ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ನನ್ನೊಳಗ ಇಳಿದು ಬಂದಾನಾ...

ನಿನ್ನಂಥ ಅಪ್ಪ ಇಲ್ಲ
Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಅಸ್ಖಲಿತವಾಗಿ ಸಂಭಾಷಣೆ ನುಡಿಯುವ, ಔಚಿತ್ಯಪೂರ್ಣವಾಗಿ ಅಭಿನಯಿಸುವ ವೃತ್ತಿ ನಟಿ ಮರಿಯಮ್ಮನಹಳ್ಳಿ ಹನುಮಕ್ಕನವರ ಹೆಸರು ಅಭಿನಯ ರಂಗದಲ್ಲಿ ಚಿರಪರಿಚಿತ. ಪೌರಾಣಿಕದವರಿಗೆ ಬೇಕು, ಯುವತಂಡಗಳಿಗೆ ಬೇಕು, ಹವ್ಯಾಸಿಗಳಿಗೆ ಬೇಕು. ಎಲ್ಲರೂ ಬಯಸುವ ಬೇಡಿಕೆಯ ನಟಿ ಹನುಮಕ್ಕ. ಪಾತ್ರ ಯಾವುದೇ ಇರಲಿ, ಅದಕ್ಕೆ ಜೀವತುಂಬುವ ಈ ನಟಿ ವೃತ್ತಿರಂಗಭೂಮಿಯ ದಂತಕತೆ ಎನಿಸಿದ ದುರ್ಗಾದಾಸರ ಮಗಳು. ಅಪ್ಪನ ಅಭಿನಯವನ್ನೇ ಅಷ್ಟಾಗಿ ನೋಡದ ಹನುಮಕ್ಕ ಅಷ್ಟೇ ಸಮರ್ಥ ನಟಿಯಾಗಿ ಬೆಳೆದದ್ದು ವಿಸ್ಮಯ! ಅದನ್ನವರು ಇಲ್ಲಿ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.
 
ದುರ್ಗಾದಾಸ್ ವೃತ್ತಿ ರಂಗಭೂಮಿಯ ಹೆಸರಾಂತ ನಟ. ಅವರ ಅಕ್ಕಂದಿರಾದ ದಾದಮ್ಮನವರ ಅಂಜಿನೆಮ್ಮ ಹಾಗೂ ಸಂಜೀವಮ್ಮ ಅವರೂ ವೃತ್ತಿ ರಂಗಭೂಮಿಯ ದಿಗ್ಗಜರೇ. ಅಂಜಿನೆಮ್ಮ ಹಾಡುನಟಿ. ಬಾಳ ಚಂದ ಹಾಡತಿದ್ದಳಂತ. ಮಾಯಾಬಜಾರ್ ನಾಟಕದಾಗ ಆಕೀ ‘ಎನಗೇಕೀ ಲಗ್ನದ ಬಂಧ, ಮನ ಒಪ್ಪಿದ ವರನೇ ಚೆಂದ’ ಹಾಡತಿದ್ದರ ವೃತ್ತಿರಂಗಭೂಮಿಯ ದಿಗ್ಗಜರಾದ ಗರುಡ ಸದಾಶಿವರಾಯರು ಸೈಡ್‌ವಿಂಗ್‌ನಾಗ ಕುಂತು ಮನಸೋ ಇಚ್ಚಿ ಆನಂದಿಸುತ್ತಿದ್ದರಂತ ಏಣಗಿ ಬಾಳಪ್ಪನವರು ಒಂದು ಲೇಖನದಾಗ ಬರದಾರ. ವಾಮನರಾವ್ ಪೇಂಟರ್ ಅನ್ನೋ ದೊಡ್ಡ ಚಿತ್ರ ಕಲಾವಿದನ್ನ ಆಕೀ ಮದುವಿ ಆದಳು. ದುರ್ಗಾದಾಸ್‌ರ ಇನ್ನೊಬ್ಬ ಸಹೋದರಿ ಸಂಜೀವಮ್ಮ ಆಕೀನೂ ದೊಡ್ಡ ನಟಿ. ಅಷ್ಟೇ ಅಲ್ಲ- ಆಕಿ ವಿಶ್ವ ಕಲಾದರ್ಶನ ನಾಟಕ ಮಂಡಳಿ ಅಂತ ಒಂದು ನಾಟಕ ಕಂಪನಿ ಕಟ್ಟಿ ಹಲವಾರು ವರ್ಷ ನಡಿಸಿದ ದಿಟ್ಟೆ.
 
 ‘ಹೌದು, ಇಷ್ಟೆಲ್ಲ ಹಿನ್ನೆಲೆ ನನಗೆ ಐತಿ. ಅಪ್ಪನ ಕೀರ್ತಿ ಬಾಳ ಕೇಳೀನಿ. ಆತ ಸ್ಫುರದ್ರೂಪಿ. ನಾನು ನಮ್ಮಪ್ಪಗ ಕೊನೇ ಮಗಳು. ಅಪ್ಪ ಬಾಳವರ್ಷ ಅಂದರ 87 ವರ್ಷ ಬದುಕಿದ್ದ. ಆತನ ಒಡನಾಟಾನೂ ನನಗೆ ಬಾಳ ಐತಿ. ಆದ್ರ ನಾನು ಹೇಳಾಕ ಹೊಂಟಿರೋ ವಿಷಯ ಕೇಳಿದ್ರ ನಿಮಗೆಲ್ಲ ಆಶ್ಚರ್ಯ ಆಗಬಹುದು. ಅತ್ತೆಯವರ ನಟನೆಯನ್ನೇ ನಾನು ನೋಡಿಲ್ಲ! ಅಪ್ಪ ನಾಟಕ ಕಂಪನಿಗಳಿಂದ 1980ರಲ್ಲಿ ನಿವೃತ್ತಿ ಪಡೆದು ನಮ್ಮೂರು ಮರಿಯಮ್ಮನಹಳ್ಳಿಗೆ ಬಂದು ನೆಲಸಿದ ಮ್ಯಾಗ ಆಗೊಮ್ಮೆ ಈಗೊಮ್ಮೆ ಆತನ ನಟನೆ ನೋಡಿದ್ದ ಬಿಟ್ಟರ ಆತನ ಬಗ್ಗೆ ಬರೀ ಕೇಳೂದ ಆಗೇತಿ... 
 
 ‘ನಮ್ಮೂರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ. ಇದು ನಾಟಕ ಕಲಾವಿದರ ತವರೂರು ಅಂತ ಹೆಸರಾಗೇತಿ. ನಮ್ಮಪ್ಪಗ ನಾವು ನಾಲ್ಕು ಜನ ಮಕ್ಕಳು. ಅಣ್ಣ ರಾಘವೇಂದ್ರ ದೊಡ್ಡಾತ. ಹಿರಿಯಕ್ಕ ರಮಾಬಾಯಿನ್ನ ಗರಗಕ್ಕ ಕೊಟ್ಟಿತ್ತು. ಎರಡನೇ ಅಕ್ಕ ಭಾರತಿ ಆಕೀನ್ನ ಕೊಪ್ಪಳ ಜಿಲ್ಲೆ ಇರಕಲ್ಲಗಡಕ್ಕ ಕೊಟ್ಟೈತಿ. ಆಕಿ ಟೀಚರ್ ಅದಾಳ. ನಾನೇ ಕೊನೆಯವಳು. ನಮ್ಮಕ್ಕನ ಹಿಂದ ಎಂಟು ವರ್ಷಕ್ಕ ನಾನು ಹುಟ್ಟೇನಿ (1967). ಅಪ್ಪ 2003ರಲ್ಲಿ ತೀರಿಕೊಂಡರು. ನಮ್ಮವ್ವನೂ ಬಾಳ ಗಟ್ಟಿ ಇದ್ದಳು. ಎರಡು ವರ್ಷದ ಹಿಂದೆ ಸತ್ತಳು. ಆಕೀಗೂ 90 ವರ್ಷದ ಮ್ಯಾಗ ಆಗಿರಬೇಕು. ಅವ್ವ, ಅಪ್ಪನ ಜತಿಗೆ ನಾಟಕ ಕಂಪನಿಗೆ ಹೋಗಲಿಲ್ಲ. ಊರಾಗ ಮನಿ ಇತ್ತು. ಐದು ಎಕರಿ ಹೊಲ ಇತ್ತು. ಹೊಲಮನಿ ನೋಡಿಕೊಂಡು ಊರಾಗ ಇರತಿದ್ದಳು. ಅಪ್ಪಗ ಅವ್ವಗ ಬಾಳ ಹೊಂದಾಣಿಕೆ ಇತ್ತು...
 
 ‘1980ರ ನಂತರ ಅಪ್ಪ ಮತ್ತಾವ ನಾಟಕ ಕಂಪನಿಗೂ ಹೋಗಲಿಲ್ಲ. ಹವ್ಯಾಸಿಗಳು ಯಾರಾದರೂ ಕರೆದಾಗ ಕುರುಕ್ಷೇತ್ರ, ರಕ್ತರಾತ್ರಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ. ಸಹಾಯಾರ್ಥ ಪ್ರದರ್ಶನಗಳಲ್ಲಿ ಮಾಡ್ತಿದ್ದ. ಆತ ಬರೆದ ‘ಪಾಶುಪತಾಸ್ತ್ರ’, ‘ನಿರ್ಮಲಾ’, ‘ದ್ರುಪದಕನ್ಯೆ’ ನಾಟಕಗಳು ಪ್ರಿಂಟಾಗಿದ್ದವು. (ಈಗ ಅವು ಯಾವೂ ನನ್ನ ಹತ್ರ ಇಲ್ಲ. ಅಪ್ಪ ಒಂದೂ ಕಾಪಿ ಇಟಗೊಳ್ಳಲಿಲ್ಲ. ನನಗೂ ಕೊಡಲಿಲ್ಲ!) ಅಪ್ಪ ಬರೆದ ನಾಟಕಗಳನ್ನ ಹಳ್ಳಿ ಜನ ಮಾಡ್ತಿದ್ರು. ಇಂತಿಂತಾ ಊರಾಗ ಅಪ್ಪ ಬರದ ನಾಟಕ ಮಾಡ್ಯಾರಂತ ಆವಾಗಾವಾಗ ವಿಷಯ ಗೊತ್ತಾಕ್ಕಿತ್ತು..! 
 
 ‘ನೀನು ಚಲೋತಂಗ ಓದು, ಬರಿ ಅಂತಿದ್ದರು ಅಪ್ಪ. ಊರಾಗ ನಿವೃತ್ತಿ ಜೀವನದಾಗ ದಿನಾ ಬೆಳಿಗ್ಗೆ ಎದ್ದು ಪೇಪರ್ ಓದತಿದ್ದರು. ನಮ್ಮೂರಾಗ ಪದ್ಮರಾಜ, ನೇಮಿರಾಜ, ಡಾ. ಅಂಬಣ್ಣ ಅಂತ ಅದಾರ. ಅವರ ಒಡನಾಟ ಬಾಳ ಇತ್ತು. ಹುಡುಗರನ್ನ ಕರಕೊಂಡು ಚೌಕಾಬಾರ ಆಡ್ತಿದ್ರು. ಅಧ್ಯಯನ ಮಾಡ್ತಿದ್ರು. ನಾಟಕದ ಬಗ್ಗೆ ಗೊತ್ತಿದ್ದವರು ಬಂದ್ರ ಅವರ ಜತಿಗೆ ಚರ್ಚೆ ಮಾಡತಿದ್ದರು, ಹರಟಿ ಹೊಡೀತಿದ್ರು. ವೃತ್ತಿ ರಂಗಭೂಮಿಯಲ್ಲಿ ತಾವು ಮೆರೆದದ್ದರ ಬಗ್ಗೆ ಹೇಳಿಕೊಳ್ಳತಿದ್ದರು. ಎಲ್ಲಿಗಾದರೂ ಹೋದರೆ ನನ್ನನ್ನ ಜತಿಗೆ ಕರಕೊಂಡು ಹೋಗತಿದ್ರು. ನೀನು ಗಂಡುಹುಡುಗ ಆಗಬೇಕಿತ್ತು ನೋಡು ಅಂತಿದ್ರು. ಆದ್ರ ನಾಟಕಗಳಿಗೆ ಹೆಚ್ಚಿಗೇನೂ ಕರಕೊಂಡು ಹೋಗ್ತಿರಲಿಲ್ಲ! ನಾನು ಎಂಟು ವರ್ಷದಾಕಿದ್ದಾಗ ಕೊಪ್ಪಳ ಜಿಲ್ಲೆ ಹಿಟ್ಟನಾಳದಾಗ ಓಬಳೇಶ ಅವರ ‘ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ’ ಎನ್ನುವ ನಾಟಕಕ್ಕೆ ಕರೆದೊಯ್ದದ್ದು ನನಗೆ ನೆನಪೈತಿ. ಅಕ್ಕನ ಮದುವೆ ಸಹಾಯಾರ್ಥ ‘ಸಂಪೂರ್ಣ ರಾಮಾಯಣ’ ನಾಟಕ ಮಾಡಿದ್ರು. ಅದರಾಗ ಅಪ್ಪನ ಪಾರ್ಟು ನೋಡಿದ್ದೆ. ಅಷ್ಟ ಬಿಟ್ಟರ ಅಪ್ಪನ ಪಾತ್ರ ಹೆಚ್ಚು ನೋಡಿದಾಕಿ ಅಲ್ಲ ನಾನು. 
 
 ‘ಗರುಡರ ಕಂಪನಿ, ವಾಮನರಾವ್ ಮಾಸ್ತರ ಕಂಪನಿ, ಬಾಳಪ್ಪನವರ ಕಲಾವೈಭವ, ಶ್ರೀರಂಜನಿ ಗೋಕಾಕ ಕಂಪನಿ ಅಂದ್ರ ಅವೆಲ್ಲ ಬಾಳ ದೊಡ್ಡ ದೊಡ್ಡ ಕಂಪನಿಗಳು. ಆ ಕಂಪನಿಗಳಲ್ಲಿ ನನ್ನಪ್ಪ ಬಾಳ ದೊಡ್ಡ ಹೆಸರು ಮಾಡ್ಯಾನ. ‘ಬಡತನದ ಭೂತ’ ನಾಟಕದೊಳಗ ಇಂದಿರಾಚರಣ, ‘ಚಿತ್ರಾಂಗದ’ ನಾಟಕದೊಳಗ ಅರ್ಜುನನ ಪಾತ್ರ, ಹರಿಶ್ಚಂದ್ರನ ಪಾತ್ರ -ಇವಕ್ಕೆಲ್ಲ ಅಪ್ಪಗ ಅಪ್ಪನ ಸಾಟಿ ಇದ್ದನಂತ... 
 
 ‘ನಾಟಕ ಕಂಪನಿಗಳಿಂದ ವಾಪಸ್ ಬಂದ ಮ್ಯಾಗ ಅಪ್ಪ ಪಾರ್ಟು ಮಾಡಾದು ನಿಲ್ಲಿಸಿರಲಿಲ್ಲ. ಆವಾಗಾವಾಗ ಮಾಡ್ತಿದ್ದ. ‘‘ಹೇಮರೆಡ್ಡಿ ಮಲ್ಲಮ್ಮ’’ ನಾಟಕದಾಗ ವೇಮಣ್ಣನ ಪಾತ್ರ ಮಾಡಾಕ ಕರಕೊಂಡು ಹೋಗತಿದ್ರು. ಯಲಿವಾಳ ಸಿದ್ದಯ್ಯಸ್ವಾಮಿ ಭರಮರೆಡ್ಡಿ ಪಾತ್ರ, ಅಪ್ಪ ವೇಮಣ್ಣನ ಪಾತ್ರ ಸ್ಪರ್ಧೆ ಮೇಲೆ ಮಾಡತಿದ್ದರಂತ. ಅಪ್ಪ ಅಂದರ ಮಾತಿನ ಆರ್ಭಟ ಜಾಸ್ತಿ, ವಾಚಿಕಾಭಿನಯಕ್ಕೆ ಹೆಸರುವಾಸಿ ಅಂತ ಅಂದ್ಕಂಡಾರ. ಆದರ ಆಂಗಿಕ ಅಭಿನಯಾನೂ ಚಲೋ ಮಾಡತಿದ್ದನಂತ. ಪಕ್ಕಕ್ಕಿರೋರನ್ನೆಲ್ಲ ತಿಂದುಹಾಕುವಂಗ, ಅವರನ್ನ ಲೇವಡಿ ಮಾಡುವಾಂಗ ಅಭಿನಯಿಸತಿದ್ದ ಅಂತ ಆತನ ಜತಿಗೆ ನಾಟಕದಾಗ ಪಾರ್ಟ್ ಮಾಡತಿದ್ದ ನಾಗರತ್ನಕ್ಕ ನನಗೆ ಹೇಳತಿದ್ದಳು. 
 
 ‘ಸುಳ್ಳದ ದೇಸಾಯಿ ನಮ್ಮ ಮನೆಗೆ ಬಂದಿದ್ದರು. ಚಿತ್ರನಟರಾದ ಧೀರೇಂದ್ರ ಗೋಪಾಲ, ಸುಧೀರ್ ಆಗಾಗ ಬರತಿದ್ರು. ಇಂತವರು ಬಂದಾಗಲೆಲ್ಲ ತಮ್ಮ ನಾಟಕ ಕಂಪನಿ ವೈಭವ ನೆನಪಿಸಿಕೊಳ್ಳತಿದ್ದರು...
 
 ‘ನೀನು ಓದಿಕೋ ಹೋಗು ಅಂತ ಅಪ್ಪ ಗದರತಿದ್ದರು. ನಾನು ಹೆದರಿ ಓಡತಿದ್ದೆ. ನಾಟಕದಾಗ ಅಪ್ಪನ ಧ್ವನಿಯ ಆರ್ಭಟ ಕೇಳಿ ಗರ್ಭಿಣಿ ಮಹಿಳೆಯೊಬ್ಬಳಿಗೆ ಹೆರಿಗೆ ಆಗಿತ್ತು ಅಂತ ಕೇಳಿದ್ದೆ. ಅದು ನನಗೆ ನೆನಪಿತ್ತು. ಹಂಗಾಗಿ ಆತಗ ಬಾಳ ಹೆದರತಿದ್ದೆ... 
 
 ‘ನಮ್ಮದು ಐದು ಎಕರೆ ಜಮೀನು ಐತಿ. ಅಪ್ಪ ಇದ್ದಾಗ ಕೋರಿ ಕೊಟ್ಟಿದ್ದಿವಿ. ಅದರಿಂದ ಸ್ವಲ್ಪ ಕಾಳುಕಡಿ ಸಿಕ್ತಿದ್ದವು. ಅಪ್ಪ ಹೋದಮ್ಯಾಗ ಅದು ಬೀಳಬಿದ್ದೈತಿ. ಅಣ್ಣನಿಂದ ಅಂತಾ ದುಡಿಮಿ ಏನೂ ಇರಲಿಲ್ಲ. ಆ ಕಾಲಕ್ಕ ನಮ್ಮಪ್ಪಗ ಮಾಜಿ ಮಂತ್ರಿಗಳಾದ ಎಂ.ಪಿ. ಪ್ರಕಾಶ್ ಅವರು ಸ್ವಲ್ಪ ಹೆಚ್ಚಿಗೆ ಮಾಸಾಶನ ಮಾಡಿಸಿದ್ದರು. ಅಷ್ಟರಿಂದಾನ ಜೀವನ ನಡೀತಿತ್ತು. ಅಪ್ಪ ವಾರದಾಗ ಮೂರು ದಿನ ಅಂದರ ಮಂಗಳವಾರ, ಗುರುವಾರ, ಶನಿವಾರ ಒಪ್ಪತ್ತು ಊಟ ಮಾಡ್ತಿದ್ದ. ಇನ್ನೊಂದು ಹೊತ್ತಿಗೆ ಬಾಳೆಹಣ್ಣು ತಿಂದುಬಿಡತಿದ್ದ. ಊಟದಾಗ ಬಾಳ ಸರಳ. ಅದಕ್ಕ ಏನೋ ಆರೋಗ್ಯವಂತ ಮನುಷ್ಯ ಆಗಿದ್ದ. ಸ್ಫುರದ್ರೂಪಿ ಆಗಿದ್ದ...
 
 ‘ನನ್ನನ್ನ ನಾಟಕಕ್ಕ ಸೇರಸಾಕ ಆತ ಸುತಾರಾಂ ಒಪ್ಪತಿರಲಿಲ್ಲ. ನಾಟಕದಾಗ ಪಾತ್ರ ಯಾಕ ಮಾಡಬಾರದು ಅಂತ ಕೇಳಿದರ, ‘‘ಜನ ಸರಿ ಇಲ್ಲ.. ಹೋಗಬೇಡ..’’ ಅಂತಿದ್ದ. ನಾನು ಹಳ್ಳಿ ನಾಟಕದಾಗ ಮಾಡದಿದ್ರೂ ಆಯ್ತು. ನೀನಾಸಂಗೆ ಹೋಗಿಬಿಡು ಅಂತ ನಮ್ಮೂರಿನ ನನ್ನ ಹಿತೈಷಿಯಾದ ವಕೀಲ ಜಿ.ಎಂ. ಕೊಟ್ರೇಶ ಮತ್ತು ಅವರ ಅಕ್ಕ ಶಕುಂತಲಮ್ಮ ಸಲಹೆ ನೀಡಿದರು. ನಾನಾಗ ಬಾಳ ಸಂಕಟದಲ್ಲಿದ್ದೆ. ಅಪ್ಪನ್ನ ಕೇಳಿದರ ಒಪ್ಪಲಿಲ್ಲ. ಜನ ಸರಿ ಇಲ್ಲ, ಹೋಗಬ್ಯಾಡ ಅಂತ ಮತ್ತ ಅದಾ ರಾಗ ಹಾಡಿದ. ನಾನು ಹಟ ಬಿದ್ದು ನೀನಾಸಂಗೆ ಸೇರಿದೆ. ಅಪ್ಪನ ಮುನಿಸು ಹಂಗ ಇತ್ತು. ನಾಗರತ್ನಕ್ಕ ನೀನಾಸಂಗೆ ಬಂದಾಗ ನನ್ನ ಅಭಿನಯ ನೋಡಿ, ಊರಿಗೆ ವಾಪಸ್ ಹೋಗಿ ಅಪ್ಪಗ ಹೇಳಿದಳು. ನೀನಾಸಂನೊಳಗ ಹನುಮಕ್ಕ ಬಾಳ ಚಂದ ಪಾರ್ಟು ಮಾಡತಾಳ. ಅಲ್ಲಿ ಆಕಿಗೆ ಬಾಳ ಗೌರವ ಐತಿ ಅಂತ ಹೇಳಿದಮ್ಯಾಗ ನಮ್ಮಪ್ಪಗ ನನ್ನ ಮ್ಯಾಲ ವಿಶ್ವಾಸ ಬಂತು. ಅಲ್ಲಿಗೆ ಹೋಗಿಬಂದವರು ಬಾಳ ಜನ ನನ್ನ ಬಗ್ಗೆ ನಮ್ಮಪ್ಪಗ ಹೇಳಿದರು. 
 
ನೀನಾಸಂ ಒಂದು ವರ್ಷ ತರಬೇತಿ ಮುಗಿಸಿದ ಮ್ಯಾಗ, ಆರು ವರ್ಷ ತಿರುಗಾಟದಾಗ ನಟಿಯಾಗಿ ಇದ್ದೆ. ಆಮ್ಯಾಕ ಸಾಣೇಹಳ್ಳಿ ಶಿವಸಂಚಾರ ಸೇರಿದೆ. ಅಲ್ಲಿ ನಾಲ್ಕು ವರ್ಷ ಇದ್ದೆ. ಬಾಳ ಒಳ್ಳೆ ಪಾತ್ರ ಸಿಕ್ಕವು. ‘‘ಬೆರಳ್ಗೆ ಕೊರಳ್’’ ನಾಟಕದ ದ್ರೋಣ, ‘‘ಶರೀಫ’’ ನಾಟಕದ ಗೋವಿಂದಭಟ್ಟನ ಪಾತ್ರ, ‘‘ಒಡಲಾಳ’’ದ ಸಾಕವ್ವನ ಪಾತ್ರ ಬಾಳ ಹೆಸರು ಕೊಟ್ಟವು. ಆಮ್ಯಾಲ ನಾಟಕ ಅಕಾಡೆಮಿ ಸದಸ್ಯೆ ಆದೆ. ಅಷ್ಟಕ್ಕೂ ನಾನು ಶಿವಸಂಚಾರದಾಗ ಬಿಡುವಿಲ್ಲದ ನಟಿಯಾಗಿದ್ದೆ. ಸಭೆಗಳಿಗೆ ಹೋಗಾಕ ಆಗ್ತಿದ್ದಿಲ್ಲ. ಆದರೆ ಸದಸ್ಯೆಯಾಗಿದ್ದಕ್ಕ ನನ್ನ ಪ್ರತಿಷ್ಠೆ ಹೆಚ್ಚಾಯಿತು! ನನಗ ಹೆಸರು ಬಂದಿದ್ದ ನೋಡಿ ಅಪ್ಪ ಬಾಳ ಸಂತೋಷಪಟ್ಟ. 
 
 ‘ಆ ಸಮಾಧಾನದಿಂದಲೇ ಆತ 2003ರಲ್ಲಿ ಸತ್ತ... ನಾನು ಶಿವಸಂಚಾರದ ಮೈಸೂರು ಕ್ಯಾಂಪಿನ್ಯಾಗ ಇದ್ದೆ. ಆತ ನನ್ನ ಎರಡನೇ ಅಕ್ಕನ ಮನೆ ಕೊಪ್ಪಳ ಜಿಲ್ಲೆ ಇರಕಲ್ಲಗಡದಾಗ ಸತ್ತಿದ್ದ. ಆಗ ರಾಜು ತಾಳೀಕೋಟಿ ನಾಟಕ ಕಂಪನಿ ಕೊಪ್ಪಳ ಕ್ಯಾಂಪ್ ಮಾಡಿತ್ತು. ರಾಜು ತಾಳೀಕೋಟಿ ಮತ್ತು ಪ್ರೇಮಾ ತಾಳೀಕೋಟಿ ಅವರೇ ಅಪ್ಪನ ಶವ ಊರಿಗೆ ತರಿಸಿ ಎಲ್ಲ ಕ್ರಿಯೆಗಳಲ್ಲಿ ಭಾಗವಹಿಸಿದರು. ನಿಮ್ಮ ಋಣ ಹ್ಯಾಂಗ ತೀರಿಸಲಿ ನಾನು. ಬಾಳ ಪುಣ್ಯ ಕಟ್ಟಿಕೊಂಡಿರಿ ಅಂತ ಅವರಿಗೆ ಹೇಳಿದೆ. ಸಣ್ಣಂದಿರಿದ್ದಾಗ ನಿಮ್ಮಪ್ಪನ ಕೈಯಾಗ ನಾವು ತಯಾರಾಗೇವಿ. ಆ ಋಣ ತೀರಿಸಿದಿವಿ ಅಂದರು...
 
 ‘ಶಿವಸಂಚಾರದಾಗ ನಾಲ್ಕುವರ್ಷ ಕಳೆದ ಮ್ಯಾಗ ಬೆಂಗಳೂರಿಗೆ ಬಂದೆ. ಒಂದೊಂದೇ ನಾಟಕದಾಗ ಪಾತ್ರ ಮಾಡಾಕ ಶುರುಮಾಡಿ ಈಗ ಬಿಡುವಿಲ್ಲದಷ್ಟು ಬಿಜಿ ನಟಿಯಾಗಿದ್ದೀನಿ. ಪ್ರಯೋಗರಂಗದ ನಾಗರಾಜಮೂರ್ತಿ ನನಗೆ ಇರಾಕ ಮನಿ ಕೊಟ್ಟರು. ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘದ ಆಂಜನೇಯ ಮಗಳ ರೀತಿ ಸಾಕಿದರು. ಕಲಾವಿದರ ಬಳಗದ ಕಬಡ್ಡಿ ರಾಮಚಂದ್ರ ಪೌರಾಣಿಕ ನಾಟಕ ‘ವಾಲಿ’ಯೊಳಗ ಶಬರಿ ಪಾತ್ರ ಕೊಟ್ಟರು. ರೂಪಾಂತರ ತಂಡದ ‘‘ಮೈಮನಗಳ ಸುಳಿಯಲ್ಲಿ’’, ರಂಗಸುಗ್ಗಿಯ ‘‘ಕಾಟಮಲ್ಲ’’ದ ಗಂಗೆ, ‘‘ಜೋಗತಿಕಲ್ಲು’’ನಲ್ಲಿ ಜೋಗತಿ, ರಂಗ ಪರಂಪರೆಯ ‘ಪಳೆಂಕರು’- ಅಜ್ಜಿ, ‘‘ಗಂಟೆ ಗೋವಿಂದರಾಜು’’- ತಾಯಿ, ‘‘ಸುರಪುರ ವೆಂಕಟಪ್ಪ ನಾಯಕ’’ ನಾಟಕದ ಈಶ್ವರಮ್ಮ - ಹೀಗೆ ಹವ್ಯಾಸಿ, ಪ್ರಯೋಗಶೀಲ, ಕಾಲೇಜು, ಪೌರಾಣಿಕ ಮುಂತಾದ ಯಾವುದೇ ರೀತಿಯ ನಾಟಕಗಳಲ್ಲಿ ಅಭಿನಯಿಸುವ ಬಿಜಿ ನಟಿಯಾಗಿದ್ದೇನೆ...
 
‘ಅಪ್ಪ, ಅತ್ತೆಯರು ವೃತ್ತಿರಂಗಭೂಮಿಯ ದಿಗ್ಗಜರು. ಅವರ ನಾಟಕಗಳನ್ನ ನೋಡಲಿಲ್ಲ. ಅಪ್ಪನ ಒಂದೆರಡು ನಾಟಕ ಬಿಟ್ಟರೆ ಇತರೆ ಯಾವುದೇ ನಾಟಕಗಳನ್ನ ನಾನು ನೋಡಲಿಲ್ಲ. ಆದರೂ ಯಾವುದೇ ಪಾತ್ರಗಳಲ್ಲಿ ನಟಿಸಬಲ್ಲವಳಾದೆ. ಹೇಗೆ ಸಾಧ್ಯವಾಯಿತು? ದೈವದತ್ತ ಅಂತ ನನಗೆ ಅನಿಸತೈತಿ. ಇದು ರಕ್ತಗತ ಅಂತಾರ ಕೆಲವರು. ಅಪ್ಪ ನನ್ನೊಳಗ ಇಳಿದು ಬಂದಾನಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT