ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷ ರಷ್ಯಾದ ‘ಸಾಕುನಾಯಿ’ಯೇ?

ಟ್ರಂಪ್ ಅವರ ಹೊಸ ಸರ್ಕಾರ ಪುಟಿನ್ ಪರವಾಗಿರುತ್ತದೆ ಎಂಬುದಕ್ಕೆ ಪುರಾವೆಗಳು ಹಲವು
Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಡೆಮಾಕ್ರಟಿಕ್ ಪಕ್ಷಕ್ಕೆ ಹಾನಿ ಮಾಡುವುದಕ್ಕಾಗಿ 1972ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಪ್ರಯತ್ನಿಸಿದ್ದರು. ವಾಟರ್‌ಗೇಟ್ ಹಗರಣ ಮತ್ತು ಅದಕ್ಕೆ ಸಂಬಂಧಿಸಿ ನಿಕ್ಸನ್‌ ಅವರು ಅನುಸರಿಸಿದ ಕೆಲವು ‘ಕೊಳಕು ತಂತ್ರ’ಗಳೇ ಆಗ ಹುಡುಗರಾಗಿದ್ದ ನಮ್ಮಂತಹ ಕೆಲವರಲ್ಲಿ ಪತ್ರಿಕೋದ್ಯಮಕ್ಕೆ ಬರುವ ಪ್ರೇರಣೆ ನೀಡಿದ್ದವು (ವಾಟರ್‌ಗೇಟ್, ನಿಕ್ಸನ್ ಆಡಳಿತಾವಧಿಯಲ್ಲಿ 1972ರಲ್ಲಿ ನಡೆದ ದೊಡ್ಡ ಹಗರಣ).

ಡೆಮಾಕ್ರಟಿಕ್ ಪಕ್ಷ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಇಲಿಗಳನ್ನು ಬಿಟ್ಟದ್ದು, ‘ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೊಬ್ಬರನ್ನು ಪ್ರೀತಿಸುತ್ತಿದ್ದೇನೆ’ ಎಂದು ಮಹಿಳೆಯೊಬ್ಬರು ನಗ್ನವಾಗಿ ಕೂಗಿಕೊಂಡದ್ದು ಕೊಳಕು ತಂತ್ರಗಳು ಎಂದು ನಾನು ಹೇಳಿದ್ದರಲ್ಲಿ ಸೇರುತ್ತವೆ. ಇಂತಹ ಕೊಳಕು ತಂತ್ರಗಳಿಂದ ಅಮೆರಿಕನ್ನರಿಗೆ ವಾಕರಿಕೆ ಬರುವಂತಾಗಿತ್ತು.

ಈಗ, 2016ರಲ್ಲಿ ಕೆಲವು ದೃಷ್ಟಿಯಲ್ಲಿ ನೋಡಿದರೆ ಇನ್ನೂ ಹೆಚ್ಚು ಆಘಾತಕಾರಿಯಾದ ರಾಜಕೀಯ ಹಗರಣವೊಂದು ಕಾಣಿಸಿಕೊಂಡಿದೆ. ರಷ್ಯಾದ ಏಜೆಂಟರು ಡೆಮಾಕ್ರಟಿಕ್ ಪಕ್ಷದ ಡಿಜಿಟಲ್ ವ್ಯವಸ್ಥೆಗೆ ನುಗ್ಗಿ ಚುನಾವಣೆಯ ಫಲಿತಾಂಶ ಬದಲಾಯಿಸಿದರು ಎಂಬುದು ಈಗ ಇರುವ ಆರೋಪ. ‘ವ್ಲಾಡಿಮಿರ್ ಪುಟಿನ್ ಅವರ ಗಮನಕ್ಕೆ ಬಾರದೆ ರಷ್ಯಾದಲ್ಲಿ ಏನೂ ನಡೆಯುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ರಷ್ಯಾದ ಅಧ್ಯಕ್ಷರ ಸೂಚನೆಯಂತೆಯೇ ಈ ಕೃತ್ಯ ನಡೆದಿದೆ ಎಂಬುದನ್ನು ಅವರು ಸೂಚಿಸಿದ್ದಾರೆ.

ವಾಟರ್‌ಗೇಟ್ ಹಗರಣವು ಆಗಿನ ಚುನಾವಣಾ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮವೇನನ್ನೂ ಬೀರಲಿಲ್ಲ. ಆದರೆ 2016ರ ಬಗ್ಗೆ ನಮಗೆ ಖಚಿತವಾಗಿ ಏನೂ ಗೊತ್ತಿಲ್ಲ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಸೋಲಿಗೆ ಬೇರೆ ಅಂಶಗಳು ಕಾರಣವಾಗಿರಬಹುದು. ಡೆಮಾಕ್ರಟಿಕ್‌ ಪಕ್ಷದ ಡಿಜಿಟಲ್ ವ್ಯವಸ್ಥೆಯಿಂದ ಕನ್ನ ಹಾಕಿ ತೆಗೆದ ಇ-ಮೇಲ್‌ಗಳನ್ನು ಬಹಿರಂಗ ಮಾಡಿದ್ದು ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಕಾರಣವಾಗಿದೆ ಎಂಬ ಅನುಮಾನವಂತೂ ಇದೆ.

ಟ್ರಂಪ್ ಅವರ ಗೆಲುವಿಗೆ ರಷ್ಯಾ ಪ್ರಯತ್ನ ನಡೆಸಿದೆ ಎಂಬುದು ‘ನಮಗೆ ಅತ್ಯಂತ ದೃಢವಾಗಿ ತಿಳಿದಿರುವ ಅಂಶ’ ಎಂದು ಸಿಐಎ ಹೇಳಿದೆ. ಎಫ್‌ಬಿಐ ಮತ್ತು ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರು ಸಿಐಎಯ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.
ನಿಕ್ಸನ್ ಮತ್ತು ಟ್ರಂಪ್ ಅವರಿಬ್ಬರೂ ತಮ್ಮ ವಿರುದ್ಧದ ಆರೋಪಗಳಿಗೆ ಅತ್ಯಂತ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಇರುವ ಆರೋಪಗಳನ್ನು ಮುಚ್ಚಿ ಹಾಕುವಂತೆ ನಿಕ್ಸನ್ ಆದೇಶಿಸಿದ್ದರು.

ಟ್ರಂಪ್ ಅವರು ಸಿಐಎ ಹೇಳಿಕೆಯನ್ನು ಅಲ್ಲಗಳೆದರು. ಅಷ್ಟೇ ಅಲ್ಲ, ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಷ್ಯಾವನ್ನು ಸಮರ್ಥಿಸಿಕೊಂಡರು. ಅಮೆರಿಕದ ಗುಪ್ತಚರ ವಿಭಾಗ ಮತ್ತು ಕೊಲೆಗಡುಕ ವಿದೇಶಿ ನಿರಂಕುಶಾಧಿಪತಿಯ ನಡುವೆ ವಿವಾದವೊಂದು ಸೃಷ್ಟಿಯಾದಾಗ ಅಮೆರಿಕದ ನಾಯಕನೊಬ್ಬ ನಿರಂಕುಶಾಧಿಕಾರಿಯ ಪರ ನಿಲ್ಲುವುದನ್ನು ಕಾಣಬಹುದು ಎಂಬುದನ್ನು ಹಿಂದೆ ನಾವೆಂದೂ ಊಹಿಸಿರಲಿಲ್ಲ.

ನಾವು ಈ ವಿಚಾರಗಳನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಯತ್ನಿಸೋಣ: ಇದು ಅಮೆರಿಕದ ಮೇಲೆ ನಡೆದ ದಾಳಿ. ಕ್ಷಿಪಣಿ ದಾಳಿಯಷ್ಟು ಘೋರವಲ್ಲದಿದ್ದರೂ ಇದು ಅಮೆರಿಕದ ವ್ಯವಸ್ಥೆಗೆ ಮಾಡುವ ಹಾನಿ ಅತ್ಯಂತ ಗಂಭೀರ. ಚುನಾವಣೆ ಗೆಲ್ಲುವುದಕ್ಕಾಗಿ ಟ್ರಂಪ್ ಮತ್ತು ಪುಟಿನ್ ಕೈಜೋಡಿಸಿದರು ಎಂದು ಹೇಳಲಾಗದು. ಆದರೆ ಸಿಐಎ ಆರೋಪ ನಿಜ ಎಂದಾದರೆ, ಟ್ರಂಪ್ ಅವರ ಗೆಲುವಿಗೆ ರಷ್ಯಾ ಶ್ರಮಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಕೈಗೊಂಬೆಯನ್ನು ಅಮೆರಿಕದ ಅಧ್ಯಕ್ಷನಾಗಿಸಬೇಕು ಎಂದಲ್ಲದಿದ್ದರೂ, ರಷ್ಯಾದ ‘ಸಾಕುನಾಯಿ’ ಅಧ್ಯಕ್ಷನಾಗಲಿ ಎಂಬ ಆಕಾಂಕ್ಷೆಯನ್ನು ಆ ದೇಶ ಹೊಂದಿದೆ.

ಬ್ರಿಟನ್ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್ ಅವರ ‘ಸಾಕುನಾಯಿ’ ಎಂದು ವ್ಯಾಪಕವಾಗಿ (ನ್ಯಾಯಯುತವಲ್ಲದ ರೀತಿಯಲ್ಲಿ) ಹಂಗಿಸಲಾಗುತ್ತಿತ್ತು. ಇರಾಕ್ ಯುದ್ಧದ ವಿಚಾರದಲ್ಲಿ ಬುಷ್‌ ಅವರಿಗೆ ಬ್ಲೇರ್ ನಿಷ್ಠೆ ಪ್ರದರ್ಶಿಸಿದರು ಎಂಬುದು ಇದಕ್ಕೆ ಕಾರಣ. ತಾವು ಹೇಳಿದಂತೆ ಕೇಳುವ ವ್ಯಕ್ತಿಯನ್ನು ಅಮೆರಿಕದ ಅಧ್ಯಕ್ಷನನ್ನಾಗಿ ಮಾಡಲು ಪುಟಿನ್ ಪ್ರಯತ್ನಿಸಿದರು.  ಸಿಐಎ ಅಧಿಕಾರಿಗಳಿಂದ ಹಿಡಿದು ಇಂಡಿಯಾನಾದ ಸ್ಥಳೀಯ ಮುಖಂಡನೊಬ್ಬನ ವರೆಗೆ ಎಲ್ಲರ ವಿರುದ್ಧವೂ ಟ್ರಂಪ್ ಹರಿಹಾಯುತ್ತಿದ್ದಾರೆ.

ಆದರೆ, ರಷ್ಯಾ ಮತ್ತು ಪುಟಿನ್ ಅವರನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರಿಸಿರುವುದು ನಿಗೂಢವಾಗಿ ಕಾಣಿಸುತ್ತದೆ. ಈಗ ಟ್ರಂಪ್ ಅವರು ಕೈಗೊಂಡಿರುವ ಅತ್ಯಂತ ಭಂಡತನದ ನಿರ್ಧಾರಗಳಿಗೆ ಬರೋಣ: ರಷ್ಯಾದ ಈ ‘ಸಾಕುನಾಯಿ’ ಅದರ ಸ್ವಭಾವಕ್ಕೆ ತಕ್ಕಂತೆ ವರ್ತಿಸಿದೆ- ಸರ್ಕಾರದ ಮುಖ್ಯವಾದ ಹುದ್ದೆಗಳನ್ನು ರಷ್ಯಾದ ಗೆಳೆಯರಿಗೆ ನೀಡುವ ಮೂಲಕ ಆ ದೇಶದ ಅಮೆರಿಕದ ವಿರುದ್ಧದ ದಾಳಿಗೆ ಪ್ರತಿಫಲ ನೀಡಲಾಗಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಟ್ರಂಪ್ ಆಯ್ಕೆ ಮಾಡಿರುವ ರೆಕ್ಸ್ ಟಿಲ್ಲರ್‌ಸನ್‌ ಚತುರ ಮತ್ತು ಸಮರ್ಥ ಮ್ಯಾನೇಜರ್. ಆದರೆ ಈ  ವ್ಯಕ್ತಿ ಪುಟಿನ್ ಅವರ ಆಪ್ತ ಎಂಬುದು ಗಮನಿಸಬೇಕಾದ ಅಂಶ. ಟಿಲ್ಲರ್‌ಸನ್‌ ಅವರಿಗೆ ಪುಟಿನ್ ರಷ್ಯಾದ ‘ಆರ್ಡರ್ ಆಫ್ ಫ್ರೆಂಡ್‌ಶಿಪ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ವೈಯಕ್ತಿಕವಾಗಿ ನಮ್ಮ ರಾಜಕೀಯಗಳು ಏನೇ ಇರಲಿ. ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ರಷ್ಯಾ ನಡೆಸಿದ ಹಸ್ತಕ್ಷೇಪಕ್ಕೆ ಪ್ರತಿಯಾಗಿ ಪುಟಿನ್ ಅವರ ಗೆಳೆಯನ ಕೈಗೆ ಅಮೆರಿಕದ ವಿದೇಶಾಂಗ ನೀತಿಯನ್ನು ಕೊಟ್ಟಿರುವುದಕ್ಕೆ ನಾವು ಪ್ರತಿಕ್ರಿಯೆ ನೀಡುವುದು ಹೇಗೆ? ಪುಟಿನ್‌ ಅವರಿಗೆ ಟಿಲ್ಲರ್‌ಸನ್‌ ಆಪ್ತರಾಗಿರುವುದು ಒಂದೆಡೆಯಾದರೆ, ಟ್ರಂಪ್ ಅವರು ರಷ್ಯಾದಲ್ಲಿ ಹೊಂದಿರುವ ಇತರ ನಂಟುಗಳು ನಮ್ಮಲ್ಲಿ ಆತಂಕ ಮೂಡಿಸುತ್ತಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಟ್ರಂಪ್ ಅವರು  ನೇಮಿಸಲು ಉದ್ದೇಶಿಸಿರುವ ಮೈಕೆಲ್ ಥಾಮಸ್ ಫ್ಲಿನ್ ಮಾಸ್ಕೊದಲ್ಲಿ ನಡೆದ ಔತಣಕೂಟವೊಂದಕ್ಕೆ ಸರ್ಕಾರದಿಂದ ಹಣ ಪಡೆದುಕೊಂಡಿದ್ದಾರೆ. ಪುಟಿನ್ ಅವರ ಜತೆ ಔತಣ ಸವಿದಿದ್ದಾರೆ. ಉಕ್ರೇನ್‌ನ ರಷ್ಯಾಪರ ಪಕ್ಷವೊಂದು ಟ್ರಂಪ್ ಅವರ ಮಾಜಿ ಪ್ರಚಾರ ವ್ಯವಸ್ಥಾಪಕ ಪಾಲ್ ಮ್ಯಾನಾಪೋರ್ಟ್ ಅವರಿಗೆ ರಹಸ್ಯವಾಗಿ 1.27 ಕೋಟಿ ಡಾಲರ್ (ಸುಮಾರು ₹89 ಕೋಟಿ) ಮೊತ್ತವನ್ನು ನೀಡಿದ್ದಾರೆ. ಇದಿಷ್ಟೇ ಅಲ್ಲ, ಟ್ರಂಪ್ ಅವರ ಕುಟುಂಬದ ಸದಸ್ಯರಿಗೆ ರಷ್ಯಾದ ಜತೆಗೆ ಇತರ ವ್ಯಾಪಾರ ಸಂಬಂಧಗಳೂ ಇವೆ.

ಇದಕ್ಕಿಂತ ಭಿನ್ನವಾದ ಕೆಲವು ನೇಮಕಗಳನ್ನೂ ಟ್ರಂಪ್ ಅವರು ಮಾಡಿಕೊಳ್ಳಲು ಉದ್ದೇಶಿಸಿದ್ದಾರೆ ಎಂಬುದು ನಿಜ. ಅದರಲ್ಲಿ ನೌಕಾಪಡೆಯ ಮಾಜಿ ಕಮಾಂಡರ್ ಜನರಲ್ ಜೇಮ್ಸ್ ಮ್ಯಾಟಿಸ್ ಅವರ ಹೆಸರು ಇದೆ. ಅವರು ರಕ್ಷಣಾ ಕಾರ್ಯದರ್ಶಿಯಾಗುವ ಸಾಧ್ಯತೆ ಇದೆ. ಜೇಮ್ಸ್ ಮ್ಯಾಟಿಸ್ ಅವರಿಗೆ ರಷ್ಯಾ ಬಗ್ಗೆ ಭ್ರಮೆಗಳೇನೂ ಇಲ್ಲ. ಆದರೆ ಸಮಗ್ರವಾಗಿ ನೋಡುವಾಗ ಟ್ರಂಪ್ ಅವರ ಸರ್ಕಾರ ಮುಖ್ಯವಾಗಿ ಪುಟಿನ್ ಪರವಾಗಿ ಇರುವಂತೆ ಕಾಣಿಸುತ್ತಿದೆ.

ಪುಟಿನ್ ಅವರ ಜತೆ ಸ್ನೇಹದಿಂದ ಇರಬಾರದು ಅಂತಲೂ ಇಲ್ಲ. ಆದರೆ ಪುಟಿನ್ ಅವರ ರಷ್ಯಾ ಪತ್ರಕರ್ತರ ಹತ್ಯೆ ಮಾಡಿದೆ, ಉಕ್ರೇನ್ ಮತ್ತು ಸಿರಿಯಾದಲ್ಲಿ ಯುದ್ಧಾಪರಾಧದಲ್ಲಿ ತೊಡಗಿದೆ ಮತ್ತು ಇಡೀ ಯುರೋಪ್‌ನ ಶಾಂತಿ ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿ ನಿಂತಿದೆ. ಹೀಗಾಗಿ ಅಮೆರಿಕದ ಸೆನೆಟ್, ಮಾಧ್ಯಮ ಮತ್ತು ಜನರು ಟಿಲ್ಲರ್‌ಸನ್‌ ಅವರನ್ನು ತೀವ್ರವಾಗಿ ಪರಾಮರ್ಶೆಗೆ ಒಳಪಡಿಸಬೇಕು. ರಷ್ಯಾಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಇತರ ವಿಚಾರಗಳೂ ಇವೆ.

ಜಗತ್ತಿನ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಚಾಡ್‌ನಲ್ಲಿ ಭ್ರಷ್ಟಾಚಾರ ಯುಗ ಆರಂಭವಾಗಲು ಟಿಲ್ಲರ್‌ಸನ್‌ ಅವರ ಕುಮ್ಮಕ್ಕು ಇರುವುದು ಇದರಲ್ಲಿ ಸೇರಿದೆ. ಅಂಗೋಲಾದಲ್ಲಿ ಸರ್ಕಾರದ ಜತೆ ಸೇರಿಕೊಂಡು ಟಿಲ್ಲರ್‌ಸನ್‌ ನಡೆಸಿದ ಕೃತ್ಯಗಳೂ ಇದೇ ರೀತಿಯದ್ದಾಗಿವೆ. ಅಲ್ಲಿನ ಅಧ್ಯಕ್ಷರ ಮಗಳು ಭ್ರಷ್ಟಾಚಾರದ ಮೂಲಕ ಕೋಟಿಗಟ್ಟಲೆ ಹಣ ಗಳಿಸಿದರೆ ಆ ದೇಶದಲ್ಲಿ ಜಗತ್ತಿನ ಬೇರೆ ಯಾವುದೇ ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಬಡತನ ಮತ್ತು ಅನಾರೋಗ್ಯದಿಂದ ಜೀವ ಕಳೆದುಕೊಂಡಿದ್ದಾರೆ.

ರಷ್ಯಾದಿಂದ ಅಂಗೋಲಾವರೆಗೆ ಟಿಲ್ಲರ್‌ಸನ್‌ ಅವರು ಹೀಗೆಲ್ಲ ಮಾಡಿರುವುದು ತಮ್ಮ ಕಂಪೆನಿಯ ವರಮಾನ ಹೆಚ್ಚಿಸುವ ಉದ್ದೇಶದಿಂದಲೇ ಆಗಿರಬಹುದು. ವಿದೇಶಾಂಗ ಕಾರ್ಯದರ್ಶಿಯಾಗಿ ಅವರು ಭಿನ್ನವಾಗಿ ಕೆಲಸ ಮಾಡಬಹುದು. ಅವರು ಹಾಗೆ ಮಾಡಬಹುದು ಎಂಬುದು ಒಂದು ಸಾಧ್ಯತೆ ಮಾತ್ರ. ಟಿಲ್ಲರ್‌ಸನ್‌ ಅವರ ಸಿದ್ಧಾಂತ ಮೂಲಭೂತ ಮಟ್ಟದಲ್ಲಿಯೇ ಬದಲಾಗಬಹುದು ಎಂಬ ವಿಚಾರದಲ್ಲಿ ನನಗೆ ಅನುಮಾನ ಇದೆ.

1972ರಲ್ಲಿ ಬಯಲಿಗೆ ಬಂದ ವಾಟರ್‌ಗೇಟ್ ಹಗರಣ ವಾಟರ್‌ಗೇಟ್ ಕಟ್ಟಡ ಸಂಕೀರ್ಣಕ್ಕಷ್ಟೇ ಸಂಬಂಧಿಸಿದ್ದಲ್ಲ ಎಂಬ ಹಾಗೆಯೇ ಇದು ಟಿಲ್ಲರ್‌ಸನ್‌ ಅವರಿಗೆ ಮಾತ್ರ ಸಂಬಂಧಿಸಿದ ವೈಯಕ್ತಿಕ ವಿಚಾರ ಅಲ್ಲ. ಇದು ಅಮೆರಿಕದ ಪ್ರಜಾಸತ್ತೆಯ ಸಮಗ್ರತೆ ಮತ್ತು ಬದ್ಧತೆಯ ಪ್ರಶ್ನೆ. ಅಮೆರಿಕದ ವಿರುದ್ಧ ದಾಳಿ ನಡೆಸಿದ ವಿದೇಶಿ ನಿರಂಕುಶಾಧಿಕಾರಿಗೆ ಪ್ರತಿಫಲ ನೀಡಿರುವುದರ ಪ್ರಶ್ನೆ. ಅದಕ್ಕೂ ಮುಖ್ಯವಾಗಿ ನಾವು ಅಧ್ಯಕ್ಷರೊಬ್ಬರ ನಾಯಕತ್ವದಲ್ಲಿರಬೇಕೇ ಅಥವಾ ‘ಸಾಕುನಾಯಿ’ಯೊಂದರ ಆಡಳಿತದಲ್ಲಿರಬೇಕೇ ಎಂಬ ಪ್ರಶ್ನೆ.
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT