ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಮಡಿಲಿಗೆ ಪ್ರವಾಸಿಗರ ಲಗ್ಗೆ

ಹೊಸ ವರ್ಷದ ಸಂಭ್ರಮಕ್ಕೆ ಈಗಲೇ ಹೋಮ್ ಸ್ಟೇ, ಲಾಡ್ಜ್‌ಗಳು ಬುಕ್‌
Last Updated 26 ಡಿಸೆಂಬರ್ 2016, 9:26 IST
ಅಕ್ಷರ ಗಾತ್ರ

ಮಡಿಕೇರಿ: ಚುಮು ಚುಮು ಚಳಿ, ಬೆಳಿಗ್ಗೆ ಮಂಜಿನ ಹನಿ, ಗಿಡಗಳ ಮೇಲೆ ಮಂಜು ಬಿದ್ದು ತೊಟ್ಟಿಕ್ಕುವ ಶಬ್ದ, ಪಕ್ಷಿಗಳ ಕೂಗು, ಹಸಿರು ಪರಿಸರ, ರಸ್ತೆ ಅಂಚಿನಲ್ಲಿ ಕಾಣುವ ಕಾಫಿ ತೋಟಗಳ ಸೊಬಗು, ಹತ್ತಾರು ಪ್ರವಾಸಿ ತಾಣಗಳು...

ಇವುಗಳನ್ನು ಕಣ್ತುಂಬಿಕೊಳ್ಳಲು ಕ್ರಿಸ್‌ಮಸ್‌ ರಜೆ, ಹೊಸ ವರ್ಷದ ಸಂಭ್ರ ಮಾಚರಣೆ, ಶಾಲಾ– ಕಾಲೇಜು ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಕೆಲವು ಶೈಕ್ಷಣಿಕ ಸಂಸ್ಥೆಗಳು ಕ್ರಿಸ್‌ಮಸ್‌ ಅಂಗವಾಗಿ ಶಾಲಾ– ಕಾಲೇಜುಗಳಿಗೆ ರಜೆ ನೀಡಿವೆ. ಈ ರಜೆ ನೆಪದಲ್ಲಿ ಪ್ರವಾಸಕ್ಕೆ ಮಕ್ಕಳು, ಪೋಷ ಕರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ, ಭಾನುವಾರ ಪ್ರವಾಸಿ ತಾಣಗಳು ಗಿಜಿಗುಡುತ್ತಿದ್ದವು. ಇನ್ನು ಏಕಾಏಕಿ ಮಡಿಕೇರಿಗೆ ಬಂದ ಪ್ರವಾಸಿಗರು ವಸತಿಗೆ ಪರದಾಟ ಸಹ ನಡೆಸಿದರು. ಶನಿವಾರ ಸಂಜೆಯಿಂದ ರಾತ್ರಿ 10 ಗಂಟೆಯವರೆಗೂ ಪ್ರವಾಸಿಗರಿಂದ ತುಂಬಿದ ವಾಹನಗಳು ಬರುತ್ತಲೇ ಇದ್ದವು. ಭಾನುವಾರ ಇಡೀ ದಿವಸ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಂಡರು.

ರಾಜಾಸೀಟ್‌ನಲ್ಲಿ ಬೆಳಿಗ್ಗೆಯಿಂದಲೇ ಜನದಟ್ಟಣೆಯಿತ್ತು. ಪ್ರೇಮಿಗಳು, ಯುವಕ, ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಕೊಡಗಿನ ಪ್ರಕೃತಿ ಸೌಂದರ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡರು.

ಇನ್ನು ಓಂಕಾರೇಶ್ವರ ದೇಗುಲ, ಪುರಾತನ ಕೋಟೆ, ಅಬ್ಬಿ ಫಾಲ್ಸ್‌ನಲ್ಲೂ ಪ್ರವಾಸಿಗರ ದಂಡೇ ಇತ್ತು. ಕಿರಿದಾದ ಅಬ್ಬಿಫಾಲ್ಸ್‌ ರಸ್ತೆಯಲ್ಲಿ ವಾಹನಗಳು ಮುಂದೆ ಸಾಗಲು ಹರಸಾಹಸ ಪಡ ಬೇಕಾಯಿತು. ಆದರೆ, ಅಬ್ಬಿ ಫಾಲ್ಸ್‌ ನೀರಿಲ್ಲದೇ ಬರಿದಾಗಿರುವುದು ಮಾತ್ರ ಪ್ರವಾಸಿಗರಿಗೆ ನಿರಾಸೆ ಮೂಡಿಸಿತು. ಭಾಗಮಂಡಲ, ತಲಕಾವೇರಿ, ತಡಿಯಂಡಮೋಳ್‌, ದುಬಾರೆ, ನಿಸರ್ಗಧಾಮದಲ್ಲೂ ಹೆಚ್ಚಿನ ಪ್ರವಾಸಿಗರು ಕಂಡುಬಂದರು.

ಟ್ರಾಫಿಕ್‌ ಕಿರಿಕಿರಿ: ಶನಿವಾರ ಹಾಗೂ ಭಾನುವಾರ ಇಡೀ ದಿವಸ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ತೀವ್ರವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪ ಎರಡು ದಿನಗಳ ಕಾಲ ವಾಹನಗಳು ಮುಂದೇ ಸಾಗಲು ಆಗದ ಸ್ಥಿತಿಯಿತ್ತು. ಮಡಿಕೇರಿಯಲ್ಲಿ ರಸ್ತೆಗಳು ಕಿರಿದಾಗಿರುವ ಕಾರಣ ಪ್ರತಿ ವಾರಾಂತ್ಯದಲ್ಲಿ ಈ ಸಮಸ್ಯೆ ಉಂಟಾಗುತ್ತಲೇ ಇದೆ. ನಗರಸಭೆ, ಪೊಲೀಸ್‌ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ.

ಹೊಸ ವರ್ಷಕ್ಕೆ ಬುಕ್ಕಿಂಗ್‌: ಕೊಡಗು ಜಿಲ್ಲೆಯಲ್ಲಿ ಅಂದಾಜು 3 ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಬಹುತೇಕ ಹೋಂಸ್ಟೇಗಳನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಈಗಲೇ ಕಾಯ್ದಿರಿಸಲಾಗಿದೆ. ರಾಜ್ಯದ ನಾನಾ ಕಡೆಯವರು ಮಡಿಕೇರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕೊಠಡಿಗಳೂ ಬುಕ್‌ ಆಗಿವೆ. ಕ್ರಿಸ್‌ಮಸ್‌ ಬಳಿಕ ಕೊಡಗಿನಲ್ಲಿ ಹೊಸ ವರ್ಷವೂ ಕಳೆಗಟ್ಟುವ ಸಾಧ್ಯತೆ ಯಿದೆ. ನಾನಾ ಕಾರಣಕ್ಕೆ ಕೊಡಗಿನಲ್ಲಿ ಈ ವರ್ಷ ಪ್ರವಾಸೋದ್ಯಮಕ್ಕೆ ನೆಲಕಚ್ಚಿತ್ತು. ಮುಂದಿನ ವರ್ಷದಲ್ಲಿ ಪ್ರವಾಸೋದ್ಯಮಕ್ಕೆ ಗರಿಗೆದರುವ ನಿರೀಕ್ಷೆಯಿದೆ ಎನ್ನುತ್ತಾರೆ ಹೋಟೆಲ್‌ ಉದ್ದಿಮೆದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT