ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಮತ್ತು ಪಹರೆ

Last Updated 23 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪರೀಕ್ಷಾ ಅಕ್ರಮ ತಡೆಯುವ ಸಲುವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಳ್ಳಲು ಉದ್ದೇಶಿಸಿರುವ ಹೊಸ ನಿಯಮಗಳನ್ನು ಗಮನಿಸಿದೆ (ಪ್ರ.ವಾ., ಡಿ. 19). ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳ ನಿಯೋಜನೆ, ಹೆಚ್ಚು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಪ್ರತೀ ಕೊಠಡಿಗೂ ಸಿ.ಸಿ. ಟಿ.ವಿ. ಕ್ಯಾಮೆರಾ, ತಮ್ಮ ಕಾಲೇಜು ಪರೀಕ್ಷಾ ಕೇಂದ್ರವಾದರೂ ಬೇರೊಂದು ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಕೂರುವುದು... ಇವು ಒಮ್ಮೆಗೇ ಹೌದು, ನಿಸ್ಸಂದೇಹವಾಗಿಯೂ ಕ್ರಾಂತಿಕಾರಕ ಹೆಜ್ಜೆಗಳೇ ಅನ್ನಿಸುತ್ತವೆ.  ಆದರೆ ತಳಸ್ಪರ್ಶಿಯಾಗಿ ಅವಲೋಕಿಸಿದರೆ ದೊರಕುವ ಚಿತ್ರಣ ಸಂಪೂರ್ಣ ಭಿನ್ನ.

ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಇಡೀ ವರ್ಷ ವ್ಯಾಸಂಗ ಮಾಡಿ ಎಷ್ಟರಮಟ್ಟಿಗೆ ಅವರ ಹಾಗೂ ಸಮಾಜದ ಮುನ್ನಡೆಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕೌಶಲಗಳನ್ನು ರೂಢಿಸಿಕೊಂಡಿದ್ದಾರೆ ಎನ್ನುವುದರ ಮಾಪನ. ಆದರೆ ಈ ವ್ಯಾಖ್ಯೆ ಯಾವ ತೆರನಾಗಿ ಹದ, ಹಳಿ ತಪ್ಪಿದೆ ಎನ್ನುವುದು ತಿಳಿದೇ ಇದೆ. ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಲು, ಮುಂದಿನ ವ್ಯಾಸಂಗಕ್ಕೆ ಅವಕಾಶ ಪಡೆಯಲು, ಕಿಸೆ ಭರ್ತಿ ಪಗಾರ ತರುವ ಉನ್ನತ ನೌಕರಿ ಗಿಟ್ಟಿಸಲು ಒಟ್ಟಾರೆ ಪರೀಕ್ಷೆಗಾಗಿ ಓದು ಆಗಿದೆ. ಎಂದಮೇಲೆ ಅಂಕಗಳ ಸುತ್ತಲೇ ‘ವ್ಯಾಸಂಗ’ ಗಿರಕಿ ಹೊಡೆಯುತ್ತದೆ. ಪ್ರಶ್ನೆಪತ್ರಿಕೆ ಕಠಿಣವಾಗಿತ್ತೆಂದು ಕೃಪಾಂಕಕ್ಕೆ ಬೇಡಿಕೆ! ಒಂದು ಅಧ್ಯಾಯಕ್ಕೆ ಸಂಬಂಧಿಸಿದ ಹಾಗೆಯೇ ಬುದ್ಧಿಶಕ್ತಿ ಪರೀಕ್ಷಿಸುವ ಸಲುವಾಗಿ ಕೇಳಲಾಗುವ ತುಸು ತಿರುಚಿದ ಪ್ರಶ್ನೆಯೂ ‘ಔಟ್ ಅಫ್ ಸಿಲಬಸ್’ ಅನ್ನಿಸುತ್ತದೆ.

ಜ್ಞಾನಾರ್ಜನೆಗಾಗಿ ಓದು ಎನ್ನುವ ಪರಿಕಲ್ಪನೆ ಬಹುತೇಕ ಸವಕಲಾಗಿದೆ. ಪ್ರಶ್ನೆ, ಉತ್ತರ, ಅಂಕ- ಈ ಮೂರರ ಮೊರೆತ, ವ್ಯಾವಹಾರಿಕತೆಯದ್ದೆ ಸಡಗರ. ಸಂದರ್ಶನ ಅಥವಾ ಮೌಖಿಕ ಪರೀಕ್ಷೆಯಲ್ಲಿ  ಕೇಳಲಾಗುವ ಪ್ರಶ್ನೆಗಳಿಗೆ ರಾಜಾರೋಷವಾಗಿಯೇ ಮರೆತು ಹೋಗಿದೆ, ಎಲ್ಲೋ ಪರೀಕ್ಷೆಗೆ ಓದಿಕೊಂಡಿದ್ದೆ ಎನ್ನುವಂತಾಗಿದೆ! ಇಂಥ ಪ್ರಶ್ನೆ ಹೋದ ಬಾರಿ ಕೊಟ್ಟಿಲ್ಲ... ಈ ಬಾರಿ ಖಂಡಿತ ಬಂದೀತು, ಲಕ್ಷ್ಯವಿರಲಿ ಎಂದೋ ಸುಲಭವಾದವನ್ನು ಮೊದಲು ಉತ್ತರಿಸು ಎಂದೋ ಬೋಧಕರೇ ಸಲಹೆ ನೀಡುವುದು ವಿರಳವೇನಲ್ಲ.

ಇನ್ನು ಪೋಷಕರು ತಮ್ಮ ಮಕ್ಕಳು ಪರೀಕ್ಷೆಗೆ ಹೊರಡುವಾಗ ‘ಯಾವ ಪ್ರಶ್ನೆಯನ್ನೂ ಬಿಡಬೇಡ, ಏನನ್ನಾದರೂ ಬರಿ’ ಎಂದಿರುತ್ತಾರೆ. ಏನೇ ಆದರೂ ನಕಲು ಕೂಡದು ಎನ್ನುವ ಹಾರೈಕೆಯೂ ಅವರದಾಗಬೇಕು. ಅನಾಯಾಸವಾಗಿ ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯುವುದೇ ವಿದ್ಯಾಬ್ಯಾಸದ ಯಶಸ್ಸು ಎನ್ನಿಸಿದೆ. ಪರೀಕ್ಷಾ ಅಕ್ರಮಗಳ ತಡೆಗೆ ಈ ಮೂಲಭೂತ ನ್ಯೂನತೆಯನ್ನು ನಿವಾರಿಸಬೇಕು. ಪರೀಕ್ಷೆಯಲ್ಲಿ ನಕಲು ಮಾಡುವುದು, ಬೇರೆಯವರ ಪರವಾಗಿ ಹಾಜರಾಗುವುದು, ಉತ್ತರ ಪತ್ರಿಕೆಗಳ ಅದಲು ಬದಲು ಮುಂತಾದ ಪ್ರವೃತ್ತಿಗಳು ಅಪರಾಧಗಳು. ಎಲ್ಲರೂ ಪ್ರಾಮಾಣಿಕರಾಗಿದ್ದರೆ ಯಾರಿಗೂ ಅನ್ಯಾಯವಾಗದು.  ಪರೀಕ್ಷಾ ವ್ಯವಸ್ಥೆಯನ್ನೇ ಅಯೋಮಯಗೊಳಿಸುವ ದುಷ್ಕೃತ್ಯ ಸಲ್ಲದು ಎನ್ನುವುದನ್ನು ತಾತ್ವಿಕವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು. ಅದು ಪಠ್ಯದ ಒಂದುಭಾಗವಾಗುವುದು ಅಪೇಕ್ಷಣೀಯ. ಹಿಂದೆಲ್ಲ ಯಾರಾದರೂ ಬೋಧಕರು ರಜೆಯಲ್ಲಿದ್ದರೆ ಮತ್ತೊಬ್ಬರು ಅವರ ತರಗತಿ ತೆಗೆದುಕೊಂಡು ರಚನಾತ್ಮಕವಾಗಿ ಸಂವಾದಿಸುತ್ತಿದ್ದರು. ಅದು ‘ನೀತಿ ತರಗತಿ’ (ಮಾರಲ್ ಕ್ಲಾಸ್) ಆಗಿರುತ್ತಿತ್ತು.

ಒಗಟಾಗಿ ಒಂದು ಸಂಗತಿ ಕಾಡುತ್ತದೆ. ಪಿ.ಯು.ಸಿ. ಮಟ್ಟವೆಂದರೆ 16–17 ವರ್ಷ ವಯಸ್ಸೆನ್ನಿ. ಹಾಗಾದರೆ ಆ ತನಕ ವಿದ್ಯಾರ್ಥಿಗಳಿಗೆ  ಕಲಿಸಿದ್ದೇನು? ಅವರು ಅರಿತಿದ್ದೇನು? ಐಚ್ಛಿಕ ವಿಷಯಗಳ ಜೊತೆಗೆ ಎರಡು ಭಾಷೆಗಳಲ್ಲಿ ಸಾಹಿತ್ಯದ ಬೋಧನೆಯೂ ಅವರಿಗೆ ಆಗಿರುತ್ತದೆ. ಸಾಹಿತ್ಯದಲ್ಲಿ ತನಗೂ ಪರರಿಗೂ ಹಿತವಾಗಿ ಬದಕುವ ಮಾರ್ಗಸೂಚಿಗಳ ಎಳೆಗಳುಂಟು, ಅವುಗಳ ಕಿಂಚಿತ್ ಪರಿಚಯವಾಗಲಿ ಎನ್ನುವ ಕಾರಣಕ್ಕೆ ತಾನೆ ಭಾಷಾ ವಿಷಯಗಳ ನಿಗದಿ? ಇದರ ಜೊತೆಗೆ ಕ್ರೀಡೆ, ಪಂದ್ಯಾವಳಿ, ದೈಹಿಕ ಶಿಕ್ಷಣ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್. ಏರ್ಪಡಿಸಲಾಗುವ ಸಭೆ, ಸಮಾರಂಭಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳು. ಆದಾಗ್ಯೂ ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಿಲ್ಲ ಎನ್ನುವುದಾದರೆ ಪಠ್ಯ, ಪಠ್ಯೇತರ ಚಟುವಟಿಕೆಗಳು ಕೇವಲ ಯಾಂತ್ರಿಕವೇ?

ಇದು ಹೇಗೂ ಇರಲಿ. ಪರೀಕ್ಷೆಗಳ ಸಮರ್ಥ ನಿರ್ವಹಣೆ ಉಸಿರುಗಟ್ಟಿಸುವ ಪಹರೆಯಲ್ಲಿಲ್ಲ. ಆತ್ಮಸಾಕ್ಷಿಯ ಅಚ್ಚುಕಟ್ಟಿನ ಚೋದನೆಯಲ್ಲಿದೆ.  ತೆರೆಯಿಸಬೇಕಾದ್ದು ಸಿ.ಸಿ.ಟಿ.ವಿ. ಕ್ಯಾಮೆರಾ ಅಲ್ಲ. ವಿದ್ಯಾರ್ಥಿಗಳ ಅಂತಸ್ಸಾಕ್ಷಿಯನ್ನು.  ಅದು ಬಿಟ್ಟು ಬಗೆ ಬಗೆ ಹದ್ದಿನಗಣ್ಣುಗಳನ್ನಿರಿಸಿ, ಎಲ್ಲಿ ವಿದ್ಯಾರ್ಥಿ ಬಲಕ್ಕೆ ತಿರುಗಬಹುದೊ, ಎಲ್ಲಿ ಹಿಂದಕ್ಕೆ ಸರಿಯಬಹುದೊ ಅಥವಾ ಬೇಕೆಂದೆ ಕೆಮ್ಮಿ, ಸೀನಿ ಸಂಜ್ಞೆ ಮಾಡಬಹುದೊ ಎಂದು ಕಾವಲು ಕಾದರೆ ಹುತ್ತವ ಬಡಿದಷ್ಟೆ ಫಲ. ಮೇಲಾಗಿ ಅತಿ ಕಣ್ಗಾವಲಿನ ಫಲಶ್ರುತಿ ಸ್ಪಷ್ಟವೇ. ಉತ್ಸಾಹ, ಹುಮ್ಮಸ್ಸಿನಿಂದ  ಉತ್ತರಿಸಲು ಬಂದ ವಿದ್ಯಾರ್ಥಿಗಳ ಪಾಲಿಗೆ ಹಿತಕರ ವಾತಾವರಣವಿಲ್ಲದೆ ಪರೀಕ್ಷಾ ಕೊಠಡಿ ಒಂದು ಬೀಭತ್ಸ, ಭಯಾನಕ ನೆಲೆಯಾಗುತ್ತದೆ. ಈಗಾಗಲೇ ಇರುವ ಉಸ್ತುವಾರಿ, ಮೇಲುಸ್ತುವಾರಿಯೇನು ಕಡಿಮೆಯೇ? ಪರೀಕ್ಷಾ ಕೇಂದ್ರದಲ್ಲಿ ಮುಖ್ಯಸ್ಥರ ಜೊತೆಗೆ ಉಪಮುಖ್ಯಸ್ಥರು. ಹೊರಗಿನಿಂದ, ಸ್ಥಳೀಯವಾಗಿ, ಇಲಾಖೆಯಿಂದ ಜಾಗೃತ ದಳಗಳು.  ಪ್ರಶ್ನೆ ಪತ್ರಿಕೆ, ಖಾಲಿ ಉತ್ತರ ಪತ್ರಿಕೆಗಳ ಲೆಕ್ಕವಿಡಲು ಪ್ರತ್ಯೇಕ ಪಾಲಕರು. ಉತ್ತರ ಪತ್ರಿಕೆಗಳ ಬಂಡಲುಗಳ ರವಾನೆ ತನಕವೂ ಕಣ್ಣಲ್ಲಿ ಕಣ್ಣು.

ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರು  ನ್ಯಾಷನಲ್ ಕಾಲೇಜಿನ ಪ್ರಾಚಾರ್ಯರಾಗಿದ್ದಾಗ ಕೊಠಡಿ ಮೇಲ್ವಿಚಾರಕರಿಲ್ಲದೆ ಕಾಲೇಜಿನ ಮಟ್ಟದ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ನಡೆಸಿದ್ದರು. ಅದು ವಿದ್ಯಾರ್ಥಿಗಳ ಆತ್ಮಸಾಕ್ಷಿಯನ್ನೇ ಪಹರೆಯಾಗಿಸುವ ದಿಟ್ಟ ಪ್ರಯೋಗ. ಇದಕ್ಕೆ ಅವರಿಗೆ ಪ್ರೇರಣೆಯಾಗಿದ್ದು ಹೇಗೆನ್ನುವುದೂ ಸ್ವಾರಸ್ಯಕರ. ಒಮ್ಮೆ ಪರೀಕ್ಷೆಗಳು ಸಾಗುತ್ತಿದ್ದಾಗ ಕಾಲೇಜಿನ ಅಂಗಳದಲ್ಲಿ ಶತಪಥ ಹಾಕುತ್ತಿದ್ದ ಎಚ್.ಎನ್. ಎದುರಿಗೆ ಬರುತ್ತಿದ್ದ ಉಪನ್ಯಾಸಕರೊಬ್ಬರೊಡನೆ ಅಭಿಪ್ರಾಯ ಹಂಚಿಕೊಂಡರಂತೆ: ‘ಅದೋ ಅಲ್ಲಿ ಬರೆಯುತ್ತಿದ್ದಾರಲ್ಲ ಹೈಕಳು... ನಾಳೆ ಅವರು ನ್ಯಾಯಾಧೀಶರು, ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳು ಅಥವಾ ಎಂಜಿನಿಯರ್, ಡಾಕ್ಕರ್ ಆಗಬಹುದು. ಸಮಾಜದಲ್ಲಿ ಗಣ್ಯವ್ಯಕ್ತಿಗಳಾದಾರು. ಆದರೆ ಕಾಪಿ ಹೊಡೆದಾರೆಂದು ಅವರನ್ನು ಅದೆಷ್ಟು ಗುಮಾನಿಯಿಂದ ನಾವು ನೋಡುತ್ತಿದ್ದೇವಲ್ಲ?!’. ಪರೀಕ್ಷೆಯು ಅಕ್ರಮದಿಂದಲಾದರೂ ಅಂಕ ಗಳಿಸುವಷ್ಟು ಅಮೂಲ್ಯವೂ ಅಲ್ಲ, ಅನಿವಾರ್ಯವೂ ಅಲ್ಲ ಎನ್ನುವುದನ್ನರಿತರೆ ಅಷ್ಟೇ ಸಾಕು. ಹೊಣೆಯರಿತ ವಿದ್ಯಾರ್ಥಿಗಳು ರೂಪುಗೊಳ್ಳುವುದು ಹೊಣೆಯರಿತ ಶಿಕ್ಷಕರಿಂದಲೇ. ಗುರು–ಶಿಷ್ಯರು ಜವಾಬ್ದಾರಿಯುತರಾದರೆ ಪರೀಕ್ಷೆ ಸುಲಲಿತ. ಅವರ ಪ್ರಾಮಾಣಿಕತೆಯೇ ನೀತಿ, ನಿಯಮಗಳ ಪಾಲನೆಗೆ ಅವರನ್ನು ನಿರಾಯಾಸವಾಗಿ ಬದ್ಧರನ್ನಾಗಿಸುತ್ತದೆ. ಪರೀಕ್ಷೆ ‘ಅದೃಷ್ಟ ಪರೀಕ್ಷೆ’ ಅಲ್ಲ. ಗಳಿಸಿದ ಅಂಕಗಳು ಪ್ರತಿಭೆಯ ನಿಷ್ಕರ್ಷೆಯೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT