ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಕೇಂದ್ರಿತ ಅರಿವಿನ ಅಭಾವ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಅಮೆರಿಕದಲ್ಲಿ ಪ್ರಾಧ್ಯಾಪಕರಾಗಿರುವ ಹೈದರಾಬಾದ್ ಮೂಲದ ಕೃಷ್ಣ ವೇದುಲ ಅವರು ಕೆಲವು ತಿಂಗಳುಗಳ ಹಿಂದೆ ಕರ್ನಾಟಕದ ಆಯ್ದ ಎಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ, ಅಲ್ಲಿನ ಬೋಧಕ ವರ್ಗದೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ವೇಳೆ ಅವರು ಹಂಚಿಕೊಂಡ ವಿಚಾರವೊಂದು ಗಮನಾರ್ಹವಾಗಿತ್ತು. ‘ನಾವು ವಿದ್ಯಾರ್ಥಿಗಳಿಗೆ ಬೋಧಿಸುವುದು ಪರಿಣಾಮಕಾರಿಯಾಗಬೇಕಾದರೆ ಯಾವೆಲ್ಲ ಅಂಶಗಳು ನಮಗೆ ಗೊತ್ತಿರಬೇಕು ಹೇಳಿ?’  ಎಂದು ಪ್ರಶ್ನಿಸಿದ ಅವರು, ‘ಬೋಧಿಸುವ ವಿಷಯ, ವಿಧಾನ ಮತ್ತು ನಮ್ಮಿಂದ ಪಾಠ ಕೇಳುವ ವಿದ್ಯಾರ್ಥಿ ನಮಗೆ ಗೊತ್ತಿರಬೇಕಲ್ಲವೇ?’ ಎಂದರು. ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಬೇಕೆಂದರೆ, ಪ್ರತಿ ವಿದ್ಯಾರ್ಥಿಯನ್ನೂ ವೈಯತಿಕವಾಗಿ ಅರಿಯುವ ಸಂಯಮ ಪ್ರಾಧ್ಯಾಪಕರಲ್ಲಿರಬೇಕಾಗುತ್ತದೆ ಎಂಬುದನ್ನು ಒತ್ತಿ ಹೇಳಿದ್ದರು. 
 
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕರಾಗಲು ನಿಗದಿಗೊಳಿಸಿರುವ ಅರ್ಹತೆ ಕೂಡ ಕೇವಲ ವಿಷಯ ಜ್ಞಾನಕ್ಕಷ್ಟೆ ಆದ್ಯತೆ ನೀಡಿದೆಯೇ ವಿನಾ ಬೋಧಿಸುವ ವಿಧಾನ ಮತ್ತು ವಿದ್ಯಾರ್ಥಿಗಳನ್ನು ಅರಿಯಲು ಬೇಕಾಗುವ ಪೂರ್ವಸಿದ್ಧತೆಗೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿಯೇ ಎಂ.ಟೆಕ್. ಪೂರೈಸಿರುವ ಯಾರು ಬೇಕಾದರೂ ಪ್ರಾಧ್ಯಾಪಕರಾಗಬಹುದು. ಕಾಲೇಜುಗಳಲ್ಲಿನ ಮೂಲ ಸೌಕರ್ಯಗಳಿಗೆ ನೀಡುವಷ್ಟೇ ಆದ್ಯತೆಯನ್ನು ವಿದ್ಯಾರ್ಥಿಗಳ ಮನಃಸ್ಥಿತಿ ಅರಿಯುವ, ಅವರ ಸಮಸ್ಯೆಗಳನ್ನು ವ್ಯವಧಾನದಿಂದ ಆಲಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಬೋಧಕ ವರ್ಗ ರೂಪಿಸಲೂ ನೀಡಬೇಕಿದೆ ಎಂದು ಕಾಲೇಜು ಆಡಳಿತ ಮಂಡಳಿಗಳಿಗೆ ಅನಿಸುತ್ತಲೇ ಇಲ್ಲ. ಅನಿಸಿದರೂ ಅದು ಅವರ ಮೊದಲ ಆದ್ಯತೆಯಾಗಂತೂ ಉಳಿದಿಲ್ಲ. ಕೆಲವು ಕಾಲೇಜುಗಳು ತಮ್ಮಲ್ಲಿನ ಅಧ್ಯಾಪಕರ ಬೋಧನಾ ಕೌಶಲವನ್ನು ವೃದ್ಧಿಸುವ ಸಲುವಾಗಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತವಾದರೂ, ಎಲ್ಲ ಅಧ್ಯಾಪಕರನ್ನೂ ಒಳಗೊಳ್ಳಬಹುದಾದ ಪರಿಪೂರ್ಣ ತರಬೇತಿ ವ್ಯವಸ್ಥೆಯೊಂದರ ಅನುಪಸ್ಥಿತಿ ಎದ್ದುಕಾಣುತ್ತಿದೆ.
 
ಒಂದೆರಡು ವರ್ಷಗಳ ಹಿಂದೆ ಎಂಜಿನಿಯರಿಂಗ್ ಕಾಲೇಜು ಅಧ್ಯಾಪಕರಿಗೆಂದೇ ಆಯೋಜಿಸಿದ್ದ ‘Feel Teachers’ ಹೆಸರಿನ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರಲ್ಲಿ ಅನೇಕರು, ‘ಇದೆಲ್ಲ ನಮಗ್ಯಾಕೆ? ನಮಗೆ ಸಂಬಂಧವೇ ಇಲ್ಲದ ವಿಷಯಗಳ ಕುರಿತು ಕಲಿತು ಏನು ಪ್ರಯೋಜನ? ಇವರು ಹೇಳುವುದನ್ನೆಲ್ಲ ಅಳವಡಿಸಿಕೊಳ್ಳಲು ಸಾಧ್ಯವೇ?’ ಎಂದು ಗೊಣಗಾಡುತ್ತಿದ್ದರು. ಅವರೆಲ್ಲರೂ ವಿಷಯ ಜ್ಞಾನವೊಂದಿದ್ದರೆ ಸಾಕೆಂಬ ನಿಲುವಿಗೆ ಅಂಟಿಕೊಂಡಿದ್ದರು.
 
ತಾಂತ್ರಿಕ ಕೌಶಲ ಮತ್ತು ತಂತ್ರಜ್ಞಾನದ ತಿಳಿವಳಿಕೆಯನ್ನಷ್ಟೆ ನೆಚ್ಚಿಕೊಂಡಿದ್ದರೆ ಎದುರಾಗಬಹುದಾದ ಅಪಸವ್ಯಗಳಿಗೆ ಕನ್ನಡಿ ಹಿಡಿಯುವಂತಹ ನಿದರ್ಶನವೊಂದು ಇತ್ತೀಚೆಗೆ ಗಮನ ಸೆಳೆಯಿತು. ಕ್ಲಾಸ್ ರೂಮಿನಲ್ಲಿ ಕುಳಿತು ಪಾಠ ಕೇಳದೆ ಬೇರೆ ಚಟುವಟಿಕೆಗಳಲ್ಲಿ ನಿರತನಾಗಿದ್ದ ವಿದ್ಯಾರ್ಥಿಯೊಬ್ಬನನ್ನು ಗಮನಿಸಿದ ಅಧ್ಯಾಪಕರೊಬ್ಬರು, ಆ ವಿದ್ಯಾರ್ಥಿಗೆ ತಮ್ಮದೇ ಶೈಲಿಯಲ್ಲಿ ಬೈದು ಬುದ್ಧಿ ಹೇಳಿದ್ದಾರೆ. ಅವರ ಮಾತನ್ನು ಬುದ್ಧಿವಾದವೆಂದು ಪರಿಗಣಿಸಿ ಸುಮ್ಮನಾಗದ ವಿದ್ಯಾರ್ಥಿ, ಏಕವಚನದಲ್ಲಿ ಅವರಿಗೆ ನಿಂದಿಸಿದ್ದಾನೆ. ತಮ್ಮ ವೃತ್ತಿಬದುಕಿನಲ್ಲಿ ಅಗಾಧ ಅನುಭವ ಹೊಂದಿರುವ ಅವರಿಗೆ ಆ ವಿದ್ಯಾರ್ಥಿಯಿಂದ ಇಂತಹದೊಂದು ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆ ಇರಲಿಲ್ಲ. ಈ ವಿಷಯ ಕಾಲೇಜಿನ ಎಲ್ಲರ ಗಮನಕ್ಕೂ ಬಂದ ಮೇಲೆ, ‘ಈಗಿನ ವಿದ್ಯಾರ್ಥಿಗಳು ಮೊದಲಿನಂತಿಲ್ಲ. ಅಧ್ಯಾಪಕರ ಕುರಿತು ಅವರಲ್ಲಿ ಗೌರವವಿಲ್ಲ. ಇವರನ್ನು ಹೀಗೇ ಬಿಟ್ಟರೆ ಸರಿ ಆಗಲ್ಲ. ಇವತ್ತು ಒಬ್ಬ ಮಾತ್ರ ಹೀಗೆ ವಾಪಸ್‌ ಮಾತಾಡಿರಬಹುದು. ಮುಂದೆ ಇವನನ್ನೇ ಹಲವರು ಅನುಕರಿಸಬಹುದು. ಅವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಇಂಥವನ್ನು ಬುಡದಲ್ಲೇ ಚಿವುಟಿ ಹಾಕಿ ಬಿಡಬೇಕು’  ಅಂತೆಲ್ಲ ಕೆಲವರು ಪ್ರತಿಕ್ರಿಯಿಸಲು ಶುರುವಿಟ್ಟುಕೊಂಡರು.
 
ಈ ಪ್ರಸಂಗ ಕೃಷ್ಣ ವೇದುಲ ಅವರು ಹೇಳಿದ್ದ ‘ನಮಗೆ ವಿದ್ಯಾರ್ಥಿಯೂ ಗೊತ್ತಿರಬೇಕು’ ಎಂಬ ಮಾತು ನೆನೆದು, ಅದರ ಅರ್ಥ ವಿಸ್ತಾರ ಮತ್ತು ಮಹತ್ವ ಮನಗಾಣಲು ನೆಪವಾಯಿತು. ಬಹುಶಃ ವಿದ್ಯಾರ್ಥಿಯನ್ನು ಅರಿಯುವ ಸಂಯಮ ಮತ್ತು ಪೂರ್ವ ತಯಾರಿ ನಮ್ಮಲ್ಲಿ ಇರದಿರುವುದು ಕೂಡ ವಿದ್ಯಾರ್ಥಿಗಳನ್ನು ಅರಿಯುವ ಬದಲಿಗೆ ಅವರ ತಪ್ಪುಗಳತ್ತಲೇ ಬೊಟ್ಟು ಮಾಡುತ್ತ ದೂರಲು ಕಾರಣವಾಗಿರಬಹುದು. ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಿಸುವ ಶಿಕ್ಷಕರಿಗೆ ಡಿ.ಎಡ್. ಮತ್ತು ಬಿ.ಎಡ್. ತರಬೇತಿ ಹೊಂದುವುದು ಕಡ್ಡಾಯವಾಗಿರುವಂತೆ, ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಪ್ರಾಧ್ಯಾಪಕರಿಗೂ ಸೂಕ್ತವಾದ ತರಬೇತಿಯ ಅಗತ್ಯವಿದೆ ಎಂಬ ವಿಚಾರಕ್ಕೆ ಬೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವವರು ಕೂಡ ಸಹಮತ ವ್ಯಕ್ತಪಡಿಸುತ್ತಿದ್ದಾರೆ.
 
ಎಂಜಿನಿಯರಿಂಗ್ ಶಿಕ್ಷಣ ಗುಣಮಟ್ಟದೊಂದಿಗೆ ನೇರವಾಗಿ ತಳುಕು ಹಾಕಿಕೊಂಡಿರುವ ಬೋಧಕರಲ್ಲಿನ ಕೌಶಲ ಮತ್ತು ಪೂರ್ವ ಸಿದ್ಧತೆಯ ಅಭಾವವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೊನೆಗೂ ಈ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಡಲಾರಂಭಿಸಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ತರಬೇತಿ ನೀಡುವ ಸಲುವಾಗಿ ಸ್ಟಾಫ್ ಟ್ರೈನಿಂಗ್ ಕಾಲೇಜು ಪ್ರಾರಂಭಿಸುವುದಾಗಿ ಇತ್ತೀಚೆಗಷ್ಟೇ ಕುಲಪತಿಯಾಗಿ ನೇಮಕಗೊಂಡಿರುವ ಡಾ. ಕರಿಸಿದ್ದಪ್ಪ ಅವರು, ಹೇಳಿದ್ದಾರೆ. ಐದು ವರ್ಷಕ್ಕಿಂತಲೂ ಕಡಿಮೆ ಅನುಭವವಿರುವ ಪ್ರಾಧ್ಯಾಪಕರು ಕಡ್ಡಾಯವಾಗಿ ಇಲ್ಲಿಂದ ತರಬೇತಿ ಪಡೆದುಕೊಳ್ಳುವ ನಿಯಮ ರೂಪಿಸುವುದಾಗಿಯೂ ತಿಳಿಸಿದ್ದಾರೆ. ತಡವಾಗಿಯಾದರೂ ಇದುವರೆಗೂ ಅಲಕ್ಷಿಸಿದ್ದ ವಿಚಾರದೆಡೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗಮನಹರಿಸುತ್ತಿರುವುದು ಸ್ವಾಗತಾರ್ಹ. 
 
ಬೋಧಕರಿಗೆ ತರಬೇತಿ ದೊರೆತ ಮಾತ್ರಕ್ಕೆ ಎಲ್ಲವೂ ಸರಿ ಹೋಗುತ್ತದೆ ಎನ್ನುವುದು ಉತ್ಪ್ರೇಕ್ಷೆಯೇ ಆದರೂ, ಬೋಧನಾ ಗುಣಮಟ್ಟದ ಸುಧಾರಣೆಗೆ ಇದು ಪೂರಕಕ್ರಮ ಎನ್ನುವುದನ್ನಂತೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೋಧಕರಾಗುವ ಸಲುವಾಗಿಯೇ ಹಲವರು ಎಂ.ಟೆಕ್. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವುದರಿಂದ, ಎಂ.ಟೆಕ್. ಪಠ್ಯಕ್ರಮದಲ್ಲೇ ಬೋಧನಾ ಕೌಶಲಗಳ ಕಲಿಕೆಗೂ ಅನುವಾಗುವಂತಹ ವಿಷಯಗಳು ಮತ್ತು ಚಟುವಟಿಕೆಗಳನ್ನು ಸೇರಿಸಲು ಸಾಧ್ಯವೇ ಎಂಬುದನ್ನೂ ಪರಿಶೀಲಿಸಬೇಕಾಗಿದೆ. ಹೊಸ ಕಾಲೇಜುಗಳು ಪ್ರಾರಂಭವಾಗದಿರುವುದು ಮತ್ತು ವಿದ್ಯಾರ್ಥಿಗಳು ದಾಖಲಾಗದಿರುವುದರಿಂದ ಈಗಾಗಲೇ ಇರುವ ಕೆಲವು ಕಾಲೇಜುಗಳಿಗೆ ಬೀಗ ಜಡಿಯುವಂತಹ ಪರಿಸ್ಥಿತಿ ಇರುವುದರಿಂದ ಎಂ.ಟೆಕ್.ಗೆ ಪ್ರವೇಶ ಪಡೆಯುವವರ ಸಂಖ್ಯೆಯೂ ಗಮನಾರ್ಹವಾಗಿ ಇಳಿಮುಖವಾಗಿದೆ.
 
ತಮ್ಮ ವೃತ್ತಿಯ ಅನುಭವದ ಮೂಲಕ ದಕ್ಕುವ ತಿಳಿವಳಿಕೆಯನ್ನೇ ಊರುಗೋಲಾಗಿಸಿಕೊಂಡು ಅತ್ಯುತ್ತಮ ಪ್ರಾಧ್ಯಾಪಕರಾಗಿ ಹೊರಹೊಮ್ಮಿದವರು ನಮ್ಮ ನಡುವೆ ಇದ್ದಾರೆ. ಹಾಗೆಂದು ಎಲ್ಲರನ್ನೂ ಒಳಗೊಳ್ಳುವಂತಹ ತರಬೇತಿ ವ್ಯವಸ್ಥೆಯೊಂದರ ಆವಶ್ಯಕತೆಯನ್ನು ನಿರಾಕರಿಸಲು ಸಾಧ್ಯವಾಗದು.
 
**
-ಎಚ್. ಕೆ.ಶರತ್, (ಲೇಖಕರು ಅಧ್ಯಾಪಕರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT