ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ನಡುವೆ ಕೃಷಿಭೂಮಿ

Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಂಡಗಿಗೆ ಹೋದರೆ ಸೂಜಿಗಲ್ಲಿನಂತೆ ಆಕರ್ಷಿಸುವ ಈ ಫಲವತ್ತಾದ ಕೃಷಿಭೂಮಿ ಕಾಣಿಸುತ್ತದೆ. ಇಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳಿವೆ, ಮುಗಿಲೆತ್ತರಕ್ಕೆ ಬಲಿತು ನಿಂತಿರುವ ರಬ್ಬರ್ ಗಿಡಗಳು, ಅಡಿಕೆ ಮರಗಳು, ಸಿಲ್ವರ್ ಓಕ್ ಗಿಡಗಳು, ಬಾಳೆ, ತೆಂಗು, ಕಾಫಿ, ಕಾಳು ಮೆಣಸು... ಪಟ್ಟಿ ಬೆಳೆಯುತ್ತದೆ. ರಬ್ಬರ್ ಗಿಡಗಳ ಸಾಲಿನಲ್ಲಿ ಓಡಾಡಿದರೆಂತು ಹವಾನಿಯಂತ್ರಿತ ಕೋಣೆಯಲ್ಲಿಯೇ ಇದ್ದೆವೇನೋ ಅನ್ನಿಸುತ್ತದೆ.
 
ಈ ಕೃಷಿಭೂಮಿ ದೀಪಕ್ ಭಟ್ಟ ಅವರದ್ದು. 13 ವರ್ಷಗಳ ಶ್ರಮದ ಫಲವಿದು. ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಈಗ ಈಜಿ ದಡ ಸೇರಿದ್ದಾರೆ. ತಮ್ಮ ಕೃಷಿಭೂಮಿಯನ್ನು ಫಲವತ್ತಾಗಿಸಲು ದೀರ್ಘ ತಪಸ್ಸೇ ಮಾಡಿದ್ದಾರೆ. ದೀಪಕ್ ಮೂಲತಃ ಪುತ್ತೂರಿನವರು. ಎಂ.ಎಸ್ಸಿ. ಪದವೀಧರರಾದ ಇವರಿಗೆ ಔಷಧೀಯ ಗಿಡಗಳನ್ನು ಬೆಳೆಸಬೇಕು ಎಂಬ ಹೆಬ್ಬಯಕೆ ಇತ್ತು. ಅವರು ಯೋಗ್ಯ ಭೂಮಿಯನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ತಂಡಗಿಯ ಕೃಷಿಭೂಮಿಯಲ್ಲಿ ಔಷಧಿ ಗಿಡಗಳನ್ನೇ ನಾಟಿ ಮಾಡಲಾಗಿತ್ತು.
 
ಸುಮಾರು 48 ಎಕರೆ ವಿಸ್ತಾರವಾಗಿ ಇರುವ ಭೂಮಿಯನ್ನು ನೋಡಿದ ಅವರು 2003ರಲ್ಲಿ ಖರೀದಿ ಮಾಡಿದರು. ಇಲ್ಲಿದ್ದ ಔಷಧೀಯ ಸಸ್ಯಗಳೊಂದಿಗೆ ಮತ್ತಷ್ಟು ಗಿಡಗಳನ್ನು ನೆಟ್ಟು ಉತ್ಸಾಹ, ಛಲದಿಂದ ಆರೈಕೆ ಮಾಡಿದರು. ಆದರೆ, ದುರದೃಷ್ಟ... ಆ ಸಸ್ಯಗಳು ಸರಿಯಾಗಿ ಬೆಳೆಯಲೇ ಇಲ್ಲ! ಔಷಧೀಯ ಗಿಡಗಳಿಗಿಂತ ಕಳೆಗಳೇ ತುಂಬಿಹೋದವು. ಆಗಲೇ ದೀಪಕ್‌ ಅವರಿಗೆ ವಾಸ್ತವಿಕತೆ ಅರ್ಥವಾಗಿತ್ತು. ಮಲೆನಾಡಿನ ಭೂಮಿ ಔಷಧೀಯ ಗಿಡಗಳನ್ನು ಬೆಳೆಯಲು ಯೋಗ್ಯವಲ್ಲ. ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನೇ ಬೆಳೆಯಬೇಕು ಎಂಬುದನ್ನು ನಿರ್ಧರಿಸಿದರು. ಪರ್ಯಾಯಬೆಳೆಗಳ ಕೃಷಿ ಮಾಡಲು ಮುಂದಾದರು.
 
2006ರ ನಂತರ ಇವರು ನೆಲ್ಲಿ, ಅನಾನಸ್, ಅಡಿಕೆ, ಬಾಳೆ, ಕಾಫಿ, ತೆಂಗು... ಮುಂತಾದ ಗಿಡಗಳನ್ನು ವ್ಯವಸ್ಥಿತವಾಗಿ ನೆಟ್ಟರು. ನೆಲ್ಲಿಕಾಯಿಗೆ ಬೇಡಿಕೆಯೂ ಇರದಿದ್ದ ಕಾರಣ, ಅದನ್ನು ತೆಗೆದು ರಬ್ಬರ್‌ ಗಿಡ ನೆಟ್ಟರು. ಅನಾನಸ್ ಕೃಷಿಗೂ ಬೇರೆ ಬೇರೆ ಸಮಸ್ಯೆ ಉದ್ಭವಿಸಿದ್ದರಿಂದ ಆ ಜಾಗದಲ್ಲಿ ಸಿಲ್ವರ್ ಓಕ್ ಗಿಡಗಳು ಬಂದವು. ಅಲ್ಲಿಯೇ ಈಗ ಕಾಳುಮೆಣಸು ಕೃಷಿಗೂ ಮುಂದಾಗಿದ್ದಾರೆ. ಜೊತೆಗೆ, ಪಪ್ಪಾಯಿ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
 
ಇವರು ಹನ್ನೊಂದು ಎಕರೆಯಲ್ಲಿ ಅಡಿಕೆಕೃಷಿ ಮಾಡುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ತೋಟಕ್ಕೆ ಸುಭದ್ರವಾದ ಮುಚ್ಚಿಗೆ ಮಾಡುತ್ತಾರೆ. ಈ ಮುಚ್ಚಿಗೆಗೆ ತಮ್ಮದೇ ರಬ್ಬರ್ ಪ್ಲಾಟಿನಲ್ಲಿ ಧಾರಾಳವಾಗಿ ಬೀಳುವ ದರಕುಗಳನ್ನೇ ಬಳಸುತ್ತಾರೆ. ಆರು ಎಕರೆಯಷ್ಟೇ ಫಲ ಸದ್ಯ ಬರುತ್ತಿದ್ದು, ಈ ವರ್ಷ 2060 ಕ್ವಿಂಟಲ್ ಫಸಲು ಸಿಕ್ಕಿದೆ. ಕಳೆದ ಜೂನ್‌ನಲ್ಲಿ ಐದು ಸಾವಿರ ಬಾಳೆಗಿಡಗಳನ್ನು ನೆಟ್ಟಿದ್ದು ಅವು ಭೀಮ ಗಾತ್ರದ ಗೊನೆಗಳನ್ನು ತನ್ನ ಒಡೆಯನಿಗೆ ನೀಡಲು ಸಜ್ಜಾಗಿ ನಿಂತಿವೆ.
ಈ ಪ್ಲಾಟಿನ ಇನ್ನೊಂದು ಪಾರ್ಶ್ವದಲ್ಲಿ 330ಕ್ಕೂ ಹೆಚ್ಚು ತೆಂಗಿನ ಮರಗಳು ಫಲ ನೀಡುತ್ತಿವೆ. ಈ ಮರಗಳಿಗೂ ಕಾಳುಮೆಣಸಿನ ಬಳ್ಳಿಗಳು ಚೆನ್ನಾಗಿಯೇ ಬಲಿದುಕೊಂಡಿವೆ. ಅಲ್ಲಿಯೇ ಮತ್ತೊಂದು ಭಾಗದಲ್ಲಿ ಸಿಲ್ವರ್ ಓಕ್, ಹಲಸು... ಇಂಥ ವಿಭಿನ್ನ ಜಾತಿಯ ಮರಗಳಿದ್ದು, ಅವುಗಳಿಗೂ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗಿದೆ ಇದರಿಂದಾಗಿ ಇವರ ಜಮೀನಿನಲ್ಲಿ ಪಣಿಯಾರ್, ನಿಲಗುಂದ, ಕರಿಮುಂಡ ಸೇರಿದಂತೆ ವಿವಿಧ ತಳಿಗಳ 7–8 ಸಾವಿರ ಕಾಳುಮೆಣಸಿನ ಬಳ್ಳಿಗಳಿದ್ದು ಅವು ಫಸಲನ್ನು ನೀಡಲು ಆರಂಭಿಸಿವೆ. ಅಡಿಕೆತೋಟದಲ್ಲಿರುವ ಕಾಫಿಗಿಡಗಳಿಂದ ಎರಡು ಕ್ವಿಂಟಲ್ ಇಳುವರಿ ಪಡೆಯುತ್ತಿದ್ದಾರೆ.
 
ರಬ್ಬರ್‌ ತೋಟದಲ್ಲಿ ಪಾಲಿಹೌಸ್
ದೀಪಕ್‌ ಅವರು ದೊಡ್ಡ ಪ್ರಮಾಣದಲ್ಲಿ ರಬ್ಬರ್‌ಕೃಷಿಯನ್ನು ಮಾಡುತ್ತಿರುವುದು ವಿಶೇಷ. ಅವರು ಸುಮಾರು 22 ಎಕರೆ ಪ್ರದೇಶದಲ್ಲಿ 4500 ರಬ್ಬರ್‌ಗಿಡ ನೆಟ್ಟಿದ್ದು ಅವುಗಳಲ್ಲಿ ಸುಮಾರು 3200 ಮರಗಳು ಹಾಲು ನೀಡುತ್ತಿವೆ. ಈ ಹಾಲನ್ನು ಸಂಸ್ಕರಿಸುವ ಯಂತ್ರವನ್ನು ಇಟ್ಟುಕೊಂಡಿದ್ದಾರೆ. ಜೊತೆಗೆ, ಅದನ್ನು ವ್ಯವಸ್ಥಿತವಾಗಿ ಒಣಗಿಸಲು ಪುಟ್ಟದಾದ ಪಾಲಿಹೌಸನ್ನು ನಿರ್ಮಿಸಿಕೊಂಡಿದ್ದಾರೆ. 
 
‘ನಾನು ಬೆಳೆದಿರುವ ಎಲ್ಲಾ ಬೆಳೆಗಳು ನಿರೀಕ್ಷೆಯಷ್ಟು ಫಲ ನೀಡುತ್ತಿಲ್ಲ ಎನ್ನುವುದು ಸತ್ಯ. ಆದರೆ ಕೈತುಂಬ ಆದಾಯಕ್ಕೇನೂ ಅವು ಕೊರತೆ ಮಾಡಿಲ್ಲ. ಈ ಆದಾಯದಲ್ಲಿ ನನಗೆ ಸಂತೃಪ್ತಿ ಇದೆ’ ಎನ್ನುತ್ತಾರೆ ದೀಪಕ್‌. 
 
‘ಸಂಪೂರ್ಣ ಕೃಷಿಚಟುವಟಿಕೆಗೆ ವರ್ಷಕ್ಕೆ ಆರರಿಂದ ಏಳು ಲಕ್ಷ ಖರ್ಚು ಮಾಡುತ್ತೇನೆ. ಇಷ್ಟು ಮಾಡಿದರೂ ಮಾರುಕಟ್ಟೆಯಲ್ಲಿ ಉತ್ತಮವಾದ ದರ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ಇಂದು ಸಿಕ್ಕಿದ ದರ ನಾಳೆ ಸಿಗುವುದಿಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ಕೃಷಿಕರು ಪ್ರತಿಯೊಂದು ಹಂತದಲ್ಲಿಯೂ ಸ್ಪರ್ಧೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಆಯಾ ಸಂದರ್ಭಗಳಿಗೆ ಸಂಭವಿಸುವ ಅವಘಡಗಳನ್ನು ಎದುರಿಸಿ, ಕೃಷಿಯನ್ನು ಮಾಡಲೇಬೇಕು. ಒಂದಲ್ಲದಿದ್ದರೆ ಇನ್ನೊಂದು ಕೃಷಿಯಿಂದ ಆದಾಯ ಬರುವ ಸಂತೃಪ್ತಿ ನನಗಿದೆ’ ಎನ್ನುತ್ತಾರೆ ಅವರು. ಅಂದಹಾಗೆ ಇವರು ವರ್ಷಕ್ಕೆ ಎಲ್ಲಾ ಬೆಳೆಗಳಿಗೆ 18ಲಕ್ಷ ರೂಪಾಯಿವರೆಗೂ ಆದಾಯ ಗಳಿಸುತ್ತಿದ್ದಾರೆ.
 
‘ಕೃಷಿಯಲ್ಲಿ ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಪ್ರತಿಯೊಂದು ಬೆಳೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದರ ಚಲನವಲನವನ್ನು ನೋಡುತ್ತಾ, ಅದಕ್ಕೆ ಬೇಕಾಗುವ ಪೋಷಕಾಂಶ, ಗೊಬ್ಬರ, ನೀರನ್ನು ಸಕಾಲದಲ್ಲಿಯೇ ನೀಡಿ ಸಂರಕ್ಷಿಸಬೇಕು. ವ್ಯವಸ್ಥಿತವಾಗಿ ಆರೈಕೆ ಮಾಡಿ ಪೋಷಿಸಿದ ಗಿಡಗಳೆಲ್ಲಾ ಫಲ ಬರುವವರೆಗೂ ಕಾಯಬೇಕು’ ಎನ್ನುವ ದೀಪಕ್‌, ‘ಕೃಷಿಯಲ್ಲಿ ತಾಳಿದವನು ಬಾಳಿಯಾನು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT