ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 27 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕವಿತಾ. ವಿ., ಊರು ಬೇಡ
* ನನ್ನ ವಯಸ್ಸು 26, ಡಿಸೆಂಬರ್‌ 2015 ರಿಂದ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೇನೆ. ನನ್ನ ತಿಂಗಳ ಸಂಬಳ ₹ 46,289. ಇದರಲ್ಲಿ ಪಿಂಚಣಿಗಾಗಿ ಪ್ರತೀ ತಿಂಗಳೂ ₹ 4305 ಕಡಿತಗೊಳ್ಳುತ್ತದೆ. ಪ್ರಸ್ತುತ ನಾನು ಯಾವುದೇ ಉಳಿತಾಯ ಮಾಡುತ್ತಿಲ್ಲ. ನಾನೂ ಆರ್‌.ಡಿ. ಹಾಗೂ ಪಿ.ಪಿ.ಎಫ್‌.ಗಳಲ್ಲಿ ಉಳಿತಾಯ ಮಾಡಬೇಕೆಂದಿದ್ದೇನೆ. ನಾನು ಆದಾಯತೆರಿಗೆ ವಿನಾಯತಿ ಹೊಂದಲು ಮಾರ್ಗ ತಿಳಿಸಿ. ನನ್ನ ತಂದೆಯವರು ಮನೆಕಟ್ಟಬೇಕೆಂದಿದ್ದಾರೆ. ಅವರಿಗೆ ನಾನು ಆರ್ಥಿಕ ಸಹಾಯ ಮಾಡಲು  ದಯಮಾಡಿ ಸಲಹೆ ನೀಡಿ.
ಉತ್ತರ:
ಪಿಂಚಣಿಗಾಗಿ ಕಟ್ಟುವ ಹಣದ ಕಡಿತದ ನಂತರ ನಿಮಗೆ ₹ 41894 ಪ್ರತೀ ತಿಂಗಳೂ ಕೈಸೇರುತ್ತದೆ. ಇಂದಿನ ಆದಾಯ ಪರಿಗಣಿಸುವಾಗ ನಿಮ್ಮ ಒಟ್ಟು ವಾರ್ಷಿಕ ಆದಾಯ ₹ 5,55,468. ₹ 2.50 ಲಕ್ಷ ತೆರಿಗೆ ಮಿತಿ ಕಳೆದುಬರುವ ₹ 3,05,468 ಮೊತ್ತೆಕ್ಕೆ ನೀವು ತೆರಿಗೆ ಕೊಡಬೇಕಾಗುತ್ತದೆ. ನೀವು ಸೆಕ್ಷನ್‌ 80ಸಿ. ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಬಹುದು. ನಿಮಗೆ ಜೀವ ವಿಮೆಯ ಅವಶ್ಯವಿದ್ದು, ವಿಮೆಗೆ ಪ್ರತೀ ತಿಂಗಳೂ ₹ 4000 ಜೀವನ ಆನಂದ ಪಾಲಿಸಿ ಮಾಡಿಸಿ ಕಟ್ಟಿರಿ ಹಾಗೂ ವಾರ್ಷಿಕವಾಗಿ ಪಿ.ಪಿ.ಎಫ್‌ ಖಾತೆಗೆ ₹ 1,02,000 ಕಟ್ಟಿರಿ. ಒಟ್ಟಿನಲ್ಲಿ ವಿಮೆ ಹಾಗೂ ಪಿ.ಪಿ.ಎಫ್‌.ಗೆ ಖಾತೆಗೆ ₹ 102000 ಕಟ್ಟಿರಿ. ಒಟ್ಟಿನಲ್ಲಿ ವಿಮೆ ಹಾಗೂ ಪಿ.ಪಿ.ಎಫ್‌.ಗೆ ಮಾಸಿಕ ₹ 12500 ಮುಡುಪಾಗಿಡಿ. ಇನ್ನು ನಿಮ್ಮ ಖರ್ಚಿಗೆ ₹ 15000 ಇಟ್ಟಿಕೊಂಡು ₹ 5000 ಆರ್‌.ಡಿ. ಒಂದು ವರ್ಷಕ್ಕೆ ಮಾಡಿ ವರ್ಷಾಂತ್ಯಕ್ಕೆ ಬಂಗಾರದ ನಾಣ್ಯ ಕೊಳ್ಳಿರಿ. ಈ ಪ್ರಕ್ರಿಯೆ ನಿಮ್ಮ ಮದುವೆ ತನಕವೂ ನಿಲ್ಲಿಸಬೇಡಿ. ಈ ರೀತಿ ಪ್ಲ್ಯಾನ್‌ ಮಾಡಿದಾಗ ಇನ್ನೂ ನಿಮ್ಮೊಡನೆ ₹ 9484 ಉಳಿಯುತ್ತದೆ. ಇದರಲ್ಲಿ ಗರಿಷ್ಠ ₹ 5000 ನಿಮ್ಮ ತಂದೆಯವರಿಗೆ ಕಳಿಸಿ.

ಸಂತೋಷ್‌ ನಾಯಕ್‌, ಬೆಳಗಾವಿ
*ನಾನು ಪಿಯುಸಿ (ಆರ್‍್ಟ್ಸ) ಮುಗಿಸಿ ಕೆಲಸ ಸಿಕ್ಕದೇ ಪೆಟ್ರೋಲ್‌ ಬಂಕ್‌ನಲ್ಲಿ ₹ 5000 ಮಾಸಿಕ ವೇತನದಲ್ಲಿ ದುಡಿಯುತ್ತಿದ್ದೇನೆ. ನನಗೆ ಹೆಚ್ಚಿನ ಆದಾಯ ಗಳಿಸಲು ಯಾವ ವ್ಯಾಪಾರ ಮಾಡಲಿ, ಮಾರ್ಗದರ್ಶನ ಮಾಡಿರಿ.
ಉತ್ತರ:
ಮಿಲ್ಕ್‌ ಬೂತ್‌ ಹಾಗೂ ನ್ಯೂಸ್‌ ಪೇಪರ್‌ ಏಜೆನ್ಸಿ ಪಡೆಯಿರಿ. ಇದಕ್ಕೆ ಬಹಳ ಬಂಡವಾಳ ಬೇಕಿಲ್ಲ, ಜೊತೆಗೆ ಇವೆರಡರಲ್ಲಿಯೂ ವ್ಯಾಪಾರ ಖಚಿತವಾಗಿರುತ್ತದೆ, ಈ ವ್ಯಾಪಾರದಲ್ಲಿ ಕಮಿಷನ್‌ ಕೂಡಾ ತುಂಬಾ ಸಿಗುತ್ತದೆ. ಬೆಳಿಗ್ಗೆ 5.00 ಗಂಟೆಯಿಂದ 10.00 ಗಂಟೆ ತನಕ ಹೆಚ್ಚಿನ ಕೆಲಸವಿದ್ದರೂ, ಉಳಿದ ಸಮಯ ಬಿಡುವಿರುತ್ತದೆ. ಬಿಡುವಿನ ವೇಳೆ ಬಿ.ಎ. ಬಾಹ್ಯ ವಿಶ್ವವಿದ್ಯಾಲಯದಿಂದ ಮಾಡಿರಿ. ಇದರಿಂದ ಉಪಯೋಗ ಆಗದಿರಲೂಬಹುದು. ಆದರೆ ಹೀಗೆ ಮಾಡುವುದರಿಂದ ನಿಮಗೇನೂ ನಷ್ಟವಿಲ್ಲ. ಜೀವನದಲ್ಲಿ ಮುಖ್ಯವಾಗಿ ಆರ್ಥಿಕ ಶಿಸ್ತು ಪಾಲಿಸಿರಿ. ಮುಂದೊಂದು ದಿವಸ ನೀವು ದೊಡ್ಡ ಬಿಸಿನೆಸ್‌ ಮ್ಯಾನ್‌ ಆಗಬಹುದು. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಹೆಸರು ಬೇಡ, ಮೈಸೂರು
* ತಾ. 1.8.1983 ರಿಂದ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದು ತಾ. 31–5–2015 ರಂದು ನಿವೃತ್ತಿ ಹೊಂದಿದೆ. ತಾ. 25.11.2015 ರಂದು ಭವಿಷ್ಯನಿಧಿ ನನ್ನ ಖಾತೆಗೆ ಜಮಾವಾಗಿದೆ. ಆದರೆ ಗ್ರ್ಯಾಚುಟಿ, ಅರಿಯರ್‍್ಸ ಎನ್‌ಕ್ಯಾಷ್‌ಮೆಂಟ್‌ ಇನ್ನೂ ಬಂದಿಲ್ಲ. ನನ್ನ ಬ್ಯಾಂಕ್‌ ಸಾಲಕ್ಕೆ ಬಡ್ಡಿ ಬರುತ್ತದೆ. ನನಗೆ ಬರಬೇಕಾದ ಹಣಕ್ಕೆ ಬಡ್ಡಿ ಪಡೆಯಬಹುದೇ ಮತ್ತು ತಡವಾಗಿ ಪಡೆದ ಪಿ.ಎಫ್‌. ಹಣಕ್ಕೆ ಬಡ್ಡಿ ಇದೆಯೇ, ದಯಮಾಡಿ ತಿಳಿಸಿರಿ.
ಉತ್ತರ:
ನಿವೃತ್ತಿಯಿಂದ ಬರತಕ್ಕ ಹಣ ಬ್ಯಾಂಕಿನಲ್ಲಿ ಸಂದಾಯ ಮಾಡುವಾಗ ತಡವಾದಲ್ಲಿ ಬಡ್ಡಿ ಕೊಡುವ ಕ್ರಮವಿಲ್ಲ. ಸಾಮಾನ್ಯವಾಗಿ ತಡ ಮಾಡುವುದಿಲ್ಲ. ನೀವು ನಿಮ್ಮ ಮುಖ್ಯ ಕಚೇರಿ ಅಥವಾ ಸೇವೆ ಸಲ್ಲಿಸುತ್ತಿರುವ ಶಾಖೆಗೆ ಬೇಕಾದ ಮಾಹಿತಿ ಒದಗಿಸಿರಿ. ಪಿ.ಎಫ್‌. ಎಷ್ಟು ಸಮಯ ಬ್ಯಾಂಕಿನಲ್ಲಿ ಇದೆಯೋ ಅಷ್ಟರ ತನಕ ಬಡ್ಡಿ ಬರುತ್ತದೆ.

ರಘು. ಎನ್‌., ಮೈಸೂರು
*ನಾನು ಕೂಲಿ ಕೆಲಸ ಮಾಡಿ ₹ 10,000 ಉಳಿಸುತ್ತೇನೆ.  ನನ್ನ ವಯಸ್ಸು 28. ನನ್ನ ಪತ್ನಿ ಪ್ರಾಥಮಿಕ ಶಾಲಾ ಶಿಕ್ಷಕಿ. ವಯಸ್ಸು 26. ಅವಳ ಸಂಬಳ ₹ 21778  ನಮಗೆ ಒಂದು ಹೆಣ್ಣುಮಗು 1–1/2 ವರ್ಷ ವಯಸ್ಸು. ಮಗಳಿಗೆ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದೇವೆ. ಬಾಡಿಗೆ ತಿಂಗಳಿಗೆ ₹ 3000. ನಮಗೆ ಆಸ್ತಿ ಮನೆ ಇಲ್ಲ. ಮನೆ ಖರ್ಚು ₹ 8000. ಸುಕನ್ಯಾ, ಆರ್‌.ಡಿ., ಎಲ್‌.ಐ.ಸಿ., ಕೆ.ಜಿ.ಐ.ಡಿ., ಎನ್‌.ಪಿ.ಎಸ್‌. ಎಷ್ಟು ಕಟ್ಟಬೇಕು. ನಾವು ಮುಂದೆ ಸ್ವಂತ ಮನೆ ಮಾಡಿಕೊಳ್ಳಬೇಕು. ದಯಮಾಡಿ ಮಾರ್ಗದರ್ಶನ ಮಾಡಿ.
ಉತ್ತರ:
ನೀವು ಇಬ್ಬರೂ ಚಿಕ್ಕ ವಯಸ್ಸಿನವರಾದ್ದರಿಂದ ಈಗಿನಿಂದಲೇ ಉತ್ತಮ, ಕಂಟಕ ರಹಿತ, ಉಳಿತಾಯಕ್ಕೆ ಪ್ಲ್ಯಾನ್‌ ಹಾಕಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ. ನಿಮ್ಮ ಪ್ರಕಾರ ಸಮೀಪದಲ್ಲಿ ನೀವಿಬ್ಬರೂ 10000 ತಿಂಗಳಿಗೆ ಉಳಿಸಬಹುದು. ಸರ್ಕಾರಿ ನೌಕರಿಯಲ್ಲಿರುವ ನಿಮ್ಮ ಪತ್ನಿ ಕೆ.ಜಿ.ಐ.ಡಿ.ಗೆ ₹ 2000 (ಸದ್ಯ ಎಲ್‌.ಐ.ಸಿ. ಅವಶ್ಯವಿಲ್ಲ) ಸುಕನ್ಯಾ ಸಮೃದ್ದಿಗೆ ₹ 2000, ಎನ್‌ಪಿ.ಎಸ್‌. ₹ 2000 ಹಾಗೂ ₹ 4000 ಆರ್‌.ಡಿ. ಹೀಗೆ ಪ್ರತೀ ತಿಂಗಳೂ ತುಂಬುತ್ತಾ ಬರಲಿ. ಆರ್‌.ಡಿ. 10 ವರ್ಷಗಳ ಅವಧಿಗೆ ಮಾಡಿ,  ಸಂಬಳ ಪಡೆಯುವ ಬ್ಯಾಂಕಿಂಗ್‌ ಸ್ಟ್ಯಾಂಡಿಗ್‌ ಇನ್‌್ಸಟ್ರಕ್ಷನ್‌ ಕೊಟ್ಟಲ್ಲಿ, ಸಂಬಳ ಬಂದ ತಕ್ಷಣ ಉಳಿತಾಯ ಖಾತೆಯಿಂದ, ಆರ್‌.ಡಿ. ಖಾತೆಗೆ ಜಮಾ ಮಾಡುತ್ತಾರೆ. ಕೆ.ಜಿ.ಐ.ಡಿ., ಸುಕನ್ಯಾ ಸಮೃದ್ಧಿ, ಎನ್‌.ಪಿ.ಎಸ್‌.ಗಳಿಗೂ ಸಂಬಳದಿಂದ ನೇರ ಮುರಿಯುವಂತೆ ಮಾಡಿಕೊಳ್ಳಿ. ಇದರಿಂದ ಎಲ್ಲಾ ಉಳಿತಾಯಗಳೂ ಎಡೆತಡೆ ಇಲ್ಲದೇ ಮುಂದುವರಿಯುತ್ತದೆ. ಮನೆ ಮಾಡಲು ಸ್ವಲ್ಪ ಸಮಯ ಕಾಯಿರಿ. ನಿಮ್ಮ ಮಗುವಿಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ. ನೀವು ಪ್ರತ್ಯೇಕವಾಗಿ
₹ 10000/– ಆರ್‌.ಡಿ. 10 ವರ್ಷಗಳ ಅವಧಿಗೆ ಮಾಡಿ ಇಲ್ಲಿ ಬರುವ ಮೊತ್ತ ಹಾಗೂ ಹೆಂಡತಿ ಉಳಿತಾಯದಿಂದ ಮುಂದೆ ನಿವೇಶನ ಮನೆ ಮಾಡಿ.

ಸುರೇಶ್‌, ಚಿತ್ರದುರ್ಗ
*ನಮ್ಮ ಅಪ್ಪನಿಗೆ ನಾವು 4 ಜನ ಮಕ್ಕಳು. ನಾನು ಹಿರಿಯವನು. ಅವಿವಾಹಿತ. ತಿಂಗಳ ಸಂಬಳ ₹ 10000, 3 ಜನ ತಮ್ಮಂದಿರು ಇನ್ನೂ ಓದುತ್ತಿದ್ದಾರೆ. ಅಪ್ಪ ರಾಜ್ಯ ಸರ್ಕಾರದ ನೌಕರನಾಗಿದ್ದು ಸದ್ಯ ನಿವೃತ್ತಿಯಾಗುತ್ತಾರೆ. ನಮಗೆ ಆಸ್ತಿ ಮನೆ ಜಾಗ ಏನೂ ಇಲ್ಲ. ನಿವೃತ್ತಿಯ ನಂತರ ಅಪ್ಪನಿಗೆ ₹ 13 ಲಕ್ಷ ನಗದು ಬರುತ್ತದೆ ಹಾಗೂ ಮಾಸಿಕ ಪಿಂಚಣಿ ₹ 12000 ಬರುತ್ತದೆ. ನಮಗೆ ₹ 8 ಲಕ್ಷ ಸಾಲವಿದೆ. ನಮ್ಮ ಮನೆಗೆ ಸಮೀಪದಲ್ಲಿ ಒಂದು ಒಳ್ಳೆಮನೆ ಇದೆ. ಅದರ ಬೆಲೆ ₹ 14 ಲಕ್ಷ ಹಾಗೂ ಇನ್ನೊಂದು ನಿವೇಶನವಿದೆ. ಅದರ ಬೆಲೆ ₹ 5 ಲಕ್ಷ. ನನ್ನ ಪ್ರಶ್ನೆ: ನಾವು ಮೊದಲು ಸಾಲ ತೀರಿಸುವುದು ಒಳ್ಳೆಯದೇ ಅಥವಾ ಮನೆ, ಸ್ಥಳ ತೆಗೆದುಕೊಳ್ಳುವುದು ಒಳ್ಳೆಯದೇ ದಯಮಾಡಿ ಮಾರ್ಗದರ್ಶನ ಮಾಡಿ.
ಉತ್ತರ:
ನಿಮ್ಮ ತಂದೆಯವರಿಗೆ ನಿವೃತ್ತಿಯಿಂದ ಬರುವ ₹ 13 ಲಕ್ಷದಲ್ಲಿ ₹ 8 ಲಕ್ಷ ಸಾಲ ತಕ್ಷಣ ತೀರಿಸಿ, ಸಾಲ ರಹಿತ ಜೀವನಕ್ಕೆ ಕಾಲಿಡಿರಿ. ಈ ಸಾಲದ ಬಡ್ಡಿ ತೆರುವುದು ಕಷ್ಟದ ಕೆಲಸ. ಸಾಧ್ಯವಾದರೆ ₹ 4 ಲಕ್ಷದಲ್ಲಿ ನಿವೇಶನ ಕೊಳ್ಳಿರಿ. ಮುಂದೆ ಅನುಕೂಲವಾದಾಗ ಮನೆ ಕಟ್ಟಿಸಬುದು. ಸಾಲ ಇಟ್ಟುಕೊಂಡು ಆಸ್ತಿ ಮಾಡುವುದು ಜಾಣತನವಲ್ಲ, ಜೊತೆಗೆ ಸಾಲ ತೀರಿಸಲು ನಿಮಗೆ ಬೇರೆ ಮಾರ್ಗವಿಲ್ಲ.

ರಾಜು. ಎಂ. ಸಂಗೊಳ್ಳಿ, ನಯಾನಗರ, ಬೈಲಹೊಂಗಲ
*ನನ್ನ ವಯಸ್ಸು 25. ವಿವಾಹಿತ ಹೊಟೇಲು ನಡೆಸುತ್ತಿದ್ದೇನೆ. ತಿಂಗಳ ಆದಾಯದಲ್ಲಿ ಎಲ್ಲಾ ಕಳೆದು ₹ 10000 ಉಳಿಯುತ್ತದೆ. ನನ್ನ ಮದುವೆ ಸಾಲ ₹ 3 ಲಕ್ಷವಿದೆ. ಬ್ಯಾಂಕ್‌ ಸಾಲ ತೀರಿಸುವುದು ಮತ್ತು ಹೆಂಡತಿ ಮಕ್ಕಳ ಭವಿಷ್ಯಕ್ಕೆ ಹೂಡಿಕೆ–ಉಳಿತಾಯದ ವಿಚಾರದಲ್ಲಿ ಮಾಹಿತಿ ನೀಡಿ.
ಉತ್ತರ:
ಮದುವೆಗೆ ತೆಗೆದುಕೊಂಡಿರುವ ಸಾಲ ಬ್ಯಾಂಕ್‌ ಅಥವಾ ಖಾಸಗಿ ಎಂಬುದು ತಿಳಿಯಲಿಲ್ಲ. ಖಾಸಗಿಯಾದಲ್ಲಿ ಹೆಚ್ಚಿನ ಬಡ್ಡಿ ತೆರಬೇಕಾದೀತು. ನಿಮಗೆ ಪ್ರತೀ ದಿವಸ ಆಗುವ ವ್ಯಾಪಾರದಲ್ಲಿ ಅಂದಿನ ಖರ್ಚು ಕಳೆದು ಉಳಿದ ಹಣ ಪ್ರತೀ ದಿವಸ ಬ್ಯಾಂಕಿನ ಉಳಿತಾಯ ಖಾತೆಗೆ ತಪ್ಪದೇ ಜಮಾ ಮಾಡಿರಿ. ಇದರಿಂದ ಕಡ್ಡಾಯವಾಗಿ ಹಣ ಉಳಿಸುವ ಸಾಮರ್ಥ್ಯ ಹೆಚ್ಚುತ್ತದೆ. ಎಷ್ಟೇ ಕಷ್ಟವಾದರೂ ಗರಿಷ್ಠ ಹಣ ಉಳಿಸಿ ತಿಂಗಳಾಂತ್ಯಕ್ಕೆ ಸಾಲಕ್ಕೆ ಜಮಾ ಮಾಡುತ್ತಾ ಬನ್ನಿರಿ. ನೀವು ಗಟ್ಟಿ ಮನಸ್ಸು ಮಾಡಿದಲ್ಲಿ ಎರಡೇ ವರ್ಷದಲ್ಲಿ ನೀವು ಸಾಲ ತೀರಿಸಬಹುದು. ಒಮ್ಮೆ ಸಾಲ ತೀರಿಸಿದ ನಂತರ, ನಿಮ್ಮ ಹಾಗೂ ನಿಮ್ಮ ಹೆಂಡತಿ ಜಂಟಿಯಾಗಿ ಬ್ಯಾಂಕಿನಲ್ಲಿ ₹ 10000 ಆರ್‌.ಡಿ. 10 ವರ್ಷಗಳಿಗೆ ಪ್ರಾರಂಭಿಸಿರಿ. 10 ವರ್ಷಗಳ ಅಂತ್ಯಕ್ಕೆ ಸಮೀಪದಲ್ಲಿ ₹ 20 ಲಕ್ಷ ನಿಮ್ಮದಾಗುತ್ತದೆ. ಇದರಿಂದ ನಿವೇಶನ ಕೊಂಡುಕೊಳ್ಳಿ.

ಯು. ಕೃಷ್ಣ ಕುಮಾರ್‌, ಬೆಂಗಳೂರು
*ನಾನು ಏಪ್ರಿಲ್‌ 2016 ರಲ್ಲಿ ₹ 50,000 ನನ್ನ ಹೆಂಡತಿ ಹೆಸರಿನಲ್ಲಿ 5 ವರ್ಷಗಳ ಎನ್‌.ಎಸ್‌.ಸಿ. ಮಾಡಿಸಿದೆ. ತಾ. 29.4.2021ಕ್ಕೆ ₹ 73,800 ಬರುತ್ತದೆ ಎಂದಿದ್ದಾರೆ. ನಾನು ಈಗ ಆರ್ಥಿಕ ಮುಗ್ಗಟ್ಟಿನಲ್ಲಿದ್ದೇನೆ. ನನಗೆ ಸಾಲಬೇಕಾಗಿದೆ. ಈ ಠೇವಣಿ ವಾಪಾಸು ಪಡೆಯಬಹುದೇ ಅಥವಾ ಸಾಲ ಪಡೆಯಬಹುದೇ ತಿಳಿಸಿರಿ.
ಉತ್ತರ:
ಅಂಚೆ ಕಚೇರಿಯಲ್ಲಿರಿಸಿದ ಎನ್‌.ಎನ್‌.ಸಿ. ಅವಧಿಗೆ ಮುನ್ನ ಪಡೆಯುವಂತಿಲ್ಲ ಹಾಗೂ ಅಂಚೆ ಕಚೇರಿಯಲ್ಲಿ ಈ ಠೇವಣಿಯ ಮೇಲೆ ಸಾಲ ದೊರೆಯುವುದಿಲ್ಲ. ಸಾಲ ಬೇಕಾದಲ್ಲಿ, ಈ ಬಾಂಡು ಬ್ಯಾಂಕುಗಳಲ್ಲಿ ಅಡವಿಟ್ಟು  ಶೇ 75 ರಷ್ಟು ಠೇವಣಿಯ ಮೇಲೆ ಸಾಲ ಪಡೆಯಬಹುದು. ಬಡ್ಡಿದರ ಶೇ 11 ರಿಂದ 12 ಇರಬಹುದು. ಎನ್‌.ಎ.ಸಿ. ಠೇವಣಿ ಅವಧಿಗೆ ಮುನ್ನ ಪಡೆಯುವ ಠೇವಣಿಯಲ್ಲಿ. ಆದರೆ ಠೇವಣಿದಾರ ಮರಣ ಹೊಂದಿದರೆ ವಾರಸುದಾರರು ಅಥವಾ ನಾಮ ನಿರ್ದೆಶನ ಹೊಂದಿದವರು ಠೇವಣಿ ಹಿಂದಕ್ಕೆ ಪಡೆಯಬಹುದು.

ಗಂಗಾಧರ, ಸಾಗರ (ಶಿವಮೊಗ್ಗ ಜಿಲ್ಲೆ)
*ಅಂಚೆ ಕಚೇರಿ 5 ವರ್ಷಗಳ ಆರ್‌.ಡಿ.ಗೆ ಆದಾಯ ತೆರಿಗೆ ಇಲ್ಲ ಎಂದು ಕೇಳಿದ್ದೇನೆ. ಆದರೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವಾಗ ಆರ್‌.ಡಿ. ಬಡ್ಡಿಗೆ ತೆರಿಗೆ ವಿನಾಯತಿ ಇಲ್ಲ ಎನ್ನುತ್ತಾರೆ. ಇದಕ್ಕೆ ಏನು ಪರಿಹಾರ ದಯಮಾಡಿ ತಿಳಿಸಿರಿ. ಇದೇ ವೇಳೆ ರಾಷ್ಟ್ರೀಕೃತ ಹಾಗೂ ಉಳಿದ ಬ್ಯಾಂಕುಗಳಲ್ಲಿ ಶೇ 17ರ ತನಕ ಅಧಿಕ ಬಡ್ಡಿ ಸಾಲದ ಮೇಲೆ ವಿಧಿಸುವಾಗ, ಹೀಗೆ ಕೊಟ್ಟಿರುವ ಸಾಲದ  ಮೇಲಿನ ಬಡ್ಡಿಗೆ ಕೂಡಾ ತೆರಿಗೆ ವಿನಾಯತಿ ಇಲ್ಲದಿರುವುದು ಸೋಜಿಗ. ಆದರೆ ಗೃಹ ಸಾಲದ ಬಡ್ಡಿಗೆ ವಿನಾಯತಿ ಇದೆ. ಗೃಹ ಸಾಲದ ಬಡ್ಡಿ ಕಡಿಮೆ ಇದ್ದು ಇತರೆ ಸಾಲಗಳ ಬಡ್ಡಿ ಹೆಚ್ಚಿದ್ದರೂ, ಹೆಚ್ಚಿನ ಬಡ್ಡಿ ಸಾಲದಲ್ಲಿ ಬಡ್ಡಿ ವಿನಾಯತಿ ಇರದಿರುವುದು ಯಾವ ನ್ಯಾಯ? ನಾವು ಕಟ್ಟುವ ಬಡ್ಡಿಯಿಂದಲೇ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿರುವುದು ಎನ್ನುವ ಮಾತು ಹುಸಿಯೇ? ಜನ ಸಾಮಾನ್ಯರು ಸಾಲಕ್ಕೆ ಕಟ್ಟುವ ಬಡ್ಡಿಯಿಂದ ದೇಶದ ಆರ್ಥಿಕ ಪ್ರಗತಿಯಾಗಿಲ್ಲವೇ? ಮೇಲಿನ ವಿಚಾರಗಳಿಗೆ   ಸರಿಯಾದ ಉತ್ತರ ನೀಡಬೇಕಾಗಿ ವಿನಂತಿ.
ಉತ್ತರ:
2016 ಫೈನಾನ್ಸ್‌ ಆ್ಯಕ್ಟ್‌ನಲ್ಲಿ ಸೆಕ್ಷನ್‌ 194–ಎ ಅಡಿಯಲ್ಲಿ ಅಂಚೆ ಕಚೇರಿ ಹಾಗೂ ಬ್ಯಾಂಕುಗಳಲ್ಲಿ ಇರಿಸುವ ಆರ್‌.ಡಿ. ಠೇವಣಿ ಮೇಲಿನ ಬಡ್ಡಿಗೆ, ಆದಾಯ ತೆರಿಗೆ ಅನ್ವಯವಾಗುತ್ತದೆ ಹಾಗೂ ಈ ಠೇವಣಿಯ ಬಡ್ಡಿಗೆ ಟಿ.ಡಿ.ಎಸ್‌. ಮಾಡುವಂತೆ ಅಧಿಸೂಚನೆ ಹೊರಡಿಸಿದೆ. ಭಾರತದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಸುಮಾರು 200 ವರ್ಷಗಳ ಚರಿತ್ರೆ ಇದ್ದರೂ, ಸ್ವಾತಂತ್ರ್ಯ ಪೂರ್ವದಲ್ಲಾಗಲಿ, ನಂತರವಾಗಲೀ, ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಆರ್‌.ಡಿ. ಮೇಲೆ ಟಿ.ಡಿ.ಎಸ್‌. ವಿಧಿಸುತ್ತಿರಲಿಲ್ಲ. ಆರ್‌.ಡಿ. ಠೇವಣಿಯ ಪರಿಕಲ್ಪನೆ ಸಣ್ಣ ಹಾಗೂ ಮಧ್ಯಮ ವರ್ಗದ ಜನರಲ್ಲಿ ಉಳಿತಾಯದ ಪ್ರಜ್ಞೆ ಬರಲು ಹೇಳಿ ಮಾಡಿಸಿದಂತಿರುವ ಠೇವಣಿ. ಸರ್ಕಾರದ ಈ ನಿರ್ಧಾರ ಮುಂದಿನ ವರ್ಷದಿಂದಾದರೂ ವಾಪಸು ಪಡೆಯಲಿ ಎಂದು ಆಶಿಸುವ.
– uppuranik@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT