ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಶಿಲ್ಪಕ್ಕೆ ಹೊಸ ಭಾಷ್ಯ ಬರೆದ ಕಲಾಕೇಂದ್ರ

Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಜಾತ್ರೆ, ಉತ್ಸವ, ಊರ ಹಬ್ಬಗಳಲ್ಲಿ ನೋಡಿದೊಡನೆಯೇ ಮನಸೂರೆಗೊಳಿಸುವ ಅದ್ಭುತ  ಶಕ್ತಿ ಇರುವುದು ರಥಕ್ಕೆ. ಜನಮನದಲ್ಲಿ ಧಾರ್ಮಿಕವಾಗಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿರುವ ರಥ ಕಲಾತ್ಮಕ ನೋಟದಿಂದಲೂ ಗಮನ ಸೆಳೆಯುವಂಥದ್ದು. ಆ ರಥಗಳ ತಯಾರಿಕೆಯಲ್ಲಿ ಕುಶಲ ಕರ್ಮಿಗಳ, ಕಲಾವಿದರ ಕೈಚಳಕ ಅಡಗಿರುತ್ತದೆ. ಅಂತಹ ಕಲಾವಿದರಲ್ಲಿ ಬಸವರಾಜ ಎಸ್‌. ಬಡಿಗೇರ್‌ ಅವರ ಹೆಸರೂ ಇದೆ.

ಜಾತ್ರೆ–ಉತ್ಸವಗಳಿಗೆ ರಥಗಳನ್ನು ನಿರ್ಮಾಣ ಮಾಡಿಕೊಡುವಲ್ಲಿ ಗಮನಾರ್ಹ ಕೆಲಸ ಮಾಡುತ್ತ ಬಂದ ಹಿರಿಮೆ ಎಸ್‌.ಎಂ. ಬಡಿಗೇರ್‌ ರಥಶಿಲ್ಪ (ಕಾಷ್ಠಶಿಲ್ಪ) ತರಬೇತಿ ಕೇಂದ್ರದ್ದು. ಒಂದು ಉದ್ಯಮವಾಗಿ ಅಲ್ಲದೇ, ಕಲಾಪ್ರೀತಿಯಿಂದ 1993ರಲ್ಲಿ ಸ್ಥಾಪನೆಯಾದ ಎಸ್‌.ಎಂ.ಬಡಿಗೇರ್‌ ರಥಶಿಲ್ಪ ತರಬೇತಿ ಕೇಂದ್ರಕ್ಕೆ ಈಗ 23ರ ಹರೆಯ.

ಅಳಿವಿನ ಅಂಚಿನಲ್ಲಿರುವ ಈ ಅಪರೂಪದ ಕಲೆಯನ್ನು ಮುಂದಿನ ಪೀಳಿಗೆಯವರಿಗೂ ದಾಟಿಸುವ ತಮ್ಮ ತಂದೆ, ರಥಶಿಲ್ಪಿ ಶಂಕರಪ್ಪ ಎಸ್‌. ಬಡಿಗೇರ್‌ ಅವರ ಆಶಯದಂತೆ ಅವರ ಮಗ ಬಸವರಾಜ ಎಸ್‌. ಬಡಿಗೇರ್‌ ಈ ತರಬೇತಿ ಕೇಂದ್ರವನ್ನು ಆರಂಭಿಸಿದರು. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಊಟ, ವಸತಿ ಎಲ್ಲವೂ ಉಚಿತ. ಇಲ್ಲಿಯವರೆಗೆ 40ಕ್ಕೂ ಹೆಚ್ಚು ರಥಶಿಲ್ಪಿಗಳನ್ನು ಸಂಸ್ಥೆ ತಯಾರು ಮಾಡಿದೆ.

ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರುತ್ತಾರೆ.  ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಸುಳ್ಳ ಮೂಲದವರಾದ ಬಸವರಾಜ ಬಡಿಗೇರ್‌ ಅವರಿಗೆ ರಥಶಿಲ್ಪ ಕಲೆ ವಂಶಪಾರಂಪರ್ಯವಾಗಿ ಒಲಿದು ಬಂದಿದೆ. ಅವರ ತಂದೆ ಶಂಕರಪ್ಪ ಎಸ್‌. ಬಡಿಗೇರ್‌, ತಾತ ಮಳಿಯಪ್ಪ, ಮುತ್ತಾತ ಬಸಪ್ಪ... ಹೀಗೆ ಎಲ್ಲರೂ ರಥಶಿಲ್ಪ ಕಲೆಯಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಾಕಷ್ಟು ಹೆಸರು ಮಾಡಿದವರು.

ಗುಳೇದಗುಡ್ಡದ ಶ್ರೀ ಹಾದಿ ಬಸವೇಶ್ವರ ರಥ (1942), ಕೆಲವಡಿ ರಂಗನಾಥಸ್ವಾಮಿ ರಥ, ಇಟಗಿ ಮಹೇಶ್ವರಸ್ವಾಮಿ ರಥ, ತಾಳಿಕೋಟೆ ಕಾಸ್ಕತೇಶ್ವರಸ್ವಾಮಿ ರಥ, ಕುಳಗೇರಿ ಬೀರಪ್ಪಸ್ವಾಮಿ ರಥ, ಶ್ರೀಶೈಲದ ಮಲ್ಲಿಕಾರ್ಜುನ ದೇವರರಥ (1969), ಹಂಪಿ ವಿರೂಪಾಕ್ಷೇಶ್ವರ ರಥ, ಸಾಲಿಗ್ರಾಮ ಯೋಗಾನರಸಿಂಹಸ್ವಾಮಿ ರಥ, ಇಂಚಲ ಶಿವಯೋಗಿಗಳ ರಥ, ಅನಿಗೋಳ ರಾಮಲಿಂಗೇಶ್ವರ ರಥ, ಗುಬ್ಬಿ ಚನ್ನಬಸವೇಶ್ವರ ಜೋಡಿರಥ, ಬೆಂಗಳೂರಿನ ರಾಜಾಜಿನಗರದ ಮಲೆಮಹದೇಶ್ವರ ಸ್ವಾಮಿ ರಥ, ದೊಡ್ಡಬಾಣಸವಾಡಿಯ ಆಂಜನೇಯಸ್ವಾಮಿ ರಥ ಮತ್ತು ಹಲಸೂರಿನ ಸೋಮೇಶ್ವರಸ್ವಾಮಿ ರಥ ಹೀಗೆ 65ಕ್ಕೂ ಹೆಚ್ಚು ರಥಗಳನ್ನು ನಿರ್ಮಿಸಿದ ಹೆಗ್ಗಳಿಕೆ ಬಡಿಗೇರ್‌ ಅವರ ಕುಟುಂಬಕ್ಕಿದೆ.

‘ಕಲೆ ತಪಸ್ಸಿದ್ದಂತೆ. ಅದು ಎಲ್ಲರಿಗೂ ಒಲಿಯುವುದಿಲ್ಲ. ಹೀಗೆ ಒಲಿದ ಕಲೆಯನ್ನು ಇತರರಿಗೆ ಹಂಚಿದಾಗ ಸಿಗುವ ಸಂತೋಷ ಅಪಾರ. ಇದು ಅತ್ಯಂತ ಸೂಕ್ಷ್ಮವಾದ ಕೆಲಸವಾಗಿದ್ದರಿಂದ ಕಲಾವಿದ ಹೆಚ್ಚು ಸೂಕ್ಷ್ಮಗ್ರಾಹಿಯಾಗಿರಬೇಕು. ನಮ್ಮ ಭಾವನೆಗಳೂ ಕಲಾಕೃತಿಗಳ ಮೇಲೆ ಪರಿಣಾಮ ಬೀರುವುದರಿಂದ ಮನಸ್ಸು  ಪ್ರಶಾಂತವಾಗಿರಬೇಕು. ಸದಾ ನಗುಮುಖ ಹೊಂದಿರಬೇಕು. ಶ್ರದ್ಧೆ ಇದ್ದರೆ ಮಾತ್ರವೇ ಉತ್ತಮ ಶಿಲ್ಪಿಯಾಗಲು ಸಾಧ್ಯ’ ಎನ್ನುತ್ತಾರೆ ಬಸವರಾಜ ಬಡಿಗೇರ್‌.

‘ತಂದೆ ಶಂಕರಪ್ಪನವರೇ ನನಗೆ ಗುರುಗಳಾಗಿದ್ದರು. ನಮ್ಮ ತಂದೆ–ತಾಯಿಗೆ ನಾವು ನಾಲ್ವರು ಮಕ್ಕಳು. ತಂದೆಯಾಗಿ ಪ್ರೀತಿಸುತ್ತ, ಅಂತಃಕರಣದಲ್ಲಿ ಸ್ನೇಹಿತನಂತೆ ಬೆಳೆಸಿದರು. ರಥಶಿಲ್ಪ ಕೆಲಸದಲ್ಲಿ ಅವರು ನನಗೆ ನೀಡಿದ ಮಾರ್ಗದರ್ಶನ, ಕಲೆಯ ಬಗೆಗಿನ ವಿಚಾರಗಳು ನನ್ನ ಯಶಸ್ವಿ ಜೀವನಕ್ಕೂ ಕಾರಣ’ ಎನ್ನುತ್ತಾರೆ ಅವರು.

‘ವಿದ್ಯಾಭ್ಯಾಸ ತಲೆಗೆ ಹತ್ತದ ಕಾರಣ ಹನ್ನೆರಡನೇ ವಯಸ್ಸಿನಲ್ಲಿಯೇ ತಂದೆಯೊಂದಿಗೆ ರಥಶಿಲ್ಪ ಕೆಲಸ ಆರಂಭಿಸಿದೆ. ಕಡಬಲಕಟ್ಟೆ ಬಸವೇಶ್ವರ ರಥ ತಯಾರಿಕೆ ನನ್ನ ಮೊದಲ ಕೆಲಸ. ಒಂದು ವರ್ಷ ಕಾಲ ಗಜೇಂದ್ರಗಡದಲ್ಲಿ  ಉಳಿದು ₹ 8 ಸಾವಿರಕ್ಕೆ ರಥ ಮಾಡಿಕೊಟ್ಟಿದ್ದೆವು. ಕಲೆ ಎಂದರೆ ಸೇವೆ ಎನ್ನುವ ಭಾವ ಇದ್ದಿದ್ದರಿಂದ ಹಣಕ್ಕೆ ಮಹತ್ವ ನೀಡುತ್ತಿರಲಿಲ್ಲ. ರಥ ತಯಾರಿಸಲು ಹೋಗುವ ಊರಿನ ದೇವಸ್ಥಾನವೇ ನಮ್ಮ ವಾಸಸ್ಥಾನ. ಅವರು ಕೊಟ್ಟಷ್ಟು ಹಣ. ಜನರಿಗೂ ನಮ್ಮ ಮೇಲೆ ಅಪಾರ ಗೌರವಿದ್ದಿದ್ದರಿಂದ ದವಸ ಧಾನ್ಯ, ಕಾಯಿ ಪಲ್ಲೆ ತಂದುಕೊಡುತ್ತಿದ್ದರು. ಅದರಿಂದಲೇ ನಮ್ಮ ಜೀವನೋಪಾಯ ನಡೆಯುತ್ತಿತ್ತು’ ಎಂದು ಹಿಂದಿನ ದಿನಗಳನ್ನು ಸ್ಮರಿಸಿದರು.

‘ಮೀನು–ಕಪ್ಪೆಗಳು ಕೆರೆಗಳಲ್ಲಿ ಈಜಬೇಕು. ತಿಮಿಂಗಿಲಗಳು ವಿಶಾಲ ಸಮುದ್ರದಲ್ಲಿ ಈಜಬೇಕು ಎಂದು ಅಪ್ಪ ನನಗೆ ಯಾವಾಗಲೂ ಹೇಳುತ್ತಿದ್ದರು. ಅಂತೆಯೇ ನಮ್ಮನ್ನು 1989ರಲ್ಲಿ ಬೆಂಗಳೂರಿಗೆ ಕರೆತಂದರು. ಮೂರು ದೇವಸ್ಥಾನಗಳ ಕೆಲಸ ಒಪ್ಪಿಕೊಂಡು ಮುಂಗಡ ಹಣ ಪಡೆದು ಬಂದಿದ್ದೆವು. ವಜ್ರೇಶ್ವರಿ ಕಂಬೈನ್ಸ್‌ನ ಚಿನ್ನೇಗೌಡರು ಯೋಗಾನರಸಿಂಹಸ್ವಾಮಿ ರಥ ಮಾಡಿಕೊಡುವಂತೆ ಹೇಳಿದ್ದರು. ಅಲ್ಲಿಂದ ನಮಗೆ ಹೆಚ್ಚು ಕೆಲಸಗಳು ದೊರೆತವು. ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಬೇಡಿಕೆ ಇತ್ತು.

1993ರಲ್ಲಿ ಅಪ್ಪ ತೀರಿಕೊಂಡರು. ಯುವ ಪೀಳಿಗೆಗೆ ಈ ಕಲೆಯನ್ನು ದಾಟಿಸಬೇಕು ಎನ್ನುವ ಅವರ ಆಶಯದಂತೆ ತರಬೇತಿ ಕೇಂದ್ರ ಆರಂಭಿಸಿದೆವು. ಆರ್ಥಿಕವಾಗಿ ಹಿಂದುಳಿದ ಯುವಕರನ್ನು ಸ್ವಾವಲಂಬಿಗಳಾಗಿಸುವ, ಕಲೆಯನ್ನು ಉಳಿಸಿ ಬೆಳೆಸುವ ಅವಕಾಶ ನಮಗೆ ದೊರಕಿದೆ. ಈ ನನ್ನ ಸೇವೆಗೆ ಮಕ್ಕಳಾದ ಶಿವಕುಮಾರ ಮತ್ತು ಎಚ್ಚರೇಶ್ವರ ಕೈಜೋಡಿಸಿದ್ದಾರೆ’ ಎನ್ನುವ ವಿವರಣೆ ಅವರದು.

‘ಪಾದ (ಚಕ್ರ), ಸೊಂಟ, ಹೃದಯಭಾಗ, ಮುಖ ಮತ್ತು ಕಿರೀಟ ಹೀಗೆ ಐದು ಹಂತಗಳಲ್ಲಿ ರಥದ ನಿರ್ಮಾಣ ಕಾರ್ಯ ನಡೆಯುತ್ತದೆ. ಪ್ರತಿ ಹಂತವನ್ನೂ ಶಾಸ್ತ್ರಬದ್ಧವಾಗಿಯೇ ಮಾಡಬೇಕು. ಸಿಹಿಬೇವು, ಶ್ರೀಗಂಧ, ಬನ್ನಿ, ಹೊನ್ನೆ, ಅಂಕೋಲೆ ಮರವನ್ನು ರಥದ ಮುಖ್ಯ ಭಾಗಗಳಿಗೆ ಮತ್ತು ಇತರೆ ಭಾಗಗಳಿಗೆ ತೇಗದ ಮರವನ್ನು ಬಳಸಲಾಗುತ್ತದೆ.

ಇದು ನೋಡಲೂ ಚೆನ್ನ. ಆಯುಷ್ಯವೂ ಹೆಚ್ಚು ಎಂದು ತಂದೆಯವರು ಹೇಳುತ್ತಿದ್ದರು. ನಾನೂ ಅವರ ಮಾರ್ಗದಲ್ಲಿಯೇ ಸಾಗಿದ್ದೇನೆ. ಆದರೆ ಸೂಕ್ತ ಪ್ರೋತ್ಸಾಹದ ಕೊರತೆ ಇದ್ದು, ರಾಜ್ಯ ಸರ್ಕಾರ ಈ ಬಗ್ಗೆ ಗಮನ ನೀಡಬೇಕು ಎಂದು ಮನವಿ ಮಾಡುತ್ತಾರೆ ಬಸವರಾಜ ಬಡಿಗೇರ್‌. ಅವರ ಸಂಪರ್ಕಕ್ಕೆ: 9880819425.

ಅಪ್ಪ–ಅಮ್ಮನ ನೆನಪು ಮರೆಸಿದೆ
ಉಚಿತವಾಗಿ ಊಟ, ವಸತಿ ಕೊಟ್ಟು ವಿದ್ಯೆಯನ್ನೂ ಧಾರೆ ಎರೆಯುವವರು ಇಂದು ಸಿಗುವುದು ತೀರಾ ಅಪರೂಪ. ಗುರುಗಳಾದ ಬಸವರಾಜ ಬಡಿಗೇರ್‌ ಅವರ ಕುಟುಂಬ ನಮ್ಮನ್ನು ಕಲಾವಿದರಾಗಿ ರೂಪಿಸುತ್ತಿದೆ. ಸುಮಾರು ಹದಿನೈದಕ್ಕೂ ಹೆಚ್ಚು ರಥಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ. ಕಲಿಯುವುದಿನ್ನೂ ಬಹಳಷ್ಟಿದೆ. ಊರಿಗೆ ಮರಳಿದರೆ ಸ್ವತಂತ್ರರಾಗಿ ಮಾಡಬಲ್ಲೆವು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡಿದೆ. ತಾವು ಬೆಳೆದಂತೆ ತಮ್ಮ ವಿದ್ಯಾರ್ಥಿಗಳೂ ಬೆಳೆಯಬೇಕೆನ್ನುವುದು ನಮ್ಮ ಗುರುಗಳ ಆಶಯ. ಸ್ವಂತ ಮಕ್ಕಳಂತೆ ನಮ್ಮನ್ನು ಕಾಣುತ್ತಾರೆ.

ಮನೆಯವರಿಗೆ ಮತ್ತು ನಮಗೆ ಬೇರೆ ಊಟ ಎನ್ನುವ ಮಾತಿಲ್ಲ. ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತೇವೆ. ಅಪ್ಪ ಅಮ್ಮನ ನೆನಪು ಬಾರದಂತೆ ಗುರುಗಳ ಕುಟುಂಬದವರು ನಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಅರುಣ್‌ಕುಮಾರ್‌ ಬಡಿಗೇರ್‌, ಶಂಕರಾಚಾರಿ, ರಾಜೇಶ್‌, ರಮೇಶ್‌, ಜಗದೀಶ್‌, ವೀರೇಶ್‌ ಮತ್ತು ಪ್ರಶಾಂತ್‌.

ವಿದ್ಯಾರ್ಥಿಗಳ ಅನ್ನಪೂರ್ಣೆ ವಿದ್ಯಾವತಿ
ರಥಶಿಲ್ಪ ಕಲೆಯ ತರಬೇತಿ ಅವಧಿ ಮೂರು ವರ್ಷ. ಈ ವೇಳೆ ಒಟ್ಟು ಹತ್ತು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಊಟ, ವಸತಿ ಎಲ್ಲವೂ ಉಚಿತ. ಬಸವರಾಜ ಬಡಿಗೇರ್‌ ಅವರ ಪತ್ನಿ ವಿದ್ಯಾವತಿ ವಿದ್ಯಾರ್ಥಿಗಳಿಗೆ ಅನ್ನದಾತೆ. ಬೆಳಗಿನಿಂದ ರಾತ್ರಿವರೆಗೂ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುತ್ತಾರೆ. ಉತ್ತರ ಕರ್ನಾಟಕ ಶೈಲಿಯ  ಪಲ್ಯಗಳು, ರೊಟ್ಟಿ, ಚಪಾತಿ ಜತೆಗೆ ಅನ್ನ, ಸಾಂಬಾರ್‌ ಎಲ್ಲವನ್ನೂ ಉಣಬಡಿಸುತ್ತಾರೆ. ವಿದ್ಯಾವತಿ ಅವರ ದಾರಿಯಲ್ಲಿ ಸೊಸೆಯರಾದ ಸುನೀತಾ ಮತ್ತು ಪದ್ಮಶ್ರೀ ಅವರೂ ಸಾಗಿದ್ದಾರೆ.

ಕಲೆಗೆ ಸಂದ ಪುರಸ್ಕಾರ
ರಥಶಿಲ್ಪ ಕಲೆಗೆ ಸಲ್ಲಿಸಿದ ಸೇವೆಗೆ ಬಸವರಾಜ ಬಡಿಗೇರ್‌ ಅವರು ರಾಜ್ಯಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದೆಹಲಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಪತ್ರಿಕೆ, ಮಂಗಳೂರು ವತಿಯಿಂದ ಹೃದಯವಂತರು–2005 (ನೋಬಲ್‌ಮನ್‌ ಅವಾರ್ಡ್‌) ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. 2005ರಿಂದ 2008ರವರೆಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರೂ ಆಗಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT