ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್‌ಗೆ ಮರಣೋತ್ತರ ಭಾರತ ರತ್ನ ಸಿಗಲಿ

ಸಮಗ್ರ ಚರಿತ್ರೆ ಮಹಾಯಾನದ ಸಮಾರೋಪ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಒತ್ತಾಯ
Last Updated 2 ಡಿಸೆಂಬರ್ 2016, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ದೃಷ್ಟಿಯಿಂದ ನೋಡಿದರೂ ವರನಟ ರಾಜ್‌ಕುಮಾರ್‌ ಭಾರತ ರತ್ನ ಪ್ರಶಸ್ತಿಗೆ  ಅರ್ಹ ವ್ಯಕ್ತಿ.   ಅವರಿಗೆ ಮರಣೋತ್ತರವಾಗಿ ಈ ಗೌರವ ನೀಡಬೇಕು’ ಎಂದು ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಒತ್ತಾಯಿಸಿದರು.

ರಾಜ್‌ಕುಮಾರ್‌ ರಾಷ್ಟ್ರೀಯ ಉತ್ಸವ ಹಾಗೂ ಅವರ ಸಮಗ್ರ ಚರಿತ್ರೆ ಮಹಾಯಾನದ ಸಮಾರೋಪ ಸಮಾರಂಭವನ್ನು ಇಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್‌ ಅವರು ಸಿನಿಮಾಗಳಲ್ಲಿ ಕತ್ತಿವರಸೆ, ಕುಸ್ತಿ ಪ್ರದರ್ಶಿಸಿ ಸಾಹಸ ಮೆರೆದಿದ್ದನ್ನು ನೋಡಿದ್ದೇವೆ. ಅವರನ್ನು ವೀರಪ್ಪನ್‌ ಒತ್ತೆಯಾಳಾಗಿ ಇಟ್ಟುಕೊಂಡಾಗ ಅವರ ಸಾಹಸ ಗುಣಕ್ಕೆ ಹೊಸ ಅರ್ಥ ಸಿಕ್ಕಿತು’ ಎಂದರು.

‘ವೀರಪ್ಪನ್‌ ಒಂದು ರಾತ್ರಿ ಕಳೆದ   ಜಾಗದಲ್ಲಿ ಇನ್ನೊಂದು ದಿನ ಉಳಿದುಕೊಳ್ಳುತ್ತಿರಲಿಲ್ಲ. 108 ದಿನ ಕಾಡುಮೇಡು ಅಲೆದು ಕಿರುಕುಳ ಅನುಭವಿಸಿದರೂ ಮೇರು ನಟ ಎದೆಗುಂದಿರಲಿಲ್ಲ.  ವೀರಪ್ಪನ್‌ನಿಂದ ಬಿಡುಗಡೆಗೊಂಡು ಬಂದ ಅವರನ್ನು ವಿಮಾನನಿಲ್ದಾಣದಲ್ಲಿ ಎದುರುಗೊಂಡಾಗ  ಮುಖದಲ್ಲಿ ಪ್ರಸನ್ನತೆ ಹಾಗೆಯೇ ಇತ್ತು. ಕೋಪ, ತಾಪ, ನೋವಿನ ಛಾಯೆಯೂ ಅವರಲ್ಲಿರಲಿಲ್ಲ’ ಎಂದು ನೆನಪಿಸಿಕೊಂಡರು.

ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಮಾತನಾಡಿ, ‘ರಾಜ್‌ಕುಮಾರ್‌ ಸಮಗ್ರ ಚರಿತ್ರೆ ಕೃತಿಯಲ್ಲಿ ಅವರ ಪೂರ್ವಜರು ಗಾಜನೂರಿನವರಲ್ಲ, ಕೆಂಗೇರಿಯವರು ಎಂಬ ಅಂಶ ಇದೆ. ಇದನ್ನು ಪತ್ತೆಹಚ್ಚಲು  ಲೇಖಕ ರುಕ್ಕೋಜಿ ರಾವ್‌ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ’ ಎಂದರು.

ಸಿನಿಮಾ ವಿಮರ್ಶಕ ಎನ್‌.ವಿದ್ಯಾಶಂಕರ್‌ ಮಾತನಾಡಿ, ‘ನಮ್ಮ ದೇಶದಲ್ಲಿ ಫ್ರೆಂಚ್‌, ಅಮೆರಿಕದ ಸಿನಿಮಾ ಚರಿತ್ರೆ ಬಗ್ಗೆ ಮಾತನಾಡಬಲ್ಲ ಸಮರ್ಥರು ಇದ್ದಾರೆ. ಕನ್ನಡ ಜನರ ಸಾಂಸ್ಕೃತಿಕ ಪ್ರತಿನಿಧಿಯಾಗಿರುವ ರಾಜ್‌ಕುಮಾರ್‌ ಅವರಂತಹ ಮೇರುವ್ಯಕ್ತಿತ್ವಗಳ ಬಗ್ಗೆ ಅವರಿಗೆ ತಿಳಿದಿಲ್ಲ.  ಪರಂಪರೆಯ ದಾಖಲೀಕರಣ ಸಮರ್ಪಕವಾಗಿ ಆಗದಿರುವುದು ಇದಕ್ಕೆ ಕಾರಣ’ ಎಂದರು.

‘ಬನ್ನಿ ಎಂದಾಗ  ಹೊರಟೇ ಬಿಟ್ಟರು’

‘ರಾಜ್‌ ಕುಟುಂಬ ಗಾಜನೂರಿನ ಮನೆಯಲ್ಲಿದ್ದಾಗ ವೀರಪ್ಪನ್‌ ಮೂವರು ಸಹಚರರೊಂದಿಗೆ ಬಂದು ಬಂದೂಕು ತೋರಿಸಿದ್ದ. ನನ್ನೊಂದಿಗೆ ಬನ್ನಿ ಎಂದು ಆತ ಹೇಳಿದಾಗ, ಆ ಪುಣ್ಯಾತ್ಮ, ‘ನಡೆಯಿರಿ’  ಎಂದು  ಹೆಜ್ಜೆ ಹಾಕಿದ್ದರು. ಎಲ್ಲಿಗೆ, ಏನು,  ಏಕೆ ಎಂದು ಪ್ರಶ್ನಿಸಲಿಲ್ಲ. ಅವರು ಪ್ರತಿರೋಧ ಒಡ್ಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ತಿಳಿಯದು. ಅವರ ಸಮಯಪ್ರಜ್ಞೆ ಮೆಚ್ಚುವಂತಹದ್ದು’ ಎಂದು ಎಸ್‌.ಎಂ.ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT