ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಮಾಡಿದ ಅವಮಾನ

ನೋಟು ರದ್ದತಿ ವಿರುದ್ಧ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಆಕ್ರೋಶ
Last Updated 4 ಡಿಸೆಂಬರ್ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದು ಜನರಿಗೆ ಮಾಡಿದ ಅವಮಾನ’ ಎಂದು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇಶಾಭಿಮಾನಿ ಬಳಗ ಭಾನುವಾರ ಇಲ್ಲಿ ಆಯೊಜಿಸಿದ್ದ ‘ಕಮ್ಯುನಿಸ್ಟರ ಮೇಲೆ ಸಂಘ ಪರಿವಾರದ ದಾಳಿ’ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರತಿ ನೋಟಿಗೂ ಇಂತಿಷ್ಟು ಮೌಲ್ಯವಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಭರವಸೆ ನೀಡಿರುತ್ತಾರೆ. ಏಕಾಏಕಿ, ಆ ನೋಟಿಗೆ ಮೌಲ್ಯವೇ ಇಲ್ಲವೆಂದರೆ ಹೇಗೆ? ನಮ್ಮ ಹಣ ಪಡೆಯುವುದಕ್ಕೂ ಬ್ಯಾಂಕಿಗೆ ಗುರುತಿನ ಚೀಟಿ ನೀಡಬೇಕು,  ಬೆರಳಿಗೆ ಶಾಯಿ ಹಾಕಿಸಿಕೊಳ್ಳಬೇಕು ಎಂದರೆ ಏನರ್ಥ’ ಎಂದು ಅವರು ಪ್ರಶ್ನಿಸಿದರು.

‘ಆರ್‌ಎಸ್‌ಎಸ್‌  ಮನೋಧರ್ಮದ ಪ್ರಕಾರವೇ ಈ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜನರನ್ನು  ತುಚ್ಛವಾಗಿ ನಡೆಸಿಕೊಂಡಿದ್ದಾರೆ. ಶೇಕಡಾ 75ರಷ್ಟು ಜನ ಇದರಿಂದ ನರಳುವಂತಾಗಿದೆ.  ಹಣ ಬದಲಾಯಿಸಿಕೊಡಲು  ಕಮಿಷನ್‌ ಪಡೆದವರು ಮಾತ್ರ ಮೋದಿಯನ್ನು ಹೊಗಳುತ್ತಿದ್ದಾರೆ’ ಎಂದರು.

‘ಅಕ್ರಮ ಹಣ ಹೊಂದಿರುವವರ ಮನೆಗೆ ಈಗ ದಾಳಿ ನಡೆಸಲಾಗುತ್ತಿದೆ. ನೋಟು ರದ್ದುಪಡಿಸದೆಯೂ ದಾಳಿ ನಡೆಸಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು. ‘ಮನು ಧರ್ಮಶಾಸ್ತ್ರವನ್ನು ಹೇರುವ ಮೂಲಕ ಶೂದ್ರರನ್ನು ಗುಲಾಮರನ್ನಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಆರ್‌ಎಸ್‌ಎಸ್‌ ಪರವಾಗಿ ಶೋಷಿತ ವರ್ಗಗಳು ಕೆಲಸ ಮಾಡುತ್ತಿರುವುದು ವಿಪರ್ಯಾಸ. ಸಾಬೂನು, ಮಾರ್ಜಕಗಳಿಗೆ  ಮಾರುಕಟ್ಟೆ ಕಂಡುಕೊಳ್ಳಲು ಪ್ರಚಾರ ನಡೆಸುವಂತೆ ಮೋದಿ ಅವರ ಕುರಿತು ಪ್ರಚಾರ  ನಡೆಯುತ್ತಿದೆ. ಇದನ್ನು ಎದುರಿಸಲು ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಬೇಕು’ ಎಂದರು.

ಚಿಂತಕ ಡಾ.ಕೆ.ಮರುಳಸಿದ್ಧಪ್ಪ ಮಾತನಾಡಿ, ‘ದೇಶದ ಜನ ನಂಬಿಕೆಗೆ ಅರ್ಹರಲ್ಲ. ಅಪ್ರಮಾಣಿಕರು ಎಂದು ಪ್ರಧಾನಿ ಭಾವಿಸಿದಂತಿದೆ. ಈ ದೇಶದಲ್ಲಿ ಶೇ 10ರಷ್ಟು ಮಂದಿ ಕಪ್ಪು ಹಣ ಹೊಂದಿರಬಹುದು. ಅದಕ್ಕಾಗಿ ಪ್ರಾಮಾಣಿಕವಾಗಿ ಬದುಕುತ್ತಿರುವ ಶೇ 90ರಷ್ಟು ಮಂದಿಯನ್ನು ಶಿಕ್ಷಿಸಬೇಕೇ’ ಎಂದು ಕೇಳಿದರು.

‘ರಾಜ್ಯದ ಕರಾವಳಿ ಭಾಗದಲ್ಲಿ ಪೊಲೀಸ್‌ ಸಿಬ್ಬಂದಿಯೂ ಸಂಘಪರಿವಾರದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸ್ವತಃ ಗೃಹಸಚಿವರೇ ಒಪ್ಪಿಕೊಂಡಿದ್ದಾರೆ. ಕಾರ್ಪೊರೇಟ್‌ ಸಂಸ್ಥೆಗಳು, ಶೇ 70ರಷ್ಟು ಮಾಧ್ಯಮಗಳು ಅವರ ಪರ ಇವೆ. ಇಂತಹ ಸಂದರ್ಭದಲ್ಲಿ ಜನರಿಗೆ ಸಂಘಪರಿವಾರದ ಹುನ್ನಾರಗಳನ್ನು ಮನವರಿಕೆ ಮಾಡುವುದು ಸುಲಭವಲ್ಲ’ ಎಂದು ಹೇಳಿದರು.

ಹತ್ಯೆಗಳ ಹಿಂದೆ ಸಂಘ ಪರಿವಾರದ ಕೈವಾಡ
‘ಕೇರಳದ ತಲಶ್ಶೇರಿಯಲ್ಲಿ 1971ರಲ್ಲಿ ಕೋಮುಗಲಭೆ ನಡೆದಾಗ ಮುಸ್ಲಿಮರಿಗೆ ರಕ್ಷಣೆ ನೀಡಿದ್ದ ಕುಂಞಿರಾಮನ್‌ ಹತ್ಯೆ ಯಾಯಿತು. ಇದು ಸಂಘ ಪರಿವಾರದವರು ಕೇರಳದಲ್ಲಿ ನಡೆಸಿದ ಮೊದಲ ಕೊಲೆ.  ಆ ಬಳಿಕ 128ಕ್ಕೂ ಹೆಚ್ಚು ಕಮ್ಯುನಿಸ್ಟ್‌ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಇವುಗಳ ಹಿಂದೆ ಸಂಘ ಪರಿವಾರದ ನೇರ ಕೈವಾಡ ಇದೆ’ ಎಂದು ಅಲ್ಲಿನ ಶಾಸಕ ಎ.ಪ್ರದೀಪ್‌ ಕುಮಾರ್‌ ಆರೋಪಿಸಿದರು.

ನರಕದ ಗರ್ಭಗುಡಿಯೊಳಗೆ
ಮೂಲಕೃತಿಯ ಲೇಖಕ  ಸುದೀಶ್‌ ಮಿನ್ನಿ  ಮಾತನಾಡಿ, ‘ನಾನು 24 ವರ್ಷ ಆರ್‌ಎಸ್‌ಎಸ್‌ನಲ್ಲಿದ್ದೆ.  ಅವರ ಕುತಂತ್ರಗಳ ಬಗ್ಗೆ ಬೆಳಕು ಚೆಲ್ಲಿದ್ದಕ್ಕಾಗಿ ನನಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ.  ಎಂ.ಎಂ.ಕಲಬುರ್ಗಿ ಅವರಿಗಾದ ಸ್ಥಿತಿ ನಿಮಗೂ ಆಗಬೇಕೇ ಎಂಬ ವಾಟ್ಸಾಪ್‌ ಸಂದೇಶಗಳು ಬರುತ್ತಿವೆ. ಇಂತಹ   ಬೆದರಿಕೆಗೆ ಜಗ್ಗುವುದಿಲ್ಲ. ಕೊನೆಯ ಉಸಿರು ಇರುವವರೆಗೂ ಅವರ ಕುತಂತ್ರಗಳನ್ನು ಬಯಲಿಗೆಳೆಯುತ್ತೇನೆ’ ಎಂದು ಹೇಳಿದರು.

ಛಾಯಾಚಿತ್ರ ಪ್ರದರ್ಶನ
ಕೇರಳದಲ್ಲಿ ನಡೆದ ಕಮ್ಯುನಿಸ್ಟರ ಕೊಲೆಗಳ ಕುರಿತ ಛಾಯಾಚಿತ್ರಗಳ ಪ್ರದರ್ಶನ ಎನ್‌.ಜಿ.ಒ ಸಭಾಂಗಣದಲ್ಲಿ ನಡೆಯಿತು. 1971ರಲ್ಲಿ ತಲಶ್ಶೇರಿಯಲ್ಲಿ   ಕುಂಞಿರಾಮನ್‌ ಹತ್ಯೆಯಿಂದ ಹಿಡಿದು  ಇತ್ತೀಚೆಗೆ ಪಿಣರಾಯಿಯಲ್ಲಿ ನಡೆದ  ರವೀಂದ್ರನ್‌ ಕೊಲೆವರೆಗೆ ನೂರಕ್ಕೂ ಹೆಚ್ಚು ಹತ್ಯೆಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳಿದ್ದವು. ಕಲ್ಲಿಕೋಟೆಯಲ್ಲಿ ಹತ್ಯೆಗೊಳಗಾದ ಎಂಟು ವರ್ಷದ ಬಾಲಕ ಮಹಮ್ಮದ್‌ ಫಹಾದ್‌ ಚಿತ್ರವೂ ಇತ್ತು. ಮೃತದೇಹಗಳ ಮುಂದೆ ಕುಟುಂಬಸ್ಥರು ರೋದಿಸುವ ಮನಕಲಕುವ ದೃಶ್ಯಗಳು ಪ್ರದರ್ಶನದಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT