ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳು ಹಾಯುವ ಹರಕೆ

ಅಗಳಕೇರಾ ಕಾರ್ತಿಕೋತ್ಸವ ಡಿ. 24–25
Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೊಪ್ಪಳ ತಾಲ್ಲೂಕಿನ ಅಗಳಕೇರಾ ಗ್ರಾಮದಲ್ಲಿ   ಈಗ ಮುಳ್ಳು ಹಾಯುವ ರೋಮಾಂಚಕಾರಿ ದೃಶ್ಯ ಕಾಣಸಿಗಲಿದೆ. ಇದೇ 24 ಮತ್ತು 25ರಂದು ನಡೆಯಲಿರುವ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ತ ಇಂಥ ಸಂಪ್ರದಾಯ ನಡೆಯಲಿದೆ.

ಆಂಜನೇಯನ ಭಕ್ತರು ತಮ್ಮ ಸಂಕಲ್ಪ ಸಿದ್ಧಿಗಾಗಿ ಮುಳ್ಳಿನ ಮೇಲೆ ನಡೆಯುತ್ತಾರೆ. ಪ್ರತಿ ವರ್ಷ ಎಳ್ಳ ಅಮವಾಸ್ಯೆಯ ಮುಂಚೆ ಬರುವ ಶನಿವಾರ ಮತ್ತು ಭಾನುವಾರಗಳಂದು ಈ ಕಾರ್ತಿಕೋತ್ಸವ ನಡೆಯುತ್ತದೆ. ಭಾನುವಾರ ಗ್ರಾಮದ ಹೊರವಲಯದ ಬೆಟ್ಟದಿಂದ ಕಾರಿ ಮುಳ್ಳಿನ ಗಿಡಗಳನ್ನು ತರಲಾಗುತ್ತದೆ. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮುಳ್ಳನ್ನು ಗುಡ್ಡೆ ಹಾಕಲಾಗುತ್ತದೆ. ಡೊಳ್ಳು ಕುಣಿತದ ಜೊತೆ ದೇವರನ್ನು ಹೊತ್ತ ಪಲ್ಲಕ್ಕಿ ಬರುತ್ತದೆ. ಆಗ ಹರಕೆ ಹೊತ್ತ ಭಕ್ತರು ಯಾವುದೇ ಅಳುಕಿಲ್ಲದೇ, ತಮಗೆ ಎದುರಾಗಬಹುದಾದ ಅಪಾಯವನ್ನೂ ಲೆಕ್ಕಿಸದೇ ಮುಳ್ಳಿನ ಮೇಲೆ ನಡೆದಾಡುತ್ತಾರೆ.

ಮುಳ್ಳಿನ ಮೇಲೆ ಹಾಯುವ ಭಕ್ತರಿಗೆ ಪೂಜಾರಿ ಭಸ್ಮ ಮತ್ತು ಕುಂಕುಮ ಹಚ್ಚುತ್ತಾರೆ. ಹೀಗೆ ಮುಳ್ಳಿನ ಹರಕೆ ತೀರಿಸಿರುವ ಭಕ್ತರ ಮನೆಯಲ್ಲಿ ಇರುವ ಕಂಬಳಿಯ ಮೇಲೆ ಮಲಗಿದರೆ ಅವರಿಗೆ ಯಾವುದೇ ನೋವು ಕಾಣಿಸುವುದಿಲ್ಲ ಎನ್ನುವ  ನಂಬಿಕೆ ಇಲ್ಲಿದೆ. ಮುಳ್ಳಿನ ಹರಕೆ ಜೊತೆ ಅಗ್ನಿಕುಂಡ ಹಾಯುವುದೂ ಇಲ್ಲಿ ನಡೆಯುತ್ತದೆ. ಗ್ರಾಮದ ಹೊರವಲಯದಲ್ಲಿ ಪೂಜಾರರು ಗಂಗೆ ಸ್ನಾನ ಮಾಡಿಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಮುಳ್ಳು ಪಲ್ಲಕ್ಕಿ ಹೊತ್ತ ಭಕ್ತರು ಅಗ್ನಿಕುಂಡ ಹಾಯ್ದು ಹೋಗುತ್ತಾರೆ. ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಮುಳ್ಳೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಅಗಳಕೇರಾ ಗ್ರಾಮದಿಂದ ಕೇವಲ 20 ಕಿ.ಮೀ. ದೂರದಲ್ಲಿ ಆಂಜನೇಯ ಹುಟ್ಟಿದ ಸ್ಥಳ ಎನ್ನಲಾದ ‘ಅಂಜನಾದ್ರಿ ಬೆಟ್ಟ’ ಇದೆ. ಆದ್ದರಿಂದಲೇ ಈ ಸ್ಥಳವನ್ನು ‘ಹನುಮ ಉದಯಯಿಸಿದ ನಾಡು’ ಎಂದೂ ಹೇಳುತ್ತಾರೆ. ಈ ಗ್ರಾಮಕ್ಕೆ, ಕೊಪ್ಪಳ, ಗಂಗಾವತಿ, ಹೊಸಪೇಟೆಯಿಂದ ಸಾರಿಗೆ ಸೌಕರ್ಯ ಇದೆ.

ಈ ಗ್ರಾಮದ ಸಮೀಪದಲ್ಲೇ ತುಂಗಭದ್ರ ನದಿ ಹರಿಯುತ್ತದೆ. ಅಲ್ಲಿ ರಾಂಪುರ ಎಂಬ ಗ್ರಾಮವಿತ್ತು. ತುಂಗಭದ್ರ ಜಲಾಶಯದ ನಿರ್ಮಾಣಕ್ಕಾಗಿ  ರಾಂಪುರ ಮುಳುಗಡೆಯಾಯಿತು. ಆಗ ಅಲ್ಲಿಯ ನಿರಾಶ್ರಿತರು ಅಗಳಕೇರಾ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಆಂಜನೇಯ ಮತ್ತು ದುರ್ಗಾದೇವಿ ದೇವಸ್ಥಾನ ನಿರ್ಮಿಸಲಾಯಿತು.ತಮಗೆ ನೆಲೆ ನೀಡಿದ ಈ ಆಂಜನೇಯನನ್ನು ನೆನೆಯುವ ಸಂಬಂಧ ಇಂಥದ್ದೊಂದು ಕಾರ್ತಿಕೋತ್ಸವವನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT