ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಒಕ್ಕೂಟ ತತ್ವಕ್ಕೆ ಮನ್ನಣೆಯಿಲ್ಲ!

ಅಕ್ಷರ ಗಾತ್ರ

ನೋಟು ರದ್ದತಿ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಅನುಸರಿಸಿದ ಮಾರ್ಗದಿಂದ ಸಂಸತ್ತಿನ ಪ್ರತಿಷ್ಠೆಗೆ ಹಾಗೂ ರಿಸರ್ವ್ ಬ್ಯಾಂಕಿನ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿರುವುದು ಹಳೆಯ ವಿಚಾರ. ಆದರೆ, ಅಷ್ಟೇ ಗಮನಾರ್ಹವಾದ ಮತ್ತೊಂದು ವಿಷಯ ಹಾಗೂ ಅದರ ಪರಿಣಾಮಗಳನ್ನೂ ಗಮನಿಸಬೇಕು. 

ನೋಟು ರದ್ದತಿ ನಿರ್ಧಾರಕ್ಕೆ ‘ರಹಸ್ಯ ಅಗತ್ಯವಾಗಿತ್ತು’ ಎಂದ ಪ್ರಧಾನಿ, ಈ ಕುರಿತು ನಂತರವಾದರೂ ಸಂಸತ್ತಿನೊಳಗೆ ಚರ್ಚೆಯಲ್ಲಿ ಭಾಗವಹಿಸಬೇಕೆನ್ನುವ ವಿರೋಧ ಪಕ್ಷಗಳ ಷರತ್ತನ್ನು ತಳ್ಳಿಹಾಕಿ, ರಾಜ್ಯ ನಾಯಕರುಗಳ ಭೇಟಿಯ ಕೋರಿಕೆಗೂ ಸ್ಪಂದಿಸದೆ ಸಹಕಾರಿ ಒಕ್ಕೂಟ ಅಥವಾ ಸಂಘರಾಷ್ಟ್ರ ತತ್ವದ ಕಲ್ಪನೆಯನ್ನೇ ಪ್ರಶ್ನಿಸಿರುವಂತಿದೆ. ತಾವು ಕೊಟ್ಟ ಆಶ್ವಾಸನೆಗಳನ್ನೂ ಅವರು ಮರೆತಿದ್ದಾರೆ. 2014ರ ಸಾರ್ವಜನಿಕ ಚುನಾವಣೆಯಲ್ಲಿ ಮೋದಿಯವರು  ಚುನಾವಣಾ ಪ್ರಚಾರದಲ್ಲಿ ದೇಶದ ರಾಜಕೀಯ ವೈವಿಧ್ಯವನ್ನು ಗುರುತಿಸಿ ಕೊಟ್ಟ ಆಶ್ವಾಸನೆ ಹೀಗಿದೆ: ‘ಕೇಂದ್ರ- ರಾಜ್ಯ ಸಂಬಂಧಗಳು ಸಮಾಲೋಚನೆಯ ಮೂಲಕ, ಸಮರಸವಾಗಿರುವಂತೆ ನೋಡಿಕೊಳ್ಳುತ್ತೇನೆ. ‘ಟೀಂ ಇಂಡಿಯಾ’ ಕಲ್ಪನೆ ದೆಹಲಿಯಲ್ಲಿರುವ ಪ್ರಧಾನಿ ನೇತೃತ್ವದ ತಂಡಕ್ಕೆ ಸೀಮಿತವಾಗಿರದೆ, ಮುಖ್ಯಮಂತ್ರಿಗಳು ಮತ್ತಿತರ ಅಧಿಕಾರಿಗಳೂ ಸಮಪಾಲುದಾರರಾಗಿರುತ್ತಾರೆ’.

ಈ ಹೇಳಿಕೆಗೆ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯ ಹಿನ್ನೆಲೆಯಿದೆ: ವ್ಯವಸ್ಥೆಯ ಸುಧಾರಣೆ,  ಪಾರದರ್ಶಕ, ಪರಿಣಾಮಕಾರಿ, ಜವಾಬ್ದಾರಿಯುತ ಆಡಳಿತ, ಮುಕ್ತ ಪ್ರಭುತ್ವ, ಸುಶಾಸನ ಹಾಗೂ ಉತ್ತರದಾಯಿತ್ವ ( ಪ್ರಣಾಳಿಕೆ ಪುಟ 10).

ಕಪ್ಪುಹಣದ ವಹಿವಾಟನ್ನು ಸಾಧ್ಯವಾದಷ್ಟೂ ನಿಯಂತ್ರಿಸುವ ಪ್ರಯತ್ನ ರಾಜ್ಯ ಸರ್ಕಾರಗಳ ಸಕ್ರಿಯ ಬೆಂಬಲವಿಲ್ಲದೆ ಕಾರ್ಯಸಾಧುವೇ? ಕಪ್ಪುಹಣ ಹೊರತರುವ ಆದಾಯ ತೆರಿಗೆ ಇಲಾಖೆಯ  ದಾಳಿಗಳು ವರ್ಷಗಳಿಂದ ಜಾರಿಯಲ್ಲಿರುವ ಕಾಯ್ದೆಯಡಿ ಜರುಗಿಸುವ ಕ್ರಮ. ಅದರಲ್ಲಿ ಹೊಸದೇನೂ ಇಲ್ಲ.

ನೋಟು ರದ್ದತಿ ನಂತರದ ದಿನಗಳಲ್ಲಿ ಜನರು  ಅನುಭವಿಸುತ್ತಿರುವ ಕಷ್ಟಕಾರ್ಪಣ್ಯದ ಬಗ್ಗೆ  ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದ ಪತ್ರಕ್ಕೂ ಕೇಂದ್ರ ಸರ್ಕಾರ  ಸ್ಪಂದಿಸಿಲ್ಲ. ಹಾಗೆಯೇ ನೋಟು ರದ್ದತಿಯಿಂದಾದ ತೊಂದರೆಗಳ ವಿಚಾರ ವಿನಿಮಯಕ್ಕಾಗಿ ಪ್ರಧಾನಿ ಭೇಟಿಗೆ ಸಮಯ ಕೇಳಿದ ಕೇರಳದ ಸರ್ವಪಕ್ಷಗಳ ನಿಯೋಗಕ್ಕೂ ಇದೇ ಗತಿಯಾಯಿತು. ‘ಈ ನಿಯೋಗಕ್ಕೆ ನೀವು ಸಮಯ ನಿರಾಕರಿಸಿದ್ದು ಕೇರಳಕ್ಕೆ ಆದ ಅವಮಾನ; ಭಾರತದ ಸಂವಿಧಾನದಲ್ಲೇ ಉಲ್ಲೇಖಿಸಿರುವ ಒಕ್ಕೂಟ ಕಲ್ಪನೆಗೂ ತೋರಿರುವ ಅವಮಾನ. ಸ್ವಾತಂತ್ರ್ಯಾನಂತರ, ಕೇವಲ ಮಾತುಕತೆಗೂ ಪ್ರಧಾನಿ ನಿರಾಕರಿಸಿದ ಉದಾಹರಣೆ ಮತ್ತೊಂದಿಲ್ಲ’ ಎಂದು  ಅಲ್ಲಿನ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕುತೂಹಲದ ಸಂಗತಿ ಎಂದರೆ,  ಮುಖ್ಯಮಂತ್ರಿಗಳು ಮತ್ತಿತರ ನಿಯೋಗಗಳ ಭೇಟಿಯನ್ನು ನಿರಾಕರಿಸಿದ್ದ ಪ್ರಧಾನಿ, ಅದೇ ದಿನಗಳಲ್ಲಿ ಹಲವಾರು ಬಹಿರಂಗ ಸಭೆಗಳಲ್ಲಿ ನೋಟು ರದ್ದತಿ ಕುರಿತು ಚರ್ಚಿಸಿದ್ದರು!

ಕಪ್ಪುಹಣವನ್ನು ಕುಟಿಲ ತಂತ್ರಗಳ ಮೂಲಕ ಬಿಳಿ ಮಾಡಿಕೊಳ್ಳಲು ಸಮಯ ನೀಡದ್ದರಿಂದ ಕಂಗೆಟ್ಟು ವಿರೋಧ ಪಕ್ಷಗಳು ಮೂದಲಿಸುತ್ತಿವೆ ಎಂದು ಆಪಾದಿಸಿದ್ದಾರೆ ಪ್ರಧಾನಿ.  ಇದೇ ಚರ್ಚೆಯನ್ನು ನ್ಯಾಯಯುತವಾದ ವೇದಿಕೆಯಲ್ಲಿ ಮಂಡಿಸಿದ್ದರೆ ಅದು ಹೆಚ್ಚಿನ ಸಮಗ್ರತೆಯನ್ನಾದರೂ ಪಡೆಯುತ್ತಿತ್ತು. ಸಂಸತ್ತಿನ ಅಧಿವೇಶನ ನಡೆಯುತ್ತಿದ್ದ ಸಮಯವೂ ಅದಾಗಿತ್ತು! ಸಂಸತ್ತಿನೊಳಗೆ ಪ್ರಧಾನಿ ಇಂತಹ ಆಪಾದನೆ ಮಾಡಿದ್ದರೆ, ಅವರು ವಿರೋಧ ಪಕ್ಷಗಳಿಗೆ ಮುಂಚಿತವಾಗಿಯೇ ತಮ್ಮ ಆಪಾದನೆ ಕುರಿತ ನಿರ್ದಿಷ್ಟ ಮಾಹಿತಿಯ ಜೊತೆಗೆ ವಿವರಣೆಯನ್ನೂ ಸಭಾಧ್ಯಕ್ಷರಿಗೆ ಕೊಡಬೇಕಾಗಿತ್ತು. 

‘ನನ್ನ ಬಳಿ ಬರುವುದಾಗಲೀ ಸಂವಾದವಾಗಲೀ  ಅಗತ್ಯವಿಲ್ಲ; ಸಂಸತ್ತಿನಲ್ಲಿ ನನ್ನ ನಿರ್ಧಾರ ಕುರಿತ ಚರ್ಚೆಯಲ್ಲಿ ನಾನು ಪಾಲ್ಗೊಳ್ಳುವ ಅವಶ್ಯಕತೆಯಿಲ್ಲ’ ಎನ್ನುವ ಸಂದೇಶ ‘ಸಹಕಾರಿ ಒಕ್ಕೂಟ’ಕ್ಕೆ ಪೂರಕವಲ್ಲ. ‘ಕಪ್ಪುಹಣ ವಿರುದ್ಧದ ಜಯ- ಅಪಜಯಗಳಿಗೆ ನಾನೇ ಜವಾಬ್ದಾರಿ’ ಎಂದು ಭಾವೋದ್ವೇಗಕ್ಕೊಳಗಾಗಿ ಕೆಲವು ದಿನಗಳ ಹಿಂದೆ ಕಣ್ಣು ತೇವ ಮಾಡಿಕೊಂಡ ಪ್ರಧಾನಿ, ತಮ್ಮ ಉತ್ತರದಾಯಿತ್ವದ ಹೊಣೆಗಾರಿಕೆಯನ್ನು ಸಂಸತ್ತು ಹಾಗೂ ಸಹಕಾರಿ ಒಕ್ಕೂಟದ ಚೌಕಟ್ಟಿನೊಳಗೆ ಗುರುತಿಸಲು ಒಪ್ಪಿಲ್ಲವೆಂದೇ ಹೇಳದೆ ವಿಧಿಯಿಲ್ಲ. ಒಕ್ಕೂಟದ ವಿವಿಧ ನಿಲುವುಗಳು ಮತ್ತು ಧ್ವನಿಗಳಿಗೆ ಪೂರಕವಾಗಿದ್ದ ಮತ್ತು ಮುಖ್ಯಮಂತ್ರಿಗಳೆಲ್ಲ ಭಾಗವಹಿಸುತ್ತಿದ್ದ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ ಹಾಗೂ ‘ರಾಷ್ಟ್ರೀಯ ಯೋಜನಾ ಆಯೋಗ’ಗಳನ್ನು ಕೇಂದ್ರ  ಸರ್ಕಾರ ಅಂತ್ಯಗೊಳಿಸಿದೆ.  ಜನಸಾಮಾನ್ಯರ ಬದುಕಿನಲ್ಲಿ ಅಯೋಮಯ ಉಂಟುಮಾಡಿದ ನಿರ್ಧಾರವನ್ನು ತಾವೊಬ್ಬರೇ ಮಾಧ್ಯಮಗಳ ಮುಂದೆ ಜಾಹೀರು ಮಾಡಿದ ಪ್ರಧಾನಿಯವರ ಕ್ರಮ, ಸಂಸತ್‌ನ ಬಾಗಿಲಿಗೆ ನಮಸ್ಕರಿಸಿದ ಅವರದೇ ನಿಲುವಿಗೆ ತದ್ವಿರುದ್ಧವಾಗಿದೆ.

ಭಾರತದ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಕ್ರಿಯೆಯಲ್ಲಿ, ಯಾವುದೇ ಪಕ್ಷದ ನೇತೃತ್ವದಲ್ಲಿ ರಚನೆಯಾಗಿರುವ ರಾಜ್ಯಗಳಲ್ಲಿನ  ಸರ್ಕಾರಗಳ ಮುಖ್ಯಸ್ಥರೊಡನೆ ವಿಶ್ವಾಸಪೂರ್ವಕ ವಿಚಾರ ವಿನಿಮಯ ಅಪೇಕ್ಷಣೀಯ. ಡಾ. ಅಂಬೇಡ್ಕರ್ ಮತ್ತಿತರರ ಜೊತೆ ಸಂಸದೀಯ ಮಾದರಿಯ ಸಹಕಾರಿ ಒಕ್ಕೂಟದ ಆಡಳಿತ ವ್ಯವಸ್ಥೆಗೆ ಮೊದಲ ಹೆಜ್ಜೆ ಇಟ್ಟವರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅಗ್ರಗಣ್ಯರು. ಸ್ವಾತಂತ್ರ್ಯಾ ನಂತರ ಕೇವಲ ಎರಡೇ ತಿಂಗಳು ಉರುಳಿತ್ತು. ಎಲ್ಲಾ ರಾಜ್ಯಗಳ ಮುಖ್ಯಸ್ಥರಿಗೂ ಪಕ್ಷಭೇದವಿಲ್ಲದೆ, 1947ರ ಅಕ್ಟೋಬರ್ 15ರಿಂದಲೇ ಸಮಕಾಲೀನ ವಿಷಯಗಳ ಕುರಿತು 15 ದಿನಕ್ಕೊಮ್ಮೆ ಪತ್ರ ಬರೆದು ಅವರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಸಂಪ್ರದಾಯ, 1964ರಲ್ಲಿ ಅವರ ನಿಧನಕ್ಕೆ ಕೆಲವು ತಿಂಗಳ ಮುಂಚಿನವರೆಗೂ ನಿರಂತರವಾಗಿತ್ತು ಎಂಬುದನ್ನು  ಇಲ್ಲಿ ಸ್ಮರಿಸಬಹುದು.

***
ಗೊಂದಲದ ಕ್ರಮ

₹ 500 ಮತ್ತು 1000 ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿ ಹೊರಡಿಸಿದ ಆದೇಶದ ಪ್ರಕಾರ, ಈ ತಿಂಗಳ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಅವಕಾಶವಿತ್ತು. ಆದರೆ ಆರ್‌ಬಿಐ ಇತ್ತೀಚೆಗೆ  ಹೊರಡಿಸಿದ ಆದೇಶದಂತೆ, ₹ 5000ಕ್ಕಿಂತ ಹೆಚ್ಚು ಮೌಲ್ಯದ ಹಳೆಯ ನೋಟುಗಳನ್ನು ಖಾತೆಗೆ ಜಮಾ ಮಾಡುವುದಾದರೆ, ಇಲ್ಲಿಯವರೆಗೂ ಹಾಗೇಕೆ ಮಾಡಿರಲಿಲ್ಲ ಎನ್ನುವುದಕ್ಕೆ ಬ್ಯಾಂಕಿನ ಇಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ತೃಪ್ತಿಕರವಾದ ವಿವರಣೆ ನೀಡಬೇಕಾಗುತ್ತದೆ. ಅಲ್ಲದೆ ₹ 5000ಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ಖಾತೆಗೆ ಒಮ್ಮೆ ಮಾತ್ರ ಜಮಾ ಮಾಡಬಹುದು.

ಇಲ್ಲಿ ಒಂದೆರಡು ಪ್ರಶ್ನೆಗಳು ಪ್ರಸ್ತುತವಾಗುತ್ತವೆ. ನ.8ರಂದು  ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ರದ್ದಾಗಲಿರುವ ₹ 500 ಮತ್ತು 1000  ನೋಟುಗಳನ್ನು ಬ್ಯಾಂಕುಗಳಿಗೆ ಕೊಡಬಹುದು ಎಂದು ಹೇಳಿದ್ದರು. ಆರ್‌ಬಿಐ ಈಗ ಹೊರಡಿಸಿರುವ ಆದೇಶವು ಪ್ರಧಾನಿಯ ಆಶ್ವಾಸನೆಗೆ ವಿರುದ್ಧವಾಗಿದೆ.

ಬ್ಯಾಂಕಿನ ಅಧಿಕಾರಿಗಳಿಗೆ ಖಾತೆದಾರರಿಂದ ಹಾಗೆ ವಿವರಣೆ ಪಡೆಯಲು ಯಾವ ಕಾಯ್ದೆಯು ಅಧಿಕಾರ ಕೊಡುತ್ತದೆ? ನೋಟುಗಳ ರದ್ದತಿ ನಂತರದ ವಿದ್ಯಮಾನಗಳನ್ನು ಗಮನಿಸಿದರೆ, ಸರ್ಕಾರ ಮತ್ತು ಆರ್‌ಬಿಐ ಗೊಂದಲಕ್ಕೆ ಒಳಗಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ.
–ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT