ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ದಾಖಲೆ ಜನಸಾಗರ

Last Updated 4 ಡಿಸೆಂಬರ್ 2016, 19:26 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ನಗರದಲ್ಲಿ ಮೂರು ದಿನ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತ್ತು.

ಸಮ್ಮೇಳನದ ಮೂರೂ ದಿನ ಜನಸಮೂಹ ಪ್ರವಾಹದ ರೀತಿ ಹರಿದು ಬಂತು. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ  ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು ದಾಖಲೆ.

ಮೊದಲ ದಿನ ಮತ್ತು  ಎರಡನೇ ದಿನ ನಿತ್ಯ ಸರಾಸರಿ ಲಕ್ಷ ಜನರು  ಹಾಗೂ ಅಂತಿಮ ದಿನವಾದ ಭಾನುವಾರ 1.25 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಂಭ್ರಮಿಸಿದರು. ವಿದ್ಯಾರ್ಥಿ ಸಮೂಹ ಅತಿಹೆಚ್ಚು ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಸಹ ವಿಶೇಷವಾಗಿತ್ತು.

ವೈವಿಧ್ಯಮಯ ಗೋಷ್ಠಿಗಳ ಜೊತೆಗೆ ಪ್ರಧಾನ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ನಿತ್ಯವೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನ ಕಿಕ್ಕಿರಿದು ಸೇರಿ ಸಂಗೀತ ಸುಧೆಗೆ ತಲೆದೂಗಿದರು.  ಸಂಗೀತದ ಸೊಬಗು ಸವಿಯಲಿಕ್ಕಾಗಿಯೇ ರಾಯಚೂರು ನಗರದ ಬಹುತೇಕ ಮಹಿಳೆಯರು ಮಕ್ಕಳೊಂದಿಗೆ ಜಾತ್ರೆಗೆ ಬರುವವರಂತೆ ಬರುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಅವರು, ‘ಇದು ವಿರಾಟ್‌ ಸಾಹಿತ್ಯ ಸಮ್ಮೇಳನ’ ಎಂದು ಬಣ್ಣಿಸಿದರೆ, ‘ಹಿಂದಿನ ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಸೇರದಿರುವಷ್ಟು ಜನ ಈ ಸಮ್ಮೇಳನದಲ್ಲಿ ಸೇರಿದ್ದರು’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.

ಹೊರನಾಡ ಕನ್ನಡಿಗರಿಗೂ ಸೌಲಭ್ಯ
ಕರ್ನಾಟಕದೊಳಗೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ  ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿ ಸೌಲಭ್ಯಗಳು ಹೊರನಾಡ ಕನ್ನಡಿಗರಿಗೂ ಸಿಗಬೇಕು ಎನ್ನುವುದೂ ಸೇರಿದಂತೆ ನಾಲ್ಕು ನಿರ್ಣಯ ಹಾಗೂ ಎರಡು ಶಿಫಾರಸುಗಳನ್ನು  ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ನೀಲನಕ್ಷೆ ಸಿದ್ಧಗೊಳಿಸಿ, ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ರಾಷ್ಟ್ರಕವಿ ಪುರಸ್ಕಾರ ಕೊಡುವ ಪದ್ಧತಿ ಮುಂದುವರೆಸಬೇಕು ಎಂದು ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT