ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದು ಸುಳಿಯಲ್ಲಿ ಗ್ರಾಮೀಣ ಆರ್ಥಿಕತೆ...

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಗ್ರಾಮದ ರೈತ ರಾಮಕೃಷ್ಣ ಅವರಿಗೆ ಈಗ ಪ್ರತಿನಿತ್ಯ ಬ್ಯಾಂಕ್‌ಗಳಿಗೆ ಅಲೆದಾಡುವುದೇ ಕೆಲಸ. ಹಣಕ್ಕಾಗಿ ಇವರ ಪರದಾಟ ಬಿಗಡಾಯಿಸುತ್ತಿದೆಯೇ ಹೊರತು ಪರಿಹಾರ ಮಾತ್ರ ದೊರೆತಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿರುವ ಬೆರಳಣಿಕೆಯಷ್ಟು ಎಟಿಎಂಗಳಲ್ಲಿ ದುಡ್ಡು ಇರುವುದೇ ಅಪರೂಪ. ಹೀಗಿರುವಾಗ ಹಣವಿಲ್ಲದೆ ಏನು ಮಾಡುವುದು ಎಂದು ಅವರು ಪ್ರಶ್ನಿಸುತ್ತಾರೆ.

ಇನ್ನು, ಬೆಳಗಾವಿ ಜಿಲ್ಲೆ ಬೈಲೂರು ಗ್ರಾಮದ ಶಂಕರಗೌಡರೂ ಪ್ರತಿನಿತ್ಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ಗೆ ತೆರಳುತ್ತಾರೆ. ಬ್ಯಾಂಕ್‌ನ  ಸ್ಲಿಪ್‌ನಲ್ಲಿ ಹೆಸರು ಮತ್ತಿತರ ವಿವರ ನೀಡಿದರೆ ಮರುದಿನ ₹ 2 ಸಾವಿರ ದೊರೆಯುತ್ತದೆ. ಕಬ್ಬು ಕಟಾವು ಸಮಯದಲ್ಲಿ ಈ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ಕೂಲಿಕಾರ್ಮಿಕರು ಚೆಕ್‌ ಸ್ವೀಕರಿಸುತ್ತಾರೆಯೇ? ಅವರಿಗೆ ನಗದು ಹಣವೇ ಬೇಕು ಎಂದು ಹೇಳುತ್ತಾರೆ.

ಈ ಎರಡು ಉದಾಹರಣೆಗಳು ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಉಂಟಾಗಿರುವ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತವೆ. ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಹಳ್ಳಿಗಳಲ್ಲಿ ಹಣಕಾಸಿನ ವಹಿವಾಟು ಬಹುತೇಕ ಸ್ತಬ್ಧಗೊಂಡಂತಾಗಿದೆ. ಕೂಲಿಕಾರ್ಮಿಕರಿಗೂ ಹಣ ನೀಡದಂತಹ ಇಕ್ಕಟ್ಟಿನ ಸ್ಥಿತಿಗೆ ರೈತರು ಸಿಲುಕಿದ್ದಾರೆ.

ರೈತ ಸಂಘದ ಮುಖಂಡರು ಆಗಿರುವ ರಾಮಕೃಷ್ಣ ಅವರೇ ಹೇಳುವಂತೆ, ‘ಸಾಮಾನ್ಯವಾಗಿ ಹೋಬಳಿಗೆ ಒಂದು ಬ್ಯಾಂಕ್‌ ಇದೆ. ಬ್ಯಾಂಕ್‌ಗೆ ₹ 10 ಲಕ್ಷ ಬರುತ್ತದೆ ಎಂದು ಮ್ಯಾನೇಜರ್‌ ಹೇಳುತ್ತಾರೆ. ಆದರೆ, ₹ 2ರಿಂದ ₹ 5 ಲಕ್ಷ ಬಂದರೆ ಹೆಚ್ಚು. ಹಣ ಇಲ್ಲ ಎಂದು ಗ್ರಾಹಕರನ್ನು ವಾಪಸ್‌ ಕಳುಹಿಸುವುದು ಸಾಮಾನ್ಯ. ಬ್ಯಾಂಕ್‌ ಸಿಬ್ಬಂದಿಯಿಂದ ‘ಹಣ ಇಲ್ಲ’ ಎನ್ನುವ ಉತ್ತರ ಕೇಳಲು ನಾವು ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಯಬೇಕಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ಎಟಿಎಂಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಹಕಾರ ಬ್ಯಾಂಕ್‌ಗಳು ಇದ್ದೂ ಇಲ್ಲದಂತಾಗಿವೆ. ಕೇಂದ್ರ ಸರ್ಕಾರದ ನಿರ್ಧಾರ ಉತ್ತಮ ಇರಬಹುದು. ಆದರೆ, ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಕನಿಷ್ಠ ಗ್ರಾಮೀಣ ಪ್ರದೇಶದ ಜನರ ಬಗ್ಗೆಯೂ ಯೋಚಿಸಬೇಕಾಗಿತ್ತು. ಹಳ್ಳಿ ಜನರಿಗೆ ಅದರಲ್ಲೂ ಹಿರಿಯರಿಗೆ ಎಟಿಎಂ ಕಾರ್ಡ್‌ಗಳನ್ನು ಬಳಸುವುದೇ ಸರಿಯಾಗಿ ಗೊತ್ತಿಲ್ಲ. ಇನ್ನು ಆನ್‌ಲೈನ್‌ನಂತಹ ವ್ಯವಸ್ಥೆ ಬಗ್ಗೆ ಹೇಗೆ ತಿಳಿದುಕೊಳ್ಳಬೇಕು. ಜನರಿಗೆ ತಿಳಿವಳಿಕೆ ಮೂಡಿಸುವ ವ್ಯವಸ್ಥೆಯಾದರೂ ಈಗ ಸಮರ್ಪಕವಾಗಿ ನಡೆಯಬೇಕು’ ಎಂದು ರಾಮಕೃಷ್ಣ ಸಲಹೆ ನೀಡುತ್ತಾರೆ.

ಶಂಕರಗೌಡರ ಸಮಸ್ಯೆಯೂ ಭಿನ್ನವಾಗಿಲ್ಲ. ಕಾರ್ಖಾನೆಗಳಿಗೆ ಕಳುಹಿಸಿದ ಕಬ್ಬಿನ ಹಣ ಬ್ಯಾಂಕಿಗೆ ಬಂದಿದೆ. ಆದರೆ, ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ‘ನಮ್ಮ ಹಣ ನಮಗೆ ದೊರೆಯುತ್ತಿಲ್ಲ. ನಮ್ಮ ದಿನನಿತ್ಯದ ವಹಿವಾಟಿಗೆ ಕಷ್ಟವಾಗುತ್ತಿದೆ. ಈಗಿನ ಪರಿಸ್ಥಿತಿಯಿಂದ ಹೊರಬಂದರೆ ಸಾಕಾಗಿದೆ’ ಎಂದು ಶಂಕರಗೌಡರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈ ಉದಾಹರಣೆಗಳು ಸಮಸ್ಯೆಯ ಒಂದು ಮುಖವನ್ನು ಬಿಂಬಿಸಿದರೆ, ಗ್ರಾಮೀಣರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ನೋಟು ರದ್ದು, ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣಕಾಸಿನ ವಹಿವಾಟಿನ ಮೇಲೆ ಬಲವಾದ ಪೆಟ್ಟು ನೀಡಿದೆ. ಈ ಸಂಘಗಳ ವಹಿವಾಟು ನಡೆಯುವುದೇ ಜಿಲ್ಲಾ ಸಹಕಾರ ಕೇಂದ್ರಗಳ ಮೂಲಕ. ಆದರೆ, ಕೇಂದ್ರ ಸರ್ಕಾರ ಸಹಕಾರ ಬ್ಯಾಂಕ್‌ಗಳ ವಹಿವಾಟಿಗೆ ಹಲವು ನಿರ್ಬಂಧಗಳನ್ನು ವಿಧಿಸಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ಕೆಲವರು ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಸಹಕಾರ ಬ್ಯಾಂಕ್‌ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳು ಬಂದಿದ್ದವು. ನವೆಂಬರ್‌ 14ರಂದು ಆದೇಶ ಹೊರಡಿಸಿದ ಭಾರತೀಯ ರಿಸರ್ವ ಬ್ಯಾಂಕ್‌, ನೋಟು ರದ್ದತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿನಿಮಯ ಕೈಗೊಳ್ಳಬಾರದು ಎಂದು ಆದೇಶ ನೀಡಿತು. ಆದರೆ, ಪರ್ಯಾಯ ವ್ಯವಸ್ಥೆಯನ್ನು ಸೂಚಿಸಲಿಲ್ಲ.

ಆನ್‌ಲೈನ್‌ನಂತಹ ಡಿಜಿಟಲ್‌ ಸ್ಪರ್ಶಕ್ಕೆ ಒಳಗಾಗದಿರುವ ಹಳ್ಳಿಯ ಅನಕ್ಷರಸ್ಥರಿಗೆ ಹಣವೇ ದೊರೆಯುತ್ತಿಲ್ಲ. ಕೆಲವೆಡೆ ಕಳೆದ ಒಂದೂವರೆ ತಿಂಗಳಿಂದ ರೈತರಿಗೆ ಹಣ ಪಾವತಿಸಿಲ್ಲ. ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳು ಆನ್‌ಲೈನ್‌ ಮೂಲಕ ಹಣ ಪಾವತಿಸುವ ವ್ಯವಸ್ಥೆ ಮಾಡಿಕೊಂಡಿವೆ. ಆದರೆ, ಈ ಹಣ ಸಹ ಡಿಸಿಸಿ ಬ್ಯಾಂಕ್‌ಗಳ ಮೂಲಕವೇ ರೈತರಿಗೆ ಪಾವತಿಯಾಗುತ್ತಿದೆ. ಸಹಕಾರ ಸಂಘಗಳ ಕೇಂದ್ರ ಬ್ಯಾಂಕ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಗಳಲ್ಲಿ (ಡಿಸಿಸಿ) ಅಗತ್ಯವಾದಷ್ಟು ಹಣ ದೊರೆಯುತ್ತಿಲ್ಲ. ಇದರಿಂದ ಹಾಲು ಉತ್ಪಾದಕರು ಹಣಕ್ಕಾಗಿ ಪರದಾಡುವಂತಾಗಿದೆ.

ಹೈನುಗಾರಿಕೆ ಆದಾಯದಲ್ಲಿಯೇ ಜೀವನ ನಡೆಸುವ ಹಲವು ಕುಟುಂಬಗಳು ಸಂಕಷ್ಟದ ದಿನಗಳನ್ನು ದೂಡುತ್ತಿವೆ. ಕರ್ನಾಟಕ ಹಾಲು ಮಹಾಮಂಡಳದ ವ್ಯಾಪ್ತಿಯಲ್ಲಿ 14 ಹಾಲು ಒಕ್ಕೂಟಗಳಿವೆ. ಇವುಗಳ ಅಡಿಯಲ್ಲಿ 14 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇವುಗಳು ಹಳ್ಳಿಗಳಲ್ಲಿ ರೈತರಿಂದ ಹಾಲು ಸಂಗ್ರಹಿಸಿ ಒಕ್ಕೂಟಗಳಿಗೆ ಪೂರೈಸುತ್ತವೆ.

ರಾಜ್ಯದಲ್ಲಿ ಸುಮಾರು 23 ಲಕ್ಷ ರೈತರು ಹೈನುಗಾರಿಕೆ ಮೂಲಕ ಪ್ರತಿ ದಿನ 60ರಿಂದ 70 ಲಕ್ಷ ಲೀಟರ್‌ ಹಾಲನ್ನು ಈ ಸಂಘಗಳಿಗೆ ಪೂರೈಸುತ್ತಾರೆ. ಪ್ರತಿ ದಿನ ಅಂದಾಜು ₹ 13 ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿದಿನದ ಬದಲು ಸಂಘಗಳ ಸಿಬ್ಬಂದಿ ಪ್ರತಿ ವಾರಕ್ಕೊಮ್ಮೆ  ಹಣ ಪಾವತಿಸುವುದು ವಾಡಿಕೆಯಾಗಿದೆ.

ಇದರಿಂದ ವಾರದ ಸಂತೆ ಮುಂತಾದ ದೈನಂದಿನ ಅಗತ್ಯಗಳಿಗೆ ಹಣ ವಿನಿಯೋಗವಾಗುತ್ತದೆ. ಆದರೆ, ಅಪಾರ ಮೊತ್ತದ ಹಣದ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಣದ ಕೊರತೆಯ ಬಿಸಿ ನೇರವಾಗಿ ರೈತರಿಗೆ ಮುಟ್ಟಿದೆ.

‘ಸಾಲ ಪಾವತಿಗೂ ಅವಕಾಶ ಇಲ್ಲ’
‘ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ವಿಧಿಸಿರುವ ನಿರ್ಬಂಧಗಳು ಡಿಸಿಸಿ ಬ್ಯಾಂಕ್‌ಗಳ ಮೇಲೆಯೇ ಅತಿ ಹೆಚ್ಚು ಪರಿಣಾಮ ಬೀರಿವೆ.  ಗ್ರಾಹಕರು ಪಡೆದಿರುವ ಸಾಲವನ್ನು ವಾಪಸ್‌ ಪಾವತಿಸಲು ಸಹ ಅವಕಾಶ ಸಿಗುತ್ತಿಲ್ಲ. ಇದರಿಂದ ರೈತರಿಗೂ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ತುಂಬ ಅನನುಕೂಲವಾಗುತ್ತಿದೆ’ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಹೇಳುತ್ತಾರೆ.

‘ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಪಾರ ಮೊತ್ತದ ಹಣ ಠೇವಣಿ ಮಾಡಲಾಗಿದೆ. ಈ ಹಣಕ್ಕೆ ಬ್ಯಾಂಕ್‌ನವರು ಬಡ್ಡಿ ನೀಡಬೇಕಾಗುತ್ತದೆ. ಹೀಗಾಗಿ ಬ್ಯಾಂಕ್‌ಗಳಿಗೆ ಮುಂದಿನ ದಿನಗಳಲ್ಲಿ ನಷ್ಟವಾಗಬಹುದು’ ಎಂದು ಅವರು ಹೇಳುತ್ತಾರೆ.

‘ಬ್ಯಾಂಕ್‌ಗಳಿಂದ ಗ್ರಾಹಕರಿಗೆ ವಾರಕ್ಕೆ ಉಳಿತಾಯ ಖಾತೆಯಲ್ಲಿ ₹ 24 ಸಾವಿರ  ಮತ್ತು ಚಾಲ್ತಿ ಖಾತೆಯಲ್ಲಿ ₹ 50 ಸಾವಿರ ಮಾತ್ರ ಪಡೆಯಲು ಅವಕಾಶ ಇದೆ. ಇದು ವಾಸ್ತವದಲ್ಲಿ ಕಾರ್ಯಸಾಧುವಲ್ಲ. ಉದಾಹರಣೆಗೆ ತುಮಕೂರಿನ ವ್ಯಾಪಾರಿಗಳು ಪ್ರತಿ ದಿನ 10 ಲೋಡ್‌  ತರಕಾರಿ, ಹೂವುಗಳನ್ನು ಮುಂಬೈ, ಬೆಳಗಾವಿಗೆ ಕಳುಹಿಸುತ್ತಾರೆ.

ಇದಕ್ಕೆ ಲಾರಿ ಬಾಡಿಗೆಗೆ ಮುಂಗಡ ಹಣ ನೀಡಬೇಕಾಗುತ್ತದೆ. ಈಗ ವಿಧಿಸಿರುವ ನಿರ್ಬಂಧದಿಂದ ವ್ಯಾಪಾರಿಗಳು ಎಲ್ಲಿಂದ ಹಣ ತಂದು ಕೊಡಬೇಕು. ಅವರಿಗೆ ಪ್ರತಿ ದಿನಕ್ಕೆ 4–5 ಲಕ್ಷ ಬೇಕು. ಆದರೆ, ವಾರಕ್ಕೆ ₹ 50 ಸಾವಿರ ಅಂದರೆ ಹೇಗೆ? ಇದರಿಂದ ತರಕಾರಿ, ಹೂವುಗಳ ಸಾಗಾಣಿಕೆಯಾಗದೆ ಹಾಳಾಗುತ್ತಿವೆ. ಇದು ನೇರವಾಗಿ ಕೃಷಿ ಉತ್ಪನ್ನಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಹಲವು ಉತ್ಪನ್ನಗಳ ಬೆಲೆಯೂ ಕುಸಿದಿದೆ’ ಎಂದು ರಾಜಣ್ಣ ಅವರು ಸದ್ಯಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ.

ಡಿಜಿಟಲ್‌ ಯುಗದತ್ತ ಮುಖ!
ಅನಿವಾರ್ಯವೋ, ಅಗತ್ಯವೋ ಎನ್ನುವಂತೆ ಗ್ರಾಮೀಣ ಪ್ರದೇಶದ ಜನರು ಈಗ ‘ಡಿಜಿಟಲ್‌ ಕ್ಯಾಷ್‌’ನತ್ತ ಹೊರಳುತ್ತಿದ್ದಾರೆ. ಇದುವರೆಗೆ ಒಮ್ಮೆಯೂ ಎಟಿಎಂ ಕಾರ್ಡ್‌ಗಳನ್ನೇ ಬಳಸದಂತಹ ರೈತರು ಸಹ ಈಗ ಅನಿವಾರ್ಯವಾಗಿ ಎಟಿಎಂ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದಾರೆ. ಆದರೆ, ಆನ್‌ಲೈನ್‌, ಮೊಬೈಲ್‌ ವಾಲೆಟ್‌ ಮುಂತಾದ ಡಿಜಿಟಲ್‌ ಹಣ ವಹಿವಾಟು ಅರಿತುಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ರೂಪಿಸಬೇಕು ಎನ್ನುವುದು ಗ್ರಾಮೀಣರ ಅಭಿಪ್ರಾಯವಾಗಿದೆ.

ಸಹಕಾರ ಕ್ಷೇತ್ರದ ಸಾಧಕ–ಬಾಧಕ
ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ ಸಹಕಾರ ಕ್ಷೇತ್ರದ ಬ್ಯಾಂಕ್‌ಗಳ ಮೇಲೆ ವಿಧಿಸಿರುವ ನಿರ್ಬಂಧಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಬ್ಯಾಂಕುಗಳಲ್ಲಿ ಈಗ ದೊಡ್ಡ ಮಟ್ಟದ ಠೇವಣಿ ಸಂಗ್ರಹವಾಗುತ್ತಿದೆ. ಇದರಿಂದ ಕೆಲವೇ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಯಿಂದ ಜೀವನ ಸಾಗಿಸುವ ಮಧ್ಯಮ ವರ್ಗದ ಕುಟುಂಬಗಳು ಶೇಕಡ 8ಕ್ಕೂ ಹೆಚ್ಚು ಬಡ್ಡಿ ದರ ನೀಡುವ ಸಹಕಾರ ಬ್ಯಾಂಕುಗಳ ಕಡೆ ಬರಲಿದ್ದಾರೆ. ಇದರಿಂದ ಸಹಕಾರಿ ವಲಯದ ಬ್ಯಾಂಕುಗಳಿಗೆ ಹಣಕಾಸು ವಹಿವಾಟಿನ ದೊಡ್ಡ ಅವಕಾಶ ದೊರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಪ್ರಸ್ತುತ ಸಾಲ ವಿತರಣೆ, ಸಾಲ ಮರುಪಾವತಿಸುವುದು, ಅಡವಿಟ್ಟಿದ್ದ ಚಿನ್ನಾಭರಣ ಬಿಡಿಸಿಕೊಳ್ಳುವುದು, ಠೇವಣಿ ಹಿಂಪಡೆಯುವುದಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ನವೆಂಬರ್‌14ರ ವರೆಗೆ ಮಾತ್ರ ಅವಕಾಶವಿತ್ತು. ನಂತರ ಇದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಈ ಸಂಸ್ಥೆಗಳಲ್ಲಿ ಗೊಂದಲ ಆರಂಭವಾಗಿದೆ. ರಾಷ್ಟ್ರೀಯ ಬ್ಯಾಂಕ್‌ಗಳಿಗೊಂದು, ಸಹಕಾರಿ ಬ್ಯಾಂಕ್‌ಗಳಿಗೊಂದು ನೀತಿ ಮಾಡಿರುವುದು ತೊಂದರೆಯಾಗಿದೆ ಎನ್ನುವುದು ಸಹಕಾರಿ ಮುಖಂಡರ ಅಭಿಪ್ರಾಯ.

***
ನೋಟು ರದ್ದುಗೊಳಿಸಿರುವುದರಿಂದ ಸಗಟು ವ್ಯಾಪಾರಸ್ಥರಿಗೆ ತೊಂದರೆಯಾಗಿಲ್ಲ. ನಾವು ಲಾರಿ ಬಾಡಿಗೆ ಮುಂತಾದವುಗಳಿಗೆ ಚೆಕ್‌ ಇಲ್ಲವೇ ಆನ್‌ಲೈನ್‌ ಮೂಲಕ ಪಾವತಿಸುತ್ತೇವೆ. ಆದರೆ, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದ ತಕ್ಷಣವೇ ಹಣ ಸಿಗುತ್ತಿಲ್ಲ. ಚಿಲ್ಲರೆ ಹಣ ದೊರೆಯದೆ ಸಣ್ಣ ವ್ಯಾಪಾರಿಗಳಿಗೆ ಬಹಳ ತೊಂದರೆ ಆಗಿದೆ.
–ಗುರುಸ್ವಾಮಿ, ಸಗಟು ವ್ಯಾಪಾರಿ, ಬೆಂಗಳೂರು ಯಶವಂತಪುರ ಎಂಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT