ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರಿಗೆ ಇದು ಸುಗ್ಗಿಕಾಲ...

ರಾಷ್ಟ್ರೀಯ ತಂಡಕ್ಕೆ ರಾಜ್ಯದ ಕ್ರಿಕೆಟಿಗರು
Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅದು 1976ರ ಎಪ್ರಿಲ್‌ ತಿಂಗಳು. ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಣ ಟೆಸ್ಟ್‌  ಪಂದ್ಯ. 70ರ ದಶಕದಲ್ಲಿ ಕ್ರಿಕೆಟ್‌ನ ದೈತ್ಯ ಶಕ್ತಿ ಎನಿಸಿದ್ದ ಕೆರಿಬಿಯನ್‌ ನಾಡಿನ ತಂಡದಲ್ಲಿ ರಾಯ್‌ ಫ್ರೆಡ್ರಿಕ್ಸ್‌, ಸರ್‌ ವಿವಿಯನ್‌ ರಿಚರ್ಡ್ಸ್‌, ಕ್ಲೈವ್‌ ಲಾಯ್ಡ್‌, ಮೈಕಲ್‌ ಹೋಲ್ಡಿಂಗ್‌ ಅವರಂಥ ಘಟಾನುಘಟಿಗಳು ಇದ್ದರು. ಭಾರತ ತಂಡ ಕೂಡ ಸುನಿಲ್‌ ಗಾವಸ್ಕರ್‌, ಅನ್ಶುಮಾನ್‌ ಗಾಯಕ್ವಾಡ್‌, ಮೊಹಿಂದರ್‌ ಅಮರನಾಥ್‌, ಮದಲ್‌ ಲಾಲ್‌, ಸೈಯದ್‌ ಕಿರ್ಮಾನಿ, ಬಿ.ಎಸ್‌. ಚಂದ್ರಶೇಖರ್‌, ಬ್ರಿಜೇಶ್‌ ಪಟೇಲ್‌ ಅವರಂಥ ದಿಗ್ಗಜರನ್ನು ಹೊಂದಿತ್ತು.

ಈಗಿಗಿಂತಲೂ ಟೆಸ್ಟ್‌ ಕ್ರಿಕೆಟ್‌ಗೆ ಹೆಚ್ಚು ಮಹತ್ವವಿದ್ದ  ಕಾಲವದು.  ಭಾರತ ಮತ್ತು ವಿಂಡೀಸ್‌ ನಡುವಣ ಸರಣಿ ಭಾರಿ ಮಹತ್ವ ಪಡೆದುಕೊಂಡಿತ್ತು.
 
ಈ ಸರಣಿಯ ಮೂರನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌ನಲ್ಲಿ 359 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 271 ರನ್‌ ಗಳಿಸಿತ್ತು. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 228 ರನ್‌ಗೆ ಆಲೌಟ್‌ ಆಗಿತ್ತು. ಆದ್ದರಿಂದ ಪಂದ್ಯ ಗೆಲ್ಲಬೇಕಾದರೆ ಬಿಷನ್‌ ಸಿಂಗ್‌ ಬೇಡಿ ನಾಯಕತ್ವದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 403 ರನ್‌ ಗಳಿಸಬೇಕಿತ್ತು. ಆಗ ಸುನಿಲ್‌ ಗಾವಸ್ಕರ್‌ ಶತಕ ಮತ್ತು ಮೊಹಿಂದರ್‌ 85 ರನ್‌ ಹೊಡೆದಿದ್ದರು. ಆದರೂ ಗೆಲುವಿಗೆ ಇನ್ನಷ್ಟು ರನ್‌ಗಳು ಬೇಕಿದ್ದಾಗ ಕರ್ನಾಟಕದ ಜಿ.ಆರ್‌. ವಿಶ್ವನಾಥ್‌ ಶತಕ ಮತ್ತು ಬ್ರಿಜೇಶ್ ಪಟೇಲ್‌ ಔಟಾಗದೆ 49 ರನ್‌ ಕಲೆ ಹಾಕಿ ಜಯ ತಂದುಕೊಟ್ಟಿದ್ದರು. 
 
ನಾಲ್ಕು ದಶಕಗಳ ಹಿಂದಿನ ಈ ಪಂದ್ಯವನ್ನು ಈಗ ಮತ್ತೆ ನೆನಪಿಸಿಕೊಳ್ಳಲು ಕಾರಣವಿದೆ. ಹೋದ ವಾರ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯ ಐದನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡ ಇನಿಂಗ್ಸ್‌ ಮತ್ತು 75 ರನ್‌ಗಳ ಗೆಲುವು ಪಡೆಯಿತು. ಕರ್ನಾಟಕದ ಕೆ.ಎಲ್‌. ರಾಹುಲ್‌ 199 ರನ್‌ ಮತ್ತು ಕರುಣ್‌ ನಾಯರ್‌ ಅತ್ಯದ್ಭುತ ತ್ರಿಶತಕ ಜಯಕ್ಕೆ ಪ್ರಮುಖ ಕಾರಣವಾಯಿತು.
 
ಹೀಗೆ ಕರ್ನಾಟಕದ ಆಟಗಾರರು ರಾಷ್ಟ್ರೀಯ ತಂಡದಲ್ಲಿದ್ದಾಗ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 1999ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ರಾಹುಲ್‌ ದ್ರಾವಿಡ್‌ ಮತ್ತು ಜಾವಗಲ್‌ ಶ್ರೀನಾಥ್ ಎಂಟನೇ ವಿಕೆಟ್‌ಗೆ 144 ರನ್‌ ಕಲೆ ಹಾಕಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಹಿಂದಿನ ಈ ಸ್ಮರಣೀಯ ಇನಿಂಗ್ಸ್‌ಗಳ ಜೊತೆ ಮುಂದೊಂದು ದಿನ ರಾಹುಲ್‌ ಮತ್ತು ಕರುಣ್‌ ಆಡಿದ ಬ್ಯಾಟಿಂಗ್ ಇತಿಹಾಸದ ಪುಟ ಸೇರು
ತ್ತದೆ. ಆದರೆ ಅವರ ಆಟ ಮರೆಯಲಾಗದ ಸುಂದರ ನೆನಪಾಗಿ ಉಳಿಯುವುದು ಖಚಿತ.
 
ಹೀಗೆ ರಾಜ್ಯದ ಆಟಗಾರರು ಭಾರತ ತಂಡದಲ್ಲಿ ಮಿಂಚುತ್ತಿದ್ದರೆ, ರಾಜ್ಯ ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ಲಭಿಸುತ್ತಿದೆ. ರಾಹುಲ್‌, ಕರುಣ್‌ ಮತ್ತು ಮನೀಷ್‌ ಪಾಂಡೆ ರಾಷ್ಟ್ರೀಯ ತಂಡದಲ್ಲಿದ್ದಾಗ ಹೊಸಬರಿಗೆ ಈ ಬಾರಿಯ ರಣಜಿ ತಂಡದಲ್ಲಿ ಸ್ಥಾನ ಗಳಿಸಲು ಹಾದಿ ಸಿಕ್ಕಿತ್ತು.
 
ವಿವಿಧ ವಯೋಮಿತಿಯೊಳಗಿನ ಟೂರ್ನಿಗಳು ಮತ್ತು ಕೆಪಿಎಲ್‌ನಲ್ಲಿ ಉತ್ತಮವಾಗಿ ಆಡಿದ ಆಟಗಾರರು ರಾಜ್ಯದಲ್ಲಿದ್ದಾರೆ. ಅವರೆಲ್ಲಾ ರಣಜಿ ಆಡುವ ಆಸೆಹೊತ್ತು ಕಾಯುತ್ತಿದ್ದಾರೆ. ಈ ಸಲದ ರಣಜಿಯಲ್ಲಿ ಹೊಸ ಪ್ರತಿಭೆಗಳಾದ ಮೀರ್‌ ಕೌನೇನ್‌್ ಅಬ್ಬಾಸ್‌, ಪವನ್‌ ದೇಶಪಾಂಡೆ ಮತ್ತು ಅರ್ಜುನ ಹೊಯ್ಸಳ ಪದಾರ್ಪಣೆ ಮಾಡಿದ್ದಾರೆ. ಮನೀಷ್‌ ಪಾಂಡೆ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿದ್ದ ಕಾರಣ ಅನಿರೀಕ್ಷಿತವಾಗಿ ಅಬ್ಬಾಸ್‌ಗೆ ಮೊದಲ ರಣಜಿ ಆಡುವ ಅವಕಾಶ ಒಲಿಯಿತು. ಜೈನ್‌ ಕಾಲೇಜಿನ ವಿದ್ಯಾರ್ಥಿಯಾಗಿರುವ ಅವರು ಅಖಿಲ ಭಾರತ ಅಂತರವಾರ್ಸಿಟಿ ಟ್ವೆಂಟಿ–20ಟೂರ್ನಿಯಲ್ಲಿ ಒಟ್ಟು 313 ರನ್‌ ಹೊಡೆದು ಶ್ರೇಷ್ಠ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದಿದ್ದರು. ಬೆಂಗಳೂರಿನಲ್ಲಿ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿಯೂ ಗಮನ ಸೆಳೆದಿದ್ದರು.  
 
ಬಳಸಿಕೊಂಡ ಅಬ್ಬಾಸ್‌: ರಾಜ್ಯ ತಂಡದಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಬ್ಯಾಟ್ಸ್‌ಮನ್‌ಗಳ ನಡುವೆ ಸಾಕಷ್ಟು ಪೈಪೋಟಿ ಇರುವ ಕಾರಣ ಸಿಕ್ಕ ಅವಕಾಶದಲ್ಲಿಯೇ ಸಾಮರ್ಥ್ಯ ತೋರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಅಬ್ಬಾಸ್‌ಗೆ ಪದಾರ್ಪಣೆ ಪಂದ್ಯ ಮಹತ್ವದ್ದಾಗಿತ್ತು.
 
ಗ್ರೇಟರ್‌ ನೋಯ್ಡಾದಲ್ಲಿ ನಡೆದ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ಅಬ್ಬಾಸ್‌ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಹೊಡೆದಿದ್ದರು. ನಂತರದ ಪಂದ್ಯಗಳಲ್ಲಿ ದೆಹಲಿ, ಸೌರಾಷ್ಟ್ರ ಮತ್ತು ಮಹಾರಾಷ್ಟ್ರ ವಿರುದ್ಧ ಕ್ರಮವಾಗಿ 55, 51 ಮತ್ತು 41 ರನ್‌ ಕಲೆ ಹಾಕಿದ್ದರು. ಆದ್ದರಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ರಾಬಿನ್‌ ಉತ್ತಪ್ಪ ಬದಲು ಅಬ್ಬಾಸ್‌ ಅವಕಾಶ ಪಡೆದರು.
 
ಹುಬ್ಬಳ್ಳಿಯ ಪವನ್‌ ದೇಶಪಾಂಡೆ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಅನುಭವಿ ಮಯಂಕ್‌ ಅಗರವಾಲ್‌ ಸತತ ವೈಫಲ್ಯ ಕಂಡ ಕಾರಣ ಮಹಾರಾಷ್ಟ್ರದ ಎದುರು ಮಯಂಕ್‌ ಬದಲು ಪವನ್‌ಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸಿತ್ತು. ಪದಾರ್ಪಣೆ ಪಂದ್ಯದಲ್ಲಿಯೇ ಪವನ್‌ 70 ರನ್‌ ಗಳಿಸಿದ್ದರು. ರಾಜ್ಯ ತಂಡದಲ್ಲಿ ಸ್ಥಾನ ಸಂಪಾದಿಸಲು ಎಡಗೈ ಬ್ಯಾಟ್ಸ್‌ಮನ್ ಪವನ್‌ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇವರ ತಂದೆ ಉದಯ್‌ ದೇಶಪಾಂಡೆ ಪೇಪರ್‌ ಎಜೆನ್ಸಿ  ನಡೆಸಿ ಮಗನ ಕ್ರಿಕೆಟ್‌ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. 2015ರಲ್ಲಿ ಪವನ್ ಕೆಎಸ್‌ಸಿಎ ಆಯೋಜಿಸಿದ್ದ ಪ್ರಥಮ ಡಿವಿಷನ್ ಕ್ಲಬ್‌ ಟೂರ್ನಿಯ ಸೋಷಲ್‌ ಕ್ರಿಕೆಟರ್ಸ್‌ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಜೊತೆಯಾಟವಾಡಿದ್ದರು. ಆಗ ವಲ್ಚರ್ಸ್‌ ಕ್ಲಬ್‌ಗೆ ನಾಯಕರಾಗಿದ್ದ ಅವರು 204 ರನ್‌ ಗಳಿಸಿದ್ದರು. ಇದರಿಂದ ರಾಜ್ಯ ತಂಡಕ್ಕೆ ಆಯ್ಕೆಯಾದರು.  ಅರ್ಜುನ ಹೊಯ್ಸಳ ಕೂಡ ರಣಜಿಗೆ ಪದಾರ್ಪಣೆ ಮಾಡಿದರೂ ಅವಕಾಶ ಉಪಯೋಗಿಸಿಕೊಳ್ಳಲಿಲ್ಲ.
 
ಹೆಚ್ಚುತ್ತಿದೆ ರಾಜ್ಯದ ಪ್ರಾಬಲ್ಯ: ಹಲವು ವರ್ಷಗಳ ಹಿಂದೆ ಭಾರತ ತಂಡದಲ್ಲಿ ರಾಜ್ಯದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 1967ರಲ್ಲಿ ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಕರ್ನಾಟಕದ ಬುದಿ ಕುಂದಿರನ್‌, ವಿ. ಸುಭ್ರಮಣ್ಯ, ಇಎಎಸ್‌ ಪ್ರಸನ್ನ, ಬಿ.ಎಸ್‌. ಚಂದ್ರಶೇಖರ್‌ ಇದ್ದರು. 1976ರಲ್ಲಿ ಆಕ್ಲೆಂಡ್‌ನಲ್ಲಿ ಜರುಗಿದ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ನಲ್ಲಿ ಜಿ.ಆರ್‌. ವಿಶ್ವನಾಥ್‌, ಬ್ರಿಜೇಶ್‌ ಪಟೇಲ್‌, ಸೈಯದ್‌ ಕಿರ್ಮಾನಿ, ಪ್ರಸನ್ನ, ಚಂದ್ರಶೇಖರ್‌ ಅವರು ತಂಡದ ಕಾಯಂ ಸದಸ್ಯರು. ಅಷ್ಟೇ ಏಕೆ, ಇತ್ತೀಚಿನ ವರ್ಷಗಳಲ್ಲಿ (1999) ಮೊಹಾಲಿಯಲ್ಲಿ ನಡೆದ ಕಿವೀಸ್‌ ಎದುರಿನ ಟೆಸ್ಟ್‌ನಲ್ಲಿಯೂ ಕರ್ನಾಟಕದ ಆರು ಆಟಗಾರರು ಇದ್ದರು. ಆಗ ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್, ಅನಿಲ್‌ ಕುಂಬ್ಳೆ, ಸುನಿಲ್‌ ಜೋಶಿ, ರಾಹುಲ್‌ ದ್ರಾವಿಡ್‌ ಮತ್ತು ವಿಜಯ್ ಭಾರದ್ವಾಜ್‌ ಭಾರತ ತಂಡದಲ್ಲಿದ್ದರು.
 
ಆ ಬಳಿಕ ರಾಜ್ಯದ ಆಟಗಾರರ ಇರುವಿಕೆ ಕಡಿಮೆಯಾಗುತ್ತಲೇ ಹೋಯಿತು. 2010ರಿಂದ ಬೇರೆ ಬೇರೆ ಪಂದ್ಯಗಳಲ್ಲಿ ಐವರು ಆಟಗಾರರಷ್ಟೇ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್‌ ಕುಮಾರ್‌ (2010ರಲ್ಲಿ ಪದಾರ್ಪಣೆ), ಅಭಿಮನ್ಯು ಮಿಥುನ್‌ (2010), ಎಸ್‌. ಅರವಿಂದ್‌್ (2015), ಕೆ.ಎಲ್‌. ರಾಹುಲ್‌ (2015), ಮನೀಷ್‌ ಪಾಂಡೆ (2015) ಮತ್ತು ಕರುಣ್‌ ನಾಯರ್‌ (2016) ದೇಶವನ್ನು ಪ್ರತಿನಿಧಿಸಿದ್ದಾರೆ.
 
ಹತ್ತು ವರ್ಷಗಳ ಹಿಂದೆಯೇ ಭಾರತ ತಂಡದಲ್ಲಿ ರಾಬಿನ್‌ ಉತ್ತಪ್ಪ ಆಡಿದ್ದರು. 2006ರಿಂದ 08ರ ಎರಡು ವರ್ಷಗಳ ಅವಧಿಯಲ್ಲಿ ರಾಬಿನ್‌ 38 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ದಿನಗಳು ಉರುಳಿದಂತೆ ಪೈಪೋಟಿ ಹೆಚ್ಚಾದ ಕಾರಣ ರಾಬಿನ್‌ ಕೂಡ ಸ್ಥಾನ ಕಳೆದುಕೊಂಡರು. ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳಲ್ಲಿ ಸ್ಥಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ. ಆದ್ದರಿಂದ ರಾಷ್ಟ್ರೀಯ ತಂಡದಲ್ಲಿ ಸಿಕ್ಕ ಅವಕಾಶ ಉಳಿಸಿಕೊಳ್ಳುವುದು ಈಗ ಹಗ್ಗದ ಮೇಲಿನ ನಡಿಗೆಯಷ್ಟೇ ಕಷ್ಟ.
 
ಸಜ್ಜಾಗಿದ್ದಾರೆ ಕಿರಿಯರು: ಇತ್ತೀಚಿನ ಎರಡು ವರ್ಷಗಳಿಂದ ಕರ್ನಾಟಕದ ನಾಲ್ವರು ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಹೊಸಬರಿಗೆ ಹಾದಿ ಮಾಡಿಕೊಟ್ಟಂತಾಗಿದೆ. ರಾಜ್ಯದ ಕ್ರಿಕೆಟ್‌ ಜಗತ್ತು ಅಕ್ಷಯ ಪಾತ್ರೆ ಇದ್ದಂತೆ. ಏಕೆಂದರೆ ಅನುಭವಿಗಳು ಮುಂದೆ ಹೋದಷ್ಟೂ ಆ ಸ್ಥಾನ ತುಂಬಲು ಕಿರಿಯರು ಕಾಯುತ್ತಿದ್ದಾರೆ.
 
23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಡಿ. ನಿಶ್ಚಲ್‌, ವೇಗಿಗಳಾದ ಪ್ರತೀಕ್‌ ಜೈನ್‌, ಪ್ರಸಿದ್ಧ ಕೃಷ್ಣ ಗಮನ ಸೆಳೆಯುತ್ತಿದ್ದಾರೆ. ಪ್ರತೀಕ್‌ ಮತ್ತು ಪ್ರಸಿದ್ಧ ಈ ಬಾರಿಯ ರಣಜಿಯ ವಿದರ್ಭ ವಿರುದ್ಧದ ಪಂದ್ಯಕ್ಕೆ ರಾಜ್ಯ ತಂಡದಲ್ಲಿದ್ದರು. ಸಿ.ಕೆ. ನಾಯ್ಡು ಟೂರ್ನಿಯಲ್ಲಿ ಪ್ರತೀಕ್‌ 25 ಮತ್ತು ಎಡಗೈ ಸ್ಪಿನ್ನರ್‌ ಸುಚಿತ್‌ 25 ವಿಕೆಟ್ ಪಡೆದಿದ್ದಾರೆ. ಸುಚಿತ್‌ ಹೋದ ವರ್ಷ ರಣಜಿ ಆಡಿದ್ದರು. ನಿಶ್ವಲ್ ಈ ಟೂರ್ನಿಯಲ್ಲಿ ಒಟ್ಟು ಮೊತ್ತ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಇವರ ಜೊತೆ ಸಮರ್ಥ್‌ ಊಟಿ, ನಾಗಭರತ್ ಮತ್ತು ವಿ.ಆರ್‌. ಮಿಲಿಂದ್‌ ಉತ್ತಮ ಬ್ಯಾಟ್ಸ್‌ಮನ್‌ಗಳಾಗಬಲ್ಲ ಭರವಸೆ ಮೂಡಿಸಿದ್ದಾರೆ. ಇದರಿಂದ ಜೂನಿಯರ್ ತಂಡ ನಾಯ್ಡು ಟೂರ್ನಿಯಲ್ಲಿ ಪ್ಲೇಟ್‌ ಡಿವಿಷನ್‌ನಿಂದ ಎಲೀಟ್‌ ಹಂತಕ್ಕೆ ಬಡ್ತಿ ಪಡೆಯುವ ಹೊಸ್ತಿಲಿಗೆ ಬಂದು ನಿಂತಿದೆ. ಫೆಬ್ರುವರಿಯಲ್ಲಿ ನಡೆಯಲಿರುವ ಹರಿಯಾಣ ಎದುರಿನ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಜಯ ಪಡೆದರೆ ಮುಂದಿನ ಹಂತ ತಲುಪಲಿದೆ. ಹೋದ ವರ್ಷ ಕಿರಿಯರ ತಂಡ ಪ್ಲೇಟ್‌ ಡಿವಿಷನ್‌ಗೆ ಹಿಂಬಡ್ತಿ ಪಡೆದಿತ್ತು. ಈಗಿರುವ ತಂಡದಲ್ಲಿ ಕೆಲವರು ರಣಜಿಯಲ್ಲಿಯೂ ಆಡಿದ್ದಾರೆ. ಅವರಿಗೆ ಮುಂದೆ ನೂರಾರು ಅವಕಾಶಗಳಿವೆ. ಆದರೆ ಸಾಕಷ್ಟು ಪೈಪೋಟಿ ಇರುವ ಕಾರಣ ಪ್ರತಿ ಪಂದ್ಯದಲ್ಲಿಯೂ ಉತ್ತಮ ಸಾಮರ್ಥ್ಯ ನೀಡುವುದು ಅನಿವಾರ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT