ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ವಸಾಹತುಶಾಹಿ ಈ ಸಾಮಾಜಿಕ ಜಾಲತಾಣ

ಲೇಖಕ ರಾಜೀವ್‌ ಮಲ್ಹೋತ್ರಾ ಪ್ರತಿಪಾದನೆ
Last Updated 18 ಡಿಸೆಂಬರ್ 2016, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮಗಳು ಜಗತ್ತನ್ನು ಆಳಿದಂತೆಯೇ ಇಂದು ಜಾಗತಿಕ ಮಟ್ಟದಲ್ಲಿ ಐ.ಟಿ ಕಂಪೆನಿಗಳು ಆಳುತ್ತಿವೆ. ಯಾರನ್ನು ಅನುಸರಿಸಬೇಕು, ಯಾರನ್ನು ನಂಬಬೇಕು ಎಂಬಿತ್ಯಾದಿ ಸಂಗತಿಗಳನ್ನು ಫೇಸ್‌ಬುಕ್‌, ಮೈಕ್ರೊಸಾಫ್ಟ್‌, ವಿಕಿಪೀಡಿಯಾದಂತಹ ಅಂತರ್ಜಾಲ ತಾಣಗಳು ಮಾಡುತ್ತಿವೆ. ಗೂಗಲೀಕರಣದ ತೆಕ್ಕೆಯಲ್ಲಿ ಇಂಥ ಸಾಧ್ಯತೆಗಳು ಅಧಿಕವಾಗಿವೆ...’

–‘ಸಾಮಾಜಿಕ ಜಾಲತಾಣ ಹೊಸ ಬಗೆಯ ವಸಾಹತುಶಾಹಿ ವ್ಯವಸ್ಥೆಯಾಗಿದೆ’ ಎಂದ ಲೇಖಕ ರಾಜೀವ ಮಲ್ಹೋತ್ರಾ ತಮ್ಮ ಈ ಅಭಿಪ್ರಾಯಕ್ಕೆ ಕೊಟ್ಟ ಕಾರಣಗಳು ಇವು.

‘ಭಾರತೀಯ ನಾಗರಿಕತೆಯ ಪುನರುತ್ಥಾನ’ ಎಂಬ ವಿಷಯದ ಕುರಿತು ಟಿ.ವಿ. ಮೋಹನದಾಸ್ ಪೈ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

‘ಚೀನಾದಲ್ಲಿ ಇಂಥ ಯಾವುದೇ ತಾಣಗಳಿಗೂ ಅವಕಾಶವಿಲ್ಲ. ತನ್ನ ಬಳಕೆಗಾಗಿ ಅದು ಭಿನ್ನ ಜಾಲತಾಣಗಳನ್ನು ಸೃಷ್ಟಿಸಿಕೊಂಡಿದೆ. ಹೀಗಾಗಿ ಆ ದೇಶದ ಮಾಹಿತಿ ಸೋರಿಕೆಯಾಗುವುದಿಲ್ಲ. ಅಂದರೆ, ಅಮೆರಿಕದ ಚುನಾವಣಾ ರಹಸ್ಯದ ಮಾಹಿತಿ ರಷ್ಯಾಗೆ ದೊರೆತಂತೆ ಎಂದಿಗೂ ಚೀನಾ ವಿಷಯದಲ್ಲಿ ಆಗದು. ಆದರೆ ಭಾರತದಲ್ಲಿ ಸಚಿವರು ಇಂಥ ತಾಣಗಳ ಮೂಲಕ ಅಮೂಲ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಹೇಳಿದರು.

‘ನಾನು, ನನ್ನ ಮನೆ, ನನ್ನ ಊರು, ನನ್ನ ಜಾತಿ ಈ ಸಂಗತಿಗಳು ಬೆಂಬಿಡದ ಭೂತದಂತೆ ಭಾರತೀಯರನ್ನು ಕಾಡುತ್ತಿವೆ. ಇಂಥ ವ್ಯವಸ್ಥೆ ಚೀನಾದಲ್ಲಿ ಇಲ್ಲ. ಅಲ್ಲಿ ದೇಶ ಎಂದು ಬಂದಾಗ ಜನರು ತಮ್ಮ ಸ್ವಾರ್ಥವನ್ನು ಪಕ್ಕಕ್ಕೆ ಇಡುತ್ತಾರೆ’ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
‘ಚೀನಾದಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಬುದ್ಧಿಜೀವಿಗಳೂ ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕರ ಪಾತ್ರವೂ ಮಹತ್ವದ್ದು. ಭಾರತದಲ್ಲಿ ಬುದ್ಧಿಜೀವಿಗಳು ಎನ್ನಿಸಿಕೊಂಡವರು ಇಬ್ಬಗೆಯ ನೀತಿಯನ್ನು ಅನುಸರಿಸಿ ದೇಶದ ಏಕತೆಗೆ ಧಕ್ಕೆ ತರುತ್ತಾರೆ. ದೆಹಲಿಯ ಜೆಎನ್‌ಯುನಲ್ಲಿ ಯಾರೋ ಒಬ್ಬರು ಹುಟ್ಟಿಕೊಂಡು ಇಲ್ಲಿನ ವ್ಯವಸ್ಥೆಯ ವಿರುದ್ಧವಾಗಿ ಮಾತನಾಡುತ್ತಾರೆ. ಇಂತಹ ಸಂಗತಿಗಳೇ ದೇಶದ ಅಭಿವೃದ್ಧಿಗೆ ಮಾರಕ’ ಎಂದು ಅಭಿಪ್ರಾಯಪಟ್ಟರು

‘ಚೀನಾದಲ್ಲಿ ಮಾಧ್ಯಮವೂ ಸೇರಿದಂತೆ ಎಲ್ಲವೂ ಸರ್ಕಾರದ ನಿಯಂತ್ರಣದಲ್ಲಿದೆ. ಆದರೆ, ಇಲ್ಲಿನ ಮಾಧ್ಯಮಗಳು ಸರ್ಕಾರದ ಪರವಾಗಿ ಬರೆದರೆ ಬಲಪಂಥೀಯ ಎಂದು, ವಿರುದ್ಧವಾಗಿ ಬರೆದರೆ ಎಡಪಂಥೀಯ ಎಂದುಕೊಳ್ಳುವವರೇ ಹೆಚ್ಚು’ ಎಂದೂ ಅವರು ಹೇಳಿದರು.

‘ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೆಲ, ನೀರು, ಆಹಾರಕ್ಕೂ ತತ್ವಾರ ಎದುರಾಗಲಿದೆ. ಹೀಗಾಗಿ ಚೀನಾ ಈಗಿಂದಲೇ ತನ್ನ ವಸಾಹತನ್ನು ಆಫ್ರಿಕಾದಲ್ಲಿ ಆರಂಭಿಸಲು ಶುರುಮಾಡಿದೆ. ಈ ನಡುವೆ ಜಗತ್ತಿನಲ್ಲಿ ಸ್ಥಳೀಯತೆ ಹೆಚ್ಚಾಗುತ್ತಿದೆ. ಅಮೆರಿಕ, ಆಫ್ರಿಕಾ, ಫ್ರಾನ್ಸ್, ಜರ್ಮನಿ ಮೂಲಗಳು ಹುಟ್ಟಿಕೊಂಡಿವೆ. ಈ ಹಂತದಲ್ಲಿ ಭಾರತ ತನ್ನ ಮೂಲವನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.

‘ಹಿಂದೂ ಪರಂಪರೆಯೊಂದಿಗೆ ಹಾಸುಹೊಕ್ಕಾಗಿ ಬಂದಿರುವ ಸಂಪ್ರದಾಯಗಳು, ಶಾಸ್ತ್ರಗಳು ಇತ್ಯಾದಿ ಆಚರಣೆಗಳು ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮುಂದಿವೆ. ಇದಕ್ಕೆ ಕಾರಣ ಈ ನೆಲದಲ್ಲಿ ಆರಂಭವಾದ ಸಿಂಧೂನದಿಯ ನಾಗರಿಕತೆ. ಸಿಂಧೂನದಿಯ ನಾಗರಿಕತೆಯೊಂದಿಗೆ ಹಿಂದೂ ಸಂಪ್ರದಾಯ ಉಳಿದುಕೊಂಡು ಬರಲು ಬೇರುಮಟ್ಟದಲ್ಲಿ ಅದು ಗಟ್ಟಿಯಾಗಿರುವುದೇ ಕಾರಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT