ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ 'ನೋಟು ರದ್ದತಿ' ನಿರ್ಧಾರ ತಂದಿಟ್ಟ ಫಜೀತಿಗಳು

Last Updated 20 ಡಿಸೆಂಬರ್ 2016, 14:46 IST
ಅಕ್ಷರ ಗಾತ್ರ

ಬೆಂಗಳೂರು: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರ ರಾತ್ರಿ ನಿರ್ಧಾರ ಪ್ರಕಟಿಸಿದ್ದರು. ದೇಶದಲ್ಲಿರುವ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ಹೋಗಲಾಡಿಸುವುದಕ್ಕೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಮೋದಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಆದರೆ ನೋಟು ರದ್ದು ನಿರ್ಧಾರದ ನಂತರ ಅದರ ಅನುಷ್ಠಾನ ಮತ್ತು ಸರ್ಕಾರ ತೆಗೆದುಕೊಂಡ ಹಲವು ನಿರ್ಧಾರಗಳು ಜನರನ್ನು ಪೇಚಿಗೆ ಸಿಲುಕಿಸಿವೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಸರ್ಕಾರ ತೆಗೆದುಕೊಂಡ, ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಜನರನ್ನು ಆತಂಕಕ್ಕೀಡು ಮಾಡಿದೆ.

ಹಳೇ ನೋಟುಗಳ ಜಮೆ
ನವೆಂಬರ್ 8ರ ನಂತರ ₹500 ಮತ್ತು ₹1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಸರ್ಕಾರ, ರದ್ದಾದ ನೋಟುಗಳನ್ನು ಬದಲಿಸಲು ಮತ್ತು ಅವುಗಳನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಲು ಜನರಿಗೆ ಡಿಸೆಂಬರ್ 30ರವರೆಗೆ ಗಡುವು ನೀಡಿತ್ತು.

ಇದಾದ ನಂತರ ನಿನ್ನೆ ಆರ್‌ಬಿಐ ರದ್ದಾದ ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದ್ದು, ₹5,000ಕ್ಕಿಂತ ಹೆಚ್ಚು ಹಣವನ್ನು ಒಂದು ಬಾರಿ ಮಾತ್ರ ಜಮೆ ಮಾಡಬಹುದು ಎಂಬ ಆದೇಶ ಹೊರಡಿಸಿತ್ತು, ಅಂದರೆ ಇಲ್ಲಿಯವರೆಗೆ  ಡಿಸೆಂಬರ್ 30ರ ವರೆಗೆ ರದ್ದಾದ ನೋಟುಗಳನ್ನು ಜಮೆ ಮಾಡಬಹುದು ಎಂದು ಕಾಲಾವಕಾಶ ನೀಡಿದ್ದ ಆರ್‌ಬಿಐ ಡಿಸೆಂಬರ್ 30ರೊಳಗೆ ₹5000 ಕ್ಕಿಂತ ಹೆಚ್ಚು ಹಣವನ್ನು ಒಂದು ಬಾರಿ ಮಾತ್ರ ಜಮೆ ಮಾಡಬಹುದು. ಒಂದಕ್ಕಿಂತ ಹೆಚ್ಚು ಬಾರಿ ಜಮೆ ಮಾಡಿದರೆ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಹೇಳಿದೆ.

ನೋಟು ಬದಲಾವಣೆ
ನೋಟುಗಳನ್ನು ರದ್ದು ಮಾಡಿದ ನಂತರ, ಪ್ರತಿ ದಿನ ₹4,500 ಮೌಲ್ಯದ ರದ್ದಾದ ನೋಟುಗಳನ್ನು  ಬ್ಯಾಂಕ್‍ಗಳಲ್ಲಿ ಬದಲಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿತ್ತು, ಆನಂತರ ದಿನದಲ್ಲಿ ಒಂದೇ ಒಂದು ಬಾರಿ ನೋಟುಗಳನ್ನು ಬದಲಿಸಿಕೊಳ್ಳಬಹುದು. ನೋಟು ಬದಲಿಸುವಾಗ ಆ ವ್ಯಕ್ತಿಯ ಕೈ ಬೆರಳಿಗೆ ಶಾಯಿ ಗುರುತು ಹಾಕಲಾಗುವುದು ಎಂಬುದು ನಂತರದ ಆದೇಶವಾಗಿತ್ತು. ಇದಾದ ನಂತರ ಹಳೇ ನೋಟುಗಳ ಬದಲಾವಣೆಯನ್ನು ಆರ್‌ಬಿಐ ಖಾತೆಗಳಲ್ಲಿ ಮಾತ್ರ ಮಾಡಬಹುದು, ಎಲ್ಲ ಬ್ಯಾಂಕ್‍ಗಳಲ್ಲಿ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಲಾಯಿತು,  ಅದೇ ವೇಳೆ ವಿದೇಶಿಯರು ಡಿಸೆಂಬರ್ 15ರ ವರೆಗೆ ವಾರದಲ್ಲಿ ₹5000 ಮೌಲ್ಯದ ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಕಾಲಾವಕಾಶ ನೀಡಲಾಯಿತು.

ಹಳೇ ನೋಟುಗಳ ಚಲಾವಣೆ
ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಸರ್ಕಾರ ರದ್ದು ಮಾಡಿದ ನೋಟುಗಳನ್ನು ಮುಂದಿನ 72 ಗಂಟೆಗಳ ಕಾಲ ಪೆಟ್ರೋಲ್ ಪಂಪ್‍, ಹಾಲಿನ ಬೂತ್‌‍ಗಳಲ್ಲಿ ಬಳಸಬಹುದು ಎಂದು ಹೇಳಿತ್ತು. ಇದಾದ ನಂತರ ಕೆಲವೊಂದು ಕಡೆ ಈ ನೋಟುಗಳನ್ನು ಬಳಸಬಹುದು ಎಂದು ಹೇಳಿ, ಹಳೇ ನೋಟುಗಳನ್ನು ನಿರ್ದಿಷ್ಟ ಜಾಗಗಳಲ್ಲಿ ನವೆಂಬರ್ 24ರ ವರೆಗೆ ಬಳಸಬಹುದು ಎಂದು ಹೇಳಿತ್ತು.

ಡಿಸೆಂಬರ್ 15ರ ವರೆಗೆ  ಪೆಟ್ರೋಲ್ ಪಂಪ್ ಮತ್ತು ಟೋಲ್ ಬೂತ್‍ಗಳಲ್ಲಿ ಹಳೇ ನೋಟುಗಳನ್ನು ಬಳಸಬಹುದು ಎಂದು ಮೊದಲು ಹೇಳಿದ್ದರೂ ನಂತರ ಡಿಸೆಂಬರ್ 3 ಮತ್ತು 4ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಿತ್ತು.

ನೋಟು ರದ್ದತಿ ನಿರ್ಧಾರ ರೈತರ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಮನಗಂಡ ಸರ್ಕಾರ ರಾಬಿ ಬೆಳೆಗಾಗಿ ಬಿತ್ತನೆ ಬೀಜಗಳನ್ನು ಖರೀದಿಸುವ ರೈತರು ಹಳೇ ನೋಟುಗಳನ್ನು ಬಳಸಲು ಅನುಮತಿ ನೀಡಿತ್ತು.

ಎಟಿಎಂ ಮಿತಿ
ದಿನವೊಂದಕ್ಕೆ ಎಟಿಎಂನಿಂದ ₹2000 ಮಾತ್ರ ವಿತ್‍ಡ್ರಾ ಮಾಡಬಹುದೆಂದು ಆದೇಶ ನೀಡಿದ್ದ ಸರ್ಕಾರ ನಂತರ ಆ ಮಿತಿಯನ್ನು ₹4,000ಕ್ಕೆ ಏರಿಸಿ, ಕೊನೆಗೆ ₹2,500 ಮಾತ್ರ ವಿತ್‍ಡ್ರಾ ಮಾಡಬಹುದೆಂದು ಹೇಳಿತ್ತು.

ಬ್ಯಾಂಕ್‍ನಿಂದ ಹಣ ವಿತ್‍ಡ್ರಾ ಮಿತಿ
ಬ್ಯಾಂಕ್ ಖಾತೆಯಿಂದ ದಿನವೊಂದಕ್ಕೆ ₹10,000 ಮತ್ತು ವಾರಕ್ಕೆ ₹24,000 ವಿತ್‍ಡ್ರಾ ಮಾಡಬಹುದು ಎಂದು ಹೇಳಿದ್ದ ಸರ್ಕಾರ ಅನಂತರ ವಾರಕ್ಕೆ ₹24,000 ಮಾತ್ರ ವಿತ್‍ಡ್ರಾ ಮಾಡಬಹುದು. ಅದರಲ್ಲೂ ಚಾಲ್ತಿ ಖಾತೆ ಹೊಂದಿದವರು ವಾರದಲ್ಲಿ ₹50,000 ವಿತ್‍ಡ್ರಾ ಮಾಡಬಹುದು. ಸಹಕಾರಿ ಬ್ಯಾಂಕ್‍ಗಳಲ್ಲಿ ವಾರಕ್ಕೆ ₹24,000 ವಿತ್‍ಡ್ರಾ ಮಾಡಬಹುದು ಆದರೆ ಹೊಸ ನೋಟುಗಳನ್ನು ಜಮೆ ಮಾಡುವುದಾಗಲೀ, ಹೊಸ ನೋಟುಗಳಿಗಾಗಿ ಬದಲಾಯಿಸುವುದು ಮಾಡಬಾರದು ಎಂದು ಹೇಳಿತ್ತು.

ಮದುವೆ ಖರ್ಚಿಗೆ ಹಣ
ಮದುವೆ ಖರ್ಚಿಗಾಗಿ ₹2.5 ಲಕ್ಷ ಹಣ ವಿತ್‍ಡ್ರಾ ಮಾಡಬಹುದು ಎಂದು ಸರ್ಕಾರ ಹೇಳಿದ್ದರೂ, ಇಷ್ಟೊಂದು ಮೊತ್ತವನ್ನು ಯಾವ ರೀತಿ ಕೊಡಬೇಕು ಎಂಬುದರ ಬಗ್ಗೆ ಸರಿಯಾದ ಸಲಹಾಸೂತ್ರ ಸಿಗದೇ ಬ್ಯಾಂಕ್‍ಗಳು ಗೊಂದಲಕ್ಕೀಡಾಗಿದ್ದವು. ಇಂತಿರ್ಪ ವರ, ವಧು ಅಥವಾ ಅವರ ಬಂಧುಗಳು ಸರಿಯಾದ ದಾಖಲೆಗಳನ್ನು ಸಲ್ಲಿಸಿದರೆ ಮದುವೆ ಖರ್ಚಿಗಾಗಿ ₹2.5 ಲಕ್ಷ ವಿತ್‍ಡ್ರಾ ಮಾಡಬಹುದು ಎಂದು ಸರ್ಕಾರ ಹೇಳಿತು.

ಖಾತೆ ಮೇಲೆ ನಿಗಾ
ಬ್ಯಾಂಕ್‌ಗಳಲ್ಲಿ ₹2,5 ಲಕ್ಷಕ್ಕಿಂತ ಕಡಿಮೆ ಮೊತ್ತ ಜಮೆ ಮಾಡಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆನಂತರ, ಜನಧನ ಖಾತೆಗಳಲ್ಲಿ ಹೆಚ್ಚಿನ ಮೊತ್ತ ಜಮೆ ಮಾಡಿದರೆ ಆ ಖಾತೆಗಳ ಮೇಲೆ ಐಟಿ ನಿಗಾ ಇಡಲಾಗುವುದು, ಅಷ್ಟೇ ಅಲ್ಲದೆ ಯಾವುದೇ ಖಾತೆಗಳಲ್ಲಿ ಸಂಶಯಾಸ್ಪದವಾಗಿ ₹2.5 ಲಕ್ಷಕ್ಕಿಂತಲೂ ಕಡಿಮೆ ಮೊತ್ತ ಜಮೆ ಮಾಡಿದರೂ,  ಐಟಿ ಅಧಿಕಾರಿಗಳು ಆ ಖಾತೆಯ ಮೇಲೂ ನಿಗಾ ಇರಿಸುತ್ತಾರೆ ಎಂದು ಸರ್ಕಾರ ಹೇಳಿತ್ತು.

ಡಿಜಿಟಲ್ ವ್ಯವಹಾರ
ರದ್ದು ಮಾಡಿದ ನೋಟುಗಳ ಬದಲು ಹೊಸ ನೋಟುಗಳನ್ನು ಮುದ್ರಣ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು, ಇದೀಗ ರದ್ದು ಮಾಡಿದ ನೋಟುಗಳನ್ನು ಮರು ಮುದ್ರಣ ಮಾಡುವ ಯಾವುದೇ ಉದ್ದೇಶವಿಲ್ಲ. ಇದರ ಬದಲಾಗಿ  ಡಿಜಿಟಲ್ ವ್ಯವಹಾರ ಅಥವಾ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭ್ರಷ್ಟಾಚಾರ, ನಕಲಿ ನೋಟುಗಳ ಚಲಾವಣೆ, ಭಯೋತ್ಪಾದನೆ ಕೃತ್ಯಕ್ಕೆ ಬಳಸಲಾಗುವ ನಿಧಿಗಳ ಬಳಕೆ ಮತ್ತು ಕಪ್ಪುಹಣ ನಿರ್ಮೂಲನೆಗಾಗಿ ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಲಾಗುತ್ತಿದೆ ಎಂದು ಹೇಳಿದ ಸರ್ಕಾರ ದಿನಕ್ಕೊಂದು ರೀತಿಯ ಆದೇಶಗಳನ್ನು ಹೊರಡಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT