ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರೋತ್ತರ ಕನ್ನಡಿಗರ ಕಲ್ಯಾಣಕ್ಕೆ ಕಟಿಬದ್ಧ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ಅನಿವಾಸಿ ಭಾರತೀಯ ಸಮಿತಿಯ (NRI forum- karnataka) ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಆರತಿ ಕೃಷ್ಣ, ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರಾಜತಾಂತ್ರಿಕ ವ್ಯವಹಾರಗಳ ತಜ್ಞೆ. ಆರ್‌.ಗುಂಡೂರಾವ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬೇಗಾನೆ ರಾಮಯ್ಯ ಅವರ ಪುತ್ರಿ. ಹಿಂದೆ ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಅವರು, ಬಾಲಕಿ ಆರತಿ ಅವರನ್ನು ಕಂಡು ‘ನೀನು ರೂಪವತಿ ಹಾಗೂ ಬುದ್ಧಿವಂತೆಯಾಗಿ ಬೆಳೆಯುವೆ’ ಎಂದಿದ್ದರಂತೆ. ಆರತಿ ಅವರ ಪತಿ ಗೋಪಾಲಕೃಷ್ಣ ಅವರು ಅಮೆರಿಕದಲ್ಲಿ ದೊಡ್ಡ ಉದ್ಯಮಿ. ಅನಿವಾಸಿ ಕನ್ನಡಿಗರ ಒಳತೋಟಿಗಳನ್ನು ಸ್ಪಷ್ಟವಾಗಿ ಬಲ್ಲ ಈ ರಾಜತಾಂತ್ರಿಕ ನಿಪುಣೆ, ತಮ್ಮ ಹೊಸ ಜವಾಬ್ದಾರಿ ಕುರಿತು ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

*ಎನ್‌ಆರ್‌ಐ ಸಮಿತಿಯ ಉಪಾಧ್ಯಕ್ಷ ಸ್ಥಾನ ಒಂದು ಆಲಂಕಾರಿಕ ಹುದ್ದೆಯಂತೆ ತೋರುವುದಿಲ್ಲವೆ? ನಿಮಗೊಂದು ಸ್ಥಾನಮಾನ ದಕ್ಕಿದ್ದು ಬಿಟ್ಟರೆ ಅನಿವಾಸಿ ಕನ್ನಡಿಗರಿಗೆ (ಎನ್‌ಆರ್‌ಕೆ) ಇದರಿಂದ ಏನು ಪ್ರಯೋಜನ?
ವಾಷಿಂಗ್ಟನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ನಾನು ಕೆಲಸ ಮಾಡಿದ್ದೇನೆ. ವಿದೇಶಿ ಪೌರತ್ವ ಪಡೆದ ಭಾರತೀಯ ಮೂಲದವರು (ಪಿಐಒಗಳು) ಹಾಗೂ ಎನ್‌ಆರ್‌ಐಗಳ ಜತೆ ಆ ಅವಧಿಯಲ್ಲಿ ನಾನು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೆ. ದೊಡ್ಡ ಸಂಖ್ಯೆಯ ಕನ್ನಡಿಗರೂ (ಎನ್‌ಆರ್‌ಕೆಗಳು) ಅಲ್ಲಿದ್ದರು. ಅವರೊಂದಿಗಿನ ಒಡನಾಟದಿಂದ ಅವರ ಸಾಮರ್ಥ್ಯ ಎಂತಹದ್ದು, ತವರಿನಿಂದ ಅವರ ನಿರೀಕ್ಷೆಗಳು ಏನು, ಸಪ್ತ ಸಾಗರಗಳ ಹಿಂದೆ ಬೇರುಗಳನ್ನು ಬಿಟ್ಟುಬಂದು ದೂರ ತೀರದಲ್ಲಿ ರೆಂಬೆ–ಕೊಂಬೆ ಚಾಚಿರುವ ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದರ ಸ್ಪಷ್ಟ ಅರಿವಿದೆ.

ನವದೆಹಲಿಯಲ್ಲಿ ಸಾಗರೋತ್ತರ ವ್ಯವಹಾರಗಳ ಇಲಾಖೆಯಲ್ಲಿ ಕೆಲಸ ಮಾಡುವಾಗ ಜಗತ್ತಿನ ವಿವಿಧ ಎನ್ಆರ್‌ಐ ಒಕ್ಕೂಟಗಳ ಜತೆ ಸಂಪರ್ಕ ಹೊಂದಿದ್ದೆ. ಆ ಕೆಲಸದ ಅನುಭವ ಕೂಡ ನನ್ನ ಈಗಿನ ಹೊಣೆ ಕೇವಲ ಆಲಂಕಾರಿಕವಾಗಿ ಉಳಿಯದಂತೆ ನೋಡಿಕೊಳ್ಳಲಿದೆ. ವಿವಾಹಗಳಿಗೆ ಸಂಬಂಧಿಸಿದ ವಿವಾದಗಳು ರಾಯಭಾರ ಕಚೇರಿಗಳವರೆಗೆ ಬರುವುದು ಈಗೀಗ ಸಾಮಾನ್ಯವಾಗಿದೆ. ತವರಿನಲ್ಲೇ ಅಂತ್ಯಸಂಸ್ಕಾರ ನಡೆಸಬೇಕು ಎಂಬ ಆಕಾಂಕ್ಷೆಯಿಂದ ಮೃತದೇಹ ತರಲು ಎನ್ಆರ್‌ಐಗಳು ಎಷ್ಟು ಕಷ್ಟಪಡುತ್ತಾರೆ ಎನ್ನುವುದನ್ನೂ ಖುದ್ದು ನೋಡಿದ್ದೇನೆ.

ಎನ್‌ಆರ್‌ಐಗಳು ಕೊಟ್ಟ ಪವರ್‌ ಆಫ್‌ ಅಟಾರ್ನಿಯನ್ನು (ಪಿಒಎ) ತವರಿನಲ್ಲಿರುವ ಅವರ ಸಂಬಂಧಿಗಳು ದುರುಪಯೋಗ ಮಾಡಿಕೊಂಡು ವಂಚಿಸಿದ ಪ್ರಕರಣಗಳಿಗೆ ಲೆಕ್ಕವಿಲ್ಲ. ಅವರೆಲ್ಲರ ನೆರವಿಗೆ ಧಾವಿಸುವುದು ನನ್ನ ಆದ್ಯತೆ. ಕನ್ನಡ ನಾಡು ಹಾಗೂ ಸಾಗರದಾಚೆ ಇರುವ ಕನ್ನಡಿಗರ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವ ಹಿರಿದಾಸೆಯೂ ಇದೆ. ಹಿಂದಿನ ಅನುಭವ, ಈಗಿನ ಅಧಿಕಾರ ಎರಡನ್ನೂ ಈ ಉದ್ದೇಶಕ್ಕಾಗಿ ಬಳಸುತ್ತೇನೆ. ಎನ್‌ಆರ್‌ಕೆಗಳ ಕಲ್ಯಾಣಕ್ಕಾಗಿ ಹಲವು ಕನಸುಗಳು ನನ್ನಲ್ಲಿವೆ.

*ಹಿಂದಿನ ಉಪಾಧ್ಯಕ್ಷರೂ ಹೀಗೇ ಕನಸುಗಳನ್ನು ತೇಲಿ ಬಿಟ್ಟಿದ್ದರು. ಆದರೆ, ಎನ್‌ಆರ್‌ಐ ಸಮಿತಿ ಇದುವರೆಗೆ ಏನೇನೂ ಮಾಡಿಲ್ಲವಲ್ಲ?
ಬಜೆಟ್‌ ಅನುದಾನ, ಇಲಾಖೆಗಳ ನಡುವಿನ ಸಮನ್ವಯ ಹಾಗೂ ಕಾರ್ಯವ್ಯಾಪ್ತಿ– ಈ ಮೂರು ಸಮಸ್ಯೆಗಳಿಂದ ಸಮಿತಿ ಇದುವರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಅಲ್ಲದೆ, ಸರ್ಕಾರ ಮತ್ತು ತಮ್ಮ ನಡುವೆ ಸೇತುವೆಯಾಗಿ ಇಂತಹದ್ದೊಂದು ಸಮಿತಿ ಇದೆ ಎಂಬುದು ಬಹಳಷ್ಟು ಎನ್‌ಆರ್‌ಕೆಗಳಿಗೆ ಗೊತ್ತಿಲ್ಲ. ಆ ಸಮಸ್ಯೆಗಳಿಗೆ ಈಗ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿಯವರು ಸಮಿತಿಯ ಕಾರ್ಯಗಳಿಗೆ ಅಗತ್ಯ ಪ್ರಮಾಣದ ಅನುದಾನ ಮೀಸಲಿಟ್ಟಿದ್ದಾರೆ. ಎನ್‌ಆರ್‌ಐ ನೀತಿಯನ್ನು ಸಹ ರೂಪಿಸಲಾಗುತ್ತಿದೆ. ಸಮಿತಿಯಿಂದ ಏನೆಲ್ಲ ಪ್ರಯೋಜನ ಪಡೆಯಬಹುದು ಎಂಬ ವಿಷಯವಾಗಿ ಜಾಗೃತಿ ಮೂಡಿಸಲಾಗುತ್ತದೆ. ಸರ್ಕಾರದ ಒಂದು ಇಲಾಖೆಯಂತೆ ಕಾರ್ಯ ನಿರ್ವಹಿಸುವ ಮೂಲಕ ನಾವು ಎನ್‌ಆರ್‌ಕೆಗಳಿಗೆ ಸಹಾಯಹಸ್ತ ಚಾಚಲಿದ್ದೇವೆ. ಸಮಿತಿ ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿದಂತೆ ಅದರ ಮೇಲಿನ ದೂರುಗಳು ಕಡಿಮೆ ಆಗುತ್ತಾ ಹೋಗಲಿವೆ.

*ಸಾಗರೋತ್ತರ ದೇಶಗಳಲ್ಲಿ ಎಷ್ಟು ಎನ್‌ಆರ್‌ಕೆಗಳು ಇದ್ದಾರೆ?
ನಿಖರವಾದ ಸಂಖ್ಯೆ ಗೊತ್ತಿಲ್ಲ. ನಾಲ್ಕು ಲಕ್ಷಕ್ಕೂ ಅಧಿಕ ಎನ್‌ಆರ್‌ಕೆಗಳು ಇದ್ದಾರೆ ಎಂಬ ಅಂದಾಜು ಮಾಡಲಾಗಿದೆ. ಕೊಲ್ಲಿ ರಾಷ್ಟ್ರಗಳು, ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಎನ್‌ಆರ್‌ಕೆಗಳಿದ್ದಾರೆ.

*ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಪಾಸ್‌ಪೋರ್ಟ್‌, ವೀಸಾಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುವುದು ಉಂಟು. ಉದ್ಯೋಗದಲ್ಲಿ ಶೋಷಣೆ ಪ್ರಕರಣಗಳೂ ಹೆಚ್ಚುತ್ತಿವೆ. ನಿಮ್ಮ ಸಮಿತಿ ಅವರ ನೆರವಿಗೆ ಹೇಗೆ ಧಾವಿಸಲಿದೆ?
ರಾಜತಾಂತ್ರಿಕ ಮಾರ್ಗವೇ ಅನಿವಾರ್ಯವಾದ ಇಂತಹ ವಿಚಾರಗಳಲ್ಲಿ ನೇರವಾಗಿ ಮಧ್ಯ ಪ್ರವೇಶಿಸುವುದು ಕಷ್ಟ. ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ದೇಶಗಳಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸುವ ಮೂಲಕ ಕಾನೂನುಬದ್ಧ ಪರಿಹಾರಕ್ಕಾಗಿ ನಾವು ಯತ್ನಿಸುತ್ತೇವೆ.

*ವಿದೇಶಕ್ಕೆ ಹೊರಟು ನಿಂತವರಿಗೆ ನಿಮ್ಮ ಸಮಿತಿಯಿಂದ ಏನಾದರೂ ನೆರವು ಸಿಗುವುದೇ?
ಉದ್ಯೋಗ, ಉದ್ಯಮ, ಶಿಕ್ಷಣ ಹಾಗೂ ಪ್ರವಾಸ – ಮುಖ್ಯವಾಗಿ ಈ ನಾಲ್ಕು ಉದ್ದೇಶಗಳಿಗೆ ಜನ ವಿದೇಶಗಳಿಗೆ ಹೋಗುತ್ತಾರೆ. ಅವರಿಗೆ ಸಂಬಂಧಪಟ್ಟ ದೇಶದ ಸಾಮಾನ್ಯ ಮಾಹಿತಿ, ಕಾನೂನು, ಆಹಾರ ಪದ್ಧತಿಯನ್ನೊಳಗೊಂಡ ಸಂಗತಿಗಳ ಬಗೆಗೆ ಪೂರ್ವಭಾವಿ ಮಾರ್ಗದರ್ಶನ ನೀಡಲು ಯೋಜನೆ ರೂಪಿಸುತ್ತಿದ್ದೇವೆ.

*ಅಮೆರಿಕ– ಯುರೋಪ್‌ನ ಕುರುಡು ಪ್ರೇಮದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿನ ಎನ್‌ಆರ್‌ಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ದೂರುಗಳಿವೆಯಲ್ಲ?
ಹಾಗೇನಿಲ್ಲ, ಎನ್‌ಆರ್‌ಕೆಗಳು ಎಲ್ಲಿಯೇ ಇದ್ದರೂ ನಮ್ಮ ಸಮಿತಿಯ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಹಾಗೆ ನೋಡಿದರೆ ಕೊಲ್ಲಿ ರಾಷ್ಟ್ರಗಳಲ್ಲೇ ಎನ್‌ಆರ್‌ಕೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಮೆರಿಕ, ಇಂಗ್ಲೆಂಡ್‌ ಮತ್ತಿತರ ಭಾಗಗಳಲ್ಲಿ ನೆಲೆಸಿರುವ ಬಹುತೇಕ ಕನ್ನಡಿಗರು ನೆಲೆ ಕಂಡುಕೊಂಡಿದ್ದಾರೆ. ಆದರೆ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವವರಲ್ಲಿ ಕಟ್ಟಡ ಕಾರ್ಮಿಕರು, ಚಾಲಕರು, ಮನೆಗೆಲಸ ಮಾಡುವವರೇ ಹೆಚ್ಚಾಗಿದ್ದಾರೆ. ಇವರು ಸಂಕಷ್ಟಕ್ಕೆ ಸಿಲುಕಿದಾಗ, ಅಂದರೆ ಅನಿವಾರ್ಯ ಕಾರಣಗಳಿಂದ ಕೆಲಸ ಕಳೆದುಕೊಳ್ಳುವುದು, ವಿನಾಕಾರಣ ಸೆರೆಮನೆವಾಸ ಅನುಭವಿಸುವುದು ಅಥವಾ ಮರಣ ಹೊಂದಿದ ಸಂದರ್ಭದಲ್ಲಿ ಆರ್ಥಿಕ– ಕಾನೂನು ನೆರವು ನೀಡುವುದು, ತಾಯ್ನಾಡಿಗೆ ಮರಳಲು ವಿಮಾನಯಾನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದ್ದೇವೆ.

*ರಾಜ್ಯದ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಆರ್‌ಕೆಗಳು ಸೀಟು ಪಡೆಯುವುದು ಕಷ್ಟವಾಗಿದೆ ಎಂಬ ದೂರುಗಳಿವೆ. ಈ ವಿಷಯದಲ್ಲಿ ಸಮಿತಿ ಮಧ್ಯ ಪ್ರವೇಶಿಸಲಿದೆಯೇ?
ಶಿಕ್ಷಣ ಕುರಿತಾದ ಸಮಸ್ಯೆಗಳು ನಮ್ಮ ಗಮನಕ್ಕೂ ಬಂದಿವೆ. ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಅನಿವಾಸಿ ಭಾರತೀಯರ ಕೋಟಾದಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳನ್ನು ನಮ್ಮ ಸಮಿತಿಯ ಮೂಲಕ ಅಂತಿಮಗೊಳಿಸುವಂತೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡಲಿದ್ದೇವೆ.

*ಎನ್‌ಆರ್‌ಕೆಗಳು ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಹೇಗೆ ಉತ್ತೇಜನ ನೀಡಲಿದ್ದೀರಿ?
ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಪೂರಕವಾದ ನೀತಿಗಳನ್ನು ಹೊಂದಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಎನ್‌ಆರ್‌ಕೆಗಳು ಮಾತ್ರವಲ್ಲ, ಎನ್‌ಆರ್‌ಐಗಳು, ಪಿಐಒಗಳು ಸೇರಿದಂತೆ ಯಾರೂ ಬೇಕಾದರೂ ಬಂಡವಾಳ ಹೂಡಲು ತಕ್ಕ ವಾತಾವರಣ ಇಲ್ಲಿದೆ. ಈ ಸಂಬಂಧ ನಮ್ಮ ಸಂಪರ್ಕ ಜಾಲಗಳ ಮೂಲಕ ವ್ಯಾಪಕ ಪ್ರಚಾರ ನೀಡುತ್ತೇವೆ. ಯಾವ ಕೈಗಾರಿಕೆಗೆ ಎಲ್ಲಿ ತಕ್ಕ ವಾತಾವರಣವಿದೆ, ಮಾನವ ಸಂಪನ್ಮೂಲ ಎಲ್ಲಿ ಲಭ್ಯವಿದೆ ಇತ್ಯಾದಿ ಮಾಹಿತಿ ಕೊಡುತ್ತೇವೆ. ‘ಪ್ರವಾಸಿ ಭಾರತೀಯ ದಿವಸ’ ಸೇರಿದಂತೆ ಎನ್‌ಆರ್‌ಕೆಗಳು ಪಾಲ್ಗೊಳ್ಳುವ ಮೇಳಗಳನ್ನು ಈ ಉದ್ದೇಶಕ್ಕಾಗಿ ಬಳಸುತ್ತೇವೆ. ಬಂಡವಾಳ ಹೂಡಿಕೆಗೆ ಮುಂದೆ ಬರುವವರು ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಂಪರ್ಕ ಸೇತುವಾಗಿಯೂ ಕೆಲಸ ಮಾಡುತ್ತೇವೆ.

*ಅಂದಹಾಗೆ, ಮುಂಬರುವ ಜನವರಿಯಲ್ಲಿ ಬೆಂಗಳೂರಿನಲ್ಲೇ ‘ಪ್ರವಾಸಿ ಭಾರತೀಯ ದಿವಸ’ದ ಮೇಳ ನಡೆಯಲಿದೆ. ಸಿದ್ಧತೆಗಳು ಹೇಗೆ ನಡೆದಿವೆ?
ಪ್ರವಾಸಿ ಭಾರತೀಯ ದಿವಸದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಾನು ಈಗಷ್ಟೇ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂದಿದ್ದೇನೆ. ಕೇಂದ್ರ ಸರ್ಕಾರವೂ ಈ ಸಂಬಂಧ ಹಲವು ಸಭೆಗಳನ್ನು ನಡೆಸಿದೆ. ಎರಡು ವರ್ಷಗಳ ಅಂತರದ ಬಳಿಕ ಈ ಮೇಳ ನಡೆಯುತ್ತಿದೆ. ಪಿಐಒಗಳು, ಎನ್‌ಆರ್‌ಐಗಳು ತುದಿಗಾಲ ಮೇಲೆ ಕಾದಿದ್ದಾರೆ. ಆದರೆ, ಎನ್‌ಆರ್‌ಕೆಗಳು ನಮ್ಮ ನಿರೀಕ್ಷೆಗೆ ತಕ್ಕ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಭಾರತೀಯ ರಾಯಭಾರ ಕಚೇರಿಗಳ ಮೂಲಕ ಪ್ರಯತ್ನ ನಡೆಸಿದ್ದೇವೆ.

*ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಸಂಘಟನೆಗಳಿವೆ. ಅವುಗಳ ಮಧ್ಯೆ ನಿಮ್ಮ ಸಮಿತಿ ಹೇಗೆ ಸಮನ್ವಯ ಸಾಧಿಸುತ್ತದೆ?
ಜಗತ್ತಿನಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ ಸಂಘಟನೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಭಾಷಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡುವ ಉದ್ದೇಶವಿದೆ. ಮಾಹಿತಿ ತಂತ್ರಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.

*ಎನ್‌ಆರ್‌ಐ ನೀತಿಯ ಕುರಿತು ಮಾತನಾಡಿದ್ದೀರಿ. ಈ ನೀತಿ ಅನುಷ್ಠಾನಕ್ಕೆ ಬರುವುದು ಯಾವಾಗ? ಇದರಿಂದ ಏನನ್ನು ನಿರೀಕ್ಷಿಸಬಹುದು?
ಎಷ್ಟು ಕನ್ನಡಿಗರು ವಿದೇಶಗಳಲ್ಲಿದ್ದಾರೆ ಎಂಬ ವಿಷಯವಾಗಿ ನಿಖರ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಎನ್‌ಆರ್‌ಕೆಗಳ ದತ್ತಾಂಶವನ್ನು ಸಂಗ್ರಹಿಸಬೇಕಿರುವುದು ಮುಖ್ಯವಾಗಿ ಆಗಬೇಕಿರುವ ಕೆಲಸ. ಎನ್‌ಆರ್‌ಕೆಗಳ ವಿವಾಹ ಹಾಗೂ ಆಸ್ತಿಗಳಿಗೆ ಸಂಬಂಧಿಸಿದ ವಿವಾದ ಭಿನ್ನ ಸ್ವರೂಪದ್ದು. ಅವುಗಳಿಗೆ ಕಾನೂನಾತ್ಮಕ ಸೂಕ್ತ ಪರಿಹಾರ ಕಂಡುಕೊಳ್ಳುವ ತುರ್ತು ಸಹ ಇದೆ. ಮೂರು ಹಾಗೂ ನಾಲ್ಕನೇ ತಲೆಮಾರಿನ ಎನ್‌ಆರ್‌ಕೆಗಳಿಗೆ ತಮ್ಮ ತಾಯ್ನಾಡಿಗೆ ಭೇಟಿ ನೀಡುವ ತವಕ. ಆದರೆ, ಎಲ್ಲಿ ಹೋಗಬೇಕು, ಏನು ನೋಡಬೇಕು ಎಂಬ ಗೊಂದಲ. ಅವರಿಗಾಗಿ ‘ಟೂರ್‌ ಪ್ಯಾಕೇಜ್‌’ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆ ಇದೆ.

ರಾಜ್ಯದ ಅಭಿವೃದ್ಧಿಗೆ ಸಹಭಾಗಿತ್ವ ವಹಿಸಲು ಬೇಕಾದಷ್ಟು ಜನ ಸಿದ್ಧರಿದ್ದಾರೆ. ಶಾಲೆ, ಆಸ್ಪತ್ರೆ, ದೇವಾಲಯ ಹಾಗೂ ಹಿಂದುಳಿದ ಗ್ರಾಮವನ್ನು ದತ್ತು ನೀಡಲು ‘ನಮ್ಮ ಊರು, ನಮ್ಮ ನಾಡು’ ಯೋಜನೆ ರೂಪಿಸುವ ಯೋಚನೆ ಇದೆ. ಜ್ಞಾನ ಹಾಗೂ ಕೌಶಲ ಬ್ಯಾಂಕ್‌ ಸ್ಥಾಪನೆ ಅಗತ್ಯವೂ ಇದೆ. ಎನ್‌ಆರ್‌ಐ ನೀತಿಯಲ್ಲಿ ಈ ಅಂಶಗಳನ್ನೂ ಒಳಗೊಂಡಂತೆ ಹೆಚ್ಚಿನದನ್ನು ನಿರೀಕ್ಷಿಸಬಹುದು. ‘ಪ್ರವಾಸಿ ಭಾರತೀಯ ದಿವಸ’ ಮೇಳದಲ್ಲಿ ಮುಖ್ಯಮಂತ್ರಿ ಅದನ್ನು ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT