ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿಗಳ ಹಣ ಕದಿಯುವವರು!

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯ ಅರಣ್ಯ ಇಲಾಖೆಯ ಅತ್ಯಂತ ಕೆಳಹಂತದ ಕೆಲಸ ಗಾರರು ದಿನಗೂಲಿ ವಾಚ್‌ಮನ್‌ಗಳು. ಸಸಿ ನಾಟಿ, ನೆಡು ತೋಪು ರಕ್ಷಣೆ, ಸಸ್ಯಪಾಲನಾ ಕ್ಷೇತ್ರ ನಿರ್ವಹಣೆ, ಕಾಳ್ಗಿಚ್ಚು ನಿಯಂತ್ರಣ, ಅರಣ್ಯ ತನಿಖಾ ಠಾಣೆ ಮುಂತಾದೆಡೆ  ಇವರು ಕಾರ್ಯನಿರ್ವಹಿಸುತ್ತಾರೆ. ಹಿರಿಯ ಅಧಿಕಾರಿಗಳ ಕಚೇರಿ, ಮನೆಗೆಲಸಗಳಲ್ಲಿಯೇ ಹಲವರು ಜೀವ ತೇಯ್ದಿದ್ದಾರೆ. ಬಡ ಕೆಲಸಗಾರರ ಸ್ಥಿತಿ ಈಗ ಸಂಕಟದಲ್ಲಿದೆ.

ನಿಯಮದಂತೆ ಒಬ್ಬ ದಿನಗೂಲಿಗೆ ಸರ್ಕಾರ ₹ 298  ನೀಡುತ್ತದೆ. ಅಂದರೆ ತಿಂಗಳಿಗೆ ಸುಮಾರು ₹ 9000 ಇವರಿಗೆ ನೀಡಬೇಕು. 10–12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿಗಳಿಗೆ ಈಗಲೂ ₹ 2500 ರಿಂದ 4000ದ ವರೆಗೆ ಮಾತ್ರ ನೀಡಲಾಗುತ್ತಿದೆ. ಹೆಚ್ಚಿನ ಹಣ ಕೇಳಿದರೆ ಕೆಲಸದಿಂದ ಕಿತ್ತೆಸೆಯಲಾಗುತ್ತದೆ.  ಮುಂದೆ ಎಂದಾದರೂ ಹೆಚ್ಚಿನ ಹಣ ಸಿಗುವ ಆಸೆಗೆ ಇಲಾಖೆಯಲ್ಲಿ ಜೀತ ಮಾಡುತ್ತಿದ್ದಾರೆ.

ನಿಯಮದ ಪ್ರಕಾರ ₹ 5000ಕ್ಕಿಂತ ಹೆಚ್ಚಿನ ಹಣವನ್ನು ಚೆಕ್ ಮೂಲಕ ನೀಡಬೇಕು.  ದಿನಗೂಲಿಗಳಿಗೆ ಚೆಕ್ ನೀಡಿ ದರೆ ಇದರ ಆಧಾರದಲ್ಲಿ ಕೆಲಸ ಕಾಯಂಗೊಳಿಸಲು ಒತ್ತಾಯಿಸುತ್ತಾರೆ ಎಂಬ ಕಾರಣಕ್ಕೆ ‘ಗುತ್ತಿಗೆ ಕೆಲಸಗಾರರು’ ಎಂದು ಕರೆಯಲಾಗಿದೆ. ಇಷ್ಟೊಂದು ವರ್ಷಗಳಿಂದ ಅರಣ್ಯ ರಕ್ಷಣೆಯಲ್ಲಿದ್ದರೂ ಇವರು ಅಧಿಕೃತ ದಾಖಲೆಯಲ್ಲಿ ಅರಣ್ಯ ಇಲಾಖೆಯ ನೌಕರರಲ್ಲ! 

ಪ್ರತಿಯೊಂದು ಅರಣ್ಯ ವಲಯದಲ್ಲಿ ಹೆಡ್‌ಮಜ್ದೂರ್ ಕೆಳಗಡೆ 10–12 ಜನ ಕೆಲಸಗಾರರು ಕಾರ್ಯ ನಿರ್ವಹಿಸುತ್ತಾ ರೆಂದು ದಾಖಲೆ ಸೃಷ್ಟಿಸಿ ಹಣ ಬಟವಾಡೆಯಾಗುತ್ತದೆ. ಹೆಡ್‌ಮಜ್ದೂರ್, ಇವರೆಲ್ಲರ ಬ್ಯಾಂಕ್ ಖಾತೆ ತೆಗೆದು ಹಣ ನೀಡಬೇಕು. ಆದರೆ ಒಬ್ಬೊಬ್ಬ ದಿನಗೂಲಿಗೆ ₹ 9000  ಲೆಕ್ಕದಲ್ಲಿ ಹೆಡ್‌ಮಜ್ದೂರ್ ಹೆಸರಿಗೆ ಬಿಲ್ ಮಾಡಿಸಿ ಕಟ್ಟಕಡೆಗೆ ₹ 3 ಸಾವಿರವೊ ₹ 4 ಸಾವಿರವೊ ನೀಡಿ ಕೂಲಿಗಳನ್ನು ಸಾಗಹಾಕಲಾಗುತ್ತದೆ. ಹಣ ನೀಡಿದ ಬಗ್ಗೆ ಯಾವ ದಾಖಲೆಯೂ ಇರುವುದಿಲ್ಲ.  ದುಡಿದವರಿಗೆ ಅರ್ಧದಷ್ಟು ಹಣವೂ ಸಿಗುತ್ತಿಲ್ಲ. ಅರಣ್ಯ ಕೆಲಸ ಮಾಡುತ್ತ ಆಕಸ್ಮಿಕವಾಗಿ ಸಾವಗೀಡಾದರೂ ಕುಟುಂಬಕ್ಕೆ ಒಂದು ರೂಪಾಯಿ ನೆರವು ದೊರೆಯುವುದಿಲ್ಲ.

ಕರ್ನಾಟಕ ಅರಣ್ಯ ಇಲಾಖೆಯನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ಬಹುಪಾಲು ಹಿರಿಯ ಅಧಿಕಾರಿಗಳು  ಕಾನೂನು ಪಂಡಿತರು, ಕಾಗದದ ಹುಳುಗಳು. ಇವರು ಕಾಡು ಸುತ್ತದೇ ಜೀವನ ಕಳೆಯುತ್ತಾರೆ.  ನಿಜವಾದ ಅರಣ್ಯಜ್ಞಾನ, ಸಂರಕ್ಷಣೆಯ ಕೆಲಸ ಮಾಡುವವರು ದಿನಗೂಲಿಗಳು. ರಾಜ್ಯದ ವಿವಿಧ ಪ್ರದೇಶದ ಅರಣ್ಯ ಸುತ್ತುವ ನನಗಂತೂ ಇವರೇ ಮೇಷ್ಟ್ರುಗಳು, ಮಾರ್ಗದರ್ಶಕರು.  ಅರಣ್ಯ ನರ್ಸರಿಯಲ್ಲಿ ವಿವಿಧ ಸಸಿ ಬೆಳೆಸಲು ಕಾಡು ಸುತ್ತಾಡಿ ಅತ್ಯುತ್ತಮ ಬೀಜ ಸಂಗ್ರಹಿಸುವ ಇವರ ಪರಿಣತಿ ರಾಜ್ಯದ ಅಮೂಲ್ಯ ಆಸ್ತಿ. ಬೀಜೋಪಚಾರ, ಸಸ್ಯೋತ್ಪಾದನೆ, ನಾಟಿ, ರಕ್ಷಣೆಯಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಅರಣ್ಯಜ್ಞಾನದ ವಿಚಾರದಲ್ಲಿ ಕೆಲವು ದಿನಗೂಲಿಗಳು ಅಸಲಿ ಐಎಫ್‌ಎಸ್‌ಗಳು!

ಕಾಡಲ್ಲಿ ಹೆಜ್ಜೆಯಿಡದ, ಭಾಷಣ ಬಿಗಿಯುತ್ತ ಕಚೇರಿ ಕಡತಗಳಲ್ಲಿ ಮುಳುಗಿದ ಅಧಿಕಾರಿಗಳನ್ನು  ಅರಣ್ಯ ಸಂರಕ್ಷಣಾಧಿಕಾರಿಗಳೆಂದು ಕರೆಯುವುದು ಮೂರ್ಖತನವಾಗುತ್ತದೆ. ನಾವು ಸೆಲ್ಯೂಟ್ ಹೊಡೆಯಬೇಕಾದದ್ದು ಚಪ್ಪಲಿ ಸವೆಸದ, ಇಂಬಳ ಕಡಿಸಿಕೊಳ್ಳದ, ಮುಳ್ಳು ಚುಚ್ಚಿಸಿಕೊಳ್ಳದ ಅಧಿಕಾರಿಗಳಿಗಲ್ಲ. ಬಿಸಿಲು ಬೆಂಕಿಯಲ್ಲಿ ದುಡಿಯುವ  ಇಂಥ ಕಾರ್ಮಿಕರಿಗೆ! ಇಲಾಖೆಯ ಶೋಷಣೆ ಮಿತಿಮೀರಿದೆ.

ಅಸಂಘಟಿತ ವಲಯದ ಇವರ ದುಡಿಮೆಗೆ ನ್ಯಾಯ ಸಲ್ಲಬೇಕಿದೆ. ಇವರ ಹಣವನ್ನು ಹರಿದು ತಿನ್ನುವ ಹದ್ದುಗಳಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ತಿಂಗಳಿಡೀ ಅರಣ್ಯ ಕಾಯಕದಲ್ಲಿರುವವರು ದಿನಕ್ಕೆ  120–125 ರೂಪಾಯಲ್ಲಿ ಬದುಕುವುದಾದರೂ ಹೇಗೆ? ಕುಟುಂಬದ ಆರೋಗ್ಯ, ಮಕ್ಕಳ ಶಿಕ್ಷಣ ಹೇಗೆ ಸಾಗಬೇಕು? ತಕ್ಷಣ ಈ ಕುರಿತಾಗಿ ಸರ್ಕಾರ ತನಿಖೆ ಆರಂಭಿಸಬೇಕು.

ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದ ಪ್ರತಿಯೊಂದು ಅರಣ್ಯ ವಲಯದಲ್ಲಿ ವರ್ಷಕ್ಕೆ ಸುಮಾರು 400 ಹೆಕ್ಟೇರ್ ನೆಡುತೋಪು ಬೆಳೆಸಲಾಗುತ್ತದೆ. ಪ್ರತಿ 25 ಹೆಕ್ಟೇರ್‌ಗೆ ಒಬ್ಬರಂತೆ ದಿನಗೂಲಿ ಕಾವಲುಗಾರರನ್ನು  ನೇಮಿಸಲಾಗುತ್ತದೆ. ಒಂದು ವಲಯದಲ್ಲಿ 16 ಜನರಿಗೆ ತಿಂಗಳಿಗೆ ₹ 1.44 ಲಕ್ಷ  ಖರ್ಚಾಗುತ್ತದೆ.

ಆದರೆ ದಾಖಲೆಯಲ್ಲಿ ಈ ಸಂಖ್ಯೆ ನಮೂದಿಸಿ  ಆರೆಂಟು ದಿನಗೂಲಿಗಳಿಂದ ಇಡೀ ವಲಯದ ಕೆಲಸ ಮಾಡಿಸುವ ಕ್ರಮವಿದೆ. ಎಲ್ಲರಿಗೂ ನಗದು ಹಣ ನೀಡಲಾಗುತ್ತದೆ. ಹೆಡ್‌ಮಜ್ದೂರ್ ಎಂಬ ಕಚೇರಿ ಸುತ್ತುವ ಬೇನಾಮಿ ವ್ಯಕ್ತಿ ಹೆಸರಿನಲ್ಲಿ ಇಡೀ ವ್ಯವಹಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತದೆ.

ಕಳೆದ ಹಲವು ದಶಕಗಳಿಂದ ಇದೇ ವ್ಯವಹಾರ ನಡೆದಿದೆ. ಅರಣ್ಯ ನರ್ಸರಿಯ ಕೆಲಸಗಾರರಿಗೆ ಈಗಲೂ ಇವರು ನೀಡುವುದು ₹ 100–125 ಮಾತ್ರ. ಕಾರ್ಮಿಕ ಕಾನೂನನ್ನು ಸರ್ಕಾರಿ ಇಲಾಖೆಯೇ ಪಾಲಿಸುತ್ತಿಲ್ಲ. 1997ರಲ್ಲಿ ಡಾ. ಎನ್.ಸಿ.ಸಕ್ಸೇನಾ ಈ ಕುರಿತು  ವರದಿ ಸಲ್ಲಿಸಿದ್ದಾರೆ.

ಬೇಸಿಗೆ ಆರಂಭವಾಗಿದೆ, ಬೆಂಕಿ ಕಾವಲಿಗೆ ದಿನಗೂಲಿಗಳ ನೇಮಕ ಅಧಿಕಾರಿಗಳಿಗೆ ಹಬ್ಬವಾಗುತ್ತದೆ. ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿದಿಲ್ಲವೇ? ದಿನಗೂಲಿ ಸಮಸ್ಯೆಯನ್ನು ವಿವರಿಸಿ ಸಕಾಲಕ್ಕೆ ನ್ಯಾಯಯುತ ಹಣ ನೀಡುವಂತೆ  ಆರು ತಿಂಗಳ ಹಿಂದೆ ಪತ್ರಿಸಿದ್ದೇನೆ. ಇವರಿಂದ ಬಂದ ಉತ್ತರ ಸ್ವಾರಸ್ಯಕರವಾಗಿದೆ. ‘ಕ್ರಿಯಾ ಯೋಜನೆಯ ಮಂಜೂರಾತಿ ನಿರೀಕ್ಷೆಯಲ್ಲಿ ಮಾನವೀಯತೆ ದೃಷ್ಟಿಯಿಂದ ದಿನಗೂಲಿಗಳಿಗೆ ಸಾಲದ ರೂಪದಲ್ಲಿ  ಮುಂಗಡ ಹಣ ನೀಡಲಾಗುತ್ತಿದೆ’ ಎಂದು  ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಉತ್ತರಿಸಿದ್ದಾರೆ! 

ಅಂದರೆ, ಬಡವರ ದಿನಗೂಲಿ ದುಡಿಮೆಗೆ ಸಾಲದ ರೂಪದಲ್ಲಿ ಮುಂಗಡ ಹಣ ನೀಡುವ ದುಃಸ್ಥಿತಿ ಇಲಾಖೆಗೆ ಬಂದಿದೆಯೇ?  ಅರಣ್ಯ ಸಚಿವರು ಉತ್ತರಿಸಬೇಕು.

ಬೆಂಗಳೂರಿನ ಅರಣ್ಯ ಭವನದಲ್ಲಿ ಒಂದು ಖುರ್ಚಿಯೂ ಖಾಲಿಯಿಲ್ಲದಂತೆ ಹಿರಿಯ ಅಧಿಕಾರಿಗಳು ಭರ್ತಿಯಾಗಿದ್ದಾರೆ. ಇವರ ಸಭೆ, ಸುತ್ತೋಲೆ, ದಾಖಲೆ, ಪ್ರವಾಸಗಳು ರಾಜ್ಯದ ಅರಣ್ಯ ಸಂರಕ್ಷಣೆಗೆ ಎಷ್ಟು ನೆರವಾಗುತ್ತಿವೆ ಎಂಬುದು  ಎಲ್ಲರಿಗೂ ತಿಳಿದಿದೆ.  ನಾಡಿನ ನಿಜವಾದ ಅರಣ್ಯ ಸಂರಕ್ಷಕರು ದಿನಗೂಲಿ ವಾಚ್‌ಮನ್‌ಗಳು. ಇವರಿಗೆ ನೀಡುವ ಸಂಪೂರ್ಣ ಹಣವನ್ನು ಬ್ಯಾಂಕ್ ಖಾತೆಗೆ ನೇರ ಜಮಾ ಮಾಡುವ ನಿರ್ಧಾರ ತುರ್ತಾಗಿ ಪ್ರಕಟಿಸಿದರೆ ಸಾವಿರಾರು ಕುಟುಂಬಗಳು ಬದುಕುತ್ತವೆ.

ದಿನಗೂಲಿ ವಾಚ್‌ಮನ್‌ಗಳಿಗೆ ಬ್ಯಾಂಕ್ ಮೂಲಕ ಹಣ ನೀಡಿದರೆ ನಾಳೆ ಅವರು ಕಾಯಂಗೊಳಿಸಲು ಇದನ್ನು ದಾಖಲೆಯಾಗಿಸಿ ಹೋರಾಡುತ್ತಾರೆಂಬುದು ಅಧಿಕಾರಿಗಳ ನಿಲುವು.

ಒಬ್ಬ ಹಿರಿಯ ಅಧಿಕಾರಿಯನ್ನು ಅರಣ್ಯ ಭವನ ಕಚೇರಿಯಲ್ಲಿ ಕೂಡ್ರಿಸಿ ಖರ್ಚುಮಾಡುವ ಹಣದಲ್ಲಿ 100 ದಿನಗೂಲಿಗಳಿಗೆ ಹಣ ನೀಡಬಹುದು.   ಲಕ್ಷಾಂತರ ವೇತನ ನೀಡಿ ಹವಾನಿಯಂತ್ರಿತ ಕೋಣೆಯಲ್ಲಿ ಬಿಳಿಯಾನೆಗಳನ್ನು ಸಾಕುತ್ತಿರುವುದರಿಂದಲೇ ಇಂದು ರಾಜ್ಯಕ್ಕೆ ಇಂಥ ಭೀಕರ ಬರ ಬಂದಿದೆ. ಬಡವರ ದುಡಿಮೆಯಿಂದ ಅಷ್ಟಿಷ್ಟಾದರೂ ಸಸಿ ಬೆಳೆದು, ಅರಣ್ಯ ಉಳಿದು ನಾಡು ಅನ್ನ ಕಾಣುತ್ತಿದೆ. ಅನ್ಯಾಯ ಸಹಿಸುವುದಕ್ಕೂ ಒಂದು ಮಿತಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT