ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಶುಂಠಿ ಬೆಲೆ: ರೈತ ಕಂಗಾಲು

ಎರಡು ತಿಂಗಳಲ್ಲಿ ಬೆಲೆ ತೀವ್ರ ಕುಸಿತ; 60 ಕೆ.ಜಿ ಚೀಲಕ್ಕೆ ಕೇವಲ ₹ 1000
Last Updated 30 ಡಿಸೆಂಬರ್ 2016, 8:27 IST
ಅಕ್ಷರ ಗಾತ್ರ

ಕುಶಾಲನಗರ:  ಮಳೆ ಕೊರತೆಯ ನಡುವೆ ಹನಿ ನೀರಾವರಿ ಮೂಲಕ ರೈತರು ವಾಣಿಜ್ಯ ಬೆಳೆ ಶುಂಠಿ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ರೈತರು ಆತಂಕಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭತ್ತಕ್ಕೆ, ಕಾಫಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದ ಕೃಷಿಕರ ಜೀವನ ಸ್ಥಿತಿ ತೀರ ಹದಗೆಟ್ಟಿತ್ತು. ಈ ಕಾರಣ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಉದ್ದೇಶದಿಂದ ಬಹುತೇಕ ರೈತರು ಲಾಭದಾಯಕ ಬೆಳೆ ಶುಂಠಿ ಕೃಷಿಯತ್ತ ತಮ್ಮ ಒಲವು ತೋರಿದ್ದರು. ಜತೆಗೆ ಕೊಡಗಿನಲ್ಲಿ ಭತ್ತ ಕೃಷಿಗೆ ಅಧಿಕ ಖರ್ಚು ಹಾಗೂ ಕಾರ್ಮಿಕ ಸಮಸ್ಯೆಯಿಂದ ಅನಿರ್ವಾಯವಾಗಿ ರೈತರು ಶುಂಠಿ ಕೃಷಿಯನ್ನು ಹೆಚ್ಚಾಗಿ ಅವಲಂಬಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲೆಯ ಸಾಂಪ್ರದಾಯಿಕ ಕೃಷಿ ಕಾಫಿ ಮತ್ತು ಭತ್ತ. ಭತ್ತ ಆಹಾರ ಧ್ಯಾನವಾದರೆ ಕಾಫಿ ವಾಣಿಜ್ಯ ಬೆಳೆ, ಮೇಡು ಭೂಮಿಯಲ್ಲಿ ಕಾಫಿ ಬೆಳೆದರೆ ತಗ್ಗು ಪ್ರದೇಶಗಳಲ್ಲಿ ಭತ್ತ ಬೆಳೆಯುತ್ತಿದ್ದರು.

ಶುಂಠಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ದೊರೆಯುತ್ತಿದ್ದ ಕಾರಣ ಜಿಲ್ಲೆಯ ಬಹುತೇಕ ರೈತರು ಭತ್ತ ಕೃಷಿ ಬಿಟ್ಟು ಶುಂಠಿ ಕಡೆಗೆ ಗಮನ ಹರಿಸಿದ್ದರು. ಆದರಿಂದ ಈಚೆಗೆ ತಗ್ಗು ಭೂಮಿಯಲ್ಲಿ ಭತ್ತದ ಕೃಷಿ ತೀವ್ರ ಇಳಿಮುಖಗೊಂಡಿದೆ. ಭತ್ತದ ಜಾಗವನ್ನು ಶುಂಠಿ ಅವರಿಸಿಕೊಂಡಿದೆ.

ಆದರೆ, ಎರಡು ತಿಂಗಳ ಹಿಂದೆ 60 ಕೆ. ಜಿ ಚೀಲವೊಂದಕ್ಕೆ ₹ 1500 ರಿಂದ ₹2000 ವರೆಗೆ ದೊರೆಯುತ್ತಿದ್ದ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಿಢೀರ ಇಳಿಮುಖವಾಗಿದ್ದು. 60 ಕೆಜಿ ಚೀಲಕ್ಕೆ ಕೇವಲ ₹1000. ಸಾಲ ಮಾಡಿ ಶುಂಠಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆಯಿಂದ ಮಾಡಿದ ಖರ್ಚು ಸರಿದೂಗಿಸುವುದು ಕಷ್ಟವಾಗಿದೆ ಎನ್ನುತ್ತಾರೆ ರೈತ ಅಳುವಾರದ ಪ್ರೇಮ್ ಕುಮಾರ್.

ಕುಶಾಲನಗರ ಹೋಬಳಿಯ ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ಆಲೂರು, ಶನಿವಾರಸಂತೆ, ಸುಂಟಿಕೊಪ್ಪ ಮತ್ತಿತರ ಭಾಗಗಳಲ್ಲಿ ಶುಂಠಿ ಖರೀದಿ ಕೇಂದ್ರಗಳನ್ನು ತೆರಯಲಾಗಿದೆ. ಇಲ್ಲಿಂದ ಅಹ್ಮದ್‌ಬಾದ್‌, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆ ಇರುವ ಮಾರುಕಟ್ಟೆಗೆ ರವಾನೆ ಮಾಡಲಾಗುತ್ತದೆ.
- ರಘು ಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT