ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರ ಮುಕ್ಕಾಲು, ಆಶಯದ ಕುಂಟುಗಾಲು

ನಾವು ನೋಡಿದ ಚಿತ್ರ
Last Updated 9 ಡಿಸೆಂಬರ್ 2016, 17:00 IST
ಅಕ್ಷರ ಗಾತ್ರ

ನಿರ್ಮಾಣ: ಎಲ್. ಪದ್ಮನಾಭ್, ಸಿ.ಎನ್. ಶಶಿಕಿರಣ್, ಕೆ. ಗಿರೀಶ್
ನಿರ್ದೇಶನ: ಗುರು ದೇಶಪಾಂಡೆ
ತಾರಾಗಣ: ಯೋಗಿ, ಅಜಯ್‌ ರಾವ್‌, ಕೃಷ್ಣ, ಗಿರಿಜಾ ಲೋಕೇಶ್

ಅಜ್ಜಿ ಶವದ ಪೆಟ್ಟಿಗೆಯಲ್ಲಿ ಮಲಗಿದ್ದಾಳೆ. ಅಂತಿಮಯಾತ್ರೆಗೆ ಬೀಳ್ಕೊಳ್ಳುವ ಮುನ್ನ ಅಜ್ಜಿಯೊಂದಿಗೆ ಮೊಮ್ಮಗ ‘ಸೆಲ್ಫಿ’ ತೆಗೆದುಕೊಂಡು, ‘ಫೇಸ್‌ಬುಕ್‌’ನಲ್ಲಿ ಪ್ರಕಟಿಸುತ್ತಾನೆ. ‘ಲೈಕ್‌’ಗಳ ಮಹಾಪೂರ. ಇದು ‘ಜಾನ್‌ ಜಾನಿ ಜನಾರ್ಧನ್‌’ ಚಿತ್ರದ ಒಂದು ದೃಶ್ಯ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಯುವಜನತೆ ಸಾಮಾಜಿಕ ಕಾಳಜಿ ಮರೆತಿದ್ದಾರೆ. ಇದು ಚಿತ್ರದಲ್ಲಿನ ಪೊಲೀಸ್‌ ಅಧಿಕಾರಿಣಿ ದೂಷಣೆ. ಈ ದೃಶ್ಯಗಳ ಮೂಲಕ ನಿರ್ದೇಶಕ ಗುರು ದೇಶಪಾಂಡೆ  ಯುವಜನರ ಅಭಿರುಚಿ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನವನ್ನು ಕೊಂಚ ವಾಚ್ಯವಾಗಿಯೇ ಟೀಕಿಸಿದ್ದಾರೆ. ಹಾಗಾದರೆ, ಗುರು ಅವರ ಚಿತ್ರ ಸದಭಿರುಚಿಯದೇ?

ಚಿತ್ರದಲ್ಲಿ ಮೂವರು ಹುಡುಗರಿದ್ದಾರೆ. ಮೂವರದು ಒಂದೇ ಕನಸು – ಜೀವಮಾನದಲ್ಲೊಮ್ಮೆ ಥಾಯ್ಲೆಂಡ್‌ನ ಪಟ್ಟಾಯಗೆ ಹೋಗುವುದು, ಮಸಾಜ್‌ ಮಾಡಿಸಿಕೊಳ್ಳುವುದು. ಮೂವರ ಕನಸಲ್ಲೂ ಕುಣಿಯುವ ಒಬ್ಬಳು ಹುಡುಗಿಯೂ ಇದ್ದಾಳೆ. ಹಾಡಿನಲ್ಲಿ ಬರುತ್ತಾಳೆ, ತುಂಬಿದ ಕೊಡ ತುಳುಕಿಸುತ್ತಾಳೆ ಎಂದಮೇಲೆ ಆಕೆಯನ್ನು ನಾಯಕಿ ಎನ್ನಬಹುದು. ಉಳಿದಂತೆ ಚಿತ್ರದಲ್ಲಿ ಆಕೆಗೇನೂ ಕೆಲಸವಿಲ್ಲ. ತನ್ನ ಕುಟುಂಬದ ಬಗ್ಗೆ ಜಂಬ ಕೊಚ್ಚಿಕೊಳ್ಳುವ ಅಮ್ಮನ ಪಾತ್ರದಲ್ಲಿನ ಗಿರಿಜಾ ಲೋಕೇಶ್‌ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಪ್ರತ್ಯಕ್ಷರಾಗಿ ಸಿನಿಮಾವನ್ನು ಎತ್ತಿನಿಲ್ಲಿಸಲು ಪ್ರಯತ್ನಿಸುವ ಮಾಲಾಶ್ರೀ ಅವರ ಪಾತ್ರಗಳೇನೂ ನಾಯಕಿಗಿಂತಲೂ ಕಡಿಮೆಯಿಲ್ಲ.

ಹೃದಯಸ್ಪರ್ಶಿ ಸನ್ನಿವೇಶಗಳು ಸಿನಿಮಾದಲ್ಲಿ ಸಾಕಷ್ಟಿವೆ. ಶೀರ್ಷಿಕೆಯನ್ನು ಸಮರ್ಥಿಸುವಂತೆ, ಭಾರತದ ಬಹುತ್ವದ ಬಗ್ಗೆ ಹುಡುಗಿಯೊಬ್ಬಳು ಭಾವಪೂರ್ಣವಾಗಿ ಹಾಡುತ್ತಾಳೆ. ಕಥೆಯಲ್ಲಿನ ಆಶಯ ಚೆನ್ನಾಗಿದೆ. ಎಳೆಯ ಹುಡುಗಿಯರನ್ನು ಕಿತ್ತುತಿನ್ನುವ ಮೃಗಗಳ ದಾರುಣತೆಯೂ ಕಥೆಯ ಭಾಗವಾಗಿದೆ. ಎಲ್ಲವೂ ಸರಿ; ಸಮಸ್ಯೆ ಇರುವುದು ನಿರೂಪಣೆಯಲ್ಲಿ. ಅಂಗಚೇಷ್ಟೆ ಹಾಗೂ ಎಗ್ಗಿಲ್ಲದ ಮಾತುಗಳ ಅಬ್ಬರದಲ್ಲಿ ಸಿನಿಮಾದ ಆಶಯ ಹಿನ್ನೆಲೆಗೆ ಸರಿದುಬಿಡುತ್ತದೆ. ಹಾಸ್ಯ ದೃಶ್ಯಗಳಂತೆ ಕುಡಿತದ ದೃಶ್ಯಗಳೂ ನಿಯಮಿತವಾಗಿವೆ.

ಯಾವುದನ್ನೂ ಸೂಚ್ಯವಾಗಿ ಹೇಳುವುದರಲ್ಲಿ ನಿರ್ದೇಶಕರಿಗೆ ನಂಬಿಕೆ ಇದ್ದಂತಿಲ್ಲ. ದುಷ್ಟರನ್ನು ಶಿಕ್ಷಿಸುವ ಹೊಣೆಯನ್ನು ಪೊಲೀಸರು ಜನರ ಪಾಲಿಗೇ ಬಿಡುತ್ತಾರೆ. ಉದ್ರಿಕ್ತ ಸಮೂಹ ಖಳರನ್ನು ಚಚ್ಚಿ ಚಚ್ಚಿ ಕೊಲ್ಲುತ್ತದೆ. ಈ ಕೊಲೆಯನ್ನು ನಿರ್ದೇಶಕರು ವಿಲಂಬಗತಿಯಲ್ಲಿ ತೋರಿಸುತ್ತಾರೆ. ಅರ್ಜುನ್‌ ಜನ್ಯ ಅವರ ಸಂಗೀತವೂ ಸಂತೆಯ ಗದ್ದಲಕ್ಕೆ ಪೂರಕವಾಗಿದೆ.

ಅಪಘಾತಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಸೇರಿಸುವ ಆಂಬುಲೆನ್ಸ್‌ ಡ್ರೈವರ್‌ ಪಾತ್ರವೊಂದಿದೆ. ಯಾರಾದರೂ ಮೆಚ್ಚುವ ಹೃದಯವಂತಿಕೆ ಆತನದು. ಆದರೆ, ಅವನು ಕುಡಿತದ ದಾಸ. ಆಂಬುಲೆನ್ಸ್‌ ಓಡಿಸುವುದಕ್ಕಿಂತಲೂ ಹೆಚ್ಚು ಗುಂಡುಹಾಕುತ್ತಾನೆ. ಅವನು ಸಿಡಿಸುವ ಒಂದು ಜೋಕ್ – ‘ನೀರು ಕುಡಿಯುವಷ್ಟು ದೊಡ್ಡ ರೋಗ ನನಗೇನೂ ಬಂದಿಲ್ಲ’.

ತಾರಾಗಣದಲ್ಲಿ ಹೆಚ್ಚು ಅಂಕ ಗಿಟ್ಟಿಸುವುದು ಕುಂಟ ತರುಣನ ಪಾತ್ರದಲ್ಲಿನ ಯೋಗಿ. ಕೃಷ್ಣ ಹಾಗೂ ಅಜಯ್‌ ರಾವ್‌ ನಟನೆಯೂ ಚೆನ್ನಾಗಿದೆ. ಕಾಮನಾ ಪಾತ್ರ ಕುಡಿನೋಟಕ್ಕೆ, ಕುಣಿತಕ್ಕೆ ಸೀಮಿತ. ‘ಜಾನ್‌ ಜಾನಿ ಜನಾರ್ಧನ್‌’ ಮಲೆಯಾಳಂನ ‘ಅಮರ್‌ ಅಕ್ಬರ್‌ ಆಂಥೋನಿ’ ಚಿತ್ರದ ರೀಮೇಕ್‌. ಮೂಲ ಸಿನಿಮಾದ ಮೈವಳಿಕೆಯನ್ನು ಗುರು ದೇಶಪಾಂಡೆ ಸಲೀಸಾಗಿ ಎತ್ತಿಕೊಂಡುಬಂದಿದ್ದಾರೆ. ದಾರಿಯಲ್ಲೆಲ್ಲೊ ಆತ್ಮ ತಪ್ಪಿಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT