ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಾಗುವುದೇ ‘ಟವರ್ ಡಂಪ್’ ತನಿಖೆ?

ತಿಂಗಳಾದರೂ ಹಂತಕರ ಸುಳಿವಿಲ್ಲ * ಎರಡು ಸಾವಿರ ಮೊಬೈಲ್ ಸಂಖ್ಯೆಗಳ ಪರಿಶೀಲನೆ
Last Updated 2 ಡಿಸೆಂಬರ್ 2016, 20:26 IST
ಅಕ್ಷರ ಗಾತ್ರ

‌ಬೆಂಗಳೂರು: ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ (51) ಅವರನ್ನು ಗುಂಡಿಕ್ಕಿ ಕೊಂದ ಹಂತಕರ ಸುಳಿವಿಗಾಗಿ ಪರದಾಡುತ್ತಿರುವ ಪೊಲೀಸರು, ಕೃತ್ಯ ನಡೆದ ಸಮಯದ ಆಸುಪಾಸಿನಲ್ಲಿ ಹತ್ತಿರದ ಟವರ್‌ನಿಂದ ಸಂಪರ್ಕ ಪಡೆದಿದ್ದ 1,200 ಮೊಬೈಲ್ ಸಂಖ್ಯೆಗಳ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ.

ಸಂಜಯನಗರದ ಹನುಮಯ್ಯ ಬಡಾವಣೆ ನಿವಾಸಿಯಾಗಿದ್ದ ಸುರೇಂದ್ರ, ಅ.31ರ ರಾತ್ರಿ 9.51ಕ್ಕೆ ಮನೆ ಮುಂದೆಯೇ ಕೊಲೆಯಾಗಿದ್ದರು.
‘ಕೃತ್ಯ ನಡೆದ ಸಮಯದಲ್ಲಿ ಹತ್ತಿರದ ಟವರ್‌ಗಳಿಂದ ಸಂಪರ್ಕ ಪಡೆದಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಲಾಯಿತು (ಟವರ್ ಡಂಪ್). ಈಗ ಆ ಸಂಖ್ಯೆಗಳ ಬಳಕೆದಾರರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಈವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆ 35 ನಿಮಿಷಗಳು: ‘ಘಟನಾ ದಿನ ರಾತ್ರಿ 9.30 ರಿಂದ 10.05ರ ಅಂತರದಲ್ಲಿ 16 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಹನುಮಯ್ಯ ಬಡಾವಣೆಯ ಟವರ್‌ನಿಂದ ಸಂಪರ್ಕ ಪಡೆದಿವೆ. ಅದರಲ್ಲಿ ಸ್ಥಳೀಯರ ಮೊಬೈಲ್ ಸಂಖ್ಯೆಗಳೂ ಇವೆ. ಅವರನ್ನು ಬಿಟ್ಟು, ದೂರದ ಪ್ರದೇಶಗಳಿಂದ ಬಂದಿದ್ದ 2 ಸಾವಿರ ಮಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಈ 2 ಸಾವಿರ ಬಳಕೆದಾರರಲ್ಲಿ, ಕೆಲವರು ತುಮಕೂರು, ಕೋಲಾರ, ಮಂಡ್ಯ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದವರೂ ಇದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸಂಬಂಧಿಕರ ಮನೆಗೆ ಬಂದಿದ್ದಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ತಾವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದುದಾಗಿ ಹೇಳಿದ್ದಾರೆ. ಅದಕ್ಕೆ ವಿಮಾನ ಪ್ರಯಾಣದ ಟಿಕೆಟ್ ಸೇರಿದಂತೆ ಕೆಲ ಪೂರಕ ದಾಖಲೆಗಳನ್ನು ಒದಗಿಸಿದ್ದಾರೆ.  ಇನ್ನೂ ಕೆಲ ಸಂಖ್ಯೆಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಅವುಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮುಂಬೈನಲ್ಲೂ ತನಿಖೆ:  ಸುರೇಂದ್ರ ಅವರು 2002–03ರ ಅವಧಿಯಲ್ಲಿ 9 ತಿಂಗಳು ಮುಂಬೈನ ಮಡ್‌ ಐಲ್ಯಾಂಡ್‌ ಮತ್ತು ಅಕ್ಸಾ ಪ್ರದೇಶಗಳಲ್ಲಿ ನೆಲೆಸಿದ್ದರು. ಹೀಗಾಗಿ, ಒಂದು ತಂಡ ಅಲ್ಲಿಗೂ ತೆರಳಿ ಮೃತರ ಪರಿಚಿತರನ್ನು ವಿಚಾರಣೆ ನಡೆಸಿ ಬಂದಿದೆ. 

ಸಾರಸ್ವತ್ ಸೋದರರ ವಿಚಾರಣೆ:  ಸುರೇಂದ್ರ ಅವರ ಒಡೆತನದ ‘ಪರುಚೂರಿ ಗ್ಲೋಬಲ್ ಫೌಂಡೇಷನ್’ ಕಂಪೆನಿಯ ಹಿಂದಿನ ವ್ಯವಸ್ಥಾಪಕ ಕಪಿಲ್ ಸಾರಸ್ವತ್ ಈಗ ಮಥುರಾ ಜೈಲಿನಲ್ಲಿದ್ದಾನೆ. ಕಂಪೆನಿ ಹಣ ದುರ್ಬಳಕೆ ಮಾಡಿಕೊಂಡ ಸಂಬಂಧ ಆತನ ವಿರುದ್ಧ ಸುರೇಂದ್ರ ಉತ್ತರ ಪ್ರದೇಶ ಕೋರ್ಟ್‌ನಲ್ಲಿ 12 ಮೊಕದ್ದಮೆಗಳನ್ನು ಹೂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಆತ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ಜೆ.ಸಿ.ನಗರ ಠಾಣೆ ಇನ್‌ಸ್ಪೆಕ್ಟರ್ ಗಿರೀಶ್ ನಾಯಕ್ ಅವರು ಮಥುರಾ ಕಾರಾಗೃಹಕ್ಕೆ ಹೋಗಿ ಆತನನ್ನು ವಿಚಾರಣೆ ನಡೆಸಿ ಬಂದಿದ್ದಾರೆ.

‘ಸುರೇಂದ್ರ ಅವರು ಕಮಿಷನ್ ಆಸೆಗೆ ಫೈನಾನ್ಶಿಯರ್‌ಗಳ ಮೂಲಕ ಹಲವರಿಗೆ ಸಾಲ ಕೊಡಿಸುತ್ತಿದ್ದರು. ಹೆಚ್ಚು ಕಮಿಷನ್ ಸಿಗದಿದ್ದರೆ ಸಾಲ ಪಡೆದವರ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದರು.  ಹೀಗೆ, ಅವರಿಂದ ವಂಚನೆಗೆ ಒಳಗಾದವರೇ ಕೊಲೆಗೈದಿರಬಹುದು. ಈ ಜೈಲಿನಲ್ಲಿ ಪತ್ನಿ–ಮಕ್ಕಳ ಜತೆ ಮಾತನಾಡುವುದಕ್ಕೇ ಮೊಬೈಲ್ ಕೊಡುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾನು ಹೇಗೆ ಹತ್ಯೆ ಮಾಡಿಸಲಿ’ ಎಂದು ಕಪಿಲ್ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಪಿಲ್ ತಮ್ಮ ಮೌನೇಂದರ್ ಸಾರಸ್ವತ್ ಅವರು ಬೆಂಗಳೂರಿನಲ್ಲಿ ಕ್ಯಾಬ್ ಚಾಲರಾಗಿದ್ದಾರೆ. ಅಣ್ಣ ಮನೋಜ್ ಸಾರಸ್ವತ್  ಸೇನೆಯಲ್ಲಿದ್ದಾರೆ. ಇನ್ನೊಬ್ಬ ಅಣ್ಣ ಪವನ್ ಸಾರಸ್ವತ್ ಅವರು ಪೋಷಕರ ಜತೆ ಮಥುರಾದ ರಾಯ ಪ್ರದೇಶದಲ್ಲೇ ನೆಲೆಸಿದ್ದಾರೆ. ಮೂವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಮಹತ್ವದ ಸುಳಿವು ಲಭ್ಯವಾಗಿಲ್ಲ.

ನೋಂದಣಿ ಸಂಖ್ಯೆ ‘ಕೆಎ–04’
‘ಹತ್ಯೆಗೆ ರೂಪಿಸಿದ್ದ ಸಂಚು ಹಾಗೂ ಗುಂಡು ಹೊಡೆದಿರುವ ಪರಿಯನ್ನು ಗಮನಿಸಿದರೆ ಸುಪಾರಿ ಹಂತಕರು ಈ ಕೃತ್ಯ ಎಸಗಿರುವ ಸಾಧ್ಯತೆ ದಟ್ಟವಾಗಿದೆ. ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಆರು ಸುತ್ತು ಗುಂಡು ಹಾರಿಸಿ ಕೊಲೆಗೈದಿದ್ದರು. ಸಿ.ಸಿ ಟಿ.ವಿ ಪರಿಶೀಲಿಸಲಾಗಿದ್ದು, ಬೈಕ್‌ನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ, ‘ಕೆಎ 04’ನಿಂದಲೇ ಸಂಖ್ಯೆಗಳು ಆರಂಭವಾಗುತ್ತವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಶಾಲೆ ಕಟ್ಟಲು ಜಾಗ ಖರೀದಿ
ಸುರೇಂದ್ರ ಅವರು ಮಥುರಾದಲ್ಲಿ ಶಾಲೆ ನಿರ್ಮಿಸಲು ಎರಡು ಎಕರೆ ಜಮೀನು ಖರೀದಿಸಿದ್ದರು. ಆ ಜಾಗದ ವಿಚಾರದಲ್ಲಿ ಸ್ಥಳೀಯ ಬಿಲ್ಡರ್ ಜತೆ ಅವರಿಗೆ ಮನಸ್ತಾಪವಿತ್ತು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT