ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಸ್ತರ ಪ್ರಯಾಣ

ಮಂಡ್ಯ ಟು ಮುಂಬೈ
Last Updated 30 ಡಿಸೆಂಬರ್ 2016, 10:31 IST
ಅಕ್ಷರ ಗಾತ್ರ

ಮಂಡ್ಯ ಟು ಮುಂಬೈ
ನಿರ್ಮಾಪಕರು.: ಜ್ಯೋತಿರ್ಲಿಂಗಂ, ಪ್ರಕಾಶ್
ನಿರ್ಮಾಪಕರು: ವಾರ್ಧಿಕ್ ಜೋಸೆಫ್, ರಾಜ್‌ಶೇಖರ್
ತಾರಾಗಣ: ರಾಕೇಶ್ ಅಡಿಗ, ಸಂಜನಾ, ಅಮೃತ, ನವೀನ್ ಕೃಷ್ಣ, ತಿಲಕ್, ಅಚ್ಯುತಕುಮಾರ್

ತಮಿಳಿನಲ್ಲಿ ಆರು ವರ್ಷಗಳ ಹಿಂದೆ ಯಶಸ್ವಿಯಾಗಿದ್ದ ‘ರೇಣಿಗುಂಟ’ ಸಿನಿಮಾದ ಕನ್ನಡ ಪಡಿಯಚ್ಚು ‘ಮಂಡ್ಯ ಟು ಮುಂಬೈ’. ಕ್ರೌರ್ಯವನ್ನೇ ಜೀವಾಳವಾಗಿಟ್ಟುಕೊಂಡ ಕಥಾನಕವಿದು. ಇಂಥ ಅನೇಕ ಚಿತ್ರಗಳು ಕನ್ನಡದಲ್ಲಿ ಬಂದುಹೋಗಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆಯಷ್ಟೇ. ಕ್ರೌರ್ಯವನ್ನು ಎಷ್ಟು ಸಾಧ್ಯವೋ ಅಷ್ಟು ವೈಭವೀಕರಿಸಿ ಹಸಿ ಹಸಿಯಾಗಿ ತೋರಿಸುವ ಸಾಧ್ಯತೆಯನ್ನು ನಿರ್ದೇಶಕರು ದುಡಿಸಿಕೊಂಡಿದ್ದಾರೆ. ಇಡೀ ಚಿತ್ರ ಗಲಾಟೆಯಲ್ಲೇ ಕಳೆದುಹೋಗುತ್ತದೆ.

ರೌಡಿಸಂ ಸಿನಿಮಾಗಳಲ್ಲಿ ಕ್ರೌರ್ಯದ ಜೊತೆ ಜೊತೆಗೇ ಸಾಗುವ ಪ್ರೀತಿಯ ಎಳೆಯೂ ಒಂದಿರುತ್ತದೆ. ಆದರೆ ಈ ಚಿತ್ರದಲ್ಲಿ ಪ್ರೀತಿಯ ಅಂಕುರ ಮತ್ತು ನಾಯಕಿಯ ದರ್ಶನ ಆಗುವುದೇ ದ್ವಿತೀಯಾರ್ಧದಲ್ಲಿ. ಅಲ್ಲಿಯೂ ಪ್ರೀತಿಯ ಭಾವತೀವ್ರತೆಯನ್ನು ಹಿಡಿದಿಡುವಲ್ಲಿ ಕಥೆ ಯಶಸ್ವಿಯಾಗಿಲ್ಲ. ಉಳಿದಂತೆ ಚಿಕ್ಕಂದಿನಲ್ಲಿ ಪ್ರೀತಿ ಸಿಗದವರು ಅಡ್ಡಾದಿಡ್ಡಿ ಬೆಳೆದಿರುತ್ತಾರೆ, ಪ್ರೀತಿಯಲ್ಲಿ ಬಿದ್ದವನು ರೌಡಿಸಂನಿಂದ ಹೊಸಬರುವ ಪ್ರಯತ್ನ ಮಾಡುತ್ತಾನೆ ಎಂಬ ಸವಕಲು ಸೂತ್ರವನ್ನೇ ಮರುಬಳಕೆ ಮಾಡಿಕೊಳ್ಳಲಾಗಿದೆ.

ಯಾರನ್ನೋ ಕೊಲೆ ಮಾಡಿ ಜೈಲಿನಲ್ಲಿ ಸೇರಿಕೊಂಡ ಭಂಗಿ, ರಮ್ಮಿ, ಕುಳ್ಳ, ಜಲ್ಲಿ ಎನ್ನುವವರ ಜೊತೆ ಅಮಾಯಕ ಹುಡುಗ ಗಣೇಶ್ (ರಾಕೇಶ್ ಅಡಿಗ) ಸೇರಿಕೊಳ್ಳುತ್ತಾನೆ. ತನ್ನ ತಂದೆ ತಾಯಿಯನ್ನು ಕೊಂದವನನ್ನು ಕೊಲ್ಲುವ ಅವಕಾಶವನ್ನು ಮುಂದೆ ಈ ನಾಲ್ವರು ಗಣೇಶ್‌ಗೆ ಒದಗಿಸಿಕೊಡುತ್ತಾರೆ. ಮಂಡ್ಯದಲ್ಲಿ ಕೊಲೆ ಮಾಡಿ ತಲೆಮರೆಸಿಕೊಳ್ಳಲು ಮುಂಬೈ ಹಾದಿ ಹಿಡಿಯುತ್ತಾರೆ. ಈ ದಾರಿಯಲ್ಲಿ ಅವರಿಗೆ ಬೇಕಿರುವುದೆಲ್ಲ ಒದಗಿಬರುತ್ತದೆ. ಅವರ ಎಲ್ಲ ಕೃತ್ಯಗಳಿಗೆ ಗಣೇಶ್ ಮೂಕಪ್ರೇಕ್ಷಕನಾಗುತ್ತಾನೆ. ಮುಂಬೈಗೆ ಹೋಗಿ ಅಲ್ಲಿ ತಮ್ಮ ವೃತ್ತಿಯಲ್ಲೇ ವೈಭವವಾಗಿ ಬದುಕುವ ಕನಸು ಕಾಣುತ್ತಾರೆ.

ಗಣೇಶ್‌ಗೆ ಚಿನ್ನಮ್ಮ (ಅಮೃತ) ಎಂಬ ಹುಡುಗಿಯ ಜೊತೆ ಪ್ರೀತಿಯಾಗುತ್ತದೆ. ಅವಳು ಮೂಕಿ. ಆಕೆಗೋಸ್ಕರ ರೌಡಿಸಂನಿಂದ ದೂರವಾಗಲು ಪ್ರಯತ್ನಿಸಿದರೂ ರೌಡಿಸಂ ಮಾತ್ರ ಆತನನ್ನು ಬಿಡುವುದಿಲ್ಲ. ಅವರು ಮುಂಬೈ ತಲುಪುತ್ತಾರೋ ಇಲ್ಲವೋ ಎಂಬುದನ್ನು ತಿಳಿಯುಲು ಚಿತ್ರದ ಕೊನೆಯವರೆಗೂ ನೋಡಬೇಕು. ಪ್ರೇಕ್ಷಕನ ಮಟ್ಟಿಗೆ ‘ಮಂಡ್ಯ ಟು ಮುಂಬೈ’ ದಾರಿ ಅಷ್ಟು ಸರಾಗವಾಗಿಲ್ಲ. ಅಪಘಾತಗಳೇ ಜಾಸ್ತಿ.

ದರ್ಶನ್ ಕನಕ ಛಾಯಾಗ್ರಹಣ ತಕ್ಕಮಟ್ಟಿಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ನಟನೆಯ ಕುರಿತು ಮಾತನಾಡದಿರುವುದೇ ಲೇಸು. ಸಾಧು ಕೋಕಿಲ ಹಾಸ್ಯ ದೃಶ್ಯಗಳು ಬೋರು ಹೊಡೆಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT