ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಅಥ್ಲೀಟ್‌ಗಳ ಮೇಲೆ ನಿರೀಕ್ಷೆಯ ಭಾರ

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಧಾರವಾಡದಲ್ಲಿ ಕಳೆದ ವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಕೂಟದ 400 ಮೀಟರ್ಸ್ ಓಟದಲ್ಲಿ ಎಂ.ಜೆ.ಅಶ್ವಿನ್ ಹೊಸ ದಾಖಲೆ ಬರೆದಾಗ ವಿಶ್ವವಿದ್ಯಾಲಯದ ಕ್ರೀಡಾ ಅಧಿಕಾರಿಗಳು ಮಾತ್ರವಲ್ಲ, ಉತ್ತರ ಕರ್ನಾಟಕದ ಕ್ರೀಡಾವಲಯವೇ ಪುಳಕಗೊಂಡಿತ್ತು. ಈ ವಿಭಾಗದಲ್ಲಿ ದಶಕದ ಹಿಂದೆ ನಿರ್ಮಾಣವಾಗಿದ್ದ ದಾಖಲೆಗೆ ಹೊಸ ಒಡೆಯ ಸೃಷ್ಟಿಯಾದ ಎಂಬುದೇ ಈ ಸಂಭ್ರಮಕ್ಕೆ ಕಾರಣ.

ಸದ್ಯ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಧಾರವಾಡ ವಿವಿ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳ ಸಾಧನೆ ಕುಗ್ಗುತ್ತಿದೆ ಎಂಬ ಕೊರಗಿಗೆ ಉತ್ತರವಾಗಿತ್ತು, ಈ ದಾಖಲೆ. ಇದರ ಬೆನ್ನಲ್ಲೇ ಕೊನೆಯ ದಿನ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬಿ.ಎಸ್‌.ರಕ್ಷಿತ್ ದಾಖಲೆ ಬರೆದಾಗ ಭರವಸೆಯ ಬೆಳಕು ಇನ್ನೂ ಜೋರಾಗಿ ಹೊಳೆಯತೊಡಗಿದವು.

ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬ ಮಾತು ಇದೆಯಾದರೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ ದಾಖಲೆಗಳು ಇನ್ನೂ ಹಾಗೆಯೇ ಉಳಿದಿರುವುದು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು ಚಿಂತನೆಗೆ ಹಚ್ಚಿದೆ. ಮೂರು ಮತ್ತು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುರಿಯದೇ ಉಳಿದಿರುವ ದಾಖಲೆಗಳು ಇಲ್ಲಿನ ಕ್ರೀಡಾವಲಯವನ್ನು ಅಣಕಿಸುತ್ತಿವೆ. ಆದರೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಒಟ್ಟು ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದ ಧಾರವಾಡ ವಿವಿ 2010ರಲ್ಲಿ ‘ಪುನರ್ವಿಂಗಡಣೆ’ಯಾದ ನಂತರ ಇಲ್ಲಿಯವರೆಗೆ ಏಳು ದಾಖಲೆಗಳು ಮುರಿದಿವೆ ಎಂಬುದು ಸಮಾಧಾನಕರ ಎಂಬ ತೃಪ್ತಿ ಇಲ್ಲಿನ ಕ್ರೀಡಾ ಕ್ಷೇತ್ರಕ್ಕೆ ಇದೆ.

ಮೂಲಸೌಲಭ್ಯ ಅಭಿವೃದ್ಧಿ: ಉತ್ತರ ಕರ್ನಾಟಕದ ಕ್ರೀಡಾ ಕ್ಷೇತ್ರದಲ್ಲಿ ಈಗ ಮೂಲಸೌಲಭ್ಯಗಳ ಅಭಿವೃದ್ಧಿಯಾಗುತ್ತಿದೆ. ಬೆಳಗಾವಿಗೆ ಈ ಭಾಗದ ಮೊದಲ ಸಿಂಥೆಟಿಕ್‌ ಟ್ರ್ಯಾಕ್‌ ಸೌಲಭ್ಯ ಲಭಿಸಿ ನಾಲ್ಕು ವರ್ಷಗಳಾಗಿವೆ. ಇದರ ಬೆನ್ನಲ್ಲೇ ಗದಗ ಮತ್ತು ಧಾರವಾಡದಲ್ಲೂ ಸಿಂಥೆಟಿಕ್‌ ಟ್ರ್ಯಾಕ್‌ಗಳು ನಿರ್ಮಾಣಗೊಂಡಿವೆ.

ವಿಜಯಪುರದಲ್ಲಿ ಸಿಂಡರ್ ಟ್ರ್ಯಾಕ್‌ ಇದೆ. ಆಧುನಿಕ ಸಲಕರಣೆಗಳು ಕ್ರೀಡಾಪಟುಗಳಿಗೆ ಕೈಗೆಟಕುವ ದೂರದಲ್ಲಿ ಇವೆ. ಮಹಾನಗರಗಳಿಗೆ ತೆರಳಿ ಪರಿಣಿತರಿಂದ ಉನ್ನತ ಮಟ್ಟದ ತರಬೇತಿ ಪಡೆಯುವುದಕ್ಕೂ ಅವಕಾಶ ಇದೆ. ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿರುವ ಎಂ.ಜೆ.ಅಶ್ವಿನ್‌ ಬೆಂಗಳೂರಿನಲ್ಲಿ ಖ್ಯಾತ ಕೋಚ್ ಮಂಜುನಾಥ ಅವರ ಬಳಿ ತರಬೇತಿ ಪಡೆಯುತ್ತಿರುವುದು ಇದಕ್ಕೆ ಉದಾಹರಣೆ. ಇಂಥ ಸೌಲಭ್ಯಗಳಿದ್ದೂ ಸಾಧನೆಯ ಮಟ್ಟ ಕುಸಿಯುತ್ತಿದೆಯೇ ಎಂಬ ಪ್ರಶ್ನೆಗೆ ದಾಖಲೆ ಪುಸ್ತಕಗಳಲ್ಲಿರುವ ಮಾಹಿತಿಯೂ ಹೌದು ಎಂಬ ಉತ್ತರವನ್ನೇ ಹೇಳುತ್ತದೆ.

50, 60, 70 ಮತ್ತು 80ರ ದಶಕದಲ್ಲಿ ಅಖಿಲ ಭಾರತ ಅಂತರ ವಿವಿ ಕ್ರೀಡಾಕೂಟದಲ್ಲಿ ಪದಕಗಳನ್ನು ಬಾಚಿಕೊಂಡು ಬರುತ್ತಿದ್ದರು ಈ ಭಾಗದ ಕ್ರೀಡಾಪಟುಗಳು. ನಂತರ ಪದಕಗಳ ಸಂಖ್ಯೆ ಕಡಿಮೆಯಾಗುತ್ತ ಬಂತು. 2007–08ರಲ್ಲಿ ಸಿದ್ದಪ್ದ ಶಿವನೂರ (ಅರೆ ಮ್ಯಾರಥಾನ್–ಪ್ರಥಮ) ಮತ್ತು ಎಸ್.ಬಿ.ಅಕ್ಷಯ (ಲಾಂಗ್ ಜಂಪ್‌–ದ್ವಿತೀಯ) ಅವರು ತಂದುಕೊಟ್ಟ ಪದಕಗಳ ನಂತರ ಧಾರವಾಡ ವಿವಿಗೆ ಪದಕಗಳ ಪಟ್ಟಿಯಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.

‘ಸೌಲಭ್ಯಗಳು ಇಲ್ಲ ಎಂದು ದೂರುವ ಕಾಲ ದೂರವಾಗಿದೆ. ಈಗ ಈ ಭಾಗದಲ್ಲಿ ಸಾಕಷ್ಟು ಸೌಕರ್ಯಗಳು ಆಗುತ್ತಿವೆ. ಆದರೆ ಅವುಗಳ ಉಪಯೋಗ ಆಗುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಿದವರು ಕೂಡ ಉತ್ತಮ ಸಾಧನೆ ಮಾಡುತ್ತಿರುವಾಗ ಸೌಲಭ್ಯ ಇರುವ ನಮಗೇಕೆ ಬರ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಕ್ರೀಡಾಪಟುಗಳಿಂದಲೂ ಆಗಬೇಕು’ ಎಂದು ಬೆಳಗಾವಿ ಮೂಲದ ಅಂತರರಾಷ್ಟ್ರೀಯ ಅಥ್ಲೀಟ್‌ ಬಿ.ಜಿ.ನಾಗರಾಜ ಅವರು ಆಡುವ ಮಾತು ಇಲ್ಲಿನ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುತ್ತದೆ.

ಟ್ರ್ಯಾಕ್ ಮೇಲೆ ಪಾರಮ್ಯ: ಉತ್ತರ ಕರ್ನಾಟಕದ ಅಥ್ಲೀಟ್‌ಗಳು ಫೀಲ್ಡ್‌ಗಿಂತ ಟ್ರ್ಯಾಕ್‌ ಮೇಲೆ ಹೆಚ್ಚು ಒಲವು ಹೊಂದುತ್ತಿರುವುದು ಇತ್ತೀಚಿನ ಬೆಳವಣಿಗೆಯಲ್ಲಿ ಮಹತ್ವದ್ದು.ಅಖಿಲ ಭಾರತ ಅಂತರ ವಿವಿ ಕೂಟದ ಫೀಲ್ಡ್‌ ವಿಭಾಗದಲ್ಲಿ ಐದು ಚಿನ್ನ ಸೇರಿದಂತೆ ಒಟ್ಟು ಒಂಬತ್ತು ಪದಕಗಳನ್ನು ಗೆದ್ದ ಧಾರವಾಡದ ಸೆಲಿನ್ ಕನೆಲ್‌ (ಓಟ, ಎಸೆತ), 60–70ರ ದಶಕದಲ್ಲಿ ಪದಕಗಳನ್ನು ಬಾಚಿದ ಝಡ್‌.ಎ.ಕಿಲ್ಲೇದಾರ (ಹ್ಯಾಮರ್ ಥ್ರೋ), ಎಸ್‌.ವಿ.ಕಾಮತ್‌ (ಜಾವೆಲಿನ್‌ ಥ್ರೋ), 2006–07ರಲ್ಲಿ ಮಿಂಚಿದ ಶರತ್‌ರಾಜ್‌ (ಜಾವೆಲಿನ್ ಥ್ರೋ) ಮುಂತಾದವರನ್ನು ಬಿಟ್ಟರೆ ಉಳಿದ ಪದಕಗಳೆಲ್ಲವೂ ಟ್ರ್ಯಾಕ್‌ನಲ್ಲೇ ಬಂದಿವೆ.

ಮಹಿಳೆಯರಂತೂ ಫೀಲ್ಡ್ ವಿಭಾಗದಲ್ಲಿ ತುಂಬಾ ಹಿಂದೆ ಉಳಿದಿದ್ದಾರೆ. ಅಂತರ ಕಾಲೇಜು ಮಟ್ಟದಲ್ಲಿ ಮಿಂಚು ಹರಿಸುತ್ತಿರುವ ರಂಜನಾ ಭಾದ್ರಿ (ಶಾಟ್‌ಪಟ್‌), ಪುಷ್ಪಾ ಮಣ್ಣೂರ (ಡಿಸ್ಕಸ್ ಥ್ರೋ), ಅಕ್ಷಯಾ ಎಸ್‌.ಬಿ (ಟ್ರಿಪಲ್‌ ಜಂಪ್‌) ಮುಂತಾದವರು ಈಗ ಭರವಸೆ ಮೂಡಿಸಿದ್ದಾರೆ.

‘ಫೀಲ್ಡ್‌ ವಿಭಾಗದ ಕ್ರೀಡಾಪಟುಗಳಿಗೆ ದೈಹಿಕ ಕ್ಷಮತೆ ಹೆಚ್ಚು ಬೇಕು. ಈ ಭಾಗದಲ್ಲಿ ಇದರ ಕೊರತೆ ಎದ್ದು ಕಾಣುತ್ತದೆ. ಟ್ರ್ಯಾಕ್‌ ವಿಭಾಗದ ಕಡೆಗೆ ಹೆಚ್ಚು ಒಲವು ಹೊಂದಲು ಇದು ಕೂಡ ಕಾರಣವಿರಬಹುದು’ ಎಂದು ವಿಶ್ಲೇಷಿಸುತ್ತಾರೆ ಹಿರಿಯ ಕ್ರೀಡಾಪಟು ವಿ.ಎಸ್.ಕಲಾದಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT