ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮದೇ ಸೃಷ್ಟಿಯಲ್ಲಿ ಕರಗಿ ಹೋದ ವಿಜ್ಞಾನಿಗಳು

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವಿಜ್ಞಾನಿಗಳು ಇರದಿದ್ದರೆ ನಾವು ಇಂದಿಗೂ ಶಿಲಾಯುಗದವರಂತೆಯೇ ಬದುಕಬೇಕಿತ್ತು. ತಮ್ಮದೇ ಆವಿಷ್ಕಾರಗಳನ್ನು ಪರೀಕ್ಷೆಗೆ ಒಳಪಡಿಸುವಾಗ ಸಂಭವಿಸುವ ಅಪಘಾತಗಳಿಂದ ಅನೇಕ ವಿಜ್ಞಾನಿಗಳು ಮೃತಪಟ್ಟಿದ್ದಾರೆ. ಅಂಥ ಕೆಲ ಸಂಶೋಧಕರ ಪರಿಚಯ ಇಲ್ಲಿದೆ...

ಪೆರಿಲಿಯಾಸ್
ಪ್ರಾಚೀನ ಗ್ರೀಸ್ ಸಾಮ್ರಾಜ್ಯದಲ್ಲಿ ಕಂಚು ಮತ್ತು ತಾಮ್ರದ ಕುಶಲಕರ್ಮಿಯಾಗಿದ್ದ ಈತ, ಅಪರಾಧಿಗಳನ್ನು ಕೊಲ್ಲಲು ಕಂಚಿನ ಟೊಳ್ಳು ಹೊಟ್ಟೆಯ ಗೂಳಿಯೊಂದನ್ನು ನಿರ್ಮಿಸಿದ್ದ. ಅಪರಾಧಿಗಳನ್ನು ಅದರೊಳಗೆ ಸೇರಿಸಿ, ಕೆಳಗೆ ಬೆಂಕಿ ಹಾಕಿ ಚಿತ್ರಹಿಂಸೆ ಕೊಟ್ಟು ಕೊಲ್ಲುವುದು ಅವನ ಆವಿಷ್ಕಾರದ ಉದ್ದೇಶ.

ತನ್ನ ಸಂಶೋಧನೆಯ ಬಗ್ಗೆ ರಾಜನಿಗೆ ಹೆಮ್ಮೆಯಿಂದ ಪತ್ರ ಬರೆದ. ಈ ವಿಧಾನದ ಕ್ರೌರ್ಯ ಕಂಡು ರೋಸಿ ಹೋದ ರಾಜ, ಅದೇ ಕಂಚಿನ ಗುಳಿಯೊಳಗೆ ಪೆರಿಲಿಯಾಸಸ್‌ನನ್ನು ಹಾಕಿ ಕೊಲ್ಲಲು ಆದೇಶಿಸಿದ. 2011ರಲ್ಲಿ ತೆರೆ ಕಂಡಿದ್ದ ‘ಇಮ್ಮಾರ್ಟಲ್ಸ್‌’ ಚಿತ್ರದ ದೃಶ್ಯವೊಂದಕ್ಕೆ ಇದು ಪ್ರೇರಣೆ ಒದಗಿಸಿತು.

ವಾನ್‌ ಹೂ
16ನೇ ಶತಮಾನದಲ್ಲಿ ಚೀನಾದ ಮಿಂಗ್ ರಾಜವಂಶದ ಆಸ್ಥಾನದಲ್ಲಿ ವಾನ್‌ ಹೂ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನಿಗೆ ಚಂದ್ರಲೋಕಕ್ಕೆ ಹೋಗುವ ಆಸೆ ಇತ್ತು. ಇದಕ್ಕಾಗಿ 47 ರಾಕೆಟ್‌ಗಳನ್ನು ಜೋಡಿಸಿದ್ದ ಕುರ್ಚಿ ಆವಿಷ್ಕರಿಸಿದ್ದ. ಅದರಲ್ಲಿ ಕುಳಿತು ಚಂದ್ರಲೋಕಕ್ಕೆ ಹಾರುವ ಯೋಜನೆ ರೂಪಿಸಿ ರಾಕೆಟ್‌ಗೆ ಬೆಂಕಿ ಹಚ್ಚಿದ, ಕುರ್ಚಿ ಹಾರುವ ಬದಲಿಗೆ ಸ್ಪೋಟಗೊಂಡು ವಾನ್‌ ಹೂ ಮೃತಪಟ್ಟ.

ಹೋರೆಸ್ ಲಾಸನ್ ಹನ್ಲಿ
ಅಮೆರಿಕದಲ್ಲಿ ನೌಕಾ ಎಂಜಿನಿಯರ್ ಹಾಗೂ ಲಾಯರ್‌ ಆಗಿದ್ದ ಹೋರೆಸ್ ಲಾಸನ್ ಹನ್ಲಿ ಸಬ್‌ಮರೀನ್ ಆವಿಷ್ಕರಿಸಲು ಮುಂದಾಗಿದ್ದ. 1862ರಲ್ಲಿ ಆತ ಅಭಿವೃದ್ಧಿಪಡಿಸಿದ ಎರಡು ಸಬ್‌ಮರೀನ್‌ಗಳು ಮುಳುಗಿದವು. ಕೊಂಚ ಭಿನ್ನ ರೀತಿಯಲ್ಲಿ ಮೂರನೇ ಸಬ್‌ ಮರೀನ್‌ ನಿರ್ಮಿಸಲು ಮುಂದಾದ.  16ನೇ ಆಗಸ್ಟ್‌ 1863ರಂದು ಸಬ್‌ ಮರೀನ್‌ ಪರೀಕ್ಷಾರ್ಥ ಪ್ರಯಾಣ ನಡೆಸುವಾಗ ಸಮುದ್ರದಲ್ಲಿ ಮುಳುಗಿ ಮೃತಪಟ್ಟ.

ಥಾಮಸ್‌ ಮಿಡ್‌ಗ್ಲೇ
ಅಮೆರಿಕದ ಖ್ಯಾತ ರಸಾಯನಶಾಸ್ತ್ರಜ್ಞ ಥಾಮಸ್ ಮಿಡ್‌ಗ್ಲೇ ಗ್ಯಾಸೋಲಿನ್ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದ. ಪೊಲಿಯೊದಿಂದಾಗಿ ಹಾಸಿಗೆ ಮೇಲೆ ಹೆಚ್ಚು ಕಾಲ ಇರುವಂತಾಗಿತ್ತು. ತಮ್ಮ ಉಪಯೋಗಕ್ಕೆಂದು ಹಗ್ಗ ಮತ್ತು ಪುಲ್ಲೀಗಳಿಂದ ತಯಾರಾದ ಉಪಕರಣ ಬಳಸುತ್ತಿದ್ದ. ಯಂತ್ರ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ. 2ನೇ ನವೆಂಬರ್ 1944ರಂದು ಉಸಿರು ಕಟ್ಟಿ (ಉರುಳಿಗೆ ಸಿಲುಕಿ) ಮೃತಪಟ್ಟ.

ಒಟ್ಟೊ ಲಿಲೀಂತಾಲ್‌
ಒಟ್ಟೊ ಲಿಲೀಂತಾಲ್‌ನನ್ನು ಜರ್ಮನಿಯ ವೈಮಾನಿಕ ರಾಜನೆಂದೇ ಕರೆಯುತ್ತಾರೆ. ಸಾಕಷ್ಟು ಏಕ ವ್ಯಕ್ತಿ ವಿಮಾನಗಳನ್ನು ನಿರ್ಮಿಸಿ ಈತ ಯಶಸ್ಸನ್ನೂ ಕಂಡಿದ್ದ, ಒಮ್ಮೆ ತನ್ನದೇ ಗ್ಲೈಡರ್‌ನಲ್ಲಿ ಹಾರಾಡುತ್ತಿರುವಾಗ 50 ಅಡಿ ಎತ್ತರದಿಂದ ಬಿದ್ದು ತೀವ್ರವಾಗಿ ಗಾಯಗೊಂಡ, ಚಿಕಿತ್ಸೆಗೆ ಸ್ಪಂದಿಸದೆ 10ನೇ ಆಗಸ್ಟ್‌ 1896ರಂದು ಮೃತಪಟ್ಟ.

ಅಬಕೋವೆಸ್ಕಿ
26 ವರ್ಷದ ಈ ಯುವ ರಷ್ಯನ್ ವಿಜ್ಞಾನಿಗೆ ವೇಗವಾಗಿ ಚಲಿಸುವ ರೈಲು ಆವಿಷ್ಕರಿಸುವ ಕನಸು ಇತ್ತು. ಹೀಗಾಗಿ ರೈಲ್ವೆ ಎಂಜಿನ್‌ಗೆ ವಿಮಾನಗಳ ಎಂಜಿನ್ ಬಳಸುವ ಕ್ರಾಂತಿಕಾರಿ ಪ್ರಯೋಗಕ್ಕೆ ಕೈ ಹಾಕಿದ. ಇದರ ಮೊದಲ ಪರೀಕ್ಷಾರ್ಥ  ಸಂಚಾರ ಯಶಸ್ವಿ ಆಯಿತು. ಆದರೆ ಅದೇ ರೈಲು ಹಿಂದಿರುಗುವಾಗ (24ನೇ ಜುಲೈ, 1921) ಅಪಘಾತ ಸಂಭವಿಸಿತು. ಅದರಲ್ಲಿದ್ದ ಅಬಕೋವೆಸ್ಕಿ ಸೇರಿ 10 ಮಂದಿ ಮೃತಪಟ್ಟರು.

ಅಬಕೋವೆಸ್ಕಿ
26 ವರ್ಷದ ಈ ಯುವ ರಷ್ಯನ್ ವಿಜ್ಞಾನಿಗೆ ವೇಗವಾಗಿ ಚಲಿಸುವ ರೈಲು ಆವಿಷ್ಕರಿಸುವ ಕನಸು ಇತ್ತು. ಹೀಗಾಗಿ ರೈಲ್ವೆ ಎಂಜಿನ್‌ಗೆ ವಿಮಾನಗಳ ಎಂಜಿನ್ ಬಳಸುವ ಕ್ರಾಂತಿಕಾರಿ ಪ್ರಯೋಗಕ್ಕೆ ಕೈ ಹಾಕಿದ. ಇದರ ಮೊದಲ ಪರೀಕ್ಷಾರ್ಥ  ಸಂಚಾರ ಯಶಸ್ವಿ ಆಯಿತು. ಆದರೆ ಅದೇ ರೈಲು ಹಿಂದಿರುಗುವಾಗ (24ನೇ ಜುಲೈ, 1921) ಅಪಘಾತ ಸಂಭವಿಸಿತು. ಅದರಲ್ಲಿದ್ದ ಅಬಕೋವೆಸ್ಕಿ ಸೇರಿ 10 ಮಂದಿ ಮೃತಪಟ್ಟರು.

ಫ್ರ್ಯಾಂಜ್‌ ರಿಚೆಲ್ಟ್‌
ಆಸ್ಟ್ರೇಲಿಯಾದಲ್ಲಿ ದರ್ಜಿ ಕೆಲಸ ಮಾಡುತ್ತಿದ್ದ ರಿಚೆಲ್ಟ್‌ ವಿಮಾನ ಹಾರಾಟದ ಬಗ್ಗೆ ಕುತೂಹಲ ಹೊಂದಿದ್ದ. ಪೈಲಟ್‌ಗಳಿಗಾಗಿ ಪ್ಯಾರಾಚೂಟ್‌ ಅಳವಡಿಸುವ ದಿರಿಸು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದ.

ಬಹು ದಿನಗಳ ಸಂಶೋಧನೆಯ ಫಲವಾಗಿ ಪ್ಯಾರಾಚೂಟ್ ಸೂಟ್‌ ಅಭಿವೃದ್ಧಿಪಡಿಸಿದ್ದ. ಅದರ ಪರೀಕ್ಷೆಗೆಂದು 4ನೇ ಫೆಬ್ರುವರಿ 1912ರಲ್ಲಿ ಐಫೆಲ್ ಟವರ್‌ನಿಂದ (187 ಅಡಿ ಎತ್ತರ) ಜಿಗಿದ. ಅದು ಸಮರ್ಪಕವಾಗಿ ಬಿಚ್ಚಿಕೊಳ್ಳದ ಕಾರಣ ನೆಲಕ್ಕೆ ಬಿದ್ದು ಪ್ರಾಣ ತೆತ್ತ.

ಹೆನ್ರೀ ವಿಂಟ್‌ಸ್ಲೇ
ಬ್ರಿಟಿಷ್ ಎಂಜಿನಿಯರ್ ಹಾಗೂ ಚಿತ್ರಕಾರನಾಗಿದ್ದ ವಿಂಟ್‌ಸ್ಲೇ 18ನೇ ಶತಮಾನದ ಅತ್ಯುತ್ತಮ ಎನ್ನಿಸುವಂಥ ಲೈಟ್‌ಹೌಸ್‌ (ಸಮುದ್ರಯಾನಿಗಳಿಗೆ ದಾರಿ ತೋರುವ ದೀಪಸ್ತಂಭ) ನಿರ್ಮಿಸಿದ್ದ. ತನ್ನ ನಿರ್ಮಾಣದ ಬಗ್ಗೆ ಭಾರಿ ವಿಶ್ವಾಸವಿದ್ದ ವೆಂಟ್‌ಸ್ಲೇ ಚಂಡಮಾರುತವೊಂದು (17ನೇ ನವೆಂಬರ್ 1703) ಬಂದಾಗ ತಾನೇ ನಿರ್ಮಿಸಿದ ಲೈಟ್‌ಹೌಸ್‌ ಒಳಗೆ ರಕ್ಷಣೆ ಪಡೆದ. ಚಂಡಮಾರುತದ ಹೊಡೆತಕ್ಕೆ ಸಿಕ್ಕ ಲೈಟ್‌ಹೌಸ್‌ ಮುರಿದು ಬಿತ್ತು. ವಿಂಟ್‌ಸ್ಲೇ ಜೊತೆಗೆ ಐವರನ್ನು ಬಲಿ ಪಡೆಯಿತು.

ಮೇರಿ ಕ್ಯೂರಿ
ಪೊಲೆಂಡ್ ಮೂಲದ ವಿಜ್ಞಾನಿ ಮೇರಿ ಕ್ಯೂರಿ ಎರಡು ಬಾರಿ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದರು. ವಿಕಿರಣ ಹಾಗೂ ರೇಡಿಯಂ ಸಂಶೋಧನೆಯ ಮೂಲಕ ದೊಡ್ಡ ಹೆಸರು ಮಾಡಿದ್ದರು.  ವಿಕರಣಗಳು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಎಂಬುದನ್ನು ಸಂಶೋಧಿಸಿದರು. ಆದರೆ, ಅದೇ ವಿಕಿರಣದ ಪರಿಣಾಮದಿಂದಾಗಿ 4ನೇ ಜುಲೈ 1934ರಂದು ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT