ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರ್ಯಟನೆ ಮಾಡಿಸುವ ಸಂಗ್ರಹ

ಹವ್ಯಾಸದ ಹಾದಿ
Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ದೇಶ ಸುತ್ತು; ಕೋಶ ಓದು’ ಎಂಬುದು ಜನಪ್ರಿಯ ಗಾದೆ. ಇದಕ್ಕೆ ವಿರುದ್ಧ ಎಂಬಂತೆ, ದೇಶ ಸುತ್ತಲಿಲ್ಲ, ಕೋಶ ಓದಲಿಲ್ಲ. ಆದರೂ, ವಿಶ್ವದ ಯಾವುದೋ ಮೂಲೆಯಲ್ಲಿರುವ ‘ಎ ಲ್ಯಾಂಡ್’ನಂತಹ ಪುಟ್ಟ ದ್ವೀಪ, ಅಲ್ಲಿನ ಪರಂಪರೆ, ಸಂಸ್ಕೃತಿಯ ಅರಿವುಂಟು ಇವರಿಗೆ. ವಿಶ್ವ ಪರಂಪರೆ ತಾಣಗಳನ್ನು ಪರಿಚಯಿಸುವ ಏರೊಗ್ರಾಮ್, ಅಂಚೆ ಲಕೋಟೆಗಳು ಇವರ ಮನೆ ವಿಳಾಸವನ್ನು ಹುಡುಕಿಕೊಂಡು ಬರುತ್ತವೆ.

ಈ ಮೂಲಕ 700ಕ್ಕೂ ಹೆಚ್ಚು ವಿಶ್ವ ಪಾರಂಪರಿಕ ತಾಣಗಳ ಚಿತ್ರಗಳು, 140 ದೇಶಗಳ ಅಂಚೆ ಕಾರ್ಡ್‌ಗಳು, 102 ದೇಶಗಳ ಅಂಚೆ ಲಕೋಟೆ/ಕವರ್‌ಗಳ ಸಂಗ್ರಹವು ಉಡುಪಿಯ ನಾಗೇಂದ್ರ ಅಮ್ಮುಂಜೆ ಅವರಿಗೆ ವಿಶ್ವಪರ್ಯಟನೆ ಮಾಡಿದ ಹಾಗೂ ಗ್ರಂಥಾಧ್ಯಯನದ ಜ್ಞಾನವನ್ನು ಒದಗಿಸಿವೆ. ತಂತ್ರಜ್ಞಾನದ ಫಲವಾಗಿ ಅಂಚೆಯಣ್ಣನ ಕಾರ್ಯವನ್ನು ಇ ಮೇಲ್, ಎಸ್ಎಂಎಸ್, ವಾಟ್ಸ್‌ಆ್ಯಪ್, ಫೇಸ್‌ಬುಕ್‌, ಟ್ವಿಟರ್ ಇತ್ಯಾದಿಗಳು ನಿರ್ವಹಿಸುತ್ತಿವೆ. ನಗದುರಹಿತ ವಹಿವಾಟು ಎನ್ನುವಂತೆ ಕಾಗದರಹಿತ ಸಂದೇಶರವಾನೆ ಕೆಲಸವಾಗುತ್ತಿದೆ.

ಇಂಥ ದಿನಗಳಲ್ಲಿ ಅಮ್ಮುಂಜೆ ಅವರನ್ನು ಹುಡುಕಿಕೊಂಡು ಬರುವ ಅಂಚೆ ಚೀಟಿಗಳು ಜಗತ್ತಿನ ಮೂಲೆ ಮೂಲೆಯನ್ನು ಪರಿಚಯಿಸಿವೆ. ಜವಳಿ ಕ್ಷೇತ್ರದಲ್ಲಿ ತೊಡಗಿರುವ ಅವರನ್ನು ಬಾಲ್ಯದಲ್ಲಿ ಸೆಳೆದದ್ದು ವಿಶಿಷ್ಟ ಬಗೆಯ ಅಂಚೆ ಚೀಟಿ ಹಾಗೂ ಲಕೋಟೆಗಳ ಮೇಲಿನ ಚಿತ್ರಗಳು. ಕುತೂಹಲ ತಣಿಯದ ಅವರು ವಿಶ್ವದೆಲ್ಲೆಡೆಯ ರಾಷ್ಟ್ರಗಳ ಅಂಚೆ ಚೀಟಿಗಳು ಹಾಗೂ ಏರೊಗ್ರಾಮ್‌ಗಳ ಸಂಗ್ರಹಕ್ಕೆ ತೊಡಗಿದರು. ಕ್ರಮೇಣ ಅವುಗಳ ಪ್ರದರ್ಶನಗಳನ್ನೂ ಮಾಡಿದರು. ರಾಷ್ಟ್ರಮಟ್ಟದಲ್ಲಿ ನಡೆದ ವಿಶಿಷ್ಟ ಸಂಗ್ರಹಗಳ ಪ್ರದರ್ಶನದಲ್ಲಿ ಬಹುಮಾನಗಳನ್ನು ಗಳಿಸಿದರು. ಬಳಿಕ, 2013ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ‘ವಿಶ್ವ ತಾಪಮಾನ’ ವಿಷಯ ಕುರಿತ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಇವರ ಬಳಿ ಇದ್ದ ಸಂಗ್ರಹಗಳಿಗೆ ಪದಕವೂ ಲಭಿಸಿದೆ.

ಅಂಚೆ ಲಕೋಟೆ–ಏರೊಗ್ರಾಮ್
ಉಡುಪಿಯ ಅಮ್ಮುಂಜೆ ಅವರ ಮನೆ ವಿಳಾಸ ಹುಡುಕಿಕೊಂಡು 140 ದೇಶಗಳ ಅಂಚೆಚೀಟಿಗಳು ಬಂದು ತಲುಪಿವೆ. 102 ದೇಶಗಳ ಅಂಚೆ ಕವರ್‌ಗಳು ಬಂದಿದ್ದು, ಅವೆಲ್ಲವನ್ನೂ ಜೋಪಾನವಾಗಿ ಸಂಗ್ರಹಿಸಿಟ್ಟಿದ್ದಾರೆ. ಅವರದ್ದೇ ಆದ ಬ್ಲಾಗ್‌ನಲ್ಲಿ ಅಚ್ಚುಕಟ್ಟಾಗಿ ಹಾಕಿದ್ದಾರೆ.

ಪ್ರಸ್ತುತ ಭಾರತದಲ್ಲಿ ಬಳಕೆಯಲ್ಲಿರುವ ಇನ್‌ಲ್ಯಾಂಡ್ ಪತ್ರದ ಮಾದರಿಯಲ್ಲಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಲ್ಲಿದ್ದ ಪತ್ರಗಳೇ ಏರೊಗ್ರಾಮ್. ಪತ್ರ ಬರೆದು ಕವರ್‌ನಲ್ಲಿ ಇರಿಸಿ ಪೋಸ್ಟ್ ಮಾಡಿದರೆ ವೆಚ್ಚ ಹೆಚ್ಚಾಗುತ್ತಿತ್ತು. ಅದನ್ನು ತಗ್ಗಿಸಲು ಈ ಏರೊಗ್ರಾಮ್‌ಗಳನ್ನು ಬಳಕೆಗೆ ತರಲಾಗಿತ್ತು. ಭಾರತದಲ್ಲಿ 1947ರ ಸ್ವಾತಂತ್ರ್ಯನಂತರ ‘ಏರ್ ಲೆಟರ್’ ಬಳಕೆಗೆ ಬಂದವು. ನಂತರ 1970-1985ರಲ್ಲಿ ಏರೊಗ್ರಾಮ್ ಬಳಕೆಗೆ ಬಂತು. ಇವುಗಳು ವಿಭಿನ್ನ ಮಾದರಿಯಲ್ಲಿದ್ದು, ವಿಭಿನ್ನ ಚಿತ್ರಗಳನ್ನೊಳಗೊಂಡಿದ್ದು, ಅವುಗಳ ಸಂಗ್ರಹ ಹೆಚ್ಚು ಆಸಕ್ತಿಕರವಾಗಿವೆ.

ವಿಶ್ವ ಪಾರಂಪರಿಕ ತಾಣಗಳ ಚಿತ್ರಗಳು
ಪ್ರಪಂಚದಾದ್ಯಂತ 1052 ವಿಶ್ವ ಪಾರಂಪರಿಕ ತಾಣಗಳಿದ್ದು, ಅವುಗಳಲ್ಲಿ 700ಕ್ಕೂ ಹೆಚ್ಚು ತಾಣಗಳ ಚಿತ್ರಗಳನ್ನೊಳಗೊಂಡ ಅಂಚೆಚೀಟಿ/ಲಕೋಟೆಗಳನ್ನು ಸಂಗ್ರಹಿಸಿದ್ದಾರೆ ಇವರು. ಆಫ್ರಿಕಾ, ದಕ್ಷಿಣ ಆಫ್ರಿಕಾಗಳ ಪುಟ್ಟ ಪುಟ್ಟ ದ್ವೀಪಗಳು ಸೇರಿದಂತೆ 45 ದೇಶಗಳಿಂದ ಏರೊಗ್ರಾಮ್‌ಗಳು, ಅಂಚೆಚೀಟಿ/ಲಕೋಟೆಗಳು ಇವರ ವಿಳಾಸ ಉಡುಕಿ ಬಂದಿವೆ.

ನಾಣ್ಯ ಸಂಗ್ರಹ:ಹವ್ಯಾಸದ ಹಾದಿಯನ್ನು ನಾಣ್ಯಗಳ ಸಂಗ್ರಹಕ್ಕೂ ವಿಸ್ತರಿಸಿರುವ ಅವರ ಸಂಗ್ರಹದಲ್ಲಿ ವೃತ್ತಾಕಾರ, ಚೌಕಾಕಾರ, ಗಾಲಿಯಾಕಾರದ ನಾಣ್ಯಗಳಿವೆ. ಎರಡು ಬಗೆಯ ಲೋಹಗಳಿಂದ (ಬೈ ಮೆಟಲಿಕ್) ತಯಾರಾದ ನಾಣ್ಯಗಳ (ಉದಾ: ಪ್ರಸ್ತುತ ಚಲಾವಣೆಯಲ್ಲಿರುವ ₹10ರ ನಾಣ್ಯ) ಸಂಗ್ರಹ ಮಾಡಿರುವುದು ವಿಶೇಷ. ಎರಡು ಬಗೆಯ ಲೋಹ ಮಿಶ್ರಣದ ಇಂಥ ನಾಣ್ಯಗಳನ್ನು ಇಟಲಿಯಲ್ಲಿ ಪ್ರಥಮ ಬಾರಿಗೆ 1985ರಲ್ಲಿ ಟಂಕಿಸಿ ಚಲಾವಣೆಗೆ ತರಲಾಗಿದೆ.

ಸಂತಸ ತರುವ ಕ್ಷಣ: ‘ಯೂರೋಪ್‌ನ ಪೋಸ್ಟ್‌ಗಳು ಸುಲಭವಾಗಿ ಬರುತ್ತವೆ. ಅದೆಲ್ಲೋ ಇರುವ ಆಫ್ರಿಕಾದ ಪಾಪನ್ಯುಗಿನಿಯಂಥ ಪುಟ್ಟ ದ್ವೀಪದಿಂದ ಬರುವ ಅಂಚೆ ಚೀಟಿಗಳು ಮನಸ್ಸಿಗೆ ಹೆಚ್ಚು ಸಂತಸ ನೀಡಿ ಆಪ್ತ ಎನಿಸುತ್ತವೆ. ಅಂಚೆ ಚೀಟಿ, ಏರೊಗ್ರಾಮ್, ನಾಣ್ಯಗಳ ಸಂಗ್ರಹದಲ್ಲಿ ತೊಡಗಿದ್ದೇನೆ. ಇದರಿಂದ ದೇಶಗಳ ಪರಿಚಯ ಹಾಗೂ ಜ್ಞಾನವೃದ್ಧಿಗೆ ನೆರವಾಗಿದೆ. ನೂರಾರು ದೇಶಗಳ ಸಂಗ್ರಹ ನನ್ನ ಬಳಿ ಇರುವುದು ವಿಶ್ವ ಸುತ್ತಿದ ಅನುಭವ ನೀಡಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನಾಗೇಂದ್ರ ಅಮ್ಮುಂಜೆ. ಇವರ ಸಂಗ್ರಹವನ್ನು www.nagi7.blogspot.in ನಲ್ಲಿ ನೋಡಬಹುದು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT