ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಗೊಬ್ಬ ರಾಷ್ಟ್ರಕವಿ ಅಗತ್ಯವೇ?

Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ರಾಷ್ಟ್ರಕವಿ: ಮತ್ತೊಂದು ಸಮಿತಿ ರಚಿಸಿ’ (ಪ್ರ.ವಾ., ಡಿ. 1)  ಎಂಬ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮನವಿ ಹಾಗೂ ‘ರಾಷ್ಟ್ರಕವಿ ಪುರಸ್ಕಾರ ಕೊಡುವ ಪದ್ಧತಿ ಮುಂದುವರಿಸಬೇಕು’ ಎಂಬ ಬಗ್ಗೆ ಸಾಹಿತ್ಯ ಸಮ್ಮೇಳನದ ಶಿಫಾರಸು (ಪ್ರ.ವಾ., ಡಿ. 5) ಕುರಿತ ವರದಿಗಳು ಪ್ರಕಟವಾಗಿವೆ.

ಈ ಒತ್ತಾಯಗಳ ಹಿಂದೆ ಹಳೆಯ, ಸುದೀರ್ಘ ಚರ್ಚೆಗೆ ಒಳಗಾಗಿದ್ದ ಸಂಗತಿಯನ್ನು ಮತ್ತೆ ಕೆದಕಿ ಇನ್ನೊಂದು ವಾದ- ಸಂವಾದ ಸೃಷ್ಟಿಸುವ  ಬಲವಾದ ಹಂಬಲ ಇರುವಂತೆ ಕಂಡುಬರುತ್ತದೆ. ಇದು ನಡೆದರೆ ಅದಕ್ಕೆ ನಾಂದಿಯಾಗಿ ಎರಡು ಮಾತು ಇರಲಿ ಎಂದು ಹೇಳಬಯಸುತ್ತೇನೆ.

ಪ್ರಾಥಮಿಕ ಪ್ರಶ್ನೆ ಇದು: ಭಾಷೆಗೊಬ್ಬ ರಾಷ್ಟ್ರಕವಿ ಬೇಕೇ? ಅನೇಕ ಭಾಷೆಗಳಲ್ಲಿ ‘ರಾಷ್ಟ್ರಕವಿ’ ಎನ್ನುವ ಪರಿಕಲ್ಪನೆ ಇಲ್ಲ. ನಾವು, ನಮ್ಮ ನವೋದಯದ ಸಾಹಿತ್ಯ ಬಹುಪಾಲು ಬೆಳೆದಿದ್ದು ನಮ್ಮ ಇಂಗ್ಲಿಷ್ ಓದಿನಿಂದ. ಇಂಗ್ಲಿಷ್‌ನಲ್ಲಿ ಮೊದಲ ದೊಡ್ಡ, ಶಿಷ್ಟ ಮಹಾಕಾವ್ಯ ಬರೆದವನು ಮಿಲ್ಟನ್; ಆದರೂ ಇಂಗ್ಲಿಷ್ ಓದುಗರು ಮಹಾಕಾವ್ಯ ಯಾವುದನ್ನೂ ರಚಿಸದ, ರಾಷ್ಟ್ರಕವಿಯ ಸ್ಥಾನವನ್ನು ಅನಧಿಕೃತವಾಗಿ ನೀಡಿದ್ದು ನಾಟಕಕಾರ ಶೇಕ್ಸ್‌ಪಿಯರ್‌ನಿಗೆ; ಇವನೇ ಬ್ರಿಟಿಷರ ‘ರಾಷ್ಟ್ರಕವಿ’ ಎಂದು ಪುರಸ್ಕೃತ.

ರಷ್ಯನ್ ಭಾಷೆಯಲ್ಲಿ ಟಾಲ್‌ಸ್ಟಾಯ್, ದಾಸ್ತೋವಸ್ಕಿ, ಪುಷ್ಕಿನ್‌ನಂಥ ಇತರ ಅನೇಕ ಘಟಾನುಘಟಿ ಬರಹಗಾರರಿದ್ದರೂ ಅಲ್ಲಿ ರಾಷ್ಟ್ರಕವಿ ಎನ್ನುವವನಿಲ್ಲ, ವಾದಕ್ಕಾಗಿ ಟಾಲ್‌ಸ್ಟಾಯ್ ರಷ್ಯಾದ ರಾಷ್ಟ್ರಕವಿ ಎನ್ನಬಹುದು, ಅಷ್ಟೆ.  ಫ್ರೆಂಚ್‌ ಭಾಷೆಯಲ್ಲಿ ದೊಡ್ಡ ಗೌರವ ಹೊಂದಿರುವ ಸಾಹಿತ್ಯ ಅಕಾಡೆಮಿ ಇದೆ.

ಅದು ಯಾರನ್ನೂ ರಾಷ್ಟ್ರಕವಿ ಎಂದು ನಿರ್ದೇಶಿಸಿಲ್ಲ. ಟಿ.ಎಸ್.ಎಲಿಯಟ್ ದೊಡ್ಡ ಕವಿಯಾದರೂ ರಾಷ್ಟ್ರಗೌರವ ಎನ್ನುವಂಥದ್ದು ದೊರೆತಿರುವುದು ಐರ್ಲೆಂಡ್‌ನ ಡಬ್ಲ್ಯು.ಬಿ.ಯೇಟ್ಸ್‌ಗೆ, ಎಲಿಯಟ್‌ಗೆ ಅಲ್ಲ.   ಅಂದರೆ ಯಾವ ಅಕಾಡೆಮಿಯಾಗಲಿ, ಸಾಹಿತ್ಯ ಸಮಿತಿಗಳಾಗಲಿ, ಸರ್ಕಾರವಾಗಲಿ ಯಾರನ್ನೂ ರಾಷ್ಟ್ರಕವಿ ಮಾಡಲು ಹೊರಡಲಿಲ್ಲ. ಆ ಕೆಲಸವನ್ನು ಆಯಾ ಭಾಷಿಕರಿಗೆ, ಸಾಹಿತ್ಯಾಸಕ್ತರಿಗೆ ಬಿಟ್ಟಿವೆ. 

ಐತಿಹಾಸಿಕವಾಗಿ ನೋಡಿದರೆ ನಮ್ಮಲ್ಲಿ ಮೂವರು ರಾಷ್ಟ್ರಕವಿಗಳಿದ್ದಾರೆ. ಮೊದಲನೆಯವರು, ಮಂಗಳೂರಿನ ಗೋವಿಂದ ಪೈಗಳು. ಅಂದಿನ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಕನ್ನಡಕ್ಕೆ ಈ ಉಡುಗೊರೆ ಕೊಟ್ಟಿದ್ದು ಅಲ್ಲಿನ, ಅಂದಿನ ಸರ್ಕಾರ. ಗೋವಿಂದ ಪೈ ಅವರನ್ನು ಓದುವ ಸಾಹಿತ್ಯ ವರ್ಗ ಇರುವುದು ನನಗೆ ಅನುಮಾನ.

ವಿದ್ವಾಂಸರು, ಭಾಷಾ ಶಾಸ್ತ್ರ, ಛಂದಶ್ಶಾಸ್ತ್ರ ಅಧ್ಯಯನ ಮಾಡುವವರು ಅವರನ್ನು ಓದುತ್ತಿರಬಹುದು. ಆದರೆ ಅದು ಕನ್ನಡದ ಸಾಮಾನ್ಯ ಸಾಹಿತ್ಯ ವರ್ಗವಲ್ಲ.ಕುರ್ತಕೋಟಿಯರು ಹೇಳುವಂತೆ, ಪೈ ಅವರು ‘ಹೊಸ ಕವಿಗಳಾಗಿದ್ದರೂ, ಹಳೆಯ ಮಾರ್ಗವನ್ನು ಅವಲಂಬಿಸಿದವರು. ಅವರ ಕಾವ್ಯಕ್ಕೆ ‘ಒಂದು ಐತಿಹಾಸಿಕ ಮಹತ್ವವಿದೆ’. ಅಂದರೆ, ನಾನಾ ಕಾರಣಗಳಿಂದ ವಿಮರ್ಶಕರಿಗೆ ಮಾತ್ರ ರುಚಿಸಬಲ್ಲ ಕಾವ್ಯ ಪೈ ಅವರದು. ನನ್ನ ಪಾಲಿಗಂತೂ ಅದು ಕನ್ನಡ ಅನ್ನಿಸುವುದೇ ಇಲ್ಲ; ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ದ ಕನ್ನಡದ ಹಾಗೆ; ಹಳೆಯದಲ್ಲ, ಹೊಸತಲ್ಲ. ಒಂದು ನಮೂನೆಯ ಕನ್ನಡ.  

ಎರಡನೆಯ ರಾಷ್ಟ್ರಕವಿ, ಕುವೆಂಪು ಅವರು. ಇಲ್ಲಿ ತಕರಾರಿನ ಸಂಗತಿಯೇ ಇಲ್ಲ. ಯಾವ ಜಾತಿಯ, ಯಾವ ವರ್ಗದ, ಯಾವ ರಾಜಕಾರಣದ ಸಮರ್ಥನೆ ಇಲ್ಲದೆ ತಂತಾನೆ ರಾಷ್ಟ್ರಕವಿಯಾದವರು ಅವರು. ನಿಜವಾದ ಕವಿ, ಕಾದಂಬರಿಕಾರ, ಕತೆಗಾರ, ವಿಮರ್ಶಕ, ಹೊಸ ಯುಗದ ಕ್ರಾಂತಿಕಾರಿ ಕವಿ ದ್ರಷ್ಟಾರ ಎಂದರೂ ಉತ್ಪ್ರೇಕ್ಷೆ ಇಲ್ಲ.

ಮೂರನೆಯ ರಾಷ್ಟ್ರಕವಿ ನನಗೆ ವೈಯಕ್ತಿಕವಾಗಿ ಅತ್ಯಂತ ಪ್ರಿಯರಾದವರು. ಗೌರವಾನ್ವಿತರೂ ಹೌದು. ಅವರೇ ಜಿಎಸ್‌ಎಸ್. ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಹಲವಾರು ಅದ್ಭುತ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದೇನೆ; ಸಮಿತಿಗಳಲ್ಲಿ ಅವರ ಸಂಗಡ ಕೆಲಸ ಮಾಡಿದ್ದೇನೆ.

ಅನೇಕ ಬಾರಿ ಅವರ ಮನೆಯ ಆತಿಥ್ಯ ನನಗೆ ಲಭ್ಯವಾಗಿದೆ; ಅವರ ಕೆಲವು ಕನ್ನಡ ಕವಿತೆಗಳನ್ನು ಇಂಗ್ಲಿಷ್‌ಗೆ ಮಾಡಿಕೊಟ್ಟಿದ್ದೇನೆ. ಅವರು ಬರೆದ ಅನೇಕ ಪತ್ರಗಳು ನನ್ನಲ್ಲಿ ಜೋಪಾನವಾಗಿವೆ. ಆದರೆ ಜಿಎಸ್‌ಎಸ್ ಅವರು ‘ಕವಿ’ ‘ರಾಷ್ಟ್ರಕವಿ’ ಆದದ್ದು ಏನನ್ನು ಕೊಟ್ಟರೂ ಸುಗಮವಾಗಿ ಹಾಡುವ ಚಾಳಿಯ ಸುಗಮ ಸಂಗೀತಗಾರರಿಂದ; ಎಲ್ಲೋ ಒಂದು ಕಡೆ ಎಚ್.ಎಸ್.ಶಿವಪ್ರಕಾಶ್ ಅವರು ಜಿಎಸ್‌ಎಸ್ ಕಾವ್ಯದ ಬಗ್ಗೆ ಉತ್ಸಾಹವಿಲ್ಲ ಎನ್ನುವಂಥ ವಿವೇಚನೆಯ ಮಾತಾಡಿದ್ದಾರೆ. 

ಹೀಗಿರುವಾಗ ಹೊಸ ಸಮಿತಿ ರಚಿಸಿ ಏನು ಸಾಧಿಸಬಹುದು? ಜನಪ್ರಿಯತೆಯೊಂದೇ ಮಾನದಂಡವಾದರೆ ಹೀಗೂ ಆಗಬಹುದು: ಗದ್ಯದಲ್ಲಿ ಬರೆಯುವವರೂ ಕವಿಗಳೇ ಅಲ್ಲವೇ, ಅವರಲ್ಲೇ ಒಬ್ಬರು ಯಾಕೆ ‘ರಾಷ್ಟ್ರಕವಿ’ ಆಗಬಾರದು ಎನ್ನುವ ವಾದವೂ ಇದೆ. ಹಾಗಾದ ಪಕ್ಷದಲ್ಲಿ ಒಂದು ಮಾರ್ಗದ, ಒಂದು ಒಲವಿನ ಜನ, ಅತ್ಯಂತ ಜನಪ್ರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ‘ರಾಷ್ಟ್ರಕವಿ’ ಏಕಾಗಬಾರದು ಎಂದು ಕೇಳಿದರೆ ನನಗೆ ಸುತರಾಂ ಆಶ್ಚರ್ಯವಿಲ್ಲ. ಸಾಹಿತ್ಯ ಮಾಫಿಯಾಗಳು ಏನು ಬೇಕಾದರೂ ಮಾಡಬಲ್ಲವು.

ರವೀಂದ್ರನಾಥ ಟ್ಯಾಗೋರ್‌ ಅವರ ಗೀತೆಗಳು, ಕವನಗಳನ್ನು ಸಾವಿರಾರು ಜನ ಹೊಲಗಳಲ್ಲಿ ದುಡಿಯುವಾಗ, ದೋಣಿ ನಡೆಸುವಾಗ, ಕವನ ರವೀಂದ್ರರದೆಂದು ತಿಳಿಯದಿದ್ದರೂ ಹಾಡುತ್ತಾರೆ ಎಂದು ಕೇಳಿದ್ದೇನೆ. ಆಶ್ಚರ್ಯವಿಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ. ಹಾಡುಗಳನ್ನು, ಕವನಗಳನ್ನು ರೈಲಿನಲ್ಲಿ, ಬಸ್‌ಗಳಲ್ಲಿ ಕೇಳುವುದು ಅಪರೂಪದ ಸಂಗತಿ ಖಂಡಿತ ಅಲ್ಲ. ಇಂಥವರು ರಾಷ್ಟ್ರದ, ಜನರ, ಜನಸಮುದಾಯದ ಕವಿಗಳು.  

‘ರಾಷ್ಟ್ರಕವಿ’ಯನ್ನು ಜನರು ಆಯ್ಕೆ ಮಾಡಬೇಕು. ಸಮಿತಿ, ಸರ್ಕಾರಗಳಲ್ಲ. ಮತ್ತೆ ಎಲ್ಲ ಸಮಿತಿಗಳು, ಸಂಘ ಸಂಸ್ಥೆಗಳು ತಮ್ಮ ತಮ್ಮ ಸಾಮಾಜಿಕ, ರಾಜಕೀಯ ಅಜೆಂಡಾ ಇಟ್ಟುಕೊಂಡಿರುತ್ತವೆ. ಇವುಗಳ ಆಯ್ಕೆ ಅ-ಸಾಹಿತ್ಯ ಕಾರಣಕ್ಕೆ ಆಗುವುದರಲ್ಲಿ ಸಂಶಯವಿಲ್ಲ.  ಇಂಗ್ಲೆಂಡ್‌ನಲ್ಲಿ ‘ಪೊಯೆಟ್ ಲಾರಿಯಟ್’ ಎನ್ನುವ ‘ಆಸ್ಥಾನ’ ಕವಿಗಳಿರುತ್ತಾರೆ; ಅವರಲ್ಲಿ ನೂರಕ್ಕೆ ತೊಂಬತ್ತು ಜನ ದೇಶಕ್ಕೆ ಆರ್ಥಿಕ ಹೊರೆ. ಸಾಹಿತ್ಯಕ್ಕೆ ಅಲಂಕಾರವೇ ಎಂದರೆ ಅದೂ ಇಲ್ಲ. ಸರ್ಕಾರ, ಸಮಿತಿಗಳು ಆಯ್ಕೆ ಮಾಡುವವರು ನಾನಾ ಕಾರಣಕ್ಕೆ ಇಂಥವರೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT