ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯ ನೀತಿ

ಬೆಳದಿಂಗಳು
Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮುಲ್ಲಾ ನಾಸಿರುದ್ದೀನ್ ಬಹಳ ದೊಡ್ಡ ಅನುಭಾವಿ. ಈತನ ಬದುಕನ್ನು ಗಾಂಧಿ ಮತ್ತು ಕ್ರಿಸ್ತನ ಬದುಕಿನ ಜೊತೆ ಹೋಲಿಸಬಹುದೇನೋ? ಇವರಿಬ್ಬರೂ ತಮ್ಮ ಬದುಕೇ ತಮ್ಮ ಸಂದೇಶ ಎಂದವರು. ಮುಲ್ಲಾನ ಬದುಕೇ ಒಂದು ಸಂದೇಶ. ಮೇಲ್ನೋಟಕ್ಕೆ ತಮಾಷೆಯಂತೆ ಕಾಣಿಸುವ ಆತನ ಕಥೆಗಳು ತಮಾಷೆಯ ಆಚೆಗೆ ನಿಲ್ಲುತ್ತವೆ. ಇವು ಕೆಲವು ಸಂದರ್ಭದಲ್ಲಿ ಬದುಕಿನ ಕಟುಸತ್ಯಗಳನ್ನು ಅನಾವರಣಗೊಳಿಸಿದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಅನುಭಾವದ ಹೆಸರಿನಲ್ಲಿ ನಡೆಯುವ ಡಾಂಭಿಕತೆಯನ್ನು ತೆರೆದಿಡುತ್ತವೆ. ಒಂದೊಂದು ಕಥೆಯನ್ನೂ ಹಲವು ಬಗೆಯಲ್ಲಿ ಅರ್ಥೈಸಲು ಸಾಧ್ಯವಿದೆ. ಈ ವಾರ ಕೇವಲ ಕಥೆಗಳನ್ನಷ್ಟೇ ಹೇಳಿ ಅರ್ಥೈಸುವ ಕೆಲಸವನ್ನು ಓದುಗರಿಗೇ ಬಿಡುತ್ತಿದ್ದೇನೆ.
***
ಮರವೇರಿದ್ದ ಒಬ್ಬಾತನಿಗೆ ಅದರಿಂದ ಇಳಿಯುವುದಕ್ಕೆ ಹೆದರಿಕೆಯಾಗುತ್ತಿತ್ತು. ಅವನ ಇಳಿಯುವ ಪ್ರಯತ್ನವೆಲ್ಲಾ ಕೆಳಗೆ ಬೀಳುವ ಭಯದಿಂದ ಸ್ಥಗಿತಗೊಂಡಿತ್ತು. ಕೆಳಗಿದ್ದವರನ್ನು ಸಹಾಯ ಮಾಡುವಂತೆ ಯಾಚಿಸಿದನಾದರೂ ಯಾರಿಗೂ ಈತನನ್ನು ಮರದಿಂದ ಇಳಿಸುವುದು ಹೇಗೆ ಎಂದು ಹೊಳೆಯಲಿಲ್ಲ. ಮುಲ್ಲಾ ನಾಸಿರುದ್ದೀನ್ ಅದೇ ದಾರಿಯಲ್ಲಿ ಬರುತ್ತಿದ್ದ. ಮರದ ಮೇಲಿದ್ದವನನ್ನು ಕೆಳಗಿಳಿಸುವ ಬಗ್ಗೆಯೇ ಎಲ್ಲರೂ ಚರ್ಚಿಸುತ್ತಿದ್ದುದನ್ನು ಅವನು ಕೇಳಿಸಿಕೊಂಡವನೇ ‘ಯಾರಾದರೂ ಒಂದು ಹಗ್ಗ ತನ್ನಿ’ ಎಂದ. ಯಾರೋ ಹೋಗಿ ಹಗ್ಗ ತಂದರು. ಅದನ್ನು ಮೇಲಕ್ಕೆ ಎಸೆದು ಮರದ ಮೇಲಿದ್ದವನಿಗೆ ‘ಹಗ್ಗವನ್ನು ಸೊಂಟಕ್ಕೆ ಬಿಗಿದುಕೊಂಡು ಮತ್ತೊಂದು ಕೊನೆಯನ್ನು ಕೆಳಗೆ ಹಾಕು’ ಎಂದ.
ಮರದ ಮೇಲಿದ್ದಾತ ಮುಲ್ಲಾನ ಮಾತನ್ನು ಪಾಲಿಸಿದ. ಮುಲ್ಲಾ ಹಗ್ಗದ ಕೊನೆಯನ್ನು ಹಿಡಿದು ಕೆಳಕ್ಕೆಳೆದ. ಮರದ ಮೇಲಿದ್ದವನು ಕೆಳಗೆ ಬಿದ್ದು ಕೈಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿ ಬದುಕಿಕೊಂಡ.

ಇದನ್ನು ನೋಡುತ್ತಿದ್ದವರೆಲ್ಲಾ ಮುಲ್ಲಾನನ್ನು ಬೈಯ್ಯತೊಡಗಿದರು. ತಣ್ಣಗೆ ಬೈಗುಳ ಕೇಳಿಸಿಕೊಂಡ ಮುಲ್ಲಾ ಹೇಳಿದ ‘ಹಿಂದೊಮ್ಮೆ ನಾನು ಇದೇ ತಂತ್ರ ಬಳಸಿ ಒಬ್ಬಾತನ ಪ್ರಾಣ ಉಳಿಸಿದ್ದೆ’ ಎಂದ. ಅದು ಹೇಗೆ ಎಂದು ಜನರು ಕೇಳಿದರು. ತಲೆ ಕೆರೆದುಕೊಂಡ ಮುಲ್ಲಾ ‘ನಾನು ಈ ತಂತ್ರ ಬಳಸಿದಾಗ ಪ್ರಾಣ ಉಳಿಸಿಕೊಂಡವರು ಮರದ ಮೇಲಿದ್ದನೋ ಅಥವಾ ಬಾವಿಯೊಳಗೆ ಇದ್ದನೋ ಎಂಬುದು ಈಗ ಮರೆತು ಹೋಗಿದೆ’ ಎಂದುತ್ತರಿಸಿದ.
***
ನಾಸಿರುದ್ದೀನ್‌ನ ಬುದ್ಧಿವಂತಿಕೆಯನ್ನು ಅರಿತಿದ್ದ ರಾಜನೊಬ್ಬ ಅವನಿಗೆ ಸವಾಲು ಹಾಕಿದ. ‘ಕತ್ತೆಗೆ ಓದುವುದನ್ನು ಕಲಿಸುವುದು ನಿನಗೆ ಸಾಧ್ಯವೇ?’ ಮುಲ್ಲಾ ಆತ್ಮ ವಿಶ್ವಾಸದಿಂದ ‘ಖಂಡಿತಾ ಸಾಧ್ಯವಿದೆ. ಇದೊಂದು ದೊಡ್ಡ ಕೆಲಸವೇ ಅಲ್ಲ’ ಎಂದ. ರಾಜನಿಗೆ ಆಶ್ಚರ್ಯವಾಯಿತು. ಹಾಗೆಯೇ ಸಿಟ್ಟೂ ಬಂತು. ‘ಕಲಿಸಿ ತೋರಿಸು’ ಎಂದು ರಾಜ ಉತ್ತರಿಸಿದ.

ಮುಲ್ಲಾ ಆತ್ಮವಿಶ್ವಾಸದಿಂದಲೇ ಹೇಳಿದ ‘ನನಗೆ ಒಂದು ಕತ್ತೆ, 500 ಚಿನ್ನದ ನಾಣ್ಯಗಳು ಮತ್ತು ಎಂಟು ವರ್ಷಗಳ ಸಮಯ ಕೊಟ್ಟರೆ ಸಾಧಿಸಿ ತೋರಿಸುತ್ತೇನೆ’
‘ಒಂದು ವೇಳೆ ನಿನಗಿದು ಸಾಧ್ಯವಾಗದಿದ್ದರೆ ಜೀವಮಾನವಿಡೀ ಕಾರಾಗೃಹದಲ್ಲಿರಬೇಕಾದೀತು’ ಎಂಬ ಎಚ್ಚರಿಕೆಯೊಂದಿಗೆ ರಾಜ ಮುಲ್ಲಾನ ಬೇಡಿಕೆಯನ್ನು ಒಪ್ಪಿಕೊಂಡ.

ಕತ್ತೆಯ ಜೊತೆಗೆ ಮನೆಗೆ ಹಿಂದಿರುಗಿದ ಮುಲ್ಲಾನನ್ನು ಕಂಡು ಅವನ ಗೆಳೆಯನೊಬ್ಬ ‘ಈ ಕತ್ತೆಗೆ ನೀನು ಓದಲು ಕಲಿಸುವುದು ಸಾಧ್ಯವೇ? ನೀನು ಕಾರಾಗೃಹ ಶಿಕ್ಷೆ ಅನುಭವಿಸುವುದು ಖಂಡಿತಾ’ ಎಂದ. ಇದಕ್ಕೆ ಉತ್ತರಿಸಿದ ಮುಲ್ಲಾ ಹೇಳಿದ ‘ನೋಡು ನನಗೆ ಈಗ ಒಂದು ಕತ್ತೆ ಮತ್ತೆ 500 ಚಿನ್ನದ ನಾಣ್ಯಗಳು ಮತ್ತು ಎಂಟು ವರ್ಷದಷ್ಟು ಸುದೀರ್ಘ ಕಾಲವಿದೆ. ಮುಂದಿನ ಏಳು ವರ್ಷದಲ್ಲಿ ರಾಜ ಸತ್ತು ಹೋಗಬಹುದು ಅಥವಾ ಕತ್ತೆಯೇ ಸಾಯಬಹುದು. ನಾನೂ ಸಾಯಬಹುದು. ಒಂದು ವೇಳೆ ಮೂವರೂ ಅಷ್ಟೂ ಕಾಲ ಬದುಕಿದೆವು ಎಂದುಕೋ. ಕಾರಾಗೃಹವಾಸವನ್ನು ಹೇಗೆ ತಪ್ಪಿಸಿಕೊಳ್ಳುವುದು ಎಂಬುದನ್ನು ಏಳನೇ ವರ್ಷದಿಂದ ಆಲೋಚಿಸಲು ಆರಂಭಿಸಿದರೂ ಒಂದು ವರ್ಷ ಸಮಯವಿರುತ್ತದೆ’.
***
ಮುಲ್ಲಾ ನಾಸಿರುದ್ದೀನ್‌ನನ್ನು ಒಂದು ಧಾರ್ಮಿಕ ಪ್ರವಚನಕ್ಕೆ ಕರೆದಿದ್ದರು. ಏನು ಮಾತನಾಡಬೇಕೆಂದು ಅವನಿಗೆ ಹೊಳೆಯಲಿಲ್ಲ. ಸಭಿಕರನ್ನು ಒಮ್ಮೆ ದಿಟ್ಟಿಸಿದರೆ ಅಲ್ಲಿ ಒಂದು ಹೆಣ್ಣು ಜೀವವೂ ಇರಲಿಲ್ಲ. ಮುಲ್ಲಾನಿಗೆ ಏನು ಮಾತನಾಡಬೇಕೆಂದು ಹೊಳೆಯಿತು. ತನ್ನ ಭಾಷಣ ಆರಂಭಿಸಿದ:

‘ಮಹಿಳೆಯರು ಪ್ರಸಾದನಗಳಿಂದ ಅಲಂಕರಿಸಿಕೊಳ್ಳುವುದು ಸರಿಯಲ್ಲ. ಧರ್ಮಶಾಸ್ತ್ರಗಳ ಪ್ರಕಾರವೂ ಇದು ತಪ್ಪು. ಆದ್ದರಿಂದ ಮಹಿಳೆಯರು ಪ್ರಸಾದನಗಳನ್ನು ಬಳಸುವುದನ್ನು ನಿಷೇಧಿಸಬೇಕು’ಎಂದೆಲ್ಲಾ ಹೇಳಿದ. ಮುಲ್ಲಾನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸಭಿಕರಲ್ಲಿ ಒಬ್ಬ ಎದ್ದು ನಿಂತು ಕೇಳಿದ ‘ಮುಲ್ಲಾ ನಿನ್ನ ಹೆಂಡತಿಯೇ ಅಷ್ಟೊಂದು ಅಲಂಕಾರ ಮಾಡಿಕೊಳ್ಳುತ್ತಾಳಲ್ಲಾ...?’

‘ಹೌದು. ಅಲಂಕರಿಸಿಕೊಂಡರೆ ಅವಳು ಬಹಳ ಸುಂದರವಾಗಿ ಕಾಣಿಸುತ್ತಾಳಲ್ಲವೇ?’ ಎಂಬ ಪ್ರಶ್ನೆ ಮುಲ್ಲಾನದ್ದಾಗಿತ್ತು.
–ಸೃಜನಾನಂದ

ಆರದಿರಲಿ ದೀಪ

ಉಲ್ಲಸಿತಗೊಳಿಸುವ ಅತ್ತರಿನ ಘಮ. ಮತ್ತೇರಿಸುವ ಮೆತ್ತನೆಯ ಹಾಸಿಗೆ, ಕಿಟಕಿಗೆ ಇಳಿಬಿಟ್ಟ ಪಾರದರ್ಶಕ ಪರದೆ, ಖೋಲಿಯನ್ನು ಮುಳುಗಿಸಿಕೊಂಡ ಅರೆ ತೆರೆದ ಕಣ್ಣಂಥ ಮಾದಕ ಬಣದ್ಣ ಬೆಳಕು. ಆತ್ಮದಿಂದ ಹೊರಟಂಥ ಯಾವುದೋ ಹಾಡು ಅರೆ ಬೆಳಕಿನೊಂದಿಗೆ ಲೀನ. ತುಟಿಯ ರಂಗಿನಲ್ಲೇ ಸುಖಕ್ಕೆ ಪಂಥಾಹ್ವಾನ. ಅಪರಿಚಿತನೆದುರು ನಿರ್ಜೀವ ನಗೆ. ಯಾರದೋ ಸುಖಕ್ಕೆಂದು ಸಾಕಿಕೊಂಡ ಸುಕೋಮಲ ಕಾಯ.

ಕಾಯದೊಳಗೆ ಮಾಯದ ಗಾಯ. ಗಾಯಕ್ಕೆ ಮುಲಾಮು ಹಚ್ಚಲು ಸದಾ ಸೋಲುವ ಗರಿಗರಿ ನೋಟುಗಳ ತೆಕ್ಕೆ. ಆ ನೋಟುಗಳೆಲ್ಲಾ ಬಿಡಿಬಿಡಿಯಾಗಿ ಕಳೆದುಕೊಂಡ ಬದುಕಿನ ರೆಕ್ಕೆ. ಅನೈತಿಕತೆಯಲ್ಲಿಯೇ ತುಂಬಿಕೊಳ್ಳುತ್ತಿರುವ ನಿತ್ಯದ ತುತ್ತಿನ ಚೀಲ. ದೂರದೂರಿನ ಕಳೆದುಹೋದಗೆಣೆಕಾರನ ಚಿತ್ರವ ಕನಸಲ್ಲೂ  ಬರಗೊಡದ ನಿರ್ದಯಿ ಕಾಲ.

ಕೆಂಪು ದೀಪದ ಹಾದಿಯ ಬದಿಗಳಲ್ಲಿ ಸದಾ ತನ್ನ ಸರದಿಗಾಗಿ ಕಾಯುತ್ತಾ ನಿಂತ ಹಸಿದ ದೇಹಗಳು. ಖೋಲಿಯೊಳಗೆ ಬರುವಾಗ ಬಾಗಿಲ ಬಳಿಯೇ ಮನುಷ್ಯತ್ವವನ್ನು  ಚಪ್ಪಲಿಯ ಜೊತೆ ಬಿಟ್ಟು ಬಂದ ಮೃಗ. ತೊಗಲಿನಾಟದಲಿ ತಪಗುಡುವ ದೇಹ, ಹೃದಯಕ್ಕೆಲ್ಲಿದೆ ಜಾಗ. ಕಣ್ಣ ಹನಿಯ ಸಹಜ ಸಮಾಧಾನವೂ ಬತ್ತಿಹೋಗಿ ನಿಸ್ತೇಜ ಕಂಗಳಲಿ ಈ ಜಗತ್ತಿನೆಡೆಗೆ ಅಸಹ್ಯದಿಂದ ಅದೆಷ್ಟು ಸೋದರಿಯರು ನೋಡುತಿದ್ದಾರೋ. ಬದುಕಿನ ನಂಬಿಕೆ ಕಳೆದುಕೊಂಡು ಸುಳ್ಳೇ ಬದುಕಿದ್ದಾರೋ, ಹೊರದಾರಿಯಿಲ್ಲದೇ ನಲುಗಿದ್ದಾರೋ, ಅಂಥ ಕತ್ತಲ ಕೂಪಗಳಲ್ಲಿ ಮತ್ತೆ ಮತ್ತೆ ಅದೆಷ್ಟು ಹಣತೆಯೊಳಗಿನ ಚಿಗುರು ದೀಪಗಳು ನಿತ್ಯ ಆರಿಹೋಗುತ್ತಿವೆಯೋ.

ಯಾವುದೋ ಕುಗ್ರಾಮದ ಚಿಮಣಿ ದೀಪದ ಬುಡದ ಕತ್ತಲಲ್ಲಿ ಕಣ್ಮರೆಯಾದ ಮಗಳ ನೆನೆದು ಕಂಬನಿ ಮಿಡಿವ ಹೃದಯಗಳ ಆರ್ತನಾದ ಕೇಳುವವರಾದರೂ ಯಾರು?
ಕೆನ್ನೆಗಿಳಿದ ಕಂಬನಿ ಒರೆಸುವ ಕರುಣಾಳು ಬೆಳಕು. ಆರುವ ಹಣತೆಗೆ ಅಡ್ಡವಿಟ್ಟ ಅಭಯ ಹಸ್ತ. ನೊಂದ ಬದುಕಿಗೆ ನೆಮ್ಮದಿ ತರಲಿ.
–ಜೀವ ಮುಳ್ಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT