ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಾಹಿತಿ ನಿರಾಕರಿಸಿದ ಬಿಡಿಎ

ನ್ಯಾಯಾಲಯದಲ್ಲಿ ವ್ಯಾಜ್ಯವಿದೆ ಎಂಬ ನೆಪ ಹೇಳಿದ ಅಧಿಕಾರಿಗಳು
Last Updated 4 ಡಿಸೆಂಬರ್ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಉಕ್ಕಿನ ಸೇತುವೆ ಯೋಜನೆಯನ್ನು ಅನೂರ್ಜಿತಗೊಳಿಸುವಂತೆ ಹಲವಾರು ಸಂಘ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೊಕ್ಕಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ 2005ರ ನಿಯಮ  (1) (ಎಚ್‌) ಮೇರೆಗೆ ಯಾವುದೇ ಮಾಹಿತಿ ನೀಡುವುದು ಸಮಂಜಸ ಅಲ್ಲ’
ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಬಗ್ಗೆ  ಮಾಹಿತಿ ಕೇಳಿ, ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿರುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರವಿದು. 

ಈ ಯೋಜನೆ ಬಗ್ಗೆ ಮಾಹಿತಿ ಕೇಳಿದ ಹಲವು ಮಂದಿಗೆ  ಇದೇ ಒಕ್ಕಣೆಯ ಉತ್ತರವನ್ನು ಬಿಡಿಎ ನೀಡಿದೆ. ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಕಂಪೆನಿಗಳು ಯಾವುವು, ಅವು ಟೆಂಡರ್‌ನಲ್ಲಿ ಎಷ್ಟು ಮೊತ್ತವನ್ನು ನಮೂದಿಸಿದ್ದವು,    ಈ ಸೇತುವೆಗೆ ಸುಂಕ ವಸೂಲಿ ಮಾಡಲಾಗುತ್ತದೆಯೇ, ಈ ಯೋಜನೆಯಿಂದ ಆಗುವ ಪ್ರಯೋಜನಗಳೇನು ಎಂದು ಜೀವನಹಳ್ಳಿಯ ವರುಣ್‌ ಹೇಮಚಂದ್ರನ್‌ ಅವರು ಮಾಹಿತಿ ಕೋರಿ ಅಕ್ಟೋಬರ್‌ 28ರಂದು  ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯಿಂದ ಪರಿಸರದ ಮೇಲಿನ ಆಘಾತದ ವರದಿ ಹಾಗೂ ಈ ಯೋಜನೆ ಬಗ್ಗೆ  99 ಮಂದಿ ನೀಡಿರುವ ಪ್ರತಿಕ್ರಿಯೆಗಳ ಪೂರ್ಣ ಪಾಠ  ಒದಗಿಸುವಂತೆ ಅವರು ಕೇಳಿದ್ದರು.

‘ನೀವು ಕೋರಿದ ಮಾಹಿತಿ ಬಿಡಿಎ ಮಾಹಿತಿ ಹಕ್ಕು ಕಾಯ್ದೆ ನಿಯಮ 8 (1) (ಎ)  ಪ್ರಕಾರ ರಾಜ್ಯದ ಕಾರ್ಯತಂತ್ರ ಹಾಗೂ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿವುದರಿಂದ ಮನವಿಯನ್ನು ಪುರಸ್ಕರಿಸಲು ಬರುವುದಿಲ್ಲ. ಈ ಪ್ರಕರಣ ಸಂಬಂಧ  ಎಂಜಿನಿಯರ್‌ ಅಧಿಕಾರಿ  ಶಿವಶಂಕರ್‌ ಅವರಿಗೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಬಿಡಿಎ ಮೂಲಸೌಕರ್ಯ ವಿಭಾಗದ  ಸಾರ್ವಜನಿಕ ಮಾಹಿತಿ ಅಧಿಕಾರಿ ಆರ್‌. ವಿಜಯಕುಮಾರ್‌ ಅವರು ನವೆಂಬರ್ 25ರಂದು ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಹಾಗೂ ಇತರೆ ಮಾಹಿತಿಯನ್ನು ಬಿಡಿಎ ವೆಬ್‌ಸೈಟ್‌ನಿಂದ (www.bdabangalore.org) ಪಡೆಯಬಹುದು ಎಂದು ಅವರು ಉತ್ತರದಲ್ಲಿ ತಿಳಿಸಿದ್ದರು. ರಿತಿಕಾ ಶರ್ಮ ಅವರು ಮಾಹಿತಿ ಹಕ್ಕಿನಡಿ ಸಲ್ಲಿಸಿದ್ದ ಮನವಿಗೂ ಬಿಡಿಎ ಇದೇ ಸಿದ್ಧ ಉತ್ತರವನ್ನು ನೀಡಿದೆ. ಯೋಜನೆಗೆ ಅಗತ್ಯವಿರುವ  ಭೂಮಿ ಎಷ್ಟು, ಎಷ್ಟು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳಿವೆಯೇ, ಯೋಜನೆಗಾಗಿ ಸೇನೆಗೆ ಸೇರಿದ ಎಷ್ಟು ಜಾಗವನ್ನು ಬಳಸಿಕೊಳ್ಳಲಾಗುತ್ತದೆ, ಯೋಜನೆಗೆ ಅಗತ್ಯವಿರುವ   ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿಯನ್ನು ರಿತಿಕಾ ಅವರು ಕೇಳಿದ್ದರು.

‘ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳುವ ಮಾಹಿತಿ ಲಭ್ಯವಿದ್ದರೆ ಅದನ್ನು ಒದಗಿಸುವುದು ಬಿಡಿಎ ಅಧಿಕಾರಿಗಳ ಕರ್ತವ್ಯ.  ತಮ್ಮಲ್ಲಿರುವ ಮಾಹಿತಿಯನ್ನು ನೀಡುವುದಕ್ಕೆ ಅವರು ನಿರಾಕರಿಸುತ್ತಿರುವುದು ಸರಿಯಲ್ಲ’ ಎಂದು ಸಿಟಿಜನ್ಸ್‌ ಫಾರ್ ಬೆಂಗಳೂರು ಸಂಘಟನೆಯ ಚಿತ್ರಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡಿಎ ಅನುಷ್ಠಾನಗೊಳಿಸುವ ಯೋಜನೆಗಳ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆಯ ನಿಯಮ 8 (1) (ಎ) ಹಾಗೂ ನಿಯಮ 8 (1) (ಎಚ್‌) ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಸೆಕ್ಷನ್‌  ಉಲ್ಲೇಖಿಸಿ ಬಿಡಿಎ ಮಾಹಿತಿ ನಿರಾಕರಿಸಿದ್ದರೆ ಅದು ಕಾಯ್ದೆಯ ಉಲ್ಲಂಘನೆ ಆಗುತ್ತದೆ. ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ ಎಂಬ ಕಾರಣಕ್ಕೆ ಮಾಹಿತಿ ನಿರಾಕರಿಸುವಂತಿಲ್ಲ. ಉಕ್ಕಿನ ಸೇತುವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರಿಂದ ನ್ಯಾಯಾಲಯದಲ್ಲಿ  ವ್ಯಾಜ್ಯದ ವಿಚಾರಣೆಗೆ ಯಾವುದೇ ಅಡ್ಡಿ ಉಂಟಾಗುವುದೂ ಇಲ್ಲ’ ಎಂದು ಮಾಹಿತಿ ಆಯೋಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  ಉಕ್ಕಿನ ಸೇತುವೆ ಯೋಜನೆಗೆ ಸಂಬಂಧಿಸಿದ ಮಾಹಿತಿ ನೀಡಲು ಈ ಹಿಂದೆಯೂ ಬಿಡಿಎ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT