ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮಾರುಕಟ್ಟೆಗೆ ಬಿಎಂಡಬ್ಲ್ಯು ಮಿನಿ ಕ್ಲಬ್‌ಮ್ಯಾನ್

ಮಿನಿ ಬ್ರ್ಯಾಂಡ್‌ನ ಜೆಂಟಲ್‌ಮ್ಯಾನ್ ಕಾರು
Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಿಮ್ಮ ಕಾರಿನ ಕೀ ಕಿಸೆಯೊಳಗೆ ಅಡಗಿ ಕುಳಿತಿದೆ. ಎರಡೂ ಕೈಗಳನ್ನು ಅಗಲಿಸಿ ಲಗೇಜ್ ಹಿಡಿದು ಕಾರಿನ ಹಿಂಬದಿ ನಿಂತು ಡಿಕ್ಕಿ ತೆಗೆಯಲು ಪರಿತಪಿಸುತ್ತಿದ್ದೀರಾ... ಭಾರದ ಲಗೇಜ್ ಕೆಳಗಿಡಲೂ ಆಗದು, ಬಾಗಿಲು ತೆಗೆಯಲೂ ಆಗದ ಸ್ಥಿತಿ.

ದಾರಿಯಲ್ಲಿ ಸುಳಿದಾಡುವ ಇನ್ನಾರನ್ನೋ ಎಕ್ಸ್‌ಕ್ಯೂಸ್ ಮಿ ಪ್ಲೀಸ್... ಎಂದು ಸಹಾಯ ಯಾಚಿಸಿ ಕಾರಿನ ಹಿಂಬದಿಯ ಬಾಗಿಲು ತೆರೆಯುವಷ್ಟರಲ್ಲಿ ಉಸ್ಸಪ್ಪಾ...! ಆದರೆ ಲಗೇಜ್ ಹಿಡಿದ ಅದೇ ನೀವು ಕಾರಿನ ಹಿಂಬದಿಯ ಬಂಪರ್ ಕೆಳಗೆ ಒಂದೆರಡು ಸಲ ಕಾಲು ಆಡಿಸುತ್ತಿದ್ದಂತೆ ಬಾಗಿಲು ತಂತಾನೆ ತೆರೆದರೆ? ಹೀಗೆ ಸೆನ್ಸರ್ ಮೂಲಕ ಹಿಂಬದಿ ಬಾಗಿಲು ತೆಗೆಯುವುದು ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ಹೊಸ ಮಿನಿ ಕಾರು ದೇಶದ ಮಾರುಕಟ್ಟೆ ಪ್ರವೇಶಿಸಿದೆ.

ಅದೇ ಮಿನಿ ಕ್ಲಬ್‌ಮ್ಯಾನ್‌. ಕಾರಿನ ವಿನ್ಯಾಸ ಮತ್ತು ಹಿಂಬದಿಯ ಸ್ಪ್ಲಿಟ್ ಡೋರ್ ಗಮನ ಸೆಳೆಯುತ್ತದೆ. ಮಿನಿ ಕಾರು ಮಾದರಿಗಳಲ್ಲಿ ಆರು ಬಾಗಿಲು ಹೊಂದಿರುವ ಮೊದಲ ಕಾರು ಎನ್ನುವ ಹೆಗ್ಗಳಿಕೆ ಮಿನಿ ಕ್ಲಬ್‌ಮ್ಯಾನ್‌ನದ್ದು. ಬಿಎಂಡಬ್ಲ್ಯು ಸಮೂಹದ ಮಿನಿ ಬ್ರ್ಯಾಂಡ್‌ನ ಅಡಿ ಈ ಹೊಸ ಕಾರು ಸಿದ್ಧಗೊಂಡಿದೆ. ಕ್ಲಬ್‌ಮ್ಯಾನ್ ಮೂಲಕ ಇದೇ ಮೊದಲ ಬಾರಿಗೆ ಮಿನಿ ಕಾರು ಮಾದರಿಯಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪರಿಚಯಿಸಲಾಗಿದೆ. ಬ್ರಿಟಿಷ್ ಕೌಶಲ್ಯ ಮತ್ತು ಜರ್ಮನ್ ತಾಂತ್ರಿಕತೆ ಜೊತೆಗೂಡಿರುವ ಹೊಸ ಕಾರನ್ನು ಜೆಂಟಲ್‌ಮ್ಯಾನ್ ಕಾರು ಎಂದೇ ಬಣ್ಣಿಸಲಾಗಿದೆ.

ಹೆಚ್ಚು ಲಗೇಜ್ ಹಿಡಿಯುವುದಿಲ್ಲ, ನೂರಾರು ಕಿ.ಮೀ. ಸಂಚಾರ ಹಿತವಾಗಿರುವುದಿಲ್ಲ, ಸುರಕ್ಷತೆ ಇರುವುದಿಲ್ಲ...  ಹೀಗೆ ಅನೇಕ ಕಾರಣಗಳಿಂದಾಗಿ ಸಾಮಾನ್ಯವಾಗಿ ದೂರದ ಪ್ರವಾಸಕ್ಕೆ ಸಣ್ಣ ಕಾರುಗಳ ಬಳಕೆ ಕಡಿಮೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಕ್ಲಬ್‌ಮ್ಯಾನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಪೋರ್ಟ್ಸ್ ಶೈಲಿಯ ಆಸನ ವ್ಯವಸ್ಥೆ ದೂರದ ಪ್ರಯಾಣಕ್ಕೆ ಆರಾಮದಾಯಕವಾಗಿರಲಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಪೋರ್ಟ್ ಮತ್ತು ಗ್ರೀನ್ ಮೋಡ್‌ಗಳಿದ್ದು, ಚಾಲಕರಿಗೆ ಕಾರು ಚಾಲನೆಯನ್ನು ಸುಲಭವಾಗಿಸುತ್ತದೆ.

ಸಂಗ್ರಹ ಸ್ಥಳಾವಕಾಶ ಹೆಚ್ಚು
ಹಿಂಬದಿಯ ಸ್ಪ್ಲಿಟ್ ಡೋರ್‌ಗಳು ರಿಮೋಟ್ ಮತ್ತು ಸೆನ್ಸರ್ ಮೂಲಕ ತೆರೆದುಕೊಳ್ಳುತ್ತವೆ. ದೂರದ ಪ್ರವಾಸಕ್ಕೆಂದೇ ವಿಶೇಷವಾಗಿ ರೂಪಿಸಿರುವುದರಿಂದ ಸಾಮಾನು ಸಂಗ್ರಹಕ್ಕೆ ಹೆಚ್ಚು ಸ್ಥಳಾವಕಾಶ ದೊರೆತಿದೆ. ಕಾರಿನ ಹಿಂಬದಿಯ ಎರಡು ಸೀಟ್‌ಗಳನ್ನು ಸುಲಭವಾಗಿ ಮಡಚಬಹುದಾಗಿದ್ದು, ಬೂಟ್‌ಸ್ಪೇಸ್ ಅನ್ನು (ಸಂಗ್ರಹಣಾ ಸಾಮರ್ಥ್ಯ) 360 ಲೀಟರ್‌ನಿಂದ 1250 ಲೀಟರ್‌ವರೆಗೂ ಹೆಚ್ಚಿಸಬಹುದು. ಟ್ವಿನ್‌ಪವರ್ ಟರ್ಬೋ ತಂತ್ರಜ್ಞಾನದೊಂದಿಗೆ ಎರಡು ಲೀಟರ್‌ನ 4 ಸಿಲಿಂಡರ್ ಎಂಜಿನ್ ಅಧಿಕ ಸಾಮರ್ಥ್ಯ ಒದಗಿಸುತ್ತದೆ.

7.2 ಸೆಕೆಂಡ್‌ಗಳಲ್ಲಿ 0 ಯಿಂದ100 ಕಿ.ಮೀ. ವೇಗ ತಲುಪುತ್ತದೆ ಹಾಗೂ ಗಂಟೆಗೆ ಗರಿಷ್ಠ 228 ಕಿ.ಮೀ. ವೇಗದಲ್ಲಿ ಚಲಿಸಲು ಸಮರ್ಥವಾಗಿದೆ. ಭಿನ್ನವಾಗಿ ವಿನ್ಯಾಸಗೊಳಿಸಿರುವ ಎಲ್‌ಇಡಿ ಹೆಡ್‌ಲೈಟ್ ಕಾರಿನ ಸೌಂದರ್ಯ ಹೆಚ್ಚಿಸಿದೆ. ಮೂನ್‌ವಾಕ್ ಗ್ರೇ ಮೆಟಾಲಿಕ್ ಕಲರ್, ಪೆಪ್ಪರ್ ವೈಟ್, ವಾಲ್ಕ್ಯಾನಿಕ್ ಆರೆಂಜ್, ಡಿಜಿಟಲ್ ಬ್ಲ್ಯೂ, ಬ್ಲೇಜಿಂಗ್ ರೆಡ್, ಬ್ರಿಟಿಷ್ ರೇಸಿಂಗ್ ಗ್ರೀನ್, ಮೆಲ್ಟಿಂಗ್ ಸಿಲ್ವರ್, ಥಂಡರ್ ಗ್ರೇ ಹಾಗೂ ಮಿಡ್‌ನೈಟ್ ಬ್ಲ್ಯಾಕ್ ಸೇರಿದಂತೆ ಹಲವು ಬಣ್ಣಗಳಲ್ಲಿ ಕಾರು ಲಭ್ಯವಿದೆ.

ಗಮನ ಸೆಳೆಯುವ ಟಚ್‌ಸ್ಕ್ರೀನ್
ಬ್ರಿಟಿಷ್ ಶೈಲಿಯ ಹೊರಗಿನ ವಿನ್ಯಾಸದೊಂದಿಗೆ ಕಾರಿನ ಒಳಾಂಗಣ ವಿಶೇಷವೆನಿಸುತ್ತದೆ. ಡ್ಯಾಷ್ ಬೋರ್ಡ್‌ನ ಮಧ್ಯದಲ್ಲಿ ಅಳವಡಿಸಲಾಗಿರುವ ಟಚ್‌ಸ್ಕ್ರೀನ್ ಹಾಗೂ ಆ ಪರದೆಯನ್ನು ಸುತ್ತುವರಿದಿರುವ ವೃತ್ತಾಕಾರದ ಎಲ್‌ಇಡಿ ರಿಂಗ್ ಗಮನ ಸೆಳೆಯುತ್ತದೆ. ಜಿಪಿಎಸ್‌ ವ್ಯವಸ್ಥೆಗೆ ಅನುಕೂಲಕರ ಪರದೆಯಿದ್ದು, 20 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಸ್ಪೋರ್ಟ್ಸ್‌ ಶೈಲಿಯ ಲೆದರ್ ಸೀಟ್‌ನಿಂದ ಉತ್ಕೃಷ್ಟ ಅನುಭವ ಪಡೆಯಬಹುದು.

ಮುಂಬೈನಲ್ಲಿ ಬಿಡುಗಡೆ
ಬಿಎಂಡಬ್ಲ್ಯು ಸಮೂಹದ ಮಿನಿ ಬ್ರ್ಯಾಂಡ್‌ನ ವಿವಿಧ ಮಾದರಿಯ ಸಣ್ಣ ಕಾರುಗಳು ಈಗಾಗಲೇ ದೇಶದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿವೆ. ಕ್ಲಬ್‌ಮ್ಯಾನ್ ಐದನೇ ಮಾದರಿಯ ಮಿನಿ ಕಾರು. ಒಂಟಿಯಾಗಿ ಹೊರಡುವ ಪ್ರಯಾಣ, ಪ್ರಿಯವಾದವರ ಜೊತೆ ಅಥವಾ ಕುಟುಂಬ ಸಮೇತರಾಗಿ ಮಾಡುವ ಪ್ರಯಾಣ, ಎಲ್ಲ ವರ್ಗದವರಿಗೂ ಈ ಕಾರು ಚೆನ್ನ ಎಂಬುದನ್ನು ಮುಂಬೈನಲ್ಲಿ ನಡೆದ ಫ್ಯಾಷನ್ ಶೋ ಮೂಲಕ ಬಿಂಬಿಸಲಾಯಿತು. ಭಾರತದ ಬಿಎಂಡಬ್ಲ್ಯು ಸಮೂಹಗಳ ಅಧ್ಯಕ್ಷ ಫ್ರಾಂಕ್ ಸ್ಕ್ಲಾಡರ್ ಕಾರು ಚಾಲನೆ ಮಾಡುವ ಮೂಲಕ ಕ್ಲಬ್‌ಮ್ಯಾನ್‌ಅನಾವರಣಗೊಳಿಸಿದರು. ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರಿನ ಎಕ್ಸ್ ಷೋ ರೂಂ ಬೆಲೆ ₹37,90,000.

***
ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್

ಬೆಲೆ: ₹37.90 ಲಕ್ಷ  (ಎಕ್ಸ್-ಷೋ ರೂಂ)
ಎಂಜಿನ್:  2-ಲೀಟರ್  4-ಸಿಲಿಂಡರ್
ಗರಿಷ್ಠ ವೇಗ:  ಪ್ರತಿ ಗಂಟೆಗೆ 228 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT