ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಮಾರುಕಟ್ಟೆ

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಈ ವಾರದ ಆ್ಯಪ್ ಮಾರುಕಟ್ಟೆಯಲ್ಲಿ ಗಮನ ಸೆಳೆಯಬಹುದಾದ ಎರಡು ಆ್ಯಪ್‌ಗಳು ಬಿಡುಗಡೆಯಾಗಿವೆ. ಕೇರಳ ಸರ್ಕಾರ ವಿನ್ಯಾಸ ಮಾಡಿರುವ ಭ್ರಷ್ಟಾಚಾರ ನಿಗ್ರಹ ಆ್ಯಪ್ ಹಾಗೂ ವಾಟ್ಸ್ಆ್ಯಪ್‌ ಎಡಿಟಿಂಗ್ ಆ್ಯಪ್ ಮುಖ್ಯವಾಗಿವೆ. ದೀರ್ಘಕಾಲಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹೆಲ್ತ್ ಆ್ಯಪ್ ಬಳಸುವುದು ಸೂಕ್ತವಲ್ಲ ಎಂಬ ಸಂಶೋಧನಾ ಅಧ್ಯಯನ ವರದಿಯ ಮಾಹಿತಿಯೂ ಇಲ್ಲಿದೆ.

ಭ್ರಷ್ಟಾಚಾರ ನಿಗ್ರಹಕ್ಕೆ ಆ್ಯಪ್…
ಕೇರಳ ಸರ್ಕಾರ ಭ್ರಷ್ಟಾಚಾರ ನಿಗ್ರಹ ಮಾಡುವ ಸಲುವಾಗಿ ನೂತನ ಎರಡು ಆ್ಯಪ್‌ಗಳನ್ನು ವಿನ್ಯಾಸ ಮಾಡಿದೆ. ನಾಗರಿಕರು ತಮ್ಮ ಸುತ್ತ ಮುತ್ತ ನಡೆಯುತ್ತಿರುವ  ಭ್ರಷ್ಟಾಚಾರಗಳ ದೂರುಗಳನ್ನು ಈ ಆ್ಯಪ್ ಮೂಲಕ ಸಲ್ಲಿಸಬಹುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

‘ಅರೈಸಿಂಗ್ ಕೇರಳ’ ಮತ್ತು ‘ವೈಸ್ಟಲ್ ನೌ’ ಎಂಬ ಎರಡು ಆ್ಯಪ್‌ಗಳನ್ನು ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಿನ ಚಾಲನೆ ನೀಡಲಾಗಿದೆ. ಈ ಎರಡೂ ಆ್ಯಪ್‌ಗಳನ್ನು ಕೇರಳ ರಾಜ್ಯದ ಗುಪ್ತಚರ ಸಂಸ್ಥೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ನಾಗರಿಕರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಈ ಆ್ಯಪ್ ಮೂಲಕವೂ ನೀಡಬಹುದು. ದೂರು ನೀಡಿದ ಗ್ರಾಹಕರ ಹೆಸರನ್ನು ಗೌಪ್ಯವಾಗಿಡುವುದಲ್ಲದೆ ಸೂಕ್ತ ಬಹುಮಾನ  ನೀಡಲಾಗುತ್ತಿದೆ.

ಸಾರ್ವಜನಿಕರು ಈ ಎರಡು ಆ್ಯಪ್‌ಗಳನ್ನು ತಮ್ಮ ಮೊಬೈಲ್್ ಫೋನ್‌ಗಳಿಗೆ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ದೂರಿನ ಬರಹ, ವಿಡಿಯೊ, ಆಡಿಯೊ ಹಾಗೂ ಪಿಡಿಎಫ್ ಫೈಲ್‌ಗಳನ್ನು ಕಳುಹಿಸುವ ಸೌಲಭ್ಯವನ್ನು ಈ ಆ್ಯಪ್‌ಗಳಲ್ಲಿ ಕಲ್ಪಿಸಲಾಗಿದೆ. ಆಂಡ್ರಾಯ್ಡ್‌ , ವಿಂಡೋಸ್ ಮತ್ತು ಐಓಎಸ್ ಮಾದರಿಗಳಲ್ಲಿ ಅರೈಸಿಂಗ್ ಕೇರಳ ಮತ್ತು ವೈಸ್ಟಲ್ ನೌ ಆ್ಯಪ್‌ಗಳು ಲಭ್ಯವಿವೆ.

ನಾಗರಿಕರು ದೂರು ನೀಡಿದ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜಾಗೃತರಾಗಿ ತನಿಖೆ ನಡೆಸಲಿದ್ದಾರೆ. ಭ್ರಷ್ಟ ಮುಕ್ತ ಸ್ವಚ್ಛ ಆಡಳಿತಕ್ಕೆ ಒತ್ತು ನೀಡುವ ಸಲುವಾಗಿ ಈ ಆ್ಯಪ್‌ಗಳನ್ನು ರೂಪಿಸಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂಬುದು ಕೇರಳ ಸರ್ಕಾರದ ಅಭಿಪ್ರಾಯ.

App arsingkerala, app whistle now,

***
ವಾಟ್ಸ್ಆ್ಯಪ್  ಸಂದೇಶ ಮರು ಸಂಕಲಿಸುವ ಅಪ್ಲಿಕೇಷನ್…

ವಿಶ್ವದ ಜನಪ್ರಿಯ ಮೊಬೈಲ್ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಕೆಲ ದಿನಗಳ ಹಿಂದಷ್ಟೆ ವಿಡಿಯೊ ಕರೆ ಸೌಲಭ್ಯವನ್ನು ಪರಿಚಯಿಸಿತ್ತು. ಈಗ, ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವ ಮತ್ತು ವಾಪಸು ಪಡೆಯುವ ಸೌಲಭ್ಯವಿರುವ ಬೇಟಾ ಅಪ್ಲಿಕೇಷನ್ ಪರಿಚಯಿಸುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಅನುಕೂಲತೆಗಳನ್ನು ನೀಡಿದ್ದು ಈ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಈ ಹಿಂದೆ ವಾಟ್ಸ್ಆ್ಯಪ್‌ನಲ್ಲಿ ಒಮ್ಮೆ ಕಳುಹಿಸಿದ ಸಂದೇಶವನ್ನು ಹಿಂದೆಪಡೆಯುವ ಅಥವಾ ಎಡಿಟ್ ಮಾಡುವ ಸೌಲಭ್ಯಗಳು ಇರಲಿಲ್ಲ. ಇದರಿಂದ ಬಳಕೆದಾರರು ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡು ಸಂಬಂಧಗಳನ್ನೆ ಕಡಿದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ವಾಟ್ಸ್ಆ್ಯಪ್ ಬೇಟಾ ವರ್ಶನ್ ಅಪ್ಲಿಕೇಷನ್ ಈ ಎಲ್ಲ ಅಪಾಯಗಳಿಗೆ ಇತಿಶ್ರೀ ಹೇಳಲಿದೆ.

ಬಳಕೆದಾರರೊಬ್ಬರು ಯಾರಿಗೋ ಕಳುಹಿಸಬೇಕಾದ ಸಂದೇಶವನ್ನು ಅಚಾತುರ್ಯದಿಂದ ಇನ್ಯಾರಿಗೂ ಕಳುಹಿಸಿ ಬಿಟ್ಟಿರುತ್ತಾರೆ ಅಥವಾ ತಪ್ಪು ಸಂದೇಶವನ್ನು ರವಾನಿಸಿ ಬಿಟ್ಟಿರುತ್ತಾರೆ ಎಂದಿಟ್ಟುಕೊಳ್ಳಿ. ಸಂದೇಶ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ತಪ್ಪಿನ ಅರಿವಾದಗ ಕೂಡಲೇ ಬಳಕೆದಾರರು ಬೇಟಾ ವರ್ಷನ್ ಅಪ್ಲಿಕೇಷನ್ ಮೂಲಕ ಸಂದೇಶವನ್ನು ತಕ್ಷಣಕ್ಕೆ ವಾಪಸು ಪಡೆಯಬಹುದು ಹಾಗೂ ಸಂದೇಶವನ್ನು ಎಡಿಟ್ ಮಾಡಿ ಮತ್ತೆ ಕಳುಹಿಸಬಹುದು.

ಕಳುಹಿಸಿದ ಸಂದೇಶವನ್ನು ಅವರು ಓದದಿದ್ದಾಗ ಅಥವಾ ನೋಡದಿದ್ದಾಗ ಮಾತ್ರ ಈ ಸೌಲಭ್ಯ ಬಳಸಬಹುದಾಗಿದೆ ಎಂದು ವಾಟ್ಸ್ಆ್ಯಪ್  ತಿಳಿಸಿದೆ. ವಾಟ್ಸ್ಆ್ಯಪ್  ಬಳಸುವ ಆಂಡ್ರಾಯ್ಡ್‌ , ವಿಂಡೋಸ್ ಮತ್ತು ಐಒಎಸ್ ಪ್ಲಾಟಫಾರಂ ಬಳಕೆದಾರರು ಈ ನೂತನ ಬೇಟಾ ವರ್ಶನ್ ಅಪ್ಲಿಕೇಷನ್ ಬಳಸಬಹುದು. ಇದನ್ನು ವಾಟ್ಸ್ಆ್ಯಪ್ ಅಪ್ಲಿಕೇಷನ್‌ಗಳಲ್ಲಿ ಸೇರಿಸಲಾಗಿದೆ. ಬಳಕೆದಾರರು ಸೆಟಿಂಗ್ಸ್‌ನಲ್ಲಿ ಈ ಅಪ್ಲಿಕೇಷನ್ ನೋಡಬಹುದು.

***
ಆರೋಗ್ಯ ಆ್ಯಪ್‌ಗಳು ನಂಬಲರ್ಹವಲ್ಲ?

ಆರೋಗ್ಯ ಆ್ಯಪ್‌ಗಳು  ಮನುಷ್ಯನ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತವೆ ಎಂದು ಎಲ್ಲರೂ ನಂಬಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರು ಹೆಲ್ತ್ ಆ್ಯಪ್‌ಗಳು  ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ಸಂಶೋಧನಾ ನಿರತ ವೈದ್ಯರುಗಳು ಹೇಳುತ್ತಾರೆ. ಆದರೆ, ಇದೀಗ ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಲ್ತ ಆ್ಯಪ್‌ಗಳು  ನಂಬಲರ್ಹವಲ್ಲ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.

ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧನಾ ಅಧ್ಯಾಪಕರಾಗಿರುವ ಭಾರತ ಮೂಲದ ಕರಣ್ ಸಿಂಗ್ ತಮ್ಮ ನೂತನ ಸಂಶೋಧನೆಯ ಮೂಲಕ ಈ ವಿಷಯವನ್ನು ಪುಷ್ಟಿಕರಿಸಿದ್ದಾರೆ.

ಈ ಅಧ್ಯಯನಕ್ಕೆ ದೀರ್ಘಾಕಾಲೀನ ಆರೋಗ್ಯ ಸಮಸ್ಯೆಯಿಂದ ಬಳುತ್ತಿರುವ 130ಕ್ಕೂ ರೋಗಿಗಳ  ಸಂದರ್ಶನ ನಡೆಸಿದ್ದಾರೆ ಹಾಗೂ ಈ ಹೆಲ್ತ್ ಕೇರ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಂಡ್ರಾಯ್ಡ್‌, ವಿಂಡೋಸ್ ಮತ್ತು ಐಒಎಸ್ ಪ್ಲೇ ಸ್ಟೋರ್‌ನಲ್ಲಿ ದಾಖಲಿಸಿರುವ ಆ್ಯಪ್‌ಗಳ ರೇಟಿಂಗ್  ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಿದ್ದಾರೆ. ಅಂತಿಮವಾಗಿ ರೋಗಿಗಳ ಅಭಿಪ್ರಾಯ ಮತ್ತು ಆ್ಯಪ್ ರೇಟಿಂಗ್ ಆಧಾರದ ಮೇಲೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಆ್ಯಪ್‌ಗಳು ನಂಬಲರ್ಹವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಅಂತರರಾಷ್ಟ್ರೀಯ ಆರೋಗ್ಯ ಪತ್ರಿಕೆ ಹೆಲ್ತ್ ಜರ್ನಲ್ ವರದಿ ಮಾಡಿದೆ.

ಹೆಲ್ತ್ ಆ್ಯಪ್‌ಗಳು ಕೇವಲ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹಾರ್ಮೋನ್‌ಗಳ ವ್ಯತ್ಯಾಸ ಸೇರಿದಂತೆ ಇತ್ಯಾದಿ ಪ್ರಾಣಾಪಾಯವಿಲ್ಲದ ರೋಗಗಳಿಗೆ ಹೆಚ್ಚು ಅನುಕೂಲ. ಆದರೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆ್ಯಪ್‌ಗಳು ಸಹಾಯಕ್ಕಿಂತ ಆಪಾಯವೇ ಹೆಚ್ಚು ಎನ್ನುತ್ತಾರೆ ಕರಣ್ ಸಿಂಗ್.

ಇಂತಹ ರೋಗಿಗಳ ದೇಹದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಹೆಲ್ತ್ ಆ್ಯಪ್‌ಗಳು ಪತ್ತೆ ಹಚ್ಚುವುದು ಕಷ್ಟ! ಹಾಗೂ ತಪ್ಪು ಚಿಕಿತ್ಸೆ ಅಥವಾ ತಪ್ಪು ಔಷಧಿ ಸೇವನೆಗೆ ನೆರವು ನೀಡುವ ಮೂಲಕ ರೋಗಿಗಳಿಗೆ ಮತ್ತಷ್ಟು ಅಪಾಯವನ್ನು ತರುವ ಸಾಧ್ಯತೆಗಳಿವೆ ಎಂದು ಕರಣ್ ಹೇಳುತ್ತಾರೆ. ಒಟ್ಟಿನಲ್ಲಿ ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆ್ಯಪ್ ಮೊರೆ ಹೋಗುವ ಮುನ್ನ ಸಾಕಷ್ಟು ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT