ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರದಲ್ಲಿರುವವರಿಗೆ ಬೇಡವಾಗಿದೆ ವಿಮರ್ಶೆ’

ಪ್ರಜಾಪ್ರಭುತ್ವದಲ್ಲಿನ ವಿಮರ್ಶೆಯ ಸಾಧ್ಯತೆಗಳು
Last Updated 4 ಡಿಸೆಂಬರ್ 2016, 19:45 IST
ಅಕ್ಷರ ಗಾತ್ರ

ಘನಮಠ ಶಿವಯೋಗಿ ಸಮಾನಾಂತರ ವೇದಿಕೆ (ರಾಯಚೂರು): ‘ಅಧಿಕಾರದಲ್ಲಿರುವವರಿಗೆ ಯಾವ ವಿಮರ್ಶೆಯೂ ಬೇಡ. ಅದು ವಿಮರ್ಶೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತದೆ’ ಎಂದು ವಿಮರ್ಶಕ ಡಾ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು. ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ‘ಪ್ರಜಾಪ್ರಭುತ್ವದಲ್ಲಿನ ವಿಮರ್ಶೆಯ ಸಾಧ್ಯತೆಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅಪ್ಪಟ ಭಾರತೀಯರೆನಿಸಿಕೊಂಡವರು ಪ್ರಜಾಪ್ರಭುತ್ವವನ್ನು ನಿರಾಕರಿಸಬೇಕು. ಏಕೆಂದರೆ ಅದು ನಮ್ಮ ವ್ಯವಸ್ಥೆ ಅಲ್ಲ. ನಮ್ಮಲ್ಲಿದ್ದದ್ದು ರಾಜ ಮಹಾರಾಜರ ಕಾಲದ ಪದ್ಧತಿ’ ಎಂದು ವ್ಯಂಗ್ಯವಾಡಿದ ಅವರು, ‘ಅಂದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಾಗ ಅವನ ಜಾತಿ, ಹಿನ್ನೆಲೆ ನೋಡುತ್ತಿದ್ದರು. ಅದನ್ನು ಪ್ರಶ್ನಿಸುವಂತಿರಲಿಲ್ಲ. ಈಗ ಇರುವುದೂ ಪ್ರಜಾಪ್ರಭುತ್ವ ಅಲ್ಲ. ಬದಲಾಗಿ ಮುಂದಿನ ಐದು ವರ್ಷಗಳ ಅವಧಿಗೆ ದೇಶವನ್ನು ಯಾರು ಲೂಟಿ ಹೊಡೆಯಬೇಕು ಎಂದು ನಿರ್ಧರಿಸಲು ನಡೆಯುವ ಹೋರಾಟ’ ಎಂದು ಮಾರ್ಮಿಕವಾಗಿ ನುಡಿದರು.

‘ಜಗತ್ತಿನಲ್ಲಿ ಆಡಳಿತ ವ್ಯವಸ್ಥೆ ಸಂಬಂಧಿಸಿ ನಡೆದ ಪ್ರಯೋಗಗಳಲ್ಲಿ ಪ್ರಜಾಪ್ರಭುತ್ವವೂ ಒಂದು. ಅದೊಂದು ಯಶಸ್ವಿ ಪ್ರಯೋಗ. ಆದರೆ, ಅದಕ್ಕಿಂತ ಉತ್ತಮ ಪ್ರಯೋಗ ಬರಲಿಲ್ಲ. ಈ ಪ್ರಯೋಗ ಯಶಸ್ವಿ ಆಗಬೇಕಾದರೆ ವಿಮರ್ಶೆ ಅಗತ್ಯ’ ಎಂದು ಪ್ರತಿಪಾದಿಸಿದರು.

‘ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಅಧಿಕಾರ ಕೇಂದ್ರಿತ ವ್ಯವಸ್ಥೆಯನ್ನು ಪ್ರಶ್ನಿಸುವ ನಿರ್ಭೀತಿ ಇರಬೇಕು. ಪ್ರಜಾಪ್ರಭುತ್ವವನ್ನು ಮೌಲ್ಯ ಎಂದು ಒಪ್ಪಿಕೊಳ್ಳಬೇಕು.ಬೇರೆಯವರ ಮಾತು ಕೇಳಿಸಿಕೊಂಡು ತಮ್ಮನ್ನು ತಾವು ಬದಲಿಸಿಕೊಳ್ಳುವ ಮನೋಭಾವ ಇರಬೇಕು. ಆದರೆ, ಇಂದು ತನ್ನ ಪಕ್ಷದಲ್ಲಿ ಇರುವ ಲೋಪದ ಬಗ್ಗೆ ಮಾತನಾಡಿದರೆ ಅವನನ್ನು ಭಿನ್ನಮತೀಯ ಎಂದು ಬದಿಗಿರಿಸಲಾಗುತ್ತದೆ. ₹280 ಕೋಟಿ ವೆಚ್ಚದಲ್ಲಿ ಮದುವೆ ಮಾಡಿದ್ದನ್ನು ನೋಡಿ ಸಂತೋಷಪಟ್ಟ ನಮಗೆ ಭ್ರಷ್ಟರಿಗೆ ಬಹಿಷ್ಕಾರ ಹಾಕುವ ಧೈರ್ಯ ಏಕಿಲ್ಲ’ ಎಂದು ಪ್ರಶ್ನಿಸಿದರು.

ಕವಯತ್ರಿ ಡಾ.ಹೇಮಾ ಪಟ್ಟಣಶೆಟ್ಟಿ ‘ವಿಮರ್ಶೆಗೊಳಪಡದ ಅಧಿಕಾರ ಕೇಂದ್ರಗಳು’ ವಿಷಯ ಕುರಿತು ಮಾತನಾಡಿ ‘ದೇಶಭಕ್ತಿಯೆ ಇಂದು ಆಡಳಿತ ಕೇಂದ್ರೀಕೃತವಾಗಿದೆ.ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಂದರೆ ನಾವು ಏನು ಮಾಡಬೇಕು, ಮಾಡಬಾರದು, ತಿನ್ನಬೇಕು, ತಿನ್ನಬಾರದು ಎಂಬುದನ್ನು ಕೋರ್ಟ್ ನಿರ್ಧರಿಸುವಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ಸಹಿಷ್ಣುತೆಯೇ ಇಂದಿನ ಸವಾಲಾಗಿದೆ. ಅಸಹಿಷ್ಣುತೆ ಎಂಬುದು ಉಗ್ರವಾದದ ಸ್ವರೂಪ ಪಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯ ರಕ್ಷಣೆ, ಗೋ ರಕ್ಷಣೆ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದೆ. ಜನರು ಅದರ ವಿರುದ್ಧ ಮಾತ­ನಾಡ­ಲಾರದವರಾಗಿದ್ದಾರೆ.

ಆಡಳಿತ ವ್ಯವಸ್ಥೆಯೂ ಉದಾಸೀನಭಾವ ತಳೆದಿದೆ. ಗೋ ಸಾಗಣೆ ಮಾಡಿದವರು, ಸತ್ತ ದನದ ಚರ್ಮ ಸುಲಿದವರಿಗೆ ಕ್ರೂರ ಶಿಕ್ಷೆ ನೀಡಲಾಗುತ್ತಿದೆ. ವಾಸ್ತವವಾಗಿ ಗುಜರಾತಿನಲ್ಲಿ ಗೋಮಾಂಸ ರಫ್ತು ಮಾಡುವವರು ಬ್ರಾಹ್ಮಣರು ಮತ್ತು ಬನಿಯಾಗಳು. ಅವರಿಗೆ ಏನೂ ಶಿಕ್ಷೆ ಇಲ್ಲ’ ಎಂದರು.

‘ಸಾಹಿತ್ಯ ಸಂಸ್ಕೃತಿ ಹಿನ್ನೆಲೆಯಲ್ಲಿ ವಿಮರ್ಶೆ’ ಕುರಿತು ಡಾ.ನೀಲಗಿರಿ ತಳವಾರ, ಕನ್ನಡ ವಿಮರ್ಶೆ ಒಂದು ಶತಮಾನದ ಕಾಲಾವಧಿಯನ್ನಷ್ಟೇ ಕಂಡಿದೆ. ಆದರೆ, ಅದರ ಬೆಳವಣಿಗೆ ದಂಗು ಬಡಿಸುಂಥದ್ದು. ವಿಮರ್ಶೆಯಿಂದಾಗಿ ಕನ್ನಡ ಸಾಹಿತ್ಯಕ್ಕೆ ಸಮೃದ್ಧಿ ಸಿಕ್ಕಿದೆ. ವಿಮರ್ಶೆ ಅಂದರೆ ಕೃತಿ ಬಗ್ಗೆ ಅನಿಸಿದ್ದನ್ನು ಬರೆಯುವುದಲ್ಲ. ಅದರೊಂದಿಗೆ ಇತಿಹಾಸ, ಸಿದ್ಧಾಂತ ಇತ್ಯಾದಿಯನ್ನು ಒಟ್ಟಾಗಿ ಅಧ್ಯಯನ ಮಾಡಿರಬೇಕು. ಸಾಹಿತಿಗೆ ರಾಜಕೀಯ ಜ್ಞಾನ, ಸಂಪರ್ಕ ಅಗತ್ಯ ಇಲ್ಲ ಎಂಬ ಮಾತಿತ್ತು. ಆದರೆ, ದಲಿತ, ಬಂಡಾಯ ಸಾಹಿತ್ಯವು ಈ ವಾದವನ್ನು ಒಪ್ಪಲಿಲ್ಲ’ ಎಂದರು.

***
ಹುಂಡಿ ಎನ್ನುವುದು ಯಂತ್ರ. ಅದಕ್ಕೆ ಹಾಕಿದ ಕಪ್ಪು ಹಣ ಬಿಳಿಯಾಗಿ ಹೊರಬರುತ್ತದೆ. ಅದನ್ನು ಯಾರೂ ಕೇಳುವವರಿಲ್ಲ.
-ಡಾ.ಹೇಮಾ ಪಟ್ಟಣಶೆಟ್ಟಿ, ಕವಯತ್ರಿ

***
ಪ್ರಜಾಪ್ರಭುತ್ವದ ಹೆಸರಿನಲ್ಲಿ ಮೂಲಭೂತವಾದ ವಿಜೃಂಭಿಸುತ್ತಿದೆ. ಅದರ ಘೋರ ಅಟ್ಟಹಾಸ ಪ್ರೊ.ಎಂ.ಎಂ.ಕಲಬುರ್ಗಿ ಅವರನ್ನು ಬಲಿ ತೆಗೆದುಕೊಂಡಿದ್ದು ಈಗ ನಮ್ಮ ಮುಂದಿದೆ.
-ಡಾ.ನೀಲಗಿರಿ ತಳವಾರ, ಪ್ರಾಧ್ಯಾಪಕರು

***
ಈಗ ಇರುವುದು ಪ್ರಜಾಪ್ರಭುತ್ವ ಅಲ್ಲ. ಮುಂದಿನ ಐದು ವರ್ಷಗಳ ಅವಧಿಗೆ ದೇಶವನ್ನು ಯಾರು ಲೂಟಿ ಹೊಡೆಯಬೇಕು ಎಂದು ನಿರ್ಧರಿಸಲು ನಡೆಯುವ ಹೋರಾಟ.
-ಡಾ.ಓ.ಎಲ್.ನಾಗಭೂಷಣಸ್ವಾಮಿ, ವಿಮರ್ಶಕರು

***
ಸರ್ಕಾರ ಭಾಗ್ಯಗಳನ್ನು ಕೊಟ್ಟಿರ ಬಹುದು. ಅದರ ಹಿಂದಿರುವ ಹುನ್ನಾರ ಬೇರೆಯೇ ಇದೆ ಎಂಬು ದನ್ನು ಜನರು ಅರ್ಥಮಾಡಿಕೊಳ್ಳಬಲ್ಲರು.
-ಡಾ.ಬಸವರಾಜ ನೆಲ್ಲಿಸರ, ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT