ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ 9ಕ್ಕೆ ‘ಜಾನ್ ಜಾನಿ ಜನಾರ್ದನ್’ತೆರೆಗೆ

ಸಿನಿಹನಿ
Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಎಂ. ಆರ್. ಪಿಕ್ಚರ್ಸ್ ಲಾಂಛನದಲ್ಲಿ ಎಲ್ ಪದ್ಮನಾಭ್, ಸಿ.ಎನ್.ಶಶಿಕಿರಣ್ ಮತ್ತು ಕೆ.ಗಿರೀಶ್ ಅವರು ನಿರ್ಮಿಸಿರುವ ಚಿತ್ರ ‘ಜಾನ್ ಜಾನಿ ಜನಾರ್ದನ್’. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ನವೆಂಬರ್ 11ನೇ ತಾರೀಖಿನಂದು ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಅಷ್ಟರಲ್ಲಿ ನೋಟು ನಿಷೇಧದ ಸಮಸ್ಯೆ ಎದುರಾಗಿದ್ದರಿಂದ, ಜನಸಾಮಾನ್ಯ ನಿತ್ಯದ ಜೀವನಕ್ಕೇ ಪರದಾಡುವ ಸ್ಥಿತಿ ಉದ್ಭವಿಸಿರುವಾಗ ಥಿಯೇಟರಿನತ್ತ ಬರೋದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಡಿಸೆಂಬರ್ 9ರಂದು ‘ಜಾನ್ ಜಾನಿ ಜನಾರ್ದನ್’ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ ಚಿತ್ರತಂಡ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸಿದ್ದರು.

ಇತ್ತೀಚೆಗೆ ‘ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ಸಾವಿಗೀಡಾದ ಕಲಾವಿದರಾದ ಉದಯ್ ಮತ್ತು ಅನಿಲ್ ಅವರ ಕುಟುಂಬಕ್ಕೆ ಚಿತ್ರದ ವತಿಯಿಂದ ತಲಾ ₹25,000 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖಾಂತರ ನೀಡಲಾಯಿತು.

‘ರಾಜಾಹುಲಿ’ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕ ಎಲ್. ಪದ್ಮನಾಭ್ ಅವರಿಗಿದು ಮೊದಲ ಸಿನಿಮಾ.  ಬೃಹತ್ ತಾರಾಗಣ ಹೊಂದಿರುವ ಚಿತ್ರ. ಮೂವರು ನಾಯಕರು ಮುಖ್ಯವಾಗಿರುವ ಈ ಚಿತ್ರದಲ್ಲಿ ಎಂ.ಎಸ್. ಉಮೇಶ್, ಗಿರಿಜಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಗುರುನಂದನ್, ಯಶವಂತ್ ಶೆಟ್ಟಿ, ಶ್ರೀನಿವಾಸಮೂರ್ತಿ, ರವಿಶಂಕರ್ ಗೌಡ, ಪ್ರಶಾಂತ್ ಸಿದ್ದಿ, ಲಕ್ಷ್ಮೀದೇವಿ, ಬಿರಾದಾರ್, ಗಿರಿಜಾ ಲೋಕೇಶ್, ಜಯಶ್ರೀ, ದಿಯಾ, ಸಂಕೇತ್ ಕಾಶಿ, ರೇಖಾ ಕುಮಾರ್, ಚಿತ್ರಾ ಶೆಣೈ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ಜೊತೆಗೆ ಮಾಲಾಶ್ರೀ, ಐಂದ್ರಿತಾ ರೇ, ಮುಂಬೈ ಬೆಡಗಿ ಕಾಮನಾ ರಾನಾವತ್ ಕೂಡಾ ನಟಿಸಿದ್ದಾರೆ.

 ಈ ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬ್ಯಾಂಕಾಕ್ ಮತ್ತು ಪಟಾಯದಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೆ.ಕಲ್ಯಾಣ್, ಅಲೆಮಾರಿ ಸಂತು, ಬಹದ್ದೂರ್ ಚೇತನ್, ಅಂಬಾರಿ ಅರ್ಜುನ್ ಮತ್ತು ಗುರುದೇಶಪಾಂಡೆ ಸೇರಿದಂತೆ ಕನ್ನಡ ಚಿತ್ರರಂಗದ ಐದು ಜನ ಖ್ಯಾತ ನಿರ್ದೇಶಕರುಗಳು ತಲಾ ಒಂದೊಂದು ಹಾಡು ಬರೆದಿದ್ದಾರೆ.  ಅರ್ಜುನ್ ಜನ್ಯರ ಸಂಗೀತ ನಿರ್ದೇಶನ ಮತ್ತು ಸಂತೋಶ್ ರೈ ಪಾತಾಜೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿಂಹ ಹಾಕಿದ ಹೆಜ್ಜೆಗೆ ‘ಯೂ’ ಪ್ರಮಾಣಪತ್ರ
‘ಸಾಹಸಸಿಂಹ’ ವಿಷ್ಣುವರ್ಧನ್ ಚಹರೆ ಇರುವ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ, ‘ಯೂ’ ಪ್ರಮಾಣಪತ್ರ ನೀಡಿದೆ. ಪತಿ ಫಿಲಂಸ್ ಲಾಂಛನದಡಿ ಪಾರ್ಥಸಾರಥಿ ಮತ್ತು ಗೌತಮ್ ಸೇಠ್ ನಿರ್ಮಾಣದ ಈ ಚಿತ್ರಕ್ಕೆ ವಿಕ್ರಂ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪಾರ್ಥಸಾರಥಿ ಕಥೆಗೆ, ರವಿಶಂಕರ್‌ನಾಗ್ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್ ಛಾಯಾಗ್ರಹಣವಿದೆ. ಪ್ರೀತಂ, ಅಮೃತಾ ಐಯ್ಯಂಗಾರ್, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ ಮುಂತಾದವರು ತಾರಾಗಣದಲ್ಲಿದ್ದು, ಡಿಸೆಂಬರ್ ಅಂತ್ಯದಲ್ಲಿ ಚಿತ್ರ ತೆರೆಕಾಣಲಿದೆ.

ಹೊಸವರ್ಷಕ್ಕೆ ‘ಮರಿ ಟೈಗರ್’ ಆಗಮನ
ವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್’ ಚಿತ್ರ ಮುಕ್ತಾಯವಾಗಿದೆ. ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್‌ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹಾಡಿದ ಹಾಡು ಮತ್ತು ಮಾತಿನ ಭಾಗದ ಚಿತ್ರೀಕರಣದೊಂದಿಗೆ ಚಿತ್ರೀಕರಣ ಸಂಪೂರ್ಣಗೊಂಡಿದೆ. ನಾಯಕ ನಟ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬದ ದಿನದಂದೇ ಚಿತ್ರೀಕರಣ ಮುಗಿದಿದ್ದು ಚಿತ್ರತಂಡದ ಸಡಗರಕ್ಕೆ ಕಾರಣವಾಗಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ಮೊದಲ ಪ್ರತಿ ಸಿದ್ದವಾಗಲಿದೆ. 2017ರ ಜನವರಿ (ಹೊಸವರ್ಷ)ದಲ್ಲಿ ‘ಮರಿಟೈಗರ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ರಮೇಶ್ ಕಶ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದಾರೆ. ತೇಜು ಚಿತ್ರದ ನಾಯಕಿ. ಅಜಯ್ ಕುಮಾರ್ ಕಥೆ, ಮಲೇಷ್ಯಾದ ರಾಕ್ ರವಿ ಸಂಗೀತ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

‘ಕೆಂಗುಲಾಬಿ’ಯ ಹಾಡು
ಶಾರದಾದೇವಿ ತುಳಜನಸಾ ಭಾಂಗಡೆ ಅವರ ಆಶೀರ್ವಾದದೊಂದಿಗೆ ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರ ‘ಕೆಂಗುಲಾಬಿ’. ಈ ಹಿಂದೆ ‘ಇಂಗಳೆಮಾರ್ಗ’ ಎನ್ನುವ ಚಿತ್ರವನ್ನು ನಿರ್ಮಿಸಿದ್ದ ಘನಶ್ಯಾಂ ಬಾಂಡಗೆ ‘ಕೆಂಗುಲಾಬಿ’ಯನ್ನು ನಿರ್ಮಿಸುತ್ತಿದ್ದಾರೆ.

ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಲ್ಪ ಅವಧಿಯಲ್ಲಿಯೇ ನಾಲ್ಕು ಮುದ್ರಣಗಳನ್ನು ಕಂಡು ಅತಿ ಹೆಚ್ಚು ಓದುಗರಿಗೆ ತಲುಪಿದ ಕಾದಂಬರಿ ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’. ಉತ್ತರ ಕರ್ನಾಟಕದ ಹಳ್ಳಿಯಿಂದ ಪ್ರಾರಂಭವಾಗುವ ಈ ಕಾದಂಬರಿ ಜರ್ನಿ ಹುಬ್ಬಳ್ಳಿ, ಹಾವೇರಿ, ಬೆಂಗಳೂರು, ಮುಂಬೈವರೆಗೆ ಮುಂದುವರೆದು ಅಲ್ಲೆಲ್ಲ ನಡೆಯುವ ವೇಶ್ಯಾವಾಟಿಕೆಯ ಕರಾಳ ಮುಖಗಳನ್ನು ಬಿಚ್ಚಿಡುವ ರೋಚಕ ಪುಟಗಳನ್ನು ಒಳಗೊಂಡಿದೆ.

ಈ ಕಾದಂಬರಿ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿದೆ. ಆ ಕಾದಂಬರಿ ಯಶಸ್ಸು ಮತ್ತು ಕ್ಷಣ ಕ್ಷಣದ ತಿರುವುಗಳಿಗೆ ಮರುಳಾದ ಯುವ ನಿರ್ದೇಶಕ ಈ ಕಾದಂಬರಿಯನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.  ಕಾದಂಬರಿಯ ಪರಿಸರದ ಪ್ರದೇಶಗಳಾದ ಬಾಗಲಕೋಟ ಮತ್ತು ಗದಗ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲೆ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿನ ಮುತ್ತು ಕಟ್ಟುವ ದೃಶ್ಯವಿದ್ದು, ಆ ಸಂದರ್ಭದಲ್ಲಿ ಜೋಗ್ತಿ ನೃತ್ಯಕ್ಕೆ ಬಳ್ಳಾರಿಯ ರಾಜ್ಯೊತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಮಂಜಮ್ಮ ಜೋಗ್ತಿ ಮತ್ತು ತಂಡದವರಿಂದ ಚೌಡ್ಕಿ ಪದ ಮತ್ತು ಜೋಗ್ತಿ ನೃತ್ಯದ ಚಿತ್ರೀಕರಣ ಅದ್ಭುತವಾಗಿ ಮೂಡಿಬಂದಿದೆ.

ಚಿತ್ರೀಕರಣದ ಎಲ್ಲ ಸಂದರ್ಭದಲ್ಲೂ ನಿರ್ಮಾಪಕ ಘನಶ್ಯಾಂ ಭಾಂಡಗೆ ಸ್ಥಳದಲ್ಲಿದ್ದು ಸಂಪೂರ್ಣವಾಗಿ ಸಹಕಾರ ನೀಡಿದ್ದನ್ನು ತಂಡ ಸ್ಮರಿಸುತ್ತದೆ.
ದೇವದಾಸಿಯಿಂದ ಇಂದಿನ ಕಾಲ್ ಗರ್ಲ್‌ವರೆಗಿನ ಎಲ್ಲ ಮಗ್ಗಲುಗಳನ್ನು ಒಳಗೊಂಡಿರುವ ಕಥಾಹಂದರದ, ಶ್ರೀಶ ಜಾವೂರ ನಿರ್ದೇಶನದ ಈ ಚಿತ್ರಕ್ಕೆ ಸಂಜು ಬೆಳಗಾಂ ರಚಿಸಿರುವ ‘ಯಾರು ಯಾರದೋ ಮನದಾಗೆ ಯಾರದ್ದೋ ಕಾಳಜಿ, ಅತಿಯಾದ್ರೆ ಅದೇ ಚುಚ್ಚುವ ಸೂಜಿ’ ಎನ್ನುವ ಹಾಡಿಗೆ ಸುರೇಶ್ ಗುಟ್ಟಳ್ಳಿ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಸತತ ನಾಲ್ಕು ದಿನಗಳ ಕಾಲ ದಿ ಕ್ಲಬ್ ನಲ್ಲಿ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ಕೃತಿಕಾ, ಯೋಗಿತಾ ಮತ್ತು ಗೌರೀಶ್ ಅಕ್ಕಿ ಪಾಲ್ಗೊಂಡಿದ್ದರು.
ಕುಮಾರ ಚಕ್ರವರ್ತಿ ಛಾಯಾಗ್ರಹಣ, ರಾಜ್‌ಕಿಶೋರ್ ರಾವ್ ಸಂಗೀತ ನಿರ್ದೇಶನ, ರಾಜು ನೃತ್ಯ, ದೇವರಾಜ್ ಸಹಕಾರ ನಿರ್ದೇಶನ, ವಿಜಯ್ ಕುಮಾರ್ ವಸ್ತ್ರಾಲಂಕಾರ, ಅಶೋಕ್, ರಾಮ್ ಧರ್ಮ ಸಹ ನಿರ್ದೇಶನ, ವಸಂತ್‌ರಾವ್ ಎಂ. ಕುಲಕರ್ಣಿ ಕಲೆ, ಎಸ್. ರಾಜು ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರಕ್ಕೆ ಬಸನಗೌಡ ಮಾಲಿಪಾಟೀಲ ಅವರು ಸಹ ನಿರ್ಮಾಪಕರು.

‘ತರ್ಲೆ ವಿಲೇಜ್’ ರೆಡಿ
‘ತಿಥಿ’ ಚಿತ್ರದ ಕಲಾವಿದರ ಬಳಗವನ್ನೊಂದಿರುವ ಮತ್ತೊಂದು ಚಿತ್ರ ‘ತರ್ಲೆ ವಿಲೇಜ್’ ತೆರೆಗೆ ಬರಲು ಸಿದ್ಧವಾಗಿದೆ. ಜೀವಿತಾ ಕ್ರಿಯೇಷನ್ಸ್ ಲಾಂಛನದಡಿ ಎಸ್.ಬಿ.ಶಿವ ನಿರ್ಮಿಸಿರುವ ಚಿತ್ರವನ್ನು ಕೆ.ಎಂ. ರಘು ನಿರ್ದೇಶಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವೂ ಮುಗಿದಿದ್ದು, ಈ ವಾರಂತ್ಯದಲ್ಲಿ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ.

ಗಡ್ಡಪ್ಪ, ಸೆಂಚುರಿಗೌಡ, ತಮ್ಮಣ್ಣ, ಅಭಿಷೇಕ್, ಹರ್ಷಿತಾ, ಭಾಗ್ಯಶ್ರೀ ಸೋಮು ಜೊತೆಗೆ ಸುಮಾರು 70 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಿದ್ದೇಗೌಡ ಕಥೆ, ರಾಮು ನರಹಳ್ಳಿ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ಚಿತ್ರಕ್ಕಿದೆ.

ಜಂಗಲ್ ಬುಕ್ ಮಾದರಿಯ ‘ಪುಟಾಣಿ ಸಫಾರಿ’ ಚಿತ್ರ
ಕನ್ನಡದಲ್ಲಿ ಮಕ್ಕಳಿಗಾಗಿಯೇ ತಯಾರಾದ ಚಿತ್ರಗಳು ಸದ್ಯಕ್ಕೆ ಅಪರೂಪ. ದಶಕಗಳ ಹಿಂದೆ ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123, ನಾಗರಹೊಳೆ ಮುಂತಾದ ಚಿತ್ರಗಳನ್ನು ಹೊರತುಪಡಿಸಿದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನರಂಜನಾ ಹಿತಾಸಕ್ತಿಯಿಂದ ಮಕ್ಕಳ ಚಿತ್ರಗಳು ತಯಾರಾಗಿಲ್ಲ.

ಆ ನಿಟ್ಟಿನಲ್ಲಿ ‘ಪುಟಾಣಿ ಸಫಾರಿ’ ಚಿತ್ರ ಮಕ್ಕಳ ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ತಯಾರಾಗಿರುವ ಚಿತ್ರ. ಏಕೆಂದರೆ ಮಕ್ಕಳ ಚಿತ್ರಗಳು ಸರ್ಕಾರದ ಸಹಾಯಧನವನ್ನು ಅವಲಂಬಿತವಾಗಿರುವ ಸಾಧ್ಯತೆಗಳು ಜಾಸ್ತಿ. ಮಕ್ಕಳ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಮಂದಿರಕ್ಕೆ ಮಕ್ಕಳು ಬರುವುದಿಲ್ಲ ಎನ್ನುವುದು ಬಹುತೇಕ ಸಿನಿಕರ್ಮಿಗಳ ಅಂಬೋಣ. ಅದು ಪ್ರಾಯೋಗಿಕವಾಗಿ ಸತ್ಯವಲ್ಲ. ಈವತ್ತು ಹಾರರ್, ಆಕ್ಷನ್, ಲವ್ ಸೆಂಟಿಮೆಂಟ್ ಹಾಸ್ಯ ಹೀಗೆ ಚಿತ್ರಗಳಲ್ಲಿ ವಿಭಾಗಗಳು ಇರುವಂತೆಯೇ ಮಕ್ಕಳ ಚಿತ್ರದ ಕೆಟಗರಿಯನ್ನು ಚಿತ್ರಂರಗ ಗಂಭೀರವಾಗಿ ಪರಿಗಣಿಸಿಲ್ಲ.

‘ಪುಟಾಣಿ ಸಫಾರಿ’ ಮಕ್ಕಳ ಚಿತ್ರವೇ ಆದರೂ ಕಮರ್ಷಿಯಲ್ ಚಿತ್ರ. ಇದೊಂದು ಸಾಹಸಮಯ ಕತೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ, ವನ್ಯಮೃಗಗಳ ನಡುವೆ ಸಮಾಜದ ಎರಡು ಭಿನ್ನ ಸ್ತರದಿಂದ ಬಂದಂತಹ ಮಕ್ಕಳಿಬ್ಬರು ಅನಿವಾರ್ಯವಾಗಿ ಬದುಕಬೇಕಾದ ಸಂದರ್ಭ ಬಂದಾಗ ಹೇಗೆ ಅದನ್ನು ಎದುರಿಸುತ್ತಾರೆ ಎಂಬುದೇ ಮೂಲ ಕಥೆಯ ವಸ್ತು. ಚಿತ್ರದಲ್ಲಿ ಪ್ರಾಣಿಗಳಿವೆ, ದಟ್ಟವಾದ ಕಾನನವಿದೆ. ಜೊತೆಗೆ ಹಾಸ್ಯ, ಸೆಂಟಿಮೆಂಟ್ ಕೂಡ.

ಸಿರಸಿ, ಸಿದ್ಧಾಪುರ, ಮುಂತಾದ ಕಾಡುಗಳಲ್ಲಿ, ಬಂಡೀಪುರ, ಕೆ.ಗುಡಿ ಮುಂತಾದ ರಕ್ಷಿತಾರಣ್ಯದಲ್ಲಿ ಅದ್ದೂರಿಯಾಗಿ ಚಿತ್ರೀಕರಣ ನಡೆಸಲಾಗಿದೆ. ಮಕ್ಕಳಿಬ್ಬರು ವನ್ಯಮೃಗಗಳಿಗೆ ಮುಖಾಮುಖಿಯಾಗುವ ದೃಶ್ಯಗಳು ಚಿತ್ರದಲ್ಲಿ ನಿಜವಾಗಿ ಮೂಡಿ ಬಂದಿದ್ದು, ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ರೋಮಾಂಚನಗೊಳಿಸುತ್ತದೆ. ಕನ್ನಡದ ಮಟ್ಟಿಗೆ ಜಂಗಲ್ ಬುಕ್ ಮಾದರಿಯಲ್ಲಿ ಚಿತ್ರ ತಯಾರಾಗಿದ್ದು, ತಾಂತ್ರಿಕವಾಗಿಯೂ ಚಿತ್ರದ ಉನ್ನತ ಮಟ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT