಕನ್ನಡ  ಮಾಧ್ಯಮದಲ್ಲಿ ಅವರು ವ್ಯಾಸಂಗ ಮಾಡುವಂತೆಯೇ ಇಲ್ಲ. ಆಯಾ ರಾಜ್ಯಭಾಷೆಯಲ್ಲಿಯೇ ಪೂರ್ಣಪ್ರಮಾಣದ ವ್ಯಾಸಂಗ ಮಾಡಬೇಕಾಗುತ್ತದೆ. ಇದು ಎಲ್ಲ ಭಾಷಾ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ. ಇದೆಲ್ಲವನ್ನೂ ಪರಿಗಣಿಸಿಯೇ ಕರ್ನಾಟಕ ಸರ್ಕಾರವು ಸಂವಿಧಾನ ಸಮ್ಮತವಾಗುವಂತೆ ‘ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮ ಎಂದು ಆದೇಶದಲ್ಲಿ ನಮೂದಿಸಿದೆ. ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ  ಇದಕ್ಕೂ ಸಂಚಕಾರ ಬಂದಿದೆ.

ಭಾಷಾ ಹೋರಾಟವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮವನ್ನು ಅಳವಡಿಸುವಷ್ಟಕ್ಕೇ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರದ ಕೆಲವು ಕ್ರಮಗಳನ್ನು ಪ್ರಶ್ನಸಬೇಕು. ಸಂವಿಧಾನದ ಅವಕಾಶಗಳನ್ನು ಬಳಸಿಕೊಂಡು ದೇಶಭಾಷೆಗಳಿಗಿಂತ ಅಂದರೆ ವಿವಿಧ ರಾಜ್ಯಗಳ ಅಧಿಕೃತ  ಭಾಷೆಗಳಿಗಿಂತ ಹಿಂದಿ ಭಾಷೆಗೆ ಅತಿ ಹೆಚ್ಚು ಪ್ರಾಧಾನ್ಯ ಕೊಡಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರವು ಜಾರಿಗೊಳಿಸಲು ಸಜ್ಜಾಗಿರುವ ಹೊಸ ಶಿಕ್ಷಣ ನೀತಿಯಲ್ಲಿ ಸಂಸ್ಕೃತವನ್ನು ವಿಜೃಂಭಿಸಲಾಗಿದೆ. ಮಾಹಿತಿ ತಂತ್ರಜ್ಞಾನದ ಹೆಸರು ಹೇಳಿಕೊಂಡು ಆಂಗ್ಲಭಾಷೆಯೊಂದೇ ‘ಲೋಕಸಾಧನ ವೆಂಬಂತೆ ಬಿಂಬಿಸಲಾಗುತ್ತಿದೆ. ಆಂಗ್ಲಭಾಷೆಯನ್ನು ಶಿಕ್ಷಣದಲ್ಲಿ ತಳವೂರುವಂತೆ  ಮಾಡಿ ಗಟ್ಟಿಗೊಳಿಸಿದವರು ಬ್ರಿಟಿಷರು. ಆಡಳಿತದಲ್ಲಿ ಅನಿವಾರ್ಯವಾಗಿ ಕನ್ನಡವನ್ನು ಬೆಳೆಸಿದ ಆಂಗ್ಲರ ಆಡಳಿತವು ಶಿಕ್ಷಣಕ್ಕೆ  ಇದೇ ನೀತಿಯನ್ನು ಅನುಸರಿಸಲಿಲ್ಲ. ಮಾಹಿತಿಗಾಗಿ ಹೇಳುವುದಾದರೆ ೧೮೦೦ರಲ್ಲಿ ಹೊನ್ನಾವರದಲ್ಲಿ ಮೊದಲ ಆಂಗ್ಲಮಾಧ್ಯಮ ಶಾಲೆ ಆರಂಭವಾಯಿತು. ಆನಂತರ  ೧೮೧೦ಕ್ಕೆ  ಲಂಡನ್ ಮಿಷನ್ ನಿಂದ ಬಳ್ಳಾರಿ ಮತ್ತು  ಬೆಳಗಾವಿಯಲ್ಲಿ, ೧೮೨೦ಕ್ಕೆ ಬೆಂಗಳೂರಿನಲ್ಲಿ, ಅದೇ ವರ್ಷ ವೆಸ್ಲಿಯನ್‌ಮಿಷನ್‌ನಿಂದ  ಮೈಸೂರಿನಲ್ಲಿ, ೧೮೩೫ಕ್ಕೆ ಹಡ್ಸನ್ ಮಿಷನ್‌ನಿಂದ ಮೈಸೂರು ಮತ್ತು ಮಂಗಳೂರಿನಲ್ಲಿ, ೧೮೪೮ಕ್ಕೆ  ಧಾರವಾಡ, ೧೮೫೫ಕ್ಕೆ ಮಡಿಕೇರಿಗಳಲ್ಲಿ ಸಂಪೂರ್ಣ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಯಿತು.

ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿ ಹೇಗೆ ವ್ಯಾಪಿಸಿತೆಂದರೆ ೧೯೧೪ರ  ವೇಳೆಗೆ ಕನ್ನಡ ನುಡಿ ಪ್ರದೇಶಗಳಲ್ಲಿ ೩೨೨ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳಿದ್ದರೆ, ೧೭೩ ಶಾಲೆಗಳು ಮಾತ್ರ ಕನ್ನಡ ಮಾಧ್ಯಮದಲ್ಲಿದ್ದವು. ೨೬ ಸಂಸ್ಥೆಗಳಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಿದ್ದರೆ, ಕೇವಲ ೫ ಸಂಸ್ಥೆಗಳಲ್ಲಿ  ಮಾತ್ರ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿದ್ದವು. ಸತ್ಯ ಸಂಗತಿಯೆಂದರೆ ಸ್ವಾತಂತ್ರ್ಯೋತ್ತರ ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಹೆಚ್ಚಾದವು. ಈಗ ಅನೇಕ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು  ಮುಚ್ಚುವ ಸ್ಥಿತಿಗೆ ಬಂದಿವೆ. ಸರ್ಕಾರವೂ ವಿಲೀನ ಎಂಬ ಹೆಸರಿನಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಜೊತೆಗೆ ಆರ್.ಟಿ.ಇ. ಅಡಿಯಲ್ಲಿ ತಾನೇ ಹಣಕೊಟ್ಟು ಶೇ. ೨೫ರಷ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದೆ. ಈ  ಮೂಲಕ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಇಲ್ಲ ಖಾಸಗಿ ಶಾಲೆಗಳಲ್ಲಿ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಂತಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣದ  ಬದಲು ದುರ್ಬಲೀಕರಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಖಾಸಗಿ ಶಾಲೆಗಳ ಶಿಕ್ಷಣದ ಬಗ್ಗೆ ಅಷ್ಟೊಂದು ಅಕ್ಕರೆಯಿದ್ದರೆ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಅವರು ಉಚಿತ ಪ್ರವೇಶ ಕೊಡುವ ಕಾಯಿದೆ ತರಲಿ. ಇಂಥ ಕಾಯಿದೆಯನ್ನು ಕೆಲ ನ್ಯಾಯಾಧೀಶರು ರದ್ದು ಪಡಿಸಬಹುದೇನೊ ಗೊತ್ತಿಲ್ಲ. ಆದರೂ ಅಂಥ ಪ್ರಯತ್ನವನ್ನಾದರೂ ಮಾಡುವ  ಬದಲು ಸರ್ಕಾರವು ಆರ್.ಟಿ.ಇ. ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿದೆ. ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಶಕ್ತಿಗೆ ಕುಂದುಂಟಾಗುತ್ತಿದೆ.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ
ಸರ್ಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕಾದ ಕೆಲಸವೆಂದರೆ-ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ. ಇವತ್ತಿನ ಶಿಕ್ಷಣ ಪದ್ಧತಿಯ ಪ್ರಕಾರ ಅಂಗನವಾಡಿಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಒಂದೇ ವಯಸ್ಸಿನ  ಹಸುಗೂಸುಗಳಲ್ಲಿ ಬಡಮಕ್ಕಳು ಅಂಗನವಾಡಿಗೆ ಬರುತ್ತಾರೆ; ಇತರರು ಎಲ್.ಕೆ.ಜಿ, ಯು.ಕೆ.ಜಿ.ಗಳಿಗೆ  ಹೋಗುತ್ತಾರೆ. ಹಸುಗೂಸುಗಳ ಮನಸ್ಸಿನಲ್ಲಿಯೇ ಕೀಳರಿಮೆ ಮತ್ತು ಮೇಲರಿಮೆಗಳ ಕಳೆಯನ್ನು ಬೆಳೆಯುವ ಈ ಪದ್ಧತಿ ಅಮಾನವೀಯವಾದುದು. ಇನ್ನು ಪ್ರಾಥಮಿಕ ಶಾಲೆಗೆ ಬಂದರೂ ಇದೇ  ಪರಿಪಾಠ. ಬಡವರಿಗೊಂದು ಬಲ್ಲಿದರಿಗೊಂದು ಎಂಬಂತೆ ಸರ್ಕಾರಿ ಶಾಲೆ-ಖಾಸಗಿ ಶಾಲೆ, ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ- ಆಂಗ್ಲಭಾಷಾ ಮಾಧ್ಯಮ ಎಂದು ವಿಂಗಡಿಸಿದ ಶಿಕ್ಷಣವಿಧಾನ. ಪ್ರೌಢಶಾಲೆಗೆ ಬಂದರೂ ಇದೇ ಹಾದಿ. ಜೊತೆಗೆ ಮಾದರಿಶಾಲೆಗಳೆಂಬ ಪ್ರತ್ಯೇಕ ವ್ಯವಸ್ಥೆ. ಮೊರಾರ್ಜಿ ಶಾಲೆ, ರಾಣಿಚೆನ್ನಮ್ಮ ಶಾಲೆ, ಕೇಂದ್ರದ  ನವೋದಯ ಶಾಲೆ-ಹೀಗೆ ಕೆಲವರಿಗೆ ಸುಸಜ್ಜಿತ ಮಾದರಿಯ ಶಾಲೆಗಳು, ಅನೇಕರಿಗೆ ಅದೇ ಹಳೆಯ ಸೋರು ಸೂರಿನ ಶಾಲೆಗಳು. ಪ್ರಾಥಮಿಕ  ಮತ್ತು ಪ್ರೌಢ ಶಿಕ್ಷಣದಲ್ಲಿ ಏಕರೂಪತೆ ಮತ್ತು ಸಮಾನತೆಯ ಶಿಕ್ಷಣ ಪದ್ಧತಿಯನ್ನು ರೂಪಿಸಿ ಜಾರಿ ಮಾಡಲಾಗದ ಆಡಳಿತಕ್ಕೆ ಅಂತಃಕರಣವಿಲ್ಲ. ಹೀಗೆ ಅಸಮಾನತೆಯನ್ನು ಮುಂದುವರೆಸಲು ಪ್ರಬಲ ಕಾರಣಗಳೂ ಇಲ್ಲ. ಇನ್ನೂ ಎಂಥ  ವಿಪರ್ಯಾಸವಿದೆಯೆಂದರೆ ಕೆಲವು ಮಾದರಿ ಶಾಲೆಗಳನ್ನು ಸಮಾಜಕಲ್ಯಾಣ ಇಲಾಖೆ ನಡೆಸುತ್ತದೆ; ಮಾಮೂಲಿ ಶಾಲೆಗಳನ್ನು ಶಿಕ್ಷಣ ಇಲಾಖೆ  ನಡೆಸುತ್ತದೆ. ಒಟ್ಟಾರೆ ಹೇಳುವುದಾದರೆ ಒಡಲೊಳಗೆ ಅಸಮಾನತೆಯ ಆಯಾಮವನ್ನು ಇಟ್ಟುಕೊಂಡು ಹಸುಗೂಸುಗಳಲ್ಲಿ ವ್ಯತ್ಯಾಸ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ರದ್ದುಮಾಡಿ ಮೂಲಭೂತ ಬದಲಾವಣೆಗಳನ್ನು ತರಬೇಕು. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು. ಈ ದಿಕ್ಕಿನಲ್ಲಿ ಮುಂದಿನ ಅಂಶಗಳನ್ನು ಗಮನಿಸಬೇಕು;

೧. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು  ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು. ಉಳಿದ ಹಳ್ಳಿಗಳಲ್ಲಿ ಅಗತ್ಯಕ್ಕನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಗಳಿರಬೇಕು. ಗ್ರಾಮಪಂಚಾಯಿತಿಗೊಂದು ಇರುವ ಸುಸಜ್ಜಿತ ಶಾಲೆಗೆ ಹತ್ತಿರದ ಊರುಗಳಿಂದ ಮಕ್ಕಳು ಬರಲು ವಾಹನ ವ್ಯವಸ್ಥೆ ಮಾಡಬೇಕು. ನಗರ ಮತ್ತು ಪಟ್ಟಣಗಳಲ್ಲಿ ಪ್ರತಿ ವಾರ್ಡಿಗೊಂಡು ಇಂತಹ ಶಾಲೆಯನ್ನು ಸ್ಥಾಪಿಸಬೇಕು. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಿ ಸಮಾನ ಶಿಕ್ಷಣಕ್ಕೆ ಬುನಾದಿ ಹಾಕಬೇಕು. ಶಿಕ್ಷಣದ ಹೊಣೆ ಪೂರ್ಣವಾಗಿ ಶಿಕ್ಷಣ ಇಲಾಖೆಯದಾಗಿರಬೇಕು.

೨ ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು.
೩. ಬಹುಮುಖ್ಯವಾಗಿ, ಸರ್ಕಾರವು  ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಂಗನವಾಡಿಗಳನ್ನು ಪ್ರಾಥಮಿಕ ಪೂರ್ವ ಶಾಲೆಗಳಾಗಿ ರೂಪಾಂತರಿಸಿ ಕ್ರಮಬದ್ಧಗೊಳಿಸುವಂತೆ ಮಾಡಿದ ಶಿಫಾರಸ್ಸಿಗೆ   ಅಂದಿನ ಸರ್ಕಾರ  ತಾತ್ವಿಕ ಒಪ್ಪಿಗೆ  ನೀಡಿತ್ತು. ‘ಎಲ್.ಕೆ.ಜಿ. ಯು.ಕೆ.ಜಿ.ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿ ಆನಂತರ ಒಂದನೇ ತರಗತಿಯಿಂದ ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮದ ಜೊತೆಗೆ ಇಂಗ್ಲಿಷನು ಒಂದು ಭಾಷೆಯಾಗಿ ಕಲಿಸಿದರೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನೂ ಒದಗಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು.
೪. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು. ಈ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು, ಕನ್ನಡ ಕಾರ್ಯಕ್ರಮಗಳ ಆಯೋಜನೆ, ಕನ್ನಡ  ಸಾಂಸ್ಕೃತಿಕ   ಸಾಧಕರೊಂದಿಗೆ ಸಂವಾದ, ಕನ್ನಡ ರಾಜ್ಯೋತ್ಸವದ ಕಡ್ಡಾಯ ಆಚರಣೆ, ಕನ್ನಡ ಭಾಷಾಧಾರಿತ ವಿವಿಧ ಸ್ಪರ್ಧೆ ಇತ್ಯಾದಿಗಳನ್ನು ಇಂತಿಷ್ಟು ನಡೆಸಬೇಕೆಂಬ ನಿಯಮಾವಳಿಯು ಶಾಲಾ  ಮಂಜೂರಾತಿಯ ಭಾಗವಾಗಬೇಕು. ಹೀಗೆ ಕನ್ನಡ ಪರಿಚಯ ಮತ್ತು ಪರಿಸರವನ್ನು  ಕಾಪಾಡುವ ಕೆಲಸವಾಗಬೇಕು.
೫. ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ  ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು.
೬. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ‘ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.

ಉನ್ನತ ಶಿಕ್ಷಣದ ವೈಪರೀತ್ಯ
ಇನ್ನು ಉನ್ನತ ಶಿಕ್ಷಣಕ್ಕೆ ಬಂದರೆ ಅಲ್ಲಿಯೂ ಅಸಮಾನತೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ. ಆಡಳಿತಾತ್ಮಕ ಸುಧಾರಣೆಗಳನ್ನೇ ಶೈಕ್ಷಣಿಕ ಸುಧಾರಣೆಗಳೆಂದು ಭ್ರಮಿಸಿದವರ ಬೌದ್ಧಿಕ ರಾಜಕಾರಣಕ್ಕೆ ಉನ್ನತ ಶಿಕ್ಷಣ ಬಲಿಯಾಗುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಒಂದೇ ಕಾಯಿದೆ ಜಾರಿಗೊಳಿಸುವ ಅಪಾಯಕಾರಿ ಅಲೋಚನೆ ಮುಂಚೂಣಿಯಲ್ಲಿದೆ. ಹಾಗಾದರೆ ವಿಷಯಾಧಾರಿತ ವಿಶಿಷ್ಟ ಸ್ವರೂಪದ  ವಿಶವಿದ್ಯಾಲಯಗಳನ್ನು ಸ್ಥಾಪಿಸಿದವರೆಲ್ಲ ಮೂರ್ಖರೇನು? ಉದಾಹರಣೆಗಾಗಿ, ಈಗ ಕನ್ನಡ ವಿಶ್ವವಿದ್ಯಾಲಯದ  ವಿಷಯಕ್ಕೆ ಬರೋಣ. ಕನ್ನಡ ಕೇಂದ್ರಿತ ಸಂಶೋಧನೆ ಮತ್ತು ಪ್ರಕಟಣೆಗಾಗಿ ಸ್ಥಾಪಿತವಾದ ಕನ್ನಡ ವಿಶ್ವವಿದ್ಯಾಲಯವು ಅನೇಕ ನಿಕಾಯಗಳ ಮೂಲಕ ತನಗೆ ದತ್ತವಾದ ಕೆಲಸವನ್ನು ಮಾಡುತ್ತ ಬಂದಿದೆ. ಕನ್ನಡ ವಿಶ್ವವಿದ್ಯಾಲಯದ ಕಾರ್ಯವಿಸ್ತಾರ ಸಾಮಾನ್ಯ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗ/ಅಧ್ಯಯನ ಕೇಂದ್ರಗಳಿಗೆ ಇರುವುದಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಕನ್ನಡ ವಿಭಾಗಗಳು ಕನ್ನಡ ಭಾಷೆ-ಸಾಹಿತ್ಯಕ್ಕೆ ಮಾತ್ರ ಬದ್ಧವಾಗಿದ್ದರೆ ಕನ್ನಡ ವಿಶ್ವವಿದ್ಯಾಲಯವು ಎಲ್ಲ ಜ್ಞಾನ ಶಾಖೆಗಳನ್ನೂ ಶೋಧನಾತ್ಮವಾಗಿ ಕನ್ನಡದಲ್ಲಿ ಕಾಣಿಸುವ ಕ್ರಿಯಾ ಬದ್ಧತೆಯನ್ನು ಹೊಂದಿದೆ. ಇದೇ ರೀತಿ ತಂತಮ್ಮ ಕಾರ್ಯಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ವಿಶೇಷ  ವಿಶ್ವವಿದ್ಯಾಲಯಗಳು ಕರ್ನಾಟಕದಲ್ಲಿವೆ. ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ, ಇತ್ಯಾದಿ  ಹೀಗೆ ಉದಾಹರಿಸಬಹುದು.  ವಿಶೇಷ ವಿಶ್ವವಿದ್ಯಾಲಯಗಳು  ಒಂದೊಂದೂ ವಿಶಿಷ್ಟ. ಇವು ಸಾಮಾನ್ಯ ವಿಶ್ವವಿದ್ಯಾಲಯಗಳ ಮಾದರಿಯ ಪದವಿ, ಸ್ನಾತಕೋತ್ತರ ಪದವಿಗಳನ್ನು ಕೊಡುವ ಬದಲು ನಿರ್ದಿಷ್ಟ ವಿಷಯ  ಕೇಂದ್ರಿತವಾಗಿರುತ್ತವೆ; ಪ್ರತ್ಯೇಕ ಅಧಿನಿಯಮಗಳನ್ನು ಹೊಂದಿವೆ. ಸಾಮಾನ್ಯ ವಿಶ್ವವಿದ್ಯಾಲಯಗಳಂತೆಯೇ ಎಲ್ಲಾ ವಿಶ್ವವಿದ್ಯಾಲಯಗಳನ್ನೂ ಒಂದೇ ಕಣ್ಣಿನಿಂದ ನೋಡುವ ಏಕರೂಪಿ ಅಧಿನಿಯಮ ತರುವುದು ಸೂಕ್ತವಲ್ಲ; ಸೂಕ್ಷ್ಮವಲ್ಲ. ಅದರ ಬದಲು ಇಂಥ ವಿಶಿಷ್ಟ ವಿಶ್ವವಿದ್ಯಾಲಯಗಳನ್ನು ಸಶಕ್ತಗೊಳಿಸಿ ಜಾಗತೀಕರಣದ ಏಕಮುಖತೆಗೆ ಬಹುಮುಖತೆಯ ಉತ್ತರಕೊಡಬೇಕು.

ಉನ್ನತ ಶಿಕ್ಷಣದಲ್ಲಷ್ಟೇ ಅಲ್ಲ ಪ್ರಾಥಮಿಕ-ಪ್ರೌಢಶಿಕ್ಷಣದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ  ಪ್ರಯತ್ನಗಳು ನಡೆದಿವೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನವೇ ಮೇಲುಗೈ ಸಾಧಿಸುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆಡಳಿತಾತ್ಮಕ ವಿಷಯಗಳಿಗೆ ತಂತ್ರಜ್ಞಾನವನ್ನು ಬಳಸುವುದಕ್ಕೂ  ಬೋಧನೆಗೆ ಬಳಸುವುದಕ್ಕೂ ವ್ಯತ್ಯಾಸವಿದೆ. ತರಗತಿಗಳಲ್ಲಿ ತಂತ್ರಜ್ಞಾನವು ಪೂರಕವಾಗಿರಬೇಕೇ ಹೊರತು ತಂತ್ರಜ್ಞಾನವೇ ತರಗತಿಯಾಗಬಾರದು. ಗುರುವಾಗಬಾರದು. ಗುರುವಿಗೆ ಸಹಾಯಕ ಮಾತ್ರವಾಗಿರಬೇಕು. ತಂತ್ರಜ್ಞಾನದ ಪರಿಕರಗಳನ್ನೇ (ಕಂಪ್ಯೂಟರ್, ಟ್ಯಾಬ್, ಮೊಬೈಲ್ ಇತ್ಯಾದಿ) ಗುರುವಾಗಿಸಿ ಅವುಗಳ ಮೂಲಕವೇ ಪಾಠಗಳನ್ನು ರವಾನಿಸುವ ಯೋಜನೆ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನೇ ಕಡಿದು ಹಾಕುತ್ತದೆ; ಕಂಪನಿಗಳಿಗೆ ಲಾಭದಾಯಕವಾಗುತ್ತದೆ. ನಾನು ತಂತ್ರಜ್ಞಾನದ ವಿರೋಧಿಯಲ್ಲ. ನನ್ನ ದೃಷ್ಟಿಯಲ್ಲಿ ತಂತ್ರಜ್ಞಾನವು ಜ್ಞಾನವಾಗಬೇಕೇ ಹೊರತು ಉದ್ಯಮದ  ತಂತ್ರ ಮಾತ್ರವಾಗಬಾರದು. ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸುವಾಗ ವಿವೇಕ ಮತ್ತು ಔಚಿತ್ಯಜ್ಞಾನ ಮುಖ್ಯ ಎಂಬುದು ನನ್ನ ಕಾಳಜಿ. ಯಾವತ್ತೂ ಅಧ್ಯಾಪಕರು ಮತ್ತು  ವಿದ್ಯಾರ್ಥಿಗಳ  ನಡುವೆ ಜಡಗೋಡೆ ನಿರ್ಮಾಣವಾಗಬಾರದು, ಯಾಂತ್ರಿಕವಾಗಬಾರದು.

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ
ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಕನ್ನಡವನ್ನು ತಂತ್ರಜ್ಞಾನದ  ಭಾಷೆಯನ್ನಾಗಿ ವಿಸ್ತರಿಸುವ ಯೋಜನೆಗಳನ್ನು ಸರ್ಕಾರವು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಭಾಷಾಶಾಸ್ತ್ರೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅಗತ್ಯವೂ ಇದೆ. ಇದಕ್ಕಾಗಿ ಕರ್ನಾಟಕ ಸರ್ಕಾರವು ‘ಯೂನಿಕೋಡ್ ಕನ್ಸಾರ್ಟಿಯಂ ಎಂಬ ಜಾಗತಿಕ ಸಂಸ್ಥೆಯಲ್ಲಿ ಪೂರ್ಣ  ಪ್ರಮಾಣದ ಸದಸ್ಯತ್ವದ  ಮೂಲಕ ಮತ ಚಲಾವಣೆಯ ಹಕ್ಕನ್ನು ಪಡೆಯಬೇಕು. ಇದರಿಂದ ಜಾಗತಿಕ ಸಂಸ್ಥೆಯಲ್ಲಿ ಕನ್ನಡದ ಸಮಸ್ಯೆಗಳನ್ನು ಗಮನಕ್ಕೆ ತಂದು ಸರಿಪಡಿಸಬಹುದು. ಕಂಪ್ಯೂಟರ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಕನ್ನಡ ಅಕ್ಷರಗಳು ಮತ್ತು ತಂತ್ರಜ್ಞಾನದ ಶಿಷ್ಟತೆಯನ್ನು ರೂಪಿಸುವುದಕ್ಕೆ ಒಂದು ಶಾಶ್ವತ ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಭಾಷಾ ತಜ್ಞರು ಜೊತೆಗೆ ತಂತ್ರಜ್ಞರು ಇರಬೇಕು.

ಕರ್ನಾಟಕದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿದ್ದರೂ ಅವುಗಳಿಂದ ಕನ್ನಡಕ್ಕೆ ಆಗಿರುವ ಅನುಕೂಲ ಸೊನ್ನೆಯೆಂದೇ ಹೇಳಬೇಕು. ಈ ಸಂಸ್ಥೆಗಳನ್ನು ಕನ್ನಡಕ್ಕಾಗಿ ತೊಡಗಿಸಿಕೊಳ್ಳುವ ಕೆಲಸವಾಗಬೇಕು, ಜೊತೆಗೆ ಕರ್ನಾಟಕ ಸರ್ಕಾರವು ತಂತ್ರಾಂಶ ನೀತಿಯಲ್ಲಿ ಭಾಷೆಗೆ ಒತ್ತು ನೀಡುವ ಅಂಶವನ್ನು ಅಳವಡಿಸಿಕೊಳ್ಳಬೇಕು, ಸರ್ಕಾರದ ಇ- ಇಲಾಖೆಯ ಕನ್ನಡ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಒಟ್ಟಾರೆ ಕನ್ನಡವನ್ನು ಮಾಹಿತಿ ತಂತ್ರಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸುವ ಕೆಲಸವು ಪ್ರತ್ಯೇಕ ವಿಭಾಗ ಹಾಗೂ ತಂಡದ ಮೂಲಕ ಯೋಜನಾ ಬದ್ಧವಾಗಿ ಶೀಘ್ರಗತಿಯಲ್ಲಿ ನಡೆಯಬೇಕು, ಇದು ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಬೆಳೆಸುವ ಕ್ರಮ.
ಹೀಗೆ ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಮತ್ತು ಪ್ರಗತಿಯನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಬದಲು  ಶಿಕ್ಷಣದಲ್ಲಿ ಅಗತ್ಯಮೀರಿ ತಂತ್ರಜ್ಞಾನದ ಸರ್ವಾಧಿಕಾರ ಸ್ಥಾಪಿಸುವುದು ಸರಿಯಲ್ಲ. ಕಂದಕ ನಿರ್ಮಾಣವೂ ಸೂಕ್ತವಲ್ಲ.

ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ
ಈ ಹಿನ್ನೆಲೆಯಲ್ಲಿ ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದ ನಡುವಿನ ಕಂದಕ ಮತ್ತು ಕೀಳರಿಮೆಯ ಸಮಸ್ಯೆಯನ್ನು ಪ್ರಸ್ತಾಪಿಸಲೇಬೇಕು. ಇಂದು ವೃತ್ತಿ ಶಿಕ್ಷಣಕ್ಕಿರುವ ಕಿಮ್ಮತ್ತು ಸಾಮಾನ್ಯ ಶಿಕ್ಷಣಕ್ಕೆ ಇಲ್ಲದಂತಾಗಿದೆ. ವೃತ್ತಿ ಶಿಕ್ಷಣ ಶ್ರೇಷ್ಠ, ಸಾಮಾನ್ಯ ಶಿಕ್ಷಣ ಕನಿಷ್ಠ ಎಂಬಂತಾಗಿದೆ. ಈ ಸಮಸ್ಯೆಯನ್ನು ಸರಿಮಾಡುವುದು ಹೇಗೆಂದು ಚಿಂತಿಸುವ, ಯೋಚಿಸುವ ಬದಲು ಏಕಮುಖೀ ಸಂಚಾರಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ, ಇಡೀ ಉನ್ನತ ಶಿಕ್ಷಣವನ್ನು ಪುನರ್ ಸಂಯೋಜಿಸುವ ಅಗತ್ಯವಿದೆ. ಇತಿಹಾಸ, ಸಾಹಿತ್ಯ, ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನಗಳಂಥ ವಿಷಯಗಳು ವೃತ್ತಿ ಶಿಕ್ಷಣದ ಭರಾಟೆಯಲ್ಲಿ ಅಪ್ರಯೋಜಕವೆಂಬ ಸ್ಥಿತಿ ನಿರ್ಮಾಣವಾಗುತ್ತಿದ್ದು, ವೃತ್ತಿ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣದ ಪುನರ್ ಸಂಯೋಜನೆಯ ಮೂಲಕ ಪರಿಹಾರ ಹುಡುಕಬೇಕಾಗಿದೆ.
ಮಾಹಿತಿಗಾಗಿ ಹೇಳವುದಾದರೆ, ಕೆಲವು ವರ್ಷಗಳ ಹಿಂದೆ ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ನಮ್ಮ ದೇಶದ ವಿಶ್ವವಿದ್ಯಾಲಯಗಳು ಮಾಡಿಕೊಂಡ ಎಂ.ಓ. ಯು. (ಒ.ಔ.U.)ಗಳ ಸರಾಸರಿ ಪ್ರಮಾಣ ಹೀಗಿದೆ.
ಅ. ವಾಣಿಜ್ಯ ವ್ಯವಹಾರ ಕೋರ್ಸ್ - ಶೇ. ೬೦; ಆ. ವಾಸ್ತು ಶಿಲ್ಪ ಕೋರ್ಸ್ - ಶೇ. ೧೫ ಇ. ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್- ಶೇ. ೧೦ ಈ. ಫ್ಯಾಷನ್ ಡಿಸೈನಿಂಗ್ ಕೋರ್ಸ್ - ಶೇ - ೧೦ ಉ. ಮಾನಸಿಕ ವಿಷಯಗಳ ಒಟ್ಟು ಕೋರ್ಸ್‌ಗಳು ಶೇ. ೫.
ಈ ಸರಾಸರಿ ಪ್ರಮಾಣವು ನಮ್ಮ ಶಿಕ್ಷಣವು ಸಾಗುತ್ತಿರುವ ದಿಕ್ಕನ್ನು  ಸೂಚಿಸುತ್ತದೆ. ನಾನು ಓದುತ್ತಿರುವಾಗ ವಿಜ್ಞಾನ ಓದುವವರು ಬುದ್ಧಿವಂತರು, ವಾಣಿಜ್ಯ ಪದವಿ ಓದುವವರು ಜಾಣರು, ಕಲಾವಿಭಾಗಕ್ಕೆ ಬಂದವರು ದಡ್ಡರು, ಅದರಲ್ಲೂ ಕನ್ನಡ ಸಾಹಿತ್ಯ ಪದವಿಗೆ ಬಂದವರು ಶತದಡ್ಡರು ಎಂದು ಆಡಿಕೊಳ್ಳುತ್ತಿದ್ದರು. ಈಗ ನೋಡಿ ಬುದ್ಧಿವಂತರ ಕೋರ್ಸ್ ಎನ್ನುತ್ತಿದ್ದ ವಿಜ್ಞಾನಕ್ಕೇ ಹೆಚ್ಚು ವಿದ್ಯಾರ್ಥಿಗಳಿಲ್ಲ. ಎಲ್ಲರೂ ವಾಣಿಜ್ಯ ಮುಖಿವ್ಯಾಸಂಗಿಗಳು. ಎಲ್ಲವೂ ವಾಣಿಜ್ಯಮುಖಿಯಾದರೆ ಜ್ಞಾನ ಮುಖಿಯಾಗುವುದು ಯಾವಾಗ? ಒಟ್ಟು ಶಿಕ್ಷಣ ಕ್ಷೇತ್ರದಲ್ಲಿ ಯಾವ ಹಂತದವರೆಗೆ ಜ್ಞಾನಮುಖಿ ಶಿಕ್ಷಣ, ಯಾವ ಹಂತದಿಂದ  ಉದ್ಯೋಗಮುಖಿ ಶಿಕ್ಷಣ ಎಂಬ ವಿವೇಚನೆ ಮತ್ತು ವಿವೇಕದ ಆಧಾರದ ಮೇಲೆ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು. ಕಂದಕಗಳನ್ನು ಮುಚ್ಚಬೇಕು. ಇಂದು ಕಂದಕಗಳನ್ನು ಮುಚ್ಚುವ ಬದಲು ಕಂದಕಗಳಲ್ಲಿ ಕೆಡವುವ ಕೆಲಸವೇ ಹೆಚ್ಚಾಗಿ ನಡೆಯುತ್ತಿದೆ. ಅದನ್ನು ಹೊಸ ಪ್ರಯೋಗ ಎಂದು  ವಿವರಿಸಲಾಗುತ್ತಿದೆ. ಶಿಕ್ಷಣದ ಶರೀರ ಶೃಂಗಾರವೇ ಸುಧಾರಣೆ ಎಂಬ  ಸಂಭ್ರಮ ಕಾಣಿಸುತ್ತಿದೆ.  ಆತ್ಮ ಬೇಕಾದಂತೆ ಕಾಣುತ್ತಿಲ್ಲ. ಎಲ್ಲ ವಿಶ್ವವಿದ್ಯಾಲಯಗಳಿಗೂ ಒಂದೇ ಪಠ್ಯಪುಸ್ತಕ ನಿಗದಿಪಡಿಸುವುದು ಅದನ್ನು ತಂತ್ರಜ್ಞಾನಕ್ಕೆ ಅಳವಡಿಸಲು ಕಂಪನಿಗಳಿಗೆ ಕೋಟ್ಯಾಂತರ ಹಣ ಕೊಡುವುದು, ಕುಲಪತಿಗಳು ಪಾಠಮಾಡಿ ಎನ್ನುವುದು, ಪ್ರಧಾನ ಕಾರ್ಯದರ್ಶಿಯೇ  ಕುಲಪತಿಗಳಿಗೆ  ನಿರ್ದೇಶನ ನೀಡುವುದು, ಸರ್ಕಾರದ ವಿಶ್ವವಿದ್ಯಾಲಯಗಳನ್ನು  ಮಾತ್ರ ಗುರಿ ಮಾಡಿಕೊಂಡು ಖಾಸಗಿ ವಿಶ್ವವಿದ್ಯಾಲಯಗಳು  ಮತ್ತು ಸ್ವಾಯತ್ತ ಕಾಲೇಜುಗಳ ವಹಿವಾಟಿನತ್ತ ನೋಡದೆ ಇರುವುದು ಯಾವ ಶಿಕ್ಷಣ ಸುಧಾರಣೆ?
ಸ್ವಾಯತ್ತ ಕಾಲೇಜುಗಳದು ಯಾರೂ ಪ್ರಶ್ನಿಸದ ದಾರಿ- ಖಾಸಗಿ ವಿಶ್ವವಿದ್ಯಾಲಯಗಳದು ಅಂಜದ ಹಾದಿ. ಸರ್ಕಾರಿ ವಿಶ್ವವಿದ್ಯಾಲಯಗಳದು ದುರ್ಬಲ ಗಾದಿ. ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ, ಸರ್ಕಾರ ಮತ್ತು ರಾಜ್ಯಪಾಲರ ವಿವೇಚನೆಯಿದ್ದರೆ, ಖಾಸಗಿ, ಡೀಮ್ಡ್ ವಿ.ವಿ.ಗಳಿಗೆ ಮ್ಯಾನೇಜ್‌ಮೆಂಟ್ ಇಚ್ಚಿಸಿದವರೇ ಕುಲಪತಿ. ಉನ್ನತ ಶಿಕ್ಷಣ  ಪರಿಷತ್ ಸಭೆಯಲ್ಲಿ ಇವರೆಲ್ಲ ಸಮಾನ. ನಿಯಂತ್ರಣ ಮತ್ತು ನಿರ್ದೇಶನ ಮಾತ್ರ ಸರ್ಕಾರಿ ವಿ.ವಿ.ಕುಲಪತಿಗಳಿಗೆ. ಅದೂ ನೌಕರ ಶಾಹಿಯ ಎದುರು ಕುಲಪತಿಗಳು ಕುಗ್ಗಿ ಬಗ್ಗಿ ಬೆದರಬೇಕಾದ ಗತಿ. ಇದು ಕರ್ನಾಟಕ ಉನ್ನತ ಶಿಕ್ಷಣದ ಸ್ಥಿತಿ. ಕುಲಪತಿಗಳು  ಆತ್ಮಗೌರವ ಮತ್ತು ಆತ್ಮಸ್ಥೈರ್ಯದಿಂದ ಒಗ್ಗೂಡಿ ಗಟ್ಟಿದನಿಯಾಗದಿದ್ದರೆ ಗ್ಲೋರಿಫೈಡ್ ಗುಮಾಸ್ತರಾಗಬೇಕಾದೀತು. ನೌಕರ ಶಾಹಿಯನ್ನು ನಿಯಂತ್ರಿಸಿ ಸರ್ಕಾರಿ ವಿ.ವಿ.ಗಳಿಗೆ ಶಕ್ತಿ ತುಂಬಿ ಗೌರವದಿಂದ ನಡೆಸಿಕೊಳ್ಳದಿದ್ದರೆ ಸರ್ಕಾರಕ್ಕೆ  ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿಯಾದೀತು. ಆದ್ದರಿಂದ ಶರೀರ ಶೃಂಗಾರದ ಸುಧಾರಣೆಯಲ್ಲಿ ಮುಳುಗಿ ಹೋಗದೆ ಮೂಲಭೂತ ಬದಲಾವಣೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ವಿಶ್ವವಿದ್ಯಾಲಯಗಳ ಬಹುಮುಖಿ ಸ್ವರೂಪ ಮತ್ತು ಸ್ವಾಯತ್ತತೆಗೆ ಧಕ್ಕೆ ಬರದಂತೆ  ನೋಡಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಹಳೆಯಕಾಲದ ಕೂಲಿಮಠಗಳೂ ಅಲ್ಲ; ಹೊಸ ಕಾಲದ ವಿದೇಶಿ ವ್ಯಾಸಂಗದ ವಿಧೇಯ ವಲಯಗಳೂ ಅಲ್ಲ. ನಮ್ಮ ದೇಶದ  ಮಾನವ ಸಂಪನ್ಮೂಲದ ಸ್ವಾಯತ್ತ ಸಂಸ್ಥೆಗಳು. ಈ ಅಂಶವೇ ಉನ್ನತ ಶಿಕ್ಷಣ ಸುಧಾರಣೆಗೆ ಪ್ರೇರಣೆಯಾಗಬೇಕು.

ಉನ್ನತ ಶಿಕ್ಷಣದಲ್ಲಿರುವ ವೃತ್ತಿ ಮತ್ತು ಸಾಮಾನ್ಯ ಶಿಕ್ಷಣದ ಕಂದಕವನ್ನು ಮುಚ್ಚುವ ದೂರಗಾಮಿ ಚಿಂತನೆಗಳ ಜೊತೆಗೆ ಕನ್ನಡಕ್ಕೆ ಸೂಕ್ತ ಸ್ಥಾನ ಕಲ್ಪಿಸಿ ಗಟ್ಟಿಗೊಳಿಸುವ ಬಗ್ಗೆ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಕರ್ನಾಟಕದ ಸಾಮಾನ್ಯ ವಿಶ್ವವಿದ್ಯಾಲಯಗಳ ಎಲ್ಲ ಕೋರ್ಸುಗಳಲ್ಲೂ ಮೊದಲ ಎರಡು ವರ್ಷ ಕನ್ನಡ ಪಠ್ಯ ಕಡ್ಡಾಯವಾಗಬೇಕು; ಗರಿಷ್ಠ ಅವಧಿಗಳನ್ನು ನಿಗದಿ ಮಾಡಬೇಕು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಲೆ ಮತ್ತು ವಿಜ್ಞಾನ ಕೋರ್ಸ್‌ಗಳಲ್ಲಿರುವಂತೆ, ವಾಣಿಜ್ಯ ತರಗತಿಗಳಲ್ಲಿ ಕನ್ನಡ ವಿಷಯಕ್ಕೆ ಅಗತ್ಯ ಅವಕಾಶ ನೀಡಿಲ್ಲವಾದ್ದರಿಂದ ಈ ಮಾತು ಹೇಳುತ್ತಿದ್ದೇನೆ. ಇನ್ನು ಸ್ವಾಯತ್ತ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ  ವಿಷಯದ ಸ್ಥಿತಿಗತಿ ಏನೆಂದು ಸರ್ಕಾರ ವಿಚಾರಿಸುತ್ತಿದೆಯೆ? ಅಲ್ಲಿ ಬೇಕಾಬಿಟ್ಟಿ ಪಠ್ಯಕ್ರಮವಿರುವುದು ಸರಿಯೆ? ಸ್ವಾಯತ್ತತೆ ಮತ್ತು ಖಾಸಗಿ ಸವಲತ್ತುಗಳ ಶಿಕ್ಷಣ ಸಂಸ್ಥೆಗಳು ಕನ್ನಡಕ್ಕೆ ಸೂಕ್ತ ಉನ್ನತ ಶಿಕ್ಷಣದಲ್ಲಿ ಸ್ಥಾನ ನೀಡದೆ ಅನ್ಯಾಯ ಮಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು.
ವೃತ್ತಿ ಶಿಕ್ಷಣದ ಎಲ್ಲ ಕೋರ್ಸುಗಳಲ್ಲೂ ಮೊದಲ ಎರಡು ಸೆಮಿಸ್ಟರ್ ಅಥವಾ ಒಂದು ವರ್ಷ ಕನ್ನಡ ಪಠ್ಯವನ್ನು ಕಡ್ಡಾಯ ಮಾಡಬೇಕೆಂದು ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಮಾಡಿದ ಶಿಫಾರಸ್ಸನ್ನು ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಒಪ್ಪಿಕೊಂಡಿತ್ತು.  ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಮತ್ತು ನಾನು ತಾಂತ್ರಿಕ ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು  ಕನ್ನಡ ಪಠ್ಯವನ್ನು ಕಡ್ಡಾಯ ಮಾಡುವಂತೆ ಮನವರಿಕೆ ಮಾಡಿಕೊಟ್ಟ ಫಲವಾಗಿ ಅದು ಜಾರಿಗೆ ಬಂತು. ಆನಂತರ ಪರೀಕ್ಷೆಗೂ ಕಡ್ಡಾಯ ಮಾಡುವಂತೆ ತಿಳಿಸಲಾಯಿತಾದರೂ ಅದು ಜಾರಿಗೆ ಬರದೆ ಇದ್ದುದರಿಂದ ಕನ್ನಡ ಪಠ್ಯ ಬರಬರುತ್ತ ಕಾಟಾಚಾರದ ಕಲಿಕೆಯಾಗತೊಡಗಿತು. ಕನ್ನಡ ಬಲ್ಲವರಿಗೆ ಕನ್ನಡ ಸಾಂಸ್ಕೃತಿಕ ಪಠ್ಯ ಮತ್ತು ಕನ್ನಡ ಬಾರದವರಿಗೆ ಇಂಗ್ಲೀಷ್ ಮೂಲಕ ಕನ್ನಡ ಕಲಿಕೆ -ಎಂಬ ಈ ನೀತಿಗೆ ಈಗ ಮತ್ತೆ ಜೀವ ಕೊಡಬೇಕು. ಬಿ.ಇ. ಎಂ.ಬಿ.ಬಿ.ಎಸ್, ದಂತ ವೈದ್ಯಕೀಯ ಕೃಷಿ, ಕಾನೂನು ಮುಂತಾದ ಎಲ್ಲ ವೃತ್ತಿಪರ ಕೋರ್ಸುಗಳಲ್ಲೂ ಮೊದಲ ಒಂದು ವರ್ಷದ ಅವಧಿಗೆ ಕನ್ನಡ ವಿಷಯ ಮತ್ತು ಪರೀಕ್ಷೆ ಕಡ್ಡಾಯವಾಗಬೇಕು. ಕನ್ನಡದ ಬಗ್ಗೆ ಪುಂಖಾನುಪುಂಖವಾಗಿ  ಮಾತನಾಡುವ ಕೆಲವು ಕನ್ನಡ ಪರ ಚಿಂತಕರು - ವಿದ್ವಾಂಸರು ಈ  ವಿಷಯದಲ್ಲಿ ಮಾತನಾಡಲಿಲ್ಲ. ಈಗಲೂ ಮಾತಾಡುತ್ತಿಲ್ಲ. ಸರ್ಕಾರಕ್ಕೆ ಇದೆಲ್ಲ ಆದ್ಯತೆಯ ವಿಷಯವಾಗಿಯೇ ಇಲ್ಲ.

ಈಗಲಾದರೂ ಸರ್ಕಾರವು ವೃತ್ತಿ ಶಿಕ್ಷಣವನ್ನೂ ಒಳಗೊಂಡಂತೆ ಒಟ್ಟು ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಗಟ್ಟಿಗೊಳಿಸಬೇಕು. ಕುಂಟು ನೆಪಗಳನ್ನು ಕೈಬಿಡಬೇಕು. ಒಟ್ಟು ಶಿಕ್ಷಣದಲ್ಲಿ ಆಯಾ ಕೋರ್ಸುಗನುಸಾರ ಉಚಿತ ರೀತಿಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಉನ್ನತ ಶಿಕ್ಷಣದ ಕಾರ್ಪೋರೇಟರೀಕರಣದ ಬದಲು ಕರ್ನಾಟಕೀಕರಣ ಮಾಡಬೇಕು. ಬಹುತ್ವದ ಭಾರತೀಕರಣವಾಗಬೇಕು. ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯದ ಕಾರ್ಪೋರೇಟ್ ಸಂಸ್ಕೃತಿಗೆ ಪರ್ಯಾಯ ಮಾದರಿಗಳನ್ನೂ ನೆಲೆಗೊಳಿಸಬೇಕು. ಜಾನಪದವೆಂದರೆ ಕೇವಲ ಹಳೆಯದಲ್ಲ. ಕಲೆಗಳ ಪ್ರದರ್ಶನ ಮಾತ್ರವಲ್ಲ. ಇಂದು ನಗರ ಜಾನಪದ, ಲಿಖಿತ ಜಾನಪದ ಎಂಬ ಪರಿಕಲ್ಪನೆಗಳೂ ಬಂದಿವೆ. ಜಾನಪದವನ್ನು ಆಧುನಿಕ ವಿವೇಕದಿಂದ ಗ್ರಹಿಸುವ ಐಚ್ಚಿಕ ಪಠ್ಯ ವಿಷಯವನ್ನಾಗಿಸಿ ನಾವು ಜಾಗತೀಕರಣದ ಸವಾಲುಗಳಿಗೆ ಒಂದಷ್ಟು ಉತ್ತರವನ್ನಾದರೂ ಕೊಡಬಹುದಾಗಿದೆ.

ಉದ್ಯೋಗನೀತಿ, ಕನ್ನಡ ಮತ್ತು ಕನ್ನಡಿಗರು ಇನ್ನು ಉದ್ಯೋಗದ ವಿಷಯಕ್ಕೆ ಬಂದರೆ ಕೇಳಲೇಬೇಡಿ. ಸರ್ಕಾರಿ ಕಾಲೇಜುಗಳಲ್ಲಿ ೧೪೦೦೦ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಖಾಯಂ ಉಪನ್ಯಾಸಕರ ಸಂಖ್ಯೆ ಹೆಚ್ಚೆಂದರೆ ೬೦೦೦ವನ್ನೂ ಮೀರುವುದಿಲ್ಲ. ಅಂದರೆ ಸರ್ಕಾರಿ ಪದವಿ ಕಾಲೇಜುಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ ಎಂದಂತಾಯಿತು. ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುವುದಿರಲಿ, ಬೇರೆ ರಾಜ್ಯಗಳಲ್ಲಿ ಕೊಡುತ್ತಿರುವಷ್ಟು ಗೌರವಧನವನ್ನೂ ಕೊಡುತ್ತಿಲ್ಲ. ಯಾರ‍್ಯಾರದೋ ಶಿಫಾರಸ್ಸಿನಿಂದ ಬಂದಿರುವ ಅತಿಥಿ ಉಪನ್ಯಾಸಕರು ಖಾಯಂ ಮಾತಿಗೆ ಅನರ್ಹರು ಎಂಬ ಮಾತೊಂದು ಸರ್ಕಾರಿ ಮತ್ತು ಕೆಲ ಖಾಸಗಿ ವಲಯದಲ್ಲಿ ಚಾಲ್ತಿಯಲ್ಲಿದೆ. ಹಾಗಾದರೆ ಇಷ್ಟು ವರ್ಷ ಅನರ್ಹರಿಂದ ಬೋಧನೆ ಮಾಡಿಸಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಸರ್ಕಾರಕ್ಕೆ ಯಾವ ಶಿಕ್ಷೆ? ನನಗೆ ಗೊತ್ತು; ಖಾಯಮಾತಿ ಕಷ್ಟದ ಕೆಲಸ. ಜೊತೆಗೆ ಹೊಸ ನಿರುದ್ಯೋಗಿಗಳ ಸಂಖ್ಯೆಯೂ ಸಾಕಷ್ಟಿದೆ. ಅಗತ್ಯವಾದಷ್ಟು ಹುದ್ದೆಗಳನ್ನು ಸೃಷ್ಟಿಮಾಡಿ ಸೇವಾವಧಿ ಮತ್ತು ಅರ್ಹತೆಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ ಹೊಸ ನಿರುದ್ಯೋಗಿಗಳ ಆಯ್ಕೆಗೂ ಅವಕಾಶ ನೀಡುವ ಹೊಸ ನಿಯಮಾವಳಿ ರೂಪಿಸಲು ಸಾಧ್ಯ. ಹೀಗೆ  ಮಾಡದೆ ಹೋದರೆ ಶಿಕ್ಷಣಕ್ಷೇತ್ರವನ್ನು ಶೋಷಣೆ ಕೇಂದ್ರವಾಗಿಸಿದ ಸತ್ಕೀರ್ತಿ ಸರ್ಕಾರಕ್ಕೆ ಸಿಗುತ್ತದೆ.
ಇದೊಂದೇ ವಿಷಯವಲ್ಲ. ನಿವೃತ್ತಿ ಮತ್ತಿತರ ಕಾರಣಗಳಿಂದ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳನ್ನು ಕೂಡಲೇ ಭರ್ತಿಮಾಡುವ ಪರಿಹಾಠವೇ ಇಲ್ಲ. ಅನೇಕ ಖಾಸಗಿ ಕಾಲೇಜುಗಳಲ್ಲಿರುವ  ಖಾಲಿ ಹುದ್ದೆಗಳ  ಭರ್ತಿಗೆ  ಸರ್ಕಾರ ಅನುಮತಿ ನೀಡುತ್ತಿಲ್ಲ. ಇನ್ನು ಕೆಲವು ಕಾಲೇಜುಗಳು ಮೀಸಲಾತಿ ನೀತಿಯನ್ನು ಅನುಸರಿಸಬೇಕಾಗುತ್ತದೆಯೆಂಬ ಕಾರಣಕ್ಕಾಗಿ ಸರ್ಕಾರದ ಅನುದಾನವನ್ನೇ ನಿರಾಕರಿಸುತ್ತಿವೆ. ಅಂದು ಅನುದಾನ ಕೊಡಿ ಎಂದು ಕೇಳುತ್ತಿದ್ದ ಕಾಲೇಜುಗಳು ಇಂದು ಬೇಡ ಎನ್ನುವ ಹಂತಕ್ಕೆ ಬಂದಿರುವುದರ ಹಿಂದೆ ಇರುವ ಸಾಮಾಜಿಕ ಕಾರಣಗಳು ಆಘಾತಕಾರಿಯೆನ್ನದೆ ವಿಧಿಯಿಲ್ಲ. ಇದೆಲ್ಲವನ್ನೂ ಉನ್ನತ ಶಿಕ್ಷಣ ಇಲಾಖೆಯು ಸೂಕ್ತಕ್ರಮದ ಮೂಲಕ ಸರಿಪಡಿಸಬೇಕು.

ಕೇವಲ ಶಿಕ್ಷಣಕ್ಷೇತ್ರದ ನೇಮಕಾತಿ ಮಾತ್ರವಲ್ಲ, ಎಲ್ಲ ಇಲಾಖೆಗಳ ಅಗತ್ಯ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ ಏಕಕಾಲಕ್ಕೆ  ಭರ್ತಿ ಮಾಡುವ ಸಮರ ಸಮಾನ ನೀತಿಯನ್ನು ಅನುಷ್ಠಾನಗೊಳಿಸುವುದು ಅಗತ್ಯ ಮತ್ತು  ಆದ್ಯತೆಯಾಗಬೇಕು. ಇದರಿಂದ ಉದ್ಯೋಗ ಪಡೆದವರ ಕುಟುಂಬಗಳ ಬದುಕಲ್ಲಿ ಬೆಳಕು ಮೂಡುತ್ತದೆ. ಆದರೆ ಅಧಿಕಾರವರ್ಗದ ಅತಿಕ್ರಮಣ ಎಂಥ ವೈಪರೀತ್ಯಗಳಿಂದ ಕೂಡಿದೆ ಅನ್ನೋದಕ್ಕೆ ಅಕಾಡೆಮಿಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ಮೇಲೆ ಪ್ರಯೋಗಿಸುತ್ತಿರುವ ಅನುಚಿತ ಅಲಿಖಿತ ನಿಯಮವನ್ನು ಉದಾಹರಿಸಬಹುದು. ಅಕಾಡೆಮಿಗಳಲ್ಲಿ  ಸುಮಾರು ೧೦  ವರ್ಷದಿಂದ ೨೫ ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ  ನೌಕರರಿದ್ದಾರೆ. ಇವರಿಗೆ ನಿಗದಿತ ಗೌರವಧನ ಅಥವಾ ಸಂಬಳವನ್ನು ಅಕಾಡೆಮಿಗಳ ಅನುದಾನದಲ್ಲೇ ಭರಿಸಬೇಕು. ಅಕಾಡೆಮಿಗಳೇ ಆಗಾಗ್ಗೆ ಈ ಸಂಬಳವನ್ನು ಹೆಚ್ಚಿಸುತ್ತವೆ.  ಈ ವರ್ಷವೂ ಇದೇ ರೀತಿ ಮಾಡಿದಾಗ ಇಲಾಖೆ ಅಧಿಕಾರಿಗಳು ಶೇ. ೫ಕ್ಕಿಂತ ಹೆಚ್ಚಿಸಬಾರದು ಎಂದು ಪರ್ಮಾನು ಹೊರಡಿಸಿದ್ದಾರೆ. ಹಾಗಾದರೆ ಹಿಂದಿನಿಂದ ನಡೆದುಕೊಂಡು ಬಂದದ್ದು ತಪ್ಪೆ? ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಶೇ.೬೦ರಷ್ಟು ಹೆಚ್ಚಿಸಿದ್ದೆವು. ಅಕಾಡೆಮಿಗಳು ತಮ್ಮ ಅನುದಾನದಲ್ಲಿ  ಎಂದಿನಂತೆಯೇ ಕೊಡುವ ಸಂಬಳದ ವಿಚಾರದಲ್ಲಿ ಇದ್ದಕ್ಕಿದ್ದಂತೆ ಮೂಗು ತೂರಿಸುವ  ನಿಯಮಬಾಹಿರ ಹಾಗೂ ನೀತಿಬಾಹಿರ ನಿರ್ಧಾರ ಖಂಡನೀಯ. ವಾಸ್ತವವಾಗಿ ಅಕಾಡೆಮಿಗಳಲ್ಲಿರುವ ಗುತ್ತಿಗೆ ನೌಕರರನ್ನೆಲ್ಲ ಖಾಯಂ ಮಾಡುವ ಮಾರ್ಗೋಪಾಯ ಹುಡುಕಿ ಸರ್ಕಾರಕ್ಕೆ ಕಡತ ಸಲ್ಲಿಸುವ ಬದಲು ಕಿರುಕುಳ ಕೊಡುವುದು ಯಾವ ಸಂಸ್ಕೃತಿ?   

ಸಾಂಸ್ಕೃತಿಕ ಸಂಸ್ಥೆಗಳಲ್ಲೇ ಇಂತಹ ಸ್ಥಿತಿಯೆಂದರೆ ಉಳಿದ ಕಡೆ ಹೇಗಿರಬೇಡ! ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ತಯಾರಿಸಿ ಒಟ್ಟಿಗೇ ಬದುಕಿನ ಭದ್ರತೆ ಕೊಡುವ  ಉದ್ಯೋಗ ನೀತಿಗೆ ಸರ್ಕಾರ ಮುಂದಾಗಬೇಕು, ಕಡೆ ಪಕ್ಷ, ಒಂದು ‘ಉದ್ಯೋಗ ಪರಿಶೀಲನಾ ಸಮಿತಿ ನೇಮಿಸಿ ಸಮಸ್ತ ವಿವರಗಳೊಂದಿಗೆ ನಿರ್ದಿಷ್ಟ ಪರಿಹಾರಗಳನ್ನು ಪಡೆದು ಕಾರ್ಯ ಪ್ರವೃತ್ತರಾಗಬೇಕು. ಕನ್ನಡಿಗರ ಅನಿಶ್ಚಿತ ವ್ಯಕ್ತಿ ಬದುಕಿಗೆ ಕೊನೆ ಹಾಡಬೇಕು. ಇದು ಮಾನವೀಯ ಸರ್ಕಾರವೊಂದರ ನೈತಿಕ ಜವಾಬ್ದಾರಿ ಎಂದು ಭಾವಿಸುತ್ತೇನೆ.

ಹಾಗೆ ನೋಡಿದರೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಸರ್ಕಾರಿ  ಮತ್ತು ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುವುದು, ಆಯಾ ರಾಜ್ಯ ಭಾಷೆಯ ಕಲಿಕೆಯನ್ನು ಉದ್ಯೋಗ ನೀಡಿಕೆಗೆ ಕಡ್ಡಾಯ ಮಾಡುವುದು ಈ ರಾಷ್ಟ್ರೀಯ ಉದ್ಯೋಗ ನೀತಿಯ ಕೇಂದ್ರವಾಗಬೇಕು. ಆಗ ರಾಜ್ಯ ಭಾಷೆಗಳು ವಿಸ್ತಾರಗೊಳ್ಳುತ್ತವೆ. ಸ್ಥಳೀಯರಲ್ಲಿ ಬೆಳೆಯುವ  ಪರಿಕೀಯತೆ ಮತ್ತು ಪ್ರತ್ಯೇಕತಾವಾದವೂ ತಪ್ಪುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ೧೯೬೮ ರಲ್ಲಿ ರಾಷ್ಟ್ರೀಯ ಭಾವೈಕ್ಯತಾ ಆಯೋಗವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಷಯವನ್ನು ಪ್ರಸ್ತಾಪಿಸಿತ್ತು. ಆಗ ಭಾಷಾವಾರು ರಾಜ್ಯಗಳ ರಚನೆಯಾಗಿ ೧೨   ವರ್ಷಗಳಾಗಿದ್ದವು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಜನರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ರಾಷ್ಟ್ರೀಯ ಭಾವೈಕ್ಯತಾ ಆಯೋಗ ಗಮನಿಸಿತ್ತು. ದೇಶದಲ್ಲಿರುವ ಹುದ್ದೆಗಳಿಗೆ  ನೇಮಕಾತಿ ಮಾಡುವಾಗ ಆಯಾರಾಜ್ಯದ ಅಭ್ಯರ್ಥಿಗಳಿಗೆ  ಆದ್ಯತೆ ನೀಡಬೇಕೆಂದೂ ಇಲ್ಲದಿದ್ದರೆ ಪ್ರತ್ಯೇಕತಾವಾದ ಬೆಳೆದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಯಾಗುವುದೆಂದೂ ಪ್ರತಿಪಾದಿಸಿ ಶಿಫಾರಸು ಮಾಡಿತ್ತು. ಆದರೆ ಆಗ ಈ ಶಿಫಾರಸು ಅಂಗೀಕಾರವಾಗಲಿಲ್ಲ. ಜಾರಿಯಾಗಲಿಲ್ಲ. ಇದು ಈಗಲಾದರೂ ಜಾರಿಯಾಗಬೇಕು. ಬಹುರಾಷ್ಟ್ರೀಯ ಕಂಪನಿಗಳನ್ನೂ ಈ ವ್ಯಾಪ್ತಿಗೆ ಒಳಪಡಿಸಬೇಕು. ಸಂವಿಧಾನಕ್ಕಿಂತ ಯಾವ ಕಂಪನಿಯೂ ದೊಡ್ಡದಲ್ಲವಾದ್ದರಿಂದ ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆ ಕೊಡುವುದರ ಜೊತೆಗೆ ಸಂವಿಧಾನದತ್ತ ಮೀಸಲಾತಿಯನ್ನೂ ಅರ್ಹತೆಯ ಆಧಾರದ ಮೇಲೆ ನೀಡಬೇಕು. ಹೀಗೆ ಸಮಗ್ರ ರಾಷ್ಟ್ರೀಯ ಉದ್ಯೋಗ ನೀತಿ ನಿರೂಪಣೆ ಮಾಡಿ ಅನುಷ್ಠಾನಗೊಳಿಸುವುದರಿಂದ  ಸ್ಥಳೀಯರಿಗೆ ಹಾಗೂ ಸಾಮಾಜಿಕ ಆರ್ಥಿಕ ದುರ್ಬಲರಿಗೆ ಉದ್ಯೋಗ ಸಿಕ್ಕುತ್ತದೆ-ದೇಶದ ಒಕ್ಕೂಟ ವ್ಯವಸ್ಥೆಗೆ ಅರ್ಥಬರುತ್ತದೆ. ಭಾಷೆ ಮತ್ತು ಬದುಕಿಗೆ ಭವಿಷ್ಯದ ಭರವಸೆ ಬರುತ್ತದೆ.

ಭಾಷೆ ಮತ್ತು ಬದುಕು
ಭಾಷೆ ಮತ್ತು ಬದುಕಿಗೆ ಸಂಬಂಧ ಸಾಧಿಸದ ಭಾಷಾಭಿಮಾನಕ್ಕೆ ಬದ್ಧತೆಯ  ಕೊರತೆ ಉಂಟಾಗುತ್ತದೆ. ಯಾಕೆಂದರೆ ಬದುಕನ್ನು ಬಿಟ್ಟು ಭಾಷೆಯಿಲ್ಲ. ಭಾಷೆಯೊಂದು ಉಳಿದು ಬೆಳೆಯಬೇಕಾದರೆ ಭಾಷೆಯನ್ನಾಡುವ ಜನರ ಬದುಕು ಉಳಿಯಬೇಕು; ಬೆಳೆಯಬೇಕು. ಆದ್ದರಿಂದ ನಾವು ಭಾಷೆಯ ಮೂಲಕ  ಜನರನ್ನು ನೋಡುತ್ತೇವೆಯೋ, ಜನರ ಮೂಲಕ ಭಾಷೆಯನ್ನು ನೋಡುತ್ತೇವೆಯೊ ಎಂಬ ಪ್ರಶ್ನೆಯನ್ನು  ಕೇಳಿಕೊಳ್ಳಬೇಕು. ನನ್ನ ಉತ್ತರವಂತೂ ಸ್ವಷ್ಟ: ಜನರ ಮೂಲಕ ಭಾಷೆಯನ್ನು ನೋಡಬೇಕು. ಕನ್ನಡ ಭಾಷೆಯನ್ನಾಡುವ ಜನರನ್ನು ಬದುಕಿಸಿ, ಅವರು ಭಾಷೆಯನ್ನು ಬದುಕಿಸಿಕೊಳ್ಳುತ್ತಾರೆ. ಸಾವಿರಾರು ವರ್ಷದಿಂದ ಕನ್ನಡ ಜನರು ತಾವೂ ಬದುಕುತ್ತ ಕನ್ನಡವನ್ನು ಬದುಕಿಸಿಕೊಂಡಿರುವುದೇ ನನ್ನ ಮಾತಿಗೆ ಸಾಕ್ಷಿ ಮತ್ತು ಸಮರ್ಥನೆ. ಹೀಗೆ ಕನ್ನಡವನ್ನು ಉಳಿಸಿಕೊಂಡು ಬಂದವರು ಬಡಕನ್ನಡಿಗರು. ಇವರು ಹಳ್ಳಿಗಳಲ್ಲೂ ಇದ್ದಾರೆ; ನಗರಗಳಲ್ಲೂ ಇದ್ದಾರೆ. ಆದ್ದರಿಂದ, ಕನ್ನಡವನ್ನು ಉಳಿಸಿಕೊಂಡು ಬಂದ ಬಡಕನ್ನಡಿಗರ ಬದುಕನ್ನು ಉಳಿಸುವುದು ನಿಜವಾದ ಕನ್ನಡಾಭಿಮಾನ. ಜನರನ್ನು ಉಳಿಸಿದರೆ ಜನಭಾಷೆ ಉಳಿಯುತ್ತದೆ.

ಒಂದು ಮಾತು ನೆನಪಿರಲಿ: ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ. ಹಾಗಾದರೆ  ಕನ್ನಡಿಗರಿಗೆ ನಾವು ಕೊಡಬೇಕಾದ ಶಕ್ತಿ ಯಾವುದು? ಬದುಕುವ ಶಕ್ತಿ; ಸಾಮಾಜಿಕ ಶಕ್ತಿ; ಆರ್ಥಿಕ ಶಕ್ತಿ; ಶಿಕ್ಷಣದ ಶಕ್ತಿ; ಉದ್ಯೋಗ ಶಕ್ತಿ; ಹಸಿವುಮುಕ್ತ ಶಕ್ತಿ; ಸಮಾನತೆಯ ಶಕ್ತಿ.
ಅಂದರೆ ನಮ್ಮ ಭಾಷಾ ಹೋರಾಟಗಳು ಸಾಮಾಜಿಕ ಹೋರಾಟಗಳೂ ಆಗಬೇಕು. ಬದುಕಿನ ಅಗತ್ಯಗಳಿಗೂ ಭಾಷೆಗೂ ಇರುವ ಅಂತರ್ ಸಂಬಂಧವನ್ನು ಗ್ರಹಿಸಿದ ತಾತ್ವಿಕತೆ ಕೇಂದ್ರಪ್ರಜ್ಞೆಯಾಗಬೇಕು. ಸಮೂಹ ಸನ್ನಿಯಾಗದ ಸಮೂಹ ಪ್ರಜ್ಞೆ ಬೇಕು. ಭಾಷೆಯನ್ನು ಉಳಿಸುವುದೆಂದರೆ ಬದುಕನ್ನು ಉಳಿಸುವುದು, ಬದುಕನ್ನು ಉಳಿಸುವುದೆಂದರೆ ಭಾಷೆಯನ್ನು ಉಳಿಸುವುದು ಎಂದಾಗಬೇಕು.

ಇಲ್ಲಿ ಯಾರ ಬದುಕನ್ನು ಉಳಿಸಬೇಕು? ಈ ವಿಷಯದಲ್ಲಿ ಕನ್ನಡಾಭಿಮಾನಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಬೇಕು. ಯಾವ ಕನ್ನಡಿಗರ ಬದುಕನ್ನು ಬೆಳೆಸಲು ಬದ್ಧರಾಗಬೇಕೆಂಬ ಖಚಿತತೆ ಬೇಕು. ಕೋಟ್ಯಾಧೀಶ ಕನ್ನಡಿಗರು ಕಡು ಬಡವ ಕನ್ನಡಿಗರಿಗೆ ಕಂಟಕರಾದಾಗ ನಾವು ಯಾರ ಬೆಂಬಲಕ್ಕಿರಬೇಕು? ಭೂಮಾಲೀಕರು ಬಡ ರೈತರು ಮತ್ತು ಕೃಷಿ ಕೂಲಿಕಾರ ಕನ್ನಡಿಗರನ್ನು ಶೋಷಣೆ ಮಾಡುತ್ತಿದ್ದರೆ ನಾವು ಯಾರ ಪರ? ಉದ್ಯಮಪತಿ ಕನ್ನಡಿಗರು ತಮ್ಮ ಉದ್ಯೋಗಿಗಳಿಗೆ ಮಾರಕವಾದರೆ ನಾವು ನಿಲ್ಲಬೇಕಾದ್ದು ಎಲ್ಲಿ? ಕನ್ನಡಿಗನೊಬ್ಬ ಕನ್ನಡಿಗ ಮಹಿಳೆಯನ್ನು ಶೋಷಣೆ ಮಾಡಿದರೆ, ನಾವು ಕನ್ನಡಿಗ ಪುರುಷನ ಪರವೊ ಕನ್ನಡ ಮಹಿಳೆಯ ಪರವೊ? ಸವರ್ಣೀಯ ಕನ್ನಡಿಗರು ದಲಿತ ಕನ್ನಡಿಗರನ್ನು ದೂರವಿಟ್ಟರೆ ನಾವು ಯಾರಿಗೆ ಸಮೀಪವಾಗಬೇಕು?  ಧಾರ್ಮಿಕ ಮೂಲಭೂತವಾದಿ ಕನ್ನಡಿಗರು ಕನ್ನಡಿಗರೆಂಬ ಕಾರಣಕ್ಕೆ ಕ್ಷಮಾರ್ಹರಾಗಬೇಕೆ? ಇಲ್ಲವೆ ಮೂಲಭೂತವಾದದ ಬಲಿಪಶು ಕನ್ನಡಿಗರ ಪರವಾಗಿ ನಾವು ನಿಲ್ಲಬೇಕೆ?. ಹಿಂದೂ, ಮುಸ್ಲಿಂ, ಕ್ರೈಸ್ತ ಮುಂತಾಗಿ ಭೇದವೆನಿಸಿ ಸಂಘರ್ಷಕ್ಕಿಳಿಯುವ ಮನೋಧರ್ಮ ಆದರ್ಶವಾಗಬೇಕೇ? ಇಂತಹ ಸಾಮಾಜಿಕ ಆರ್ಥಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಖಚಿತ ನಿಲುವಿನಲ್ಲಿ ನಮ್ಮ ಕನ್ನಡಾಭಿಮಾನದ  ತಾತ್ವಿಕ ನೆಲೆ ಸ್ಪಷ್ಟವಾಗಬೇಕು. ನಿಜ; ಹೊರರಾಜ್ಯದವರು ತೆಗೆಯುವ ನೆಲ-ಜಲದ ಜಗಳಗಳ ಸಂದರ್ಭದಲ್ಲಿ ನಮ್ಮ ರಾಜ್ಯದೊಳಗಿನ ಸಾಮಾಜಿಕ  - ಆರ್ಥಿಕ ಪ್ರತ್ಯೇಕತೆ ಪ್ರಧಾನವಾಗಬಾರದು; ಆಗ ಕರ್ನಾಟಕದ ನಾವೆಲ್ಲ ಒಂದಾಗಿ ಉತ್ತರಿಸಬೇಕು. ಆದರೆ ಕರ್ನಾಟಕದೊಳಗಿನ ಸಾಮಾಜಿಕ-ಆರ್ಥಿಕ  ಸ್ತರಗಳ ಸಂದರ್ಭದಲ್ಲಿ ಭಿನ್ನ ನಿಲುವಿಗೆ ಬದ್ಧರಾಗಬೇಕು. ಅಂದರೆ ನಾವು ಕನ್ನಡ ಕೋಟ್ಯಾಧಿಪತಿಗಳಿಂದ ಕಷ್ಟಕ್ಕೆ ಸಿಕ್ಕಿದ ಬಡಕನ್ನಡಿಗರ ಪರವಾಗಿರಬೇಕು; ಶೋಷಿತ ಮಹಿಳೆಯರಿಗೆ ಬೆಂಬಲವಾಗಬೇಕು; ಶೋಷಿತ ರೈತರಿಗೆ ಮಿಡಿಯಬೇಕು. ವಂಚಿತ ಉದ್ಯೋಗಿಗಳ ಪರವಾಗಿರಬೇಕು. ದಲಿತರಿಗೆ ದನಿಯಾಗಬೇಕು; ಧಾರ್ಮಿಕ ಸಹಿಷ್ಣುತೆಗೆ ಸ್ಪಂದಿಸಬೇಕು. ಸಮಾನತೆ ಆದರ್ಶವಾಗಬೇಕು. ಕನ್ನಡಪರ ಹೋರಾಟದ ಅಂತರಂಗದ ಅರಿವಾಗಿ ಸಾಮಾಜಿಕ ಆಯಾಮವೊಂದು ಇರಬೇಕು. ಇದು ಜನಪರ ಕನ್ನಡಾಭಿಮಾನ ನಮಗೆ ಬೇಕಾದ್ದು ಕೊರಳಿನ ಕನ್ನಡಾಭಿಮಾನ ಅಲ್ಲ. ಕರುಳಿನ ಕನ್ನಡಾಭಿಮಾನ. ಕರುಳು ಕೊರಳಿಗೆ ಬಂದು  ದನಿಯಾಗುವ ಕನ್ನಡಾಭಿಮಾನ. ಇದಕ್ಕೆ ಕನ್ನಡ ಸಾಹಿತ್ಯ ಸಾಕ್ಷಿಯಾಗಿದೆ. ಕರುಳ ಬಳ್ಳಿಯ ಕೊರಳಾಗಿ ಕನ್ನಡಕ್ಕೆ ಶಕ್ತಿ ತುಂಬಿದೆ. ಇದು ನಮ್ಮ ಕನ್ನಡಾಭಿಮಾನದ ಆದರ್ಶದ ಮಾದರಿ.
ಕನ್ನಡ ಸಾಹಿತ್ಯದ ನಿಜದನಿಯಲ್ಲಿ ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಸಹಿಷ್ಣು ಸಾಧಕರೆಲ್ಲ ಅಕ್ಷರವಾಗಿದ್ದಾರೆ. ಮೌಖಿಕ ಪರಂಪರೆಯಲ್ಲೂ ಪ್ರತೀಕವಾಗಿದ್ದಾರೆ. ಹೀಗೆಂದ ಕೂಡಲೇ ಕರ್ನಾಟಕ ಸಮಾಜದಲ್ಲಿ ಸದಾ ಸಂಪೂರ್ಣ ಉತ್ತಮಿಕೆಯಿತ್ತು ಎಂದಲ್ಲ. ವಿಭಜಿತ ಸಮಾಜದಲ್ಲಿ ಉತ್ತಮವಾದದ್ದನ್ನು ಮುನ್ನೆಲೆಗೆ ತಂದ ಕೀರ್ತಿಯಂತೂ ಕನ್ನಡ ಜನತೆಗಿದೆ; ಕನ್ನಡ ಸಾಹಿತ್ಯಕ್ಕಿದೆ; ಕನ್ನಡ ಸಂವೇದನೆಗಿದೆ.

ಕನ್ನಡ ಸಂವೇದನೆಯ ಆಯಾಮ

ಕನ್ನಡ ಸಂವೇದನೆಯು ಏಕಕಾಲಕ್ಕೆ ಸ್ಥಳೀಯವೂ ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗಿರುವ ಹೆಗ್ಗಳಿಕೆಯನ್ನು ಹೊಂದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಾಕ್ಷಿರೂಪದಲ್ಲಿ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಕರ್ನಾಟಕದೊಳಗೆ ನಮ್ಮನಾಡಿಗೇ ಸೇರಿದ ತುಳು, ಕೊಡವ, ಕೊಂಕಣಿ, ಲಂಬಾಣಿ, ಅರೆಭಾಷೆ ಮುಂತಾದ ಭಾಷಿಕ ಸಮುದಾಯಗಳಿವೆ; ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳಿವೆ. ಕನ್ನಡಸಂವೇದನೆಯು ಈ ಎಲ್ಲ ವೈವಿದ್ಯಗಳನ್ನು ಒಳಗೊಂಡೇ ಕರ್ನಾಟಕ ಸಂಸ್ಕೃತಿಯಾಗಿದೆ. ಇದೇ ನಿಜವಾದ ಸಾಂಸ್ಕೃತಿಕ ನ್ಯಾಯ.

ಕನ್ನಡ ಸಂವೇದನೆಯು ಸಾಹಿತ್ಯದ ಮೂಲಕ ಪ್ರಕಟಣೆಗೊಂಡ ಬಗೆಯೂ ಅದರ ವಿಸ್ತಾರವನ್ನು ಮನವರಿಕೆ ಮಾಡಿಕೊಡುತ್ತದೆ. ಕನ್ನಡ ಸಂವೇದನೆಯು ಸ್ಥಳೀಯ ಬದುಕನ್ನು ಅದರ ಸಂಭ್ರಮ ಸಂಕಟಗಳೊಂದಿಗೆ ಅಭಿವ್ಯಕ್ತಿಸಿದೆ; ಸ್ವಾತಂತ್ರ್ಯ ಚಳುವಳಿಯನ್ನು ಒಳಗೊಂಡಂತೆ ಕರ್ನಾಟಕೇತರ ಸಾಧಕರ ಬಗ್ಗೆಯೂ ಬರೆಯುತ್ತ ರಾಷ್ಟ್ರೀಯವಾಗಿದೆ. ಕನ್ನಡದಲ್ಲಿ ಗಾಂಧಿ, ಅಂಬೇಡ್ಕರ್ ಮುಂತಾದವರನ್ನು ಕುರಿತು ಬಂದಿರುವ ರಚನೆಗಳನ್ನು ಗಮನಿಸಿದರೆ ಕನ್ನಡ ಸಂವೇದನೆಯ ರಾಷ್ಟ್ರೀಯ ಆಯಾಮ ತಾನಾಗಿಯೇ ತಿಳಿಯುತ್ತದೆ. ದೇಶಭಕ್ತಿಯ ವಿಷಯದಲ್ಲಿ ಕನ್ನಡ ಸಂವೇದನೆ ಸದಾ ರಾಷ್ಟ್ರೀಯವಾಗಿದೆ. ಅಂತೆಯೇ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸ್ಪಂದಿಸುತ್ತ ಅಂತರ ರಾಷ್ಟ್ರೀಯವೂ ಆಗಿದೆ. ಅಬ್ರಾಹಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೆಲ - ಮುಂತಾದವರನ್ನು ಗೌರವಿಸುವ ಅಭಿವ್ಯಕ್ತಿಗಳಲ್ಲಿ ಕನ್ನಡದ ಅಂತರ ರಾಷ್ಟ್ರೀಯ ಸಂವೇದನೆಯಿದೆ. ಅಷ್ಟೇಕೆ, ಕೆಲವರ್ಷಗಳ ಹಿಂದೆ ನಿಧನ ಹೊಂದಿದ ಬೆಂಜಾಮಿನ್ ಮೊಲಾಯಿಸ್ ಎಂಬ ಕವಿಯನ್ನು ಕುರಿತು ಮೂವತ್ತಕ್ಕೂ ಹೆಚ್ಚು ಕವಿತೆಗಳನ್ನು ಅಭಿವ್ಯಕ್ತಿಸಿದ ಹೆಗ್ಗಳಿಕೆ ಕನ್ನಡದ ಅಂತರ ರಾಷ್ಟ್ರೀಯ ಸಂವೇದನೆಗೆ ಸಲ್ಲಬೇಕು. ಕನ್ನಡ ಭಾಷಾಭಿಮಾನದ ಒಳ ತಿಳುವಳಿಕೆಯಾಗಿ ಈ ಕನ್ನಡ ಸಂವೇದನೆ ಕೆಲಸ ಮಾಡುತ್ತಿರಬೇಕು.

ಕನ್ನಡ ಸಂವೇದನೆಯು ಸಾಹಿತ್ಯದ ಮೂಲಕ ಪ್ರಕಟಿಸಿದ ಪ್ರತಿಕ್ರಿಯೆಗಳನ್ನು ನಮ್ಮೊಳಗಿನ ಪ್ರತೀಕವಾಗಿಸಿಕೊಳ್ಳದೆ ಹೋದರೆ ಓದು ವ್ಯರ್ಥವಾಗುವುದಿಲ್ಲವೆ ಎಂಬ ಪ್ರಶ್ನೆಯನ್ನು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕು. ನಮ್ಮ ದೇಶದಲ್ಲಿ ಓದು ಒಂದು ಹೋರಾಟ; ಅರಿವು ಒಂದು ಆಂದೋಲನ. ಅನೇಕರ ಸುಧಾರಕರ ಪರಿಶ್ರಮದಿಂದ ಶಿಕ್ಷಣವು ಹಟ್ಟಿಗಳಿಗೆ, ಗುಡಿಸಲುಗಳಿಗೆ, ಕೊಳಗೇರಿಗಳಿಗೆ, ಬಡವರಿಗೆ, ಮಹಿಳೆಯರಿಗೆ ಬಂದು ಸೇರಿದೆ.  ಶತಮಾನಗಳಿಂದ ಸೆರೆವಾಸಿಯಾಗಿದ್ದ ಶಿಕ್ಷಣದ ವಿಮೋಚನೆಯಾಗಿದೆ. ಹೀಗೆ ವಿಮೋಚನೆಗೊಂಡ ಶಿಕ್ಷಣದಿಂದ ಜನರು  ವಿಮೋಚನಾ ಶಕ್ತಿಯನ್ನು ಪಡೆಯಬೇಕಾಗಿದೆ. ಶಿಕ್ಷಣವನ್ನು ಸೆರೆಯಲ್ಲಿಟ್ಟ ಶಕ್ತಿಗಳು ಸಹ ಬದಲಾಗಬೇಕಾದ ಮತ್ತು ಬದಲಾಗುತ್ತ ಬಂದ ಇತಿಹಾಸವನ್ನುಳ್ಳ ನಮ್ಮ ಸಮಾಜದಲ್ಲಿ ಓದು ಒಂದು ಹೋರಾಟದ ಫಲವಾಗಿದ್ದು ಅದರಿಂದ ಹೊಸ ಅರಿವು  ಮೂಡುತ್ತ ಬಂದದ್ದರಿಂದ ನಾನು ‘ಓದು ಒಂದು ಹೋರಾಟ-ಅರಿವು ಒಂದು ಆಂದೋಲನ ಎಂದು ಕರೆದಿದ್ದೇನೆ.

‘ಅರಿವೇ ಆಂದೋಲನವಾಗಿದ್ದರ ಫಲವಾಗಿ ಕರ್ನಾಟಕದ ಸಮಾಜವು ಕೆಡಕು ಮತ್ತು ಕೊಳಕುಗಳನ್ನು ಕರಗಿಸಿಕೊಂಡು  ಮಾನವೀಯ ಬೆಳಕನ್ನು ಮುನ್ನೆಲೆಗೆ ತರಲು ಸಾಧ್ಯವಾಯಿತು. ಇದರ ಫಲವಾಗಿ ಕನ್ನಡ ಸಂವೇದನೆಯಲ್ಲಿ ಕತ್ತಲನ್ನು ಬೆತ್ತಲುಗೊಳಿಸಿದ ಬೆಳಕು ಹುಟ್ಟಿ ಬೆಳೆಯಿತು. ನಮ್ಮ ಸಾಮಾಜಿಕ ಸನ್ನಿವೇಶದೊಂದಿಗೆ ಮುಖಾಮುಖಿಯಾಗುತ್ತ ಅಗತ್ಯವಾದಾಗ ಅನುಸಂಧಾನಿಸುತ್ತ ಹೊಳೆಯಿತು. ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಹೋರಾಟ, ರೈತ ಹೋರಾಟ, ಮಹಿಳಾ ಹೋರಾಟ, ಹಾಗೂ ಕ್ಷುಲ್ಲಕ ಸಂಘರ್ಷಗಳನ್ನು ಕರಗಿಸಿ ಹೊಮ್ಮಿದ ಸೌಹಾರ್ದಗಳನ್ನು ಅಭಿವ್ಯಕ್ತಿಸಿತು.

ಕನ್ನಡ ಸಂವೇದನೆ ಮತ್ತು ದೇಶಭಕ್ತಿ

ಈಗ ತುಂಬಾ ಚರ್ಚೆಗೆ ಅಥವಾ ಚರ್ಚೆಯ ಹೆಸರಿನ ಹಗ್ಗಜಗ್ಗಾಟಕ್ಕೆ ಹೆಸರಾಗಿರುವ ದೇಶಭಕ್ತಿಯ ವಿಷಯವನ್ನೇ ತೆಗೆದುಕೊಳ್ಳಿ. ರಾಷ್ಟ್ರೀಯತೆಯ ಪ್ರಶ್ನೆಯನ್ನೂ ಪರಿಶೀಲಿಸಿ ನೋಡಿ. ಕನ್ನಡ ಸಂವೇದನೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸುತ್ತ ಸ್ವಾತಂತ್ರ್ಯನಂತರವೂ ರಾಷ್ಟ್ರೀಯ ಸಮಗ್ರತೆಯನ್ನು ಪ್ರತಿಪಾದಿಸುತ್ತ ಬಂದಿದೆ.
ಬೇಂದ್ರೆಯವರು ‘ಎಂದೆಂದೂ ಈ ಮಕ್ಕಳ ಕೈ ಮೈ ಹಿಡಿದಾಕೆ ಯರ‍್ಯಾರಿಗೂ ಬಾಗಿದರೂ ನಮ್ಮೆದೆ ಬಿಡದಾಕೆ| ಆಪತ್ತನ್ನು ತಡೆದಾಕೆ | ಜೊತೆ ಜೊತೆಗೆ ನಡೆದಾಕೆ| ಎಂದು ತಾಯಿ-ಮಕ್ಕಳ ಸಂಬಂಧದಲ್ಲಿ ದೇಶಭಕ್ತಿಯನ್ನು ಕಟ್ಟುವ ರೀತಿ ಸರಳವೂ ಅನನ್ಯವೂ ಆಗಿದೆ. ಕುವೆಂಪು ಅವರು - ಭಾರತಾಂಬೆಯೇ ಜನಿಸಿ ನಿನ್ನೊಳು| ಧನ್ಯನಾದೆನು ದೇವಿಯೆ| ನಿನ್ನ ಪ್ರೇಮದಿ ಬೆಳದು ಜೀವವು| ಮಾನ್ಯವಾದುದು ತಾಯಿಯೇ ಎಂದು ಧನ್ಯತಾ ಭಾವದಲ್ಲಿ ತಾಯಿ ರೂಪವಾಗಿಸುತ್ತಾರೆ. ಗೋವಿಂದಪೈ ಅವರಿಗೆ ನಮ್ಮ ದೇಶಮಾತೆ ‘ಜೀವನ ನಳಿನಿ....... ಭಾರತ ಜನನಿಯಾಗುತ್ತಾಳೆ. ಸ್ವಾತಂತ್ರ್ಯಾನಂತರದಲ್ಲಿ ಪು.ತಿ.ನ ಅವರು ಬರೆಯುತ್ತಾರೆ: ಕಿರೀಟಪತಿಗಳ ರಾಜ್ಯವಿದಲ್ಲ| ನಮ್ಮೀಭಾರತದೇಶ| ಈ ಮೊದಲಿನ್ನೀ ರಾಜ್ಯದಿ ನಡೆವುದು| ನಾಡಮಕ್ಕಳ ಆದೇಶ|
ಹೀಗೆ ಕನ್ನಡ ಕವಿಗಳು ದೇಶಭಕ್ತಿಯನ್ನು ಭಾವುಕ ಮತ್ತು ಬೌದ್ಧಿಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ಇತ್ತೀಚಿಗೆ ದೇಶಭಕ್ತಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿನ  ಅನ್ಯಾರ್ಥ, ಅಪಾರ್ಥಗಳು ಅನಾರೋಗ್ಯಕರ ಅನರ್ಥಕ್ಕೆ ಕಾರಣವಾಗುತ್ತಿವೆ. ದೇಶಭಕ್ತಿಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು; ನಮ್ಮ ದೇಶದ ಪ್ರತಿ ಪ್ರಜೆಯದೂ ದೇಶಭಕ್ತಿ ಬದ್ಧತೆಯನ್ನೊಳಗೊಂಡ ವ್ಯಕ್ತಿತ್ವವಾಗಿರಬೇಕು. ಆದರೆ ದೇಶಭಕ್ತಿಯನ್ನು ರಾಜಕೀಯ ಪಕ್ಷಗಳ ಅಪ್ರಬುದ್ಧ ವ್ಯಾಖ್ಯಾನದ  ಬಲಿಪಶು ಮಾಡಬಾರದು. ಆಡಿದ ಮಾತಿಗೆ ಅನ್ಯಾರ್ಥ ಮತ್ತು ಅಪಾರ್ಥ ಕಲ್ಪಿಸಿ, ಆಗದವರ ಮೇಲೆಲ್ಲ ದೇಶದ್ರೋಹದ ಆರೋಪ ಹೊರಿಸುವುದೇ ದೇಶಪ್ರೇಮವಾಗಬಾರದು. ಯಾವ  ಪಕ್ಷ, ಯಾವ ಧರ್ಮ ಎಂದು  ನೋಡಿ ದೇಶಭಕ್ತಿಯ ಮಾನದಂಡವನ್ನು ನಿರ್ಧರಿಸಬಾರದು. ಬಹುಮುಖ್ಯವಾಗಿ ನಮ್ಮ ಸೈನಿಕರ ತ್ಯಾಗವನ್ನು ಕಡೆಗಣಿಸುವ ಕುಬ್ಜರಾಗಬಾರದು. ದೇಶದೊಳಗಿನ ಸಮಸ್ತ ಸಮುದಾಯವನ್ನು ರಕ್ಷಿಸಲು ಸದಾ ಸಿದ್ಧವಾಗಿರುವ ಸೈನಿಕರು ಗಡಿಕಾಯುತ್ತ ಅನುಭವಿಸುವ ಪರಕೀಯತೆಯ ಅನುಭವವನ್ನು  ನಮ್ಮದಾಗಿಸಿಕೊಳ್ಳುವುದರಲ್ಲಿ ಶ್ರೇಷ್ಠ ಮಾದರಿಯ ದೇಶಭಕ್ತಿಯಿದೆಯೆಂದು ನನ್ನ ಭಾವನೆ. ತಮ್ಮ ಕುಟುಂಬದೊಂದಿಗೆ ನಮ್ಮಂತೆ ನಿರಂತರ ಸಂಪರ್ಕ ಸಾಧ್ಯವಾಗದೆ ಆಯುಧಗಳನ್ನೇ ಆತ್ಮೀಯರನ್ನಾಗಿಸಿಕೊಂಡು ಬದುಕುವ ಸೈನಿಕರಿಗೆ ಒಂಟಿತನ  ಕಾಡುವುದಿಲ್ಲವೆ? ಆದ್ದರಿಂದ ಸಾವಿನ ಸ್ನೇಹದಲ್ಲಿ ಸಮಯ ಕಳೆಯುವ ಸೈನಿಕರು ನಮ್ಮ ಸಂವೇದನೆಯ  ಸ್ನೇಹಿತರಾದಾಗ ನಮ್ಮ ದೇಶಭಕ್ತಿಗೆ ಅರ್ಥ ಬರುತ್ತದೆಯಲ್ಲವೆ? ಸೈನಿಕರನ್ನೂ ಪಕ್ಷರಾಜಕೀಯದ ಅಂಗವಾಗಿ ನೋಡುವ, ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ದೇಶಭಕ್ತಿಗೆ ಬಗೆಯುವ ದ್ರೋಹವಾಗುತ್ತದೆ. ಇತ್ತೀಚಿನ ಪಾಕ್ ಉಗ್ರಗಾಮಿಗಳ ಅಡಗುದಾಣಗಳ ಮೇಲೆ ನಡೆದ ನಿರ್ಧಿಷ್ಟ ದಾಳಿಗಾಗಿ  ನಮ್ಮ ಸೈನಿಕರಿಗೆ ಸಲಾಂ ಹೇಳಲೇಬೇಕು.  ಸಾವಿಗಂಜದ ಸೈನಿಕರ ದೇಶಭಕ್ತಿಯನ್ನು ಮೆಚ್ಚಲೇ ಬೇಕು. ಅದೇ ಸಂದರ್ಭದಲ್ಲಿ ಸೈನಿಕರ ಸರ್ಜಿಕಲ್ ದಾಳಿಯು ರಾಜಕೀಯ ಚರ್ಚೆಯಾಗಬಾರದೆಂಬ ವಿವೇಕ, ಔಚಿತ್ಯಗಳು ನಮ್ಮ ದೇಶಭಕ್ತಿಗೆಬೇಕು.

ಸಾಮಾಜಿಕ ಸರ್ಜಿಕಲ್‌ದಾಳಿ

ದೇಶಭಕ್ತಿಗೆ ಪಕ್ಷಗಳ ಪಟ್ಟ ಕಟ್ಟಬಾರದು. ಉಗ್ರಗಾಮಿ ವಿರುದ್ಧದ ಸರ್ಜಿಕಲ್ ದಾಳಿಯನ್ನು ಮೆಚ್ಚಲು ಪಕ್ಷ ರಾಜಕೀಯ ಅಡ್ಡಿಯಾಗಬಾರದು. ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚಿದರೆ ನಾವು ಬಿ.ಜೆ.ಪಿ ಯಾಗುವುದಿಲ್ಲ. ಅನ್ನ ಭಾಗ್ಯ ಯೋಜನೆ ಮೆಚ್ಚಂದರೆ ಕಾಂಗ್ರೆಸ್ ಆಗುವುದಿಲ್ಲ. ನಿಜದ ಮೆಚ್ಚುಗೆಗೆ ಮಡಿವಂತಿಕೆ ಬೇಕಾಗಿಲ್ಲ. ಈ ಮಡಿವಂತಿಕೆ ಕನ್ನಡ ಸಾಹಿತ್ಯದಲ್ಲಿ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಮತ್ತು ಮನಸ್ಸಿದೆ ಆದರೆ ದೇಶದ ಹೊರಗಿನ ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚುತ್ತಲೇ ದೇಶದ ಒಳಗಿನ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ನಾವು ವಿರೋಧಿಸಬೇಕು. ಹಾಗಾದರೆ ಈ ಸಾಮಾಜಿಕ ಸರ್ಜಿಕಲ್ ದಾಳಿಗಳು ಯಾವುವು? ಜಾತಿವಾದ, ಕೋಮುವಾದ, ಲಿಂಗತ್ವ  ಅಸಮಾನತೆ, ಆರ್ಥಿಕ ಅಸಮಾನತೆ - ಮುಂತಾದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ವಿರೋಧಿಸಿ, ಜಾತಿವಿನಾಶ, ಧಾರ್ಮಿಕ ಸೌಹಾರ್ದ, ಮಹಿಳಾ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳನ್ನು ಸ್ಥಾಪಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಬೇಕು. ಇಲ್ಲಿ ಎಲ್ಲ ಜಾತಿಗಳೂ ಸಮಾನ, ಎಲ್ಲಧರ್ಮಗಳೂ ಸಮಾನ, ಪುರುಷ ಮಹಿಳೆಯರಿಬ್ಬರೂ  ಸಮಾನ- ಈ ಸಮಾನತೆಯ ಸಂವೇದನೆ ನಮ್ಮದಾಗಬೇಕು. ಶತ ಶತಮಾನದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ಎದುರಿಸಿ ಮಾನವೀಯ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು. ಈ ಬದ್ಧತೆಯನ್ನು ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಕಾಣಬೇಕು. ಕನ್ನಡ ಸಂವೇದನೆಯು ಸಾಮಾಜಿಕ ಸರ್ಜಿಕಲ್ ದಾಳಿಗೆ ಎದುರಾಗಿ ನಿಂತ ಧೀಮಂತ ಮೌಲ್ಯವನ್ನು ಅರ್ಥಮಾಡಿ ಕೊಳ್ಳದಿದ್ದರೆ ನಮ್ಮ ಕನ್ನಡ ಸಾಹಿತ್ಯದ ಓದು ವ್ಯರ್ಥವಾಗುತ್ತದೆ. ಕನ್ನಡಾಭಿಮಾನವೂ ಅರೆಕೊರೆಯಾಗುತ್ತದೆ.

ಜಾತಿಗಳಾಗಿ ಜನಗಳನ್ನು ಒಡೆದ ಪದ್ಧತಿ ಹಾಗೂ ಪರಿಕಲ್ಪನೆಯನ್ನೇ ಪಲ್ಲಟಗೊಳಿಸಿದ ಪಂಪನ ಪ್ರತಿಪಾದನೆಯನ್ನು ಗಮನಿಸಿ: ಕುಲಂ ಕುಲಮಲ್ತು ಚಲಂ ಕುಲಂ| ಅನನ್ಯ ಕುಲಮಭಿಮಾನ ಮದೊಂನೆ ಎಂದ ಪಂಪ ಕವಿ, ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ ಎಂದು ತನ್ನ ಚಾರಿತ್ರಿಕ ಸಂದರ್ಭಕ್ಕನುಗುಣವಾಗಿ ಪುನರ್ ವ್ಯಾಖ್ಯಾನ ಮಾಡಿ ಜನ್ಮ ಮೂಲ ಕುಲಪದ್ಧತಿಯನ್ನು ನಿರಾಕರಿಸಿದ. ಅಲ್ಲದೆ ‘ಮನುಷ್ಯಜಾತಿ ತಾನೊಂದೆ ವಲಂ  ಎಂಬ ಆದರ್ಶ ವಾಕ್ಯ ನುಡಿದದ್ದು ಸಹ ಪಂಪನ ಕಾವ್ಯ. ಬಸವಣ್ಣನವರ ನೇತೃತ್ವದ ವಚನ ಚಳವಳಿಯು ಜಾತಿ ಶ್ರೇಷ್ಠತೆಯನ್ನು ಧಿಕ್ಕರಿಸಿ ಶಿವಸಂಸ್ಕೃತಿಯಲ್ಲಿ ತಳಸಮುದಾಯಗಳನ್ನು ಒಳಗೊಂಡ ಪರ್ಯಾಯವನ್ನೇ ರೂಪಿಸಿತು. ಕನಕದಾಸರು ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ನೇರ ಕರೆ ಕೊಟ್ಟರು. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ? ಎಂದು ಸರ್ವಜ್ಞ ಪ್ರಶ್ನಿಸಿದ. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ  ನವೋದಯ ಸಾಹಿತ್ಯ  ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿತು. ವಿಶೇಷವಾಗಿ ಕುವೆಂಪು ಅವರ ಜಲಗಾರ, ಶೂದ್ರ ತಪಸ್ವಿಯಂತಹ ನಾಟಕಗಳು ಆಧ್ಯಾತ್ಮಕ್ಕೆ ಹೊಸ ಆಯಾಮ ಒದಗಿಸಿ ಸಾಮಾಜಿಕ ಪ್ರಜ್ಞೆಯ ಪ್ರತೀಕವಾದವು.  ಪ್ರಗತಿಶೀಲ ಸಾಹಿತ್ಯ ವರ್ಗಭೇದವನ್ನು ವಿರೋಧಿಸಿತು.  ದಲಿತ-ಬಂಡಾಯ ಸಾಹಿತ್ಯವು ಚಳವಳಿಯ ಸ್ವರೂಪ ಪಡೆದು ಜಾತಿಮೂಲ, ವರ್ಗಮೂಲದ  ಸ್ವದೇಶಿ ಸರ್ಜಿಕಲ್ ದಾಳಿಗಳನ್ನು ಧಿಕ್ಕರಿಸಿತು. ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಜಾತಿಮೀರಿದ  ಕ್ರಿಯೆಯಲ್ಲಿ ತೊಡಗಿದವರಲ್ಲಿ ಮೇಲ್‌ಜಾತಿಯವರೂ ಇದ್ದಾರೆ. ಸಾಮಾಜಿಕ ಚಳುವಳಿ ಕಟ್ಟಿದವರಲ್ಲಿ  ಶೋಷಿತ ಸಮುದಾಯದವರು ಇದ್ದಾರೆ. ಕನ್ನಡ ಸಂವೇದನೆ ಇದೆಲ್ಲವನ್ನೂ ಒಳಗೊಂಡಿದೆ. ಜಾತಿಮೂಲ ಸರ್ಜಿಕಲ್ ದಾಳಿಗಳನ್ನು ಎದುರಿಸಿದೆ.

ಇಂದು ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು  ಯುದ್ಧೋತ್ಪಾದನೆಗಳು ಒಟ್ಟಿಗೇ ವಿಜೃಂಭಿಸುತ್ತಿವೆ.ನಮಗೆ ಭಯೋತ್ಪಾದನೆಯೂ ಬೇಡ; ಯುದ್ಧೋತ್ಪಾದನೆಯೂ ಬೇಡ. ಧರ್ಮ-ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕುವ ಕೋಮುವಾದವೂ ಬೇಡ. ಕೋಮುವಾದದ ವಿರೋಧವೆಂದರೆ ಎಲ್ಲಧರ್ಮಗಳ ಮೂಲಭೂತವಾದದ ವಿರೋಧ. ಜನರನ್ನು ಒಡೆಯುವುದಕ್ಕಾಗಿ ಧರ್ಮ, ದೇವರುಗಳನ್ನು ಬಳಸಿಕೊಳ್ಳುವ ಸಂಕುಚಿತ ಧಾರ್ಮಿಕ ಸರ್ಜಿಕಲ್ ದಾಳಿಗಳನ್ನು ನಾವು ಒಟ್ಟಾಗಿ ಹಿಮ್ಮೆಟ್ಟಿಸಬೇಕು. ದೀನ ದಲಿತರ, ಬಡಬಗ್ಗರ, ಮಹಿಳೆಯರ, ಮಕ್ಕಳ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ಆದ್ಯತೆಯಾಗಬೇಕು, ಇಂಥ ಆಶಯವು ಕನ್ನಡ ಸಾಹಿತ್ಯ ಸಂವೇದನೆಯ ಭಾಗವಾಗಿದೆ. ನಿತ್ಯೋತ್ಸವ ತಾಯಿ ನಿತ್ಯೋತ್ಸವ ಎಂದು ಹಾಡಿದ ಕೆ.ಎಸ್. ನಿಸಾರ್. ಅಹಮದ್ ಅವರ ಇನ್ನೊಂದು ಪದ್ಯದ ಈ ಭಾಗವನ್ನು ನೋಡಿ: ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ| ನೋವು ನಗೆಯ  ಸಮ್ಮಿಶ್ರದಲ್ಲಿ ಎದೆಯಾಯಿತದರ ವಶ್ಯ| ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ| ಒಂದೆ ನೆಲದ ರಸ ಹೀರಲೇನು? ಸಿಹಿಕಹಿಯ ರುಚಿಯಕಾಯಿ. ಇನ್ನೊಂದು ಪದ್ಯದಲ್ಲಿ ಅಪನಂಬಿಕೆಯ ಸನ್ನಿವೇಶದ ಬಗ್ಗೆ ಹೀಗೆ ಹೇಳುತ್ತಾರೆ: ಪಕ್ಕದ ಬೂಳನ ಏಜೆಂಟರೆಂದೆ  ಹಳೆ ಹೇಳಿಗೆಯ ನಂಜೆದೆಯ ತಳಿಗಳ ಜೊತೆಯಲ್ಲ್ಲೆ ಹೊಸಪೀಳಿಗೆಯ ನಿರಪಾಯ ಸುಳಿಗಳನು| ದೂಡುವೆ ಸಂಶಯದ ಖೆಡ್ಡಕ್ಕೆ ತಾಯಿ| ಲೇಬಲ್ಲನಂಟಿಸುವ ಗಡ್ಡಕ್ಕೆ ತಾಯಿ| ಸವತಿ ಮಕ್ಕಳ ಹಾಗೆ  ಕಾಣಬೇಡವ್ವ.| ಸವತಿ ಮಕ್ಕಳ ಹಾಗೆ ಕಾಡ ಬೇಡ- ದೇಶಪ್ರೇಮಿ ನಿಸಾರ್ ಅಹಮದ್ ಅವರು ಅಂದೆಂದೋ ಬರೆದ ಈ ಪದ್ಯ ಇಂದಿಗೂ ಪ್ರಸ್ತುತವಾಗಿದೆಯೆಂದರೆ ನಮ್ಮ ಸನ್ನಿವೇಶಕ್ಕೆ ನಾವೇ ನಾಚಬೇಕು. ಅಪನಂಬಿಕೆಯ, ಅಸಹನೆಯ ಅನೈತಿಕ ಪೊಲೀಸ್ ಗಿರಿ ನಿಲ್ಲಬೇಕು.  ಈಗ ಚಂದ್ರಶೇಖರ ಕಂಬಾರರ ಒಂದು ಪದ್ಯದ  ಈ ಸಾಲುಗಳನ್ನು ಗಮನಿಸಿ: ಏನು ಹೇಳಲೆವ್ವ ಭಾರತಿ ಇಡೀ ಜಗದಾಗೆಲ್ಲ ಹೆಚ್ಚೇತಾವ ನಿನ್ನಕೀರುತಿ | ಹತ್ತವತಾರಕೆ ಹೆತ್ತವಳಾದೆ ಚಿಲ್ಲರೆ ದೇವರ ಛತ್ತೀಸು ಕೋಟಿ| ದೇವರಿಗೊಂದು ಜಾತಿಯ ಕಟ್ಟಿ ಒಬ್ಬೊಬ್ಬರಿಗೊಬ್ಬರು ಎತ್ತೆತ್ತಿ ಕಟ್ಟಿ | ಜನಗಣವೆಲ್ಲ ರಣರಂಗಮಾಡಿ ಧರ್ಮವಮಾರಿ ದೇವರ ಕೊಂಡಿ| ಏನುಹೇಳಲೆವ್ವ ಭಾರತಿ  ಜಗದಾಗೆಲ್ಲ ಹಬ್ಬೇ ತಾವ ನಿನ್ನ ಕೀರುತಿ|
ಇಲ್ಲಿ ಜಾತಿ, ಧರ್ಮ,  ದೇವರ ದುರುಪಯೋಗವನ್ನು ಕವಿ  ವಿಷಾದದಿಂದ ಕಟ್ಟಿಕೊಟ್ಟಿದ್ದಾರೆ. ಧಾರ್ಮಿಕ ಸಂಘರ್ಷ ಕೇವಲ ಒಂದು ಆಧುನಿಕ ಗುಣಲಕ್ಷಣವಲ್ಲ. ಕರ್ನಾಟಕದಲ್ಲಿ ಹಿಂದೆಯೂ ಸಂಘರ್ಷಗಳು ಸಂಭವಿಸಿವೆ. ಜೊತೆಗೆ ಸೌಹಾರ್ದದ ಆಶಯ ಮತ್ತು ಪರಿಹಾರದ ಉದಾಹರಣೆಗಳೂ ಇವೆ. ೮ನೇ ಶತಮಾನದಲ್ಲೇ ಶ್ರೀ ವಿಜಯ ತನ್ನ ‘ಕವಿರಾಜ ಮಾರ್ಗದಲ್ಲಿ ಹೇಳಿದ ಸೌಹಾರ್ದ ಸಂದೇಶವನ್ನು ಇಲ್ಲಿ ನೆನಯಬಹುದು: ಕಸವರಮೆಂಬುದು ನೆರೆಸೈ| ರಿಸಲಾರ್ಪೋಡೆ ಪರವಿಚಾರಮುಂ ಧರ್ಮಮುಮುಂ| ಕಸವೇಂ ಕಸವರವೆನು| ಬಬ್ಬಸಮಂ ಬಸವಲ್ಲದಿರ್ದು ಮಾಡುವರೆಲ್ಲಂ| ಎಂಬ ಪದ್ಯದಲ್ಲಿ ಕವಿರಾಜಮಾರ್ಗಕಾರನು ‘ಅನ್ಯಧರ್ಮ ಮತ್ತು ಅನ್ಯವಿಚಾರಗಳನ್ನು ಸಹಿಸುವುದೇ ಬಂಗಾರ ಎಂದು ಹೇಳುತ್ತಾನೆ.

ಸಹಿಷ್ಣುತೆಯಿಲ್ಲದಿದ್ದರೆ ಕಸವೂ ಅಷ್ಟೇ ಬಂಗಾರವೂ ಅಷ್ಟೇ ಎಲ್ಲವೂ ಕಷ್ಟವುಂಟು ಮಾಡುತ್ತದೆಯೆಂಬ ವಿವೇಕ ನುಡಿಯುತ್ತಾನೆ.  ೧೩೫೪ರ ಒಂದು ಶಾಸನವನ್ನು ಗಮನಿಸಬಹುದು. ಈ ಶಾಸನದಲ್ಲಿ ಉಲ್ಲೇಖವಾಗಿರುವಂತೆ ಜೈನರಿಗೂ ವೈಷ್ಣವರಿಗೂ ನಡೆದ ಧಾರ್ಮಿಕ ಸಂಘರ್ಷವನ್ನು ರಾಜನು ತನ್ನದೇ ರೀತಿಯಲ್ಲಿ ಬಗೆಹರಿಸುತ್ತಾನೆ. ವೈಷ್ಣವರು ಜಿನಮಂದಿರಕ್ಕೆ ಹೋಗಿ ಪಂಚ ವಾದ್ಯಗಳನ್ನು  ಬಾರಿಸಬೇಕು ಮತ್ತು ಜೈನರು ವೈಷ್ಣವರ ದೇವಾಲಯಗಳಿಗೆ ಸುಣ್ಣಬಣ್ಣ ಬಳಿಯಬೇಕು ಎಂದು ರಾಜ ಆದೇಶಿಸಿ ಎರಡೂ ಧರ್ಮಗಳ ಪರಸ್ಪರ ಒಳಗೊಳ್ಳುವಿಕೆಗೆ ಕಾರಣವಾಗುತ್ತಾನೆ. ಸೌಹಾರ್ದ ಸ್ಥಾಪಿಸುತ್ತಾನೆ. ಅಂದು ಸಾಧ್ಯವಾದ ಸೌಹಾರ್ದ ಇಂದೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯೊಂದಿಗೆ ಕನ್ನಡ ಸಂವೇದನೆಯು ಸಮಕಾಲೀನ ಸೌಹಾರ್ದ ಸಂವೇದನೆಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಬೇಕಾಗಿದೆ. ಇಲ್ಲದಿದ್ದರೆ ಕೋಮುವಾದಕ್ಕೆ ಕೊನೆಯಿಲ್ಲ. ಆದ್ದರಿಂದ  ಕನ್ನಡ ಸಂವೇದನೆ ಕೋಮುವಾದಕ್ಕೆ  ಕೊನೆ ಹಾಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮದ ಮೂಲಭೂತವಾದವನ್ನು ವಿರೋಧಿಸಬೇಕು. ಹಿಂದೂ ಮುಸ್ಲಿಂ ಬಂಧುಗಳು ಒಂದಾಗಿ ಹಬ್ಬಗಳ ಆಚರಣೆಯಲ್ಲಿ ತೊಡಗುತ್ತ ಬಂದ ಪರಂಪರೆಯನ್ನು ನೆನೆಯಬೇಕು. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಸೂಫಿಸಂತರು ಮತ್ತು ತತ್ವಪದಕಾರರು ನಮ್ಮ ಸಮಾಜಕ್ಕೆ ಆದರ್ಶವಾಗಬೇಕು. ಹೈದರಾಬಾದ್ ಕರ್ನಾಟಕವು ಸೂಫಿಸಂತರು ಮತ್ತು ತತ್ವಪದಕಾರರ ಸಮೃದ್ಧ ಭೂಮಿ. ಈ ಭೂಮಿ ಮಾನವ ಬಾಂಧವ್ಯವನ್ನು  ಬಿತ್ತಿ ಬೆಳೆಯುವಂತೆ ಮಾಡಿದ ಕೀರ್ತಿ ಸೂಫಿಗಳಿಗೆ ತತ್ವಪದಕಾರರಿಗೆ ಸಲ್ಲಬೇಕು. ಇಂತಹ ಸೌಹಾರ್ದ ಸಂಸ್ಕೃತಿಯನ್ನು ಕೋಮುವಾದಕ್ಕೆ ಪರ್ಯಾಯವಾಗಿ ಎದುರಾಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸೂಫಿ ಸಿದ್ಧಾಂತ ಮತ್ತು ತತ್ವಪದ ಪದ್ಧತಿಯನ್ನು ಸಂಶೋಧಿಸಿ, ಪ್ರಕಟಿಸಿ, ಪ್ರಸಾರ ಮಾಡಿ, ಜಾತಿವಾದ ಕೋಮುವಾದ ನಿರ್ಮೂಲನದ ಪ್ರಕ್ರಿಯೆಯನ್ನಾಗಿಸಲು ಒಂದು ‘ಸೂಫಿ ಮತ್ತು ತತ್ವಪದ ಸಂಶೋಧನೆ ಮತ್ತು ಪ್ರಸಾರ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತೇನೆ.

ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಆಯಾ ಧರ್ಮದವರೇ ಆಯಾಧರ್ಮದ ಮೂಲಭೂತವಾದಿ, ಪ್ರಗತಿವಿರೋಧಿ ಅಂಶಗಳನ್ನು ವಿರೋಧಿಸಿದ ಸಾಕ್ಷಿಗಳಿವೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಪ್ರಬಲ ಆಯಾಮವಾಗಿ ಅಭಿವ್ಯಕ್ತಿಯ ಗಟ್ಟಿತನ ತೋರಿದ ‘ಮುಸ್ಲಿಂ ಸಂವೇದನೆಯು ಕನ್ನಡ ಸಂವೇದನೆಯ ಭಾಗವೇ ಆಗಿದೆ. ಮುಸ್ಲಿಂ ಸಂವೇದನೆಯ ಅನೇಕ ಲೇಖಕರು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಧಾರ್ಮಿಕ ಮೂಲಭೂತಾದಿಗಳ ಅಸಹಿಷ್ಣುತೆಯನ್ನು ವಿರೋಧಿಸುತ್ತಲೇ ಸ್ವಧರ್ಮ ವಿಮರ್ಶೆ ಮಾಡಿದವರೂ ಇದ್ದಾರೆ. ಒಟ್ಟಾರೆ ಮುಸ್ಲಿಂ ಸಂವೇದನೆಯು ಕನ್ನಡದಲ್ಲಿ ಸೌಹಾರ್ದಕ್ಕೆ ಸಹಯಾನಿಯಾಗಿ  ಸಾಗುತ್ತ ಬಂದಿದೆ.

ಇದೇ ಸಂದರ್ಭದಲ್ಲಿ ಕನ್ನಡವನ್ನು ಎಲ್ಲ ಧರ್ಮೀಯರೂ ಕಟ್ಟಿ ಬೆಳೆಸಿದ್ದಾರೆಂಬುದನ್ನು ನೆನೆಯಬೇಕು. ಕ್ರೈಸ್ತರಾದ ಕಿಟ್ಟಲ್, ಫ್ಲೀಟ್, ರೈಸ್ ಮುಂತಾದವರು ಕಟ್ಟಿದ ನಿಘಂಟು, ಸಂಗ್ರಹಿಸಿದ ಶಾಸನಗಳು ನಮ್ಮ ಸಾಂಸ್ಕೃತಿಕ ಕ್ಷೇತ್ರದ ಬೃಹತ್ ಆಕರಗಳಾಗಿವೆ. ಶಿಶುನಾಳ ಶರೀಫರನ್ನು ಒಳಗೊಂಡಂತೆ ಆನಂತರದ ಅನೇಕ ಮುಸ್ಲಿಂ ಲೇಖಕ-ಲೇಖಕಿಯರು ಕನ್ನಡವನ್ನು ಬೆಳೆಸಿದ್ದಾರೆ. ಆಧುನಿಕ ಕ್ರೈಸ್ತ ಬರಹಗಾರರ ಕನ್ನಡಾಭಿವ್ಯಕ್ತಿಯೂ ಗಮನೀಯವಾಗಿದೆ. ಹೀಗಾಗಿ ಕನ್ನಡವನ್ನು ಜಾತ್ಯತೀತವಾಗಿ ಕಟ್ಟಲಾಗಿದೆಯೆಂದು ನಾವು ತಿಳಿಯಬೇಕು. ಕನ್ನಡ ಒಂದು ಜಾತ್ಯತೀತ ಭಾಷೆ. ನಾವು ಜಾತ್ಯತೀತರಾಗಿ ಬದುಕುವುದು ಒಂದು ಮುಖ್ಯ ಕನ್ನಡ ಸೇವೆ. ಆದರೆ ಕರ್ನಾಟಕದಲ್ಲೂ ಕನ್ನಡ ಕ್ರೈಸ್ತರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೂ ಮುಸ್ಲಿಮರ ನಡುವೆ ಅಪನಂಬಿಕೆ ಬಿತ್ತುವ ಹುನ್ನಾರಗಳು ಕಾಣಿಸುತ್ತಿವೆ.

ಕರ್ನಾಟಕವನ್ನು ಕುವೆಂಪು ಆಶಿಸಿದಂತೆ ‘ಸರ್ವ ಜನಾಂಗದ ಶಾಂತಿಯತೋಟ ಎಂದು ಭಾವಿಸಿ ಬದುಕಬೇಕು. ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಪರಿಕಲ್ಪನೆಯ ಪ್ರತಿಪಾದಕರಾಗಬೇಕು. ಕನ್ನಡಾಭಿಮಾನಕ್ಕೆ ಈ ಜಾತ್ಯತೀತ ತತ್ವದ ತುಡಿತವಿರಬೇಕು. ಆಗ ನಮಗೆ ಮುಸ್ಲಿಂ ಸಂವೇದನೆ ಮತ್ತು ಕ್ರೈಸ್ತ ಕೊಡುಗೆಗಳ ಮಹತ್ವದ ಅರಿವಾಗುತ್ತದೆ.
ಸಾವಿರಾರು ವರ್ಷಗಳ ಸಾಮಾಜಿಕ ಸರ್ಜಿಕಲ್ ದಾಳಿಗೆ  ತುತ್ತಾದವರು ಈ ದೇಶದ ದಲಿತರು. ಕರ್ನಾಟಕದಲ್ಲಿ ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ರೂಪುಗೊಂಡ ದಲಿತ ಚಳವಳಿಯು ಇಂತಹ ದಾಳಿಗಳಿಗೆ ಪ್ರತಿರೋಧ ಒಡ್ಡಿತು. ದೇಶದ ಅನೇಕ ಭಾಗಗಳಲ್ಲಿಯೂ ದಲಿತ ಚಳವಳಿಗಳು ನಡೆದವು. ಆದರೆ ೨೧ನೇ ಶತಮಾನದಲ್ಲೂ ಅಸ್ಪೃಶ್ಯತೆಯ ಆಚರಣೆ ನಿಂತಿಲ್ಲ. ಈಗಲೂ ನಮ್ಮ ದೇಶದಲ್ಲಿ ೧ಕೋಟಿ ೭೮ ಲಕ್ಷ ೨೯೬  ದಲಿತರು ಕೈಯಲ್ಲಿ ಮಲ ಎತ್ತುತ್ತಿದ್ದಾರೆ. ೮ಕೋಟಿ  ೮೨ ಲಕ್ಷ ೨೭೧ ಜನ ದಲಿತರು ಚರಂಡಿ ಇತ್ಯಾದಿಗಳಿಗೆ ಮಲ ಸಾಗಿಸುತ್ತಿದ್ದಾರೆ.  ಈಗಲೂ ೫ ದಿನಕ್ಕೊಂದು ದಲಿತ ಕೊಲೆಯಾಗುತ್ತಿದೆ. ಪ್ರತಿ ೫ಗಂಟೆಗೊಂದು  ದಲಿತ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದೆ. ದೇಶದಲ್ಲಿ  ೨೦೧೪ರಲ್ಲಿ ೪೭,೦೬೪ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ೨೦೧೫ರಲ್ಲಿ ೨೦೩೫ ಪ್ರಕರಣಗಳು ದಾಖಲಾಗಿವೆ. ೬೯ ದಲಿತರ ಕೊಲೆ ೧೭೧ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಸಂಭವಿಸಿದೆ. ಆದರೂ ನಾವು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ ಮನಷ್ಯರನ್ನೇ  ಮುಟ್ಟದ ಸಾಮಾಜಿಕ ಸಂವಿಧಾನವನ್ನು ವಿಸ್ತರಿಸುವ ಕಾರ್ಯ ನಿಲ್ಲದೆ ಹೋದರೆ ಅಭಿವೃದ್ಧಿಗೆ ಏನರ್ಥ? ನಮ್ಮ ಸನಾತನ ‘ಸಾಮಾಜಿಕ ಸಂವಿಧಾನವು ಆಧುನಿಕ ‘ರಾಜಕೀಯ ಸಂವಿಧಾನಕ್ಕೆ ಸವಾಲೊಡ್ಡುವಷ್ಟು ಕೆಟ್ಟ ಶಕ್ತಿ ಪಡೆದಿದೆಯೆಂದ ಮೇಲೆ ಮಾನವೀಯತೆಗೆ ಅಪಮಾನವಲ್ಲವೆ?

ಈ ಪ್ರಶ್ನೆಯನ್ನು ಕನ್ನಡ ಸಾಹಿತ್ಯ ಕೇಳುತ್ತ ಬಂದಿದೆ. ೧೨ನೇ  ಶತಮಾನದ ವಚನ ಚಳವಳಿಯು ದಲಿತರಿಗೂ  ಮಹಿಳೆಯರಿಗೂ ಧಾರ್ಮಿಕ ಸಮಾನತೆ ಕೊಟ್ಟು ಗೌರವಿಸಿದ್ದು ಗೊತ್ತೇ ಇದೆ. ‘ಹರಿಶ್ಚಂದ್ರಕಾವ್ಯದ ಅನಾಮಿಕೆಯರು ವಿವಾಹವಾಗಲು ಹರಿಶ್ಚಂದ್ರನನ್ನು ಕೇಳಿದಾಗ  ಆತ ನಿರಾಕರಿಸಿದ ಸಂದರ್ಭದಲ್ಲೂ ಅಸ್ಪೃಶ್ಯತೆಯ  ಪ್ರಶ್ನೆಯಿದೆ. ‘ನಿನಗೆ ಸ್ಪರ್ಶೇಂಂದ್ರಿಯ ಮಾತ್ರ ಶ್ರೇಷ್ಠವಾಯಿತೆ? ಎಂದು ಅನಾಮಿಕೆಯರೇ  ಜಗ್ಗಿಸಿ ಕೇಳುತ್ತಾರೆ. ಕಡೆಯಲ್ಲಿ ಹರಿಶ್ಚಂದ್ರ ಅಸ್ಪೃಶ್ಯ ವೀರಬಾಹುಕನ ಸೇವೆ ಮಾಡಿದಾಗ ಶಿವಸಾಕ್ಷಾತ್ಕಾರವಾಗುವುದು ಕುಲಮದ ನಿರಸನದ ಪ್ರತೀಕವಾಗಿದೆ. ಆಧುನಿಕ ಸಾಹಿತ್ಯ ಸಂದರ್ಭದಲ್ಲಂತೂ ಗಟ್ಟಿದನಿಯ ಹಾಗೂ ಸೂಕ್ಷ್ಮಸಂವೇದನೆಯ ಅನೇಕ ದಲಿತ ಬರಹಗಾರರು ಬಂದಿದ್ದಾರೆ. ಇದರ ಫಲವಾಗಿ ದಲಿತ ಸಂವೇದನೆಯು ಕನ್ನಡದ- ಕರ್ನಾಟಕದ ಪ್ರಮುಖ ಸಂವೇದನೆಯಾಗಿದೆ. ಕನ್ನಡ ಸಾಹಿತ್ಯ ಯಾವತ್ತೂ ದಲಿತ ಪರ ಅಭಿವ್ಯಕ್ತಿಗೆ ಹೆಸರಾಗಿದೆ.  ಇದೇ ಹೊತ್ತಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒಂದು ಮಾತು ಹೇಳಬೇಕಾಗಿದೆ. ದಲಿತರಿಗೆ  ಮೊದಲು ಭೂಮಿಕೊಡಿ. ಭೂಮಿ ಆಧಾರದಲ್ಲಿ ಸ್ವಯಂ ಅನ್ನಭಾಗ್ಯ ಪಡೆಯುವ ಹಂತಕ್ಕೆ ಅವರ ಬದುಕನ್ನು ಬೆಳೆಸಿ. ನಮ್ಮ ದಲಿತಪರ ಚಳವಳಿಗಳಿಗೆ ಭೂಮಿ ಮತ್ತು ಉದ್ಯೋಗಗಳೇ ಆದ್ಯತೆಯಗುರಿಗಳಾಗಬೇಕು. ದೇವರು ಮತ್ತು ದೇಗುಲಗಳ ಗುರಿ ಮೊದಲ ಆದ್ಯತೆಯಲ್ಲ. ಬುದ್ಧಗುರು ದೇವರ ಬಗ್ಗೆ ಮೌನ ವಹಿಸಿದರು. ಬಸವಣ್ಣನವರು ಸ್ಥಾವರ ದೇಗುಲಗಳನ್ನು ಧಿಕ್ಕರಿಸಿ ‘ದೇಹವೇ ದೇಗುಲ ಎಂಬ ತತ್ವಕೊಟ್ಟರು. ಅಂಬೇಡ್ಕರ್ ಸಾಮಾಜಿಕ ಆರ್ಥಿಕ ಸಮಾನತೆಗಾಗಿ  ದುಡಿದರು. ಬುದ್ಧ, ಬಸವ, ಅಂಬೇಡ್ಕರ್ ಹೆಸರಿನ ಮೇಲೆ ನಡೆಯುವ ಚಳವಳಿಗಳು ಈ ಸಾಧಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು. ಈ ಸಾಧಕ ತಾತ್ವಿಕ ಆದರ್ಶಗಳು ಚಳವಳಿಯ ಆದ್ಯತೆಯಾದಾಗ ದಲಿತರಿಗಷ್ಟೇ ಅಲ್ಲ ಎಲ್ಲರಿಗೂ ಭೂಮಿ ಮತ್ತು ಉದ್ಯೋಗ ಕೊಡಿ ಎಂಬ ಹೋರಾಟ ಮುಖ್ಯವಾಗುತ್ತದೆ.

ನಮ್ಮ ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತ ಬಂದ ದಾಳಿಗಳಿಗೆ ಇತಿಹಾಸವೇ ಇದೆ. ಲಿಂಗತ್ವ ಅಸಮಾನತೆಯನ್ನು ಒಡಲಲ್ಲಿ ಇಟ್ಟುಕೊಂಡು ರೂಪಿತವಾದ ಸಾಮಾಜಿಕ - ಆರ್ಥಿಕ ಸಂರಚನೆಯ ಸಂಕೀರ್ಣತೆಯನ್ನು ಕನ್ನಡ ಸಾಹಿತ್ಯ ಬಿಡಿಸುತ್ತ ಬಂದಿದೆ. ಮಹಿಳೆಯರ ವಿಮೋಚನೆಗೆ ಪೂರಕವಾದ ಮಾನಸಿಕ ಆವರಣ ನಿರ್ಮಿತಿಯಲ್ಲಿ ಕನ್ನಡ ಸಂವೇದನೆಯ ಪಾತ್ರ ದೊಡ್ಡದು.  ಕನ್ನಡ ಸಂವೇದನೆಯ ಭಾಗವಾಗಿ ಬೆಳೆದ ಸ್ತ್ರೀಪರ ಸಂವೇದನೆಯ ಫಲವಾಗಿ ಸ್ತ್ರೀ ಸ್ವಾತಂತ್ರ್ಯದ ಸಿದ್ಧಾಂತ ಮತ್ತು ಸಂವೇದಾಶೀಲತೆಗಳನ್ನು ಅನೇಕ ಕನ್ನಡ ಲೇಖಕಿಯರ ಕೃತಿಗಳಲ್ಲಿ ಕಾಣಬಹುದಾಗಿದೆ. ಕಟ್ಟುಪಾಡುಗಳನ್ನು ಒಡೆದು ಹೊಸದಾಗಿ ಕಟ್ಟುವ ಕ್ರಿಯೆಯಲ್ಲಿ ಕನ್ನಡ ಮಹಿಳಾ ಸಾಹಿತ್ಯ ಹಿಂದೆ ಬಿದ್ದಿಲ್ಲ. ಆದರೆ ಇಂದು  ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಕ್ರೌರ್ಯದ  ಕತೆಗಳಾಗಿ ಕಾಡುತ್ತಿವೆ. ಕಣ್ಣೀರ ಕವಿತೆಗಳು ಎದುರುನಿಂತಿವೆ. ಅಸಹಾಯಕತೆ ಆಕ್ರೋಶಗಳೊಂದಾದ ವೈರುಧ್ಯಗಳು ಪ್ರಶ್ನಿಸುತ್ತಿವೆ. ಆದ್ದರಿಂದ ಮಹಿಳೆಯುರ ಮೇಲಿನ ದೌರ್ಜನ್ಯ, ಹಾಗೂ ಅತ್ಯಾಚಾರಗಳೆಂಬ ಸರ್ಜಿಕಲ್ ದಾಳಿಗೆ ವಿರುದ್ಧವಾಗಿ ಕನ್ನಡ ಮತ್ತು ಕರ್ನಾಟಕದ ಸಂವೇದನೆ ನಿಲ್ಲಬೇಕು.
ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ವಿಶಿಷ್ಟ ವ್ಯಕ್ತಿತ್ವದ ಮಹಿಳಾ ಪಾತ್ರಗಳು ಆಧುನಿಕ ಪೂರ್ವದಲ್ಲಿಯೇ ಬಂದಿವೆ. ಜನ್ನನ ‘ಯಶೋಧರ ಚರಿತೆಯ ಅಮೃತ ಮತಿ ಒಂದು  ಸಂಕೀರ್ಣಪಾತ್ರ. ರಾಜನ ಪತ್ನಿಯಾಗಿಯೂ ಒಂಟಿತನದ ಅನುಭವದಿಂದಲೊ ಏನೋ ಮಾವುತನಲ್ಲಿ ಅನುರಕ್ತಳಾಗುವ ಮನಸ್ಥಿತಿಯು ವಿಶೇಷ ಅಧ್ಯಯನಕ್ಕೆ  ಆಕರವಾಗಿದೆ. ಕುಮಾರವ್ಯಾಸನ  ‘ದ್ರೌಪದಿ ಪಾತ್ರವು ಪಗಡೆಯಾಟದಲ್ಲಿ ತನ್ನನ್ನು ಸೋತ ಪತಿಯಂದಿರ ಕ್ರಮವನ್ನು ಖಂಡಿಸುವ ಮತ್ತು ಪ್ರಶ್ನಿಸುವ ರೀತಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ‘ಸತಿಯನೆನ್ನನು  ಮಾರಿ ಧರ್ಮ ಸ್ಥಿತಿಯ ಕೊಂಡರು ಎಂಬ ಆಕೆಯ ವ್ಯಂಗ್ಯ ಒಂದು ಚಾರಿತ್ರಿಕ  ವ್ಯಾಖ್ಯಾನವಾಗಿದೆ. ಮುದ್ದಣ ಚಿತ್ರಿಸಿದ ಮನೋರಮೆಯು ಸ್ವತಂತ್ರ ಪ್ರವೃತ್ತಿಯ ವ್ಯಕ್ತಿತ್ವದ ಜೊತೆಗೆ  ಭಾಷಾ ತಜ್ಞೆಯೂ ಆಗುವುದೊಂದು ವಿಶೇಷ. ಹೀಗೆ ಕನ್ನಡ ಸಾಹಿತ್ಯವು ಸ್ತ್ರೀ ಸ್ವಾತಂತ್ರ್ಯ ಮತ್ತು ಸಂವೇದನೆಯ ಸೂಕ್ಷ್ಮ ಗ್ರಾಹಿಯಾಗಿ ಬೆಳೆದು ಬಂದಿದೆ. ಆದ್ದರಿಂದ ಸ್ತ್ರೀ ಸ್ವಾತಂತ್ರ್ಯ  ಮತ್ತು ಸಂವೇದನೆಯು ಕನ್ನಡಿಗರ ಒಂದು ಮುಖ್ಯ ಮನೋಧರ್ಮವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಮಹಾದೇವಿಯ ರಚನೆಗಳನ್ನು ನೋಡಬಹುದು. ರಾಜಪ್ರಭುತ್ವ ಮತ್ತು ಪುರಷಪ್ರಧಾನ ಮೌಲ್ಯವ್ಯವಸ್ಥೆಗೆ ವಿರುದ್ಧವಾಗಿ ಹೊರಟ ಅಕ್ಕಮಹಾದೇವಿಯ ದಿಟ್ಟತನವು ಚಾರಿತ್ರಿಕ ಸ್ತ್ರೀಸಂವೇದನೆ. ಅಂತೆಯೇ ಆಕೆ ಅನುಭವಿಸಿದ ‘ಅನಾಥಪ್ರಜ್ಞೆಯೂ ಚಾರಿತ್ರಿಕ ಮಹತ್ವವನ್ನು ಪಡೆದಿದೆ. ‘ಚಿಲಿಪಿಲಿಯೆಂದೋದುವ ಗಿಳಿಗಳಿರಾ ನೀವು ಕಾಣಿಕೆ ಎಂದು ಕೇಳುತ್ತ ತನ್ನ ಪತಿಸ್ವರೂಪಿ ಶಿವನನ್ನು ಹುಡುಕುವ ಅಕ್ಕ ಯಾಕೆ ಮನುಷ್ಯರನ್ನು ಕೇಳಲಿಲ್ಲ? ಮನುಷ್ಯರನ್ನು ಮಾತಾಡಿಸಲಾಗದ ಪರಕೀಯತೆಯಲ್ಲಿ ಪ್ರಾಣಿಪಕ್ಷಿಗಳ ಜೊತೆ ಮಾತಾಡುವುದು ಅನಿವಾರ್ಯವಾಗುತ್ತದೆ. ಈ ಅನಿವಾರ್ಯದಲ್ಲಿ ಅಕ್ಕ ಮಹಾದೇವಿ ಅನುಭವಿಸಿದ ಅನಾಥ ಪ್ರಜ್ಞೆಯು ಪುರುಷರದೂ ಆಗುವುದಾದರೆ ಸ್ತ್ರೀ ಸಮಾನತೆಗೆ ಶಕ್ತಿಬರುತ್ತದೆ.

ಕನ್ನಡ ಸಾಹಿತ್ಯವು ರೈತರ ಸಮಸ್ಯೆಗಳಿಗೂ ಸ್ಪಂದಿಸಿ, ರೈತಸಂವೇದನೆಯನ್ನು ಒಳಗೊಂಡಿದೆ. ಅನ್ನದಾತರೆಂದು ಕರೆಸಿಕೊಳ್ಳುವ ರೈತರ ಸಮಸ್ಯೆಗಳು ಇಂದು ಸಂಕೀರ್ಣರೂಪತಾಳುತ್ತಿವೆ. ರೈತರು ತತ್ತರಿಸಿದ ಬದುಕಿಗೆ  ಬಲಿಯಾಗುತ್ತಿದ್ದಾರೆ. ಸಾವಿರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂವೇದನೆ ಯಾವತ್ತೂ ರೈತಪರವಾಗಿದೆ. ಕುವೆಂಪು ಅವರ ‘ನೇಗಿಲಯೋಗಿ ಮತ್ತು ಬೇಂದ್ರೆಯವರ ‘ಭೂಮಿತಾಯಿಯ ಚೊಚ್ಚಲ ಮಗ ಕವಿತೆಗಳನ್ನು ಪ್ರಾತಿನಿಧಿಕವಾಗಿ ನೆನಯಬಹುದು. ಭೂಮಿ ತಾಯಿಯ ಮೊದಲ ಮಕ್ಕಳಾದ ರೈತರಿಗೆ ಯೋಗಿಯ ಸ್ಥಾನವನ್ನು ನೀಡಿದ ಕನ್ನಡ ಸಂವೇದನೆಯ ಆಶಯ ಎಲ್ಲರದೂ ಆಗಬೇಕಾಗಿದೆ. ದಯವಿಟ್ಟು ಗಮನಿಸಿ: ೧೯೫೨ರಲ್ಲಿ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಶೇ.  ೧೨.೫ರಷ್ಟು ಹಣವನ್ನು ಕೃಷಿಗಾಗಿ ಒದಗಿಸಿತ್ತು. ೨೦೧೫ರಲ್ಲಿ ಈಗಿನ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಶೇ. ೩.೭ರಷ್ಟು ಹಣವನ್ನು ಒದಗಿಸಿದೆ. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ೩೭.೩ರಷ್ಟು ಪಾಲು ಒದಗಿತ್ತು. ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ  ಇದು ಶೇ. ೧೦.೬ಕ್ಕೆ ಇಳಿದಿದೆ. ನಬಾರ್ಡ್ ಮತ್ತು ರಿಜರ್ವ್ ಬ್ಯಾಂಕ್ ವರದಿಯ ಪ್ರಕಾರ  ಶೇ. ೬೯ರಷ್ಟು ಸಣ್ಣ ರೈತರಿಗೆ ಮತ್ತು ಶೇ. ೮೭ರಷ್ಟೂ ಅತಿ ಸಣ್ಣ ರೈತರಿಗೆ ಸರ್ಕಾರಿ ಸಾಂಸ್ಥಿಕ ಸಾಲ ಸಿಗುತ್ತಿಲ್ಲ. ಆದ್ದರಿಂದ ಅವರು ಹೆಚ್ಚಿನ ಬಡ್ಡಿ ತೆತ್ತು ಖಾಸಗಿ ಸಾಲನೀಡಿಕೆದಾರರಿಂದ  ಸಾಲ ಪಡೆಯುತ್ತಾರೆ. ಇದೇ ವರದಿ ಪ್ರಕಾರ ದೇಶದಲ್ಲಿ ಶೇ. ೭೦ರಷ್ಟು ಖಾಸಗಿ ಸಾಲ ನೀಡಿಕೆದಾರರು ಇದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಯಾರೆಂದು ನೋಡಿ; ಉತ್ತರ ಸ್ಪಷ್ಟ. ಸಣ್ಣರೈತರು ಮತ್ತು ಅತಿ ಸಣ್ಣ ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ. ನೂರಾರು ಎಕರೆಯ ಒಡೆಯರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ಹಿಂದೆ ನಮ್ಮ  ದೇಶ ಅಳುವಡಿಸಿಕೊಂಡ ಅಮೇರಿಕ ಆರ್ಥಿಕ ನೀತಿಯ  ಪಾಲು ಸಾಕಷ್ಟಿದೆ. ಕೃಷಿಗೆ ಸಬ್ಸಿಡಿ ಕಡಿತದ ನೋಟ ಬಂದದ್ದು ಅಲ್ಲಿಂದಲೇ ಆದರೆ ಅದೇ ಅಮೇರಿಕದಲ್ಲಿ ಶೇ. ೫ರಷ್ಟಿರುವ  ರೈತರಿಗೆ ಒಟ್ಟು ಶೇ. ೨೬ರಷ್ಟು ಸಬ್ಸಿಡಿ ಸಿಗುತ್ತದೆ. ಶೇ. ೬೦ಕ್ಕೂ ಹೆಚ್ಚು ರೈತರಿರುವ ನಮ್ಮ ದೇಶದ್ಲಲಿ ಶೇ. ೨.೩೩ ರಷ್ಟು ಸಬ್ಸಿಡಿ ಕೊಡಲಾಗುತ್ತದೆ. ಎಲ್ಲಕ್ಕೂ ಅಮೇರಿಕಾದ  ಕಡೆ ನೋಡುವ ನಮ್ಮ ಸರ್ಕಾರಗಳು ರೈತರ ಸಬ್ಸಿಡಿ ವಿಷಯದಲ್ಲಿ ಅದೇ ಅಮೇರಿಕವನ್ನು ಯಾಕೆ ಅನುಸರಿಸುತ್ತಿಲ್ಲ? ವಿಶ್ವಬ್ಯಾಂಕ್ ಹೆಚ್ಚು ಸಬ್ಸಿಡಿ ಕೊಡುವುದನ್ನು ಒಪ್ಪುತ್ತಿಲ್ಲ. ಇದೇ ಜಾಗತೀಕರಣದ ರಹಸ್ಯ.

ಜಾಗತೀಕರಣ ಮತ್ತು ಜಾತೀಕರಣ

ಜಾಗತೀಕರಣದ ಫಲವಾದ ಖಾಸಗೀಕರಣ ಮತ್ತು ಬಂಡವಾಳಶಾಹಿ ಉದಾರೀಕರಣಗಳನ್ನು ನಮ್ಮಂತಹ ದೇಶಗಳು ಆಮದು ಮಾಡಿಕೊಂಡು ಅನುಷ್ಠಾನಗೊಳಿಸುತ್ತಿವೆ. ವಿದೇಶಿ ಉತ್ಪನ್ನಗಳ್ನನ್ನೂ ಆಮದು ಮಾಡಿಕೊಂಡು ಅವರಿಗೆ ಮಾರುಕಟ್ಟೆಯಾಗುತ್ತಿವೆ. ನಮ್ಮ ಉತ್ಪನ್ನಗಳಿಗೆ ಮಾತ್ರ ಅಲ್ಲಿ ಮಾರುಕಟ್ಟೆಯಿಲ್ಲ. ಜಾಗತೀಕರಣದಲ್ಲಿ ಇರಬೇಕಾದ ಪರಸ್ಪರ ಕೊಳು-ಕೊಡುಗೆ ಇಲ್ಲಿಲ್ಲ. ಬಲಾಢ್ಯದೇಶಗಳ ಆರ್ಥಿಕ ಸಮೃದ್ಧಿಗೆ, ವಿದೇಶಿ ಬಂಡವಾಳಕ್ಕೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಲಾಭದಾಯಕ ಮಾರುಕಟ್ಟೆಗಳಾಗುತ್ತಿವೆ. ಇಂದಿನ ಜಾಗತೀಕರಣದಲ್ಲಿರುವುದು ಅದೇ ಹಳೆಯ ಊಳಿಗಮಾನ್ಯ ಪದ್ಧತಿಯ ಪರೋಕ್ಷಪ್ರಭುತ್ವ ಮತ್ತು ಅಧೀನತೆಯ ತತ್ವ; ಇದು ಏಕಮುಖೀ ಆರ್ಥಿಕ ಚಲನೆ.  ನಮ್ಮ ದೇಶದಲ್ಲಿ ಇನ್ನೊಂದು ವಿಚಿತ್ರ ಚಲನೆ. ಯಾಕೆಂದರೆ ನಮ್ಮ ದೇಶವು ಜಾತೀಕರಣದಿಂದ ಜಾಗತೀಕರಣದತ್ತ ಚಲಿಸಿದೆ. ಜಾತೀಕರಣ ಮತ್ತು ಜಾಗತೀಕರಣಗಳು ಒಟ್ಟಿಗೇ ಬಲವಾಗುತ್ತಿರುವ  ವಿಶಿಷ್ಟ ಸನ್ನಿವೇಶ ನಮ್ಮದಾಗಿದೆ. ನಿಜ; ಜಾತಿ ಪದ್ಧತಿಯ ಬೇರುಗಳು ಶಿಥಿಲಗೊಂಡಿವೆ. ಆದರೆ ನಾಶವಾಗಿಲ್ಲ. ಈಗ ಎಲ್ಲ ಜಾತಿ ಸಮುದಾಯಗಳೂ ತಮ್ಮ ಪಾಲು ಪಡೆಯಲು ಸ್ಪರ್ಧೆಯಲ್ಲಿವೆ. ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಇದು ಸ್ವಾಭಾವಿಕ ಕ್ರಿಯೆಯಿರಬಹುದು. ಆದರೆ ದೇವರಾಜ ಅರಸು ಅವರು ಹಾವನೂರು ವರದಿಯನ್ನು ಜಾರಿಗೆ ತರುವಾಗ ಆದರ್ಶಿಸಿದ್ದನ್ನು ನೆನೆಯೋಣ.

‘ಜಾತಿಯನ್ನು ಗುರುತಿಸಿ; ಜಾತಿಯನ್ನು ಅಳಿಸಿ - ಎಂದು ಅರಸು ಸಾರಿದರು. ಈಗ ‘ಜಾತಿಯನ್ನು ಗುರುತಿಸಿ; ಜಾತಿಯನ್ನು ಬೆಳೆಸಿ ಎಂಬಂತಾಗಿದೆ. ಇದರ ಫಲವಾಗಿ ಜಾತಿವಾದವು ಬಹುಪಾಲು ಜಾತಿಗಣ್ಯರ ಮನೋವ್ಯಾದಿಯಾಗತೊಡಗಿದೆ; ಈ ಜಾತಿ ಸಂಕೀರ್ಣತೆಯ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದರ  ಜೊತೆಗೆ ಜಾಗತೀಕರಣಕ್ಕೆ  ಪರ್ಯಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಇಂದಿನ ಸನ್ನಿವೇಶದಲ್ಲಿ ಜಾಗತೀಕರಣವನ್ನು ಹಿಂದಕ್ಕೆ ಕಳಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರತ್ಯೇಕ ರಾಜಕೀಯ ವ್ಯವಸ್ಥೆಯೇ ಬೇಕು. ಆದ್ದರಿಂದ ಪರ್ಯಾಯ ಚಳವಳಿಗಳ ಮೂಲಕ ಸಮಾನತೆಯ ಹಕ್ಕುಗಳಿಗಾಗಿ ಒತ್ತಾಯಿಸಬೇಕು. ಪರ್ಯಾಯವೆಂದರೆ ಆಧುನಿಕತೆಯನ್ನು ನಿರಾಕರಿಸುವ ಹಿಂಚಲನೆಯಲ್ಲ. ಆಧುನಿಕತೆಯ ಆರೋಗ್ಯಕರ ಪರಿಕರಗಳನ್ನು ಒಳಗೊಳ್ಳುವ ಪರ್ಯಾಯ ಮಾರ್ಗಗಳು ಮುಖ್ಯವಾಗಬೇಕು. ಈ ದೇಶದ ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು,  ಎಲ್ಲ ಜಾತಿ ಧರ್ಮಗಳ ಬಡವರು ಹಸಿವು  ಮುಕ್ತರಾಗಿ ಬದುಕುವ ಸಮಾನ ಸಮಾಜದ ಆಶಯ ಅನುಷ್ಠಾನಗೊಳ್ಳುವಂತೆ ಮಾಡಬೇಕು. ಜಾತಿ ಆದಿಯೇ ಹೊರತು ಅಂತ್ಯವಲ್ಲ. ಹುಟ್ಟುವಾಗ ಇರುವ ಜಾತಿ ಸಾವು ಸಾಯುವಾಗ ಇರಬಾರದು. ಹೀಗಾದಾಗ ಸಾಮಾಜಿಕ ಸಮಾನತೆ ನೆಲೆಗೊಳ್ಳುತ್ತದೆ. ಇನ್ನು ಬಡತನದ ವಿಷಯ. ಬಡವರ ಬದುಕನ್ನು ಕುರಿತು ಕನ್ನಡ ಕವಿಗಳು ಹಿಂದಿನಿಂದಲೂ ಸ್ಪಂದಿಸಿದ್ದಾರೆ. ಮಧ್ಯಕಾಲೀನ ಕನ್ನಡಕವಿ ಕುಮಾರವ್ಯಾಸ ಪದ್ಯವೊಂದರ ಸಾಲುಗಳೇ ಸಾಕು: ಅರಸು ರಾಕ್ಷ ಮಂತ್ರಿಯೆಂಬುವ | ಮೊರೆವಹುಲಿ ಪರಿವಾರಹದ್ದಿನ ನೆರವಿ| ಬಡವರ ಭಿನ್ನಪವನಿನ್ನಾರು ಕೇಳುವರು? ಎಂಬ ಸಾಲುಗಳ ವಿವರ ಮತ್ತು ಪ್ರಶ್ನೆ ಪ್ರಜಾಪ್ರಭುತ್ವದಲ್ಲೂ ಪ್ರಸ್ತುತವಾಗಿರುವುದು ವಿಷಾದಕರ ವಿಪರ್ಯಾಸ. ಬಡವರ ಬಿನ್ನಪವನಿನ್ನಾರು ಕೇಳುವರು ಎಂಬ ಪ್ರಶ್ನೆ ಇಂದಿನ ಆರ್ಥಿಕ ಸರ್ಜಿಕಲ್ ದಾಳಿಗೆ ಎದುರಾದ ಪ್ರತೀಕವಾಗಿದೆ. ಬೇಂದ್ರೆಯವರು ಹಿಂದೆಯೇ ನುಡಿದಂತೆ ಈಗಲೂ ಕುರುಡು ಕಾಂಚಾಣ ಕುಣಿಯುತ್ತಿದೆ ಕಾಲಿಗೆ ಬಿದ್ದವರ ತುಳಿಯುತ್ತಿದೆ. ಕುವೆಂಪು ಆತಂಕಿಸಿದಂತೆ ಕಲ್ಕಿ ಕಲ್ಕಿ ಎನ್ನುತ ಚೀರಿ ಕನಸೊಡೆದೆದ್ದೆ. ಇನ್ನೆಲ್ಲಿಯ ನಿದ್ದೆ? ನಿದ್ದೆಯಿಲ್ಲದ ಇಂದಿನ ನಮ್ಮ ದೇಶದ ಸ್ಥಿತಿ ಹೇಗಾಗಿದೆಯೆಂದರೆ ಇಲ್ಲಿ ದಲಿತರು. ರೈತರು, ಮಹಿಳೆಯರು, ಬಡವರು ಮಾತ್ರ ಶೋಷಿತರಲ್ಲ. ನಮ್ಮ ದೇಶದಲ್ಲಿ ದೇವರುಗಳೂ ಶೋಷಿತರೇ ಆಗಿದ್ದಾರೆ. ಜನರ ಶೋಷಣೆ ಮಾಡಲು ದೇವರುಗಳನ್ನು ಸಾಧನವಾಗಿ ಬಳಸುವುದೂ ಒಂದು ಶೋಷಣೆಯೇ ಆಗಿದೆ. ಬಡವರು ನಂಬಿದ ದೇವರೇ ಶೋಷಣೆಗೊಳಗಾಗುತ್ತಿರುವಾಗ ಅವರ ‘ಭಿನ್ನಪವನಿನ್ನಾರು ಕೇಳುವರು? ನಾವೊಂದು ದಿಟ್ಟ ನಿಲುವಿಗೆ ಬರಬೇಕು; ನಾವು ದೇಶದ ಹೊರಗೆ ನಡೆಯುವ ಸೈನಿಕ ಸರ್ಜಿಕಲ್ ದಾಳಿಗಳನ್ನು ಬೆಂಬಲಿಸೋಣ. ದೇಶದೊಳಗಿನ ಸಾಮಾಜಿಕ, ಸರ್ಜಿಕಲ್ ದಾಳಿಗಳನ್ನು ಸೋಲಿಸೋಣ. ಆರ್ಥಿಕ ಸರ್ಜಿಕಲ್ ದಾಳಿಗಳನ್ನು ಹತ್ತಿಕ್ಕೋಣ.


ಕೈಗಾರಿಕೀಕರಣದಿಂದ ಬಂದ ಯಂತ್ರ ಜ್ಞಾನದ ಆದ್ಯತೆ ಮತ್ತು ಜಾಗತೀಕರಣದಿಂದ ಬಂದ ತಂತ್ರಜ್ಞಾನದ ಆದ್ಯತೆಗಳಿಗೆ ಪ್ರಾಚೀನ ಪದ್ಧತಿಗಳು ಪರ್ಯಾಯವೂ ಪರಿಹಾರವೂ ಆಗುವುದಿಲ್ಲ. ಕೈಗಾರೀಕರಣದ ಸಂದರ್ಭದಲ್ಲಿ ಏನಿಲ್ಲವೆಂದರೂ ಕುಲಮೂಲ ಪದ್ಧತಿ  ಶಿಥಿಲಗೊಂಡು ಸಾಮೂಹಿಕ ಉತ್ಪಾದನೆಯ ಪದ್ಧತಿ ಜಾರಿಗೆ ಬಂತು.  ಜನರು ಕೈಗಾರಿಕೆಗಳಲ್ಲಿ ಸಾಮೂಹಿಕವಾಗಿ ದುಡಿಯತೊಡಗಿದರು. ಜಾಗತೀಕರಣದ ಹೊಸ ತಂತ್ರಜ್ಞಾನದಲ್ಲಿ ಸಾಮೂಹಿಕ ಉತ್ಪಾದನೆ ಮತ್ತು ದುಡಿಮೆ ಹಿಂದಕ್ಕೆ ಸರಿಯುತ್ತ ವ್ಯಕ್ತಿಮೂಲ ದುಡಿಮೆ  ಆದ್ಯತೆ ಪಡೆಯುತ್ತಿದೆ. ವ್ಯಕ್ತಿಯೊಬ್ಬ  ಕಂಪ್ಯೂಟರ್  ಮುಂದೆ ಕುಳಿತರೆ ಸಾಕು ಒಂಟಿ ಉತ್ಪಾದನೆ ಎಂಬಂತಾಗುತ್ತಿದೆ. ಹೊಸ ತಂತ್ರಜ್ಞಾನದ ಬಳಕೆಯಿಂದ ಕೈಗಾರಿಕಾ ಕಲ್ಪನೆಯೇ ಪಲ್ಲಟಗೊಂಡಿದೆ.  ತಂತ್ರಜ್ಞಾನವು ಉದ್ಯಮವಾಗಿ ಇನ್ನಿಲ್ಲದ ರಭಸದಿಂದ ಮುನ್ನುಗ್ಗುತ್ತಿರುವುದರಿಂದ ಸಮತೋಲನ ತಪ್ಪುತ್ತಿದೆ.  ಉದ್ಯೋಗಗಳಲ್ಲಿ ಸಂವಿಧಾನದ ಆಶಯ ಅಧಃ ಪತನಕ್ಕೆ  ಹೋಗುತ್ತಿದೆ. ಸರ್ಕಾರದ ಸಾಮಾಜಿಕ ನ್ಯಾಯದ ಕಲ್ಪನೆಗೂ ಹೊಸ ತಂತ್ರಜ್ಞಾನ ಪ್ರಣೀತ ಉದ್ಯೋಗ ಪದ್ಧತಿಗೂ ಸಂಬಂಧವಿಲ್ಲದಂತಾಗಿದೆ. ಅಷ್ಟೇ ಅಲ್ಲ. ಹೊಸ ತಂತ್ರಜ್ಞಾನ ಫಲಿತಗಳಾದ ಸಾಮಾಜಿಕ ಜಾಲತಾಣಗಳಲ್ಲಿ ಆಧುನಿಕ ಮನಸ್ಸಿಗೆ ಬದಲಾಗಿ ಹಳೆಯ ಕೊಳಕು ಹಸಿಹಸಿಯಾಗಿ ವಿಜೃಂಭಿಸುತ್ತಿದೆ. ಜನರ ನಡುವಿನ ಅಂತರವೂ ಹೆಚ್ಚುತ್ತಿದೆ. ಹೀಗಾಗಿ ಹೊಸ ತಂತ್ರಜ್ಞಾನದ ಜೊತೆಗೆ ಹೊಸ ವರ್ಣಾಶ್ರಮವೂ ಪ್ರಬಲಗೊಳ್ಳುತ್ತಿದೆಯೆ ಎಂಬ ಪ್ರಶ್ನೆ ನನಗೆ ಎದುರಾಗುತ್ತಿದೆ. ಆದ್ದರಿಂದ ಜಾತೀಕರಣ ಮತ್ತು ಜಾಗತೀಕರಣಗಳು ಒಂದೇ ಸಂದರ್ಭದಲ್ಲಿ ಬಲವಾಗಿರುವ ವಿಚಿತ್ರ ಸನ್ನಿವೇಶವನ್ನು ಸಾವಧಾನದಿಂದ ಪರಿಶೀಲಿಸಿ ಪಕ್ಷಪಾತರಹಿತವಾಗಿ ಪರ್ಯಾಯಗಳನ್ನು ಕಂಡುಕೊಳ್ಳಬೇಕಾಗಿದೆ.
ನಮಗೆ ಕೈಗಾರಿಕರಣದಿಂದ  ಹೊಸ ಯಂತ್ರ ಜ್ಞಾನ ಬಂತು. ಜಾಗತೀಕರಣದಿಂದ ಹೊಸ ತಂತ್ರಜ್ಞಾನ ಬಂತು. ಆದರೆ ಮೌಢ್ಯಾಚರಣೆಗಳು ಹೋಗಲಿಲ್ಲ. ಯಾಕೆ? ಯಾಕೆಂದರೆ ಇವು ಜ್ಞಾನ ಪ್ರಧಾನವಾಗುವ ಬದಲು ಯಂತ್ರ ಮತ್ತು ತಂತ್ರಪ್ರಧಾನವಾದವು. ಮನುಷ್ಯರ ಹೊರಮೈಯ್ಯನ್ನು ಬದಲಾಯಿಸಿದವು. ಒಳಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಲಿಲ್ಲ. ವೈಜ್ಞಾನಿಕ ಮನೋಧರ್ಮ ಪ್ರಬಲವಾಗಲಿಲ್ಲ. ಆದ್ದರಿಂದಲೇ ಜಾಗತೀಕರಣದ ಸಂದರ್ಭದಲ್ಲೂ ಜಾತೀಕರಣ ಮೂಲವಾದ ಮೌಢ್ಯಾಚರಣೆಗಳು ಉಳಿದು ಬೆಳೆದು ಬರುತ್ತಿವೆ. ಮನುಷ್ಯರ ಘನತೆಗೆ ಧಕ್ಕೆ ತರುವ ಮೌಢ್ಯಾಚರಣೆಗಳನ್ನು ಕನ್ನಡ ಸಂವೇದನೆಯು ನಿರಾಕರಿಸುತ್ತ ಬಂದಿರುವುದಕ್ಕೆ ಉದಾಹರಣೆಗಳಿವೆ. ವಿಶೇಷವಾಗಿ ಕನ್ನಡ ಸಾಹಿತ್ಯದಲ್ಲಿರುವ ಮೌಢ್ಯ ವಿರೋಧಿ ಆಶಯಗಳಿಗಾಗಿ ವಚನಸಾಹಿತ್ಯವನ್ನು ಒಂದು ಸಾಕ್ಷಿಪ್ರಜ್ಞೆಯಾಗಿ ನೋಡ ಬಹುದಾಗಿದೆ. ‘ಸೋಮವಾರ, ಮಂಗಳವಾರ, ಮಾಡುವ ಭಕ್ತನ ಲಿಂಗ ಭಕ್ತಂಗೆಂತು  ಸರಿಎಂಬೆನಯ್ಯ, ಎನ್ನುವ ಬಸವಣ್ಣ ಹೋಮಾದಿಗಳನ್ನು ವಿರೋಧಿಸುವುದಲ್ಲದೆ ಶಾಸ್ತ್ರ, ಕರ್ಮಗಳನ್ನು ಅಲ್ಲಿಗಳೆಯುತ್ತಾರೆ.

ಚನ್ನಬಸವಣ್ಣ, ‘ವಾರ ತಿಥಿ, ಸುಮೂಹೂರ್ತವೆಂದು ಲೌಕಿಕವಾದ ಮಾಡಿದಡೆ ನಿಮ್ಮ ಸದ್ಭಕ್ತರಿಗೆ ದೂರವಯ್ಯ ಕೂಡಲ ಚೆನ್ನಸಂಗಮದೇವ ಎನ್ನುತ್ತಾರೆ. ಅಂಬಿಗರ ಚೌಡಯ್ಯನವರಂತೂ ಪಾದೋದಕ ಸೇವನೆಯಿಂದ ಹಿಡಿದು, ಸಮಕಾಲೀನರ ಮೌಢ್ಯಾಚರಣೆಗಳನ್ನು ಕಟುವಾಗಿ ಖಂಡಿಸುತ್ತಾರೆ. ಅಲ್ಲಮಪ್ರಭು ಹೊಸ ಆತ್ಮ ಜ್ಞಾನವನ್ನೇ ಕಟ್ಟಿಕೊಡುತ್ತಾರೆ. ಒಟ್ಟಾರೆ ಎಲ್ಲ ವಚನಕಾರರೂ ತಂತಮ್ಮ ಪರಿಧಿಯಲ್ಲಿ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದರೆ ಕುವೆಂಪು ವರ್ಣಮೂಲ ಶಾಸ್ತ್ರಗಳ ಮೌಢ್ಯವನ್ನು ಧಿಕ್ಕರಿಸಿ ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ಎಂದು ಪ್ರಶ್ನಿಸಿದ್ದಾರೆ - ಬೇಂದ್ರೆಯವರು ‘ಪುಟ್ಟವಿಧವೆಯ ಸಂಕಟಕ್ಕೆ ಸಂವೇದಕರಾಗಿದ್ದಾರೆ. ಇವರು ನಮ್ಮ ಸಾಂಕೇತಿಕ ಸಾಕ್ಷಿ ಪ್ರಜ್ಞೆ ಹೀಗಾಗಿ ಕನ್ನಡ ಸಾಹಿತ್ಯವನ್ನು ಗೌರವಿಸುವುದೇ ನಿಜವಗಿದ್ದಲ್ಲಿ ಸಮಾಜ ಮತ್ತು ಸರ್ಕಾರಗಳಿಗೆ ಮೌಢ್ಯಾಚರಣೆ ಪ್ರತಿಬಂಧಕಕಾಯಿದೆಯನ್ನ ರೂಪಿಸಲು ಮತ್ತು ಜಾರಿಗೊಳಿಸಲು ಮತ್ತೇನು ಒತ್ತಾಸೆಬೇಕು? ಮೌಢ್ಯಗಳ ಸನಾತನ ಸಂಪ್ರದಾಯಗಳನ್ನು ಹಿಂದಿಕ್ಕಿ ಮುಂದೆ ಬಂದ ಪ್ರಗತಿಪರ ಪರಂಪರೆಯ ಪ್ರಜ್ಞೆಯ ಆಧಾರದಲ್ಲಿ, ಎಲ್ಲ  ಧಾರ್ಮಿಕ, ಚಿಂತಕ  ವಲಯಗಳೊಂದಿಗಿನ ಪ್ರಜಾಸತ್ತಾತ್ಮಕ ಚರ್ಚೆ - ಚಿಂತನೆಯೊಂದಿಗೆ ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗೆ ಬಂದು ಕನ್ನಡ ಸಾಹಿತ್ಯದ ಪ್ರಗತಿ ಪರಂಪರೆಗೆ  ಮನ್ನಣೆ ಕೊಡುವಂತಾಗಬೇಕು.

ಆಹಾರ ಸಂಸ್ಕೃತಿಯ ಬಗ್ಗೆಯೂ  ಇಲ್ಲಿ ಪ್ರಸ್ತಾಪಿಸಿಬೇಕು. ಯಾಕೆಂದರೆ ಆಹಾರ ಸಂಸ್ಕೃತಿಗೂ ಕನ್ನಡ ಸಾಹಿತ್ಯ ಪ್ರತಿಕ್ರಿಯಿಸಿದೆ. ಇಂದು ಆಹಾರ ಸಂಸ್ಕೃತಿಯನ್ನು ಕುರಿತಂತೆ ಶ್ರೇಷ್ಠ ಮತ್ತು ಕನಿಷ್ಠತೆಯ ಆಧಾರದಲ್ಲಿ ಅನಗತ್ಯ ವಿವಾದವನ್ನು ಎಬ್ಬಿಸಲಾಗುತ್ತಿದೆ. ಸಮಾಜ ಬದಲಾವಣೆಯ ಆದ್ಯತೆಗಳನ್ನೇ ಬದಲಾಯಿಸಲಾಗುತ್ತಿದೆ. ಅಂದು ದಲಿತ ವಚನಕಾರ್ತಿ ಕಾಳವ್ವೆ ಒಂದು ಪ್ರಶ್ನೆ ಕೇಳಿದರು:
ಕುರಿ ಕೋಳಿ ಕರಿಮೀನು ತಿಂಬವರಿಗೆಲ್ಲ| ಕುಲಜ ಕುಲಜರೆಂದೆಂಬರು| ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ| ಮಾದಿಗ ಕೀಳು ಜಾತಿಯೆಂಬರು| ಅವರೆಂತು ಕೀಳುಜಾತಿಯಾದರು?| ಜಾತಿಗಳು ನೀವೇಕೆ ಕೀಳಾಗಿರೊ? ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವೈಯವರ ಈ ವಚನ ಸ್ವಯಂವೇದ್ಯವಾಗಿದೆ - ಪ್ರಸ್ತುತ ಸಂದರ್ಭದ ಪ್ರಶ್ನೆಯೂ ಆಗಿದೆ.

ಅಷ್ಟೇಕೆ, ಕುಮಾರವ್ಯಾಸ ಕವಿ ವ್ಯಾಧನೊಬ್ಬನನ್ನು ‘ಧರ್ಮವ್ಯಾಧ ಎಂದು ಕರೆದದ್ದು ಇಲ್ಲಿ ಉಲ್ಲೇಖನೀಯ.  ವಿಪ್ರನೊಬ್ಬನು ತನಗೆ ಭಿಕ್ಷೆನೀಡಲು ತಡಮಾಡಿದ ಮಹಿಳೆಯ ವಿರುದ್ಧ ರೇಗಾಡುತ್ತಾನೆ. ಆಕೆ ‘ನಿನ್ನ  ಚಿತ್ತದೊಳಿಲ್ಲ ಪರಿಹಾರ ವಿಂದು ಹೇಳಿದ್ದಲ್ಲದೆ ವ್ಯಾಧನೊಬ್ಬನ ವಿಳಾಸ ಹೇಳಿ ಅಲ್ಲಿಗೆ  ಕಳಿಸುತ್ತಾಳೆ. ಆ ವ್ಯಾಧನು ತನ್ನ ತಾಯಿತಂದೆಯರನ್ನು ಸಾಕಲು ಎಷ್ಟುಬೇಕೋ ಅಷ್ಟು ಬೇಟೆಯಾಡುತ್ತಿರುತ್ತಾನೆ. ‘ಭೂತ ಹಿಂಸೆಯಿದಲ್ಲ. ನಮಗಿದು ಮಾತೃಪಿತೃ ರಕ್ಷಾರ್ಥವು ಎಂಬ ಸಮರ್ಥನೆ ನೀಡುತ್ತಾನೆ. ಮುಖ್ಯವಾಗಿ ಧನ ಮದವ, ಸತ್ಕುಲ ಮದವ, ಯವ್ವನ ಮದವ, ಪರಿಜನ ಮದವ, ವೈಭವ ಮದವ, ಆಚಾರಪದ ಮದವ ಬಿಟ್ಟು ‘ವಿದ್ಯಾವಿನಯ  ಸೌಶೀಲ್ಯದಲಿ ನಡೆಯುವುದು ಎಂದು ವಿಪ್ರನಿಗೆ ತಿಳಿ  ಹೇಳುತ್ತಾನೆ. ಈತನೇ ಧರ್ಮವ್ಯಾದ. ಕುಮಾರವ್ಯಾಸನ ದೃಷ್ಟಿಯಲ್ಲಿ ಈತ ಕೇವಲ ‘ವ್ಯಾಧ ಅಲ್ಲ ‘ಧರ್ಮ ವ್ಯಾದ. ಈತನ  ತಿಳುವಳಿಕೆಯು ಇಂದಿಗೂ ಪ್ರಸ್ತುತ. ಜಾತಿ, ವಿದ್ಯೆ, ವೈಭವ, ಆಚಾರ ಇತ್ಯಾದಿಗಳ ಅಹಂಕಾರವನ್ನು ಬಿಡಬೇಕೆಂಬ ಆತನ ಮಾತು ಆಹಾರ ಸಂಸ್ಕೃತಿಯ ಸಮರ್ಥನೆಯಾಚೆಗೂ ಚಾಚಿಕೊಂಡ ಸಾಮಾಜಿಕ ಸಮಾನತೆಯ ಅರಿವಾಗಿ ಹೊಮ್ಮಿದೆ. ಆದ್ದರಿಂದ ಆಹಾರ ಸಂಸ್ಕೃತಿಯ ಅತಿಕ್ರಮಣದ ಬದಲು ಕಾಲದ ಕಾಳಜಿಗೆ ಬಿಟ್ಟರೆ ಅವರವರ ಅರಿವಿನ ಆಯ್ಕೆಗೆ ತಕ್ಕಂತೆ ಬಳಸುತ್ತಾರೆ; ಬೇಕೆಂದರೆ ಬದಲಾಗುತ್ತಾರೆ. ಆದ್ದರಿಂದ ಆಹಾರ ಸಂಸ್ಕೃತಿ ಚರ್ಚೆಯನ್ನು ಹಾದಿ ಬದಿಯ ಪ್ರದರ್ಶನ ಮಾಡದೆ, ಸಮಾಜ ಬದಲಾವಣೆಯ ಆದ್ಯತೆಗಳತ್ತ ಗಮನಹರಿಸಬೇಕಾಗಿದೆ.

ಧರ್ಮ, ದೇವರು, ಆಸ್ತಿಕತೆ, ನಾಸ್ತಿಕತೆ, ಆಹಾರ, ಪೂಜೆ ಪುನಸ್ಕಾರವೇ ಮುಂತಾದ ವಿಷಯಗಳನ್ನು ಮುನ್ನೆಲೆಗೆ ತಂದು ಜನಸಾಮಾನ್ಯರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವ ಸಾಮಾಜಿಕ ಆರ್ಥಿಕ ನೀತಿಗಳ ಚರ್ಚೆಗಳನ್ನು ಮರೆಸುವ ತಂತ್ರಕ್ಕೆ ನಾವು ಬಲಿಯಾಗಬಾರದು. ಕೃಷಿಯಿಂದ ಹಿಡಿದು ಎಲ್ಲಕ್ಷೇತ್ರಗಳೂ ಉದ್ಯಮ ಮಾತ್ರವಾಗುವ ಅಪಾಯವನ್ನು ಮರೆಯಬಾರದು. ನಾನು  ‘ಉದ್ಯಮ ಮಾತ್ರ ಎಂಬ ಪದವನ್ನು ಪ್ರಜ್ಞಾಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ ವಿವಿಧ ಪ್ರಮಾಣದಲ್ಲಿ ಉದ್ಯಮ  ಇಲ್ಲದಿರುವ ಸಮಾಜ ಇಲ್ಲ.  ಆದರೆ ಎಲ್ಲವೂ ಉದ್ಯಮ ಮಾತ್ರವೇ ಆಗಿಬಿಟ್ಟರೆ ಅದು ಅಪಾಯಕಾರಿ. ಸೇವಾ ಕ್ಷೇತ್ರಗಳಾಗಿದ್ದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಈಗ ಸಂಪೂರ್ಣ ಉದ್ಯಮಗಳಾಗಿವೆ. ಗ್ಯಾಟ್ ಒಪ್ಪಂದದಲ್ಲಿ ಶಿಕ್ಷಣವನ್ನು ಅಧಿಕೃತವಾಗಿಯೇ ‘ಇಜuಛಿಚಿಣioಟಿ Iಟಿಜusಣಡಿಥಿ ಎಂದು ಹೆಸರಿಸಲಾಗಿದೆ. ‘ಊeಚಿಟಣh Iಟಿಜusಣಡಿಥಿ ಎಂಬ ಪರಿಕಲ್ಪನೆ ಚಾಲ್ತಿಗೆ ಬಂದಿದೆ. ಇದು ಇಷ್ಟಕ್ಕೇ ನಿಂತಿಲ್ಲ.ಮಾಧ್ಯಮ ಕ್ಷೇತ್ರಗಳೆಲ್ಲ ಉದ್ಯಮ ಕ್ಷೇತ್ರಗಳಾಗುತ್ತಿವೆ. ಪುಸ್ತಕ ಮಾಧ್ಯಮವನ್ನು ಪುಸ್ತಕೋದ್ಯಮ ಎನ್ನಲಾಗುತ್ತಿದೆ.  ಪತ್ರಿಕಾ ಮಾಧ್ಯಮವನ್ನು ಪತ್ರಿಕೋದ್ಯಮ ಎಂದು ಕರೆಯಲಾಗುತ್ತಿದೆ. ಚಲನಚಿತ್ರ ಮಾಧ್ಯಮ ಚಲನಚಿತ್ರೋದ್ಯಮವಾಗಿದೆ.  ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಉದ್ಯಮಕ್ಕೆ ಸಂಪಾದನೆ ಮುಖ್ಯ. ‘ಸಂಪಾದನೆಯು ‘ಸಂವೇದನೆಯ  ಸಾವಿಗೆ ಕಾರಣವಾಗಬಾರದು. ಸಂಪಾದನೆ ಮತ್ತು ಸಂವೇದನೆಗಳ ನಡುವೆ ಸಮತೋಲನ ಸಾಧಿಸಿ ‘ಮಾಧ್ಯಮ ಸಂಸ್ಕೃತಿಯನ್ನು ಬೆಳೆಸಬೇಕು.

ಕನ್ನಡ ಸಿನಿಮಾ ಸಂವೇದನೆ

ನಾನು ಸಿನಿಮಾ ಕ್ಷೇತ್ರಕ್ಕೂ ಸಂಬಂಧಿಸಿದವನಾದ್ದರಿಂದ ಮತ್ತು ಸಿನಿಮಾ ಬಹುಮುಖ್ಯ ಪ್ರಭಾವಶಾಲಿ ದೃಶ್ಯ ಮಾಧ್ಯಮವಾದ್ದರಿಂದ ಕನ್ನಡ ಸಿನಿಮಾದ ಒಳಿತಿನ ಬಗ್ಗೆ ಮಾತಾಡುವುದು ನನ್ನ ಒಂದು ಜವಾಬ್ದಾರಿ. ಮೊದಲಿಗೆ ನಾನು  ಇತ್ತೀಚಿಗೆ ಸಂಬಂದಿಸಿದ ಸಿನಿಮಾ ದುರಂತವೊಂದನ್ನು ಪ್ರಸ್ತಾಪಿಸಬಯಸುತ್ತೇನೆ. ನವೆಂಬರ್ ೭ರಂದು (೨೦೧೬) ಬೆಂಗಳೂರು ಬಳಿಯ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ‘ಮಾಸ್ತಿಗುಡಿ  ಸಿನಿಮಾದ ಸಾಹಸ ಚಿತ್ರೀಕರಣ ನಡೆದದ್ದು ಮತ್ತು ಇಬ್ಬರು ಕಲಾವಿದರಾದ ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದದ್ದು ನಿಮಗೆ ಗೊತ್ತೇ ಇದೆ. ಮೊದಲಿಗೆ ದುರಂತ ಸಾವಿಗೆ ತುತ್ತಾದ ಅನಿಲ್ ಮತ್ತು ಉದಯ್ ಅವರಿಗೆ  ಶ್ರದ್ಧಾಂಜಲಿ ಸಮರ್ಪಿಸುತ್ತೇನೆ. ೧೦೦ಅಡಿ ಮೇಲಿನಿಂದ  ಕೆರೆಯ ನೀರಿಗೆ ಜಿಗಿಯುವ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಅಗತ್ಯ ಸುರಕ್ಷಿತ ಕ್ರಮಗಳಿಲ್ಲದೆಯೂ  ನಾಯಕರಾಗಿ ವಿಜಯ್ ಮತ್ತು ಖಳನಾಯಕರಾಗಿ ಅನಿಲ್ ಮತ್ತು ಉದಯ್ ಭಾಗವಹಿಸಿ, ಯಾವುದೇ ಡ್ಯೂಪ್‌ಗಳಿಲ್ಲದೆ ನೇರವಾಗಿ ಜಿಗಿದರು. ವಿಜಯ್ ಉಳಿದರು. ಅನಿಲ್-ಉದಯ್ ಸತ್ತರು. ಇದು ಕನ್ನಡ ಸಿನಿಮಾರಂಗದ ದುರಂತ ರೂಪಕವಾಗಿ ನನಗೆ ಕಾಣಿಸುತ್ತದೆ. ನೇರ ಸಾಹಸದ ಪ್ರಚಾರಗಳಿಸುವ ಹುಚ್ಚು ಆಕಾಂಕ್ಷೆ, ಸಹಕಲಾವಿದರಿಗಿಲ್ಲದ ರಕ್ಷಣೆ, ನೀರಿನ ಆಳದಲ್ಲಿ ಹೂಳು ಇದೆ ಎಂಬುದನ್ನು ಗಮನಿಸದ  ಅವಿವೇಕ, ಈಜುಬಾರದಿದ್ದರೂ ಸಾಹಸಕ್ಕೆ ಸೈ ಎನ್ನುವ ಹುಂಬುತನ. ಅಮಾಯಕರು ಬಲಿಯಾದ ಮೇಲೆ ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪ, ಪ್ರತ್ಯಾರೋಪ - ಇವೆಲ್ಲವನ್ನೂ ಹೆಣೆದರೆ ಅದು ಒಟ್ಟು ಚಿತ್ರ ರಂಗದ ಸೂಕ್ಷ್ಮರಹಿತ ಸತ್ಯದ ದುರಂತ ರೂಪಕವೇ ಆಗುತ್ತದೆ. ಈ ದುರಂತ ರೂಪಕ ಸ್ಥಾಯಿಯಾಗದಂತೆ ಮಾಡುವ ಜವಾಬ್ದಾರಿ ನಮ್ಮ ಸಿನಿಮಾರಂಗದ ಮೇಲಿದೆ. ಕನ್ನಡ ಸಿನಿಮಾದ ವೈಶಿಷ್ಟ್ಯವೆಂದರೆ- ಮೊದಲ ಚಿತ್ರದಿಂದಲೇ  ಪುರಾಣದ ಪ್ರಧಾನ ಧಾರೆಯ ಬದಲು ಉಪಧಾರೆಯ ಅಭಿವ್ಯಕ್ತಿಯ ಆರಂಭ. ಮೊಟ್ಟಮೊದಲು ಚಿತ್ರೀಕರಣ ಪ್ರಾರಂಭಿಸಿದ್ದು ಕನ್ನಡ ವಾಕ್ಚಿತ್ರ ‘ಭಕ್ತದ್ರುವ. ಆದರೆ ಮೊಟ್ಟಮೊದಲು ಬಿಡುಗಡೆಯಾದ ಮೊದಲ ವಾಕ್ಚಿತ್ರ ‘ಸತಿಸುಲೋಚನ (೧೯೩೪). ರಾಮಾಯಣದ ಸೀತೆಯಾಗಲಿ, ಶ್ರೀರಾಮನಾಗಲಿ ಈ ಚಿತ್ರದ ಪ್ರಧಾನ ಪಾತ್ರಗಳಲ್ಲ. ರಾವಣನ ಮಗ ಇಂದ್ರಜಿತು ನಾಯಕ. ಆತನ ಪತ್ನಿ ಸುಲೋಚನೆ ನಾಯಕಿ. ಒಟ್ಟು ಚಿತ್ರದ ಅಂತಿಮ ವಿಚಾರಧಾರೆ ಏನೇ ಇರಲಿ, ಶ್ರೀರಾಮ, ಸೀತೆ  ಪ್ರಧಾನವಾದ  ಪಾತ್ರಗಳಲ್ಲ. ಪುರಾಣದ ವಿವಿಧ ಉಪಕಥಾ ಧಾರೆಗಳೇ ಕನ್ನಡ ಸಿನಿಮಾದ ಮೊದಲ ಕಾಲು ಶತಮಾನದ ಕೇಂದ್ರ ಪ್ರಜ್ಞೆಯಾಗಿದ್ದು ಒಂದು ವಿಶಿಷ್ಟ ಪರಂಪರೆ ಎಂದೇ ನನ್ನ ತಿಳುವಳಿಕೆ. ಕನ್ನಡ ಸಿನಿಮಾ ಮೊದಲಿನಿಂದಲೂ ರಂಗಭೂಮಿ ಮತ್ತು ಸಾಹಿತ್ಯದ ಸಂಬಂಧವನ್ನು ಕಾಯ್ದುಕೊಂಡು, ತೊಡಗಿಸಿಕೊಂಡು ಬೆಳೆಯುತ್ತ ಬಂದು ಕಾಲಾನುಸಂಧಾನದ ಸ್ಥಿತ್ಯಂತರಗಳಿಗೆ ಒಳಗಾಗಿದೆ. ಎಲ್ಲ ಮಾದರಿಯ ಸಿನಿಮಾಗಳನ್ನೂ ಕೊಡುತ್ತ ಬಂದಿದೆ. ಅನೇಕ ಮುಖ್ಯವಾಹಿನಿ ಸಿನಿಮಾಗಳು ಸ್ಥೂಲ ಗ್ರಹಿಕೆಯಲ್ಲಾದರೂ ಪ್ರಗತಿಪರ ವಿಚಾರಗಳನ್ನು ಭಾವನಾತ್ಮಕ ಶೈಲಿಯಲ್ಲಿ ಪ್ರತಿಪಾದಿಸುತ್ತ ಬಂದಿರುವುದು ಅಭಿನಂದನೀಯ. ಪರ್ಯಾಯ ಸಿನಿಮಾಗಳು (ಕಲಾತ್ಮಕದ, ಹೊಸ ಅಲೆ) ವ್ಯಕ್ತಿಗಳ ಮಾನಸಿಕ ಶೋಧದ ಮೂಲಕ ಸಾಮಾಜಿಕ ಸಂಬಂಧಗಳ ವಿನ್ಯಾಸ ರೂಪಕಗಳನ್ನು ಕಟ್ಟಿಕೊಟ್ಟಿದ್ದು ಒಂದು ವಿಶಿಷ್ಟತೆ. ಮುಖ್ಯವಾಹಿನಿ ಸಿನಿಮೋದ್ಯಮವು ಅಪಾರ ಜನಸ್ತೋಮದ ಆಕರ್ಷಣೆಗೆ ಒಳಗಾಗುತ್ತ ಹೋದಂತೆ ಜನಸಾಮಾನ್ಯರ ಬೇಕು-ಬೇಡಗಳ ಜೊತೆಗೆ ಆದರ್ಶದ ಸ್ಥೂಲ ಮಾದರಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿತು. ಜನರ  ಸಮಸ್ಯೆಗಳಿಗೆ ಸಿನಿಮಾದಲ್ಲಷ್ಟೇ ಅಲ್ಲ ಸಮಾಜದಲ್ಲೂ ಸ್ಪಂದಿಸತೊಡಗಿತು. ಕನ್ನಡ ಸಿನಿಮಾರಂಗದ ಸಾಮಾಜಿಕ ಕ್ರಿಯೆ ಆರಂಭದಲ್ಲಿ ವೈಯಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತು. ಡಾ. ರಾಜಕುಮಾರ್ ಮುಂತಾದವರು ಕಷ್ಟದಲ್ಲಿದ್ದ ನಾಟಕ ಕಂಪನಿಗಳಿಗಾಗಿ ಸಹಾಯಧನ ಪ್ರದರ್ಶನಗಳಲ್ಲಿ ಭಾಗಿಯಾಗತೊಡಗಿದರು. ಆನಂತರ ೧೯೬೧-೬೨ರಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹಣೆಗಾಗಿ  ವರನಟ  ರಾಜಕುಮಾರ್ ನೇತೃತ್ವದಲ್ಲಿ ಅಂದಿನ ಎಲ್ಲ ಚಲನಚಿತ್ರ ಕಲಾವಿದ - ಕಲಾವಿದೆಯರು ಕರ್ನಾಟಕದಾದ್ಯಂತ ಸಂಚರಿಸಿದರು. ನಿಧಿ  ಸಂಗ್ರಹಿಸಿ ಸಂತ್ರಸ್ಥರಿಗೆ  ನೆರವಾದರು. (ಈ ಪ್ರವಾಸದ ಪ್ರಾಯೋಜಕರು -ಪ್ರಜಾವಾಣಿ) ಆನಂತರ ತಂತಮ್ಮ ಪರಿಮಿತಿಯಲ್ಲಿ ಕನ್ನಡದ ನಾಯಕ ನಟರು ಕಷ್ಟದಲ್ಲಿದ್ದವರಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗುತ್ತ ಬಂದರು. ಇಡೀ ಕರ್ನಾಟಕದಲ್ಲಿಯೇ ಬಹುದೊಡ್ಡ ಪ್ರಮಾಣದ ಆಂದೋಲನವೆಂದು ಹೆಸರಾದ ಗೋಕಾಕ್ ಚಳವಳಿಗೆ ಡಾ. ರಾಜ್‌ಕುಮಾರ್  ನೇತೃತ್ವದ ಶಕ್ತಿ ಸಂಚಲನವಾದದ್ದು, ಅದರಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗವಹಿಸಿದ್ದು ಒಂದು ಇತಿಹಾಸ. (ಗೋಕಾಕ್ ಚಳುವಳಿಯ ಆರಂಭ ಆದದ್ದು ಸಾಹಿತಿ -ಕಲಾವಿದರಿಂದ ಕನ್ನಡಪರ ಸಂಘಟನೆಗಳಿಂದ. ಆಮೇಲೆ ಡಾ. ರಾಜಕುಮಾರ್ ಪ್ರವೇಶ) ಇತ್ತೀಚಿಗೆ ಇಡೀ ಕನ್ನಡ ಮುಖ್ಯವಾಹಿನಿ ಚಿತ್ರರಂಗವು  ಕಳಸಾ ಬಂಡೂರಿ ಚಳವಳಿಗೆ ಬೆಂಬಲ ಸೂಚಿಸಿ ದೊಡ್ಡ ರ‍್ಯಾಲಿ ನಡೆಸಿತು. ಕಾವೇರಿ ಸಮಸ್ಯೆಗೆ ಸ್ಪಂದಿಸಿತು. ಕರ್ನಾಟಕದ ಸಮಸ್ಯೆಗಳಿಗೆ ಸಾಂಕೇತಿಕ ಸ್ಪಂದನೆ ನೀಡುತ್ತ ಬಂದಿರುವ ಕನ್ನಡ ಚಿತ್ರರಂಗದ ನಡೆ ಮೆಚ್ಚುವಂಥದ್ದು. ಈ ಮೆಚ್ಚುಗೆಯೊಂದಿಗೆ ನಿರೀಕ್ಷೆಯೂ ಹೆಚ್ಚಾಗಿದೆ. ಹೆಚ್ಚು ಹೆಚ್ಚು ಸದಭಿರುಚಿಯ ಸಿನಿಮಾಗಳಿಗಾಗಿ ಕನ್ನಡ ಜನತೆ ಕಾಯುತ್ತಿದೆ. ‘ಮೈಮುಟ್ಟುವ ಸಿನಿಮಾ ಬೇಡ; ಮನಸ್ಸು ಮುಟ್ಟುವ ಸಿನಿಮಾ ಬೇಕು -ಇದು ನನ್ನಂತಹ ಸದಭಿರುಚಿಯುಳ್ಳವರ ಅಪೇಕ್ಷೆ. ಆದರೆ ಚಲನಚಿತ್ರರಂಗದಲ್ಲಿರುವ ಗುತ್ತಿಗೆದಾರರು ಎಷ್ಟರ ಮಟ್ಟಿಗೆ ಸದಭಿರುಚಿ ಮತ್ತು ಸತ್ಯಶೋಧಗಳ ಆತ್ಮಸಾಕ್ಷಿಯಾಗುತ್ತಾರೆಂಬ ಪ್ರಶ್ನೆ ನನ್ನನ್ನು ಕಾಡಿಸುತ್ತಲೇ ಬಂದಿದೆ. ಒಂದು ಕಡೆ ಆರ್ಥಿಕ ಗುತ್ತಿಗೆದಾರರು;  ಇನ್ನೊಂದು ಕಡೆ ಬೌದ್ಧಿಕ ಗುತ್ತಿಗೆದಾರರು. ಸಿನಿಮಾಕ್ಕೆ ಆರ್ಥಿಕ ಬಂಡವಾಳ ಹಾಕುವವರನ್ನೆಲ್ಲ ನಾನು ‘ಗುತ್ತಿಗೆದಾರರು ಎನ್ನುವುದಿಲ್ಲ. ಅಂತೆಯೇ ಬೌದ್ಧಿಕ ಚಿಂತನೆ ಇರುವವರೆಲ್ಲ ಬೌದ್ಧಿಕ ಗುತ್ತಿಗೆದಾರರಲ್ಲ. ತಾವು ಮಾತ್ರವೇ ಅಂತಿಮ ಸತ್ಯದ ಹರಿಕಾರರೆಂದು ಭ್ರಮಿಸಿ ಅಭಿಪ್ರಾಯದ ಹೆಸರಲ್ಲಿ ಅನ್ಯಾಕ್ರಮಣಶೀಲತೆ ತೋರುವವರು ‘ಗುತ್ತಿಗೆದಾರರು. ಸೃಜನಶೀಲತೆಯು ಯಾವತ್ತೂ ಗುತ್ತಿಗೆದಾರರ ದಾಸನೋ ದಾಸಿಯೋ ಆಗಬಾರದು. ಆದರೆ ಆರ್ಥಿಕ ಗುತ್ತಿಗೆದಾರರು ಮತ್ತು ಬೌದ್ಧಿಕ ಗುತ್ತಿಗೆದಾರರು ಕನ್ನಡ ಚಿತ್ರರಂಗದಲ್ಲಿ ಅಘೋಷಿತ ವಿಭಜನೆಗೆ ಕಾರಣರಾಗುತ್ತಿದ್ದಾರೆ. ತಮ್ಮದಲ್ಲದ ಮಾದರಿಗಳ ಸಿನಿಮಾ ಬಗ್ಗೆ ಪ್ರೀತಿಯಿಲ್ಲದ ವರ್ತನೆ ಮಾಡುವುದರ ಜೊತೆಗೆ ತಂತಮ್ಮ ಮಾದರಿಯಲ್ಲೇ ಇರುವ  ಅನ್ಯರ ಸಿನಿಮಾಭಿವ್ಯಕ್ತಿಗಳ ಬಗ್ಗೆಯೂ ಸೂಕ್ತ  ಸ್ಪಂದನ ನೀಡದೆ ‘ದೂರ ಆಲೋಚನೆಯುಳ್ಳವರಾಗುತ್ತಾರೆ. ಈ ಮಾತಿಗೆ ನಿರ್ದಿಷ್ಟ ವ್ಯಕ್ತಿಗಳನ್ನು ಹೆಸರಿಸಲಾಗದು. ಇದು ವ್ಯಕ್ತಿಗಳ ವಿಷಯವಲ್ಲ. ಒಂದು ಮನೋಧರ್ಮದ ವಿಷಯ ; ದೃಷ್ಟಿ ಧೋರಣೆಗಳ ವಿಷಯ. ನಮ್ಮ ಚಿತ್ರರಂಗ ‘ದೂರ ಆಲೋಚನೆಗಳಿಂದ ದೂರವಾಗಿ ಪರಸ್ಪರ ಸಮೀಪವಾಗುವುದರಿಂದ ಮತ್ತಷ್ಟು ಸತ್ಯಶೋಧ, ಸದಭಿರುಚಿ  ಮತ್ತು ಸೃಜನಶೀಲತೆ ಸಾಧ್ಯ.

ಕನ್ನಡ ಚಿತ್ರರಂಗ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳ ನಡುವೆಯೂ ಹೊಸ ಪ್ರತಿಭೆಗಳ ಪ್ರಯೋಗ ಪ್ರಶಂಸೆಗೆ ಅರ್ಹವಾಗಿದೆ. ಹೆಚ್ಚು ಸಿನಿಮಾಗಳು  ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಹೊಸಬರ ಮತ್ತು ಹಳಬರ ಹೊಸ  ಪ್ರಯೋಗಗಳಿಗಾಗಿ ಮಿನಿ ಚಿತ್ರಮಂದಿರಗಳ ಅಗತ್ಯವಿದೆ. ಸಿನಿಮಾ ಫ್ಲೆಕ್ಸ್‌ಗಳು ಅಗ್ಗವಾದರೂ ಮಲ್ಟಿಫ್ಲೆಕ್ಸ್‌ಗಳು ದುಬಾರಿಯಾಗಿವೆ. ಈಗಾಗಲೇ  ಕನ್ನಡ ಚಿತ್ರರಂಗಕ್ಕೆ  ಸಾಕಷ್ಟು ಸಹಾಯ ಮಾಡುತ್ತಿರುವ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಕೊಡಬೇಕಾಗಿದೆ. ಅಂತೆಯೇ ಕನ್ನಡ ರಂಗಭೂಮಿಗಾಗಿ ಮಿನಿ ರಂಗಮಂದಿರಗಳ ನಿರ್ಮಾಣ, ಹೊಸರಂಗ ಪ್ರಯೋಗಗಳನ್ನು ಗ್ರಾಮೀಣ ಭಾಗಕ್ಕೆ ಪರಿಚಯಿಸುವ ಅಭಿಯಾನಗಳೂ ನಡೆಯಬೇಕಾಗಿದೆ. ಇಲ್ಲದಿದ್ದರೆ ನಗರ ಹಳ್ಳಿಗಳ ಕಲಾ ಸಂಬಂಧದ ಕಂದಕ ಇನ್ನೂ ಹೆಚ್ಚುತ್ತಾ ಹೋಗುತ್ತದೆ.

ನಿಜದ ನೆಲೆಯೆಂದರೆ - ಮಾಧ್ಯಮಗಳೆಲ್ಲ ಉದ್ಯಮ ಪ್ರಧಾನವಾಗಿರುವ ಈ ಸಂದರ್ಭದಲ್ಲಿ ಕಡಿಮೆ ಬಂಡವಾಳದ ಸಿನಿಮಾಗಳು, ಪುಸ್ತಕ ಪ್ರಕಾಶಕರು ಮತ್ತು ಪತ್ರಿಕೆಗಳು ದೊಡ್ಡ ಪ್ರಮಾಣದಲ್ಲಿ ಸೃಜನಾತ್ಮಕವಾಗಿವೆ. ಸಿನಿಮಾಗಳ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಪುಸ್ತಕ ಪ್ರಕಾಶಕರಲ್ಲಿ ಗಂಭೀರ, ಚಿಂತನಾರ್ಹಕೃತಿ ಪ್ರಕಟಣೆಯಲ್ಲಿ ತೊಡಗಿರುವವರು ಬೃಹತ್ ಬಂಡವಾಳಗಾರರಲ್ಲ. ಚಿಕ್ಕ ಪ್ರಮಾಣದ ಪುಸ್ತಕ ಪ್ರಕಾಶಕರು. ಪತ್ರಿಕೆಗಳ ವಿಷಯಕ್ಕೆ ಬಂದರೆ ಮುಖ್ಯವಾಹಿನಿ ಪತ್ರಿಕೆಗಳು ತಮ್ಮ ವಿಶೇಷ ಪುರವಣಿಗಳ ಮೂಲಕ ಸಾಹಿತ್ಯ-ಸಂಸ್ಕೃತಿ ಕ್ರಿಯೆಗಳಿಗೆ ವಿಶೇಷ ಅವಕಾಶ ಒದಗಿಸಿವೆ. ಮುಖ್ಯ ಪುಟಗಳಲ್ಲಿ ಸುದ್ದಿ ಪ್ರಕಟಣೆಯನ್ನೂ ಮಾಡುತ್ತಿವೆ. ಮುಖ್ಯವಾಹಿನಿ ಪತ್ರಿಕೆಗಳ ಈ ಕೆಲಸವನ್ನು ಗೌಣಗೊಳಿಸುವಂತಿಲ್ಲ. ಆದರೆ ಈ ಪತ್ರಿಕೆಗಳಿಗೆ ಪ್ರಸಾರ ಸಂಖ್ಯೆಯ  ಸ್ಪರ್ಧೆ ಮುಖ್ಯವಾಗಿರುವುದರಿಂದ ಸೃಜನಶೀಲ ಮಿತಿಯೊಂದು ಇರುತ್ತದೆ. ಈ ಮಿತಿಯನ್ನು ಮೀರಿ ಸಾಹಿತ್ಯ ಸಂಸ್ಕೃತಿಗಳ ಚರ್ಚೆ- ಚಿಂತನೆಗಳನ್ನು ಕನ್ನಡದ ಕಿರುಪತ್ರಿಕೆಗಳು/ ವಿವಿಧ ನಿಯತಕಾಲಿಕೆಗಳು  ಮಾಡುತ್ತ ಬಂದಿವೆ.
‘ವಾಗ್ಭೂಷಣ ಪತ್ರಿಕೆಯಿಂದ ಆರಂಭವಾದ ನಿಯತಕಾಲಿಕೆ ಪ್ರಕಟಣೆ ಒಂದು ಪರಂಪರೆಯಾಗಿ ಬೆಳೆಯಿತು. ಸಂಕ್ರಮಣ, ಸಾಕ್ಷಿ, ಶೂದ್ರ, ಅನ್ವೇಷಣೆ, ಕವಿತಾ, ಪುಸ್ತಕಮನೆ, ಅರುಹು ಕುರುಹು, ರುಜುವಾತು, ದೇಶಕಾಲ, ಸಾಹಿತ್ಯ ಪರಿಷತ್ಪತ್ರಿಕೆ, ಕನ್ನಡನುಡಿ, ಕೊರವಂಜಿ, ವಿನೋದ, ಗ್ರಂಥಲೋಕ, ದಲಿತ, ಗಾಂಧಿಬಜಾರ್, ಜೀವನ, ಪ್ರಬುದ್ಧಕರ್ನಾಟಕ, ಕರ್ನಾಟಕ ಭಾರತಿ, ಸಾಧನೆ ಸ್ಥಿತಿ-ಗತಿ, ಸಂಚಯ, ಅನಿಕೇತನ, ಅಚಲ ಒಡನಾಡಿ, ಸಮನ್ವಯ, ಸಮುದಾಯ ವಾರ್ತಾಪತ್ರ ಮುಂತಾದ  ನಿಯತಕಾಲಿಕೆಗಳಲ್ಲದೆ, ಹೊಸತು, ಸಂವಾದ, ಈ ಭಾನುವಾರದಂತಹ ಪತ್ರಿಕೆಗಳ ಕೊಡುಗೆಯೂ ಗಮನಾರ್ಹ. ವಿಶೇಷವಾಗಿ ೫೦ ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ‘ಸಂಕ್ರಮಣವು ಒಳಗೊಳ್ಳುತ್ತಿರುವ ವಿವಿಧ ಪ್ರದೇಶದ ಬರಹಗಾರರ ಆಧಾರದ ಮೇಲೆ ಅದನ್ನು ‘ಏಕೀಕರಣ ನಿಯತಕಾಲಿಕೆ ಎಂದು ಕರೆಯಬಹುದು.

ಈ ಎಲ್ಲ ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಪ್ರಕಾಶಕರ ಮೂಲಕ ಕನ್ನಡದಲ್ಲಿ ಅನೇಕ ಪ್ರತಿಭಾನ್ವಿತ ಲೇಖಕ- ಲೇಖಕಿಯರು ಪರಿಚಯವಾಗಿದ್ದಾರೆ.
ಕನ್ನಡದಲ್ಲಿ ಹೊಸದಾಗಿ ಬರೆಯುತ್ತಿರುವವರ ಬಗ್ಗೆ ನನಗೆ ಅಪಾರ ಭರವಸೆಯಿದೆ. ಯುವ ಪ್ರತಿಭೆಗಳು ಅತ್ಯಂತ ಸ್ವಾಯತ್ತ ಸೃಜನಶೀಲತೆಯಿಂದ ಅಭಿವ್ಯಕ್ತಿಗೊಳ್ಳುತ್ತಿದ್ದಾರೆ. ಆದರೆ ನನಗೆ ಕಾಣುತ್ತಿರುವ ಒಂದು ಸಮಸ್ಯೆಯೆಂದರೆ ‘ದಿಕ್ಸೂಚಿಯ ಕೊರತೆ. ಬಹುಪಾಲು ಹೊಸ ಬರಹಗಾರರು ಪ್ರಗತಿಪರ ಆಶಯಗಳನ್ನೇ ಅಭಿವ್ಯಕ್ತಿಸುತ್ತಿದ್ದರೂ ಸಾಮುದಾಯಿಕ ಸಂಬಂಧವೊಂದು ಪ್ರಬಲವಾಗದೆ ವ್ಯಕ್ತಿ ವಿಶಿಷ್ಟತೆಯಲ್ಲೇ ಪರ್ಯಾಯಸಾನವಾಗುವ  ಅಳುಕು ನನ್ನನ್ನು ಕಾಡಿಸುತ್ತಿದೆ. ಯಾಕೆಂದರೆ ಸೃಜನಶೀಲ ಸೈದ್ಧಾಂತಿಕತೆಯ ಸ್ವರ್ಶದಿಂದ ವಂಚಿತವಾಗುವ ಸೃಷ್ಟಿರೂಪಗಳು ಬಿಡಿ ಬಿಡಿಯಾಗಿ ಗಮನ ಸೆಳೆದರೂ ದಿಕ್ಸೂಚಿ ಶಕ್ತಿಯಿಂದ ವಂಚಿತವಾಗತ್ತವೆ.  ಸಿದ್ಧಾಂತವೆಂದರೆ ಸಂಕೋಲೆಯಲ್ಲ.  ಅದೊಂದು ನೋಟ; ಆ ನೋಟದ ಮೂಲಕ ಬದುಕನ್ನು ತಿಳಿಯುವುದು, ಈ ತಿಳುವಳಿಕೆಯಿಂದ  ನೋಟವನ್ನು ನಿರ್ದಿಷ್ಟಗೊಳಿಸಿಕೊಳ್ಳುವುದು ಒಂದು ಸಕಾರಾತ್ಮಕ ಪ್ರಕ್ರಿಯೆ. ಇಂಥದೊಂದು ಸೈದ್ಧಾಂತಿಕ ಪ್ರಕ್ರಿಯೆಗೆ ಪೂರಕವಾದ ಪರಿಸರವು ಪ್ರಧಾನವಾಗದಿರುವುದೇ ಸಮಕಾಲೀನ ಬಿಕ್ಕಟ್ಟು.

ಜನಪಂಥೀಯತೆ

ಇಂದು ನಮ್ಮ ಸಾಂಸ್ಕೃತಿಕ ಕ್ಷೇತ್ರದ ಚರ್ಚೆಗಳ ಪ್ರಧಾನವಾಗಿ ಎಡಪಂಥೀಯತೆ  ಮತ್ತು ಬಲಪಂಥೀಯತೆಯೆಂದು ವಿಂಗಡನೆಗೊಂಡಿದೆ. ಎಡ ಮತ್ತು ಬಲಪಂಥೀಯತೆಗಳ  ನಿರ್ಣಯಾತ್ಮಕ ಮಾನದಂಡವಾಗಿ ಧಾರ್ಮಿಕ ಮೂಲಭೂತವಾದ ಅಥವಾ ಕೋಮುವಾದ ಮುನ್ನೆಲೆಗೆ ಬಂದಿದೆ. ಎಡಪಂಥವೆಂದರೆ ಕಮ್ಯುನಿಸ್ಟರು, ಬಲಪಂಥವೆಂದರೆ ಸಂಘಪರಿವಾರದವರು ಎಂದಷ್ಟೇ ಆಗಿ ಅದರಾಚೆಗಿನ  ವಾಸ್ತವಗಳು ಕಣ್ಮುಚ್ಚದಿದ್ದರೂ ಕೊನೆಯ ಸಾಲಿಗೆ ಸರಿದಿವೆ. ಕೋಮುವಾದವೆನ್ನುವುದು ಈಗ ಒಂದು ಪಕ್ಷ- ಒಂದು ಪಂಥ- ಒಂದು ಧರ್ಮ ಸೀಮಿತ ಮಾತ್ರವಾಗದೆ ಮನೋನ್ಮಾದವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಎಡಪಂಥವನ್ನೂ ಒಳಗೊಂಡಂತೆ ಯಾವ ಪಂಥವೂ ಜಡಪಂಥವಾಗಬಾರದು. ನಮಗಿಂದು ಬೇಕಾದ್ದು ಕಂಠಪಾಠ ಒಪ್ಪಿಸುವ ಜಡಪಂಥೀಯತೆಯಲ್ಲ; ಸದಾ ಸೃಜನಶೀಲವಾಗಿರುವ ಜನಪಂಥೀಯತೆ. ಜನಪಂಥೀಯತೆಯಲ್ಲಿ ಜನರ ಒಳಿತೇ ಆದ್ಯತೆ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಜನಪಂಥೀಯತೆ. ಇದೇ  ಜನಪ್ರಭುತ್ವ. ಇಲ್ಲಿ ಜಾತಿವಾದವಿರಬಾರದು; ಮೂಲಭೂತವಾದವಿರಬಾರದು. ಪಂಥಪ್ರತಿಷ್ಠೆಯಿರಬಾರದು. ವಿವಿಧ ಪ್ರಗತಿಪರ ಪಂಥಗಳ ನಡುವೆ ಪ್ರೀತಿಸೇತುವಿರಬೇಕು.

ನನ್ನ ದೃಷ್ಟಿಯಲ್ಲಿ ಜನಪಂಥೀಯತೆಯೆನ್ನುವುದು ಸಾಮಾನ್ಯ ಜನರ ಸಮಾನ ವಿವೇಕವನ್ನು ಒಳಗೊಂಡಿರುತ್ತದೆ. ಈಗ ನೋಡಿ: ಗಾಂಧಿ- ಅಂಬೇಡ್ಕರ್ ನಡುವೆ ಭಿನ್ನಭಿಪ್ರಾಯಗಳಿದ್ದವು. ಗಾಂಧಿ-ಸುಭಾಷ್‌ಚಂದ್ರಬೋಸ್‌ರ ಸ್ವಾತಂತ್ರ್ಯ ಹೋರಾಟದ ಮಾದರಿ ಒಂದೇ ಅಲ್ಲ. ಬಾಲಗಂಗಾಧರ ತಿಲಕರ ರಾಷ್ಟ್ರೀಯತೆಯ ಹೋರಾಟದಲ್ಲಿ ಗಣೇಶೋತ್ಸವಗಳ ಬಳಕೆಯೂ ಒಂದಾಗಿತ್ತು. ಆದರೆ ಶ್ರೀರಾಮಭಕ್ತರಾದ ಗಾಂಧೀಜಿಯ ಹೋರಾಟಕ್ಕೆ ಶ್ರೀರಾಮ ಸಾಧನವಾಗಿರಲಿಲ್ಲ. ಇನ್ನು ಭಗತ್‌ಸಿಂಗ್ ಹೋರಾಟಕ್ಕೂ ಗಾಂಧೀಜಿಯವರ ಹೋರಾಟದ ದಾರಿಗೂ ಸಂಬಂಧವೇ ಇಲ್ಲ. ಇಷ್ಟಾದರೂ ನಮ್ಮ ಸಮಾಜದ ಬಹುಪಾಲು ಜನ ಸಾಮಾನ್ಯರು ಪರಸ್ಪರ ಭಿನ್ನನೆಲೆಯ ಈ ಸಾಧಕರನ್ನು ಸಮಾನವಾಗಿ ಗೌರವಿಸುತ್ತ ಬಂದಿದ್ದಾರೆ. ನಿರ್ದಿಷ್ಟ ಚಾರಿತ್ರಿಕ ಸಂದರ್ಭದ ಇವರ ಹೋರಾಟಗಳ ಹಿಂದಿನ ಪ್ರಾಮಾಣಿಕತೆಗೆ ಮನ್ನಣೆ ಕೊಟ್ಟಿದ್ದಾರೆ. ಬೌದ್ಧಿಕ ಭ್ರಮೆಯ ಕೆಲವರು ಈ ಸಾಧಕರನ್ನು ಪರಸ್ಪರ ಎದುರಾಳಿಗಳಾಗಿ ಕಟಕಟೆಯಲ್ಲಿ ನಿಲ್ಲಿಸಿದರೂ ನಿಜ ಬೌದ್ಧಿಕರು ವೈಚಾರಿಕ ವಿಶ್ಲೇಷಣೆ, ವಿಮರ್ಶೆಗಳಿಂದ ಅವರನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಅಂದು ಅವರೆಲ್ಲರೂ ತಾವು ನಂಬಿದ ನಿಲುವುಗಳಿಗೆ ಬದ್ದರಾಗಿ ಕ್ರಿಯಾಶೀಲರಾಗಿದ್ದ ಕಾಲ ನಿರ್ದಿಷ್ಟ ಚಾರಿತ್ರಿಕ ಸಂದರ್ಭ. ಇಂದಿನದು ನಿರ್ದಿಷ್ಟ ಚಾರಿತ್ರಿಕ ಅನಿವಾರ್ಯತೆ. ನಮ್ಮ ನಮ್ಮ ಸೈದ್ಧಾಂತಿಕ ಆಶಯಗಳನ್ನು ಬಿಡದೆಯೂ ಒಟ್ಟಾರೆ ಸಮಾನತೆಗಾಗಿ ಸೌಹಾರ್ದಕ್ಕಾಗಿ ಒಂದು ಒಕ್ಕೂಟ ವೇದಿಕೆಯಾಗುವುದು ಇಂದಿನ ಚಾರಿತ್ರಿಕ ಅನಿವಾರ್ಯತೆ. ಜನಪಂಥೀಯತೆಯು ಬಲಪಂಥೀಯತೆಯೊಂದಿಗಿನ ರಾಜಿಯಲ್ಲ. ಇದು ಪ್ರಗತಿಪರ ಪಂಥಗಳ ಸ್ವಯಂ ಪರಿವರ್ತನೆಯ ಪರಿಕಲ್ಪನೆ ಮತ್ತು ಪರಿಭಾಷೆ. ಜಡಪೊರೆ ಹರಿದು ಹೊಸರೂಪದಲ್ಲಿ ಬರಬೇಕಾದ ಭರವಸೆ. ಈಗ ಜನರ ಹಿತಕ್ಕಾಗಿ ತೊಡಗಿಸಿಕೊಳ್ಳುವ ಮತ್ತು ಜನರಲ್ಲಿ ಭರವಸೆ ಮೂಡಿಸುವ  ಸಾಮಾನ್ಯ ಕನಿಷ್ಠ ಕಾರ್ಯಸೂಚಿಯ ಕ್ರಿಯಾತತ್ವವೇ ಜನಪಂಥಿಯತೆಯಾಗಿ ಹೊರಹೊಮ್ಮಬೇಕು. ಇಲ್ಲದಿದ್ದರೆ ಜನರ ವಿಶ್ವಾಸಾರ್ಹತೆಯಿಂದ ನಾವು ವಂಚಿತರಾಗುತ್ತೇವೆ.

ಹೌದು; ಇಂದು ಸಾಂಸ್ಕೃತಿಕ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳೂ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬಲುನಂಬುಗೆಯ ನ್ಯಾಯಾಂಗವೂ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು  ಎದುರಿಸುತ್ತಿದೆಯೆಂದ ಮೇಲೆ ನಮ್ಮ ಸನ್ನಿವೇಶದ ಸಂಕೀರ್ಣತೆ ಅರ್ಥವಾಗುತ್ತದೆ. ಹಾಗಾದರೆ ಜನರು ಯಾರನ್ನು ನಂಬಬೇಕು? ನಮಗೆ ಎಂಥ ನಾಯಕತ್ವ ಬೇಕು? ಸದ್ಯದ ಸುಡುವಾಸ್ತವಗಳ ಸನ್ನಿವೇಶದ ನಡುವೆ ನಾವು ಉತ್ತರ ಹುಡುಕಬೇಕು. ಎಂಥ ನೋಟದ ನಾಯಕತ್ವ ಬೇಕೆಂದು ಕಂಡುಕೊಳ್ಳಬೇಕು. ನನಗನ್ನಿಸುತ್ತದೆ: ನಮಗೆ ಈಗ ನಿರ್ದಿಷ್ಟ ಜಾತಿಯೊಳಗಿದ್ದೂ ಜಾತಿಯನ್ನು ಮೀರಿದ ಸಾಮಾಜಿಕ ನಾಯಕತ್ವ ಬೇಕು. ನಿರ್ದಿಷ್ಟ ಧರ್ಮದೊಳಗಿದ್ದೂ ಧರ್ಮವನ್ನು ಮೀರಿದ ನೋಟವುಳ್ಳ ಸಾಮಾಜಿಕ ನಾಯಕತ್ವಬೇಕು.  ನಿರ್ದಿಷ್ಟ ಪಕ್ಷದೊಳಗಿದ್ದೂ ಪಕ್ಷವನ್ನು ಮೀರಿದ ರಾಜಕೀಯ ನಾಯಕತ್ವ ಬೇಕು. ನಾಯಕರೊಡನಿದ್ದೂ ಮೀರುವ ಪ್ರತಿನಾಯಕರಾಗುವ ಸಾಂಸ್ಕೃತಿಕ ನಾಯಕತ್ವ ಬೇಕು. ಆದರೆ ಇವತ್ತು ಜಾತಿನಾಯಕರೇ ಸಾಮಾಜಿಕ ನಾಯಕರಾಗುತ್ತಿದ್ದಾರೆ. ಪಕ್ಷ ಪಾತಾಳದಲ್ಲಿರುವವರೇ ರಾಜಕೀಯ ನಾಯಕರಾಗುತ್ತಿದ್ದಾರೆ. ಭಕ್ತಿ ಬಿಟ್ಟು ಬಂಡವಾಳವುಳ್ಳ ಮಠೀಯತೆಯ ಮುಂದಾಳುಗಳೇ ಧಾರ್ಮಿಕ ನಾಯಕರಾಗುತ್ತಿದ್ದಾರೆ. ನಿಜ, ಜಾತಿ, ಧರ್ಮ, ಪಕ್ಷ ಇಂದಿನ ವಾಸ್ತವ. ಆದರೆ ಅಲ್ಲಿದ್ದೂ ಅದನ್ನು ಮೀರಿದ ನೋಟ ಪಡೆಯುವವರದೇ ಅತ್ಯುತ್ತಮ ನಾಯಕತ್ವ. ಓಟು ಮತ್ತು ನೋಟುಗಳ ಸುತ್ತ  ರಾಜಕೀಯ ತಂತ್ರ ಹೆಣೆಯುವುದೇ ನಾಯಕತ್ವ ಅಲ್ಲ. ಆದ್ದರಿಂದ ನಮ್ಮ ಜನರು ಕೇಳಿಕೊಳ್ಳಬೇಕು; ನಮಗೆ ನೋಟು ಬದಲಿಸುವ ಭಾರತ ಬೇಕೊ? ನೋಟ ಬದಲಿಸುವ ಭಾರತಬೇಕೊ?

ಇಂದು ಸಾಹಿತ್ಯ ಕ್ಷೇತ್ರವೂ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿರವುದರಿಂದ ನಾವು ನಮ್ಮ ನೋಟವನ್ನು ಶುದ್ಧವಾಗಿ ಬದ್ಧವಾಗಿ ಬೆಳೆಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಜನರು ನಮ್ಮನ್ನೂ ನಂಬುವುದಿಲ್ಲ. ಸಾಹಿತ್ಯಾದಿ ಸಾಂಸ್ಕೃತಿಕ ಕ್ಷೇತ್ರ ವಿಶಾಲ ವ್ಯಾಪ್ತಿಯ ಜನಪಂಥೀಯತೆಯನ್ನು  ಒಳಗೊಂಡ ಅಂತಃಕರಣವಾಗಬೇಕು. ಆಗ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನರ ಸ್ವಾತಂತ್ರ್ಯ ಎರಡನ್ನೂ ಒಳಗೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಹೋರಾಟಗಳಿಗೂ ವಿಶ್ವಾಸಾರ್ಹತೆಯ ಬಿಕ್ಕಟ್ಟು ಬಡಿದಿದೆ. ಸೈದ್ಧಾಂತಿಕ ಬದ್ಧತೆಯ ಬಡತನ ಮತ್ತು ತಾತ್ಕಾಲಿಕ ಲಾಭದ ನೋಟಗಳು ಬಹುಪಾಲು ಹೋರಾಟಗಳ ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಮೂಲ. ಅಲ್ಲದೆ ವೈಯಕ್ತಿಕ ಕಾರಣಗಳ ಜೊತೆಗೆ ಚಾರಿತ್ರಿಕ ಕಾರಣಗಳನ್ನೂ ಗಮನಿಸಬೇಕು. ಇಪ್ಪತ್ತನೆಯ ಶತಮಾನ- ಪ್ರಧಾನವಾಗಿ ಸಂಘಟನೆಯ ಶತಮಾನ; ಇಪ್ಪತ್ತೊಂದನೆಯ ಶತಮಾನ ವಿಘಟನೆಯ ಶತಮಾನ. ಸಂಘಟನೆಯೆಂದರೆ ಸಮೂಹ ಪ್ರಜ್ಞೆ; ವಿಘಟನೆಯೆಂದರೆ ವ್ಯಕ್ತಿಪ್ರಜ್ಞೆ. ಸಮೂಹಪ್ರಜ್ಞೆಯಲ್ಲಿ ಸಾಮುದಾಯಿಕ ಸ್ವಾಭಿಮಾನ. ವ್ಯಕ್ತಿಪ್ರಜ್ಞೆಯಲ್ಲಿ ಸ್ವಕೇಂದ್ರಿತ ಸ್ವಾರ್ಥಮಾನ. ಈ ಚಾರಿತ್ರಿಕ ಸಂದರ್ಭದ ವೈರುಧ್ಯದಲ್ಲಿ ಹೋರಾಟಗಳೂ ಹೋರಾಟಗಾರರೂ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ. ಈ ಪ್ರಶ್ನೆಗೆ ಹೊರತಾದ  ಹೋರಾಟಗಳೂ  ಹೋರಾಟಗಾರರೂ ಇದ್ದಾರೆಂಬುದನ್ನು ನಾವಿಲ್ಲಿ ಮರೆಯಬಾರದು.  ನಾನು ಯಾವತ್ತೂ ಯಾವುದೇ ಹೋರಾಟಗಾರರ ಕ್ರಿಯಾಶೀಲತೆಯ ಪರ. ಯಾಕೆಂದರೆ ಹೋರಾಟಗಳೇ ಇಲ್ಲದಿದ್ದರೆ ನಮ್ಮ  ನಾಡಿನ ಸ್ಥಿತಿ ಏನಾಗುತ್ತಿತ್ತೆಂದು ಯೋಚಿಸಿ.  ಹೇಳುವವರು ಕೇಳುವವರು ಇರುತ್ತಲೇ  ಇರಲಿಲ್ಲ. ನಿಜ, ನಮ್ಮ ಕೆಲವು ಹೋರಾಟಗಾರರಲ್ಲಿ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಕೆಲವೊಮ್ಮೆ ಹೋಗುವ ದಾರಿ ಸರಿ ಇಲ್ಲ. ಇಂಥ  ಆಕ್ಷೇಪವನ್ನು ವಿಶೇಷವಾಗಿ  ಕನ್ನಡಪರ ಹೋರಾಟಗಾರರಿಗೆ ಅನ್ವಯಿಸಲಾಗುತ್ತಿದೆ. ಈ ಆಕ್ಷೇಪದಲ್ಲಿ ಸ್ವಲ್ಪ ಸತ್ಯವಿದ್ದರೂ  ಕನ್ನಡ ಹೋರಾಟಗಾರರು ಮಾತ್ರವೇ ಈ ಸನ್ನಿವೇಶಕ್ಕೆ ಕಾರಣರಲ್ಲ. ಎಷ್ಟು ಜನ ಚಿಂತಕರೂ ಸಾಹಿತಿಗಳೂ ಈ ಕನ್ನಡ ಹೋರಾಟಗಾರರ ವೇದಿಕೆಗಳ ಭಾಗವಾಗಿದ್ದಾರೆ? ಎಷ್ಟು ಜನ ಸ್ನೇಹಪರವಾಗಿಯಾದರೂ ಸಂವಾದಿಸಿದ್ದಾರೆ? ಎಷ್ಟು ಜನ ನಿಮ್ಮದು ತಪ್ಪು ತಿದ್ದಿಕೊಳ್ಳಿ ಎಂದು ತಿಳಿಹೇಳಿದ್ದಾರೆ? ಎಲ್ಲೊ ಕೆಲವರನ್ನು ಬಿಟ್ಟರೆ ಅನೇಕರು ದೂರ ಇದ್ದಾರೆ ಅಥವಾ ದೂರ ಇಡಲ್ಪಟ್ಟಿದ್ದಾರೆ. ಆದ್ದರಿಂದ ಕನ್ನಡದ ಚಾರಿತ್ರಿಕ ಸಂದರ್ಭದಲ್ಲಿ ನಮ್ಮನ್ನು ನಾವೂ ಕೇಳಿಕೊಳ್ಳಬೇಕಾಗಿದೆ. ಕನ್ನಡ ಚಳುವಳಿಗಾರರು ಮತ್ತು ಕನ್ನಡಪರ ಚಿಂತಕರ ನಡುವಿನ ಕಂದಕವನ್ನು ತ್ವರಿತಗತಿಯಲ್ಲಿ ಮುಚ್ಚಬೇಕಾಗಿದೆ. ತಮಿಳುನಾಡು, ಆಂದ್ರ, ಕೇರಳ ಮುಂತಾದ ರಾಜ್ಯಗಳಲ್ಲಿ ಈ ಕಂದಕ ಇರಲಿಲ್ಲ. ಭಾಷಾ ಚಳುವಳಿ, ಸಮೂಹ ಚಳವಳಿ ಮತ್ತು ಸಂಬಂಧಿಸಿದ ಚಿಂತಕರ ಸಮನ್ವಯ ಇತ್ತು. ಅಲ್ಲೆಲ್ಲೂ ಭಾಷಾ ಚಳವಳಿ ಪ್ರತ್ಯೇಕವಾಗಿರಲಿಲ್ಲ. ಕರ್ನಾಟಕದಲ್ಲಿ ಭಾಷಾಚಳುವಳಿ ಮತ್ತು ಸಮೂಹ ಚಳವಳಿ (ಕಾರ್ಮಿಕ-ರೈತ - ಮುಂತಾದ ಚಳವಳಿ)ಗಳ ನಡುವೆ ಮೊದಲಿಂದ ಕಂದಕ ಇತ್ತು.

ನನಗನ್ನಿಸುತ್ತಿದೆ: ಇದು ಕಂದಕಗಳ ಕಾಲ. ಈಗಾಗಲೇ ತಿಳಿಸಿದಂತೆ ಭಾಷಾಚಳವಳಿ ಸಮೂಹ ಚಳವಳಿ ಮತ್ತು ಚಿಂತಕರ ನಡುವೆ ಕಂದಕವಿದೆ. ಭಾಷೆ ಮತ್ತು ಬದುಕಿನ ನಡುವೆ ಕಂದಕವಿದೆ. ಆಕಾಶದ ಆರ್ಥಿಕ ತಜ್ಞರು ಮತ್ತು ಭೂಮಿ ಬಡವರ ನಡುವೆ ಕಂದಕವಿದೆ. ಬೌದ್ಧಿಕ ಕಲಾತಜ್ಞರು ಮತ್ತು ಜನ ಸಾಮಾನ್ಯರ ನಡುವೆ ಕಂದಕವಿದೆ. ಶಿಕ್ಷಣೋದ್ಯಮಿಗಳು ಮತ್ತು ಶಿಕ್ಷಣದ ನಡುವೆ ಕಂದಕವಿದೆ.  ಪರಿಸರ ಪ್ರೇಮಿಗಳು ಮತ್ತು ಅಭಿವೃದ್ಧಿಯ ನಡುವೆ ಕಂದಕವಿದೆ. ಹಳ್ಳಿ ನಗರಗಳ ನಡುವೆ ಕಂದಕವಿದೆ. ಬಡವ ಬಲ್ಲಿದರ ನಡುವೆ ಕಂದಕದ ಚರಿತ್ರೆಯೇ ಇದೆ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಕಂದಕವಿದೆ. ಅಷ್ಟೇ ಅಲ್ಲ ನಿರ್ದಿಷ್ಟ ಜಾತಿಯೊಳಗೇ ಧರ್ಮದೊಳಗೆ ಕಂದಕಗಳಿವೆ.  ಕಡೆಗೆ ಮನುಷ್ಯ ಮನುಷ್ಯರ ನಡುವೆ ಮತ್ತು ಮನುಷ್ಯ ಮನಸ್ಸಿನೊಳಗೇ ಕಂದಕಗಳಿವೆ. ಲೆಕ್ಕವಿಲ್ಲದಷ್ಟು ಕಂದಕಗಳ ನಡುವೆ ನಮ್ಮ ಬಹುಪಾಲು ಸಾಮಾಜಿಕ ಬದುಕು ಸಂಕಟ ಪಡುತ್ತಿದೆ; ಕುಂಟು ನೋಟದ  ನಡಿಗೆಯಲ್ಲಿ  ನರಳುತ್ತಿದೆ. ಇಂಥ ಸಂದರ್ಭದಲ್ಲಿ ನಾವು ನಾಗರವಾಗದ  ನಾಲಗೆಯಾಗಬೇಕು. ನಾಲಗೆಯು ನೆಲದ ನುಡಿಯಾಗಬೇಕು.  ನುಡಿಯು ಬತ್ತದ ಬೆಳಕಾಗಬೇಕು.  ನಾವು ಜಾತಿ, ಮತ, ಧರ್ಮಗಳ ದ್ವೀಪಗಳನ್ನು ದಾಟಬೇಕು. ಕಂದಕಗಳನ್ನು ಮುಚ್ಚಬೇಕು. ಈ ಕಂದಕ ಮುಚ್ಚುವ ಕಾಯಕದಲ್ಲಿ ಸಾಹಿತಿಗಳ ಪಾತ್ರ ದೊಡ್ಡದಾಗಬೇಕು. ಮನುಷ್ಯ ಬದುಕಿನ ಶೋಧಾಭಿವ್ಯಕ್ತಿಗೆ ತೊಡಗುವ ಸಾಹಿತ್ಯ ಸ್ವತಃ ಮನುಷ್ಯ ರೂಪಕವಾಗಬೇಕು.

ಕರ್ನಾಟಕದ ತಾಯೀಕರಣ

ಆದರೆ ಇವತ್ತು ಮನುಷ್ಯರ ಸ್ಥಿತಿ ಹೇಗಾಗಿದೆ ಎಂಬುದನ್ನಿಲ್ಲಿ ನೋಡಿ: ಕೋಮುಘರ್ಷಣೆ ನಡೆದ ಪ್ರದೇಶದ ಪರಿಶೀಲನೆಗೆ ಒಂದು ಸಮಿತಿ ಹೋಗಿದೆ. ಅವರು ಪರಿಶೀಲನೆಯ ನಂತರ ವಿಷಾದದಿಂದ ನುಡಿಯುತ್ತಾರೆ: ‘ಇಲ್ಲಿ ೧೦ ಜನ ಮುಸ್ಲಿಮರು ಸತ್ತರು. ೧೦ ಜನ ಹಿಂದೂಗಳು ಸತ್ತರು.  ೫ಜನ ಕ್ರೈಸ್ತರು ಸತ್ತರು ಎಂದೆಲ್ಲ ಲೆಕ್ಕಕೊಟ್ಟರು. ಆದರೆ ಯಾರೊಬ್ಬರೂ ಎಷ್ಟು ಜನ ಮನುಷ್ಯರು ಸತ್ತರು ಅಂತ ಲೆಕ್ಕ ಕೊಡಲಿಲ್ಲ ಇದು ಸಮಿತಿಯವರ ವಿಷಾದದ ನುಡಿ. ಧ್ವನ್ಯತ್ಮಾಕ ಮಾತು. ಇತ್ತೀಚೆಗೆ ಇನ್ನೊಂದು ಪ್ರವೃತ್ತಿ ಬೆಳೆಯುತ್ತಿದೆ. ಪ್ರಾಣಕ್ಕೂ ಪಕ್ಷದಪಟ್ಟಿ ಅಂಟಿಸಲಾಗುತ್ತಿದೆ. ಮನುಷ್ಯರ ಪ್ರಾಣಗಳೂ ಈ ಪಕ್ಷಗಳಾಗಿ ವಿಂಗಡಿತವಾಗುತ್ತಿವೆ. ಇಲ್ಲಿಯೂ ಮನುಷ್ಯರ ಲೆಕ್ಕ ಇಡುತ್ತಿಲ್ಲ.
ನಾವು ತಿಳಿಯಬೇಕು: ಮನುಷ್ಯರ ಲೆಕ್ಕಕೊಡುವುದು ಸಾಹಿತ್ಯದ ಕೆಲಸ. ಧರ್ಮವು ಶಾಸ್ತ್ರ ಮತ್ತು ಶಸ್ತ್ರ ಎರಡೂ ಆಗಬಾರದು ಎಂದು ಸಾಹಿತ್ಯ ಹೇಳಬೇಕು. ಸಾಹಿತ್ಯಕ್ಕೆ ತಾನು ಕಂಡ ಸತ್ಯವನ್ನು ಹೇಳುವ ಸಂವೇದನಾ ಸ್ಥೈರ್ಯ ಬೇಕು.  ಸಾಹಿತಿಗಳು ಜನಪರಂಪರೆಯ ಪಾಲುದಾರರಾಗಬೇಕು.
ನನ್ನ ನೋಟದ ಪ್ರಕಾರ ಸಾಹಿತ್ಯ ಕ್ಷೇತ್ರದಲ್ಲಿ ಮೂರು ಪರಂಪರೆಗಳಿವೆ. 
೧. ಋಷಿ ಪರಂಪರೆ
೨. ಜಗದ್ಗುರು ಪರಂಪರೆ
೩. ಜನಪರಂಪರೆ.
ಋಷಿ ಪರಂಪರೆಗೆ ಸಾಹಿತ್ಯವೂ ಒಂದು ತಪಸ್ಸು. ತನ್ನ ಮೂಲತಪಸ್ಸಿನೊಳಗಿನ ತಪಸ್ಸು. ದೈವ ಸಾಕ್ಷಾತ್ಕಾರಕ್ಕಾಗಿ ಕಣ್ಮುಚ್ಚಿ ಕೂತು ಮಾಡುವ ತಪಸ್ಸಿನಂತೆಯೇ ಅನುಭವಗಳನ್ನು ಧ್ಯಾನಸ್ಥಿತಿಗೆ ತಂದುಕೊಂಡು ಕ್ರೋಡೀಕರಿಸಿ ಅಭಿವ್ಯಕ್ತಿಸುವುದು ಋಷಿಪರಂಪರೆ. ಇಲ್ಲಿ ಅಭಿವ್ಯಕ್ತಿಯೆನ್ನುವುದು ಧ್ಯಾನದ ಫಲರೂಪ. ತನ್ನಲ್ಲಿ ತಾನು ತನ್ಮಯಾಗುವ ಋಷಿಪರಂಪರೆಯಿಂದ ರಾಮಾಯಣ ಮಹಾಭಾರತದಂತಹ ಪುರಾಣ ಮಹಾಕಾವ್ಯಗಳು ರೂಪುಗೊಂಡಿದೆ. ಬದುಕಿನ ಬಹುರೂಪಗಳ ಕಟ್ಟು ಈ ಪುರಾಣ ಕಾವ್ಯಗಳು. ‘ರಾಮಾಯಣ ಬರೆದ ವಾಲ್ಮೀಕಿ ಬುಡಕಟ್ಟಿನ ಮಹಾಪ್ರತಿಭೆ. ‘ಮಹಾಭಾರತ ಬರೆದ ವ್ಯಾಸ ಹಿಂದುಳಿದ ವಲಯದ ಮಹಾಪ್ರತಿಭೆ. ಮೂಲ ಪುರಾಣ ಕಾವ್ಯಗಳು ಬೆಳೆಯುತ್ತ ಬದುಕುತ್ತಾ ಇಂದಿನವರೆಗೆ ಬಂದಿವೆ. ಅನೇಕ ಕವಿಗಳಿಂದ   ಪುನರ್‌ಸೃಷ್ಟಿ ಹೊಂದಿವೆ.
ವಿಷಾದಕರ ಅಂಶವೆಂದರೆ, ಋಷಿ ಪರಂಪರೆಯ ಈ ಮಹಾಕಾವ್ಯಗಳು ಜಗದ್ಗುರು ಪರಂಪರೆಯ ಸಾಂಸ್ಕೃತಿಕ ಸರಕಾಗಿ ಪರಿಣಮಿಸಿವೆ. ಹೇಳಿ ಕೇಳಿ ಜಗದ್ಗುರು ಪರಂಪರೆಗೆ ಧಾನಸ್ಥ ತನ್ಮಯತೆ ಮುಖ್ಯವಲ್ಲ. ತನ್ನೆದುರು ಇರುವವರಿಗೆ ಉಪದೇಶಕೊಡುವುದು  ಮುಖ್ಯ. ಅದೂ ಅಧಿಕಾರಯುತ ಉಪದೇಶ! ತಾನು ಹೇಳುವ ಮಾತು ತನಗೂ ಹೇಳಿಕೊಳ್ಳುವಮಾತು. ಎಂದು ಜಗದ್ಗುರು ಪರಂಪರೆ ಭಾವಿಸುವುದಿಲ್ಲ. ಯಾಕೆಂದರೆ ಇದು ಪೀಠ ಪರಂಪರೆ.
ಈ ಜಗದ್ಗುರು ಪರಂಪರೆಯವರು ರಾಮಾಯಣ, ಮಹಾಭಾರತಗಳನ್ನು ಪುಣ್ಯಕೃತಿಗಳೆಂದೂ ಧರ್ಮಗ್ರಂಥಗಳೆಂದೂ ತಿಳಿದು, ತಿಳಿಯುವಂತೆ ಮಾಡಿ, ಗರ್ಭಗುಡಿಯಲ್ಲಿಟ್ಟರು.  ಪುರಾಣವನ್ನು ಚರಿತ್ರೆಯಾಗಿಸಿದರು; ಚರಿತ್ರೆಯನ್ನು ಪುರಾಣವಾಗಿಸಿದರು. ಪಾತ್ರಗಳನ್ನು ದೈವೀಕರಣಗೊಳಿಸಿದರು; ಮಾನವೀಕರಣವನ್ನು ಮೂಲೆಗೆ  ತಳ್ಳಿದರು.  ‘ಗರ್ಭಗುಡಿ ವಿಮರ್ಶಕರಾದರು. ಇವರನ್ನು ವಿರೋಧಿಸುವ ಭರದಲ್ಲಿ ನಮ್ಮ ಕೆಲವು ಪ್ರಗತಿಪರರು ಗರ್ಭಗುಡಿ ವಿಮರ್ಶಕರು ತೋಡಿದ ಖೆಡ್ಡಾಕ್ಕೇ ಬಿದ್ದರು. ಗರ್ಭಗುಡಿ ವಿಮರ್ಶಕರು ಒಂದು ಪಾತ್ರ, ಒಂದು ಸನ್ನಿವೇಶವೆಂಬ ನೆಲೆಯಲ್ಲಿ ವ್ಯಾಖ್ಯಾನಿಸಿ ಕಾವ್ಯವನ್ನು ಇಡಿಯಾಗಿ ವಿಶ್ಲೇಷಿಸುವ ವಿಧಾನಕ್ಕೆ ವಂಚನೆ ಮಾಡಿದಂತೆ, ಈ ಕೆಲವು ಪ್ರಗತಿಪರರು, ಒಂದು ಪಾತ್ರ, ಒಂದು ಸನ್ನಿವೇಶಕ್ಕೆ ಕಟ್ಟು ಬಿದ್ದು ವಿಮರ್ಶಿಸತೊಡಗಿದರು. ಪುರಾಣಶಾಸ್ತ್ರ ಬೇರೆ, ಪುರಾಣಕಾವ್ಯ ಬೇರೆ ಎಂಬ ಸಾಮಾನ್ಯ ಸಾಹಿತ್ಯ ವಿವೇಕದಿಂದಲೂ ವಂಚಿತರಾದರು. ಶಾಸ್ತ್ರವೆಂಬುದು ವಾಚ್ಯ, ಕಾವ್ಯವೆಂಬುದು ಧ್ವನಿ ಎಂಬುದನ್ನು ಇಬ್ಬರೂ ಮರೆತರು. ಸನಾತನಿ ಜಗದ್ಗುರು ಪರಂಪರೆಯವರು ಶ್ರೀ ರಾಮನನ್ನು ದೇವರು ಎಂದರೆ ಈ ಎದುರಾಳಿ ವಿಮರ್ಶಕರು ‘ಶ್ರೀರಾಮಕೊಲೆಗಡುಕ, ಪತ್ನಿ ಪೀಡಕ ಎಂದರು. ಅವರು ಶ್ರೀ ಕೃಷ್ಣನನ್ನು ದೈವ ಎಂದರೆ ಇವರು  ವ್ಯಭಿಚಾರಿ ಎಂದರು. ‘ಅವರು ಪಾಂಡವರನ್ನು ನೀತಿನಿಷ್ಠರೆಂದರೆ ‘ಇವರು ಹಾದರಕ್ಕೆ  ಹುಟ್ಟಿದವರು ಎಂದರು. ಪುರಾಣಕಾವ್ಯಗಳನ್ನು ಸಾಂಸ್ಕೃತಿಕವಾಗಿ ಮಾನವಿಕ ರಾಜಕೀಯವಾಗಿ ಬಹುಮುಖಿ ನೋಟದಿಂದ ಇಡಿಯಾಗಿ ವಿಶ್ಲೇಷಿಸುವ ವಿಧಾನ, ವಿಚಾರ, ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಜಗದ್ಗುರು ಪರಂಪರೆಯದು ‘ಗರ್ಭಗುಡಿ ವಿಮರ್ಶೆ ಯಾಯಿತು. ಪ್ರಗತಿಪರರೆಂಬ ಕೆಲವು ಎದುರಾಳಿಗಳದು ‘ಗರ್ಭಪಾತ ವಿಮರ್ಶೆ ಯಾಯಿತು. ಇಬ್ಬರಲ್ಲೂ ಕಾವ್ಯವಿಮರ್ಶೆಯ ಪ್ರಥಮ ಪಾಠ ಮರೆಯಾಯಿತು. ನಾವಿರುವುದೇ ಹೇಳುವುದಕ್ಕೆ ಕೇಳುವುದಕ್ಕಲ್ಲ ಎಂಬ ಜಗದ್ಗುರು ಪರಂಪರೆ ಇಬ್ಬರಲ್ಲೂ ಪ್ರಕಟವಾಯಿತು.  ಇದು ಒಬ್ಬರೊ ಇಬ್ಬರೊ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡ  ಮಾತಲ್ಲ. ಇದು ಎಲ್ಲ ಪ್ರಗತಿಪರರನ್ನು ಕುರಿತು ಮಾತಂತೂ ಅಲ್ಲವೇ ಅಲ್ಲ. ಎಲ್ಲ ಸಂಪ್ರದಾಯಸ್ಥರನ್ನು ಕುರಿತ ಟೀಕೆಯೂ ಅಲ್ಲ. ಜಗದ್ಗುರು ಪರಂಪರೆಯೆಂಬ ಉಪದೇಶಾತ್ಮಕ ಮನೋಧರ್ಮಕ್ಕೆ ಸಂಬಂಧಿಸಿದ ಒಟ್ಟಾರೆ ಮಾತು.

ಇವತ್ತು ನಮಗೆ ಬೇಕಾದ್ದು ಜನಪರಂಪರೆ. ಜನಪರಂಪೆಯು ಕೇವಲ ಹೇಳುವುದಕ್ಕೆ ಇರುವುದಿಲ್ಲ. ತಾನು ಹೇಳುವ ಮಾತು ತನಗೂ  ಹೇಳಿಕೊಂಡ ಮಾತು ಎಂದು ಭಾವಿಸುತ್ತದೆ. ಅಂದರೆ ಸಾಹಿತ್ಯಾದಿ ಕಲೆಗಳನ್ನು ಋಷಿಪರಂಪರೆಯ ಧ್ಯಾನಸ್ಥ ಸ್ಥಿತಿಯಿಂದ ಜನಸ್ಥ ಸ್ಥಿತಿಗೆ ತರುತ್ತದೆ. ಅಂತರಂಗ ಬಹಿರಂಗಗಳನ್ನು ಬೆಸೆಯುತ್ತದೆ. ಒಳ ಹೊರಗಿನ ಅನುಸಂಧಾನವಾಗುತ್ತದೆ. ಅಗತ್ಯವಿದ್ದಾಗ ಮುಖಾಮುಖಿಗೆ ಮುಂದಾಗುತ್ತದೆ. ಇಂಥ ಜನಪರಂಪರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರ್ರಾಚೀನದಿಂದ ಆಧುನಿಕ ಸಂದರ್ಭದವರೆಗೂ ಸಾಕ್ಷಿರೂಪಗಳಿವೆ.  ನಮ್ಮ ಎಲ್ಲ ಸಾಹಿತ್ಯಧಾರೆಗಳು ಜನಪರಂಪರೆಯನ್ನು ಒಂದು ಭಾಗವಾಗಿ ಒಳಗೊಂಡರೆ, ಪ್ರಗತಿ ಶೀಲ ಮತ್ತು ದಲಿತ - ಬಂಡಾಯ ಸಾಹಿತ್ಯವು ಸಮಗ್ರವಾಗಿ ಜನಪರಂಪರೆಯೇ ಆಗಲು ಪ್ರಯತ್ನಿಸಿದೆ.

ಇಂದಿನ ಸಂದರ್ಭದಲ್ಲಿ ನಮ್ಮ ಸಾಹಿತ್ಯವು ಮತ್ತೊಮ್ಮೆ ಜನಪರಂಪರೆಯನ್ನು ಪ್ರಧಾನ ಗುಣ ಲಕ್ಷಣವಾಗಿಸಿಕೊಳ್ಳಬೇಕಾಗಿದೆ. ಜನ ಸಾಮಾನ್ಯರ ಸಂಕಷ್ಟದ ಕಾಲವಿದು. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಎಲ್ಲ ಬಡವರು ವಿವಿಧ ಪ್ರಮಾಣದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಯೋತ್ಪಾದನೆ, ಯುದ್ಧೋತ್ಪಾದನೆಗಳಷ್ಟೇ ಹಿಂಸೆಯಾಗದೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಹಿಂಸೆ ಅಂತರ್ಗತವಾಗಿ ಬಿಟ್ಟಿದೆ. ವ್ಯವಸ್ಥೆಯೊಳಗಿನ ಹಿಂಸೆಯು ಜಾತಿಯಾಗಿ, ವರ್ಣವಾಗಿ, ವರ್ಗವಾಗಿ ಲಿಂಗವಾಗಿ ಅಂಗಾಂಗಗಳನ್ನೂ ಅಣ್ವಸ್ತ್ರವಾಗಿಸಿ ಬಿಟ್ಟಿದೆ. ಆದ್ದರಿಂದ ಇಂದು ಸಾಮಾಜಿಕ ಆರ್ಥಿಕ ವ್ಯವಸ್ಥೆಯಿಂದ ವಿಮೋಚನೆಗೊಳಿಸಲು ಹೊಸ ಪರ್ಯಾಯಗಳೂ ಬೇಕಾಗಿವೆ ನನಗನ್ನಿಸುತ್ತದೆ. - ತಾಯ್ತನ ಈಗ ನಮ್ಮ ಪ್ರತೀಕವಾಗಬೇಕು.  ತಾಯಿಗೆ  ತನ್ನ ಮಕ್ಕಳೆಲ್ಲರೂ ಸಮಾನ. ಗಂಡಾಗಲಿ ಹೆಣ್ಣಾಗಲಿ, ಹಿರಿಯರಾಗಲಿ ಕಿರಿಯರಾಗಲಿ ಭೇದ ಭಾವವಿಲ್ಲದ ಒಂದೇ ಮನೋಭಾವ ಮನೆಯ ಪಡಸಾಲೆ, ಹಜಾರ, ಅಡುಗೆಮನೆ ಬಚ್ಚಲು, ಹಿತ್ತಲು-ಎಲ್ಲ ಪ್ರದೇಶಗಳ ಬಗ್ಗೆಯೂ ತಾಯಿಯದು ಸಮಾನ ದೃಷ್ಟಿ. ಆದ್ದರಿಂದ ನಮ್ಮ ಸಮಾಜಕ್ಕೆ ತಾಯ್ತನ ಬೇಕು. ಸರ್ಕಾರಕ್ಕೆ ತಾಯ್ತನ ಬೇಕು. ಸಾಹಿತ್ಯ - ಸಂಸ್ಕೃತಿಗೆ ತಾಯ್ತನ ಬೇಕು.  ನಾವೆಲ್ಲ ತಾಯೀಕರಣಗೊಳ್ಳಬೇಕು. ತಾಯಿಯೆಂದರೆ ಮಮತೆ ಮತ್ತು ಸಮತೆ. ಈ ಸಮತಾಮಯಿ ತಾಯಿ ಸಂಕಟಪಡುತ್ತಾಳೆ; ಸಂತಳಾಗುತ್ತಾಳೆ; ಸಿಟ್ಟಾಗುತ್ತಾಳೆ; ಸ್ಫೋಟಿಸುತ್ತಾಳೆ. ಅಂತಃಕರಣವಾಗುತ್ತಾಳೆ. ಜಾತೀಕರಣ ಮತ್ತು ಜಾಗತೀಕರಣಕ್ಕೆ ಎದುರಾಗುವ ‘ತಾಯೀಕರಣವಾಗುತ್ತಾಳೆ. ನನಗೀಗ ಖಲೀಲ್ ಜಿಬ್ರಾನ್ ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. ಆತ  ಹೇಳಿದ: ‘ನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ. ಆದರೆ ನೂರಾರು ಕವಿತೆಗಳನ್ನು ಬದುಕಿದಳು. ನಿಜ, ನಮ್ಮಲ್ಲೂ  ಬರೆಯದ ಬರಹಗಾರರಿದ್ದಾರೆ. ನರ್ತಿಸದ ನೃತ್ಯಗಾರರಿದ್ದಾರೆ. ಹಾಡದ ಹಾಡುಗಾರರಿದ್ದಾರೆ; ಅಭಿನಯಿಸದ ಕಲಾವಿದರಿದ್ದಾರೆ. ಆದರೆ ಇವರೆಲ್ಲ ನೂರಾರು ಕವಿತೆಗಳನ್ನು ಬದುಕುತ್ತಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದ ನಾವು ನೂರಾರು ಕವಿತೆಗಳನ್ನು ಬದುಕುವ ಈ ಭಾವ ಬಂಧುಗಳನ್ನು ಬದುಕಿಸಿಕೊಳ್ಳಬೇಕು. ಸಾವಿರಾರು ಕವಿತೆಗಳನ್ನು ಬದುಕುವ ಕರ್ನಾಟಕವನ್ನು ಕಟ್ಟಬೇಕು; ಕರ್ನಾಟಕ ತಾಯೀಕರಣಗೊಳ್ಳಬೇಕು. ಕನ್ನಡ ಸಂವೇದನೆಯಲ್ಲಿ ಸಮತೆಯ ಸಾಮಾಜಿಕ ಆಯಾಮ ಸದಾ ಇರಬೇಕು. ತಾಯೀಕರಣಗೊಂಡ ಸಮತೆಯ ಕರ್ನಾಟಕ ನಮ್ಮದಾಗಬೇಕು.
* * *
(ವಿ.ಸೂ: ಈ ಮಾತುಗಳು ನಿಮಗೆ ಹೇಳಿದ ಮಾತುಗಳು ಮಾತ್ರವಲ್ಲ. ನನಗೆ ನಾನೇ ಹೇಳಿಕೊಂಡ ಮಾತುಗಳೂ ಹೌದು.
ನನ್ನ ಈ ಭಾಷಣದಲ್ಲಿ ಉಲ್ಲೇಖಿಸಿರುವ ಬರಹಗಾರರು ಸಾಂಕೇತಿಕ. ಉಲ್ಲೇಖ ಮಾಡದೆ ಇರುವ ಇದೇ ಆಶಯದ ಅನೇಕ ಬರಹಗಾರರಿದ್ದಾರೆ. ನಾನು  ಪ್ರಸ್ತಾಪಿಸಿದ ವಿಷಯಗಳಿಗೆ ಸಾಹಿತ್ಯದ ಸಂಬಂಧವಿರಬೇಕು ಎಂಬ ಉದ್ದೇಶದಿಂದ ಕೆಲವರನ್ನು ಸಾಂಕೇತಿಕವಾಗಿ ಹೆಸರಿಸಿದ್ದೇನೆ. ಉದ್ದೇಶಪೂರ್ವಕವಾಗಿ ಯಾರನ್ನೂ ಬಿಟ್ಟಿಲ್ಲ.)
* * *

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT