ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತುರದಲ್ಲಾಗುವುದು ‘ನೆತ್ತರ ಕಲ್ಯಾಣ’!

ರಂಗಭೂಮಿ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಪಾನಿಷ್ ನಾಟಕವೊಂದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಪ್ರಯತ್ನ ಹದಿಹರೆಯದ ಯುವಕರಿಂದ ನಡೆದಿದೆ. ಫೆರ್ಡಿಕೊ ಗಾರ್ಸಿಯಾ ಲೋರ್ಕಾನ ‘ಬ್ಲಡ್ ವೆಡಿಂಗ್’ ಎಂಬ ವಿಶ್ವವಿಖ್ಯಾತ ನಾಟಕ ಇದು. ಲೋರ್ಕಾ 1932ರಲ್ಲಿ ಬರೆದ ಈ ನಾಟಕ ಇಂದಿಗೂ ಪ್ರಸ್ತುತವಾಗಿರುವುದು ಇದರ ವಿಶೇಷತೆ.ವಿಶ್ವದ ಹಲವು ಭಾಷೆಗೆ ಇದು ಅನುವಾದಗೊಂಡು ಪ್ರಯೋಗಗಳನ್ನು ಕಂಡಿದೆ.

‘ನೆತ್ತರ ಕಲ್ಯಾಣ’ ಎಂಬ ಹೆಸರಿನಲ್ಲಿ ಸೌಮ್ಯ ಪ್ರವೀಣ್ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಟಿ.ಕೆ.ರಾಘವೇಂದ್ರ ನಿರ್ದೇಶನದಲ್ಲಿ ಸಮಸ್ತರು ತಂಡದವರು ಇತ್ತೀಚೆಗೆ ಈ ನಾಟಕವನ್ನು ಕಲಾಗ್ರಾಮದಲ್ಲಿ ಪ್ರದರ್ಶಿಸಿದರು.

ಕ್ಷಣಿಕ ಸುಖವೇ ಮುಖ್ಯ ಎಂದು ಮೋಹದ ಬಲೆಗೆ ಬೀಳುವ ಹೆಣ್ಣಿನ ಮಾನಸಿಕ ತುಮುಲ, ಯಾತನೆಯನ್ನು ಈ ನಾಟಕ ಚಿತ್ರಿಸುತ್ತದೆ. ಸಾಂಪ್ರದಾಯಕವಾಗಿ ಮದುವೆ ಆದ ಮೇಲೂ ಈ ದಾಹ ನಿಲ್ಲುವುದಿಲ್ಲ. ದಾಯಾದಿ ಮತ್ಸರ, ಮನೆತನದ ದ್ವೇಷ, ಜಮೀನಿನ ಸಲುವಾಗಿ ಕಿತ್ತಾಟ ಈ ಘಟನೆಗಳ ಹಿಂದಿವೆ. ಪತ್ರಿಕೆಗಳಲ್ಲಿ ವರದಿಯಾಗುವ ಇಂತಹ ಸಾಕಷ್ಟು ಘಟನೆಗಳನ್ನು ಈ ಕತೆ ಹೋಲುತ್ತಿದ್ದು, ಸಾರ್ವತ್ರಿಕತೆಯ ಆಯಾಮ ಪಡೆದಿದೆ.

ಕತೆ ನಮ್ಮದೇ. ಆದರೆ ಎಲ್ಲೋ ತುಂಡು ತುಂಡಾದಂತೆ ಭಾಸವಾಗುತ್ತಿತ್ತು. ಅನನುಭವಿ ನಟ–ನಟಿಯರೂ ಇದಕ್ಕೆ ಕಾರಣವಿರಬಹುದು. ನಟಿಸಿದ ಬಹುತೇಕರು ವಿದ್ಯಾರ್ಥಿಗಳು. ನಾಟಕ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ತಾಯಿ ಪಾತ್ರದ ಶಿಲ್ಪಾ ಅವರ ಅಭಿನಯದಲ್ಲಿ ಮಾತ್ರ ಸ್ವಲ್ಪ ನಿರಾಳತೆ ಇತ್ತು.

ಇತರೆ ಪಾತ್ರಗಳಲ್ಲಿ ನಟಿಸಿರುವವರಲ್ಲಿ ಕೆಲವರು ವಿದ್ಯಾರ್ಥಿಗಳು, ಮತ್ತೆ ಕೆಲವರು ಶಿಕ್ಷಣ ಮುಂದುವರಿಸಲಾರದೆ- ಚಿಕ್ಕಪುಟ್ಟ ನೌಕರಿಯಲ್ಲಿರುವವರು. ಕಳೆದ ಏಳೆಂಟು ವರ್ಷಗಳಿಂದ ರಾಘವೇಂದ್ರ ಅವರ ನಿರ್ದೇಶನದಲ್ಲಿ ಆಗಾಗ ಅಭಿನಯಿಸಿದ್ದ ಶಾಲಾಮಕ್ಕಳು ಇಂದು ಬೆಳೆದು ಈ ನಾಟಕ ಪ್ರಯೋಗಿಸುವ ಸಾಹಸ ಮಾಡಿದ್ದಾರೆ. ಆದರೆ ತರಬೇತಿ ಸಾಲದು.

ಶಿಬಿರಗಳಲ್ಲಿ ತಿದ್ದಿದರೆ ನೈಜ ನಟನೆ ಹೊಮ್ಮಿಸಲು ಸಾಧ್ಯ. ರಂಗಸಜ್ಜಿಕೆ, ಪರಿಕರ, ಮೇಕಪ್ ಮಾಡಿದ ಬಹುಮುಖ ಪ್ರತಿಭೆ ಜಿ.ನರಸಿಂಹಯ್ಯ, ರಾಘವೇಂದ್ರರ ಜತೆಗೆ ನಿಂತು ಪ್ರಯೋಗ ಯಶಸ್ವಿ ಮಾಡಿದರು. ಹೊಸಬರನ್ನೇ ಹಾಕಿಕೊಂಡು ಮಾಡಿದ ಈ ಪ್ರಯತ್ನ ಮೆಚ್ಚುವಂತಹದು.

ಸಮಸ್ತರಿಗೆ ಉಚಿತ ಪ್ರದರ್ಶನ
ಸಮಸ್ತರು ತಂಡ ಎಂದಿಗೂ ನಾಟಕದ ಉಚಿತ ಪ್ರದರ್ಶನ ನೀಡಿಕೊಂಡು ಬಂದಿದೆ. ಉಚಿತ ಪ್ರದರ್ಶನವೇ ಅದರ ಧ್ಯೇಯೋದ್ದೇಶವಾಗಿದೆ. ‘ರಂಗ ಪ್ರೇಕ್ಷಕರಿಗೆ ಪ್ರಯೋಗಶೀಲ ನಾಟಕ ನೋಡುವ ಹಕ್ಕಿದೆ. ಟಿಕೆಟ್‌ ಇಟ್ಟರೆ ಕೆಲವು ಪ್ರೇಕ್ಷಕರಿಗೆ ಕೊಳ್ಳಲು ಸಾಧ್ಯವಾಗದಿರಬಹುದು. ಇದರಿಂದ ಪ್ರೇಕ್ಷಕರ ನೋಡುವ ಹಕ್ಕಿನ ಚ್ಯುತಿಯಾಗುತ್ತದೆ’ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ.

ಹಾಗಾದರೆ ಪ್ರಾಯೋಜಕರನ್ನು ನೆಚ್ಚಬೇಕು. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಯಾಚಿಸಬೇಕು, ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬೇಡಿಕೆ ಸಲ್ಲಿಸಿ ಅವರು ಮಂಜೂರು ಮಾಡುವಂತೆ ಪ್ರಭಾವ ತರಬೇಕು. ಬೇಡಿಕೆಯನ್ನೇನೋ ಸಲ್ಲಿಸುತ್ತಲೇ ಇದ್ದೇವೆ. ಮೂರು ವರ್ಷದ ಹಿಂದೆ ಸಂಸ್ಕೃತಿ ಇಲಾಖೆಗೆ ಅಲೆದು ಅಲೆದು ಸುಸ್ತಾದೆ ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ.

ಹಾಗಾದರೆ ನಾಟಕ ಪ್ರದರ್ಶನಕ್ಕೆ ಹಣ ಹೇಗೆ ಹೊಂದಿಸುತ್ತೀರಿ? ಎಂದರೆ ಸಮಸ್ತರು ರೂವಾರಿ ಗೋಪಾಲಕೃಷ್ಣ ನಾಯರಿ ಅವರು 5 ವರ್ಷದ ಹಿಂದೆ ನಾಟಕ ಮಾಡಿದಾಗ ₹ 30 ಸಾವಿರ ನೀಡಿ ಪ್ರೋತ್ಸಾಹಿಸಿದರು. ಅನೇಕ ಯುವಕರಿಗೆ ಅವರು ಹಣದ ನೆರವು ನೀಡುತ್ತಲೇ ಇರುತ್ತಾರೆ. ನಂತರದ ಪ್ರದರ್ಶನಗಳಿಗೆ ಬಂದ ವೆಚ್ಚವನ್ನು ನನ್ನ ವೇತನದಲ್ಲಿ ಭರಿಸಿದೆ ಎನ್ನುತ್ತಾರೆ ಬಿಟಿವಿಯಲ್ಲಿ ವಿಡಿಯೋ ಎಡಿಟರ್ ಆಗಿರುವ ರಾಘವೇಂದ್ರ. ಇರಲಿಕ್ಕೆ ಸ್ವಂತ ಮನೆ ಇದೆ. ಹೀಗೇ ಖುಷಿಗೆ ನಾಟಕ ಮಾಡುತ್ತೇವೆ ಎನ್ನುತ್ತಾರೆ ಅವರು.

ಸಮಸ್ತರು ಮಾತ್ರವಲ್ಲ, ಇನ್ನೂ ಹಲವರು ಟಿಕೆಟ್ ಪ್ರದರ್ಶನ ನಡೆಸುವುದಿಲ್ಲ. ಕೆಲವರಿಗೆ ಪ್ರಾಯೋಜಕರು ಸಿಗುತ್ತಾರೆ. ಸಾಫ್ಟ್‌ವೇರ್ ಉದ್ಯಮದಿಂದ ನಾಟಕಕ್ಕೆ ಬಂದ ಕೆಲವರು ನಾಟಕದ ಖರ್ಚನ್ನು ತಾವೇ ಭರಿಸುತ್ತಾರೆ. ಟಿಕೆಟ್ ಇಟ್ಟ ನಾಟಕವೂ ಚೆನ್ನಾಗಿ ನಡೆಯುತ್ತವೆ. ಆದರೆ ಕೆಲವು ನಾಟಕಗಳಿಗೆ ನಿರೀಕ್ಷಿತ ಟಿಕೆಟ್ ಹಣ ಬರುವುದಿಲ್ಲ.ಚಂದದ ಅಭಿನಯ ಇದ್ದರೆ ಮಾತ್ರ ಟಿಕೆಟಿನಿಂದ ಹಣ ವಾಪಸ್ ಬರುತ್ತದೆ. ಇದು ಹಲವು ತಂಡಗಳ ಅನುಭವ.

ವಾಸನೆ ಹಿಡಿಯುವ ಪ್ರೇಕ್ಷಕರು!
ತಂಡದ ಯುವಕರ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಆದರೆ ತರಬೇತಿಯ ಕೊರತೆ ಇತ್ತು. ಆ ಕಾರಣಕ್ಕೆ ಪ್ರೇಕ್ಷಕರ ಕೊರತೆ ಇತ್ತು. ಕಲಾಗ್ರಾಮದ ವಿಶೇಷ ಎಂದರೆ ಈ ಭಾಗದಲ್ಲಿ ಅಂದರೆ ಮಲ್ಲತ್ತಹಳ್ಳಿ, ನಾಗರಬಾವಿ, ವಿಜಯನಗರ, ಬೆಂಗಳೂರು ವಿ.ವಿ. ಸುತ್ತ ಮತ್ತು ಕೆಂಗೇರಿ ಸಮೀಪದ ಸ್ಥಳಗಳಿಂದ ಕಲಾಗ್ರಾಮದ ನಾಟಕಗಳಿಗೆ ಪ್ರೇಕ್ಷಕರು ಆಗಮಿಸುವ ಪರಿಪಾಠ ಈಗಾಗಲೇ ಬೆಳೆದಿದೆ. ಇಲ್ಲಿ ನಿರಂತರವಾಗಿ ನಾಟಕ ಪ್ರದರ್ಶನ ಕಾಣುತ್ತವೆ ಎಂಬುದು ಇಲ್ಲಿನ ಜನರಿಗೆ ಕಳೆದ 2-3 ವರ್ಷಗಳಿಂದ ಮನದಟ್ಟಾಗಿದೆ.

ನಾಟಕ ಚೆನ್ನಾಗಿರಬಹುದು ಎಂಬುದರ ವಾಸನೆ ಹಿಡಿಯುವ ಗುಣವೂ ಅವರಲ್ಲಿ ಬೆಳೆದಿದೆ! ಉತ್ತಮ ಪ್ರಯೋಗಕ್ಕೆ ಕಲಾಗ್ರಾಮದ ರಂಗಮಂದಿರ ತುಂಬಿ ತುಳುಕುತ್ತದೆ.ಸಾಧಾರಣ ಪ್ರಯೋಗ ಇದ್ದರೂ ಅರ್ಧಕ್ಕಿಂತ ಹೆಚ್ಚು ರಂಗಮಂದಿರ ಭರ್ತಿಯಾಗುತ್ತದೆ. ಬಡಾವಣೆಗೊಂದು ರಂಗಮಂದಿರ ಬೇಕು ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT