ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟವೇ ಮದ್ದು!

Last Updated 2 ಡಿಸೆಂಬರ್ 2016, 20:11 IST
ಅಕ್ಷರ ಗಾತ್ರ

ಮೂಲ ನೆಲದ ಮೇಲೆ ನಿಂತು, ಅಸ್ತಿತ್ವಕ್ಕಾಗಿ ಮತ್ತು ಧ್ವನಿಗಾಗಿ ನಿರಂತರ ಹೋರಾಟ ಮಾಡುವ ಶಕ್ತಿಯನ್ನು ಇನ್ನೂ ಉಳಿಸಿಕೊಂಡಿರುವವರಿದ್ದಾರೆ ಎಂದರೆ ಅವರು ಕಾಸರಗೋಡಿನವರು ಮಾತ್ರ. 1956ರ ನವೆಂಬರ್ 1ರಂದು ಭಾಷಾವಾರು ವಿಂಗಡಣೆಯಿಂದ ಕೇರಳದ ತೆಕ್ಕೆಗೆ ಸೇರಿ ಹೋದ ಕಾಸರಗೋಡಿನ ಕನ್ನಡಿಗರು  ಇಂದಿಗೂ ಕರಾಳ ದಿನವನ್ನು ಆಚರಿಸಿ ತಮ್ಮ ನೋವು, ನಿರಾಶೆ, ಹತಾಶೆಯನ್ನು ಪ್ರಕಟಿಸುತ್ತಾ ಬಂದಿದ್ದಾರೆ.

ಭಾಷಾವಾರು ಪ್ರಾಂತ್ಯ ರಚನೆಯಾಗುವಾಗ ಆಗಿರುವ ಸಣ್ಣ ಎಡವಟ್ಟು, ಕಾಸರಗೋಡಿನ ಕನ್ನಡಿಗರ ಮೂಲ ಬದುಕನ್ನು ಹೇಗೆ ಅಡಿಮೇಲಾಗಿಸಿತು ಎಂದರೆ ಅದು ಆ ಬದುಕನ್ನು ದಿನಂಪ್ರತಿ ಅನುಭವಿಸುವವರಿಗೆ ಗೊತ್ತು. ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್ ತಾಲ್ಲೂಕುಗಳಲ್ಲಿ ಕನ್ನಡ ಶಾಲೆಗಳು,  ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮವಿದ್ದು, ಕನ್ನಡವನ್ನು ಕಲಿಸುತ್ತಿದ್ದರೂ ಕನ್ನಡ ಮಕ್ಕಳ ಕಣ್ಣೀರು ಒಂದೇ  ಸಮನೆ ಸುರಿಯುತ್ತಿರುವುದು ಇತರರಿಗೆ ಕಾಣಲಾರದ ಸಂಗತಿ.

ಕನ್ನಡವನ್ನು ಉದ್ದೇಶಪೂರ್ವಕವಾಗಿ ಹಿಂದೆ ತಳ್ಳುತ್ತಾ, ಮಲಯಾಳವನ್ನು ಸಮರ್ಥವಾಗಿ ಹೇರಿಕೆ ಮಾಡುವ ಕಾರ್ಯ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಧಿಕೃತ ಭಾಷೆ ಮಲಯಾಳವಾಗಬೇಕು; ಎಲ್ಲಾ ಕಚೇರಿಗಳು ಅದರಲ್ಲೇ ವ್ಯವಹರಿಸಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಇದಕ್ಕೆ  ಪೂರಕವೆಂಬಂತೆ ‘ಮಲಯಾಳ ಭಾಷಾ ಮಸೂದೆ’ಯನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ‘ಇದು ಕಾಸರಗೋಡಿನಲ್ಲೂ ಜಾರಿಯಾದರೆ ಕನ್ನಡ ಬಲ್ಲ ನ್ಯಾಯವಾದಿಗಳು ಇಂಗ್ಲಿಷ್‌ನಲ್ಲಿಯೂ ವಾದ ಮಂಡಿಸಲು ಆಗದೆ ತಮ್ಮ ವೃತ್ತಿಯನ್ನೇ ಕಳೆದುಕೊಳ್ಳಬೇಕಾದೀತು; ಕನ್ನಡ ಪ್ರದೇಶ ಹೇಳ ಹೆಸರಿಲ್ಲದಂತೆ ಮಾಯವಾದೀತು; ಎಲ್ಲಾ ಕನ್ನಡ ಶಾಲೆಗಳು ಮಲಯಾಳ ಶಾಲೆಗಳಾದಾವು’ ಎಂಬ ಭಯದಿಂದ ಕಳೆದ ವರ್ಷ ಫೆಬ್ರುವರಿ 2ರಂದು ಕಾಸರಗೋಡಿನಲ್ಲಿ ಕನ್ನಡಿಗರ ಬೃಹತ್ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮತ್ತು ಕೇರಳದ ರಾಜಧಾನಿ ತಿರುವನಂತಪುರಕ್ಕೆ ನಿಯೋಗ ತೆರಳಿ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಿಕೊಳ್ಳಲಾಗಿದೆ. ಇಷ್ಟೆಲ್ಲಾ ಅಗಿ ಕೇವಲ 10 ತಿಂಗಳಾಗುವಾಗ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ ಮತ್ತೆ ಮಲಯಾಳಿ ಅಧಿಕಾರಿಯನ್ನೇ ನೇಮಿಸಲಾಯಿತು. ಅದಕ್ಕೆ ಮತ್ತೆ ಪ್ರತಿಭಟನೆ ಮಾಡಬೇಕಾಯಿತು. ಫಲ ಸಿಕ್ಕಿತು.

ಕಾಸರಗೋಡಿನ ಹಲವು ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳನ್ನು ಸೃಷ್ಟಿಸಲು ಹಲವಾರು ಕನ್ನಡ ಧುರೀಣರು ಕೆಲಸ ಮಾಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅದನ್ನು ಕಿತ್ತುಕೊಳ್ಳಲು ಅಧಿಕಾರಿಗಳ ಪಡೆ ಸದಾ ಸನ್ನದ್ಧವಾಗಿದೆ. ಮೊಗ್ರಾಲ್ ಪುತ್ತೂರಿನಲ್ಲಿರುವ ತಾಂತ್ರಿಕ ಪ್ರೌಢಶಾಲೆಯಲ್ಲಿ ಕನ್ನಡ ಬಲ್ಲ ತಾಂತ್ರಿಕ ಶಿಕ್ಷಕ ಹುದ್ದೆಯೊಂದನ್ನು ಸೃಜಿಸಬೇಕೆಂದು ಕಳೆದ ಎರಡು ವರ್ಷಗಳಿಂದ ಸಮನ್ವಯ ಸಮಿತಿಯ ಹೋರಾಟದ ಫಲವಾಗಿ ಕೊನೆಗೂ ಅದಕ್ಕೆ ಅನುಮತಿ ಲಭಿಸಿತು.
ಕಾಸರಗೋಡಿನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಕನ್ನಡದ ನಾಮಫಲಕ ಹಾಕಬೇಕೆಂದು ಆನ್‌ಲೈನ್ ಚಳವಳಿ ಮಾಡಬೇಕಾಯಿತು. ಶಶಾಂಕ್ ದೊಡ್ಡಮಾಣಿಯವರ ಮೂಲಕ ನಡೆದ ಈ ಚಳವಳಿಗೆ ಕೊನೆಗೂ ಜಯ ಸಿಕ್ಕಿತು. ಹೀಗೆ ಪ್ರತಿ ಹಂತದಲ್ಲಿಯೂ ಕನ್ನಡದ ಉಳಿವಿಗಾಗಿ ಹೋರಾಟವನ್ನೇ ಮಾಡಬೇಕಾದ ಸ್ಥಿತಿ ಇಲ್ಲಿನ ಕನ್ನಡಿಗರದ್ದು.

ಈ ವರ್ಷದ ನವೆಂಬರ್ 1ರಂದು ಕಾಸರಗೋಡು ಕನ್ನಡಿಗರು ರಾಜಧಾನಿ ತಿರುವನಂತಪುರಕ್ಕೆ ತೆರಳಿ ಅಲ್ಲಿನ ಸೆಕ್ರೆಟೇರಿಯಟ್‌ ಮುಂಭಾಗದಲ್ಲಿ ಸೇರಿ ‘ಭಾಷಾ ಅಲ್ಪಸಂಖ್ಯಾತ ದಿನ’ಕ್ಕಾಗಿ ಬೇಡಿಕೆ ಮುಂದಿಟ್ಟದ್ದೂ ಆಗಿದೆ. ಕಾಸರಗೋಡು ಮತ್ತು ಮಂಜೇಶ್ವರ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕರು ನಿವೃತ್ತಿಯಾದಾಗ, ಇತರ ವಿಭಾಗಕ್ಕೆ ಉಪನ್ಯಾಸಕರ ಆಯ್ಕೆಗೆ ಕೇರಳ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದರೂ, ಕನ್ನಡ ಹುದ್ದೆಗಳಿಗೆ ಆದೇಶ ಹೊರಡಿಸಬೇಕಾದರೆ ಹೈಕೋರ್ಟ್‌ನ ಮೊರೆ ಹೋಗಬೇಕಾಯಿತು.

ಇಂಥ ಪ್ರಯತ್ನ ಪ್ರತಿ ಕ್ಷಣದಲ್ಲಿಯೂ ಆಗಬೇಕಾದದ್ದು, ನಡೆಸಬೇಕಾದದ್ದು ಕನ್ನಡಿಗರ ಮೂಲ ಕರ್ತವ್ಯ ಎಂಬಂತಾಗಿದೆ. ಕಾಸರಗೋಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭವಾದಾಗ ಅಲ್ಲಿ ಕನ್ನಡಕ್ಕೆ ಯಾವುದೇ ಸ್ಥಾನ ನೀಡಲೇ ಇಲ್ಲ. ನಿರಂತರ ಪತ್ರ ಬರೆಯುವಿಕೆ ಹಾಗೂ ನಿಯೋಗ ತೆರಳಿದ್ದರ ಫಲವಾಗಿ  ಸ್ನಾತಕೋತ್ತರ ಪದವಿ ಆರಂಭಿಸಲು ಹಸಿರು ನಿಶಾನೆ ಲಭಿಸಿದೆ. ಇದೆಲ್ಲದರ ಮಧ್ಯೆ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಿರುವ ಇತ್ತೀಚಿನ ಆದೇಶ ಚಾರಿತ್ರಿಕ ಘಟನೆಯಾಗಿ ಕಾಸರಗೋಡಿನ ಕನ್ನಡಿಗರಿಗೆ ವರದಾನ ಆಗುವುದರಲ್ಲಿ ಸಂದೇಹವಿಲ್ಲ.

ಯಾವುದೇ ಸಮಸ್ಯೆಯಾಗುವ ಮೊದಲೇ, ಮುಂದೆ ಬರಬಹುದಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯ ಇಲ್ಲಿನ ಕನ್ನಡಿಗರಿಗೆ ಇರುವುದರಿಂದ ಒಗ್ಗಟ್ಟಾಗಿ ನಿಂತು ಎದುರಿಸಬೇಕಾದುದು ನಮ್ಮ ಕರ್ತವ್ಯವಾಗುತ್ತದೆ. ಇಲ್ಲಿನ ಕನ್ನಡ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದ ವಿವಿಧ ಅಕಾಡೆಮಿಗಳು ಸಹಾಯಧನ ನೀಡುತ್ತಿವೆ. ಈಗಾಗಲೇ ಇಲ್ಲಿನ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಲ್ಲಿ ತಲಾ ₹ 50 ಸಾವಿರ ವಿದ್ಯಾರ್ಥಿ ವೇತನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡುತ್ತಾ ಬಂದಿದ್ದು , ಇದು ಇಲ್ಲಿಯ ಕನ್ನಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿದೆ. ಅದೇ ರೀತಿ ಎಂ.ಫಿಲ್ ಮತ್ತು ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಅಗತ್ಯವಿದೆ. ಹೀಗೆ ಕಾಸರಗೋಡಿನಲ್ಲಿ ಕನ್ನಡದ ಈ ರೀತಿಯ ಸ್ಥಿತಿಗತಿಯ ಮಧ್ಯೆಯೂ ಕನ್ನಡ ಬೆಳೆಯುವುದಕ್ಕೆ ಇನ್ನಷ್ಟು ಅಗತ್ಯ ವಾತಾವರಣವನ್ನು ನಿರ್ಮಿಸಬೇಕಾದುದು ಇಂದಿನ ಅನಿವಾರ್ಯ.

* ತುಳು ಮತ್ತು ಕನ್ನಡ ಪ್ರದೇಶವಾದ ಕಾಸರಗೋಡಿನ ಪ್ರತಿ ಸ್ಥಳದ ಹೆಸರು ಕೂಡಾ ನೆಲಮೂಲದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಆ ಹೆಸರುಗಳು ಬರಿಯ ಹೆಸರುಗಳಲ್ಲ; ಬದಲಾಗಿ ಸಂಸ್ಕೃತಿಯ ಭಾಗಗಳು. ಇಂದಿಗೂ ಅವೇ ಹೆಸರುಗಳು ಚಾಲ್ತಿಯಲ್ಲಿದ್ದರೂ, ಅವುಗಳನ್ನು ಸದ್ದಿಲ್ಲದೆ ಬದಲಾಯಿಸುವ ಕೆಲಸ ನಡೆಯುತ್ತಾ ಬಂದಿತು. ಸರ್ಕಾರಿ ಕಡತಗಳಲ್ಲಿ, ವಿವಿಧ ಫಲಕಗಳಲ್ಲಿ, ಬಸ್‌ಗಳಲ್ಲಿ ಇದು ಗೋಚರವಾಗುವುದಕ್ಕೆ ಆರಂಭವಾಯಿತು. ಮಂಜೇಶ್ವರ (ಮಂಚೇಶ್ವರ), ಕಾಸರಗೋಡು (ಕಾಸರಕೋಡ್), ಬಡಾಜೆ (ಬೆಡಾಜೆ) ಬೇಕೂರು (ಬೆಕ್ಕೂರು), ಬಂಗ್ರ ಮಂಜೇಶ್ವರ (ಬಂಕ್ರ ಮಂಚೇಶ್ವರ), ಕಾಟುಕುಕ್ಕೆ (ಕಾಟುಕುಕ್ಕೈ), ಸಸಿಹಿತ್ಲು (ತೈವಳಪ್ಪು), ಪೈವಳಿಕೆ (ಪೈವಳಿಕೈ), ಪುತ್ತಿಗೆ (ಪುತ್ತಿಗೈ) ಇತ್ಯಾದಿಯಾಗಿ ಪಟ್ಟಿ ಬೆಳೆಯುತ್ತದೆ. ಇದನ್ನು ಮೊದಲೇ ಅರ್ಥ ಮಾಡಿಕೊಂಡ ಸಮನ್ವಯ ಸಮಿತಿ ನೇರವಾಗಿ ಮುಖ್ಯಮಂತ್ರಿ ಹಾಗೂ ಭಾಷಾ ಅಲ್ಪಸಂಖ್ಯಾತ ಸಮಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಜಾಗೃತಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT